ಇಂಟರ್‌ನೆಟ್’ ಬಿಟ್ಟು “ಇನ್ನರ್‌ನೆಟ್’ಗೆ…ಬನ್ನಿ…
Team Udayavani, Aug 8, 2017, 3:47 PM IST
ತಮ್ಮ ಅವಿಶ್ರಾಂತ ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖೀ ಕಾರ್ಯಚಟುವಟಿಕೆಗಳಲ್ಲಿ ಪಾದರಸದಂತೆ ನಿರತರಾಗಿ ಪ್ರಸ್ತುತ ಮುಂಬೈಯಲ್ಲಿ ಮೊಕ್ಕಾಂ ಹೂಡಿರುವ ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರು ದೇವಾನಂದ ಸ್ವಾಮೀಜಿ ಅವರು ಆ. 6ರಂದು ಚೆಂಬೂರಿನಲ್ಲಿ ಒಂದು ಗಂಟೆ ಕಾಲ ವೈವಿಧ್ಯಮಯ ವಿಷಯಗಳನ್ನು ಉದಯವಾಣಿಯೊಂದಿಗೆ ಹಂಚಿಕೊಂಡು “ಉದಯವಾಣಿ’ ಮುಂಬೈ ಆವೃತ್ತಿಯ ಹದಿನೆಂಟನೇ ವರ್ಷಕ್ಕೆ ಶುಭ ಹಾರೈಸಿದರು.
ಹದಿನೆಂಟು ಎಂಬುದು ಶುಭ ಸಂಕೇತ. ಇದಕ್ಕೆ ವಿಶೇಷ ಮತ್ತು ಮಹತ್ತರವಾದ ಅರ್ಥವಿದೆ. “1 ಮತ್ತು 8ನ್ನು ಕೂಡಿಸಿದಾಗ ಒಂಭತ್ತಾಗುತ್ತದೆ’. ಮನುಷ್ಯನ ಬದುಕಿನ ಲೆಕ್ಕಚಾರ ಇರುವುದು ಒಂಭತ್ತರಲ್ಲಿ. ಒಂಭತ್ತು ಎಂದರೆ “ನವಗ್ರಹ’. ಮನುಷ್ಯನ ಗತಿ, ಮತಿ ಎಲ್ಲಾ ಇದರೊಳಗೆ ಅಡಗಿದೆ. “ಒಂಭತ್ತು’ ಎಂಬುದು ಪೂರ್ಣ ಸಂಖ್ಯೆಯೂ ಆಗಿದೆ. ಮನುಷ್ಯನ ಬದುಕು ಪ್ರಾರಂಭವಾಗುವುದು ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ, ಐದು ಪಂಚಭೂತ ಆತ್ಮಗಳು, ಅಹಂಕಾರ, ಬುದ್ಧಿಚಿತ್ತ ಮನಸ್ಸುಗಳು ಹೀಗೆ ಒಟ್ಟು ಇಪ್ಪತ್ತ ನಾಲ್ಕರಿಂದ. “ಹದಿನೆಂಟಕ್ಕೆ’ ತತ್ವದ ಲೆಕ್ಕಚಾರದಲ್ಲಿ ವಿಶೇಷತೆಯಿದೆ. ಭಗವದ್ಗೀತೆಯಲ್ಲಿ ಹದಿನೆಂಟು ಅಧ್ಯಾಯ, ಪುರಾಣಗಳಲ್ಲಿ ಹದಿನೆಂಟು ಪುರಾಣಗಳು, 18 ಉಪ ಪುರಾಣಗಳು. ಹೀಗೆ ಒಟ್ಟು ಹದಿನೆಂಟರಲ್ಲಿದೆ ಮಹತ್ವದ ನಂಟು. “ಉದಯವಾಣಿ’ಯೊಂದಿಗೆ ನಮ್ಮ “ಗುರುದೇವಾ ಸೇವಾ ಬಳಗ’ವು ಮುಂಬೈಯಲ್ಲಿ ಹದಿನೆಂಟು ವರ್ಷಗಳನ್ನು ಪೂರೈಸಿರುವುದು ಸಂತೋಷದ ಸಂಗತಿ.
