ಹಾಸ್ಪಾರೆ: ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಒಣ ಮರ
Team Udayavani, Aug 6, 2017, 6:40 AM IST
ಬೆಳ್ಳಾರೆ: ಅರಂತೋಡು ಮೆಸ್ಕಾಂ ಉಪವಿಭಾಗ ವ್ಯಾಪ್ತಿಯ ಅರಂತೋಡು -ಅಡ್ತಲೆ ಹೈಟೆನ್ಶನ್ ವಿದ್ಯುತ್ ಲೈನ್‌ಗೆ ಹಾಸ್ಪಾರೆಯಲ್ಲಿ ಬೃಹತ್ ಗಾತ್ರದ ಒಣ ಮರವೊಂದು ಬೀಳುವ ಸಾಧ್ಯತೆ ಇದ್ದು ಸಂಬಂಧಪಟ್ಟವರು ತತ್‌ಕ್ಷಣ ಕ್ರಮಕೈಗೊಳ್ಳಬೇಕಿದೆ.
ಈ ಮರ ಸತ್ತು ಹೋಗಿ ಮೂರು-ನಾಲ್ಕು ವರ್ಷಗಳೇ ಕಳೆದಿದೆ. ಈ ಮರ ತುಂಬಾ ಶಿಥಿಲಗೊಂಡಿದ್ದು, ಸ್ಥಳೀಯರು ಇದನ್ನು ತೆರವುಗೊಳಿಸಲು ಮೆಸ್ಕಾಂ ಇಲಾಖೆಗೆ ಹಲವು ಬಾರಿ ತಿಳಿಸಿದರೂ ಸ್ಪಂದಿಸಿಲ್ಲ. ಮರದ ಪಕ್ಕದಲ್ಲಿಯೇ ಬಸ್ ನಿಲ್ದಾಣ ಇದ್ದು ಅರಂತೋಡು, ಕಲ್ಲುಗುಂಡಿ, ಸಂಪಾಜೆ, ಗೂನಡ್ಕ, ಮರ್ಕಂಜ, ಅಡ್ತಲೆಗೆ ಹೀಗೆ ಇತರೆಡೆಗಳಿಗೆ ತೆರಳುವ ಅನೇಕ ಜನರು ಇಲ್ಲೇ ಕುಳಿತುಕೊಂಡು ಬಸ್‌ಗೆ ಕಾಯುತ್ತಾರೆ. ಅಲ್ಲದೆ ಪಾದಚಾರಿಗಳು, ಶಾಲಾ ಮಕ್ಕಳು ಸದಾ ನಡೆದಾಡುವುದರಿಂದ ಅಪಾಯ ಸಂಭವಿಸುವ ಭೀತಿ ಎದುರಾಗಿದೆ.
ಕುಕ್ಕೆ ಸುಬ್ರಹ್ಮಣ ಸಂಪರ್ಕ ರಸ್ತೆ
ಈ ರಸ್ತೆಯ ಮೂಲಕ ಮಡಿಕೇರಿ ಕಡೆಯಿಂದ ಸಾವಿರಾರು ತೀರ್ಥಯಾತ್ರಿಗಳು ಹಾಗೂ ಪ್ರವಾಸಿಗಳು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣ ಬೆಳೆಸುತ್ತಾರೆ. ಸುಮಾರು ಇನ್ನೂರು ಮೀಟರಿಗಳಷ್ಟು ದೂರ ಈ ರಸ್ತೆಯ ಮಧ್ಯದಲ್ಲಿಯೇ ವಿದ್ಯುತ್ ಲೈನ್ ಹಾದು ಹೋಗುತ್ತಿದೆ. ಈಗ ಆಗಾಗ ಗಾಳಿ ಮಳೆ ಸುರಿಯುತ್ತಿದ್ದು, ಸ್ಥಳೀಯರು ಪ್ರಾಣಭಯದಿಂದ ಓಡಾಡುವ ಪರಿಸ್ಥಿತಿ ಉಂಟಾಗಿದೆ.
ಇನ್ನಾದರೂ ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ಅರಣ್ಯ ಇಲಾಖೆಗೆ ಪತ್ರ ಬರೆದು ತೆರೆವುಗೊಳಿಸುವ ಕಾರ್ಯ ಮಾಡಬೇಕಾಗಿದೆ.
ಮನವಿ ನೀಡಿದ್ದೇವೆ
ಹೈಟೆನ್ಶನ್ ವಿದ್ಯುತ್ ಲೈನ್ ಪಕ್ಕವೇ ಒಣ ಮರವಿದ್ದು, ಬಿದ್ದರೆ ಅಪಾಯ ಸಂಭವಿಸಲಿದೆ ಎಂದು ಮೆಸ್ಕಂಗೆ ನಾವು ತಿಳಿಸಿದ್ದೇವೆ. ಆದರೆ ಇಲಾಖೆ ತೆರವುಗೊಳಿಸುವ ಕಾರ್ಯ ಮಾಡಿಲ್ಲ ಎಂದು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ ಪ್ರತಿಕ್ರಿಯಿಸಿದ್ದಾರೆ.
ಅರಣ್ಯ ಇಲಾಖೆಗೆ ತಿಳಿಸುತ್ತೇವೆ
ಈ ಸಮಸ್ಯೆ ಬಗ್ಗೆ ಸ್ಥಳೀಯರು ನಮಗೆ ದೂರು ನೀಡಿದ್ದಾರೆ. ಮರ ಅರಣ್ಯ ಇಲಾಖೆಗೆ ಸೇರಿದ್ದಾಗಿದೆ ಅವರಿಗೆ ನಾವು ಮರ ತೆರವುಗೊಳಿಸುವ ಬಗ್ಗೆ ಪತ್ರ ಬರೆಯುತ್ತೇವೆ.
– ಜಯಪ್ರಕಾಶ್
ಜೆ.ಇ. ಪ್ರಭಾರ ಅರಂತೋಡು, ಉಪವಿಭಾಗ ಮೆಸ್ಕಂ
– ತೇಜೇಶ್ವರ್ ಕುಂದಲ್ಪಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.