ನಿರ್ಧಾರ
Team Udayavani, Aug 6, 2017, 6:40 AM IST
ಆಫೀಸಿನಿಂದ ಬರುವಾಗಲೇ ತಲೆನೋವು. ಮಧ್ಯಾಹ್ನ ಮೆನೇಜರ್ ಕರೆದಾಗ ತಲೆ ಎತ್ತಲೂ ಆಗುತ್ತಿರಲಿಲ್ಲ. ಸಣ್ಣನೋವು. ಜೀವ ಹಿಂಡಿದ ಹಾಗೆ. ಕಾಫಿ ಕುಡಿದರೆ ಸರಿ ಹೋಗಬಹುದು ಎಂದುಕೊಂಡೆ. ದೂರದ ಕಿಟಕಿಯಿಂದ ಗಮನಿಸಿದರೆ ಎದುರು ಮನೆಯ ಮಕ್ಕಳ ಆಟಪಾಠ, ಅವರಲ್ಲಿರುವ ಮುಗ್ಧತೆ ಕಂಡು ನಾನು ಯಾವಾಗಲೂ ಸಂತೋಷಪಡುತ್ತಿದ್ದರೂ ಇವತ್ತು ಯಾವುದೂ ಮನಸ್ಸಿಗೆ ಬೇಡವಾಗಿತ್ತು. ಕಾರಣ ತಿಳಿಯದೇ ಕ್ಯಾಂಟೀನ್‌ನಲ್ಲಿ ಒಬ್ಬಳೇ ಹೋಗಿ ಕಾಫಿ ಕುಡಿದೆ. ಏನೂ ಶಮನವಾಗಲಿಲ್ಲ.
ಗಡಿಯಾರ ನೋಡುತ್ತ ಐದು ಗಂಟೆ ಅಂದಾಗ ನನ್ನ ಡ್ರಾವರ್‌ನಲ್ಲಿ ಎಲ್ಲಾ ಪೇಪರ್‌ಗಳನ್ನಿಟ್ಟು ಬೀಗ ಹಾಕಿದೆ. ಇಲ್ಲದಿದ್ದರೆ ಟ್ರೆಸ್ಸಿ ನನ್ನ ಪೇಪರುಗಳನ್ನು ಅಸ್ತವ್ಯಸ್ತ ಮಾಡಿದರೆ ಎಂಬ ಭಯ. ಅವಳು ಬಂದು ಗುಡಿಸಿ, ಒರೆಸಿ ಮೇಜು ಒರಣವಾಗಿಡುವುದು ಎಂದರೆ ಎಲ್ಲ ಫೈಲ್‌ಗಳು ಪೇಪರುಗಳು ಚೆಲ್ಲಾಪಿಲ್ಲಿಯಾಗಿರುತ್ತಿತ್ತು. ಮೂದೇವಿ, ಹೇಳಿದರೂ ತಿಳಿದುಕೊಳ್ಳುತ್ತಿರಲಿಲ್ಲ. ಮಾತು ವ್ಯರ್ಥ ಎಂದು ಎಲ್ಲರೂ ಸುಮ್ಮನಾಗುತ್ತಿದ್ದರು.
ಮನೆಗೆ ಬಂದೆ. ಬಂದ ತಕ್ಷಣ ಅಮ್ಮ ನನಗೆ ಚಿಕ್ಕಮ್ಮನ ಮಗಳ ಲಗ್ನ ಪತ್ರಿಕೆ ತೋರಿಸಬೇಕೆ? ನನಗೆ ಮೊದಲೇ ತಲೆನೋವು. ಓದಲು ಆಗುತ್ತಿರಲಿಲ್ಲ. ಅಮ್ಮ ನನ್ನ ಮುಖ ನೋಡಿ,
“”ಏನಾಯಿತೇ ನಿನಗೆ?” ಎಂದಳು.
“”ತಲೆನೋವು ಅಮ್ಮ , ಬೆಳಿಗ್ಗೆಯಿಂದ ಆಫೀಸಿನಲ್ಲಿ ಒದ್ದಾಡುತ್ತಿದ್ದೀನಿ” ಎಂದಾಗ ನನ್ನ ಮಾತು ನಿಲ್ಲಿಸುವ ಮುಂಚೆ ತನ್ನ ತಂಗಿಯ ಮಗಳ ಭಾವೀಪತಿ ಹಾಗೂ ಅವರ ಮನೆಯವರ ಗುಣಗಾನ ಕೇಳಿ ನನಗೆ ರೋಸಿಹೋಯಿತು.
“”ಸ್ಟಾಪ್ ಇಟ್” ಎಂದು ಹೇಳ್ಳೋಣ, ಕಿರುಚಬೇಕು ಅಂದುಕೊಂಡೆ. ಆದರೆ, ಅಪಾರ್ಥಕ್ಕೆ ಕಾರಣ. ನನಗೆ ಮದುವೆ ಆಗಿಲ್ಲ ಅದಕ್ಕೆ ಹೊಟ್ಟೆ ಉರಿ. ಬೇರೆಯವರ ಸಂತೋಷ ನೋಡಲು ಆಗದು ಅಂದುಕೊಳ್ಳುತ್ತಾರೆ ಎಂದುಕೊಂಡು ಲಗ್ನಪತ್ರಿಕೆ ಓದಿದೆ. ತುಂಬಾ ಸಂತೋಷವಾಯಿತು. ಎಲ್ಲಾ ವಿಷಯವನ್ನು ಬಚ್ಚಿಟ್ಟುಕೊಂಡು ಚಿಕ್ಕಮ್ಮ ಮದುವೆ ಗೊತ್ತಾದ ಮೇಲೆ ಅಕ್ಕನ ಮನೆಗೆ ಪತ್ರಿಕೆ ಕೊಡಲು ಬರುತ್ತಾರಲ್ಲ. ಇವರಿಗೆ ಎಳ್ಳಷ್ಟು ಪ್ರೀತಿ, ಪ್ರೇಮ ಇಲ್ಲವೇನು? ಒಡಹುಟ್ಟಿದವರೊಡನೆ ಈ ತಾರತಮ್ಯ ಇನ್ನು ಹೊರಗಡೆಯವರ ಬಳಿ ಹೇಗಿರಬಹುದು ಅಲ್ಲವೇನು?
ರಾತ್ರಿ ಊಟದ ನಂತರ ಮಾತ್ರೆ ನುಂಗಿ ಮಲಗಿದೆ. ನಿದ್ರಾದೇವಿ ಆವರಿಸಿದಳು. ತಿಳಿಯಲೇ ಇಲ್ಲ. ಮುಂಜಾನೆ ಏಳು ಗಂಟೆ ಕಳೆದಿದೆ. ಅಮ್ಮ ಬಂದು ಎಬ್ಬಿಸಿದಾಗಲೇ ಎಚ್ಚರ. ದಿನಾಲೂ ಐದು ಗಂಟೆಗೆ ಎದ್ದು ಯೋಗಾಭ್ಯಾಸ ಮಾಡುವ ನಾನು ಅಷ್ಟು ಹೊತ್ತು ಎದ್ದಿಲ್ಲ ಎಂದಾಗ ಅಮ್ಮನಿಗೆ ತುಂಬಾ ಭಯವಾಗಿರಬೇಕು. ತಲೆನೋವು ನಿಂತಿತು. ಎದ್ದು ಹಲ್ಲು ಉಜ್ಜಿ ಮುಖ ತೊಳೆದು ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡುವಾಗ ಬಲಗಡೆಯಿಂದ ಹೂವಿನ ಹಾರ ಪಟ್ಟಂತ ಬಿತ್ತು. ನೋಡಿ ತುಂಬಾ ಸಂತೋಷವಾಯಿತು. ಪಕ್ಕದ ಮನೆ ಸುಮತಿ ಹೇಳಿದ್ದು ಜ್ಞಾಪಕ, ಬಲಗಡೆಯಿಂದ ಹೂ ಬಿದ್ದರೆ, ನಮ್ಮ ಪ್ರಾರ್ಥನೆಗೆ ದೇವರ ವರದಾನ ಇದೆ. ಅದು ಖಂಡಿತ. ಇದು ಯಾವಾಗಲೂ ಸುಮತಿ ಹೇಳುತ್ತಿದ್ದಳು. ಹಾಗಿದ್ದರೆ ನಾನು ಎಣಿಸಿದಂತೆ ಆಗುವುದೇ? ನನ್ನ ಪ್ರಾರ್ಥನೆಗೆ ದೇವರು ವರ ಕೊಟ್ಟಿರುವರೇ? ಈ ತರಹ ಸಾವಿರಾರು ಪ್ರಶ್ನೆಗಳು ನನ್ನ ತಲೆಯಲ್ಲಿ ಆವರಿಸಿದವು. ಮನೆಯಲ್ಲಿ ಹೇಳಬಹುದಾದ ಸಂಗತಿಯಾದರೆ ಹೇಳಬಹುದಿತ್ತು. ಮನಸ್ಸು ಎಲ್ಲೆಲ್ಲೋ ಓಡಾಡಲು ಶುರು ಆಯಿತು.
ಸುಮಾರು ವರುಷಗಳ ಮಾತು. ಅಣ್ಣ ಓದಿ ಕೆಲಸದಲ್ಲಿದ್ದ. ತಂಗಿ ಓದು ಮುಗಿಸಿದ್ದಳು. ಮದುವೆಗೆ ಹೆಣ್ಣು ಬರುತ್ತಿದ್ದರೂ, ತಂಗಿಯ ಮದುವೆಯ ನಂತರವೇ ತನ್ನ ಮದುವೆ ಎನ್ನುತ್ತಿದ್ದ. ಅಮ್ಮನೂ ಅದೇ ರಾಗ ಎಳೆಯುತ್ತಿದ್ದರು. ಅಪ್ಪ ಮಾತ್ರ ಇದನ್ನು ಕೇಳಿ, “”ಲೇ, ಅದಕ್ಕೂ ಇದಕ್ಕೂ ಏನು ಸಂಬಂಧ ಕಣೆ, ಬರುವ ಹುಡುಗಿ ತಾನೇ ಏನು ಮಾಡುತ್ತಾಳೆ. ನಿನಗೆ ಅತೀ ಬುದ್ಧಿ. ಯಾರು ಏನು ಹೇಳಿದರೂ ಕೇಳುವುದಿಲ್ಲ, ಜಾಸ್ತಿ ಹೇಳಿದರೆ ಮುಂಗೋಪಿ ತರಹ ಮನೆ ವಾತಾವರಣ ಕೆಡಿಸಿ ಬಿಡುತ್ತೀಯಾ? ಯಾವನು ಬಂದು ನಿನಗೆ ಬುದ್ಧಿ ಹೇಳಬೇಕೋ ನನಗೇನೂ ಗೊತ್ತಾಗುತ್ತಿಲ್ಲ” ಎಂದದ್ದೇ ತಡ, ಅಮ್ಮ ಒಂದೇ ಸವನೆ ಅಪ್ಪನ ಮೇಲೆ ಎರಗಿದ್ದು ನಾನು ಆವತ್ತೇ ನೋಡಿದ್ದು. ಅಮ್ಮನ ಮಾತಿನಲ್ಲಿ ನನ್ನನ್ನು ಸಾಗಹಾಕಬೇಕಿತ್ತು.
