ನಾದಲೋಲನ ಮುಡಿಗೆ “ಯಕ್ಷಧ್ರುವ ಪಟ್ಲ ಪ್ರಶಸ್ತಿ’ಯ ಗರಿ
Team Udayavani, Aug 13, 2017, 2:30 PM IST
ಯಕ್ಷಗಾನ ಎಂಬುದು ಗಾಯನ, ಅಭಿನಯ, ನರ್ತನ ಅರ್ಥಗಾರಿಕೆಯಿಂದ ಕೂಡಿದ ಒಂದು ಕಲಾರಾಧನೆ. ಯಕ್ಷಗಾನ ಎಂದಾಗ ಯಾಕೋ ಒಂದು ತರದ ರೋಮಾಂಚನ. ಆ ಚಂಡೆ ಮದ್ದಳೆಗಳ ಅಬ್ಬರ. ಮೋಹಕ ಭಾಗವತಿಕೆಯ ಮಾಧುರ್ಯಕ್ಕೆ ಕುಣಿತ ದಿಗಿಣಗಳ ನಡುವೆ ಸ್ವತ್ಛಂದ ಭಾಷೆಯ ಸಾಹಿತ್ಯಿಕ ಅರ್ಥಗಾರಿಕೆಗೆ ಮನಸೋಲದ ಮನಸುಗಳೇ ಇಲ್ಲ.
“ರಸಭಾವ ರಾಗ ತಾಳದ
ಲೊಸುರುವ ಗಾಯನ ವಿಧಾನ ನಾಟ್ಯ ವಿಶೇಷಂ
ರಸೆಯೊಳನನ್ಯಂ ಸಂಸ್ಕೃತಿ
ವಿಸರಂ ತಾನೆನಿಪ ಯಕ್ಷಗಾನಂ ಮಧುರಂ’
ಕರಾವಳಿಯ ಜನರಲ್ಲಂತೂ ಈ ಮನಸು ಇಲ್ಲವೇ ಇಲ್ಲ. ಇಂದಿನ ಸಾಮಾಜಿಕ ಜಾಲತಾಣಗಳ ಅಬ್ಬರ, ಅರ್ಭಟ, ದೂರದರ್ಶನ, ಸಿನಿಮಾ ಮುಂತಾದ ಮನೋರಂಜನೆಯ ಮಾಧ್ಯಮಗಳ ನಡುವೆ ಎಂಟೆದೆಯ ಬಂಟನಂತೆ ರಾರಾಜಿಸುತ್ತ ಮುಂದಿನ ಶತಮಾನಗಳಾಚೆಯ ತನಕ ತನ್ನ ಸಮೃದ್ಧ ಅಸ್ತಿತ್ವದೊಂದಿಗೆ ಒಂದು ಜಾನಪದ ಕಲೆ ಜಗತ್ತಿನಾದ್ಯಂತ ತನ್ನ ಜಾಪಿನೊಂದಿಗೆ ಚಾಪು ಒತ್ತಿ ಬದುಕುತ್ತದೆ ಎಂದಾದರೆ ಅದು ಯಕ್ಷಗಾನ ಮಾತ್ರ ಎನ್ನುವುದು ಸತ್ಯಕ್ಕೆ ಹಿಡಿದ ಕೈಗನ್ನಡಿ. ಇವತ್ತು ಯಾವುದೇ ಮನೋರಂಜನೆಯನ್ನು ಕಂಡರೂ ಅಲ್ಲೊಂದು ಪರಿಶುದ್ಧ ಭಾಷೆಯ ಕೊರತೆ ನಮ್ಮನ್ನು ಕಾಡುವುದು. ಆದರೆ ಯಕ್ಷಗಾನ ಮನೋರಂಜನೆಯ ಮೂಲಕ ಮನರಮಿಸುತ್ತ ಧಾರ್ಮಿಕ ನೆಲೆಗಟ್ಟನ್ನು ಭದ್ರಪಡಿಸುತ್ತ, ಭಾಷೆಯ ಶ್ರೀಮಂತಿಕೆಯೊಂದಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸುತ್ತದೆ ಎನ್ನುವುದೂ ಅಷ್ಟೇ ಸತ್ಯ. ಯಕ್ಷಗಾನ ಜಾನಪದ ಕಲೆಯಾಗಿದ್ದುಕೊಂಡು ಕರಾವಳಿಯ ಪವಿತ್ರ ಸ್ಥಳಗಳ ಪಾವಿತ್ರÂತೆಯನ್ನು ಜಗತ್ತಿಗೆ ಅರುಹಲು ಒಂದು ಮಾಧ್ಯಮವಾಗಿ ಕಾರ್ಯಪ್ರವೃತ್ತವಾಗಿದೆ ಎಂದೆನ್ನುವಾಗ ಮನವುಕ್ಕಿ ಬರುತ್ತದೆ. ಈ ಪರಿಶುದ್ಧ ಪಾವಿತ್ರÂತೆಯ ಕಲೆಯನ್ನು ಕಟ್ಟಿ ಬೆಳೆಸುವಲ್ಲಿ ಅದೆಷ್ಟೋ ಜೀವಗಳು ತಮ್ಮ ಬದುಕನ್ನು ಮುಡಿಪಾಗಿಟ್ಟು ಕಲೆಗಾಗಿಯೇ ಉಸಿರನ್ನು ಬಿಗಿಹಿಡಿದ ಕಲಾವಿದರು ನಮ್ಮ ನಿಮ್ಮ ನಡುವೆ ಬೇಕಾದಷ್ಟಿದ್ದರು…ಇದ್ದಾರೆ.
