ಸಿಕ್ಕಿದ ಭೂಮಿಯನ್ನು ದಾನ ಮಾಡಿದ ಸ್ವಾತಂತ್ರ್ಯ ಹೋರಾಟಗಾರ
Team Udayavani, Aug 15, 2017, 9:06 PM IST
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ಸರಕಾರ ಭೂಮಿಯನ್ನು ನೀಡುತ್ತಿತ್ತು. ಈ ಭೂಮಿಯನ್ನು ವಿನೋಬಾ ಬಾವೆಯವರ ಭೂದಾನ ಚಳವಳಿಗೆ ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರ ಉಡುಪಿಯ ಐರೋಡಿ ರಾಮದಾಸ ಪೈಯವರನ್ನು ಸ್ವಾತಂತ್ರ್ಯೋತ್ಸವದಲ್ಲಿ ಸ್ಮರಿಸಲಾಗುತ್ತಿದೆ.
ಉಡುಪಿ: 1909 ರಲ್ಲಿ ಜನಿಸಿದ ರಾಮದಾಸ್ ಪೈಯವರು ಬದುಕಿದ್ದು ಕೇವಲ 50 ವರ್ಷ. 1959 ರಲ್ಲಿ ಅವರು ನಿಧನ ಹೊಂದಿದರು. ಆದರೆ ಈ 50 ವರ್ಷಗಳಲ್ಲಿ ಅವರು ಬದುಕನ್ನು ಸಾರ್ಥಕಪಡಿಸಿಕೊಂಡದ್ದು ದೇಶವಿಮೋಚನೆ ಹೋರಾಟ, ಅದಕ್ಕಾಗಿ ಸಿಕ್ಕಿದ ಭೂಮಿಯನ್ನು ದಾನ ಮಾಡುವ ಮೂಲಕ. ದೇವತಾರ್ಚನೆ ಸಾಮಗ್ರಿಗಳ ವ್ಯಾಪಾರಿ ಐರೋಡಿ ಪೈ ಕುಟುಂಬದವರು ಉಡುಪಿಗೆ ಬರುವ ಮುನ್ನ ವಿವಿಧ ಕಡೆ ನಡೆಯುವ ಜಾತ್ರೆಗಳಲ್ಲಿ ದೇವತಾರ್ಚನೆ ಸಾಮಗ್ರಿಗಳನ್ನು ಮಾರುತ್ತಿದ್ದರು. ಉಡುಪಿಯಲ್ಲಿ ನೆಲೆನಿಂತ ಬಳಿಕ ಆ ಕಾಲದಲ್ಲಿ ಇದ್ದದ್ದು ಮೂರೇ ಪಾತ್ರೆಯ ಅಂಗಡಿಗಳು, ಮೂರೂ ರಥಬೀದಿಯಲ್ಲಿ. ಇವು ಮೂರೂ ರಾಮದಾಸ ಪೈ ಅಣ್ಣತಮ್ಮಂದಿರದು. ಅನಂತೇಶ್ವರ ದೇವಸ್ಥಾನಕ್ಕೆ ತಾಗಿಕೊಂಡು ಇದ್ದದ್ದು ರಾಮದಾಸ ಪೈಯವರದ್ದಾದರೆ, ಎದುರಿಗೆ ಇದ್ದದ್ದು ರಾಧಾಕೃಷ್ಣ ಪೈಯವರದು, ಸಿಂಡಿಕೇಟ್ ಬ್ಯಾಂಕ್ ಕೆಳಗೆ ಇದ್ದದ್ದು ರಮಾನಾಥ ಪೈಯವರದ್ದು. ರಮಾನಾಥ ಪೈಯವರ ಅಂಗಡಿ ಈಗ ಸ್ಥಳಾಂತರಗೊಂಡಿದೆ. ದೇವತಾರ್ಚನೆ ಸಾಮಗ್ರಿಗಳ ವ್ಯಾಪಾರಿ ಮತ್ತು ಎರಕದ ವಸ್ತುಗಳ ತಯಾರಕರು ಹೀಗೆ ಎರಡು ಬಗೆಯ ವ್ಯಾಪಾರವನ್ನು ನಡೆಸುತ್ತಿದ್ದದ್ದು ರಾಮದಾಸ್ ಪೈಯವರು ಮಾತ್ರ.
