ಊಟದ ಮಾಹಿತಿಗೆ ಡಿಜಿಟಲ್ ಫಲಕ
Team Udayavani, Aug 13, 2017, 11:21 AM IST
ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಲಭ್ಯವಿರುವ ತಿಂಡಿ ಹಾಗೂ ಊಟದ ಕುರಿತ ಕ್ಷಣ ಕ್ಷಣದ ಮಾಹಿತಿ ನೀಡುವ ಡಿಜಿಟಲ್ ಫಲಕಗಳನ್ನು ಕ್ಯಾಂಟೀನ್‌ಗಳಲ್ಲಿ ಅಳವಡಿಸಲು ಬಿಬಿಎಂಪಿ ನಿರ್ಧರಿಸಿದೆ.
ಇದೇ 16ರಂದು 101 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳು ಉದ್ಘಾಟನೆಯಾಗಲಿವೆ. ಪ್ರತಿ ಕ್ಯಾಂಟೀನ್‌ನಲ್ಲಿ ನಿತ್ಯ 500 ಮಂದಿಗೆ ತಿಂಡಿ ಮತ್ತು ಊಟವನ್ನು ವಿತರಿಸಲಾಗುತ್ತದೆ. ಆ ಹಿನ್ನೆಲೆಯಲ್ಲಿ ಕ್ಯಾಂಟೀನ್‌ಗಳಲ್ಲಿ ಎಷ್ಟು ಮಂದಿಗೆ ತಿಂಡಿ ಹಾಗೂ ಊಟ ಲಭ್ಯವಿದೆ ಎಂಬ ಮಾಹಿತಿ ನೀಡುವ ಉದ್ದೇಶದಿಂದ ಕ್ಯಾಂಟೀನ್ ಹೊರಭಾಗದಲ್ಲಿ ಡಿಜಿಟಲ್ ಫಲಕಗಳನ್ನು ಅಳವಡಿಸಲಾಗುತ್ತಿದೆ.
ಸಾರ್ವಜನಿಕರು ತಿಂಡಿ ಅಥವಾ ಊಟಕ್ಕೆ ಟೋಕನ್ ಪಡೆದರೆ ಇನ್ನೆಷ್ಟು ತಿಂಡಿ ಹಾಗೂ ಊಟಗಳು ಲಭ್ಯವಿದೆ ಎಂಬ ಮಾಹಿತಿ ಫಲಕದಲ್ಲಿ ಪ್ರದರ್ಶನವಾಗಲಿದೆ. ಇದರಿಂದಾಗಿ ಕ್ಯಾಂಟೀನ್‌ಗಳ ಮುಂದೆ ಜನದಟ್ಟಣೆ ಆಗುವುದನ್ನು ತಪ್ಪಿಸಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಶನಿವಾರ ಮೇಯರ್ ಜಿ.ಪದ್ಮಾವತಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಪ್ರತಿಯೊಂದು ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಫಲಕಗಳನ್ನು ಅಳವಡಿಕೆ ಮಾಡಲು ತೀರ್ಮಾನಿಸಲಾಗಿದೆ. ಆ ಮೂಲಕ ಕ್ಯಾಂಟೀನ್‌ನಲ್ಲಿ ಎಷ್ಟು ಜನರಿಗೆ ಊಟ ಲಭ್ಯವಿದೆ ಎಂಬ ಮಾಹಿತಿಯನ್ನು ಜನರಿಗೆ ನೀಡಬಹುದು ಎಂದು ತಿಳಿಸಿದರು.