ಅದು ಅವರ ಮಾತಿನ ಆಳದಿಂದಲೇ ತಿಳಿಯುತ್ತಿತ್ತು. ನನಗೂ ಅಚ್ಚರಿ. “”ಯಾಕೆ, ನಾನು ಅಪ್ಪ ಅಮ್ಮನಿಗೆ ಭಾರವೇ? ನನ್ನಿಂದ ಅವರಿಗೆ ಏನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ. ಮನೆ ಕೆಲಸವೆಲ್ಲ ಮಾಡಿ, ಬರುವ ಸಂಪಾದನೆಯಲ್ಲಿ ಬಹುತೇಕ ಅಮ್ಮನ ಕೈಗೆ ಕೊಡುತ್ತಿದ್ದೆ. ಆದರೂ ಅನಾವಶ್ಯಕವಾಗಿ ನನ್ನ ಬಗ್ಗೆ ಯಾಕೆ ಈ ರೀತಿ ಕಾಳಜಿ ಎಂದು ನನಗೆ ತಿಳಿಯದೇ ಹೋಯಿತು.
“”ಬಾರೇ, ಕಾಫಿ ಕುಡಿಯುವಿಯಂತೆ ತಲೆನೋವು ಕಮ್ಮಿ ಆಗುತ್ತದೆ” ಎಂದರು ಅಮ್ಮ. ಅಯ್ಯೋ, ಅಮ್ಮನ ಬಗ್ಗೆ ಎಷ್ಟು ಅಪಾರ್ಥ ಮಾಡಿದ್ದೆ ನಾನು ಎಂದು ಮನಸ್ಸಿಗೆ ಕಸಿವಿಸಿ ಆಯಿತು. ಎದ್ದು ಕಾಫಿ ಕುಡಿದು ಭಾನುವಾರ ಪತ್ರಿಕೆ ಹಿಡಿದು ಓದಲು ಕೂತರೂ ಹಿಂದಿನ ನೆನಪುಗಳೇ ಮರುಕಳಿಸುತ್ತಿತ್ತು.
ಅಂದು ಅಣ್ಣನಿಗೆ ವಧು ನೋಡುವ ಕಾರ್ಯಕ್ರಮ. ಇಬ್ಬರೂ ಪರಸ್ಪರ ಒಪ್ಪಿದ ಕೂಡಲೇ ಲಗ್ನಪತ್ರಿಕೆ ತಯಾರಿ ಆಯಿತು. ಮದುವೇನೂ ನಡೆಯಿತು. ಮನೆಗೆ ಬಂದ ನಂತರವೇ ತಿಳಿದಿತ್ತು ನಮಗೆ, ಆಕೆಗೆ ನಮ್ಮೊಡನೆ ಇರಲು ಇಷ್ಟವಿಲ್ಲವೆಂದು. ಬೆಳಿಗ್ಗೆ ಹತ್ತು ಗಂಟೆಯಾದರೂ ಏಳುತ್ತಿರಲಿಲ್ಲ. ಕೇಳಿದರೆ ಕೆನ್ನೆಗೆ ಫಟೀರ್ ಎಂದು ಹೊಡೆದ ಹಾಗೆ ಚುಚ್ಚುವ ಮಾತುಗಳು. ಎಲ್ಲರೂ ರೋಸಿಹೋಗಿದ್ದರು. ಅಮ್ಮನಿಗೆ ತಾನು ಹೇಳಿದ್ದೆ ಸರಿ ಎಂದಂತೆ “”ಸಾವಿರ ಸಲ ಹೇಳಿದ್ದೆ , ಬೆಳೆದ ಹೆಣ್ಣುಮಕ್ಕಳನ್ನು ಇಟ್ಟು ಮಗನಿಗೆ ಮದುವೆ ಮಾಡುವುದು ಸರಿಯಲ್ಲ. ನನ್ನ ಮಾತು ಕೇಳಿದ್ದೀರಾ?” ಎಂದು ವಟವಟ ಮಾತುಗಳು. ಎಲ್ಲರೂ ತೆಪ್ಪಗೆ ಕೂತಿರುತ್ತಿದ್ದರು. ಆ ಸಮಯಕ್ಕೆ ಅಪ್ಪನ ತಂಗಿಯ ಮಗ ನನ್ನ ತಂಗಿಯನ್ನು ಮದುವೆ ಮಾಡಿಕೊಳ್ಳಲು ಅಂಗಲಾಚಿಕೊಂಡ. ಎಂತಹ ಸಂಬಂಧ. ಕೂಡಲೇ ಒಪ್ಪಿ ಮದುವೇನೂ ನಡೆಯಿತು.
