ಯೋಧಾ ಯಶಸ್ಸಿನ ಹಿಂದೆ ಕನ್ನಡಿಗರು
Team Udayavani, Aug 19, 2017, 12:33 PM IST
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಬೆಂಗಳೂರು ರಾಯಲ್ಸ್ ತಂಡದಲ್ಲಿ ಕನ್ನಡಿಗರು ಇರುವುದು ಬೆರಳೆಣಿಕೆ ಆಟಗಾರರು. ಹೆಸರು ಬೆಂಗಳೂರು ಆಗಿದ್ದರೂ ನಮ್ಮವರನ್ನು ಹುಡುಕಿ ನೋಡುವ ಸ್ಥಿತಿ. ಆದರೆ ಕೋಲ್ಕತಾ, ಮುಂಬೈ, ಪುಣೆ…ಇತರೆ ತಂಡಗಳಲ್ಲಿ ಕನ್ನಡಿಗರು ಸಿಗುತ್ತಾರೆ. ಅದೇ ರೀತಿ ಪ್ರೊ ಕಬಡ್ಡಿಯಲ್ಲಿಯೂ ಬೆಂಗಳೂರು ಬುಲ್ಸ್ ತಂಡದಲ್ಲಿ ಕನ್ನಡಿಗ ಹರೀಶ್ ನಾಯ್ಕ ಬಿಟ್ಟರೆ ಮತ್ತೂಬ್ಬರನ್ನು ಹುಡುಕಲು ಸಾಧ್ಯವಿಲ್ಲ. ಆದರೆ ಈ ಬಾರಿ ಪ್ರೊ ಕಬಡ್ಡಿಗೆ ಹೊಸದಾಗಿ ಪ್ರವೇಶಿಸಿರುವ ಯು.ಪಿ. ಯೋಧಾ ತಂಡದಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಮತ್ತೂಬ್ಬ ಜನಿಸಿದ್ದು, ಪಕ್ಕದ ತಮಿಳುನಾಡಿನಲ್ಲಿ. ಆದರೂ ಕರ್ನಾಟಕ ರಾಜ್ಯತಂಡವನ್ನು ಪ್ರತಿನಿಧಿಸುತ್ತಿರುವ, ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿರುವ ಆಟಗಾರನಿದ್ದಾನೆ. ಹೀಗಾಗಿ ಯು.ಪಿ. ತಂಡದಲ್ಲಿ ಕನ್ನಡದ ಕಂಪು ಇದೆ. ಮತ್ತೂಂದು ಸಂತೋಷದ ವಿಷಯವೆಂದರೆ ಈ ಮೂವರೂ ಅಂತಿಮ 7ರಲ್ಲಿ ಸ್ಥಾನ ಪಡೆಯುತ್ತಿರುವುದು. ಇವರು ತಮ್ಮ ಸ್ಥಿರ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ನೆರವಾಗುತ್ತಿದ್ದಾರೆ. ಮೂವರೂ ಒಟ್ಟಿಗೆ ಸೇರಿದರೆ ಕನ್ನಡದಲ್ಲಿಯೇ ಹರಟೆ ಹೊಡೆಯುತ್ತಾರೆ. ಅಂಕಣದಲ್ಲಿಯೂ ಕನ್ನಡದಲ್ಲಿಯೇ ಮಾತನಾಡುತ್ತಾರೆ. ಅಂತಹ ಮೂರು ಪ್ರತಿಭೆಗಳು ರಿಶಾಂಕ್ ದೇವಾಡಿಗ, ಬಿ.ಎಸ್. ಸಂತೋಷ್ ಮತ್ತು ಕನ್ಯಾಕುಮಾರಿಯಲ್ಲಿ ಜನಿಸಿ ಬೆಂಗಳೂರಿನಲ್ಲಿ ವಾಸ್ತವ್ಯ ಇರುವ ಜೀವಾ ಕುಮಾರ್. ಈ ಮೂವರ ಪ್ರೊ ಕಬಡ್ಡಿಯ ಪ್ರವೇಶದ ಹಿಂದಿನ ಕಥೆ ಇಲ್ಲಿದೆ.
