ಸಾರ್ವಜನಿಕರಿಂದ ಆರೋಗ್ಯ ಯೋಜನೆ, ಆಸ್ಪತ್ರೆ ಸೇವೆಗಳ ಉತ್ತಮ ಬಳಕೆ
Team Udayavani, Aug 13, 2017, 6:15 AM IST
ಜಿಲ್ಲಾ ಆರ್‌ಸಿಎಚ್ ( ರಾಷ್ಟ್ರೀಯ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ) ಅಧಿಕಾರಿ ಡಾ| ಆಶೋಕ್ ಅವರು ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಬ್ರಹ್ಮಾವರ ಸಮುದಾಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಆರೋಗ್ಯ ಇಲಾಖೆಯಲ್ಲಿ ತನ್ನ ಸೇವೆ ಆರಂಭಿಸಿದ ಅವರು ಉಡುಪಿ ತಾಲೂಕು ಆರೋಗ್ಯಾಧಿಕಾರಿಯಾಗಿ, ತಾಯಿ ಮತ್ತು ಮಗು ಆರೋಗ್ಯ ವಿಭಾಗ ಬೆಂಗಳೂರು ಇದರ ಸಹಾಯಕ ನಿರ್ದೇಶಕರು ಸಹಿತ ಆರೋಗ್ಯ ಇಲಾಖೆಯಲ್ಲಿ ಮಹತ್ತರ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ 2013ರಲ್ಲಿ ರಾಜ್ಯ ಸರಕಾರದ ಸರ್ವೋತ್ತಮ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ. ಆರ್‌ಸಿಎಚ್ ಕಾರ್ಯಕ್ರಮದಲ್ಲಿ ಒಟ್ಟು ಯೋಜನೆಗಳು, ಅನುಷ್ಠಾನ, ಜನಜಾಗೃತಿ ಮತ್ತು ಜನಸ್ಪಂದನೆ ಬಗ್ಗೆ ಅನಿಸಿಕೆಗಳನ್ನು ಅವರು ಕೇಶವ ಕುಂದರ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುರಿ ಮತ್ತು ಉದ್ದೇಶಗಳೇನು ?
ಇದೊಂದು ಸರಕಾರದ ಮಹತ್ತರವಾದ ಕಾರ್ಯಕ್ರಮವಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನತೆಗೆ ಅದರಲ್ಲೂ ವಿಶೇಷವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವಂತೆ ಗುಣಾತ್ಮಕ ಆರೋಗ್ಯ ಸೇವೆಗಳನ್ನು ನೀಡುವುದು, ಶಿಶು ಮರಣ ಮತ್ತು ತಾಯಂದಿರ ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು, ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವುದು, ಒಟ್ಟು ಫಲವತ್ತತೆಯ ದರವನ್ನು ತಗ್ಗಿಸಿ ಜನಸಂಖ್ಯಾ ಸ್ಥಿರತೆಯನ್ನು ಸಾಧಿಸುವುದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಯಾವುದೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ?
ರಾಷ್ಟ್ರೀಯ ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಲ್ಲಿ ಗರ್ಭಿಣಿಯರು, ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗರ್ಭ ಧರಿಸಿದ ಮಹಿಳೆಯನ್ನು ಆದಷ್ಟು ಬೇಗ ದಾಖಲಿಸಿ ಅಪಾಯಕಾರಿ ಅಂಶಗಳ ಬಗ್ಗೆ ಗಮನಹರಿಸಿ ತಾಯಿ ಕಾರ್ಡ್ ನೀಡಿ ವಿವರಗಳನ್ನು ಬರೆಯಲಾಗುತ್ತದೆ. ಮೊದಲ ಗರ್ಭಿಣಿಗೆ 4 ರಿಂದ 6 ವಾರಗಳ ಅಂತರದಲ್ಲಿ 2 ಧನುರ್ವಾಯು ಚುಚ್ಚು ಮದ್ದು , 3 ವರ್ಷದೊಳಗೆ ಮತ್ತೆ ಗರ್ಭಧರಿಸಿದವರಿಗೆ ಬಲವರ್ಧಕ ಚುಚ್ಚುಮದ್ದು ನೀಡಲಾಗುತ್ತದೆ. ರಕ್ತ ಹೀನತೆ ತಡೆಗಟ್ಟಲು ಎಲ್ಲ ಗರ್ಭಿಣಿಯರಿಗೆ 100 ಹಾಗೂ ರಕ್ತ ಹೀನತೆ ಇರುವ ಗರ್ಭಿಣಿಯರಿಗೆ 200 ಕಬ್ಬಿಣಾಂಶ ಮಾತ್ರೆಗಳನ್ನು ನೀಡಲಾಗುತ್ತದೆ. ಸಾಮಾನ್ಯ ಗರ್ಭಿಣಿಗೆ ಕನಿಷ್ಠ 3 ಬಾರಿ/ ಅಪಾಯಕಾರಿ ಚಿಹ್ನೆಗಳಿರುವ ಗರ್ಭಿಣಿಯರಿಗೆ ಕನಿಷ್ಠ 5 ಬಾರಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ವೈಯಕ್ತಿಕ ಶುಚಿತ್ವ, ಅರೋಗ್ಯಕರ ಹವ್ಯಾಸಗಳು, ವ್ಯಾಯಾಮ, ವಿಶ್ರಾಂತಿ, ಪೌಷ್ಟಿಕ ಆಹಾರ ಸೇವನೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಬಾಣಂತಿಯರು ಶಿಶುಗಳಿಗೆ ಎದೆಹಾಲು ನೀಡಲು ಪ್ರೋತ್ಸಾಹಿಸಲಾಗುತ್ತಿದೆ. ಮಕ್ಕಳ ಹುಟ್ಟು ತೂಕ 2500 ಗ್ರಾಂ ಗಿಂತ ಕಡಿಮೆ ಇದ್ದಲ್ಲಿ ವಿಶೇಷ ರಕ್ಷಣೆ ಸೇವೆಗಳನ್ನು ನೀಡಲಾಗುತ್ತಿದೆ. 24×7 ಅಸ್ಪತ್ರೆಗಳಲ್ಲಿ ಹಾಗೂ ಎಫ್.ಆರ್.ಯು. ಗಳಲ್ಲಿ ಹೆರಿಗೆ ಮಾಡಿಸಿಕೊಂಡ ಈನಂತರ 48 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ವಾಸ್ತವ್ಯವಿರುವ ಬಾಣಂತಿಗೆ 2 ದಿನಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ.