ಮನೆಯವರ ನೆಮ್ಮದಿ ಪೂರ್ತಿ ಕೆಟ್ಟಿತ್ತು. ಹೌದು, ಅಮ್ಮ ಹೇಳಿದ್ದರಲ್ಲಿ ಏನೂ ತಪ್ಪಿರಲಿಲ್ಲ. ಆದರೆ, ಅಣ್ಣನ ಹೆಂಡತಿ ಒಪ್ಪಿ ಮದುವೆ ಆಗಿದ್ದು, ನಮಗೆ ಗೊತ್ತಿರಲಿಲ್ಲ. ಮದುವೆಗೆ ಮುನ್ನ ಚಕಾರವೆತ್ತದೇ ಈಗ ಯಾಕೆ ಹೀಗೆ? ನಮಗೆಲ್ಲರಿಗೂ ಅಚ್ಚರಿಯ ಸಂಗತಿ. ಯೋಚನೆ ಮಾಡಿ ಮಾಡಿ ಅಮ್ಮ ತುಂಬಾ ಕೃಶಳಾಗಿದ್ದಳು. ಆದರೆ, ಯಾರು ಏನು ಮಾಡುವ ಪರಿಸ್ಥಿತಿಯಲ್ಲಿಯೇ ಇರಲಿಲ್ಲ. ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಲು ನನಗೆ ಪುರುಸೊತ್ತು ಇದ್ದರೆ ತಾನೇ? ಬೆಳಗ್ಗೆ ಹೋದರೆ ರಾತ್ರಿ ದೀಪ ಹಚ್ಚಿದ ನಂತರವೇ ಮನೆಗೆ ಪ್ರವೇಶ. ಮತ್ತೆ ಹರಟೆಗೆ ಪುರುಸೊತ್ತು ಎಲ್ಲಿ? ಯಾವತ್ತಾದರೂ ಬೇಗ ಬಂದರೂ ಈವತ್ತಿನ ತರಹವೇ ಗೋಳು.
ಕೆಲವೊಮ್ಮೆ ನನಗೆ ಅನಿಸುತ್ತೆ, ನಾನು ದುಡಿಯುವ ಯಂತ್ರವಾಗಿ ಬಿಟ್ಟಿದ್ದೀನಿ. ಯಾರಿಗೂ ನನ್ನ ಸುಖ-ಸಂತೋಷದ ಬಗ್ಗೆ ಅರಿವೇ ಇಲ್ಲವೇನೋ? ಆದರೆ ಅಮ್ಮನ ಮುಖ ನೋಡಿದರೆ ಅಯ್ಯೋ ಅನಿಸುತ್ತಿತ್ತು. ಪಾಪ ಹೆತ್ತ ಕರುಳು, “”ಒದ್ದಾಡುತ್ತಿದ್ದೀಯಲ್ಲ ಕಂದ” ಎಂದು ಲೊಚ ಲೊಚ ಮುದ್ದು ಕೊಡುವಾಗ “ಥೂ ಅಸಹ್ಯ” ಎನ್ನುವೆ. ಮನಸ್ಸಿನಲ್ಲಿ ಅಮ್ಮನ ಮುತ್ತಿಗಾಗಿ ಕಾಯುವೆ. ಹಾಗೆಯೇ ನಾಳೆ ನಾನು ಮದುವೆಯಾದರೆ ನನ್ನ ಗಂಡನ ಸಾಮೀಪ್ಯ ಹೇಗಿರಬಹುದು ಎಂದು ಆಕಾಶದಲ್ಲಿ ವಿಹರಿಸುತ್ತೇನೆ.
ಫೋನ್ ಶಬ್ದ ಕೇಳಿ ಅಮ್ಮ, “”ಏನು ಮಾಡುತ್ತಿದ್ದಿಯೇ ವೈದೇಹಿ. ಆವಾಗದಿಂದ ಫೋನ್ ರಿಂಗ್ ಆಗುತ್ತಿದೆ” ಎಂದಾಗಲೇ ಎಚ್ಚೆತ್ತು ಮಾತನಾಡಿದರೆ ತಂಗಿ ವೇದಾ ಅಲ್ಲಿಂದ, “”ವೈದೇಹಿ, ಅಮ್ಮನಿಗೆ ಕೊಡು” ಎಂದಳು.
ನಾನು, “”ಹೇಗಿದ್ದೀಯೆ?” ಎಂದರೆ, “”ಮೊದಲು ಅಮ್ಮನಿಗೆ ಕೊಡು” ಎಂದಾಗ ನನಗೆ ಹೇಗಿರಬೇಡ. “ನಾನು ಏನು ಅಂತ ತಿಳಿದುಕೊಂಡಿದ್ದಾಳೆ’ ಅಂತ ಅಮ್ಮನಿಗೆ ಕರೆದು ಫೋನ್ ಕೊಟ್ಟೆ. ಈಗಾಗಲೇ ಒಂದು ಮಗುವಿನ ತಾಯಿ ಅವಳು.
ಅಮ್ಮಾ , “”ಏನು ವೇದಾ ಚೆನ್ನಾಗಿದ್ದೀಯಮ್ಮ. ಅಳಿಯಂದಿರು ಏನು ಅನ್ನುತ್ತಾರೆ?” ಎಂದಾಗ ಅವಳು ಏನೋ ಹೇಳಿರಬೇಕು. ಅಮ್ಮ ಪುನಃ, “”ನಿನ್ನ ಮಗನಿಗೆ ಕೊಡು, ಏನು ಮಾಡುತ್ತಿದ್ದಾನೆ. ಪಾಪು ಬಂಗಾರ, ನಿನ್ನ ಅಜ್ಜಿ ಕಣೋ ಏನು ಮಾಡುತ್ತಿದ್ದಿ?” ಎಂದರು. ಪುನಃ ಅವಳೇ ಮಾತನಾಡಿರಬೇಕು. ಅದಕ್ಕೆ ಅಮ್ಮ ಅವಳಿಗೆ, “”ಅದೇನು ಕೈಯಿಂದ ಎಳೆದು ಮಾತನಾಡುತ್ತಿ, ಮಗು ಜೊತೆ ಒಂದೆರಡು ಮಾತನಾಡೋಣ ಎಂದರೆ ನಿನ್ನದೊಂದು ತಲೆಹರಟೆ” ಎಂದರು.
