ದಟ್ಟ ಕೂದಲು ಪುಟ್ಟ ಜೀವಿಗಳು


Team Udayavani, Aug 11, 2017, 6:30 AM IST

south-asian.jpg

ಗೇರ್‌ ಗೇರ್‌ ಮಂಗಣ್ಣ’ ಎಂದು ಆರಂಭವಾದ ಹಾಡಿನ ಸಾಲು ಮುಂದುವರಿದು,
ಬೇರೆ ಕೋತಿ ಬೆನ್ನಿಂದ ಹೇನು ಹೆಕ್ಕೋದ್ಯಾಕಪ್ಪಾ…
ಹೆಕ್ಕಿ ಅದನೆ ತಿಂತಿಯಾ ಥೂ… ಥೂ… ಕೊಳಕಪ್ಪಾ…
ಎನ್ನುತ್ತಿದ್ದಂತೆ ಕುಣಿಯುತ್ತಿದ್ದ ಮಗುವಿನ ಕಾಲು ಸ್ತಬ್ಧವಾಗಿಬಿಡುತ್ತದೆ. ಹಾಡಿನ ಮುಂದಿನ ಮ್ಯೂಸಿಕ್‌ ಆರಂಭವಾಗುತ್ತಿದ್ದಂತೆ ಕುಣಿಯುತ್ತಿದ್ದ ಮಗು, “”ಅಮ್ಮಾ… ಹೇನು ಅಂದ್ರೇನಮ್ಮಾ?” ಎಂದು ಕೇಳುತ್ತದೆ. ಹೌದು, ಮಗುವಿನ ಇಂತಹ ಮುಗ್ಧ ಪ್ರಶ್ನೆಗಳಿಗೆ ಅಮ್ಮ ನೀಡುವ ಉತ್ತರ ಮಗುವಿನ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅಮ್ಮ “ಹೇನು’ ಅಂದರೇನು ಎಂಬುದನ್ನು ಮಗುವಿಗೆ ಹೇಗೆ ಅರ್ಥಮಾಡಿಸಿಯಾಳು? ತನ್ನ ತಲೆಯಲ್ಲಿ ಹೇನು ಇದ್ದರೆ ತಾಯಿ ಹೇನನ್ನು ತೋರಿಸಿಯಾಳು. ಇಲ್ಲದಿದ್ದರೆ? ಅಕ್ಕಂದಿರ ತಲೆಯಲ್ಲಿ ತೋರಿಸೋಣವೆಂದರೆ ವಿಭಕ್ತ ಕುಟುಂಬ ಪದ್ಧತಿ ಬಂದು ಎಷ್ಟೋ ವರುಷಗಳೇ ಕಳೆದವಲ್ಲಾ… ಅವಿಭಕ್ತ ಕುಟುಂಬವಿದ್ದಾಗಲಾರದೆ ತೋರಿಸಬಹುದಾಗಿತ್ತೇನೋ!

ನಮಗೆಲ್ಲರಿಗೂ ತಿಳಿದಿರುವಂತೆ ಈ ಹೇನುಗಳಿಗೂ ಹೆಂಗಳೆಯರಿಗೂ ಅವಿನಾಭಾವ ಸಂಬಂಧ. ಕೂದಲಿನ ಮೇಲೆ ಹೆಂಗಳೆಯರಿಗಿರುವಷ್ಟೇ ಆತ್ಮೀಯತೆ ಹೇನುಗಳಿಗೆ ಹೆಂಗಳೆಯರ ತಲೆಯ ಮೇಲೆ. ಆದರೆ ಹೆಂಗಳೆಯರಿಗೋ ಹೇನುಗಳೆಂದರೆ ಸಹಿಸಲಾರದ ಹಿಂಸೆ! ತಮ್ಮ ತಲೆಯಲ್ಲಿ ಹೇನುಗಳಿವೆ ಎಂಬುದು ಹೆಣ್ಣುಮಕ್ಕಳಿಗೆ ಅಸಹ್ಯದ ವಿಚಾರ. ಇತರರಿಗೆ ತಿಳಿದರೆ ಎಂಬ ಭಯ ಅದಕ್ಕಿಂತಲೂ ಅಧಿಕ. ತಿಳಿದ ನಂತರದ ಪಾಡಂತೂ ಶೋಚನೀಯ. ಬಾಲ್ಯದಲ್ಲಿ ಬಹುಶಃ ಈ ಪಾಡನ್ನು ಅನುಭವಿಸದ ಹೆಣ್ಣು ಮಕ್ಕಳು ಬಲು ವಿರಳ. ಇತರ ಸಹಪಾಠಿಗಳ ತಲೆಯಲ್ಲಿ ಹೇನುಗಳಿವೆಯೇ ಎಂದು ಗಮನಿಸುವುದೇ ಶಾಲೆಯಲ್ಲಿ ಅತಿದೊಡ್ಡ ಕಾಯಕ.

