ಈ ಬಾರಿಯೂ ಕೈ ಕೊಡ್ತು ಮುಂಗಾರು ಮಳೆ
Team Udayavani, Aug 17, 2017, 12:22 PM IST
ದಾವಣಗೆರೆ: ಸತತ ಎರಡು ವರ್ಷ ಬರದ ಬೇಗೆಯಲ್ಲಿ ಬೆಂದ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆ ಈ ಬಾರಿಯೂ ಬರದ ವಾತಾವರಣ ದಟ್ಟವಾಗುತ್ತಿದೆ!. ಜಿಲ್ಲೆಯಾದ್ಯಂತ ಈವರೆಗೆ ಮಳೆಯ ಕೊರತೆ, ಮಳೆಗಾಲದಲ್ಲೇ ಬಿರು ಬೇಸಿಗೆಯನ್ನೂ ಮೀರಿಸುತ್ತಿರುವ ಬಿಸಿಲ ಧಗೆ ಎಲ್ಲವೂ ಸತತ ಮೂರನೇ ವರ್ಷವೂ ಬರಗಾಲ ಖಾಯಂ ಎನ್ನುವುದರ ಮನ್ಸೂಚನೆ ನೀಡುವಂತಿದೆ. ಬರದ ಬವಣೆ, ಕುಡಿಯುವ ನೀರಿನ ಸಮಸ್ಯೆ ಎದರಿಸಲು ಈಗಿನಿಂದಲೇ ಎಲ್ಲ ರೀತಿಯಲ್ಲಿ ಸಜ್ಜಾಗಬೇಕಿದೆ.
ಈವರೆಗೆ ಮಳೆಗಾದಲ್ಲಿ ಒಮ್ಮೆ ಬಿಟ್ಟರೆ ರಭಸದ ಮಳೆಯೇ ಸುರಿದದ್ದು ಗೋಚರಿಸಲಿಲ್ಲ. ಇದನ್ನ ಸಾಬೀತು ಮಾಡಲು ಮಳೆಗಾಲದಲ್ಲೇ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರು ಪರದಾಡುತ್ತಿರುವುದು. 80ಕ್ಕೂ ಹೆಚ್ಚು ಗ್ರಾಮಗಳಿಗೆ ಈಗ ಟ್ಯಾಂಕರ್ ನೀರೇ ಆಧಾರ ಎನ್ನುವುದು ಮಳೆ ಕೊರತೆಯ
ಪ್ರತೀಕ. ಮುಂಗಾರು ಪೂರ್ವ, ನಂತರದಲ್ಲಿ ಗಟ್ಟಿ ಮಳೆ ಎನ್ನುವುದನ್ನು ಈ ಬಾರಿ ಯಾರೂ ನೋಡಲೇ ಇಲ್ಲ. ಸತತ ಎರಡು ವರ್ಷ ಮಾತ್ರವಲ್ಲದೆ ಈಗಲೂ ಹಸಿ, ಹದವಾದ ಮಳೆ ಇಲ್ಲದ ಕಾರಣ ಭೂಮಿಯ ಪಸೆಯೇ ಬತ್ತಿದೆ. ಎಲ್ಲೆಡೆ ತೇವಾಂಶದ ಕೊರತೆ ಅತೀ ಗಂಭೀರವಾಗಿದೆ.
ಭೂಮಿಯಲ್ಲಿ ತೇವಾಂಶ ಇಲ್ಲದೆ ಬಿತ್ತಿದ ಬೆಳೆ ಮೊಳಕೆಯೊಡೆಯದು, ಒಂದೊಮ್ಮೆ ಮೊಳಕೆಯೊಡೆದರೂ ಬಿಸಿಲು, ಗಾಳಿ ತಡೆಯುವ ಸ್ಥಿತಿಯಲ್ಲೇ ಇಲ್ಲ. 3-4 ಇಂಚಿನ ಮೇಲೆ ಎಲ್ಲಿಯೂ ತೇವಾಂಶವೇ ಇಲ್ಲದ ಕಾರಣ ಹರಪನಹಳ್ಳಿ, ಜಗಳೂರು ಇತರೆಡೆ ಬೆಳೆಗಳು ಮಳೆ ಕೊಂಚ ತಡವಾದರೂ
ಮುರುಟಿ ಹೋಗುತ್ತಿವೆ. ಮಳೆಯ ನಿರೀಕ್ಷೆಯಲ್ಲೇ ಬಿತ್ತಿದ್ದ ಮೆಕ್ಕೆಜೋಳ ಮೊಳಕೆಯೊಡೆಯದೇ ಅದನ್ನು ನಾಶ ಮಾಡಿ, ಮತ್ತೆ ಬಿತ್ತನೆ ಮಾಡಿದ್ದ ಬೆಳೆಯೂ ಒಣಗಿದ್ದರಿಂದ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗ್ರಾಮ ಪಂಚಾಯತಿ ಸದಸ್ಯ ಸಿದ್ದಪ್ಪ ಎಂಬುವರು ಆತ್ಮಹತ್ಯೆಗೆ ಒಳಗಾಗಿರುವುದು ಇಂದಿನ ಹಾಗೂ ಮುಂದಿನ ಭೀಕರ ಪರಿಸ್ಥಿತಿಯ ಕೈಗನ್ನಡಿ.