ಅಲ್ಲಿಂದ ಏನು ಮಾತನಾಡಿದ್ದಳ್ಳೋ ತಿಳಿಯದು. ಅಮ್ಮನ ಗಂಟು ಕಮ್ಮಿ ಆದ ಹಾಗೆ. ನನಗೆ ಭಯ ಆಗಿ ಓಡಿಬಂದು, “”ಅಮ್ಮ, ಅಮ್ಮ ಏನಾಯಿತು? ಯಾಕೆ ಅಳುತ್ತೀಯಾ?” ಎಂದಾಗ ಅಮ್ಮ, “”ಎಲ್ಲಾ ನನ್ನ ಪ್ರಾರಬ್ಧ. ಇವನು ಬೇಡ ಎಂದು ಎಲ್ಲ ವರಗಳನ್ನು ತಳ್ಳಿದ. ನಿನ್ನ ತಂಗಿ ತಯಾರಾಗಿದ್ದಳು. ಸೋದರಿಕೆ ಸಂಬಂಧ ಬೇಡ ಅಂತ ಹೇಳುವ ಪರಿಸ್ಥಿತಿಯಲ್ಲಿ ನಾವಿರಲಿಲ್ಲ. ಒಳ್ಳೆ ಕಡೆ ತಲುಪುತ್ತಾಳಲ್ಲ ಎಂಬ ಸಮಾಧಾನ. ಆದರೆ ನಿನ್ನ ಯೋಚನೆ ಯಾರಿಗೆ ಇದೆ ನನ್ನೊಬ್ಬಳನ್ನು ಬಿಟ್ಟು” ಎಂದು ಅಳುತ್ತ¤ ಕೂತರು.
“”ಈಗ ಆಗಿದ್ದಾದರೂ ಏನು?” ಎಂದೆ. ಅಮ್ಮ ಪುನಃ ಮುಂದುವರಿಸಿ, “”ಎಲ್ಲ ನನ್ನ ಹಣೆಬರಹ. ನೀನು ಯಾವ ವರ ಒಪ್ಪಿಲ್ಲ, ನಿನ್ನ ಸಂಪಾದನೆಯಿಂದ ಮನೆ ನಡೆಯುತ್ತೆ. ನಿನ್ನ ಅಪ್ಪನಿಗೆ ಏನೂ ಯೋಚನೆ ಇಲ್ಲ” ಎಂದು ಬಿಕ್ಕಿ ಬಿಕ್ಕಿ ಅಳಲು ಶುರುಮಾಡಿದರು. ನಾನು ಕೂಡಲೇ, “”ವೇದಾ ಏನಂದಳು?” ಎಂದಾಗ ಅಮ್ಮ, “”ಏನೂ ಇಲ್ಲ. ಇಲ್ಲಿ ಬರುತ್ತಾಳಂತೆ ಮುಂದಿನ ವಾರ” ಎಂದರು. ಆಗ ನಾನು “”ಯಾಕಂತೆ? ಈಗಾಗಲೇ ಹೋಗಿ ಹತ್ತು ತಿಂಗಳು ಆಗಿಲ್ಲವಲ್ಲ”.
ಅಮ್ಮ ತಡವರಿಸಿ, “”ಅವಳು ಬಸುರಿ ಅಂತೆ. ಬಾಣಂತನಕ್ಕೆ ಅಮ್ಮನ ಮನೆಗೆ ಹೋಗು ಎಂದಿರುವರಂತೆ ಅತ್ತೆ. ನನ್ನ ಕರ್ಮ. ನೀನು ಬೇರೆ ಕೂತಿದ್ದೀಯಾ. ನನಗೇನೂ ತೋಚದು ವೈದೇಹಿ” ಎಂದು ಗಳಗಳನೇ ಅತ್ತಾಗ ಅಮ್ಮನಿಗೆ ಸಮಾಧಾನ ಮಾಡಿದೆ.
ಹೌದು, ಅಮ್ಮ ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಮನೆಯ ಪರಿಸ್ಥಿತಿ ಸರಿ ಹೋಗಲಿ ಎಂದು ಮದುವೆ ಈಗ ಬೇಡ ಎಂದೆ. ಅಣ್ಣ-ತಂಗಿಯರ ಮದುವೆ ಬಹಳ ಸುಗಮವಾಗಿ ಆಯಿತು. ಅವರಿಗಾದರೂ ಮನಸ್ಸಿನಲ್ಲಿ ಇರಬೇಕು, ಅಕ್ಕನಿಗೆ ಮದುವೆ ಮಾಡಬೇಕು ಎಂದು. ಒಂದು ದಿನವಾದರೂ ಈ ಮಾತು ಆಡಿದ್ದಾರಾ? ಅವರಾಯಿತು, ಅವರ ಸಂಸಾರ, ಮನೆ ಸಂಬಂಧ, ಮದುವೆ-ಮುಂಜಿ, ನೆಂಟರಿಷ್ಟರ ಜೊತೆ ಒಡನಾಟ. ಇಲ್ಲಿ ನಾನು ಈ ತರಹ ಕೂತಿರುವುದು ಅವರಿಗೆ ತಿಳಿಯದೇನು? ಹೀಗೆ ಹಳೆಯ ನೆನಪುಗಳನ್ನು ಕೆದಕುತ್ತ ಇದ್ದೆ.
