ಮಳೆ ಹನಿಗಳ ಲೀಲೆ
Team Udayavani, Aug 18, 2017, 6:25 AM IST
ಜನಪದರೆಲ್ಲ ಮಳೆನಕ್ಷತ್ರಗಳನ್ನು ಒಂದೊಂದು ನುಡಿಗಟ್ಟಿನಂತೆ ಮಳೆಯ ಪ್ರಭಾವಕ್ಕೆ ಹೋಲಿಸಿ ಹೇಳುತ್ತಿದ್ದರು. ಆದ್ರಾì ಮಳೆಗೆ ದಾರಿದ್ರ್ಯ ಹೋಗುತ್ತದೆ ಎಂದೂ, ಸ್ವಾತಿ ಮಳೆ ಬಂದರೆ ನೆಲದಲ್ಲಿ ಮುತ್ತು ಬೆಳೆಯುತ್ತದೆ, ಪುನರ್ವಸು ಮಳೆಗೆ ಹೆಣ ಎತ್ತಲು ಆಗುವುದಿಲ್ಲ , ಭರಣಿ ಮಳೆಗೆ ಬೀಜ ಬಿತ್ತಬೇಕು, ಆಶ್ಲೇಷ ಮಳೆಗೆ ಮನೆಯಲ್ಲಿ ತಿನಿಸು ಇದ್ದವನು ಹೊರಗೆ ಹೋಗಲಾರ ಇತ್ಯಾದಿಗಳು. ಇವೆಲ್ಲವೂ ಮಳೆಗಾಲ ಮಾತ್ರವೇ ಜನರ ಜೀವನದಲ್ಲಿ ಹಾಸುಹೊಕ್ಕಾದ ಪರಿ ಬೆರಗು ಮೂಡಿಸುತ್ತದೆ.
ಮಳೆಗೂ ಹಾಡಿಗೂ ಅವಿನಾಭಾವದ ಸಂಬಂಧ. ಮಳೆಯ ಹಾಡುಗಳೆಂದರೆ ಮನಸ್ಸೆಲ್ಲ ಆದ್ರìಗೊಳ್ಳುತ್ತದೆ ಜೊತೆಗೆ ಪುಳಕಗೊಳ್ಳುತ್ತದೆ. ಹಾಗೆ ನೋಡಿದರೆ, ಮಳೆಯ ನಿನಾದವೇ ಸಂಗೀತ. ಸುರಿಮಳೆಯ ಸದ್ದೇ ಕಿವಿಗೆ ನಿನಾದ. ಜಿಟಿ ಜಿಟಿ ಮಳೆಯ ರಾಗ ಇನ್ನೂ ಚಂದ. ಹೀಗಿರುವಾಗ ಮಳೆಯ ಕುರಿತು ಕವಿತೆ ಸು#ರಿಸದ ಕವಿಯೇ ಇರಲಾರ ಎಂದರೂ ತಪ್ಪಿಲ್ಲ. ಬಿದ್ದ ಹೂಗಳ ಸದ್ದು ಮಳೆಯ ರಾಗದ ನಡುವೆ ಕೇಳಿಸುತ್ತಿಲ್ಲ ! ಕಿವಿಯಿಂದ ಕಿವಿಗೆ ಮಾತು ತಲುಪುತ್ತಿಲ್ಲ. ಮಳೆಯ ರಾಗದಿಂದಾಗಿ ಎಲ್ಲ ಕಡೆಯೂ ಮನಸ್ಸಿನ ಮಾತೇ ನಡೆಯುತ್ತಿದೆ. ಮಳೆಹನಿಗಳ ಚಟಪಟ ಸದ್ದನ್ನು ಕುಳಿತು ಆಲಿಸುತ್ತಿದ್ದರೆ ಸಮಯ ಸರಿಯುವುದೇ ತಿಳಿಯುತ್ತಿಲ್ಲ. ಕ್ಷಣ ಕ್ಷಣವು ಹೊಸದಾಗಿ ಸುರಿಯುವ ಮಳೆಯ ರಾಗವು ಹೊಸತು. ಹೊಸ ರಾಗಗಳ ಆಲಾಪದೊಂದಿಗೆ ಕೂಡಿದ ಮಳೆಯ ಬಿಸುಪು ಮನಸ್ಸನ್ನು ಹೊಸ ಸೃಜನಶೀಲ ಆಲೋಚನೆಗಳತ್ತ ಕೊಂಡೊಯ್ಯುತ್ತದೆ. ಭಾವಲೋಕದ ಪುಟ್ಟ ಯಕ್ಷಿಣಿಯಂತೆ ಭಾಸವಾಗುತ್ತದೆ, ಮಳೆಯ ಭಾವಗೀತೆ. ಅನುದಿನವು ಹೊಸತನ ಮೂಡಿಸುವ ಮಳೆಹಾಡಿನ ಭಾವಯಾನದಲ್ಲಿ ದಿನವೂ ನಮಗೆಲ್ಲ ಪಯಣಿಸುವಾಸೆ. ನಡು ನಡುವೆ ಸುಳಿಯುವ ತಂಗಾಳಿ ಪದಗಳು ಮಳೆಯ ಹಾಡನ್ನು ಇನ್ನೂ ಅಂದಗೊಳಿಸುತ್ತದೆ. ವರ್ಷಧಾರೆಯ ನಾದ ನಮ್ಮನ್ನು ಇಷ್ಟು ಉನ್ಮಾದಗೊಳಿಸಿದ್ದರಿಂದ ಅದೆಷ್ಟೋ ಅದ್ಭುತವಾದ ಜಾನಪದ ಗೀತೆಗಳು, ಮಕ್ಕಳ ಹಾಡುಗಳು, ಚಲನಚಿತ್ರ ಗೀತೆಗಳು ಮತ್ತು ಭಾವಗೀತೆಗಳು ತನ್ಮನವ ತಂಪಾಗಿಸಿವೆ.
ಬಾಲ್ಯದಲ್ಲಿ ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲ /ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕೆ ನೀರಿಲ್ಲ ಎಂಬಲ್ಲಿಂದ ಪ್ರಾರಂಭವಾದ ಮಳೆಹಾಡುಗಳು ಇನ್ನು ನಿಂತಿಲ್ಲ. ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬಂತೆ ಪ್ರತಿಯೊಬ್ಬರ ತುಟಿಯಂಚಲ್ಲು ಮಳೆಹಾಡುಗಳ ವೈಭವ. ಜಾನಪದ ಗೀತೆಗಳಲ್ಲಿ ಮಾಯದಂತ ಮಳೆ ಬಂತಣ್ಣ, ಮಗದಾರ ಕೆರೆಗೆ ಹಾಡು ತುಂಬಾ ಪ್ರಸಿದ್ಧ. ಮಳೆಯ ಕುರಿತು ಇನ್ನೂ ಹಲವಾರು ಜಾನಪದ ಗೀತೆಗಳಿವೆ.
