ಕವಿಶೈಲ ಕಣ್ತುಂಬಿಕೊಂಡ ಕವಿಗಳ ದಂಡು
Team Udayavani, Aug 7, 2017, 1:23 PM IST
ಬೆಂಗಳೂರು: ಸಸ್ಯಕಾಶಿಯಲ್ಲಿ ನಿರ್ಮಿಸಲಾಗಿರುವ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿ ನಿವಾಸ, ಕವಿಶೈಲ, ಜೋಗ ಜಲಪಾತ ರಜಾದಿನವಾದ ಭಾನುವಾರ ಅಪಾರ ಸಂಖ್ಯೆಯಲ್ಲಿ ಗಣ್ಯರನ್ನಾದಿಯಾಗಿ ಅಪಾರ ಜನರನ್ನು ಸೆಳೆದಿದೆ. ಭಾನುವಾರ ಬೆಳಗ್ಗೆ 9 ಗಂಟೆಯಿಂದಲೇ ಜನರು ಅಪಾರ ಸಂಖ್ಯೆಯಲ್ಲಿ ಆಗಮಿಸಲು ಪ್ರಾರಂಭಿಸಿದ್ದರು. ಸಂಜೆಯ ಹೊತ್ತಿನಲ್ಲಂತೂ ಕಾಲಿಡಲು ಜಾಗವಿಲ್ಲದಷ್ಟು ಜನಸಾಗರವೇ ತುಂಬಿತ್ತು. ಜನರನ್ನು ನಿಭಾಯಿಸಲು ಪೊಲೀಸರು ಸಾಕಷ್ಟು ಬೆವರಿಳಿಸಬೇಕಾಯಿತು.
ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ಬಿಸಿಲು ಹೆಚ್ಚಾಗಿಯೇ ಇತ್ತು. ಆದರೂ ಜನರ ಉತ್ಸಾಹ ಕಡಿಮೆಯಾಗಲಿಲ್ಲ. ಉಳಿದಂತೆ ಮೋಡಕವಿದ ವಾತಾವರಣವಿದ್ದ ಕಾರಣ, ಉದ್ಯಾನ ಹಾಗೂ ಪುಷ್ಪ ಪ್ರದರ್ಶನ ವೀಕ್ಷಣೆಗೆ ನಿರೀಕ್ಷೆ ಮೀರಿ ಜನರು ಬಂದಿದ್ದರು. ಲಾಲ್‌ಬಾಗ್‌ಗೆ ವಾಹನಗಳಲ್ಲಿ ಬರುವವರಿಗೆ ಶಾಂತಿನಗರ, ಆಲ್‌ಅಮೀನ್ ಕಾಲೇಜ್, ಜೆಸಿ ರಸ್ತೆ ಬಿಬಿಎಂಪಿ ಬಹುಮಹಡಿ ಕಟ್ಟಡದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು.
ಸಾಹಿತ್ಯಾಸಕ್ತರೇ ಹೆಚ್ಚು
ಕವಿಮನೆ, ಕವಿಶೈಲ ಈ ಬಾರಿಯ ಪುಷ್ಪ ಪ್ರದರ್ಶನದ ಪ್ರಧಾನ ಆಕರ್ಷಣೆಯಾಗಿದೆ. ರಾಷ್ಟ್ರಕವಿಯ ಸಾಹಿತ್ಯ ಕೃಷಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗೆ ಬಂದವರಲ್ಲಿ ಅನೇಕರು ಸಾಹಿತ್ಯಾಸಕ್ತರಾಗಿದ್ದು ವಿಶೇಷ. ಭಾನುವಾರ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ಕುವೆಂಪು ಅವರ ಶೂದ್ರ ತಪಸ್ವಿ ನಾಟಕ ಪ್ರದರ್ಶಿಸಿತು. ಸಂಜೆ ಶ್ರೀರಾಮಾಯನ ದರ್ಶನಂನಲ್ಲಿ ರಾವಣ ಪಾತ್ರ ಚಿತ್ರಣದ ವಿಶಿಷ್ಟತೆ ಕುರಿತು ಡಾ.ಎಲ್.ಜಿ.ಮೀರಾ ಉಪನ್ಯಾಸ ನೀಡಿದ್ದರು.
