ಕೃಷ್ಣ ಪದ್ಯಗಳು
Team Udayavani, Aug 13, 2017, 6:55 AM IST
ಬಗೆಯೇ ಹರಿ
ಬಗೆ ಬಗೆಯಲಿ ಹೇಳಿಕೊಂಡೆ
ಬಗೆ ಹರಿಯಲಿ ಎಂದು
ಬಗೆ ಬಗೆಯಲಿ ತೋರಿಕೊಂಡೆ
ತೋಡಿಕೊಂಡೆ ಬಗೆಬಗೆಯಲಿ
ಬಗೆ ಹರಿಯಲಿ ಎಂದು
ಬಗೆ ಬಗೆಯಲಿ ಹಾಡಿ ಕಳೆದೆ
ಬಗೆಯ ರಾಗ ಆಯ್ದು ಹೆಕ್ಕಿ
ಬಗೆಯೇ ಕಳೆ ಎಂಬ ಮನವಿ
ವಿವಿಧ ಬಗೆಯ ಬರೆದೆ
ಬಗೆಯ ಬಗೆಯ ಚಿತ್ರ ಬಿಡಿಸಿ
ಬಗೆ ಬಗೆಯಲಿ ಬಣ್ಣ ಬಳಸಿ
ಅಮೂರ್ತಗಳ ಹಂಗು ಕಳಚಿ
ಮೂರ್ತಗೊಳಿಸಿದೆ
ಸೂಚ್ಯಾರ್ಥದ ಬೀಗ ಒಡೆದು
ವಾಚ್ಯಗೊಳಿಸಿದೆ
ಹರಿಯಲಿ ಬಗೆ ಬೇಗ ಎಂದು
ಪ್ರಾರ್ಥನೆ ಕುಳಿತೆ
ಹರಿಯದ ಬಗೆ ಹರಿವ ಕಂಡು
ಮೂರ್ಛೆ ಹೋದೆ
ಬಗೆ ಕಾಣದೆ ಎದೆ ಬಗೆದು ನಿಂತು
ಬಗೆಯೆಹರಿ
ಬಗೆಯೇಹರಿ
ಬಗೆಯೇ ಹರಿ! ಎಂದೆ !
ಗೊಣಗಾಟ
ನಾ
ಈಶ್ವರನೆಂದೆಣಿಸಿ ಕರೆದೆ
ನೋಡಿದರಾತ ಕೃಷ್ಣ
ಜಗದ ನಾರಿಯರೆಲ್ಲ
ತನ್ನ
ಮಡದಿಯರೆಂದ
ಭಂಡ!
ಮಂಗಳಾರತಿ ಮಾಡಬೇಕಿತ್ತು
ಮನಸು ಕೇಳುವುದಿಲ್ಲ
ನಂಬುವುದಿಲ್ಲ ಬಹುಶಃ
ಹರಿಮಾಯಕದಿಂದ
ಕೊಟ್ಟು ಲಂಚದ ಮುತ್ತು
ಒಳಗು ಮಾಡಿಕೊಂಡ.
ಏನು ಮಾಡಲಿ ನಾನು?
ಕೃಷ್ಣ ಕಿಂಡಿಯಲಿ ಗೋಪಿ
ಚಂದನದ ಗೊಂಬೆಗೆ
ಬೈಗಳ ತೂರಿಸಿ
ತೀರ್ಥ ಕುಡಿದು ದಣಿವಾರಿಸಿ
ಒರೆಸಿಕೊಳ್ಳುವೆನು
ತೃಪ್ತಿಯ ಗಂಧ
ಎಂದು ಹಾಡುತ್ತ ಕಡೆಗೋಲು ಮೂಲೆಯಲಿ
ಗೊಣಗಿದಳು ಗೋಪಬಾಲೆ
ಕನಕನ ತಂಗಿ ಮತ್ತು ದೇವರು
ಏಳು ಮಲೆಯೊಡೆಯನ್ನ
ನೋಡ ಹೋದಳು ಹುಡುಗಿ
ಮುಂದೆ ದಬ್ಬಿದರು- ಹಿಂದಿ
ನಿಂದಲೂ ಇದ್ದವರು
ಭಲೇ ಹಿಂದಿನವರೇ !
