ದೇಶದ ಭದ್ರತೆಗೆ ಅಪಾಯ: ಹನಿಟ್ರ್ಯಾಪ್ ಜಾಲಕ್ಕೆ ಬೀಳದಿರಿ
Team Udayavani, Aug 5, 2017, 7:30 AM IST
ಸೇನೆಯಂತಹ ಅತ್ಯಂತ ಜವಾಬ್ದಾರಿಯುತ ವಿಭಾಗದಲ್ಲಿರುವವರು ಮೈಯೆಲ್ಲ ಕಣ್ಣಾಗಿರುವುದೇ ಹನಿಟ್ರ್ಯಾಪ್ ತಡೆವ ದಾರಿ. ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ತಮ್ಮ ಗುರುತು ರಹಸ್ಯವಾಗಿಡುವುದು ಒಳ್ಳೆಯದು.
ದೇಶದ ಸೇನಾಧಿಕಾರಿಗಳನ್ನು ಹನಿಟ್ರ್ಯಾಪ್ ಹೊಂಡಕ್ಕೆ ಬೀಳಿಸುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ ಸೇನಾ ರಹಸ್ಯಗಳನ್ನು ಪಡೆಯಲು ಚೀನ ಮತ್ತು ಪಾಕಿಸ್ತಾನ ಸಂಚು ಮಾಡಿರುವ ವರದಿ ಕಳವಳ ಉಂಟುಮಾಡುವಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಶತ್ರು ರಾಷ್ಟ್ರಗಳು ಹನಿಟ್ರ್ಯಾಪ್ ಸಂಚಿನಲ್ಲಿ ಯಶಸ್ವಿಯಾದರೆ ದೊಡ್ಡ ಗಂಡಾಂತರ ಎದುರಾಗಬಹುದು. ಪಾಕ್ ಮತ್ತು ಚೀನ ಈ ಎರಡೂ ದೇಶಗಳ ಜತೆಗಿನ ಸಂಬಂಧ ಸಂಪೂರ್ಣ ಹಳಸಿದೆ. ಅದರಲ್ಲೂ ಚೀನ ಮತ್ತು ಭಾರತ ಸೇನೆ ಡೋಕ್ಲಾಂನಲ್ಲಿ ಮುಖಾಮುಖೀಯಾಗಿ ಎರಡೂ ತಿಂಗಳಾಗುತ್ತಾ ಬಂದಿದ್ದು, ಸದ್ಯಕ್ಕೆ ಈ ವಿವಾದ ಬಗೆಹರಿಯುವ ಸಾಧ್ಯತೆ ಕಾಣಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೇನಾಧಿಕಾರಿಗಳು ಅರಿತೋ ಅರಿಯದೆಯೋ ಹನಿಟ್ರ್ಯಾಪ್ ಜಾಲಕ್ಕೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗೆಂದು ಹನಿಟ್ರ್ಯಾಪ್ ತಂತ್ರ ಹೊಸದೇನೂ ಅಲ್ಲ. ಹಿಂದೆ ರಾಜ ಮಹಾರಾಜರ ಕಾಲದಲ್ಲೂ ಶತ್ರುದೇಶಗಳ ರಹಸ್ಯ ವಿಷಯಗಳನ್ನು ತಿಳಿಯಲು ಇದರ ಬಳಕೆಯಾಗುತ್ತಿತ್ತು. ಸುಂದರ ಯುವತಿಯರನ್ನು ಇದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಶತ್ರು ದೇಶದ ಸೇನಾಧಿಕಾರಿಗಳನ್ನು