ಮಕ್ಕಳ ಕೈಗಳು ಸದಾ ತಲೆಮೇಲೆ ಓಡಾಡುತ್ತವೆಯೆಂದಾದರೆ ತಲೆಯಲ್ಲಿ ಪ್ರಖ್ಯಾತ ಜೀವಿಗಳಾದ “ಹೇನು’ಗಳಿವೆ ಎಂದೇ ಭಾವಿಸಲಾಗುತ್ತದೆ. ಅಮ್ಮನ ಹದ್ದಿನ ಕಣ್ಣು ಮಕ್ಕಳ ತಲೆಮೇಲೆ ಬೀಳಲು ಆರಂಭವಾಗುತ್ತದೆ. ಧೂಳು ಹಿಡಿದು ಎಲ್ಲೋ ಮೂಲೆಯಲ್ಲಿ ಕುಳಿತಿದ್ದ ಸೂಜಿಯಷ್ಟು ಸಣ್ಣಗಿನ ಹಲ್ಲುಗಳ, ಎರಡೂ ಬದಿಗಳಲ್ಲಿ ನೂರಾರು ಹಲ್ಲುಗಳಿಂದ ಅಲಂಕೃತವಾದ ಸಣ್ಣದಾದ ಹೇನು ಬಾಚಲೆಂದೇ ಪ್ರಸಿದ್ಧವಾದ ಬಾಚಣಿಕೆ ಸ್ನಾನಕ್ಕೆ ಸಿದ್ಧವಾಗುತ್ತದೆ. ಶುಚಿಭೂìತವಾಗಿ ಬರುವುದೇ ತಡ, ತಲೆಮೇಲೆ ಅದರ ಓಡಾಟ ಆರಂಭವಾಗಿ ಬಿಡುತ್ತದೆ. ಮುಂದೆ ಹೇಳಬೇಕೆ? ಪ್ರತಿದಿನ ಹತ್ತಾರು ಹೇನುಗಳ ಮಾರಣಹೋಮ. ಒಮ್ಮೆ ಒಂದೇ ಒಂದು “ಹೇನು’ ತಲೆಯಲ್ಲಿ ಸೇರಿಕೊಂಡರೆ ಸಾಕು, ಮತ್ತೆ ಅವುಗಳ ಬೆಳವಣಿಗೆ, ಸಂತಾನೋತ್ಪತ್ತಿಯ ವೇಗ ನೋಡಿದರೆ ಎಂಥವರಿಗೂ ಸೋಜಿಗವಾಗಲೇಬೇಕು. ಮೊಟ್ಟೆ ಇಟ್ಟು ತಲೆಯಲ್ಲಿ, ಮುಖ್ಯವಾಗಿ ಕೂದಲಿನ ಬುಡದಲ್ಲಿ ಸಂತಾನ ವೃದ್ಧಿಸುವ, ದುಪ್ಪಟ್ಟಾಗುವ ಹೇನುಗಳಿಗೆ ತಿನ್ನಲು ತಲೆಯಲ್ಲಿ ಏನಿದೆ? ಬಹುಶಃ ಯಾರನ್ನಾದರೂ ಈ ಪ್ರಶ್ನೆ ಕಾಡದಿರದು. ತಲೆಹೊಟ್ಟು, ಬೆವರನ್ನೇ ಆಹಾರವಾಗಿ ಸೇವಿಸಿ ದಷ್ಟಪುಷ್ಟವಾಗಿ ಬೆಳೆಯುವ ಈ ಹೇನುಗಳು ನಿಜವಾಗಿಯೂ ಪರೋಪಜೀವಿಗಳೇ. 