ದೂರವಾಗುತ್ತಿರುವ “ಗುಣ ಸಂಬಂಧಗಳು…’
ಪ್ರಸ್ತುತ ತಂತ್ರಜ್ಞಾನ ಯುಗ. ಸಮಾಜ ಅದರ ಹಿಂದೆ ಓಡುತ್ತಿದೆ. ಸಮಾಜ ಎಲ್ಲಿಯವರೆಗೆ ಹೋಗಿದೆ ಅಂದರೆ ಬಾಡಿಗೆ ತಾಯಿಯವರೆಗೆ. ಕಷ್ಟಪಡಲು ಯಾರೂ ತಯಾರಿಲ್ಲ. ತಾಯಿ-ಮಗುವಿಗೆ ಸಂಬಂಧವೇ ಇಲ್ಲದಂದಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಮಕ್ಕಳು ತಾಯಿ ಸತ್ತಾಗ ಅಳುವುದಿಲ್ಲ. ಮನೆಯ ಕೆಲಸದಾಳು ಸತ್ತಾಗ ಅಳುತ್ತವೆ. ಯಾಕೆಂದರೆ ಮಕ್ಕಳ ಲಾಲನೆ-ಪಾಲನೆ-ಪೋಷಣೆ ಮನೆ ಕೆಲಸದಾಕೆಯ ಕೈಯಲ್ಲಿದೆ. ಪಕ್ಕದ ಮನೆಯವರ ಪರಿಚಯ ನಮಗಿಲ್ಲ. ಒಟ್ಟಿನಲ್ಲಿ ನಮಗೆ ಬೇಕಾಗಿರುವುದು “ನಾನು-ನನ್ನದು’ ಎಂಬ ಗುಣ ಸಂಬಂಧಗಳು. ಈ ದುರ್ಗುಣಗಳಿಂದ ಮನುಷ್ಯನಲ್ಲಿ “ನಾನು’ ಎಂಬ ಅಹಂಕಾರ ಮತ್ತಷ್ಟು ಬಲಿಯುತ್ತದೆ. ಆ “ನಾನು’ ಎಂಬುದನ್ನು ಮರೆತು “ನಾವು, ನಮ್ಮದು’ ಎಂಬುದನ್ನು ಮೈಗೂಡಿಸಿಕೊಂಡಾಗ ಜೀವನ ಪಾವನವಾಗುತ್ತದೆ. “ಅಸುರೀ ತಮೋರಾಶಿ’ಗಳೆಲ್ಲ ನಾಶವಾಗಿ ಹೋಗುತ್ತದೆ.
“ಧರ್ಮ’ ಕ್ಕೆ ನಿಕರವಾದ ಅರ್ಥಗಳಿಲ್ಲ…
“ಧಾರಣಾತ್ ಧರ್ಮ ಮಿತ್ಯಾಹುಃ ಧರ್ಮೋ ಧಾರಯತಿ ಪ್ರಜಾ:’ ಎಂಬ ಉಕ್ತಿಯಂತೆ ಧರಿಸಲ್ಪಡುವಂತದ್ದು ಅಥವಾ ಅನುಸರಿಸಲು ಯೋಗ್ಯವಾದುದು “ಧರ್ಮ’. “ಧರ್ಮ’ ಎನ್ನುವುದು ವಿಸ್ತಾರವಾದುದು. “ಧರ್ಮ’ ಎನ್ನುವುದು ವಿಸ್ತೃತವಾದದ್ದು. ಅದು ಒಂದು ಜಾತಿ, ಮತಕ್ಕೆ ಸೀಮಿತವಾದುದಲ್ಲ. ಧರ್ಮವಿಲ್ಲದಿದ್ದರೆ ನಾವು ಮಾತನಾಡಲು ಸಾಧ್ಯವಿಲ್ಲ. ಧರ್ಮ ಇರುವುದರಿಂದ “ಧರ್ಮ’ ನಮ್ಮನ್ನು ಮಾತನಾಡಿಸುತ್ತಿದೆ. “ಧರ್ಮ’ ಎನ್ನುವುದಕ್ಕೆ ನಿಕರವಾದ ಶಬ್ದ ಇಂಗ್ಲಿಷ್‌ನಲ್ಲಿ ಇಲ್ಲಿಯವರೆಗೆ ಸಿಕ್ಕಿಲ್ಲ. ನಾವು ಧರ್ಮವನ್ನು ವಿಶ್ಲೇಷಿಸುವಾಗ “ರಿಲಿಜನ್’ ಎನ್ನುತ್ತೇವೆ. ಆದರೆ ಅದು ಸರಿಯಾದ ಅರ್ಥವಲ್ಲ. ನಿಜವಾದ “ಧರ್ಮ’ ಜನ-ಜನರ ನಡುವೆ, ಮನಸು-ಮನಸುಗಳ ನಡುವೆ ಸಮಾನತೆಯನ್ನು, ಸಾಮರಸ್ಯವನ್ನು ಕುದುರಿಸಬೇಕು. ದುರ್ಬಲರನ್ನು ಮೇಲೆತ್ತಬೇಕು. “ತಳದಲ್ಲೋ ತಳು ಗುಳುಗುಳಿಸುತಿದೆ ಸೆಲೆಯು ಏನನ್ನೂ ಕಾಯುತಿದೆ ಸುಪ್ತವಾಗಿ’ ಎಂದು ಅಡಿಗರು ಹೇಳಿದಂತೆ ಇಂತಹ ಮೌಲ್ಯಗಳು ಧರ್ಮದ ದ್ವಾರದಲ್ಲಿ ಬೆಳಕಾಗಿ ಹೊರ ಹೊಮ್ಮಬೇಕು. ಹೇಗೆ ವೇದವು ಧರ್ಮ ಮೂಲವೋ ಹಾಗೆಯೇ ಭಾರತವೂ ಧರ್ಮಮೂಲ ಎಂಬುದರಲ್ಲಿ ಮರುಮಾತಿಲ್ಲ.