ಈ ಸುಂದರ ಯಕ್ಷಗಾನ ಕಲೆಗಾಗಿ ತನ್ನ ಬದುಕನ್ನು ಗಂಧದ ಕೊರಡಿನಿಂದ ತೇಯುತ್ತಿರುವವರು ಮುಂಬಯಿಯ ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ನಾದಲೋಲ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ ಅವರು. ಒಂದು ಕಾಲದಲ್ಲಿ ಕಾಳಿಂಗ ನಾವುಡರು ಯಕ್ಷಗಾನ ಲೋಕವನ್ನು ತನ್ನ ಸ್ವರ ಸಾಮ್ರಾಜ್ಯದಿಂದ ಆಳುತ್ತಿರುವ ಹೊತ್ತಿನಲ್ಲಿ ಅವರ ಸರಿಸಮಾನರಾಗಿ ಬಂದವರು ಪೊಲ್ಯರು. ಇವರ ಒಂದು ವಿಶೇಷತೆ ಎಂದರೆ ಬಡಗು ಹಾಗೂ ತೆಂಕುತಿಟ್ಟಿನಲ್ಲಿ ಪರಿಣತರು. ಯಕ್ಷಗಾನದ ಪ್ರಥಮಾರ್ಧದಲ್ಲಿ ಮುಖಕ್ಕೆ ಬಣ್ಣ ಹಚ್ಚಿ ಅಬ್ಬರದ ವೇಷಗಳಿಂದ ತನ್ನ ದಿಗಿಣ ಕುಣಿತ ಅರ್ಥಗಾರಿಕೆಯಿಂದ ಪ್ರೇಕ್ಷಕರ ಮನ ಸೆಳೆದವರು. ನಡುರಾತ್ರಿಯ ನಂತರ ಪೊಲ್ಯರು ಭಾಗವತಿಕೆ ಕುಳಿತರೆಂದರೆ ತನ್ನ ಸುಶ್ರಾವ್ಯ ಕಂಠದಿಂದ ಕಲಾಭಿಮಾನಿಗಳಿಗೆ ತನ್ನ ಸ್ವರ ಮಾಧುರ್ಯದಿಂದ ಮೃಷ್ಟಾನ್ನ ಉಣಬಡಿಸುವವರು. ತೆಂಕು ಬಡಗು ತಿಟ್ಟೆರಡರ ಒಳಹೊರಗನ್ನು ವಿಶೇಷ ಕಾಳಜಿಯಿಂದ ಅಭ್ಯಸಿಸಿ ಅರ್ಥೈಸಿಕೊಂಡವರು ಪೊಲ್ಯರು. ಡಾ| ಶಿವರಾಮ ಕಾರಂತರ ಉಡುಪಿಯ ಯಕ್ಷಗಾನ ಕಲಾ ಕೇಂದ್ರದಲ್ಲಿ ಯಕ್ಷಗಾನದ ಅದರು ಪದರುಗಳ ಪರಿಣತಿಯನ್ನು ಪಡೆದು ಆ ಮುಖೇನ ಸಂಪೂರ್ಣವಾಗಿ ಯಕ್ಷಗಾನಕ್ಕೆ ತನ್ನನ್ನು ಅರ್ಪಿಸಿಕೊಂಡರು, ಸಮರ್ಪಿಸಿಕೊಂಡರು.