ಸಂಖ್ಯೆ ಹೆಚ್ಚಾಗಿ ಆಹಾರಕ್ಕಾಗಿ ತಡಕಾಡಬೇಕಾಗಿ ಬಂದಾಗ ತಲೆಯ ಮೃದು ಕವಚವನ್ನೇ ಕಚ್ಚತೊಡಗಿ ತಲೆತುಂಬಾ ಗಾಯಗಳು. ಸೂಜಿಯಂತಹ ಬಾಚಣಿಕೆಯ ಹಲ್ಲುಗಳಿಂದ ಇನ್ನಷ್ಟು ನೋವು! ಬಾಚಣಿಕೆಯೊಂದಿಗೆ ಅಮ್ಮ ಬರುತ್ತಿದ್ದಂತೆ “ಬೇಡಮ್ಮಾ…’ ಬಾಚಣಿಕೆ ತಲೆಗೆ ಸೋಕುತ್ತಿದ್ದಂತೆ “ಸಾಕಮ್ಮಾ…’ ಎನ್ನುವ ಮಕ್ಕಳು! ಬಾಚಿದಷ್ಟು ಬೀಳುವ, ತಲೆತುಂಬಾ ಓಡಾಡುತ್ತ ಇನ್ನಷ್ಟು ತಲೆಗೇ ಅಂಟಿಕೊಂಡು ಸತಾಯಿಸುವ ಮತ್ತೆ ಕೆಲವು ಹೇನುಗಳು!

“ಟಕ್‌…’ ಎಂದು ಅಮ್ಮ ಕುಟ್ಟಿದ ಬಾಚಣಿಕೆ ನೆಲದ ಮೇಲೆ ಸದ್ದು ಮಾಡುತ್ತಿದ್ದಂತೆ ಜೇಡನ ಬಲೆಯಂತೆ ನೆಲದ ಮೇಲೆ ಹರಡಿದ ಕೂದಲುಗಳೆಡೆಯಲ್ಲಿ ಮಿಸುಕಾಡುತ್ತ ಹೊರಬರುವ ಹೇನುಗಳೊಂದಿಗೆ ಬಾಚಣಿಕೆಯಿಂದ ಉದುರಿದ ಹೇನುಗಳೂ ಜೊತೆಗೂಡುತ್ತವೆ. ಅಮ್ಮನ ಕೈಗಳು ಚುರುಕುಗೊಳ್ಳುತ್ತವೆ. ದಿನಕ್ಕೆರಡು ಮೂರು ಬಾಚಿದರೂ ಮತ್ತೆ ತಪ್ಪಿಸಿಕೊಂಡು ತಲೆಯಲ್ಲಿ ಅಲೆದಾಡುವ ಹೇನುಗಳಿಗಾಗಿ ಅಮ್ಮನ ಹುಡುಕಾಟ ಪ್ರತಿದಿನ ಸಂಜೆ ತಪ್ಪಿದ್ದಲ್ಲ. ಸಿಕ್ಕಿದ ಒಂದೊಂದು ಹೇನನ್ನೂ ಎರಡು ಕೈಗಳ ಹೆಬ್ಬೆರಳುಗಳ ಉಗುರೆಡೆಯಲ್ಲಿಟ್ಟು ಕುಟ್ಟಲು ಸಿದ್ಧವಾಗುತ್ತಿದ್ದಂತೆ ಉಗುರಿನಿಂದ ಜಾರಿ ನೆಲಕ್ಕೆ ಬೀಳುವ ಹೇನುಗಳು, ಅವುಗಳಿಗಾಗಿ ಮತ್ತೆ ಹುಡುಕಾಟ. 