ಕಷ್ಟದಲ್ಲಿಯೇ ಬೆಳೆದ ರಿಶಾಂಕ್ ದೇವಾಡಿಗ
ಜನಿಸಿದ್ದು ಕುಂದಾಪುರದಲ್ಲಿ. ಕೃಷ್ಣ ದೇವಾಡಿಗ ಮತ್ತು ಪಾರ್ವತಿ ಅವರ ಮಗನಾಗಿರುವ ರಿಶಾಂಕ್ ಪ್ರತಿಭಾವಂತ ರೈಡರ್. ಸದ್ಯ ಕುಟುಂಬ ಸಮೇತ ಮುಂಬೈನಲ್ಲಿ ವಾಸ ಮಾಡುತ್ತಿದ್ದಾರೆ. ಕಬಡ್ಡಿ ಪ್ರವೇಶಕ್ಕೂ ಮುನ್ನ ಜೀವನ ನಿರ್ವಹಣೆಗಾಗಿ ಬಿಡಿಗಾಸಿಗೂ ಕಷ್ಟಪಟ್ಟಿದ್ದಾರೆ. ಆದರೆ, ಕಬಡ್ಡಿ ಮೇಲಿನ ಅವರ ಪ್ರೀತಿ ಇಂದು ತಾರಾ ಆಟಗಾರನಾಗಿ ಸೃಷ್ಟಿಸಿದೆ. ರಾಷ್ಟ್ರೀಯ ತಂಡದಲ್ಲಿ ನೀಡಿದ ಪ್ರದರ್ಶನವೇ ಇತನಿಗೆ ಪ್ರೊ ಕಬಡ್ಡಿಯ ಮೊದಲ ಆವೃತ್ತಿಯಲ್ಲಿಯೇ ಅವಕಾಶ ಸಿಗುವಂತೆ ಮಾಡಿತು. ನಾಲ್ಕು ಆವೃತ್ತಿಯಲ್ಲಿ ಮುಂಬೈ ಪರ ಆಡಿದ ರಿಶಾಂಕ್ ಈ ಬಾರಿ ಯೋಧಾ ತಂಡಕ್ಕೆ ಬಿಡ್ ಆಗಿದ್ದಾರೆ. ಅದು ಭರ್ಜರಿ 46.5 ಲಕ್ಷ ರೂ. ಮೊತ್ತಕ್ಕೆ. ಈಗಾಗಲೇ 5ನೇ ಆವೃತ್ತಿಯಲ್ಲಿ ಯೋಧಾ ತಾನಾಡಿರುವ 5 ಪಂದ್ಯದಲ್ಲಿ 4 ಜಯ ಸಾಧಿಸಿದೆ. ಗೆಲುವಿನಲ್ಲಿ ರೈಡರ್ ಆಗಿರುವ ದೇವಾಡಿಗನ ಪಾತ್ರ ಮಹತ್ವದ್ದು. ಕುಟುಂಬಸಮೇತರಾಗಿ ಮುಂಬೈನಲ್ಲಿದ್ದರೂ ವರ್ಷಕ್ಕೆ ಒಂದೋ ಎರಡೋ ಬಾರಿ ಕುಂದಾಪುರಕ್ಕೆ ಬರುತ್ತಾರೆ.
ನಾನು, ಸಂತೋಷ್, ಜೀವಾ ಸೇರಿದಾಗ ಕನ್ನಡದಲ್ಲಿಯೇ ಮಾತನಾಡುತ್ತೇವೆ, ಹರಟೆ ಹೊಡೆಯುತ್ತೇವೆ. ಪಂದ್ಯ ನಡೆಯುವ ಸಂದರ್ಭದಲ್ಲಿ ನಾವು ಕೋರ್ಟ್‌ನಲ್ಲಿ ಕನ್ನಡ ಮಾತನಾಡುವಾಗ ಇತರರು ಅರ್ಥವಾಗದೇ ನಮ್ಮ ಮುಖವನ್ನು ನೋಡುತ್ತಾರೆ. ಯು.ಪಿ. ಹೊಸ ತಂಡವಾಗಿದ್ದರೂ ಸಮತೋಲಿತ ತಂಡವಾಗಿದ್ದು, ಚಾಂಪಿಯನ್ ಆಗುವ ಭರವಸೆಯಿದೆ.
ರಿಶಾಂಕ್ ದೇವಾಡಿಗ, ರೈಡರ್
ಮಂಡ್ಯದ ಗಂಡು ಸಂತೋಷ್
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಶಿವಣ್ಣ ಗೌಡ ಮತ್ತು ಮಂಜುಳಾ ದಂಪತಿಯ ಮಗ ಬಿ.ಎಸ್.ಸಂತೋಷ್. ಯೋಧಾ ತಂಡದಲ್ಲಿ ಡಿಫೆಂಡರ್ ಆಗಿ ಎದುರಾಳಿಗಳನ್ನು ಬಲೆಯಲ್ಲಿ ಬೀಳಿಸುತ್ತಿದ್ದಾರೆ. ಶಾಲಾ ಜೀವನದಿಂದಲೇ ಕಬಡ್ಡಿಯಲ್ಲಿ ಹುಚ್ಚು ಪ್ರೀತಿ. ಕಾಲೇಜಿನಲ್ಲಿದ್ದಾಗಲೂ ಅಷ್ಟೇ. ತರಗತಿ ಮುಗಿದ ಕೂಡಲೇ ಕಬಡ್ಡಿಯಾಡಲು ಹಾಜರ್. ಕಾಲೇಜು ತಂಡದಲ್ಲಿ ಇವರದೇ ಮೇಲುಗೈ. ಆದರೆ ಕಾಲೇಜು ಜೀವನ ಮುಗಿದ ಮೇಲೆ ಉದ್ಯೋಗಕ್ಕಾಗಿ ಕಷ್ಟಪಟ್ಟಿದ್ದಾರೆ. ಅಲ್ಲಿ ಇಲ್ಲಿ ಚಿಕ್ಕ ಪುಟ್ಟ ಉದ್ಯೋಗ ಮಾಡಿಕೊಳ್ಳುತ್ತಾ ಕಬಡ್ಡಿ ತರಬೇತಿ ಪಡೆಯುತ್ತಿದ್ದರು. ಇದರಿಂದ ಪ್ರೊ ಕಬಡ್ಡಿಯ 3ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ದುರಾದೃಷ್ಟವಶಾತ್ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿತ್ತು. ಗಾಯದ ಕಾರಣ ಒಂದೂ ಪಂದ್ಯವಾಡದೆ ಕೂಟದಿಂದ ಹೊರಬೀಳಬೇಕಾಯಿತು. ಆದರೆ ಈ ವರ್ಷ ