ಹುಲಿ ಯೋಜನೆ: ಭಯದ ನೆರಳಲ್ಲಿ ತಾ| ನ 10 ಗ್ರಾಮಗಳು
Team Udayavani, Aug 5, 2017, 8:45 AM IST
ಇನ್ನೂ ದೊರೆಯದ ಪೂರ್ಣ ಮಾಹಿತಿ; ಕಸ್ತೂರಿರಂಗನ್ ವರದಿಯೂ ಭೀತಿ ಮೂಡಿಸಿದೆ
ವೇಣೂರು: ಬೆಳ್ತಂಗಡಿ ತಾಲೂಕಿನ 10 ಗ್ರಾಮಗಳ ಜನರಲ್ಲಿ ಹುಲಿಯೋಜನೆಯ ಭೀತಿ ಇನ್ನೂ ಇದೆ. ಗೊಂದಲಗಳೂ ಹಾಗೆಯೇ ಉಳಿದುಕೊಂಡಿವೆ. ಸರಕಾರದ ಷರತ್ತುಗಳಿಗೆ ಬದ್ಧವಾಗಿ ಅಲ್ಲೇ ಉಳಿಯಬೇಕೇ? ಒಕ್ಕಲೇಳಬೇಕೇ? ಎನ್ನುವ ನಿಲುವನ್ನು ತಳೆಯಲಾಗದೆ ಗ್ರಾಮಸ್ಥರು ಸಂದಿಗ್ಧತೆಯಲ್ಲಿದ್ದಾರೆ.
ಏನಿದು ಹುಲಿ ಯೋಜನೆ?
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ನ್ಯಾಷನಲ್ ಟೆ„ಗರ್ ಕನ್ಸರ್ವೇಷನ್ ಅಥಾರಿಟಿ- ಎನ್‌ಟಿಸಿಎ) ಕುದುರೆಮುಖ ರಕ್ಷಿತಾರಣ್ಯದ 600.57 ಚದರ ಕಿ.ಮೀ. ವ್ಯಾಪ್ತಿಯಲ್ಲಿ ‘ಹುಲಿ ಸಂರಕ್ಷಣಾ ಯೋಜನೆ’ ಅನುಷ್ಠಾನ ರೂಪುರೇಷೆ ಸಿದ್ಧಪಡಿಸಿದೆ. 1972 ವನ್ಯಜೀವಿ ಸಂರಕ್ಷಣಾ ಕಾಯಿದೆ-2006 ತಿದ್ದುಪಡಿ ತಂದು 2006ರ ಸೆ.4ರಂದು ಜಾರಿಗೆ ಬರುವಂತೆ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಹುಲಿ ಯೋಜನೆ ವ್ಯಾಪ್ತಿಯ ಸುತ್ತ 800ರಿಂದ 1,200 ಚದರ ಕಿ.ಮೀ. ನಿಷೇಧಿತ ಪ್ರದೇಶವಾಗಿರುತ್ತದೆ. ಯೋಜನೆಯ ವ್ಯಾಪ್ತಿ ಸೇರಿ 1,000ರಿಂದ 3,000 ಚದರ ಕಿ.ಮೀ. ವ್ಯಾಪ್ತಿಯನ್ನು ಹುಲಿಗಳ ಸಂಖ್ಯೆ ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗುತ್ತದೆ.
ವ್ಯಾಪ್ತಿಗೊಳಪಡುವ ಗ್ರಾಮಗಳು
ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ನಾವರ, ಸುಲ್ಕೇರಿಮೊಗ್ರು, ಶಿರ್ಲಾಲು, ಸವಣಾಲು ಲಾಯಿಲ, ನಡ, ನಾವೂರು ಹಾಗೂ ಮಲವಂತಿಕೆ ಹುಲಿ ಸಂರಕ್ಷಣಾ ವ್ಯಾಪ್ತಿಗೊಳಪಡಲಿದೆ. ಉಳಿದಂತೆ ಕಾರ್ಕಳ ತಾಲೂಕಿನ 11 ಗ್ರಾಮಗಳಾದ ಈದು, ನೂರಾಳ್‌ಬೆಟ್ಟು, ಅಂಡಾರು, ಕೆರ್ವಾಶೆ, ಕಬ್ಬಿನಾಲೆ, ವರಂಗ, ಮಾಳ, ನಾಡ್ಪಾಲು, ಶಿರ್ಲಾಲು, ಮರ್ಣೆ, ಮುದ್ರಾಡಿ ಗ್ರಾಮಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ. ಕುದುರೆಮುಖದ 3 ಗ್ರಾಮಗಳಾದ ಹೊರನಾಡು, ಸಂಸೆ, ಕಲ್ಕೋಡು ಗ್ರಾಮಗಳು ಹುಲಿ ಯೋಜನೆ ವ್ಯಾಪ್ತಿಗೆ ಬರಲಿವೆ.