ಇನ್ನೇನು ಯೋಜನೆಗಳಿವೆ ?
ಹೆರಿಗೆಗಾಗಿ ಆರ್ಥಿಕ ಸಹಾಯ ನೀಡುವ ಜನನಿ ಸುರûಾ ಯೋಜನೆ, ಗರ್ಭಿಣಿಯು ಉತ್ತಮ ಪೌಷ್ಟಿಕ ಆಹಾರ ಪಡೆದು ಸುಸೂತ್ರವಾಗಿ ಹೆರಿಗೆಯಾಗಬೇಕೆಂಬ ಉದ್ದೇಶದಿಂದ ಜಾರಿಗೊಳಿಸಿರುವ ಪ್ರಸೂತಿ ಆರೈಕೆ, ತಾಯಿ ಭಾಗ್ಯ ಪ್ಲಸ್ ಯೋಜನೆ, ಜನನಿ ಶಿಶು ಸುರûಾ ಕಾರ್ಯಕ್ರಮ, ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ, ಎಲ್ಲ ಸರಕಾರಿ/ ಅನುದಾನಿತ/ಸರಕಾರಿ ವಸತಿ ಶಾಲಾ ಕಾಲೇಜುಗಳ 1 ರಿಂದ 12ನೇ ತರಗತಿಯ ಶಾಲಾ ವಿದ್ಯಾರ್ಥಿಗಳ ಜತೆಯಲ್ಲಿ 0- 6 ವರ್ಷದೊಳಗಿನ ಅಂಗನವಾಡಿ ಮಕ್ಕಳನ್ನೂ ಸಹ ವೈದ್ಯಕೀಯ ತಪಾಸಣೆಗೊಳಪಡಿಸಿ ತೊಂದರೆ ಇರುವ ಮಕ್ಕಳಿಗೆ ಉಚಿತ ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗುವುದು. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಪೂರಕ ಕಬ್ಬಿಣಾಂಶ ಕಾರ್ಯಕ್ರಮ, ಹದಿಹರೆಯದ ಹೆಣ್ಣು ಮಕ್ಕಳು ಋತುಕಾಲದ ಸಮಯದಲ್ಲಿ ಉತ್ತಮ ಶುಚಿತ್ವ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆ, ಜಂತುಹುಳ ನಿವಾರಣಾ ದಿನ ಕಾರ್ಯಕ್ರಮ , ನವಜಾತ ಶಿಶುಗಳ ಆರೈಕೆಗೆ ವಿಶೇಷ ಸೇವೆಗಳು , ಅಪೌಷ್ಟಿಕ ಮಕ್ಕಳ ಆರೋಗ್ಯ ಕಾಳಜಿಯ ಸೇವೆಗಳು ಸಹಿತ ಅನೇಕ ಯೋಜನೆಗಳಿವೆ.
ಜಿಲ್ಲೆಯಲ್ಲಿ ಆರೋಗ್ಯ ಯೋಜನೆಗಳ ಬಗ್ಗೆ ಜಾಗೃತಿ ಹೇಗೆ ನಡೆಯುತ್ತಿದೆ ?