ಮಳೆ ಬರುವ ಕಾಲಕ್ಕೆ ಒಳಗ್ಯಾಕೆ ಕುಂತೇವಾ…./ಇಳೆಯೊಡನೆ ಜಳಕ ಮಾಡೋಣ/ನಾವೂನು ಮೋಡಗಳ ಕೂಡೆ ಆಡೋಣ… ಜನಪದರ ಮಳೆಹಾಡುಗಳ ವಿಚಾರಧಾರೆಗಳು ತುಂಬಾ ಅರ್ಥಪೂರ್ಣವೂ ಆಗಿರುತ್ತದೆ. ಮಕ್ಕಳ ಹಾಡುಗಳಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರೊಂದಿಗೆ, ಮಳೆಗೆ ಹೆಚ್ಚಿನ ಪ್ರಾತಿನಿಧ್ಯ. ಏಕೆಂದರೆ, ಮಳೆಯನ್ನು ಇಷ್ಟಪಡದ, ಕಾಗದದ ದೋಣಿಯನ್ನು ಬಿಡದ ಬಾಲ್ಯವೇ ಇರಲಾರದು. ಬಲು ಹೃದ್ಯವಾದ ಹಲವಾರು ಮಕ್ಕಳ ಮಳೆಗೀತೆಗಳಿವೆ. ಮಳೆ ಬಂತು ಮಳೆ ಕೊಡೆ ಹಿಡಿದು ನಡೆ/ಮಣ್ಣಿನಲ್ಲಿ ಜಾರಿ ಬಿದ್ದು ಬಟ್ಟೆ ಎಲ್ಲ ಕೊಳೆ ಈ ಹಾಡು ಎಲ್ಲ ಮಕ್ಕಳ ಬಾಯಲ್ಲಿ ಸುಲಲಿತ. ಇರುವೆ ಇರುವೆ ಕರಿಯ ಇರುವೆ ನಾನು ಜೊತೆಗೆ ಬರುವೆ/ಆಡಲಿಕ್ಕೆ ಹಾಡಲಿಕ್ಕೆ… ಈ ಪದ್ಯದಲ್ಲಿ ಮಳೆಯ ಉಲ್ಲೇಖ ಮಕ್ಕಳಿಗೆ ಕೇಳಲು ಬಲು ಆಸಕ್ತಿದಾಯಕವಾಗಿದೆ. ಮಳೆಯ ಕಾಲ ಬರುತಲಿಹುದು ನನಗೆ ಸಮಯವಿಲ್ಲ ಎಂಬುದಾಗಿ ಇದೆ. ಇಲ್ಲಿ ಮಳೆಯ ಕಾಲಕ್ಕೆ ಇರುವೆಗಳು ತಿನಿಸು ಕೂಡಿಡುವ ಕುರಿತು ಮಕ್ಕಳಿಗೆಲ್ಲ ಹೇಳಿದ ರೀತಿ ಸಮಯೋಚಿತವಾಗಿದೆ.
ಭಾವನೆಗಳನ್ನು ಸುರಿಸುವ ಭಾವಗೀತೆಗಳಿಗೆ ಮಳೆಯ ಕಾಲದಲ್ಲಿ ಹೆಚ್ಚಿನ ಕೆಲಸ. ಮಳೆಯ ಭಾವಗೀತೆಗಳಂತೂ ನಮ್ಮ ಭಾವನೆಗಳನ್ನು ಗರಿಗೆದರಿಸಿ ಉಲ್ಲಾಸದಿಂದಿರಿಸುತ್ತದೆ. ಬಿ. ಆರ್. ಲಕ್ಷ್ಮ¾ಣರಾವ್ ಬರೆದ ಬಾ ಮಳೆಯೇ ಬಾ/ಬಿಡದೆ ಬಿರುಸಾಗಿ ಬಾ/ನಲ್ಲೆಹಿಂತಿರುಗಿ ಹೋಗದಂತೆ /ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ ಎಂಥ ಅನುರೂಪವಾದ ಕಲ್ಪನೆ ಇದೆ ಇಲ್ಲಿ! ಕೇಳುವಾಗ ಸಹಜವಾಗಿ ಮನಸ್ಸು ರೋಮಾಂಚನಗೊಳ್ಳುತ್ತದೆ. ಮಳೆಯ ಕಾರಣದಿಂದ ಪ್ರೀತಿಯೋ ಅಥವಾ ಪ್ರೀತಿಯ ಕಾರಣದಿಂದಾಗಿ ಮಳೆಯೋ ಒಟ್ಟಿನಲ್ಲಿ ಅದೆಷ್ಟು ತರಹದ ಭಾವನೆಗಳು ಸುರಿಸುತ್ತವೆ ಎಂಬುದಾಗಿ ಆಶ್ಚರ್ಯವೂ ಆಗುತ್ತದೆ. ಇದು ಚಿತ್ರಗೀತೆಯಾಗಿಯೂ ಹೊರಹೊಮ್ಮಿದೆ. ಯು. ಆರ್. ಅನಂತಮೂರ್ತಿಯವರ ಮತ್ತೆ ಮಳೆ ಹೊಯ್ಯುತ್ತಿದೆ ಎಲ್ಲ ನೆನಪಾಗುತ್ತಿದೆ/ಸುಖ, ದುಃಖ, ಬಯಕೆ, ಭಯ ಒಂದೇ ಎರಡೇ? ಹೀಗೆ ಸಾಗುವ ಕವಿತೆಯಲ್ಲಿ ಸವಿನೆನಪುಗಳ ಜೊತೆಗೆ ಎಲ್ಲ ಕಹಿ ನೆನಪುಗಳು ಬಿಚ್ಚಿಕೊಳ್ಳುವುದು ಮಳೆಗಾಲದಲ್ಲಿ ಎಂಬುದಾಗಿ ನವಿರಾಗಿ ಹೇಳುತ್ತಾರೆ. ಜೊತೆಗೆ ಈ ಕವಿತೆಯು ನೆನಪುಗಳನ್ನು ಭಾವುಕಗೊಳಿಸುತ್ತದೆ.
