ರಮೇಶರೂ, ಸಸ್ಯಸಂಕುಲದ ನರ್ಸರಿಯೂ…
Team Udayavani, Aug 14, 2017, 6:20 AM IST
ಕಳೆದ ವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ರಾಣಿ ಸರ್ಕಲ್ ದಾಟಿ, ತೇಜ ನರ್ಸರಿ ಮತ್ತು ಫಾರ್ಮ್ ತಲುಪಿದಾಗ ಸಂಜೆ ನಾಲ್ಕು ಗಂಟೆ. ಅಲ್ಲಿ ಎತ್ತ ನೋಡಿದರತ್ತ ಪ್ಲಾಸ್ಟಿಕ್ ಕವರುಗಳಲ್ಲಿ ಜೋಡಿಸಿಟ್ಟ ಸಾವಿರಾರು ಗಿಡಗಳು. ಜೊತೆಗೆ ಹಣ್ಣುಗಳು ನೇತಾಡುತ್ತಿದ್ದ ವಿವಿಧ ಹಣ್ಣಿನ ಮರಗಳು.
ಕಲ್ಲುಬೆಂಚಿನಲ್ಲಿ ಕುಳಿತಿದ್ದ ನರ್ಸರಿಯ ರೂವಾರಿ ಶಿವನಾಪುರ ರಮೇಶ್, ಬನ್ನಿ, ಬನ್ನಿ ಎನ್ನುತ್ತಿದ್ದಂತೆ ಪಕ್ಕದ ಕಲ್ಲುಬೆಂಚಿನಲ್ಲಿ ಕುಳಿತು ಮಾತಿಗಾರಂಭಿಸಿದೆ. “ಮೂವತ್ತು ವರುಷವಾಯಿತು, ನಾನು ಇಲ್ಲಿಗೆ ಬಂದು. ಇಲ್ಲಿರುವ ಒಂದೊಂದು ಮರವೂ ನಾನು ನೆಟ್ಟು ಬೆಳೆಸಿದ್ದು. ಇದು ಸರಕಾರದಿಂದ ಅಕ್ವಾಯರ್ ಆಗುತ್ತಿತ್ತು. ಆದರೆ ಇಲ್ಲಿದ್ದ ಮದರ್ ಪ್ಲಾಂಟ್‌ಗಳಿಂದಾಗಿ ಉಳಿಯಿತು. ನಾನು ಈ ಹಂತಕ್ಕೆ ಬರಲಿಕ್ಕೆ ಕಾರಣ ಅವೇ ಮರಗಳು’ ಎಂದು ತೇಜ ನರ್ಸರಿ ಮತ್ತು ಫಾಮ್ಸ್ ಉಳಿದು ಬೆಳೆದ ಕತೆ ಶುರುವಿಟ್ಟರು.
ಮಾತಾಡುತ್ತಾ ಅಲ್ಲೇ ಪಕ್ಕದ ದಪ್ಪ ರುದ್ರಾಕ್ಷಿ ಹಲಸು ಮರದಿಂದ ತೆಗೆಸಿದರೊಂದು ಹಲಸಿನ ಹಣ್ಣು. ಅದನ್ನು ಸೀಳಿ, ನನಗೂ, ಜೊತೆಗಿದ್ದ ಹರಿಪ್ರಸಾದ ನಾಡಿಗರಿಗೂ ಹಲಸಿನ ತೊಳೆ ಬಿಡಿಸಿ ಕೊಡುತ್ತಾ ಹೋದಂತೆ, ಶಿವನಾಪುರ ರಮೇಶರ (58) ಮಾತಿನಲ್ಲಿ ನರ್ಸರಿಯ ಕತೆ ಬಿಚ್ಚಿಕೊಳ್ಳುತ್ತಾ ಸಾಗಿತು. ಅನಂತರ ಬನ್ನಿ, ನರ್ಸರಿ ನೋಡೋಣ ಎಂದು ಕರೆದೊಯ್ದರು. ಇಲ್ಲಿರೋದೆಲ್ಲ ಹಣ್ಣಿನ ಗಿಡಗಳು. ಅಲ್ಲಿರೋದು ಹಲಸಿನ ಗಿಡಗಳು. ಇಲ್ಲಿ ನೋಡಿ ಚಕ್ಕೋತದ ಗಿಡಗಳು. ಇದು ಕೆಂಪು ಸೀತಾಫಲ ಮರ. ಅದು ಸಿಹಿಹುಣಿಸೆ ಮರ. ಅದು ನೋಡಿ, ನಾಗಚಂದ್ರ ಹಲಸಿನ ಮರ ಎಂದು ತೋರಿಸುತ್ತಾ ನರ್ಸರಿ ಸುತ್ತಾಡಿಸಿದರು.
ಅದೊಂದು 188 ವಿವಿಧ ಬಗೆಯ ಸಸ್ಯಗಳು ತುಂಬಿದ ಅಪರೂಪದ ಸಸ್ಯಲೋಕ. ಅಲ್ಲಿವೆ 25 ಮಾವಿನ ತಳಿಗಳ ಸಸಿಗಳು: ರತ್ನಗಿರಿ (ಅಲ್ಫಾನ್ಸೋ), ಅಪ್ಪೆಮಿಡಿ, ಮಲ್ಲಿಕಾ, ಕೇಸರ್, ರಸಪುರಿ, ದಶೇರಾ, ಆಮ್ರಪಾಲಿ, ತೋತಾಪುರಿ, ನೀಲಂ, ಮಲಗೋವಾ, ಪೂರ್ಣಿಮಾ ಇತ್ಯಾದಿ. ಹಲಸಿನ 18 ತಳಿಗಳ ಸಸಿಗಳು: ಲಾಲ್-ಬಾಗ್ ಮಧುರ, ಸರ್ವಋತು, ಮೇಣರಹಿತ, ಬೀಜರಹಿತ, ರುದ್ರಾಕ್ಷಿ, ಕೆಂಪುರುದ್ರಾಕ್ಷಿ, ಚಂದ್ರ, ಭೈರಚಂದ್ರ, ಸ್ವರ್ಣ, ಮಾಂಕಾಳೆ ರೆಡ್, ಥೈಲ್ಯಾಂಡ್, ಇತ್ಯಾದಿ. ಹಾಗೆಯೇ ನೇರಳೆಯ 14 ತಳಿಗಳು, ನಿಂಬೆಯ 20 ತಳಿಗಳು, ಸೀಬೆಯ 11 ತಳಿಗಳು, ಸೀತಾಫಲ, ರಾಮಫಲ, ಲಕ್ಷ್ಮಣಫಲ, ಪಪ್ಪಾಯಿ, ನಾಡಬಾದಾಮಿ, ಅಂಜೂರ, ಅಖೊಟ್, ಪ್ಲಮ…, ಪೀಚ್, ಬಾರೆ, ದಾಳಿಂಬೆ, ಸ್ಟ್ರಾಬೆರಿ, ಲಿಚ್ಚೀ, ಖರ್ಜೂರ, ರಾಂಬುಟಾನ್, ಪುಲೋಸಾನ್, ಮಿರಾಕಲ್, ಡ್ರಾಗನ್, ಡುರಿಯನ್, ಮ್ಯಾಂಗೋಸ್ಟೀನ್, ನಾಲ್ಕು ವಿಧದ ಚೆರಿಗಳು, ಧಾರೆಹುಳಿ, ಪುನರ್-ಪುಳಿ, ಜೀಗುಜ್ಜೆ, ಬೆಣ್ಣೆಹಣ್ಣು, ಬೇಲ, ಬೆಟ್ಟದ ನೆಲ್ಲಿ, ತೆಂಗು, ಅಡಿಕೆ, ತೇಗ, ಶ್ರೀಗಂಧ, ರಕ್ತಚಂದನ, ಸಿಮರೂಬಾ, ಎಲ್ಲ ಸಾಂಬಾರ ಪದಾರ್ಥಗಳು, ಬಗೆಬಗೆಯ ಹೂಗಳು – ಇವೆಲ್ಲದರ ಗಿಡಗಳು ಅಲ್ಲಿ ಲಭ್ಯ.