“ರಿಲಿಜನ್’ ಎಂದರೆ ಮತ…
“ರಿಲಿಜನ್’ ಎನ್ನುವುದು ಒಂದು ಮತ ಎಂದು ನಾನು ಭಾವಿಸುತ್ತೇನೆ. ನಾನು ಸಮಾಜವನ್ನು ಒಡೆಯಲು ಈ ಮಾತನ್ನು ಹೇಳುವುದಿಲ್ಲ. ಮತ ಎಂದಾಗ ಮತದ ಒಳಗೆ ಒಬ್ಬ ಗುರುವಿರುತ್ತಾನೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಇವೆಲ್ಲದರಲ್ಲಿ ನಮ್ಮ ಹಿಂದು ಧರ್ಮದ ಮತಾಚಾರ್ಯರು ಇದ್ದಾರೆ. ಇದೇ ರೀತಿಯಲ್ಲಿ ಕ್ರಿಶ್ಚಿಯನ್ನರಲ್ಲೂ… ಮುಸಲ್ಮಾನರಲ್ಲೂ… ಇದ್ದಾರೆ. ಆದರೆ ಇವೆಲ್ಲವುಗಳ ಸಿದ್ಧಾಂತ ಬೇರೆ ಬೇರೆಯಾಗಿವೆ. ಮತಗಳು ಯಾವತ್ತೂ ಧರ್ಮವಾಗಲು ಸಾಧ್ಯವಿಲ್ಲ. ಇದನ್ನೇ “ಮತ-ಧರ್ಮಗಳು’ ಎನ್ನುತ್ತಾರೆ. ಸಾಮಾನ್ಯವಾಗಿ ನಾವು ಮಾತನಾಡುವಾಗ “ಧರ್ಮ’ ಎಂದೇ ಹೇಳುತ್ತೇವೆ. ಆದರೆ ಧರ್ಮ ಬೇರೆ, ಮತ ಬೇರೆಯಾಗಿದೆ. ಇವುಗಳ ಮಧ್ಯೆ ಅಜಗಜಾಂತರವಿದೆ.
“ಧರ್ಮ ಎನ್ನುವುದು’ ಹೇಳುವಂಥದಲ್ಲ…
ತಾಯಿ ಧರ್ಮ, ಪುತ್ರಿ ಧರ್ಮ, ಬಾಂಧವ್ಯ ಧರ್ಮ, ಕುಟುಂಬ ಧರ್ಮ, ಸಹೋದರಿ ಧರ್ಮ ಹೀಗೆ ಎಲ್ಲಾ ಗುಣ ಸಂಬಂಧಗಳಿಗೂ ಅದರದೇ ಆದ ಧರ್ಮಗಳಿವೆ. ಇವೆಲ್ಲವು ಬೆಳೆಯುವುದು ಧರ್ಮದ ಮೂಲಕ. “ಧರ್ಮ’ ಧಾರಣೆಗೆ ಇರುವುದು. ಅದನ್ನು ಅನುಷ್ಠಾನಕ್ಕೆ ತರಬೇಕೇ ಹೊರತು ಹೇಳುವಂಥದಲ್ಲ. ಧರ್ಮವನ್ನು ಮರೆತರೆ ಕರುವಿಗೆ ಹಾಲಿಲ್ಲ. ತಾಯಿ ಮಗುವಿಗೆ ಹಾಲು ನೀಡಲ್ಲ. “ಧರ್ಮೋ ರಕ್ಷತಿ ರಕ್ಷಿತಃ’ ಎಂದು ಕೃಷ್ಣ ಹೇಳಿದ್ದಾನೆ. ಗೀತಾಚರಣೆಯ ಸಂದೇಶ ಎಂದರೆ ಧರ್ಮವನ್ನು ಪರಿಪಾಲನೆ ಮಾಡಬೇಕು ಎಂಬುದು. ಧರ್ಮವನ್ನು ಪರಿಪಾಲನೆ ಮಾಡಿದವರಿಗೆ ಜಯ ಖಂಡಿತ ಸಿಗುತ್ತದೆ. ಆರಂಭದಲ್ಲಿ ಅಂಥವರಿಗೆ ಅನೇಕ ತರದ ಕಷ್ಟಗಳು ಎದುರಾಗಬಹುದು. ಧರ್ಮರಾಯ, ಸತ್ಯಹರಿಶ್ಚಂದ್ರ ಇವರೆಲ್ಲರಿಗೂ ಸುಖ ಸಿಕ್ಕಿರಲಿಲ್ಲ. ಆದರೆ ಕೊನೆಯಲ್ಲಿ ಅವರಿಗೆ ಸತ್ಯದ ಸಾಕ್ಷಾತ್ಕಾರವಾಯಿತು. ಧರ್ಮದ ಅರಿವಾಯಿತು.