ಬೇಂದ್ರೆಯವರ ಶ್ರಾವಣ ಬಂತು ಕಾಡಿಗೆ, ನಾಡಿಗೆ, ಬೀಡಿಗೆ ಭಾವಗೀತೆಯು ಮಳೆಯ ಹಿನ್ನೆಲೆಯಿಂದಲೇ ಹುಟ್ಟಿದ ಹಾಡು. ಶ್ರಾವಣ ಬಂತು ಹೊಳಿಗಳಿಗೆ, ಅದೇ ಶುಭಗಳಿಗೆ, ಹೊಳಿಗೆ ಮತ್ತು ಮಳಿಗೆ ಹಾಡು ತುಂಬಾ ಚೆನ್ನಾಗಿದೆ. ಅವರ ಬಾ ಬಾರೋ ಸಾಧನಕೇರಿಗೆ ಭಾವಗೀತೆಯಲ್ಲು ಮಳೆಯ ತುಣುಕು. ಮಳೆಯು ಇಳಿಯುವ ತೇರಿಗೆ ಹಸಿರು ಏರಿದೆ ನೀರಿಗೆ ಹೀಗೆ ಸಾಗುತ್ತದೆ.
ಇಳೆಯು ಬಯಸಿದ ಕಾವ್ಯವನ್ನೆಲ್ಲ ಮಳೆಯ ರೂಪದಿ ಧಾರೆಯೆರೆದಿದ್ದಾರೆ- ಇನ್ನೊಂದು ಒಳ್ಳೆಯ ಭಾವಗೀತೆಯ ಮೂಲಕ ಚೆನ್ನವೀರ ಕಣವಿಯವರು. ಒಂದು ಮುಂಜಾವಿನಲ್ಲಿ ತುಂತುರಿನ ಸೋನೆ ಮಳೆ /ಶ್ರುತಿ ಹಿಡಿದು ಸುರಿಯುತ್ತಿತ್ತು/ ಅದಕ್ಕೆ ಹಿಮ್ಮೇಳವನ್ನೇ ಸೂಸಿಪ ಸುಳಿಗಾಳಿ/ತೆಂಗು ಗರಿಗಳ ನಡುವೆ ನುಸುಳುತ್ತಿತ್ತು/ ಮತ್ತೆ ಮತ್ತೆ ಮನಸ್ಸನ್ನು ತೋಯಿಸುವ ಈ ಗೀತೆಯನ್ನು ಕೇಳಿದಷ್ಟು ಸಾಕೆನಿಸುವುದಿಲ್ಲ.