ಶೇ.-28 ಮಳೆ ಕೊರತೆ: ಜಿಲ್ಲೆಯಲ್ಲಿ ಈವರೆಗೆ ಮಳೆಯ ಕೊರತೆಯ ಪ್ರಮಾಣ ಹೆಚ್ಚಾಗುತ್ತಲೆ ಇದೆ. ಜುಲೈ ಅಂತ್ಯಕ್ಕೆ ಶೇ.-22 ರಷ್ಟಿದ್ದ ಮಳೆಯ ಕೊರತೆ. ಆ. 14 ರ ಅಂತ್ಯಕ್ಕೆ ಶೇ.-28 ಮುಟ್ಟಿದೆ. ಮುಂಗಾರು ಪ್ರಾರಂಭದ ನಂತರ ಯಾವುದೇ ತಿಂಗಳಲ್ಲಿ ವಾಡಿಕೆ ಮಳೆಗಿಂತ ವಾಸ್ತವ ಮಳೆಯ
ಪ್ರಮಾಣ ಹೆಚ್ಚಾದ ಉದಾಹರಣೆಯೇ ಇಲ್ಲ.
ಏಪ್ರಿಲ್‌ನಲ್ಲಿ 36 ಮಿಲಿ ಮೀಟರ್ ವಾಡಿಕೆ ಮಳೆಗೆ ಆಗಿದ್ದು 14.3 ಮಿಲಿ ಮೀಟರ್. ಮೇ ತಿಂಗಳಲ್ಲಿ 74.7 ಮಿಲಿ ಮೀಟರ್‌ಗೆ 54.7 ಮಿಲಿ ಮೀಟರ್ ಮಳೆಯಾಗಿತ್ತು. ಜೂನ್‌ನಲ್ಲಿ 76 ಮಿಲಿ ಮೀಟರ್‌ಗೆ 58 ಮಿಲಿ ಮೀಟರ್, ಜುಲೈನಲ್ಲಿ 99 ಮಿಲಿ ಮೀಟರ್‌ಗೆ 77 ಮಿಲಿ ಮೀಟರ್, ಆಗಸ್ಟ್‌ನ 42 ಮಿಲಿ ಮೀಟರ್ ಗೆ ಅ.14ರ ಅಂತ್ಯಕ್ಕೆ 30 ಮಿಲಿ ಮೀಟರ್ ಮಳೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈವರೆಗೆ ಆಗಬೇಕಿದ್ದ 334 ಮಿಲಿ ಮೀಟರ್ ಮಳೆಗೆ 239 ಮಿಲಿ ಮೀಟರ್‌ನಷ್ಟು ಮಾತ್ರ ಮಳೆಯಾಗಿದೆ.
ಕುಸಿದ ಬಿತ್ತನೆ: ದಾವಣಗೆರೆ ಜಿಲ್ಲೆಯಲ್ಲಿ ಒಟ್ಟಿರುವ 2,29,800 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಲ್ಲಿ ಬಿತ್ತನೆಯಾಗಿರುವುದು 1,89,510 ಹೆಕ್ಟೇರ್‌ನಲ್ಲಿ ಮಾತ್ರ. ಆಗಸ್ಟ್ ಎರಡನೇ ವಾರಕ್ಕೆ ಇನ್ನೂ 40,290 ಹೆಕ್ಟೇರ್ ನಲ್ಲಿ ಬಿತ್ತನೆ ಆಗಿಯೇ ಇಲ್ಲ. ಜಿಲ್ಲೆಯ ಮುಖ್ಯ ಬೆಳೆ ಮೆಕ್ಕೆಜೋಳದ ಬಿತ್ತನೆ ಅವಧಿ ಮುಗಿದಿದೆ. ಇನ್ನೇನೂ ಸಮಯ ಇರುವುದು ರಾಗಿಗೆ ಮಾತ್ರ. ಆದರೆ, ಆ ರಾಗಿ ಬಿತ್ತನೆ ಮಾಡಲಿಕ್ಕಾದರೂ ಅವಕಾಶ ಇಲ್ಲದಂತಾಗುತ್ತಿದೆ.