ಮನುಷ್ಯನಿಗೆ “ಮಾನವ ಧರ್ಮ’ ಮುಖ್ಯ…
ಸರ್ವರ, ಸಕಲರ, ಎಲ್ಲರ ಉನ್ನತಿಗಾಗಿ ಇರುವ ದಾರಿ ಧರ್ಮವಾಗಿದೆ. ಹರಿಯುವ “ನೀರು’ ಮುಂದೆ ಹರಿಯುತ್ತ ಸಾಗುತ್ತದೆ. ಯಾಕೆಂದರೆ ಅಧೋಮುಖವಾಗಿ ಹರಿಯುವುದು ನೀರಿನ ಗುಣವಾಗಿದೆ. ಊಧ್ವìಮುಖವಾಗಿ ಉರಿಯುವ ಗುಣ ಅಗ್ನಿಯದ್ದಾಗಿದೆ. ಊಧ್ವìಮುಖವಾಗಿ ಉರಿಯುವ “ಅಗ್ನಿ’ ಅಧೋಮುಖವಾಗಿ ಉರಿದರೆ ಅದು ಅದರ ಗುಣಧರ್ಮವನ್ನು ಬಿಟ್ಟಿದೆ ಎಂದು ಅರ್ಥ. ಅದೇ ರೀತಿ ಹರಿಯುವ “ನೀರು’ ತನ್ನ ಗುಣವನ್ನು ಬಿಟ್ಟರೆ ಅದು ತನ್ನ ಧರ್ಮವನ್ನು ಮೀರಿತು ಎಂದು ಅರ್ಥ. ಉರಿದು, ಬಿಸಿಯ ಶಾಖ ಕೊಡುವಂಥ “ಅಗ್ನಿ’ ತನ್ನ ಗುಣವನ್ನು ಮರೆತರೆ ಅದು ಅಗ್ನಿಯಾಗದು. ಆಕಾಶ “ರಜೆ’ ಇದೆ ಎಂದು ಕೆಳಗಿಳಿದರೆ ತನ್ನ ಧರ್ಮವನ್ನು ಬಿಟ್ಟಂತಾಗುತ್ತದೆ. ಆದ್ದರಿಂದ “ಧರ್ಮ’ ಎಂಬುದು ವಿಶಾಲವಾಗಿರತಕ್ಕದ್ದು. ಮನುಷ್ಯನಿಗೆ ಮಾನವ “ಧರ್ಮ’ ಎಂಬುದಿದೆ. ಅದನ್ನು ಮೀರಿ ನಡೆದ ಪರಿಣಾಮವನ್ನು ನಾವಿಂದು ಎದುರಿಸುತ್ತಿದ್ದೇವೆ. ಇವೆಲ್ಲ ಗೊಂದಲಗಳಿಗೆ ಮೂಲ ಕಾರಣ ಎಂದರೆ “ಮಾನವೀಯ ಮೌಲ್ಯ’ಗಳ ಕೊರತೆ. ಅದನ್ನು ತುಂಬಿಸುವ ಕಾರ್ಯ ನಮ್ಮಿಂದಾಗಬೇಕು.
ಏನಿದು “ಮಾನವೀಯ ಸಂಬಂಧ…’
ಪ್ರಸ್ತುತ ದಿನಗಳಲ್ಲಿ ರೋಗಿಯನ್ನು ವೈದ್ಯರು ಮುಟ್ಟುವ ಪರಿಸ್ಥಿತಿ ನಮ್ಮಲ್ಲಿಲ್ಲ. ಯಂತ್ರ ಹೇಗೆ ಹೇಳುತ್ತದೋ ಅದೇ ರೀತಿ ಕೇಳಬೇಕಾದ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಮಾನವೀಯ ಸಂಬಂಧಗಳು ಎಂದರೇನು? ಎನ್ನುವ ಸನ್ನಿವೇಶ ಸಮಾಜದಲ್ಲಿ ನಿರ್ಮಾಣವಾಗಿದೆ. ಬಂಧುಗಳೇ ಮನುಷ್ಯ-ಮನಷ್ಯನ ನಡುವಿನ ಪ್ರೀತಿಯೇ ಈ ಮಾನವೀಯ ಸಂಬಂಧ. ನಾನು “ನಿಮ್ಮವನು’ ಎಂಬ ಭಾವ ನಮ್ಮ ಬಳಿ ಇರಬೇಕು. ಈ ಪ್ರೀತಿಯಿಂದಲೇ ಸಂಬಂಧ ಸುದೃಢಗೊಳ್ಳುತ್ತದೆ. ವ್ಯಕ್ತಿ ವ್ಯಕ್ತಿಯ ಮಧ್ಯೆ ಇರುವ “ಪ್ರೀತಿಯ ಕೊಂಡಿಗಳು’ ಬೆಳೆಯಬೇಕು. ಅದು ವಿಸ್ತಾರವಾಗಿ ಹರಡಬೇಕು. ಯಂತ್ರ ಹತ್ತಿರವಾಗಿ ಪ್ರೀತಿಯು ಹಿಮ್ಮುಖವಾಗಿರುವ ಪ್ರಸ್ತುತ ದಿನಗಳಲ್ಲಿ ನಿಷ್ಕಾಮ ಕಾರುಣ್ಯ, ಸೌಹಾರ್ದತೆಯೇ ಈ ಪ್ರೀತಿಯ ಮೂಲ ಸೂತ್ರವಾಗಬೇಕು. “ಸರ್ವಂ ಪ್ರೇಮಮಯಂ’ ಎನ್ನುವಂತೆ ಜಗತ್ತಿನಲ್ಲಿ ಸಾವಿಗಿಂತ ಬಲಿಷ್ಠವಾದದು ಪ್ರೀತಿ. “ಕರ್ಮ ಬಲವೂ ಕಾಣೆ, ದೈವ ಬಲವೂ ಕಾಣೆ, ಈ ಭವದಲ್ಲಿ ಪ್ರೀತಿಯಂತಹ ವಸ್ತು ಬೇರಿಲ್ಲ ಕಾಣೆ’ ಎಂಬಂತೆ ಎಲ್ಲರನ್ನು ಪ್ರೀತಿಸೋಣ. ಈ ಪ್ರೀತಿಯಿಂದಲೇ ಮಾನವೀಯ ಸಂಬಂಧವನ್ನು ಬೆಳೆಸೋಣ.