1975 ರಿಂದ 78ರ ಮೂರು ವರ್ಷ ಕಾರಂತರ ಗರಡಿಯಲ್ಲಿ ಪಳಗಿ ತದನಂತರ 1979ರಲ್ಲಿ ಬಡಗು ತಿಟ್ಟಿನ ಅಂದಿನ ಹಾಗೂ ಇಂದಿನ ಪ್ರಸಿದ್ಧವಾದ ಅನಂತಪದ್ಮನಾಭ ಕೃಪಾ ಪೋಷಿತ ಯಕ್ಷಗಾನ ಮೇಳ, ಪೆರ್ಡೂರು ಇದರೊಂದಿಗೆ ನಂಟು ಬೆಳೆಸಿಕೊಂಡು ಕಾಲಕ್ರಮೇಣ ಆ ಸಮಯದ ಪ್ರಸಿದ್ಧ ತೆಂಕುತಿಟ್ಟಿನ ಮೇಳಗಳಾದ ಕದ್ರಿ ಮತ್ತು ಮಂಗಳಾದೇವಿ ಮೇಳಗಳೊಂದಿಗೆ ತನ್ನನ್ನು ಪರಿಚಯಿಸಿಕೊಂಡು ಕರಾವಳಿಯ ಯಕ್ಷಗಾನ ಪ್ರಿಯರ ಮನೆಮನಗಳ ಕಣ್ಮಣಿಯಾದರು. ಅಭಿಮಾನಿಗಳ ಅಭಿಮಾನದ ಭಾಗವತರಾದರು. ಉದರ ನಿಮಿತ್ತ ಕರಾವಳಿಯ ತುಳು-ಕನ್ನಡಿಗರು ಮುಂಬಯಿ ಮಹಾನಗರವನ್ನು ಕರ್ಮಭೂಮಿಯನ್ನಾಗಿ ಆರಿಸಿಕೊಂಡಂತೆ ಪೊಲ್ಯರ ನಡೆಯೂ ಮರಾಠಿ ಮಣ್ಣಿನತ್ತಲೇ ಸಾಗಿತು. ಆ ಕಾಲದಲ್ಲಿಯೇ ಪದವೀಧರರಾಗಿದ್ದ ಪೊಲ್ಯರಿಗೆ ಮುಂಬಯಿಯಲ್ಲಿ ಉದ್ಯೋಗಕ್ಕಾಗಿ ಹೆಚ್ಚೇನು ಪರಿಶ್ರಮಪಡಬೇಕಾಗಿರಲಿಲ್ಲ. ಅವರಿಗೆ ಸುಲಭವಾಗಿ ಬ್ಯಾಂಕ್ ಉದ್ಯೋಗ ಕೈಬೀಸಿ ಕರೆಯಿತು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರೂ ಪ್ರವೃತ್ತಿಯಲ್ಲಿ ಕಲಾರಾಧಕರು, ಯಕ್ಷಗಾನ ಪ್ರಿಯರು. ಆ ಕಲೆಯನ್ನು ಅಗಾಧವಾಗಿ ಪ್ರೀತಿಸುತ್ತಾ ಆ ನೆಲೆಯಲ್ಲಿ ಮುಂದುವರಿದು ಸಮಯ ಸಿಕ್ಕಾಗಲೆಲ್ಲ ಊರಿನ ಮೇಳಗಳೊಂದಿಗೆ ವರ್ಷಂಪ್ರತಿ ತಿರುಗಾಟಕ್ಕೆ ಹೋಗುವ ಪರಿಪಾಠವನ್ನು ಬೆಳೆಸಿಕೊಂಡಿದ್ದರು.