ಸರಕಾರದ ಯೋಜನೆಗಳ ಬಗ್ಗೆ ಜಿಲ್ಲೆಯ ವೈದ್ಯಾಧಿಕಾರಿಗಳು, ಕ್ಷೇತ್ರ ಸಿಬಂದಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಜನ ಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತಿದೆ. ಆಕಾಶವಾಣಿ ಕೇಂದ್ರ, ಎಫ್.ಎಂ ಚಾನೆಲ್, ಸ್ಥಳೀಯ ಟಿ.ವಿ ಮಾಧ್ಯಮದಲ್ಲಿ ಲೈವ್ ಟಾಕ್, ಜಿಂಗಲ್ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿ ಸ್ಥಳೀಯ ಟಿ.ವಿ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಈ ಕಿರು ಸಾಕ್ಷ್ಯಚಿತ್ರದ ಡಿ.ವಿ.ಡಿ ಮಾಡಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿರುವ ಟಿ.ವಿ ಮೂಲಕ ಆರೋಗ್ಯ ಕೇಂದ್ರಕ್ಕೆ ಬರುವ ಜನರಿಗೆ ಆರೋಗ್ಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯ ವೆಬ್‌ಸೈಟ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಹೆಚ್ಚಿನ ಕಾರ್ಯಕ್ರಮಗಳು ಮಹಿಳಾ ಮತ್ತು ಮಕ್ಕಳಿಗೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ನಡೆಯುವ ವಲಯ ಮಟ್ಟದ ಸಭೆಯನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಮತ್ತು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲಾಗುತ್ತಿದೆ. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ವೈದ್ಯಕೀಯ ತಂಡದ ಮೂಲಕ ಶಾಲಾ ಕಾಲೇಜಿನ ಟೀಚರ್‌ಗಳಿಗೆ ಮತ್ತು ಶಾಲಾ ಮಕ್ಕಳಿಗೆ ಆರೋಗ್ಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಪ್ರತೀ ಗ್ರಾಮಗಳಲ್ಲಿ ಮಾಸಿಕ ತಾಯಂದಿರ ಸಭೆ ನಡೆಸಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಭಿತ್ತಿಪತ್ರ, ಕರಪತ್ರ, ಪೋಸ್ಟರ್ ಇತ್ಯಾದಿ ಐ.ಇ.ಸಿ ಸಾಮಗ್ರಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಗ್ರಾಮ ಮಟ್ಟದಲ್ಲಿ ಗ್ರಾಮ ಆರೋಗ್ಯ ಪೌಷ್ಟಿಕ ದಿನಾಚರಣೆಗಳು, ಸಮುದಾಯ ಆರೋಗ್ಯ ದಿನಗಳು ಇಲಾಖೆ ಹಾಗೂ ಜನಸಮುದಾಯದ ನಡುವೆ ಸಂವಾದ ವೇದಿಕೆಗಳಾಗಿವೆ.
ಜನಸ್ಪಂದನೆ ಹೇಗಿದೆ ?
ಅತ್ಯುತ್ತಮವಾಗಿದೆ. ಸಾರ್ವಜನಿಕರು ಸರಕಾರದ ಆರೋಗ್ಯ ಯೋಜನೆಗಳನ್ನು ಮತ್ತು ಸರಕಾರಿ ಆಸ್ಪತ್ರೆಗಳ ಸೇವೆಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. 2016- 17ನೇ ಸಾಲಿನಲ್ಲಿ ಸರಕಾರಿ ಸೇವೆ ಪಡೆದುಕೊಂಡವರ ಮತ್ತು ಯೋಜನೆಗಳ ಫಲಾನುಭವಿಗಳ ವಿವರ ಇದಕ್ಕೆ ನಿದರ್ಶನವಾಗಿದೆ. ಹೊರರೋಗಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 11,57,419 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2,01,646, ತಾಲೂಕು ಆಸ್ಪತ್ರೆಗಳಲ್ಲಿ 3,67,644, ಜಿಲ್ಲಾ ಆಸ್ಪತ್ರೆಗಳಲ್ಲಿ 2,61,723, ಲೇಡಿಗೋಶನ್ ಆಸ್ಪತ್ರೆಗಳಲ್ಲಿ 36,120 ಸಹಿತ ಒಟ್ಟು 20,24,552 ಮಂದಿ ಆರೋಗ್ಯ ಸೇವೆ ಪಡೆದಿದ್ದಾರೆ. ಒಳರೋಗಿಗಳಾಗಿ 58,869 ಮಂದಿ ದಾಖಲಾಗಿದ್ದಾರೆ. ಒಟ್ಟು 7,934 ಹೆರಿಗೆಗಳಾಗಿವೆ. 4,13,030 ಮಂದಿ ಪ್ರಯೋಗಾಲಯಗಳ ಸೇವೆ ಪಡೆದಿದ್ದಾರೆ. ಜನನೀ ಸುರಕ್ಷಾ ಯೋಜನೆಯಲ್ಲಿ 10,648, ಪ್ರಸೂತಿ ಆರೈಕೆಯಲ್ಲಿ 10,372, ತಾಯಿ ಭಾಗ್ಯ ಪ್ಲಸ್ ಯೋಜನೆಯಲ್ಲಿ 3,616 ಮಂದಿ ಸೇವೆ ಪಡೆದಿದ್ದಾರೆ. ಇದಲ್ಲದೆ ಇನ್ನು ಹಲವು ಯೋಜನೆಗಳಲ್ಲಿ ಬಹಳಷ್ಟು ಮಂದಿ ಸೇವೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.