ಸಂಪರ್ಕಿಸುವಂತೆ ಮಾಡಿ ಅವರ ಸ್ನೇಹ ಸಂಪಾದಿಸುವುದು, ಅನಂತರ ಅವರ ಜತೆಗೆ ಲೈಂಗಿಕ ಕ್ರಿಯೆ ನಡೆಸಿ ಭಾವನಾತ್ಮಕವಾಗಿ ಅವರನ್ನು ಬ್ಲ್ಯಾಕ್‌ವೆುàಲ್ ಮಾಡುತ್ತಾ ರಹಸ್ಯಗಳನ್ನು ತಿಳಿದುಕೊಳ್ಳುವುದು ಒಂದು ವಿಧಾನವಾದರೆ, ಖಾಸಗಿ ಕ್ಷಣಗಳ ವೀಡಿಯೊ, ಫೊಟೊಗಳನ್ನು ತೋರಿಸಿ ಬಹಿರಂಗಪಡಿಸುವ ಬೆದರಿಕೆಯೊಡ್ಡಿ ಬಲವಂತವಾಗಿ ರಹಸ್ಯಗಳನ್ನು ಬಾಯಿ ಬಿಡುವಂತೆ ಮಾಡುವುದು ಇನ್ನೊಂದು ವಿಧಾನ. ಸಂಪರ್ಕ ಮಾಧ್ಯಮದಲ್ಲಾದ ಕ್ರಾಂತಿಯಿಂದಾಗಿ ಈಗ ಯಾರದ್ದೇ ಆದರೂ ಸ್ನೇಹ ಸಂಪಾದಿಸುವುದು ದೊಡ್ಡ ವಿಷಯವೇ ಅಲ್ಲ. ಫೇಸ್‌ಬುಕ್, ವಾಟ್ಸಪ್, ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಮತ್ತಿತರ ಸಂಪರ್ಕ ಆ್ಯಪ್‌ಗ್ಳು ಜಗತ್ತಿನ ಒಂದು ಮೂಲೆಯಲ್ಲಿರುವ ವ್ಯಕ್ತಿಯನ್ನು ಇನ್ನೊಂದು ಮೂಲೆಯಲ್ಲಿರುವ ವ್ಯಕ್ತಿಯೊಂದಿಗೆ ಕೆಲವೇ ಕ್ಷಣಗಳಲ್ಲಿ ಸಂಪರ್ಕಿಸಿ ಕೊಡುತ್ತವೆ. ಪ್ರಸ್ತುತ ಚೀನ ಮತ್ತು ಪಾಕಿsಸ್ತಾನ ಉರ್ದು ಮತ್ತು ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವ ಕೆಲವು ಬೆಡಗಿಯರನ್ನು ಈ ಉದ್ದೇಶಕ್ಕಾಗಿ ನೇಮಿಸಿಕೊಂಡಿವೆ. ಸಾಮಾನ್ಯವಾಗಿ ಸೇನೆಯ ಅಥವ ಸರಕಾರದ ಉನ್ನತ ಅಧಿಕಾರಿಗಳೇ ಹನಿಟ್ರ್ಯಾಪ್ ಮೋಹಿನಿಯರ ಗುರಿಯಾಗಿರುತ್ತವೆ. ಏಕೆಂದರೆ ಕೆಳಹಂತದ ಅಧಿಕಾರಿಗಳಿಗೆ ಎಲ್ಲ ರಹಸ್ಯಗಳು ತಿಳಿದಿರುವುದಿಲ್ಲ. ಉನ್ನತ ಅಧಿಕಾರಿಗಳಾದರೆ ಹೆಚ್ಚು ಮಾಹಿತಿ ಪಡೆಯಲು ಸಾಧ್ಯವಾಗುವುದಲ್ಲದೆ ಸೇನೆಯ ನೈತಿಕತೆಯನ್ನು ಕುಸಿಯುವಂತೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಗುಪ್ತಚರ ಪಡೆ ಅಪರಿಚಿತ ಯುವತಿಯರಿಂದ ಬರುವ ಫ್ರೆಂಡ್‌ಶಿಪ್ ರಿಕ್ವೆಸ್ಟ್ ಬಗ್ಗೆ ಬಹಳ ಜಾಗರೂಕವಾಗಿರಬೇಕೆಂದು ಎಚ್ಚರಿಕೆಯನ್ನು ನೀಡಿದೆ.