ಒಮ್ಮೆ ಅಣ್ಣ-ತಂಗಿಯರ ಬಳಿ ನಾನು, “”ವಯಸ್ಸು ದಾಟಿದ ನಂತರ ನನಗೆ ಯಾರು ಸಿಗುತ್ತಾರೆ?” ಎಂದಾಗ, ಅಮ್ಮ ಸುಮ್ಮನಿರದೇ, “”ಏನು ಅಂತ ಮಾತನಾಡುತ್ತಿಯಾ? ನಿನಗೇನು ಕಮ್ಮಿ, ನೋಡಲು ಲಕ್ಷಣವಾಗಿದ್ದೀಯಾ. ತಿದ್ದಿದ ಬೊಂಬೆ ನೀನು. ನೀನು ಒಪ್ಪಿದರೆ ನಾ ಮುಂದು, ನೀ ಮುಂದು ಎಂದು ಬರುತ್ತಾರೆ. ಅಂತಹದರಲ್ಲಿ ಎಂತಹ ಅಪಶಕುನದ ಮಾತು. ಬಿಡು¤ ಅನ್ನು. ಎಲ್ಲಾದಕ್ಕೂ ಟೈಮ್ ಬರಬೇಕು” ಎಂದು ಹೇಳಿದಾಗ, ಪರವಾಗಿಲ್ಲವೇ ಅಮ್ಮ ಎಲ್ಲಾ ತಿಳ್ಕೊಂಡು ಬಿಟ್ಟಿದ್ದಾರೆ ಎಂದುಕೊಂಡೆ.
ಕೂಡಲೇ ಅಣ್ಣ, “”ಏನಮ್ಮಾ ಹೀಗಂತಿಯಾ? ಈಗಾಗಲೇ ನಲ್ವತ್ತು ದಾಟಿದೆ. ಯಾರು ಮದುವೆ ಆಗುತ್ತಾರೆ? ಇಲ್ಲಾ ಏನೋ ಊನ ಇರಬೇಕು ಇಲ್ಲಾ ಎರಡನೇ ಸಂಬಂಧ, ಎರಡರಲ್ಲಿ ಒಂದು. ಅದಕ್ಕಿಂತ ಆಗದಿರುವುದು ಒಳ್ಳೆಯದು” ಎಂದ. ತಂಗಿ ವೇದಾ, “”ಹೌದು ಹೌದು” ಎಂಬಂತೆ ತನ್ನ ಅತ್ತೆ ಮನೆಯವರ ಕಡೆ ಆಗಿರುವ ಎರಡು ಮೂರು ಉದಾಹರಣೆಗಳನ್ನು ಕೊಟ್ಟಾಗ, ನನಗೆ ತಲೆಬಿಸಿ ಆಯಿತು. ಹೌದು ಅವರೂ ಹೇಳುವುದು ನಿಜವೇ. ಆದರೆ ಮನೆಯವರಿಗೆ ಆಸೆ ಇರಬೇಕು. ಕಡೆತನಕ ಪ್ರಯತ್ನ ಮಾಡಬೇಕು ಎಂಬ ಆಸೇನೇ ಇಲ್ಲ ಇವರಿಗೆ.
ನಂತರದ ದಿನಗಳಲ್ಲಿ ಅಲ್ಲಿ ಅತ್ತಿಗೆಯರ ಗಲಾಟೆ. ತಂಗಿಯ ಬಾಣಂತನ, ನನ್ನ ಸಂಬಳದಿಂದ ಸಹಾಯ. ಇವೆಲ್ಲ ಕಣ್ಣಲ್ಲಿ ಒತ್ತಿ ಹಿಡಿದ ಹಾಗಿತ್ತು. ತಂಗಿ ಮನೆಗೆ ಬಾಣಂತನಕ್ಕೆ ಬರುವಾಗ ಮನೆಯಲ್ಲಿ ಜಾಗವಿಲ್ಲ ಎಂದು ಒಂದು ರೂಮು ಕಟ್ಟಿಸೋಣ ಎಂದು ಅಣ್ಣ ಇಂಜಿನಿಯರನ್ನು ಕರೆಸಿದರು. ಅವನ ಲೆಕ್ಕ ನೋಡಿ ಅಪ್ಪನಿಗೆ ದಿಗಿಲಾಯಿತು. ಅವರು ಹೊರಟ ನಂತರ ಅಣ್ಣ ನನ್ನ ಬಳಿ, “”ವೈದೇಹಿ, ಮನೆ ನನ್ನ ಹೆಸರಿನಲ್ಲಿ ಮಾಡು. ನನಗೆ ಆಫೀಸಿನಿಂದ ಲೋನ್ ಸಿಗುತ್ತದೆ.
ತಿಂಗಳು ತಿಂಗಳು ನಾನು ಕಟ್ಟುತ್ತೇನೆ. ಲೋನ್ ತೀರಿದ ನಂತರ ನಿನ್ನ ಹೆಸರಿಗೆ ಟ್ರಾನ್ಸಫರ್ ಮಾಡುತ್ತೇನೆ” ಎಂದಾಗ, “ಹೂಂ’ ಎಂದು ಎಲ್ಲಾ ಪತ್ರಕ್ಕೂ ಸಹಿ ಹಾಕಿಕೊಟ್ಟಿದ್ದೆ. ರೂಮು ಕಟ್ಟಿದ ನಂತರ, ಬಾಣಂತನ, ಮನೆ ಖರ್ಚು, ದುಡ್ಡು ಸಾಲದು ಎಂದಾಗ ಎಲ್ಲದಕ್ಕೂ ನಾನು ಮುಂದು. ನನಗಂತೂ ಆಗ ಇದೆಲ್ಲಾ ತಿಳಿದೇ ಇರಲಿಲ್ಲ.