ಮುಂದಿನ ದಿನಗಳಲ್ಲಿ ಮುಂಬಯಿಯ ಮೇಳವಾದಶ್ರೀ ಗೀತಾಂಬಿಕ ಕೃಪಾಪೋಷಿತ ಯಕ್ಷಗಾನ ಮೇಳದಲ್ಲಿ ತನ್ನನ್ನು ತೊಡಗಿಸಿಕೊಂಡು ಒಟ್ಟು ಮೇಳದ ಜವಾಬ್ದಾರಿಯನ್ನು ಹೊತ್ತು ಯಕ್ಷಗಾನ ಮೇಳದ ಅಭಿವೃದ್ಧಿಗಾಗಿ ಶ್ರಮಿಸಿದರು. ಸುಮಾರು 35 ವರ್ಷಗಳಿಂದ ಗೀತಾಂಬಿಕಾ ಮೇಳದೊಂದಿಗಿದ್ದು ಆ ಮುಖೇನ ನೂರಾರು ಕಲಾವಿದರುಗಳನ್ನು ಪ್ರೋತ್ಸಾಹಿಸಿ, ಬೆಳೆಸಿ ಕಲೆಯ ಉಳಿವಿಗಾಗಿ ಶ್ರಮಿಸಿದರು. ಪೊಲ್ಯರವರು ಓರ್ವ ಕಲಾವಿದನಲ್ಲದೆ ಕಲಾಸಂಘಟಕನಾಗಿ ಒಳನಾಡಿನ ಹಲವಾರು ಮೇಳಗಳನ್ನು ಮುಂಬಯಿಗೆ ಬರಮಾಡಿಸಿಕೊಂಡು ನಗರದಾದ್ಯಂತ ಯಕ್ಷಗಾನ ರಸಿಕರಿಗೆ ಕಲೆಯ ಸಿಹಿಯ ಸವಿಯನ್ನು ಉಣಿಸಿದರು. ಅಶಕ್ತ ಕಲಾವಿದರುಗಳ ಸೇವೆಯನ್ನು ಪರಿಗಣಿಸಿ ತನ್ನ ಶಕ್ತಾÂನುಸಾರ ಅವರಿಗೆ ಧನಸಹಾಯ, ಯೋಗ್ಯತೆಗೆ ಅನುಗುಣವಾಗಿ ಸಮ್ಮಾನಿಸಿ ಕಲಾಮಾತೆಯ ಋಣ ತೀರಿಸುವ ಪ್ರಯತ್ನ ಮಾಡಿದರು.
ತನ್ನ ಬದುಕು ಕೇವಲ ಕಲೆಗಾಗಿ ಎನ್ನುವಷ್ಟರ ಮಟ್ಟಿಗೆ ಕಲೆಯೊಳಗೊಂದಾದ ಪೊಲ್ಯರನ್ನು ಅರಸಿಕೊಂಡು ಬಂದ ಪ್ರಶಸ್ತಿಗಳು ಸಾಲುಸಾಲು. ಪ್ರತಿಷ್ಠಿತ ಪ್ರಶಸ್ತಿಗಳಲ್ಲದೆ 250 ಕ್ಕೂ ಅಧಿಕ ಸಂಘ-ಸಂಸ್ಥೆಗಳು ಗೌರವಿಸಿವೆ. ಕಲಾರಸಿಕರು ಅದ್ಯಾವ ಪರಿಯಲ್ಲಿ ಪೊಲ್ಯರನ್ನು ಗೌರವಿಸುತ್ತಾರೆ, ಅಭಿಮಾನಪಡುತ್ತಾರೆ ಎನ್ನುವುದಕ್ಕೆ ಈ ಪ್ರಶಸ್ತಿಗಳೇ ಸಾಕ್ಷಿ. ಕಲೆಯನ್ನೇ ಜೀವವಾಗಿರಿಸಿಕೊಂಡಿರುವ ಪೊಲ್ಯರನ್ನು ಅರಸಿಕೊಂಡು ಇದೀಗ ಯಕ್ಷ ಧ್ರುವ ಪಟ್ಲ ಫೌಂಡೇಶನ್, ಟ್ರಸ್ಟ್ ಮುಂಬಯಿ ಘಟಕದ ವತಿಯಿಂದ ಪ್ರತಿಷ್ಠಿತ ಯಕ್ಷಧ್ರುವ ಪ್ರಶಸ್ತಿ ದೊರೆಯುತ್ತಿರುವುದು ಅಭಿಮಾನದ ಸಂಗತಿ.
ಅಶಕ್ತ ಕಲಾವಿದರ ಬದುಕಿಗೆ ಬೆಳಕಾಗಿ ಬಂದಿರುವ ಯಕ್ಷಗಾನ ಭಾಗವತಿಕೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಪಟ್ಲ ಸತೀಶ್ ಶೆಟ್ಟಿ ಅವರ ಕನಸಿನ ಕೂಸು ಯಕ್ಷಧ್ರುವ ಪಟ್ಲ ಫೌಂಡೇಶನ್. ತನ್ಮೂಲಕ ಅನೇಕ ಕಲಾವಿದರ ಆಶಾಕಿರಣವಾಗಿ ಈ ಸಂಸ್ಥೆ ಮೂಡಿ ಬರುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಟ್ರಸ್ಟ್‌ನ ವತಿಯಿಂದ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದು ಇಂದು ನಡೆಯಲಿರುವ ಪಟ್ಲ ಸಂಭ್ರಮದಲ್ಲಿ ಪೊಲ್ಯ ಲಕ್ಷಿ$¾àನಾರಾಯಣ ಶೆಟ್ಟಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆಯುತ್ತಿರುವುದು ಶ್ಲಾಘನೀಯ ಅಂಶ. ಯಾವುದೇ ಪ್ರಶಸ್ತಿ ಸಮ್ಮಾನಗಳು ಅವರನ್ನು ಅರಸಿಬಂದರೂ ಅವರ ನುಡಿ ಮತ್ತು ನಡತೆ, ನಮೃತೆ, ವಿನಯತೆಯಿಂದ ಶೋಭಿಸುತ್ತಿರುವ ಅವರು ನಿಜವಾಗಿಯೂ ಮುಂಬಯಿ ತುಳು-ಕನ್ನಡಿಗರ ಹೆಮ್ಮೆ.
ಪೊಲ್ಯರು ಶಿವರಾಮ ಕಾರಂತರೊಂದಿಗಿನ ಒಡನಾಟ, ಅವರ ಶಿಸ್ತುಬದ್ಧ ತರಬೇತಿಯಿಂದಾಗಿ ನಾನಿವತ್ತು ಈ ಪರಿ ಬೆಳೆಯಲು ಕಾರಣ ಎಂದು ವಿನಮ್ರವಾಗಿ ಸ್ಮರಿಸುತ್ತಾರೆ. ಹಾಗೆಯೇ ವಿದ್ವಾನ್ ದಾಮೋದರ್ ಮಂಡೆಚ್ಚರವರು ತೆಂಕುತಿಟ್ಟಿನಲ್ಲಿ ನನ್ನ ಬೆಳೆವಣಿಗೆಗೆ ಕಾರಣಕರ್ತರು. ಜಾಗತಿಕರಣದ ಈ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳು, ಅಸಂಮಂಜಸ ಮನೋರಂಜನ ಕಾರ್ಯಕ್ರಮಗಳು ಕಲೆ ಮತ್ತು ಮನುಷ್ಯ ಸಂಬಂಧಗಳ ನಡುವಿನ ಕೊಂಡಿಯನ್ನು ಕಳಚುತ್ತಿವೆ ಎಂಬ ನೋವು ಪೊಲ್ಯರನ್ನು ಅಗಾಧವಾಗಿ ಕಾಡುತ್ತಿವೆ. ಸಾಂಸ್ಕೃತಿಕ ನೆಲೆಗಟ್ಟನ್ನು ಭದ್ರಗೊಳಿಸಲು ಜಾಗತಿಕ ನೆಲೆಯಲ್ಲಿ ಕಲೆಯನ್ನು ಬೆಳೆಸಬೇಕಾದಲ್ಲಿ ಯಕ್ಷಗಾನದ ಉಳಿವಿಗೆ ಯುವಜನಾಂಗ ಶ್ರಮಪಟ್ಟಲ್ಲಿ ಮಾತ್ರ ಕಲೆಯ ಮೆರುಗು ಮತ್ತು ಕಲೆಯ ಜೀವಂತಿಕೆ ಹೆಚ್ಚಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.
ಮುಂದಿನ ದಿನಗಳಲ್ಲಿ ಈ ಕಲೆ ಶತಮಾನದಾಚೆಗೂ ಉಳಿಯಲಿ. ಈ ಕಲೆಯಿಂದಾಗಿ ಭಾಷೆ ಹಾಗೂ ಸಾಂಸ್ಕೃತಿಕ ರಂಗ ಬೆಳೆಯಲಿ ಎಂಬುದೇ ಅವರ ಕಳಕಳಿ. ಇಲ್ಲಿ ಅವರಿಗೆ ಕಲೆಯ ಬಗೆಗಿನ ಕಾಳಜಿ ಎದ್ದು ಕಾಣುತ್ತದೆ. ಆದರದಿಂದ ಹಾಡಿ, ಆಡಿ ತೋರಿಸುವ, ಆದರದಿಂದ ಕೇಳಿ ನೋಡಿ ಆನಂದಿಸುವ ಒಂದು ದಿವ್ಯ ಕಲೆ ಯಕ್ಷಗಾನ. ಈ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಹೆಮ್ಮೆಯ ಕಲಾವಿದ ನಾದಲೋಲ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರನ್ನು ಇಂತಹ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬರಲಿ. ಭಗವಂತನು ಇವರಿಗೆ ನೂರ್ಕಾಲ ಆಯುರಾರೋಗ್ಯಭಾಗ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಸಮಸ್ತ ತುಳು-ಕನ್ನಡಿಗರ ಪರವಾಗಿ ಅಭಿನಂದನೆಗಳು.
ಪೇತ್ರಿ ವಿಶ್ವನಾಥ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.