ಪಾಶ್ಚಾತ್ಯ ದೇಶಗಳಂತೆ ಭಾರತದಲ್ಲಿ ಹನಿಟ್ರ್ಯಾಪ್ ಸಫಲವಾಗಿಲ್ಲ. ಹಾಗೆಂದು ಇಂತಹ ಪ್ರಕರಣವೇ ಇಲ್ಲ ಎಂದಲ್ಲ. ಆರು ವರ್ಷದ ಹಿಂದೆ ಇನ್‌ಫ್ಯಾಂಟ್ರಿ ಯುನಿಟ್‌ನ ಲೆಫ್ಟಿನೆಂಟ್ ಕರ್ನಲ್ ದರ್ಜೆಯ ಅಧಿಕಾರಿಯೊಬ್ಬರು ಬಾಂಗ್ಲಾದೇಶಕ್ಕೆ ಮಿಲಿಟರಿ ಅಕಾಡೆಮಿಯ ತರಬೇತಿ ಕಾರ್ಯಕ್ರಮಕ್ಕೆ ಹೋದ ವೇಳೆ ಪಾಕ್ ಗುಪ್ತಚರ ಪಡೆ ಐಎಸ್‌ಐ ಅವರನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಬ್ಲ್ಯಾಕ್‌ಮೇಲ್ ಮಾಡಿತ್ತು. ಆದರೆ ತನ್ನ ಕೃತ್ಯದಿಂದ ಪಶ್ಚಾತ್ತಾಪಗೊಂಡ ಈ ಅಧಿಕಾರಿ ಮರುದಿನ ಭಾರತೀಯ ದೂತವಾಸಕ್ಕೆ ಹೋಗಿ ನೈಜ ವಿಷಯ ತಿಳಿಸಿದ್ದರು. ಇದರಿಂದ ಭವಿಷ್ಯ ಮಂಕಾದರೂ ಪರವಾಗಿಲ್ಲ, ದೇಶ ದ್ರೋಹವಾಗಬಾರದು ಎಂಬುದು ಅವರ ಉದ್ದೇಶವಾಗಿತ್ತು. ಅನಂತರ ಈ ಅಧಿಕಾರಿಯನ್ನು ತತ್‌ಕ್ಷಣ ವಾಪಸು ಕರೆಸಿಕೊಂಡು ಕೋರ್ಟ್ ಮಾರ್ಶಲ್‌ಗೊಳಪಡಿಸಲಾಗಿತ್ತು. ಐಎಸ್‌ಐ ಪದೇ ಪದೇ ಹನಿಟ್ರ್ಯಾಪ್ ತಂತ್ರಗಳನ್ನು ಪ್ರಯೋಗಿಸಿದ್ದರೂ ಹೆಚ್ಚಿನ ಯಶಸ್ಸು ಪಡೆದಿಲ್ಲ. ಹೆಚ್ಚಾಗಿ ಕೆಳದರ್ಜೆಯ ಅಧಿಕಾರಿಗಳೇ ಅದರ ಹನಿಟ್ರ್ಯಾಪ್‌ನೊಳಗೆ ಬೀಳುತ್ತಿದ್ದದ್ದು ಇದಕ್ಕೆ ಕಾರಣ. ಸೇನೆಯಂತಹ ಅತ್ಯಂತ ಜವಾಬ್ದಾರಿಯುತ ವಿಭಾಗದಲ್ಲಿರುವವರು ಮೈಯೆಲ್ಲ ಕಣ್ಣಾಗಿರುವುದೇ ಇದನ್ನು ತಡೆಯುವ ದಾರಿ. ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಸಾಧ್ಯವಾದಷ್ಟು ತಮ್ಮ ಗುರುತು ರಹಸ್ಯವಾಗಿಡುವುದು ಒಳ್ಳೆಯದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.