ಜನರು ಟೋಕನ್ ಪಡೆಯುವ ಆಧಾರದ ಮೇಲೆ ಪ್ರತಿ ಅವಧಿಗೆ ನಿಗದಿಪಡಿಸಿರುವ ಊಟಗಳ ಸಂಖ್ಯೆಯಲ್ಲಿ ಕಡಿಮೆಯಾಗಲಿದೆ. ಪಾಲಿಕೆಯಿಂದ ಇಂದಿರಾ ಕ್ಯಾಂಟೀನ್ ಆ್ಯಪ್ ಅಭಿವೃದ್ಧಿಪಡಿಸಲಾಗಿದ್ದು, ಸಾರ್ವಜನಿಕರು ತಾವು ಭೇಟಿ ನೀಡಿದ ಕ್ಯಾಂಟೀನ್‌ನಲ್ಲಿ ಊಟ ಮುಗಿದಿದ್ದರೆ, ಸಮೀಪದ ಐದು ಕ್ಯಾಂಟೀನ್‌ಗಳ ಮಾಹಿತಿ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಇಂದಿರಾ ಕ್ಯಾಂಟೀನ್‌ಗಳಲ್ಲಿ ಗುಣಮಟ್ಟಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅಡುಗೆ ಮನೆಗಳು ಹಾಗೂ ಕ್ಯಾಂಟೀನ್‌ಗಳಿಗೆ ಆಹಾರ ಅಧಿಕಾರಿಗಳು ತೆರಳಿ ಗುಣಮಟ್ಟ ಪರಿಶೀಲನೆ ನಡೆಸಲಿದ್ದಾರೆ. ಇಂದಿರಾ ಕ್ಯಾಂಟೀನ್‌ಗಳಲ್ಲಿನ ಆಹಾರ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಹಾರದ ಗುಣಮಟ್ಟ ಅಳೆಯಲು ಈಗಾಗಲೇ ಆಹಾರ ಇಲಾಖೆಗೆ ಪತ್ರ ಬರೆಯಲಾಗಿದೆ. ಆ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಹಾಗೂ ಅಡುಗೆ ಮನೆಗಳಿಗೆ ಭೇಟಿ ನೀಡಿ ಗುಣಮಟ್ಟ ಪರೀಕ್ಷೆ ನಡೆಸಲಿದ್ದಾರೆ ಎಂದರು.
ನಗರದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕಾಗಿ 181 ಕಡೆಗಳಲ್ಲಿ ಜಾಗವನ್ನು ಗುರುತಿಸಲಾಗಿದ್ದು, ಯಾವುದೇ ವಿವಾದಿತ ಸ್ಥಳಗಳಲ್ಲಿ ಕ್ಯಾಂಟೀನ್ ನಿರ್ಮಿಸುತ್ತಿಲ್ಲ. ಪಾಲಿಕೆಯ ವ್ಯಾಪ್ತಿಯಲ್ಲಿ 1,187 ಉದ್ಯಾನಗಳು ಹಾಗೂ 287 ಆಟದ ಮೈದಾನಗಳಿವೆ. ಆ ಪೈಕಿ 227 ಖಾಲಿ ಜಾಗದಲ್ಲಿ ಯಾವುದೇ ಉದ್ದೇಶಕ್ಕೂ ಬಳಕೆಯಾಗದೆ ಖಾಲಿ ಉಳಿದಿವೆ. ಇಂತಹ ಕಡೆಗಳಲ್ಲಿ ಕ್ಯಾಂಟಿನ್ ನಿರ್ಮಾಣ ಮಾಡಿ ಸದ್ಭಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಬಿಬಿಎಂಪಿ ವತಿಯಿಂದ 125 ಇಂದಿರಾ ಕ್ಯಾಂಟೀನ್ ಹಾಗೂ 14 ಅಡುಗೆ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಸದ್ಯ 6 ಅಡುಗೆ ಮನೆಗಳು ಮಾತ್ರ ಪೂರ್ಣಗೊಂಡಿದ್ದು, ಪ್ರತಿ ಅಡುಗೆ ಮನೆಯಿಂದ 5 ರಿಂದ 6 ಸಾವಿರ ಮಂದಿಗೆ ಊಟ, ಉಪಹಾರವನ್ನು ಪೂರೈಕೆ ಮಾಡಲಾಗುವುದು ಎಂದು ಮಂಜುನಾಥ್ ತಿಳಿಸಿದರು.
ಮೇಯರ್ ಜಿ.ಪದ್ಮಾವತಿ ಮಾತನಾಡಿ, ಬಿಬಿಎಂಪಿ 198 ವಾರ್ಡ್‌ಗಳಲ್ಲಿಯೂ ಕ್ಯಾಂಟೀನ್ ಆರಂಭಿಸಬೇಕೆಂಬ ಉದ್ದೇಶವಿತ್ತು. ಆದರೆ, ಕಾರಣಾಂತರಗಳಿಂದ ಎಲ್ಲ ಕಡೆಗಳಲ್ಲಿ ಆರಂಭಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆಗಸ್ಟ್ 16ರಂದು 101 ಕಡೆಗಳಲ್ಲಿ ಕ್ಯಾಂಟೀನ್‌ಗಳು ಲೋಕಾರ್ಪಣೆ ಮಾಡಲಾಗುವುದು.