ಮೆಟ್ರೋ ಬಳಕೆ
ಲಾಲ್‌ಬಾಗ್ ಪುಷ್ಪ ಪ್ರದರ್ಶನಕ್ಕೆ ಹೆಚ್ಚಾಗಿ ಅನೇಕರು ಮೆಟ್ರೋ ಬಳಸಿದ್ದು, ಈ ಬಾರಿಯ ಮತ್ತೂಂದು ವಿಶೇಷ. ಇದರಿಂದ ಬಹುತೇಕ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಿದ್ದು, ಸುಲಭವಾಗಿ ಯಾವುದೇ ಅಡೆತಡೆ ಇಲ್ಲದೇ ಲಾಲ್‌ಬಾಗ್ ಪಶ್ಚಿಮ ದ್ವಾರದ ಮೂಲಕ ಲಾಲ್‌ಬಾಗ್ ಪ್ರವೇಶಿಸಲು ಮೆಟ್ರೋ ಸಹಕಾರಿಯಾಗಿದೆ. ಸುಮಾರು 7ರಿಂದ 8 ಸಾವಿರ ಮಂದಿ ಮೆಟ್ರೋ ಬಳಸಿರಬಹುದು ಎಂದು ಅಂದಾಜಿಲಾಗಿದೆ.
ನಾಗರಿಕರ ಪ್ರವೇಶಕ್ಕೆ ಲಾಬಾಗ್‌ನ ನಾಲ್ಕೂ ಪ್ರವೇಶ ದ್ವಾರದಲ್ಲಿ ವಿಶೇಷ ಅವಕಾಶ ಕಲ್ಪಿಸಲಾಗಿದೆ. ದಟ್ಟಣೆ, ಉದ್ದನೇ ಸರದಿ ಸಾಲು ನಿರ್ಮಾಣವಾಗಲು ಅವಕಾಶ ಆಗದಂತೆ ಹಲವು ಕೌಂಟರ್ ತೆರೆದು ಆಗಮಿಸುವವರಿಗೆ ಟಿಕೆಟ ನೀಡಿ ಒಳಗೆ ಕಳಿಸುವ ಕಾರ್ಯ ಸುಲಲಿತವಾಗಿತ್ತು. ವಿಶೇಷ ಪೊಲೀಸ್ ಭದ್ರತೆ, ರಕ್ಷಣಾ ಸಿಬ್ಬಂದಿ ಹೆಚ್ಚುವರಿ ಜಮಾವಣೆ ಮಾಡಲಾಗಿತ್ತು. ಸಿಸಿ ಕ್ಯಾಮೆರಾಗಳ ಮೂಲಕ ಯಾವುದೇ ರೀತಿಯ ಅವಘಡ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ.
ಗಣ್ಯರ ಭೇಟಿ
ಫಲಪುಷ್ಪ ಪ್ರದರ್ಶನಕ್ಕೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸೀಮಾ ಅನ್ಸಾರಿ, ಪ್ರೇಮ ಕವಿ ನಿಸಾರ್ ಅಹಮದ್, ಕುವೆಂಪು ಅವರ ಸೊಸೆ, ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ, ಅವರ ಪುತ್ರಿ ಸುಷ್ಮಿತಾ, ಹಿರಿಯ ಸಾಹಿತಿ ದೇವನೂರು ಮಹಾದೇವ ಭೇಟಿ ನೀಡಿದ್ದರು. ತೋಟಗಾರಿಕೆ ಜಂಟಿ ನಿರ್ದೇಶಕ ಡಾ.ಜಗದೀಶ್ ಅವರು, ಗಣ್ಯರಿಗೆ ಲಾಲ್‌ಬಾಗ್ ಮತ್ತು ಪುಷ್ಪ ಪ್ರದರ್ಶನದ ಪರಿಚಯ ಮಾಡಿಸಿದರು.
ಜನಸಾಗರ
ರಜಾದಿನ ಭಾನುವಾರ ಪುಷ್ಪ ಪ್ರದರ್ಶನಕ್ಕೆ 36,781 ವಯಸ್ಕರು, 6,084 ಮಕ್ಕಳು ಮತ್ತು 7,100 ಮಂದಿ ಪಾಸ್‌ದಾರರು ಸೇರಿದಂತೆ ಒಟ್ಟು ಸುಮಾರು 49,965 ಮಂದಿ ಭೇಟಿ ನೀಡಿದ್ದಾರೆ. ಟಿಕೆಟ್ ಶುಲ್ಕದಿಂದ 24,48,540 ರೂ.ಗಳು ಸಂಗ್ರಹವಾಗಿದೆ.
– ಡಾ.ಜಗದೀಶ್, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ.
ಲಾಲ್‌ಬಾಗ್‌ನಲ್ಲಿಂದು
– ಇಕೆಬಾನಾ, ಭಾರತೀಯ ಕಲೆಯಲ್ಲಿ ಹೂವಿನ ಜೋಡಣೆ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಒಣ ಹೂವಿನ ಜೋಡಣೆ, ತಾಯ್-ಆರ್ಟ್, ಜನೂರ್ ಮತ್ತು ಬೆಲ್ಜಿಯಂ ಹೂ ಜೋಡಣೆ ಪ್ರದರ್ಶನ ಪ್ರಾರಂಭ.
ಸ್ಥಳ: ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನ.
ಸಮಯ: ಬೆಳಗ್ಗೆ 8.
– ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ವತಿಯಿಂದ ಉಪನ್ಯಾಸ. ವಿಷಯ: ಕುವೆಂಪು ಅವರ ಕಾವ್ಯದಲ್ಲಿ ನಿಸರ್ಗದ ಸಾಕ್ಷಾತ್ಕಾರ. ಉಪನ್ಯಾಸಕ: ಡಾ.ಸುರೇಶ್ ನಾಗಲಮಡಿಕೆ. ಗಮಕ ವಾಚನ: ಎಂ.ಆರ್.ಸತ್ಯನಾರಾಯಣ ಮತ್ತು ತಂಡ. ಸುಗಮ ಸಂಗೀತ: ರವಿ ಮೂರೂರು ಮತ್ತು ತಂಡ.
ಸಮಯ: ಸಂಜೆ 4.
* ಫಲಪುಷ್ಪ ಪ್ರದರ್ಶನ ಆರಂಭಗೊಂಡು ಮೂರು ದಿನಗಳಾಗಿದ್ದು, ಆ.4ರಂದು ವರಮಹಾಲಕ್ಷ್ಮೀ ಹಬ್ಬ ಮತ್ತು ವೀಕೆಂಡ್ (ಶನಿವಾರ-ಭಾನುವಾರ) ಇದ್ದ ಹಿನ್ನೆಲೆಯಲ್ಲಿ ಮೂರೇ ದಿನಕ್ಕೆ ಸುಮಾರು 80 ಸಾವಿರಕ್ಕೂ ಅಧಿಕ ಜನರು ಭೇಟಿ ನೀಡಿದ್ದಾರೆ.
“ನನಗೆ ಹೂವುಗಳು ಅಂದ್ರೆ ಇಷ್ಟ. ಇದೆಲ್ಲವನ್ನೂ ದೆಹಲಿಗೆ ತೆಗೆದುಕೊಂಡು ಹೋಗಬೇಕೆನ್ನಿಸುತ್ತಿದೆ. ಇಂತಹ ಸುಂದರ ಜಾಗವಿದೆ ಎನ್ನುವುದು ತುಂಆ ಜನರಿಗೆ ಗೊತ್ತಿಲ್ಲ.”
-ಸೀಮಾ ಅನ್ಸಾರಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಪತ್ನಿ
“ಮೂಡಿಗೆರೆಯಿಂದ ಬಂದೆ ಕುವೆಂಪು ಅವರ ಕುಪ್ಪಳಿ ಮನೆ ಹೂವಿನ ಮನೆಯನ್ನು ನೋಡಲೆಂದು. ಹೃದಯವನ್ನು ಮನವನ್ನು ಗೆದ್ದಿದೆ. ಇದನ್ನು ನಿರ್ಮಿಸಿದ ಕೈ ಮತ್ತು ಹಿಂದಿರುವ ಕಲ್ಪನೆ ಕಟ್ಟಿಕೊಟ್ಟವರೆಲ್ಲರೂ ಅಭಿನಂದನಾರ್ಹರು. ಕಾಣದ ಕೈ ಕೆಲಸ ಮಾಡಿದೆ. ತುಂಬಾ ಸಂತೋಷ ನೋಡುಗ ಆ “ಕೊಟೇಶನ್’ನೋಡಿ ತಮ್ಮಲ್ಲಿ ಅಳವಡಿಸಿಕೊಂಡೆ!!!”
-ರಾಜೇಶ್ವರಿ ತೇಜಸ್ವಿ, ಕುವೆಂಪು ಅವರ ಸೊಸೆ.
“ನಾನು ಈ ಹಿಂದೆ ಅನೇಕ ಬಾರಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಿ ಆನಂದಿಸಿದ್ದೇನೆ. ಆದರೆ ಈ ದಿನ ನನ್ನ ಮನಸ್ಸಿನ ಆಳದಲ್ಲಿ ಅಚ್ಚಳಿಯದ ದಿವ್ಯಾನುಭವವನ್ನು ಮೂಡಿಸಿದ ಶುಭದಿನ. ಮಹಾಕವಿ ಕುವೆಂಪು ಅವರ ಬದುಕಿನ, ಸಾಹಿತ್ಯದ ವಿರಾಟ್ ದರ್ಶನವನ್ನು ಇಂದಿನ ಫಲಪುಷ್ಪ ಪ್ರದರ್ಶನದಲ್ಲಿ ಅತ್ಯದ್ಭುತವಾಗಿ ನೆರವೇರಿಸಿದ್ದು, ಅದನ್ನು ನಾನು ದರ್ಶಿಸಿದದು ನನ್ನ ಬಾಳಿನ ಸುಕೃತವೆಂದೇ ಭಾವಿಸಿದ್ದೇನೆ.”
– ಕೆ.ಎಸ್.ನಿಸಾರ್ ಅಹಮದ್, ಹಿರಿಯ ಕವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.