ಉಗುರೆಡೆಯಲ್ಲಿ ಸೇರಿಕೊಂಡ ಮರಿ ಹೇನುಗಳನ್ನು ಹುಡುಕುವುದೋ ಅತಿ ಕಷ್ಟದ ಕೆಲಸ. ತಲೆಯಿಂದ ಹೆಕ್ಕಿ ತೆಗೆದ ಹೇನನ್ನು ಉಗುರೆಡೆಯಲ್ಲಿಟ್ಟು “ಟಿಕ್‌’ ಎಂದು ಕುಟ್ಟುತ್ತಿದ್ದಂತೆ ಚಿರ್ರ… ಎಂದು ಚಿಮ್ಮಿದ ಕಂದುಮಿಶ್ರಿತ ರಕ್ತ. ಅಸಹ್ಯವೆಂದು ಅದನ್ನು ನೋಡುತ್ತ ಕಿವುಚಿದ ಮುಖಗಳು. ಹೀಗೆ “ಹೇನು ಕುಟ್ಟುವುದು’ ಎಂಬ ಒಂದು ಉಕ್ತಿಗೇ ಕಾರಣವಾದ ಅಮೋಘ ಪ್ರಸಂಗವಿದು. ಪ್ರಕ್ರಿಯೆ ಮುಕ್ತಾಯದ ಹಂತ ತಲುಪುತ್ತಿದ್ದಂತೆ ಸರಿಯಾದ ಬೆಳಕಿನಲ್ಲಿ ಬಟ್ಟೆಬರೆಗಳಿಂದ ಹಿಡಿದು ಪಾದದವರೆಗೂ ಪರೀಕ್ಷಿಸಿ ಹೇನುಗಳು ತಮಗರಿವಿಲ್ಲದಂತೆ ಎಲ್ಲಿಯೂ ಅಡಗಿಕೊಂಡಿಲ್ಲವೆಂದು ದೃಢಪಡಿಸಿಕೊಳ್ಳುವಿಕೆಯೊಂದಿಗೆ ಆ ಹೊತ್ತಿನ “ಹೇನು ಕುಟ್ಟುವ’ ಕಾರ್ಯ ಮುಕ್ತಾಯವಾಗುತ್ತದೆ.

ಸೀಗೆಪುಡಿ ಹಾಕಿ ತಲೆ ತೊಳೆಯುವವರು, ಕಹಿಬೇವಿನ ಸೊಪ್ಪನ್ನು ಅರೆದು ಲೇಪಿಸುವವರಂತಿರಲಿ, ಹೇನು ನಿವಾರಣೆಗಾಗಿಯೇ ಬಂದಿವೆ ಹಲವಾರು ಸಾಮಾನು-ಶ್ಯಾಂಪೂಗಳು! ನೈಸರ್ಗಿಕವಾದವುಗಳು, ರಾಸಾಯನಿಕ ಬೆರೆಸಿದಂಥವುಗಳೆಂದು ಅದರಲ್ಲಿ ವರ್ಗೀಕರಣ ಬೇರೆ! ಆದರೆ ಇವೆಲ್ಲವುಗಳ ಹೊರತಾಗಿಯೂ ಹದ್ದಿನ ಕಣ್ಣಿನ ವೀಕ್ಷಣೆಯೊಂದಿಗೆ ಮೊಟ್ಟೆಗಳನ್ನು ಯಥಾಸ್ಥಿತಿಯಲ್ಲಿ ನಾಶಮಾಡುವುದೂ ಹೇನುಗಳ ನಿಯಂತ್ರಣದ ಒಂದು ವ್ಯವಸ್ಥಿತ ವಿಧಾನ. ಆದರೆ, ಈ ಎಲ್ಲ ವಿಧಾನಗಳ ಹೊರತಾಗಿಯೂ ಹೇನುಗಳ ನಿಯಂತ್ರಣ ಸುಲಭವಾದುದಲ್ಲ! ಅದರ ಪಾಡು ಹೇನುಗಳ ಬಾಧೆಯಿಂದ ಹೈರಾಣಾದವರಿಗೇ ಗೊತ್ತು! ಇವೆಲ್ಲವೂ ಹೇನುಗಳ ವಿರುದ್ಧದ ಸಮರವಾದರೆ ಹೇನುಗಳೇನು ಸುಮ್ಮನಿರುತ್ತವೆಯೇ? ಇನ್ನೊಬ್ಬರ ತಲೆಗೆ ಸೇರಿಕೊಂಡುಬಿಡುತ್ತವೆ. ದೊಡ್ಡ ಹೇನು ಹೊಟ್ಟೆ ತುಂಬ ತಿಂದು ತೇಗಿ ಹೊರಳಾಡುವಂತಿದ್ದರೂ ತಲೆಯಲ್ಲಿ ಅದರ ಚಲನೆಯ ವೇಗ ಮಾತ್ರ ಎಂಥವರನ್ನೂ ಅಚ್ಚರಿಗೊಳಿಸುವಂಥದ್ದು. 

ಒಂದು ಬಿಂದುವಿನ ಗಾತ್ರವನ್ನಷ್ಟೇ ಹೊಂದಿರುವ ಮರಿ ಹೇನುಗಳೇನು ಕಡಿಮೆಯೆ? ಚಲನೆಯ ವೇಗ ನೋಡಿದರೆ ಹೇನುಗಳಿಗಿರುವುದು “ಆರು’ ಕಾಲುಗಳೆಂದರೆ ನಂಬಲು ಸಾಧ್ಯವೆ? ಚುರುಕುತನದಲ್ಲಿ ಹೇನುಗಳು ಮತ್ತು ಜಿಗಣೆಗಳು ಸರಿಸಮವೆನಿಸಬಲ್ಲವೇನೋ?

“ಹೇನು’ಗಳು ಹೆಣ್ಣುಮಕ್ಕಳ ತಲೆಯಲ್ಲೇ ಆಗಬೇಕೆಂದೇನೂ ಇಲ್ಲ. ಆದರೆ, ಗಂಡುಮಕ್ಕಳ ತಲೆಯಲ್ಲಿನ ಸಣ್ಣ ಕೂದಲಿನ ನಡುವೆ ಬೇಗನೆ ಬೆವರು, ನೀರಿನ ಹನಿಗಳು ಒಣಗಿ ಹೋಗುವುದರಿಂದ ಅದಕ್ಕೆ ಆಹಾರವೂ ಕಷ್ಟ. ಅಡಗುತಾಣವೂ ಕಠಿಣ. ಆದ್ದರಿಂದ ಅವುಗಳು ಉದ್ದ ಜಡೆಯ ನೀಳವೇಣಿಯರ ಆಶ್ರಯ ಬಯಸುವುದೇ ಹೆಚ್ಚು. ಹನಿಮಳೆಯಲ್ಲಿ ತಲೆ ನೆನೆಸಿಕೊಳ್ಳುತ್ತಾ, ಮಳೆ-ಬೆವರುಗಳ ಪರಿವೆ ಇಲ್ಲದೆ ಓಡಾಡುವ ಮಕ್ಕಳೆಂದರೆ ಬಲು ಪ್ರೀತಿ. ಹಾಂ! ಹೇನುಗಳ ಬಾಧೆಯುಳ್ಳವರಿಗೆ ತಲೆ ಕರೆದಾಟ ತಪ್ಪಿದ್ದಲ್ಲ. ಅಂತಹವರನ್ನು ನೋಡುತ್ತಿದ್ದಂತೆ ಸದಾ ತಲೆ-ಮೈ ಕೆರೆದುಕೊಳ್ಳುತ್ತಲೇ ಇರುವ ಪೂರ್ವಜರ ನೆನಪಾಗುವುದು ಸಹಜ. “ಮಂಗನಿಂದ ಮಾನವನಂತೆ’ ಆದುದರಿಂದಲೇ ಇರಬೇಕು- ಹೇನುಗಳು ಮತ್ತು ಹೇನು ಹೆಕ್ಕುವಿಕೆ ಮಾನವನನ್ನೂ ಅಂಟಿಕೊಂಡಿತು. ಆದರೆ ವಿಕಾಸದ ಹಂತದಲ್ಲಿ ಬಾಲ ಉದುರಿ ಹೋದಂತೆ ಹೆಕ್ಕಿದ ಹೇನನ್ನು ತಿನ್ನುವ ಪರಿಪಾಠವೂ ನಾಗರೀಕತೆಯ ಬೆಳವಣಿಗೆಯೊಂದಿಗೆ ಬಿಟ್ಟು ಹೋಗಿರಬೇಕು! ಇದರಿಂದಾಗಿ ಹೇನುಗಳಿಗೆ ಆಶ್ರಯವಿತ್ತರೂ, ಅವುಗಳನ್ನು ಹೆಕ್ಕಿದರೂ, “ಹೆಕ್ಕಿ ಅದನೆ ತಿಂತಿಯಾ… ಥೂ… ಥೂ… ಕೊಳಕಪ್ಪಾ’ ಎಂದು ಹಾಡುವಲ್ಲಿ ಮಾತ್ರ ನಾವು ಯಶಸ್ವಿಯಾದೆವು !

– ಸ್ವಾತಿ  ಕೆ.

ಟಾಪ್ ನ್ಯೂಸ್

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

madhu-bangara

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.