ಲಾವಣಿ ಹಾಡಿ ಜನಜಾಗೃತಿ
1940ರಲ್ಲಿ ಮಹಾತ್ಮಾ ಗಾಂಧಿಯವರ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ರಾಮದಾಸ್ ಪೈಯವರು ಉಪ್ಪಿನ ಸತ್ಯಾಗ್ರಹದ ವೇಳೆ ಪೊಲೀಸರ ಲಾಠಿ ಏಟು ತಿಂದವರು. ಪಾನನಿಷೇಧ ಚಳವಳಿ ಸಂದರ್ಭ ಶರಾಬು ಅಂಗಡಿ ಎದುರು ಸಂಗಡಿಗರ ಜತೆ ಸೇರಿ ‘ಪರಡೆ ಕಲಿ ಗಂಗಸರ ಕೆಬಿತ ಮೊರು ದೆರ್ತ್ ಕೊರ್ಪೆ| ಪರಡೆ ಕಲಿ ಗಂಗಸರೊ’ ಎಂದು ಲಾವಣಿ ಹಾಡಿ ಜನಜಾಗೃತಿಗೊಳಿಸುತ್ತಿದ್ದರು. ಗಾಂಧೀಜಿಯವರ ಕುರಿತೂ ಲಾವಣಿ ಹಾಡಿ ಜನರನ್ನು ಒಗ್ಗೂಡಿಸುತ್ತಿದ್ದರು. ಗಾಂಧೀಜಿಯವರ ಸ್ವಚ್ಛತಾ ಆಂದೋಲನದಲ್ಲಿ ಖದ್ದರ್ ಶ್ರೀನಿವಾಸ ಪೈ, ರಾಮ ರಾವ್ ಜೊತೆ ಸೇರಿ ಸ್ವತಃ ಕಸಬರಿಕೆ ಹಿಡಿದು ಗುಡಿಸುತ್ತಿದ್ದರು. ಇವರ ಸ್ವಾತಂತ್ರ್ಯ ಹೋರಾಟವನ್ನು ಕಂಡ ಬ್ರಿಟಿಷರು ಕೇರಳದ ಕಣ್ಣೂರು ಜೈಲಿಗೆ ಹಾಕಿದರು. ಅಲ್ಲಿ ಬ್ರಿಟಿಷ್ ಸೈನಿಕರು ಪೆಟ್ಟು ಹೊಡೆಯುವಾಗ ಭಾರತದ ಸೈನಿಕರು ಸಹಾಯ ಮಾಡುತ್ತಿದ್ದರಂತೆ.
ಭೂಮಿ ಇಲ್ಲದವರಿಗೆ ದಾನ
ಸ್ವಾತಂತ್ರ್ಯ ದೊರಕಿದ ಬಳಿಕ ಸ್ವಾತಂತ್ರ್ಯ ಹೋರಾಟಗಾರರಿಗೆ ಹತ್ತು ಎಕ್ರೆ ಜಮೀನು ಸಿಕ್ಕಿತು. ರಾಮದಾಸ ಪೈಯವರಿಗೂ ತೆಂಕನಿಡಿಯೂರಿನ ಲಕ್ಷ್ಮೀನಗರದಲ್ಲಿ ಜಾಗ ಸಿಕ್ಕಿತು. ಆದರೆ ವಿನೋಬಾ ಬಾವೆಯವರ ಭೂದಾನ ಚಳವಳಿಗೆ ಓಗೊಟ್ಟು ಈ ಜಾಗವನ್ನು ಭೂಮಿ ಇಲ್ಲದವರಿಗೆ ದಾನ ಮಾಡಿದರು. ಇದು ಮಕ್ಕಳಿಗೆ ಗೊತ್ತಾದದ್ದೇ 1990ರ ದಶಕದ ಕೊನೆಯಲ್ಲಿ. ಮಲ್ಪೆ ಶಂಕರನಾರಾಯಣ ಸಾಮಗರ ಸಮ್ಮಾನಕ್ಕಾಗಿ ರಾಮದಾಸ ಪೈಯವರ ಪುತ್ರ ಐರೋಡಿ ಸಹನಶೀಲ ಪೈಯವರು ಕರೆಯಲು ಹೋದಾಗ ಸಾಮಗರು ಈ ವಿಷಯವನ್ನು