ಪ್ರತ್ಯೇಕ “ಧರ್ಮ’ದ ಅಗತ್ಯ ಇದೆಯೇ…
ಇದಕ್ಕೆ ಹೇಳಿಕೆ ಕೊಡುವುದು ಗೊಂದಲದ ವಿಷಯವಾಗಬಹುದು. ಪ್ರತ್ಯೇಕ ಧರ್ಮದ ವಿಚಾರ ಇದೊಂದು ರಾಜಕೀಯ ಪ್ರೇರಿತವಾಗಿರುವಂತೆ ಕಾಣುತ್ತದೆ. ಲಿಂಗಾಯತ ಎನ್ನುವುದು ಒಂದು ಧರ್ಮವಾಗಿದೆ. ಅದಕ್ಕೆ ಪ್ರತ್ಯೇಕವಾದ ಧರ್ಮದ ಅಗತ್ಯವಿಲ್ಲ. ಎಲ್ಲಾ ಜಾತಿ ಬಾಂಧವರು ಇದೆ ರೀತಿಯಲ್ಲಿ ಪ್ರತ್ಯೇಕ ಧರ್ಮದ ಬೇಡಿಕೆಯಿಟ್ಟರೆ ಅದು ಒಡೆದು ಆಳುವ ನೀತಿಯಾಗುತ್ತದೆ. ಧರ್ಮವು ಒಂದಕ್ಕೆ ಅಂಟಿಕೊಂಡಿರುವುದಿಲ್ಲ. ಬಸವಣ್ಣ ಮಾನವ ಧರ್ಮ ಒಂದೇ ಎಂದು ಜಗಕ್ಕೆ ಹೇಳಿದ್ದಾರೆ. ಮುಖ್ಯವಾಗಿ ಐಕ್ಯತೆಯಿಂದ ಒಂದಾಗಿ ಪ್ರತ್ಯೇಕ ಧರ್ಮವನ್ನು ಕೇಳುತ್ತಿದ್ದಾರೆಯೇ ಎಂಬುದು ಮುಖ್ಯವಾಗಬೇಕು.
“ಮತಾಂತರ’ದ ಬಗ್ಗೆ…
“ಮತಾಂತರ’ ಎನ್ನುವುದು ಒಂದು ಕಾಯಿಲೆಯಾಗಿದೆ. ಇದರ ಅಗತ್ಯವಿಲ್ಲ. ದಿನಕ್ಕೊಂದು ಮತಾಂತರ ಪ್ರಕರಣಗಳು ನನ್ನಲ್ಲಿಗೆ ಬರುತ್ತಿವೆ. “ಲವ್ ಜಿಹಾದ್’, ಮತಾಂತರ ಒಳ್ಳೆಯ ಪ್ರಕ್ರಿಯೆಯಲ್ಲ. ಅದನ್ನು ಅರಿಯುವುದು ಒಳ್ಳೆಯ ಪ್ರಕ್ರಿಯೆ. ಸ್ವಧರ್ಮದಲ್ಲಿ ಬದುಕಬೇಕು. ಇಹಪರದ ಸುಖದಲ್ಲಿ ಯಾವುದುಂಟೋ ಅದನ್ನು ಪಾಲನೆ ಮಾಡುವಂತಹ ದಾರಿ ಅದು “ಧರ್ಮ’. ಇಹದಲ್ಲೂ ಪರದಲ್ಲೂ ಸುಖವನ್ನು ಪ್ರಾಪ್ತಿಸಬಲ್ಲ ಶಕ್ತಿಯಿದ್ದರೆ ಅದು “ಧರ್ಮ’. ಧರ್ಮದ, ಮತದ ತಿಳಿವಳಿಕೆ ಇದ್ದರೆ ಇಂತಹ ಮತಾಂತರದ ಸಮಸ್ಯೆ ಉಂಟಾಗುವುದಿಲ್ಲ. ಆಮಿಷವೊಡ್ಡಿ ಅಥವಾ ಒತ್ತಡದ ಮತಾಂತರವನ್ನು ನಾನು ವಿರೋಧಿಸುತ್ತೇನೆ. ಈಗಾಗಲೇ ಮತಾಂತರಗೊಂಡು “ಹಿಂದು ಧರ್ಮ’ಕ್ಕೆ ವಾಪಸಾದವರು ತುಂಬಾ ಮಂದಿಯಿದ್ದಾರೆ. ಶಿಕ್ಷಣ ವ್ಯವಸ್ಥೆಯ ಸುಧಾರಣೆಯಿಂದ ಮತಾಂತರವನ್ನು ತಪ್ಪಿಸಲು ಸಾಧ್ಯವಿದೆ. ಮಕ್ಕಳಲ್ಲಿ ಭಾರತೀಯತೆಯ ವಿಷಯ ತುಂಬಬೇಕೇ ಹೊರತು ಒಂದು ಮತದ ಬಗ್ಗೆ ಅಲ್ಲ. ಮತಾಂತರವನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ. ಮತಾಂತರಗೊಳ್ಳುವರಿಗೆ ಅರಿವಿನ ಕೊರತೆಯಿರುತ್ತದೆ. ಯಾವುದೇ ಮತ ಮತಾಂತರಗೊಳ್ಳುವಂತೆ ಹೇಳುವುದಿಲ್ಲ.