ನಮ್ಮೆದೆಯೊಳಗು ತುಂತುರಿನ ಸೋನೆ ಮಳೆಯನ್ನು ಸುರಿಸುತ್ತದೆ. ಎಚ್. ಎಸ್. ವೆಂಕಟೇಶಮೂರ್ತಿಯವರಂತೂ ಮೂವತ್ತು ಮಳೆಗಾಲ ಎಂಬ ಕಾವ್ಯಗಳ ಸಂಪುಟವನ್ನೇ ಪ್ರಕಟಿಸಿದ್ದಾರೆ. ಅದರಲ್ಲಿ ಮಳೆ ಕುರಿತ ಪ್ರಖರವಾದ ಕವಿತೆಗಳಿವೆ. ಅದರಲ್ಲಿರುವ ವೃದ್ಧಿ ಕವಿತೆಯು ಹೀಗಿದೆ. ರಾತ್ರಿಯ ಹೊತ್ತು ಮಳೆ ಬರುತಿತ್ತು /ಒಮ್ಮೆಲೆ ಹೋದವು ದೀಪ/ಕೊಡೆ ಹಿಡಿದಿದ್ದ ಮರದಡಿಯಲ್ಲಿ /ಯಾರೋ ಹುಡುಗಿಯು ಪಾಪ ಈ ರೀತಿ ಕವನ ಸಾಗುತ್ತಲೇ ಅಲ್ಲಿ ಬರುವಾತನೊಂದಿಗೆ ಸಂಭಾಷಣೆ ಮಾಡುತ್ತಲೇ ತನ್ನ ಮನೆ ಸೇರಿಕೊಂಡು ಕ್ಷಣದ ಪರಿಚಯ ಅಗಲುತ್ತದೆ ಬಂದು ಹೋಗುವ ಮಳೆಯಂತೆ.
ಮಳೆಯ ವರ್ಣನೆಯನ್ನು ಕುವೆಂಪುರವರಷ್ಟು ಅಗಾಧವಾಗಿ ಕಟ್ಟಿಕೊಟ್ಟವರು ತುಂಬಾ ವಿರಳ. ಮಲೆನಾಡಿನ ಮಳೆನಾಡಿನ
ಲ್ಲೇ ಹುಟ್ಟಿ ಬೆಳೆದ ಕುವೆಂಪುಗೆ ಮಳೆ ಕುರಿತು ಬರೆಯುವುದೆಂದರೆ ತುಂಬಾ ಆಪ್ಯಾಯಮಾನ. ಅವರ ಹೋಗುವೆನು ನಾ ಹೋಗುವೆನು ನನ್ನ ಒಲುಮೆಯಾ ಗೂಡಿಗೆ, ಮಲೆಯ ನಾಡಿಗೆ, ಮಳೆಯ ಬೀಡಿಗೆ ಹಾಡು ತನ್ನೂರಿನ ಮಳೆಯ ಸೊಗಸನ್ನು ಬಿಚ್ಚಿ ಹಿಡಿಯುತ್ತದೆ. ಮಳೆಯ ಒಲವ ಧಾರೆಯನ್ನು ಅದೆಷ್ಟೋ ಕವನಗಳಲ್ಲಿ ಕುವೆಂಪು ಸುರಿಸಿದರೂ ಮಳೆಯ ರುದ್ರ ಭಯಂಕರವನ್ನು ಒಂದು ಕವಿತೆಯಲ್ಲಿ ಬಿಂಬಿಸಿದ್ದಾರೆ. 1935ರಲ್ಲಿ ಬರೆದ ಈ ದೀರ್ಘ ಕವಿತೆಯ ಶೀರ್ಷಿಕೆ ವರ್ಷ ಭೈರವ. ಕದ್ದಿಂಗಳು: ಕಗ್ಗತ್ತಲು; ಕಾರ್ಗಾಲದ ರಾತ್ರಿ /ಸಿಡಿಲಿ¾ಂಚಿಗೆ ನಡುಗುತ್ತಿದೆ ಪರ್ವತ ವನಧಾತ್ರಿ/ತುದಿಯಿಲ್ಲದೆ ಮೊದಲಿಲ್ಲದೆ ಹಿಡಿದಂಬರವನ್ನು ತಬ್ಬಿದೆ/ಕಾದಂಬಿನಿ ರಾಶಿ; ಹೀಗೆ ಸಾಗುವ ಕವಿತೆಯ ಕೊನೆಯಲ್ಲಿ ಸಿಡಿಲಿ¾ಂಚಲಿ ಹೊಮ್ಮುತ್ತಿದೆ ಮಳೆ ಭೈರವ ರೋಷ! ಮಳೆ ಎಂಬುದು ಬರಿ ಸುಳ್ಳಿದು/ಮಳೆಯಲ್ಲಿದು ಮಳೆಯಲ್ಲಿದು ಪ್ರಳಯದ ಆವೇಶ ಎಂಬುದಾಗಿ ಕೊನೆಗೊಳ್ಳುತ್ತದೆ.