ಪ್ರತಿ ತಿಂಗಳೂ ಶಿವನಾಪುರ ರಮೇಶ್ ಮಾರುವ ಗಿಡಗಳು ಸಾವಿರಾರು. ನಾವು ಮಾತನಾಡುತ್ತಿದ್ದಾಗಲೇ ಐದಾರು ಜನರು ಬಂದು ಗಿಡಗಳನ್ನು ಖರೀದಿಸಿ ಒಯ್ದರು. ಅ ಸಂದರ್ಭದಲ್ಲಿ ರಮೇಶ್ ಹೇಳಿದ ಮಾತು, ಸಾವಿರಾರು ಜನರು ನನ್ನ ನರ್ಸರಿಯಿಂದ ಗಿಡ ಕೊಂಡು ಹೋಗಿ ನೆಟ್ಟು ಬೆಳೆಸಿದ್ದಾರೆ. ಆ ಗಿಡಗಳೆಲ್ಲ ಚೆನ್ನಾಗಿ ಬೆಳೆದು ಫಲ ಕೊಡುತ್ತಿವೆ. ಈ ಸಾಧನೆಗೆ ಮುಖ್ಯ ಕಾರಣ: ಉತ್ತಮ ಫಲ ನೀಡುವ ತಾಯಿಗಿಡಗಳ ಆಯ್ಕೆ ಮಾಡಲು ಅವರು ವಹಿಸುವ ಮುತುವರ್ಜಿ. ಇನ್ನೊಂದು ಕಾರಣ: ಗಿಡಗಳನ್ನು ಬೆಳೆಸುವ ತೊಟ್ಟಿಗೆ ಅವರು ತುಂಬುವ ಮಿಶ್ರಣ: ಅದು ಕುರಿಗೊಬ್ಬರ, ಒಂದು ವರುಷ ಹಳೆಯ ಕಾಂಪೋಸ್ಟ್ ಗೊಬ್ಬರ, ಕೆಂಪುಮಣ್ಣು ಮತ್ತು ಹಿಂಡಿ – ಇವು ನಾಲ್ಕರ ಮಿಶ್ರಣ.
ಅವರಿಂದ ಗಿಡಗಳನ್ನು ಖರೀದಿಸಿದ್ದ ರೈತರೊಬ್ಬರು ಬಂದರು. ತಮ್ಮೂರಿನಲ್ಲಿ ಮಳೆಯೇ ಬಂದಿಲ್ಲ, ಆ ಗಿಡಗಳನ್ನು ಯಾವಾಗ ನೆಡುವುದು ಎಂದು ಕೇಳಿದರು. ಅವರನ್ನು ಕೂರಿಸಿಕೊಂಡು, ಗಿಡ ನೆಡುವ ಪಾಠ ಶುರು ಮಾಡಿದರು ರಮೇಶ್: ನೆಡಲಿಕ್ಕಾಗಿ ಗಿಡ ಒಯ್ದವರು ಮೊದಲನೇ ವರ್ಷ ಮಳೆಯನ್ನ ನಂಬಿಕೊಂಡು ಕೂರಬಾರದು. ನೆಟ್ಟ ಗಿಡಗಳಿಗೆ ನೀರು ಹಾಕಲು ವ್ಯವಸ್ಥೆ ಮಾಡಿಕೊಳ್ಳಲೇ ಬೇಕು. ಹೊಂಡ ಮಾಡಿ, ಗೊಬ್ಬರ ಹಾಕಿ ಸರಿಯಾದ ಸೀಜನ್ ಶುರು ಆಗ್ತಿದ್ದಂಗೆ ಗಿಡ ನೆಡಬೇಕು. ಹೊಸಗಿಡ ನೆಡಲಿಕ್ಕೆ ವರುಷದಲ್ಲಿ ಮೂರು ಸೀಸನ್ ಇರೋದು. ಮೊದಲನೆಯದು ಜನವರಿ 15ರಿಂದ 25ರವರೆಗೆ. ಇದು ಗಿಡ ನೆಡಲಿಕ್ಕೆ ಅತ್ಯುತ್ತಮ ಸಮಯ. ಯಾಕೆಂದರೆ, ಆಗ ದಿನದಿಂದ ದಿನಕ್ಕೆ ಬಿಸಿಲು ಮತ್ತು ಹಗಲು ಜಾಸ್ತಿಯಾಗ್ತಾ ಹೋಗ್ತದೆ. ಹಾಗಾಗಿ, ನೀರು ಹಾಕ್ತಾ ಇದ್ರೆ ನೆಟ್ಟ ಗಿಡ ಚೆನ್ನಾಗಿ ಬೆಳೀತದೆ. ಎರಡನೇ ಸೀಸನ್ ಏಪ್ರಿಲ… 25ರಿಂದ ಮೇ 10ರ ವರೆಗೆ. ಆಗ ಭರಣಿ ಮಳೆ ಬಂದೇ ಬರ್ತದೆ. ನೆಟ್ಟ ಗಿಡಗಳು ಒಂದು ತಿಂಗಳು ಚೆನ್ನಾಗಿ ಬೆಳೀಲಿಕ್ಕೆ ಆ ಮಳೆ ನೀರು ಸಾಕು. ಕರಾವಳಿ ಹೊರತಾಗಿ ಉಳಿದ ಪ್ರದೇಶದವರಿಗೆ ಮೂರನೇ ಸೀಸನ್ ಜುಲೈ ತಿಂಗಳು. ಆಗ ಮಳೆಗಾಲ ಶುರು ಆಗಿರ್ತದೆ. ನೆಟ್ಟ ಗಿಡಗಳು ಬೇರು ಬೆಳೆಸಿ ಬೆಳೀತವೆ. ಗಿಡ ನೆಟ್ಟ ಮೊದಲನೇ ವರುಷ ಮಳೆ ಚೆನ್ನಾಗಿ ಬಾರದಿದ್ದರೆ ಚಿಂತೆ ಮಾಡಬೇಕಾಗಿಲ್ಲ. ವಾರಕ್ಕೆ ಎರಡು ಮೂರು ಸಲ ಸ್ವಲ್ಪ ನೀರು ಹಾಕಿದರೆ ಸಾಕು. ಆ ಗಿಡಗಳು ಉಳೀತವೆ. ಯಾಕೆಂದರೆ ನೆಡುವಾಗ ಗೊಬ್ಬರ ಹಾಕಿದೀವಲ್ಲಾ, ಅದರ ಬಲದಿಂದ ಆ ಗಿಡಗಳು ನಿಧಾನವಾಗಿ ಬೆಳೀತವೆ. ಇದು ಗಿಡ ಖರೀದಿಸಲು ಬರುವವರಿಗೆ ಶಿವನಾಪುರ ರಮೇಶರು ನೀಡುವ ಅನುಭವದ ಪಾಠದ ಸ್ಯಾಂಪಲ್.
ಯಾವುದೇ ವಿಶ್ವವಿದ್ಯಾಲಯದಲ್ಲಿ ಸಿಗದಿರುವ ಪಾಠ. ಮರಗಿಡಗಳೊಂದಿಗೆ ಮಾತಾಡಬಲ್ಲವರಿಗೆ ಮಾತ್ರ ಇಂತಹ ಪಾಠ ಮಾಡಲು ಸಾಧ್ಯ.
ಹೀಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಲೇ ಬೆಳೆದಿದ್ದಾರೆ ರಮೇಶ್. ಪ್ರತಿದಿನ ಬೆಳಗ್ಗೆ 9ರಿಂದ 11 ಗಂಟೆ ತನಕ ಅವರ ತೋಟದಲ್ಲಿ ನಾಲ್ಕೈದು ರೈತರು ಇದ್ದೇ ಇರುತ್ತಾರೆ.
ಅವರು ಪ್ರಶ್ನೆ ಕೇಳ್ತಾರೆ, ಅವರ ಅನುಮಾನಗಳನ್ನು ಹೇಳ್ತಾರೆ. ನಾನು ನನ್ನ ಅನುಭವ ಹೇಳ್ತಾ ಉತ್ತರ ಕೊಡೋದು. ಈ ಮಾತುಕತೆಗೆ ಯಾರೂ ಬರಬಹುದು. ನಾನು ಕಂಡದ್ದನ್ನು, ತಿಳಕೊಂಡದ್ದನ್ನು ಹಂಚಿಕೊಳೆ¤àನೆ ಎನ್ನುತ್ತಾರೆ ರಮೇಶ್. ಅವರು ಇಲ್ಲಿಯವರೆಗೆ ರೈತರಿಗಾಗಿ ನಡೆಸಿದ ಒಂದು ದಿನದ ತರಬೇತಿ ಶಿಬಿರಗಳ ಸಂಖ್ಯೆ 600 ದಾಟಿದೆ. ಪ್ರತಿಯೊಂದು ತರಬೇತಿಗೆ ಹಾಜರಾದವರು ಸುಮಾರು 150 ರೈತರು.
ಈಗ ಕೆಲವು ವರ್ಷಗಳಿಂದ, ಕರ್ನಾಟಕದ ಬೇರೆಬೇರೆ ಪ್ರದೇಶಗಳ ರೈತರಿಗೆ ಪ್ರತ್ಯೇಕ ತರಬೇತಿಗಳನ್ನು ನಡೆಸುತ್ತಿದ್ದಾರೆ (ತಲಾ 25 -30 ರೈತರ ತಂಡಗಳಲ್ಲಿ) – ಉತ್ತರ ಕರ್ನಾಟಕ, ದಾವಣಗೆರೆ, ಮಲೆನಾಡು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಪ್ರತ್ಯೇಕ ತಂಡಗಳಲ್ಲಿ ಬರುತ್ತಿದ್ದಾರೆ.
ಈಗ ರೈತರು ಮಾತಾಡುವುದೇ ಬೆಳೆಗಳ ವಿಷಯ. ಹೆಚ್ಚು ಲಾಭ ಮಾಡಿಕೊಳ್ಳಲಿಕ್ಕೆ ಆ ಬೆಳೆ ಆದೀತಾ, ಈ ಬೆಳೆ ಆದೀತಾ ಎಂಬುದೇ ಅವರ ಚಿಂತೆ. ಮಣ್ಣು ಹೇಗಿದೆ, ಹೇಗಿರಬೇಕು ಅಂತ ಚಿಂತೆ ಮಾಡುವವರು ಎಲ್ಲಿದ್ದಾರೆ ಹೇಳಿ? ಮಣ್ಣು ಚೆನ್ನಾಗಿದ್ದರೆ ತಾನೇ ಬೆಳೆ ಚೆನ್ನಾಗಿ ಬೆಳೆಯೋದು? ಮಣ್ಣನ್ನು ಫಲವತ್ತು ಮಾಡುವ ಯಾವ ಪ್ರಯತ್ನವನ್ನೂ ಹೆಚ್ಚಿನ ರೈತರು ಮಾಡುತ್ತಿಲ್ಲ. ದುಡ್ಡು ಕೊಟ್ಟು ತಂದ ರಾಸಾಯನಿಕ ಗೊಬ್ಬರ ಮತ್ತು