“ಇಂಟರ್‌ನೆಟ್’ ಬಿಟ್ಟು “ಇನ್ನರ್‌ನೆಟ್’ ಗೆ ಬನ್ನಿ…
ಇಂದಿನ ಇಂಟರ್‌ನೆಟ್, ವಾಟ್ಸಾಪ್, ಫೇಸ್‌ಬುಕ್ ಯುಗದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇದಕ್ಕೆ ಕಾರಣ ಯುವಜನತೆ ಪಾಶ್ಚಾತ್ಯ ಸಂಸ್ಕೃತಿ-ಸಂಸ್ಕಾರ, ಅಂಧಾನುಕರಣೆಗೆ ಒಳಗಾಗಿರುವುದು ಎನ್ನಬಹುದು. ಹಳೆಯ ಮತ್ತು ಹೊಸತು ಇವುಗಳ ತಿಕ್ಕಾಟದ ಮಧ್ಯೆ ಯುವಜನರಲ್ಲಿ ಹಳೆಯದರೊಂದಿಗೆ ಹೊಸದನ್ನು ಪಡೆಯುವ ತುಡಿತ ದೂರವಾಗುತ್ತಿದೆ. ಆದ್ದರಿಂದ ಇಂದಿನ “ಇಂಟರ್‌ನೆಟ್’ ಯುಗವನ್ನು ಬಿಟ್ಟು “ಇನ್ನರ್‌ನೆಟ್’ ಯುಗಕ್ಕೆ ಯುವ ಪೀಳಿಗೆಗೆಯನ್ನು ಕರೆತರಬೇಕಾಗಿದೆ. ಇದಕ್ಕೆ ಯಾವುದೇ ರೀತಿಯ ವಯಸ್ಸಿನ ಮಿತಿಯಲ್ಲ. ಎಲ್ಲರಿಗೂ ಮುಕ್ತ ಅವಕಾಶವಿದೆ. ಎಲ್ಲರೂ ಇದರಲ್ಲಿ ಖಾತೆ ತೆರೆಯಬಹುದು. ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಿಲ್ಲ. ಒಮ್ಮೆ ಇದರೊಳಗೆ ಬಂದರೆ “ಮಾನವೀಯ ಸಂಬಂಧಗಳು’ ಉದ್ದೀಪನಗೊಳ್ಳುತ್ತವೆ. ಮನಸ್ಸು ಸ್ವತ್ಛಂದವಾಗುತ್ತದೆ. ಮಾತು ಪರಿಶುದ್ಧವಾಗುತ್ತದೆ. ಒಟ್ಟಿನಲ್ಲಿ ಮನುಷ್ಯನ “ಅಂತರಂಗ-ಬಹಿರಂಗ’ವನ್ನು ಹೂವಿನ ಬುಟ್ಟಿಯನ್ನಾಗಿಸುತ್ತದೆ. ಒಟ್ಟಿನಲ್ಲಿ “ಇನ್ನರ್‌ನೆಟ್’ ಮುನುಷ್ಯನನ್ನು ಆಧ್ಯಾತ್ಮಿಕತೆಯತ್ತ ಕೊಂಡೊಯ್ದು ಸುಸಂಸ್ಕೃತ ಬದುಕನ್ನು ಪ್ರಾಪ್ತಿಸುತ್ತದೆ.
ಕೊನೆಗೊಳಿಸುವ ಮುನ್ನ…
“ಭದ್ರಂ ಕರುಣೇ ವಿಶ್ವಂ ಯಾನಂ’ ಎನ್ನುವ ಹಾಗೆ ಜ್ಞಾನೇಂದ್ರಿಯಗಳ ಸದ್ವಿನಿಯೋಗವಾಗಬೇಕು. ಮನಸ್ಸಿನಲ್ಲಿ “ಸತ್’ ವಿಚಾರಗಳಿರಬೇಕು. ಅಂತಹ ಹೃದಯವಂತಿಕೆ ನಮ್ಮದಾಗಬೇಕು. ಇವುಗಳನ್ನು ಆಚರಣೆಗೆ ತರುವುದೇ ಶೀಲವಂತರ ಲಕ್ಷಣ. ನಾನು, ನನ್ನದು, ನನ್ನ ಮನೆ, ನನ್ನ ಸಂಸಾರ ಎಂಬ ಸೀಮಿತ ಚಿಂತನೆಯಿಂದ ಹೊರ ಬಂದು ನಾವು, ನಮ್ಮ ಚಿಂತನೆಯನ್ನು ವಿಶ್ವಮಟ್ಟಕ್ಕೆ ವಿಸ್ತರಿಸಬೇಕು. ಇದರ ಮುಖೇನ ನಾವು ಬದುಕು ಕಟ್ಟೋಣ. ಇತರರಿಗೂ ಬದುಕಲು ಬಿಡೋಣ. ಸಾಧ್ಯವಾದರೆ ಸಹಕರಿಸೋಣ. ಉತ್ಕೃಷ್ಟವಾದ ಮಾನವ ಜೀವನದಲ್ಲಿ ನಾಲ್ಕು ಜನರಿಗೆ ಉಪಕಾರವಾಗುವ, ಇತರರ ಜೀವನಕ್ಕೆ ಬೆಳಕು ನೀಡುವ ಕಾರ್ಯಕ್ಕೆ ಮುಂದಾಗಬೇಕು.