ಹೀಗೆ ನಾಲ್ಕೈದು ವರುಷಗಳ ಅಂತರದಲ್ಲಿ ನಮ್ಮ ಆಫೀಸಿನಲ್ಲಿ ಹೊಸ ಮೆನೇಜರ್ ಚಂಚಲ್ ಕುಮಾರ್ ಬಂದರು. ಹದಿಹರೆಯದ ಪ್ರಾಯ. ತುಂಬಾ ಪ್ರಾಮಾಣಿಕರು. ಅವರ ಬಗ್ಗೆ ಎಲ್ಲರಿಗೂ ಗೌರವ. ಆ ಸಮಯಕ್ಕೆ ನಾನು ಇನ್ನೊಂದು ಮನೆ ತಗೊಂಡಿರುವುದು ಯಾರಿಗೂ ಹೇಳಿರಲಿಲ್ಲ. ಹೇಳಬೇಕೆಂದು ಅನಿಸಲೂ ಇಲ್ಲ.
ಅಣ್ಣನ ಮದುವೆಗೆ, ತಂಗಿ ಮದುವೆಗೆ ಅಂತ ಸುಮಾರಾಗಿ ದುಡ್ಡು ಖರ್ಚಾಗಿತ್ತು. ನಾನು ಖರೀದಿಸಿದ ಮನೆಯ ಪತ್ರವನ್ನು ಲೋಕರ್‌ನಲ್ಲಿ ಇಟ್ಟಿದ್ದೆ. ಒಮ್ಮೆ ಬ್ಯಾಂಕಿನಿಂದ ಒಡವೆ ತರಲು ನನ್ನ ತಂಗಿ ವೇದಾ ಹೋದಾಗ ಮನೆಪತ್ರ ಓದಿರಬಹುದು. ಆವತ್ತಿನಿಂದ ನನ್ನ ಬಳಿ ತುಂಬಾ ವಿನಯದಿಂದ ಇರುತ್ತಿದ್ದಳು. ಯಾವಾಗ ನೋಡಿದರೂ ಮನೆಯಲ್ಲಿ ಕಷ್ಟ , ದುಡ್ಡು ಕೇಳುವ ಪ್ಲ್ರಾನ್. ಒಂದೆರಡು ಸಲ ಕೊಟ್ಟೆ. ನಂತರ ಗೊತ್ತಾಯಿತು, ಇವಳಿಗೆ ನನ್ನ ದುಡ್ಡಿನ ಮೇಲೆ ವ್ಯಾಮೋಹವೆಂದು. ಆ ಸಮಯವೇ ನನ್ನ ಮೆನೇಜರ್ ಚಂಚಲ್ ಕುಮಾರ್ ಮದುವೆಯ ಬಗ್ಗೆ ನನ್ನ ಅಭಿಪ್ರಾಯ ಕೇಳಿದಾಗ ನಾನು, “”ಒಂದೆರಡು ವಾರದಲ್ಲಿ ತಿಳಿಸುತ್ತೇನೆ” ಎಂದು ಹೇಳಿ ಯಾರಿಗೂ ಹೇಳಲಾರದ ನೋವಲ್ಲಿ ಒದ್ದಾಡುತ್ತಿದ್ದೆ.
ಅಮ್ಮ ಆಗಲೇ “”ವೈದೇಹಿ, ವೈದೇಹಿ” ಎಂದು ಕರೆದ ಹಾಗೆ, ನಾನು ಎಚ್ಚೆತ್ತೆ. “”ಬಿಸಿ ಬಿಸಿ ಊಟ ಮಾಡಿ ಮಲ್ಕೊಳ್ಳೆ. ನೆತ್ತಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊ. ನಾಲ್ಕೊತ್ತು ಮೊಬೈಲ್, ಕಂಪ್ಯೂಟರ್ ಎಂದು ಕಣ್ಣು ಹಾಳು ಮಾಡಿಕೊಳ್ಳುತ್ತಿರಾ?” ಎಂದರು. ಊಟ ಸದ್ದಿಲ್ಲದೇ ಮಾಡಿದೆ. ತಂಗಿ ಬಾಣಂತನಕ್ಕೆ ಬರುವ ಮೊದಲೇ ಚಂಚಲ್ ಕುಮಾರ್‌ಗೆ ಒಪ್ಪಿಗೆ ನೀಡಿದರೆ ಹೇಗೆ ಎಂದುಕೊಂಡು ನಿದ್ರಾದೇವಿ ಅಪ್ಪಿಕೊಂಡಿದ್ದು ತಿಳಿಯಲೇ ಇಲ್ಲ.
ಬೆಳಗ್ಗಿನ ಜಾವ ಎಚ್ಚರ ಆದಾಗ, “”ಹೋ, ಇವತ್ತು ಆಫೀಸಿನಲ್ಲಿ ಹೋಗಿ ಅವರ ಬಳಿ ನನ್ನ ಅಭಿಪ್ರಾಯ ತಿಳಿಸಬೇಕು ಎಂದುಕೊಂಡು ಬಹಳ ಸಂತೋಷವಾಗಿ ಆಫೀಸಿಗೆ ಹೊರಟೆ. ನಾನು ಆಫೀಸಿಗೆ ಹೋದಾಗ ಅವರು ಆಗಲೇ ಬಂದು ಮೈಲ್ ನೋಡುತ್ತಿದ್ದರು. ಕಂಪ್ಯೂಟರ್‌ನಲ್ಲಿ ಮುಳುಗಿಹೋದ ಹಾಗಿತ್ತು ಅವರ ಭಾವ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ ಅವರನ್ನು ಕಂಡು ಮನಸ್ಸು ಇವರೇ ನನ್ನ ಬಾಳ ಗೆಳೆಯನಾಗಲು ತಕ್ಕ ವ್ಯಕ್ತಿ. ಈಗ ಹೇಳಲೇಬೇಕು ಎಂದು “ಸರ್’ ಎಂದೆ.