ಗ್ರಾಮಸ್ಥರ ಸಮಸ್ಯೆಗಳು
ಹುಲಿ ಯೋಜನೆ ಅನುಷ್ಠಾನಗೊಂಡಲ್ಲಿ ರಕ್ಷಿತಾರಣ್ಯ ಕಾಯಿದೆ ಪ್ರಕಾರ ರಕ್ಷಿತಾರಣ್ಯ ಗುಪ್ಪೆಯಿಂದ 100 ಮೀ. ಬಫರ್ ಪ್ರದೇಶದ ಆದೇಶವಿದ್ದರೆ, ಹುಲಿ ಯೋಜನೆಯಲ್ಲಿ ಈಗಿರುವ 600.57 ಚದರ ಕಿ.ಮೀ. ವ್ಯಾಪ್ತಿಯೊಳಗೆ ಕೋರ್ ಹಾಗೂ ಬಫರ್ ಆದೇಶವಿದೆ. ಇನ್ನೂ 51.95 ಚದರ ಕಿ.ಮೀ. ಸೇರ್ಪಡೆಯಾಗಲಿದೆ. ಗುಪ್ಪೆಯಿಂದ ಹೊರಗೆ ಖಾಸಗಿ ಸ್ಥಳಗಳಿದ್ದರೆ ರಾಸಾಯನಿಕ ಉದ್ಯಮ, ಸ್ಫೋಟಕ, ಗಣಿಗಾರಿಕೆ ಮೊದಲಾದವುಗಳಿಗೆ ಅವಕಾಶವಿಲ್ಲ. ಹೊಟೇಲ್, ಹೋಂ ಸ್ಟೇ, ಮನೆ ಕಟ್ಟಲು, ಕೃಷಿ ಮಾಡಲು ಯಾವುದೇ ತೊಂದರೆಯಿಲ್ಲ. ರಕ್ಷಿತಾರಣ್ಯದ ತಪ್ಪಲಲ್ಲಿ ಹಲವಾರು ವರ್ಷಗಳಿಂದ ನಡೆಸುತ್ತಿರುವ ಗೇರುಬೀಜ ಉದ್ಯಮಗಳಿಗೆ ಈ ಯೋಜನೆಯಿಂದ ಕುತ್ತಾಗಲಿದೆ. ಉದ್ಯಮದ ಹೊಗೆ ಕಾಡು ಹಾಗೂ ವನ್ಯಜೀವಿಗಳಿಗೆ ತೊಂದರೆ ನೀಡಬಹುದೆನ್ನುವ ಉದ್ದೇಶದಿಂದ ಈ ಉದ್ಯಮಕ್ಕೆ ಕಡಿವಾಣ ಬೀಳುವ ಸಾಧ್ಯತೆಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಹುಲಿ ಯೋಜನೆ ಮತ್ತು ಕಸ್ತೂರಿರಂಗನ್ ವರದಿಯನ್ವಯ ಕುದುರೆಮುಖ ರಕ್ಷಿತಾರಣ್ಯ ಹಾಗೂ ಹತ್ತಿರದ ಗ್ರಾಮಗಳ 53 ಕುಟುಂಬಗಳು ಸ್ವ ಇಚ್ಛೆಯಲ್ಲಿ ಪುನರ್ವಸತಿ ಕೋರಿ ಅರ್ಜಿ ಸಲ್ಲಿಸಿವೆ. ಇದರಲ್ಲಿ 34 ಕುಟುಂಬಗಳು ಈಗಾಗಲೇ ಪರಿಹಾರ ಪಡೆದು ಸ್ಥಳಾಂತರಗೊಂಡಿವೆ.
ಕಸ್ತೂರಿರಂಗನ್ ವರದಿ ಭಯ
ರಾಜ್ಯದಾದ್ಯಂತ ಹಬ್ಬಿಕೊಂಡಿರುವ 1,600 ಚದರ ಕಿ.ಮೀ. ಉದ್ದದ ಪಶ್ಚಿಮ ಘಟ್ಟವನ್ನು ಸಂರಕ್ಷಣೆ ಮಾಡುವ ಕಸ್ತೂರಿರಂಗನ್ ಯೋಜನೆ ಅಥವಾ ಮಾಧವ ಗಾಡ್ಗೀಳ್ ವರದಿ ಜಾರಿಯಾಗುವ ಬಗ್ಗೆಯೂ ಇಲ್ಲಿನ ಜನತೆ ಭಯ ಹಾಗೂ ಗೊಂದಲದಲ್ಲಿದ್ದಾರೆ. ಇದರ ಬಗ್ಗೆಯೂ ಜನರಿಗೂ ಮಾಹಿತಿ ದೊರೆತಿಲ್ಲ. 2013ರ ನ. 21ರಂದು ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವರು ನೀಡಿರುವ ಪ್ರಮಾಣಪತ್ರದ ಅನುಸಾರ ಕಸ್ತೂರಿರಂಗನ್ ವರದಿ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ವರದಿಯಲ್ಲಿ ಕರ್ನಾಟಕದ 1,576 ಗ್ರಾಮಗಳು ಹಾಗೂ ಪಶ್ಚಿಮಘಟ್ಟ ಪ್ರದೇಶ ಹಬ್ಬಿಕೊಂಡಿರುವ ಆರು ರಾಜ್ಯಗಳ 4,156 ಗ್ರಾಮಗಳನ್ನು ಸೂಕ್ಷ್ಮಪ್ರದೇಶಗಳೆಂದು ಗುರುತಿಸಲಾಗಿದೆ. ಈ ವರದಿ ಜಾರಿಯಾದರೆ ಈ ಭಾಗದಲ್ಲಿ ಕೈಗಾರಿಕೆ , ರಸ್ತೆ ವಿಸ್ತರಣೆ ಅಥವಾ ಇನ್ಯಾವುದೇ ದೊಡ್ಡಮಟ್ಟದ ಕಾಮಗಾರಿಗಳನ್ನು ಮಾಡಲು ತೊಡಕಾಗಲಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ 46 ಗ್ರಾಮಗಳು ಕಸ್ತೂರಿರಂಗನ್ ವರದಿಯ ವ್ಯಾಪ್ತಿಯಲ್ಲಿ ಬರಲಿವೆ.
– ಪದ್ಮನಾಭ ಕುಲಾಲ್ ವೇಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.