ಸರ್ಕಾರ 125 ಕ್ಯಾಂಟೀನ್ ಪೂರ್ಣಗೊಳಿಸುವಂತೆ ಆದೇಶ ನೀಡಿತ್ತು. ಆದರೆ, ಹಲವು ಭಾಗಗಳಲ್ಲಿ ಕ್ಯಾಂಟೀನ್‌ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದೂ ಸಹ ಸಾಧ್ಯವಾಗಲಿಲ್ಲ. ಈಗಾಗಲೇ 87 ಕಡೆಗಳಲ್ಲಿ ಕ್ಯಾಂಟೀನ್ ಪೂರ್ಣಗೊಂಡಿದ್ದು, ಉಳಿದ ಮೂರು ದಿನಗಳಲ್ಲಿ 14 ಕ್ಯಾಂಟೀನ್ ಪೂರ್ಣಗೊಳಿಸಲಾಗುವುದು ಎಂದರು.
ಕ್ಯಾಂಟೀನ್‌ಗಳನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆ. ಆರಂಭದಲ್ಲಿ ವಿರೋಧ ಪಕ್ಷದವರು ಸೇರಿದಂತೆ ಇನ್ನಿತರರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಡಿಮೆ ದರದಲ್ಲಿ ಉಪಹಾರ ಹಾಗೂ ಊಟ ಒದಗಿಸುವ ಯೋಜನೆ ಇದಾಗಿದ್ದು, ಇಂತಹ ಜನಸ್ನೇಹಿ ಯೋಜನೆಗೆ ಯಾರೂ ಅಡ್ಡಿಮಾಡಬಾರದು ಎಂದು ಮನವಿ ಮಾಡಿದರು.
ಸೋಮವಾರ ಆ್ಯಪ್‌ಗೆ ಚಾಲನೆ
ಬಿಬಿಎಂಪಿ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಇಂದಿರಾ ಕ್ಯಾಂಟೀನ್ ಆ್ಯಪ್ ಸೋಮವಾರ ಬಿಡುಗಡೆಯಾಗಲಿದ್ದು, ಆ್ಯಪ್‌ನಲ್ಲಿ ಆಯಾ ದಿನ ತಿಂಡಿ ಹಾಗೂ ಊಟದ ಮೆನು, ಸಮೀಪದ ಐದು ಕ್ಯಾಂಟೀನ್‌ಗಳ ಮಾಹಿತಿ ದೊರೆಯಲಿದೆ. ಇದರೊಂದಿಗೆ ಸಾರ್ವಜನಿಕರು ಕ್ಯಾಂಟೀನ್ ಕುರಿತ ದೂರುಗಳನ್ನು ಆ್ಯಪ್ ಮೂಲಕವೇ ಸಲ್ಲಿಕೆ ಮಾಡಬಹುದಾಗಿದೆ.
ಸಕಾಲಕ್ಕೆ ಆಹಾರ ಪೂರೈಸಬೇಕು
ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲು ಎರಡು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಸಕಾಲಕ್ಕೆ ಆಹಾರವನ್ನು ಪೂರೈಕೆ ಮಾಡಲಿದ್ದಾರೆ. ಪ್ರತಿ ಅಡುಗೆ ಮನೆಯಲ್ಲಿ 20-25 ಮಂದಿ ಹಾಗೂ ಕ್ಯಾಂಟೀನ್‌ಗಳಲ್ಲಿ 7 ಮಂದಿ ಕೆಲಸ ಮಾಡಲಿದ್ದಾರೆ. ಈಗಾಗಲೇ ಪ್ರಯೋಗಿಕ ಕಾರ್ಯಕಗಳು ನಡೆದಿದ್ದು, ಅಡುಗೆ ಮನೆಯಿಂದ ಕ್ಯಾಂಟೀನ್ ಬಳಿಗೆ ಆಹಾರ ಕೊಂಡೊಯ್ಯಲು ಸಮಯವಾಗುತ್ತದೆ ಎಂಬುದನ್ನು ತಿಳಿಯಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ನ ಅಡುಗೆ ಮನೆಗಳು
– ಹಳೆ ವಿಮಾನ ನಿಲ್ದಾಣ ರಸ್ತೆ
– ಸರ್ವಜ್ಞನಗರ
– ಹೆಬ್ಟಾಳ
-ದಾಸರಹಳ್ಳಿ
– ಸಿ.ವಿ.ರಾಮನ್ ನಗರ
– ರಾಜರಾಜೇಶ್ವರಿ ನಗರ
ಕ್ಯಾಂಟಿನ್ ತಿಂಡಿ-ಊಟ ದೊರೆಯುವ ಸಮಯ
– ಬೆಳಗ್ಗೆ 7.30 ರಿಂದ 10.30
– ಮಧ್ಯಾಹ್ನ 12.30 ರಿಂದ 2.30
– ರಾತ್ರಿ 7.30 ರಿಂದ 9.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Bengaluru: ಏರ್ಪೋರ್ಟ್ ಟಿ-2ಗೆ ವರ್ಟಿಕಲ್ ಗಾರ್ಡನ್ ರಂಗು
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.