“ಕಾಲೇ ವರ್ಷತು ಪರ್ಜನ್ಯಃ
ಪೃಥ್ವಿವೀ ಸಸ್ಯ ಶಾಲಿನೀ||
ದೇಶೋಯಂ ಕ್ಷೋಭ ರಹಿತಃ
ಸಜ್ಜನಾ ಸಂತು ನಿರ್ಭಯಾಃ||’
ಕಾಲ ಕಾಲಕ್ಕೆ ಅನುಗುಣವಾಗಿ ಮೋಡವು ಮಳೆ ಸುರಿಸಲಿ. ಭೂದೇವಿ ಸಸ್ಯ ಶ್ಯಾಮಲೆಯಾಗಿ ಹರಿದ್ವರ್ಣ ಭೂಷಿತೆಯಾಗಿರಲಿ. ಈ ದೇಶ ಗಲಭೆ-ಕಳವಳ, ಅತ್ಯಾಚಾರ, ಅನಾಚಾರಗಳಿಂದ ಮುಕ್ತವಾಗಿರಲಿ. ಸಜ್ಜನರು ನಿರ್ಭೀತಿಯಿಂದ ಬಾಳುವಂತಾಗಲಿ. ಈ ಲೋಕದಲ್ಲಿ ಅಸಂಖ್ಯಾತ ಜಂತುಗಳು, ಕ್ರಿಮಿಕೀಟಗಳು ಹಾಗೂ ಗಿಡಮರಗಳು ಬದುಕುತ್ತಿವೆ. ಆದರೆ ಇವೆಲ್ಲವೂ ಈ ಭೂಮಿಯಲ್ಲಿ ಜನ್ಮವೆತ್ತಿ ಪ್ರಕೃತಿಯ ಮಡಿಲಿನಲ್ಲಿ ಹಾಯಾಗಿರದೆ ಋಣ ತೀರಿಸುವ ಕಡೆಗೆ ತುಡಿಯುತ್ತಿರುತ್ತವೆ. ಆದ್ದರಿಂದ ಬುದ್ಧಿಶಕ್ತಿ-ವಿಚಾರಶಕ್ತಿ ಪಡೆದ ನಾವು ಎಂದಿಗೂ ತಂದೆ-ತಾಯಿ, ಗುರು, ತಾವು ಬೆಳೆಯಲು ಕಾರಣರಾದವರ ಋಣವನ್ನು ತೀರಿಸಲು ಹಂಬಲಿಸಬೇಕು. ಮೊದಲು ನಮ್ಮಲ್ಲಿ ನಾವು ಮನಃಪೂರ್ವಕವಾಗಿ ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕು. ಯಾರು ಮನಃಪೂರ್ವಕವಾಗಿ ಬದುಕುತ್ತಾರೋ ಅದು ನಿಜವಾದ ಬದುಕಾಗುತ್ತದೆ. ಬಾಳಿನಲ್ಲಿ ತನ್ನ ಸುಖವನ್ನು ಮಾತ್ರ ಬಯಸದೆ, ಪರರ ಸುಖದಲ್ಲಿ ತನ್ನ ಸುಖವನ್ನು ಕಂಡು ಜೀವನ ಪಾವನಗೊಳಿಸಬೇಕು. ಆಗ ಮಾತ್ರ ಬದುಕಿಗೊಂದು ಅರ್ಥಬರುತ್ತದೆ. ಬದುಕು ಸಾರ್ಥಕವೆನಿಸುತ್ತದೆ.