ಕಂಡನೇ ವೆಂಕಟಾಚಲವಾಸ
ನಿಮಗೆ?
ಇತ್ತೇ ನನ್ನ ದೂಡಲು ಅವನ
ಪ್ರೇರಣೆ?
ಪ್ರಶ್ನೆಯ ಮೇಲೆ ಪ್ರಶ್ನೆ
ಕೇಳುವ ಹುಡುಗಿ,
ಕನಕನ ತಂಗಿ!
ಇತ್ತು ಅಲ್ಲಿಯೂ ಒಂದು
ಚೌಕಳಿ ಕಂಡಿ !
ಕಂಡಿರಾ? ತಿರುಪತಿಯ ದೇವರೇ
ತಿರುಗಿ
ಕಂಡಿಯಲ್ಲಿಣಿಕಿ
ಶಂಖ ಚಕ್ರವ ಬಿಸುಟು
ಕೊಳಲನೂದಿ ಕರೆದ
ರೀತಿ!
ಕಣ್ಣೀರು ಚೆಲ್ಲಿ ನೆನೆದಳು ಹುಡುಗಿ
ಹೇ ಕೃಷ್ಣ
ಹೇ ಯಾದವ
ಹೇ ಸಖೇತಿ!
ಗೋಪಿರ್ಕಿತನ
ಕರೆವ ಕೊಳಲಿಗೆ ಮನ
ಉರಿವ ಒಲೆ ಕಡೆ ಗಮನ
ಹೊರಟು ಒಳ ನಿಂತಿರುವ
ಆಪ್ಯಾಯಮಾನ ಗೋಪಿರ್ಕಿತನ
ಗೊತ್ತೆ?
ಆಕೆಯನೆ ಕೇಳಿ
ಯಮುನಾ ತೀರದಲಿ
ಅಲೆವವನೇ ಶುಭಮಸ್ತು
ಎನ್ನುತ್ತ ಒಗ್ಗರಣೆ ಮೆಣಸು
ರುಂಂಂಯn ಚಿವುಟಿದಳು
ಪ್ರಾಣಸಖ ಕ್ಷಮಿಸೆಂದಳು.
ರಂಗಪೂಜೆ
ಗೋಪಿ ಗುಡಿಸಲಿನಲಿ ಅಂದು
ವಿಶೇಷ ಪೂಜೆ
ವಾಚಾಲಿಯನ್ನು ಮೂಗಿಯಾಗಿಸಿದ
ಕೃಷ್ಣಾಯ ತುಭ್ಯಂ ನಮಃ ಮಂತ್ರ
ಮಧುರಾಷ್ಟಕ ಜೊತೆಗೆ ಮಂದಾರ ತುಲಸಿ
ರತ್ನಗಂಧಿ ಧೂಪ ದೀಪ ನೈವೇದ್ಯ
ಏಕಾ ಅನೇಕಾರತಿ
ನಡೆಯುತಿದೆ, ಅಹೊಅಹೋ
ಎಲ್ಲಿಂದಲೋ ಮುರಲಿ
ಮೋಹನರಾಗ ಬರುತಿದೆ ತೇಲಿ
ತಕ್ಷಣವೆ ಆವರಿಸಿ ಪರವಶತೆ ಅಕಟಾ
ಬಾಷ್ಪವಾರಿಯ ಚಿಮುಚಿಮುಕಿಸಿ
ತೊಳೆಯಬಹುದೇ ವಿರಹ
ಕೃಷ್ಣಾರ್ಪಣವೆನುತ ಕೈಯ
ಮುಗಿಯ ಬಹುದೇ ಆ
ಮಂತ್ರ-ಮುಗ್ಧ ಮರುಳಿ?
ವೈದೇಹಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.