ದಾವಣಗೆರೆ ತಾಲೂಕಿನ 35,275 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಲ್ಲಿ ಬಿತ್ತನೆಯಾಗಿರುವುದು 29,667 ಹೆಕ್ಟೇರ್‌ನಲ್ಲಿ. ಅಂತೆಯೇ ಹರಿಹರದಲ್ಲಿ 12,350 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಲ್ಲಿ ಬಿತ್ತನೆಯಾಗಿರುವುದು ಕೇವಲ 4,794 ಹೆಕ್ಟೇರ್‌ನಲ್ಲಿ ಮಾತ್ರ. ಜಗಳೂರಿನ 44,110 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಲ್ಲಿ 32,260 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹರಪನಹಳ್ಳಿಯ 61,115 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಲ್ಲಿ 57,775 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹೊನ್ನಾಳಿಯ 36,895 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಪೈಕಿ 33,330 ಹೆಕ್ಟೇರ್‌ನಲ್ಲಿ ಬಿತ್ತನೆ
ಮಾಡಲಾಗಿದೆ. ಚನ್ನಗಿರಿಯ 40,055 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶಲ್ಲಿ 32,186 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ದಾಖಲೆಯಲ್ಲಿ ಬಿತ್ತನೆ ಪ್ರದೇಶ, ಪ್ರಮಾಣ ಗಮನಿಸಿದರೆ ಅಂತಹ ಭಾರೀ ವ್ಯತ್ಯಾಸವೇನೂ ಕಂಡು ಬರುವುದಿಲ್ಲ. ಆದರೆ, ವಾಸ್ತವ ಸ್ಥಿತಿ ದಾಖಲೆಗಿಂತಲೂ ಅತೀವ ಗಂಭೀರ. ದಾಖಲೆಯ ಆಧಾರಕ್ಕೂ ನೈಜ ಚಿತ್ರಣಕ್ಕೂ ಅಗಾಧ ವ್ಯತ್ಯಾಸ ಎಲ್ಲೆಡೆ ಕಂಡು ಬರುತ್ತಿದೆ.
ನೀರಾವರಿಯಲ್ಲೂ ಇಲ್ಲ: ಜಿಲ್ಲೆಯ 1,10, 200 ಹೆಕ್ಟೇರ್‌ನಷ್ಟು ನೀರಾವರಿ ಪ್ರದೇಶದಲ್ಲಿ ಈವರೆಗೆ ಬಿತ್ತನೆಯಾಗಿರುವುದು ಕೇವಲ 20,282 ಹೆಕ್ಟೇರ್‌ನಲ್ಲಿ ಮಾತ್ರ. ದಾವಣಗೆರೆ ತಾಲೂಕಿನಲ್ಲಿ 28,725 ಹೆಕ್ಟೇರ್‌ಗೆ 8,080 ಹೆಕ್ಟೇರ್‌ನಲ್ಲಿ, ಹರಿಹರದಲ್ಲಿ 19,650 ಹೆಕ್ಟೇರ್‌ಹೆ 1,229, ಜಗಳೂರಿನಲ್ಲಿ 8,890ಕ್ಕೆ 502 ಹೆಕ್ಟೇರ್, ಹರಪನಹಳ್ಳಿಯಲ್ಲಿ 18,885 ಹೆಕ್ಟೇರ್‌ಗೆ 6,035, ಚನ್ನಗಿರಿಯಲ್ಲಿ 15,945 ಹೆಕ್ಟೇರ್‌ಗೆ 715 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆ ಆಗಿರುವುದು ಮಳೆಯ ಕೊರತೆ ತೋರಿಸುತ್ತದೆ. ಅಂತೆಯೇ ಮುಂದಿನ ಬರಗಾಲಕ್ಕೆ ಮುನ್ನುಡಿಯಂತಿದೆ.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.