ಅವರು ತಲೆಎತ್ತಿ ಆಶ್ಚರ್ಯದಿಂದ “”ಹಲೋ ಬನ್ನಿ ವೈದೇಹಿ” ಎಂದರು.
ನಾನು ತಡವರಿಸಿ, “”ನನಗೆ ಒಪ್ಪಿಗೆ ಇದೆ” ಎಂದು ಹೇಳಿ ನಾಚಿ ಹೊರಗಡೆ ಓಡಿಬಂದು ನನ್ನ ಕುರ್ಚಿಯಲ್ಲಿ ಕೂತೆ. ಮೈಯೆಲ್ಲ ನಡುಗುತ್ತಿತ್ತು. ಯಾರನ್ನು ಮಾತನಾಡಿಸಲೇ ಇಲ್ಲ. ಸಾಯಂಕಾಲ ಮನೆಗೆ ಬಂದು ಅಮ್ಮನ ಬಳಿ ಹೇಳಿದಾಗ ಅಮ್ಮ ಸಂತೋಷದಿಂದ “”ಯಾರು, ಎತ್ತ ಎಂದು ಕೇಳಿ ಅವರನ್ನು ಮನೆಗೆ ಕರೆದುಕೊಂಡು ಬಾ” ಎಂದರು.
ಅಣ್ಣ ಬಂದ ತಕ್ಷಣ ಅಮ್ಮ ಸುದ್ದಿ ಹೇಳಿದಾಗ ನಾನು ರೂಮಿನಿಂದ ಮಾತುಗಳನ್ನು ಕೇಳಿಸಿಕೊಂಡೆ. “”ಏನಮ್ಮ ಯಾಕೆ ಅವಸರ? ವೇದಾ ಬಾಣಂತನಕ್ಕೆ ಬರುತ್ತಾಳಲ್ಲ ಆಮೇಲೆ ಆಗದೇ?”. ಅದಕ್ಕೆ ಅಮ್ಮ, “”ಅದು ಹೇಗೆ ಹೇಳುವುದು ಕಣಪ್ಪ. ಅವಳು ಒಪ್ಪಿರುವುದೇ ದೊಡ್ಡದು” ಎಂದಾಗ ಅಣ್ಣ, “”ನಾವೇನು ಅಡ್ಡ ಬಂದಿರಲಿಲ್ಲವಲ್ಲ. ಅವಳು ತಾನೇ ಬೇಡ ಎನ್ನುತ್ತಿದ್ದಳು. ವೇದಾ ಬಾಣಾಂತನಕ್ಕೆ ಸಾಕಷ್ಟು ಖರ್ಚು ಇದೆ” ಎಂದು ಸುಮ್ಮನಾದ.
ಅಣ್ಣನಿಗೆ ನನ್ನ ಭವಿಷ್ಯಕ್ಕಿಂತ ತಂಗಿಯ ಬಾಣಂತನವೇ ದೊಡ್ಡದು. ತಾನು ದುಡ್ಡು ಖರ್ಚು ಮಾಡಬೇಕಾಗುತ್ತದೆ ಎಂದು ಈ ತರಹ ಹೇಳುತ್ತಾನೆ ಎಂದು ನಾನು ಕನಸಿನಲ್ಲೂ ತಿಳಿದಿರಲಿಲ್ಲ. ಮನಸ್ಸಿಗೆ ತುಂಬಾ ಆಘಾತವಾಯಿತು. ಕೂಡಲೇ ನಾನು ರೂಮಿನ ಹೊರಗಡೆ ಬಂದು “”ಅಣ್ಣಾ, ವೇದಾ ಬಾಣಂತನಕ್ಕೆ ನಾನು ದುಡ್ಡು ಕೊಡುತ್ತೇನೆ. ನೀನು ಏನೂ ಯೋಚನೆ ಮಾಡಬೇಡ” ಎಂದಾಗ ಅವನಿಗೆ ಪಿಚ್ಚೆನಿಸಿರಬಹುದು.
ಒಳಗಡೆ ರೂಮಿಗೆ ಬಂದಾಗ ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಚಂಚಲ್ ಕುಮಾರ್‌ಗೆ ನಮ್ಮ ಮನೆಯ ವಿಳಾಸವನ್ನು ಎಸ್‌ಎಂಎಸ್ ಮಾಡಿ ನಮ್ಮ ಮನೆಗೆ ಬರಲು ಆಹ್ವಾನಿಸಿದೆ. ಮನಸ್ಸು ನಿರಾಳವಾಯಿತು. ಹಾಸಿಗೆಯಲ್ಲಿ ಹಾಗೆ ಒರಗಿದೆ. “ನೀ ನಡೆವ ಹಾದಿಯಲ್ಲಿ’ ಹಾಡು ಎಫ್ಎಮ್‌ನಲ್ಲಿ ಬರುತ್ತಿತ್ತು. ನಾನು ಚಂಚಲ್ ಕುಮಾರ್ ಬಗ್ಗೆ ತಗೊಂಡ ನಿರ್ಧಾರ ಸರಿಯೇ ಎಂದು ಕೇಳಲು ಯಾರೂ ಇರಲಿಲ್ಲ. ಮನಸ್ಸಿನಲ್ಲೇ ನನ್ನ ನಿರ್ಧಾರವೇ ಸರಿ ಅನಿಸಿತು.
– ಹೀರಾ ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ
Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ
Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್ ನಿಲ್ದಾಣವೇ ಇಲ್ಲ !
”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್
Puttur: ಗ್ರಾಮ ಚಾವಡಿಗೆ 150 ವರ್ಷ ಹಳೆಯ ಕಟ್ಟಡವೇ ಗತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.