ಹೇಳಿದರು. ‘ದೊಡ್ಡ ಸಾಮಗರು, ನಿಟ್ಟೂರಿನ ಜಗ್ಗು ಶೆಟ್ಟಿ, ಸಮಕಾಲೀನ ರಝಾಕ್ ಸಾಹೇಬ್ ಮೊದಲಾದವರ ಮೂಲಕ ತಂದೆಯ ವಿಷಯ ತಿಳಿದುಬಂತು. ಅವರು ನಿಧನ ಹೊಂದುವಾಗ ನಾವು ಚಿಕ್ಕವರಾದ ಕಾರಣ ಏನೂ ತಿಳಿದಿರಲಿಲ್ಲ. ಮನೆಯಲ್ಲಿ ಚರಕದ ಮೂಲಕ ನೂಲು ತೆಗೆಯುತ್ತಿದ್ದರು. ಲಾವಣಿಯನ್ನು ತಾಯಿ ಹೇಳಿಕೊಟ್ಟರು’ ಎನ್ನುತ್ತಾರೆ ಸಹನಶೀಲ ಪೈ. ತಂದೆಯವರ ದೇವತಾರ್ಚನೆಯ ವಸ್ತುಗಳ ತಯಾರಿ, ಎರಕದ ಉದ್ಯೋಗವನ್ನು ಅಂಬಾಗಿಲಿನಲ್ಲಿ ಐರೋಡಿ ಅಕಲಂಕ ಪೈ ಈಗ ನಡೆಸುತ್ತಿದ್ದಾರೆ.
ವಿಧವಾ ವಿವಾಹ ಜನಜಾಗೃತಿ
ರಾಮದಾಸ ಪೈಯವರು ಆರ್ಯ ಸಮಾಜದ ಜತೆಗೂ ಸೇರಿ ವಿಧವಾ ವಿವಾಹ ಜನಜಾಗೃತಿಯಲ್ಲಿ ತೊಡಗಿದ್ದರು. ಐಶಾರಾಮಿ ನಗರದ ಜೀವನವನ್ನು ಬಿಟ್ಟು ನಿಟ್ಟೂರು ದಲಿತರ ಕಾಲನಿ ಬಳಿ ಕುಲುಮೆ ಸ್ಥಾಪಿಸಿ ದಲಿತೋದ್ಧಾರಕ್ಕೆ ಗಮನ ಹರಿಸಿದರು. ಕಾಲನಿಯಲ್ಲಿ ರಾತ್ರಿ ಜಗಳ ಆದಾಗ ಎದ್ದು ಬಂದು ಸಮಸ್ಯೆ ಬಗೆಹರಿಸುತ್ತಿದ್ದರು ಎಂಬುದನ್ನು ಕಾಲನಿಯ ಹಿರಿಯ ನಿವಾಸಿ ಚಂದು ಮೇಸ್ತ್ರೀ ಸ್ಮರಿಸಿಕೊಳ್ಳುತ್ತಾರೆ.
ಸಿರಿವಂತಿಕೆ ಪ್ರದರ್ಶನಕ್ಕಾಗಿ ಅಲ್ಲ
ಸಿರಿವಂತಿಕೆ ಇದ್ದರೂ ‘ಸಿರಿವಂತಿಕೆ ಪ್ರದರ್ಶನಕ್ಕಾಗಿ ಅಲ್ಲ’ ಎಂಬ ಗಾಂಧೀಜಿಯವರ ನಡೆ – ನುಡಿಯಂತೆ ಗಂಜೀಪರಕ್ (ಖಾದಿಯ ಬನಿಯನ್, ಖಾದಿ ಪಂಚೆ) ಧರಿಸುತ್ತಿದ್ದರು. 1959ರಲ್ಲಿ ಅವರು ನಿಧನ ಹೊಂದಿದಾಗ ಸಾವಿರಾರು ಜನರು ಸೇರಿದ್ದರು ಎಂಬುದನ್ನು ಅಂಬಾಗಿಲಿನ ಎಣ್ಣೆ ಗಿರಣಿ ಮಾಲಕ ಮಾಧವ ಭಕ್ತ ನೆನಪಿಸಿಕೊಳ್ಳುತ್ತಾರೆ.
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.