ವಿಷಗಳನ್ನು ಹೊಲಕ್ಕೆ, ತೋಟಕ್ಕೆ ಸುರಿದರೆ ಒಳ್ಳೇ ಫಸಲು ಬರುತ್ತದೆ ಅಂದುಕೊಂಡಿದ್ದಾರೆ. ಆದರೆ, ಅದರಿಂದಾಗಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಎರೆಹುಳಗಳು ಸತ್ತು ಹೋಗುತ್ತವೆ; ಮಣ್ಣು ಜೀವಂತವಾಗಿ ಉಳಿಯೋದಿಲ್ಲ. ಅಂತಹ ಮಣ್ಣಿನಿಂದ ಎಂತಹ ಬೆಳೆ ಬಂದಿತು? ಎಂದು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ ಶಿವನಾಪುರ ರಮೇಶ್. ಆರಂಭದಲ್ಲಿ ನಾನೂ ರಾಸಾಯನಿಕಗಳನ್ನು ಮಣ್ಣಿಗೆ ಸುರಿಯುತ್ತಿದ್ದೆ ಎನ್ನುವ ರಮೇಶ್, ಆ ವಿಷಗಳ ಮಾರಕ ಪರಿಣಾಮಗಳು ಅರ್ಥವಾದ ನಂತರ ಯಾವತ್ತೂ ಅವನ್ನು ತನ್ನ ತೋಟಕ್ಕೆ ಹಾಕಿಲ್ಲ ಎಂದು ಹೇಳಲು ಮರೆಯೋದಿಲ್ಲ. ತಮ್ಮ ಈ ಎಲ್ಲ ಪ್ರಯೋಗಗಳಿಗೂ ಪತ್ನಿ ಸುಶೀಲಾ ಬೆಂಬಲವಾಗಿ ನಿಂತದ್ದನ್ನೂ ಹೇಳುತ್ತಾರೆ ರಮೇಶ್.
ದೇವನಹಳ್ಳಿ ಚಕ್ಕೋತ ತಳಿಯನ್ನು ಜತನದಿಂದ ಉಳಿಸಿ, ಜನಪ್ರಿಯಗೊಳಿಸುವಲ್ಲಿ ಶಿವನಾಪುರ ರಮೇಶರ ಕೊಡುಗೆ ದೊಡ್ಡದು. ಹಕ್ಕಿಗಳು ಮೊಟ್ಟೆಯಿಟ್ಟು ಮರಿ ಮಾಡಲು ಅನುಕೂಲವಾಗಲಿ ಎಂದು ತಮ್ಮ ತೋಟದಲ್ಲಿ ಹಲವಾರು ಗಿಡಮರಗಳನ್ನು ಅವುಗಳ ಪಾಡಿಗೆ ಬಿಟ್ಟು ಬಿಟ್ಟಿದ್ದಾರೆ ರಮೇಶ್.
ಅಂದು ಮುಸ್ಸಂಜೆ ಬೀಳ್ಕೊಡುವಾಗ ಶಿವನಾಪುರ ರಮೇಶ್ ಹೇಳಿದ ಮಾತು: ರೈತ ಯಾವತ್ತೂ ಕೈಯೊಡ್ಡಬಾರದು. ಆತ ಯಾವತ್ತೂ ಕೊಡುವವನಾಗಬೇಕು. ಆಗಲೇ ರೈತನಿಗೆ ಗೌರವ. ಇದು, ಮಣ್ಣಿನ ಮಕ್ಕಳೆಲ್ಲರೂ ತಮ್ಮೆದೆಯಲ್ಲಿ ಬಿತ್ತಿಕೊಳ್ಳಬೇಕಾದ ಮಾತು ಅಂದರು. (ಸಂಪರ್ಕ: 9845529324)
– ಅಡ್ಡೂರು ಕೃಷ್ಣ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.