“ಯತಿ ಧರ್ಮ’ದ ಹಾಗೆ “ಪತ್ರಿಕಾ ಧರ್ಮ…’
ನಮಗೊಂದು “ಯತಿಧರ್ಮ’ವಿದೆ. ಅದನ್ನು ಮೀರಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಪತ್ರಿಕೆಗಳಿಗೂ “ಪತ್ರಿಕಾ ಧರ್ಮ’ವಿದೆ. ಪತ್ರಿಕೆ ಎನ್ನುವುದು ಸುದ್ದಿಜಾಲ, ಗುಣಾತ್ಮಕವಾದ ವಿಚಾರಗಳನ್ನು ಸಂಚಯ ಮಾಡುವುದು ಪತ್ರಿಕೆಗಳ ಗುಣವಾಗಿದೆ. ಋಣಾತ್ಮಕವಾದ ವಿಷಯಗಳನ್ನು ಪ್ರಕಟ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಜನರಿಗೆ ಅದನ್ನು ಪ್ರಶ್ನಾರ್ಥಕವಾಗಿ, ಆಶ್ಚರ್ಯಕರವಾಗಿ ತಿಳಿಯಪಡಿಸಬಹುದು. ಪತ್ರಿಕೆಗಳು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಬೇಕು. ಸುಸಂಸ್ಕೃತ ಬದುಕಿಗೆ ದಾರಿ ತೋರಿಸುವ ಕಾರ್ಯ ಪತ್ರಿಕೆಗಳು ಮಾಡಬೇಕು. ಮಾಧ್ಯಮಗಳು ಸಮಾಜದ ಶ್ರೇಯಸ್ಸು ಹೊಂದಿರಬೇಕೇ ಹೊರತು ಸಮಾಜವನ್ನು ಅಧೋಗತಿಗೂ ಕೊಂಡೊಯ್ಯಬಾರದು. ಜನಪರವಾಗಿರುವ ಪತ್ರಿಕೆಗಳು ಪ್ರಚಲಿತವಾಗಿ, ಪ್ರಚಾರಕ್ಕೂ ಬರುತ್ತವೆ. ಜನರು ಅದನ್ನು ಪಡೆದು ಓದುತ್ತಾರೆ. ಮುಖಪುಟದಲ್ಲಿ ಗುಣಾತ್ಮಕವಾದ ಸುದ್ದಿಗಳನ್ನು ತುಂಬಿಸಬೇಕಾಗಿರುವುದು “ಪತ್ರಿಕಾ ಧರ್ಮ’. ಗುಣಾತ್ಮಕ ಅಂದರೆ ಋಣಾತ್ಮಕಾಗಿ ಅದು ಕಂಡು ಬರುವ ಹಾಗೆ ಆಗಬಾರದು. “ಹಾವು ಕಪ್ಪೆಯನ್ನು ತಿನ್ನುವ ವಿಷಯವನ್ನು ಬರೆಯುವ ಹಾಗಿಲ್ಲ’. ಅದೇ “ಕಪ್ಪೆ ಹಾವನ್ನು ನುಂಗಿದಾಗ ಅದು ವಿಶೇಷತೆ’ಯಾಗುತ್ತದೆ. ಪತ್ರಿಕಾ ಧರ್ಮವನ್ನು ಉಳಿಸಿಕೊಳ್ಳುವುದು ಪತ್ರಿಕೆಗಳಿಗೂ ಒಳಿತು. ಸಮಾಜಕ್ಕೂ ಒಳಿತು. ಇದನ್ನು “ಉದಯವಾಣಿ’ ಉಳಿಸಿಕೊಂಡು ಬಂದಿದೆ. ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡು ಬಂದಂತಹ ಪತ್ರಿಕೆ ಇದ್ದರೆ ಅದು “ಉದಯವಾಣಿ’.
“ಭದ್ರಂ ಕರುಣೇ ವಿಶ್ವಂ ಯಾನಂ’ ಎನ್ನುವ ಹಾಗೆ ಜ್ಞಾನೇಂದ್ರಿಯಗಳ ಸದ್ವಿನಿಯೋಗವಾಗಬೇಕು. ಮನಸ್ಸಿನಲ್ಲಿ “ಸತ್’ ವಿಚಾರಗಳಿರಬೇಕು. ಅಂತಹ ಹೃದಯವಂತಿಕೆ ನಮ್ಮದಾಗಬೇಕು. ಇವುಗಳನ್ನು ಆಚರಣೆಗೆ ತರುವುದೇ ಶೀಲವಂತರ ಲಕ್ಷಣ. ನಾನು, ನನ್ನದು, ನನ್ನ ಮನೆ, ನನ್ನ ಸಂಸಾರ ಎಂಬ ಸೀಮಿತ ಚಿಂತನೆಯಿಂದ ಹೊರ ಬಂದು ನಾವು, ನಮ್ಮ ಚಿಂತನೆಯನ್ನು ವಿಶ್ವಮಟ್ಟಕ್ಕೆ ವಿಸ್ತರಿಸಬೇಕು. ಇದರ ಮುಖೇನ ನಾವು ಬದುಕು ಕಟ್ಟೋಣ. ಇತರರಿಗೂ ಬದುಕಲು ಬಿಡೋಣ. ಸಾಧ್ಯವಾದರೆ ಸಹಕರಿಸೋಣ. ಉತ್ಕೃಷ್ಟವಾದ ಮಾನವ ಜೀವನದಲ್ಲಿ ನಾಲ್ಕು ಜನರಿಗೆ ಉಪಕಾರವಾಗುವ, ಇತರರ ಜೀವನಕ್ಕೆ ಬೆಳಕು ನೀಡುವ ಕಾರ್ಯಕ್ಕೆ ಮುಂದಾಗಬೇಕು.
ಡಾ| ದಿನೇಶ್ ಶೆಟ್ಟಿ ರೆಂಜಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.