ಮಳೆಯು ಕೇವಲ ತಂಪು ಇಂಪು ಎಂದಷ್ಟೇ ನುಡಿದರೂ ಮಳೆಯ ಭಯಾನಕಗಳ ದರ್ಶನಗಳು ಹಲವರಿಗೆ ಆಗಿವೆ. ಮಳೆಗಾಲದಲ್ಲಿ ಹಾನಿಗಳು ಸಂಭವಿಸುವುದಕ್ಕೂR ಲೆಕ್ಕವೇ ಇರುವುದಿಲ್ಲ. ಸಿಡಿಲಿನ ಆಘಾತದಿಂದ ಪ್ರಾಣಕ್ಕೆ ಕುತ್ತಾಗಿರುವ ಅಪಾಯಗಳು ಸಾಕಷ್ಟು ನಡೆದಿದೆ. ನೆರೆ ಬಂದು ಕೊಚ್ಚಿ ಹೋಗಿ ಅನೇಕ ಅನಾಹುತಗಳು ಆಗಿವೆ. ಗಾಳಿಗೆ ಅದೆಷ್ಟೋ ತೋಟದ ಗಿಡ ಮರಗಳು ಬಿದ್ದು ನಷ್ಟವಾಗಿದೆ. ಮನೆಬಿಟ್ಟು ಕದಲಲಾಗದೆ ತುಂಬಾ ಅನನುಕೂಲಗಳು ಆಗುತ್ತಿರುತ್ತವೆ. ಮಳೆಯಿಂದ ಹೀಗೆಲ್ಲ ಪರಿಪಾಟಲು ಇದ್ದರು ಸಹ ಇದನ್ನು ಇಷ್ಟಪಟ್ಟು ಬರೆಯುವವರ ಸಂಖ್ಯೆಯೆ ಜಾಸ್ತಿ ಇದೆ.ವರುಷ, ವರುಷವು ಬಿಡದೆ ಬಿರುಸಾಗಿ ಸುರಿಯುವ ವರ್ಷಧಾರೆ ಹೊಸ ಮನಸ್ಸುಗಳನ್ನು ತನ್ನ ಹಾಡಿನತ್ತ ಸೆಳೆದುಕೊಳ್ಳುತ್ತಲೇ ಇದೆ.
ಮಳೆಯ ಮಹಿಮೆಗೆ ಮನಸಾರೆ ಅಭಿನಂದಿಸುತ್ತ ಮಳೆಯು ನಿರಂತರವಾಗಿರಬೇಕೆಂಬ ಕಾಳಜಿಯ ಕಳಕಳಿಯು ನಮಗಿರಬೇಕು. ಮಳೆಗೆ ತೆರೆದುಕೊಳ್ಳುವ ಮನಸ್ಸುಗಳಿಗೆ ಮತ್ತು ತಂಗಾಳಿಯನ್ನು ಆಸ್ವಾದಿಸುವ ಸಹನೆಯ ಜೊತೆಗೆ ಮಳೆಯ ಏರಿಳಿತಗಳನ್ನು ಸಹಿಸುವ ಛಾತಿಯೂ ಇರಬೇಕು. ನಮ್ಮಂತಹ ರೈತಾಪಿ ಜನರಿಗೂ ಮತ್ತು ಮಳೆಗೂ ನೆಲ-ಮುಗಿಲ ಸಂಬಂಧ. ಮಳೆ ಹಾಡು ಈ ಜನರ ಎದೆಯಲ್ಲಿಯೆ ಗುನುಗುತ್ತಿರುತ್ತದೆ. ಜನಪದರೆಲ್ಲ ಮಳೆನಕ್ಷತ್ರಗಳನ್ನು ಒಂದೊಂದು ನುಡಿಗಟ್ಟಿನಂತೆ ಮಳೆಯ ಪ್ರಭಾವಕ್ಕೆ ಹೋಲಿಸಿ ಹೇಳುತ್ತಿದ್ದರು. ಆದ್ರಾì ಮಳೆಗೆ ದಾರಿದ್ರé ಹೋಗುತ್ತದೆ ಎಂದೂ, ಸ್ವಾತಿ ಮಳೆ ಬಂದರೆ ನೆಲದಲ್ಲಿ ಮುತ್ತು ಬೆಳೆಯುತ್ತದೆ, ಪುನರ್ವಸು ಮಳೆಗೆ ಹೆಣ ಎತ್ತಲು ಆಗುವುದಿಲ್ಲ , ಭರಣಿ ಮಳೆಗೆ ಬೀಜ ಬಿತ್ತಬೇಕು, ಆಶ್ಲೇಷ ಮಳೆಗೆ ಮನೆಯಲ್ಲಿ ತಿನಿಸು ಇದ್ದವನಿಗೆ ಹೊರಗೆ ಹೋಗಲಾರ ಇತ್ಯಾದಿಗಳು. ಇವೆಲ್ಲಾ ಮಳೆಗಾಲ ಮಾತ್ರವೇ ಜನರ ಜೀವನದಲ್ಲಿ ಹಾಸುಹೊಕ್ಕಾದ ಪರಿ ಬೆರಗು ಮೂಡಿಸುತ್ತದೆ. ಈ ಮಾತುಗಳ ಹಿನ್ನಲೆಯನ್ನು ಅವಲೋಕಿಸಿದಾಗ ಅರ್ಥಗರ್ಭಿತವಾಗಿದೆ. ಒಟ್ಟಿನಲ್ಲಿ ಈ ಜಲತರಂಗದ ಇಂಪು ನಮ್ಮನ್ನೆಲ್ಲಾ ಕಾಡದೆ ಇರುವುದಿಲ್ಲ. ಸಹ್ಯವಾದ ಒಳಗಿನ ಒಂಟಿತನವನ್ನು ನಾವೇ ಸೃಷ್ಟಿಸಿಕೊಂಡು ಮಳೆಹಾಡನ್ನು ಮನಸಾರೆ ಅನುಭವಿಸಿದರೆ ಮಳೆಗಾಲ ಸಾರ್ಥಕವಾದಂತೆ ಅಲ್ಲವೇ?ಮಳೆಗೂ ಒಂದು ಬದುಕಿದೆ; ಕನಸಿದೆ. ಚಿಗುರಿಸುವ ಆಸೆಯನ್ನೇ ಹೊತ್ತು ಬರುವ ಮಳೆಯ ಕನಸನ್ನು ನಾವು ಚಿವುಟಬಾರದು. ತುದಿ ಮೊದಲು ಕಾಣದ ಮಳೆಯ ಗೆರೆಯನ್ನು ನಾವು ಮೀಟಿ ನಾದವನ್ನು ಹೊರಹೊಮ್ಮಿಸಬೇಕು. ಮಳೆಯ ಜೀವಂತಿಕೆಯನ್ನು ಗಮನಿಸಬೇಕು, ಜೊತೆಗೆ ಗೌರವಿಸಬೇಕು. ಮಳೆಯ ಕುರಿತು ಬರೆಯುವ ಮನಸ್ಸುಗಳಿಗೆ ಈ ಶ್ರುತಿ ಕೇಳುತ್ತಲೇ ಇರಬೇಕು. ಮಳೆ ಹಾಡನ್ನು ಮೆಚ್ಚುವ ಸಹೃದಯಗಳು ಇನ್ನು ಹೆಚ್ಚುತ್ತ ಮಳೆ ಪರ್ವಕ್ಕೆ ನಿರಂತರ ಪಲ್ಲವಿಗಳ ಉಡುಗೊರೆ ನೀಡುತ್ತಲೇ ಇರಬೇಕು.
– ಸಂಗೀತಾ ರವಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.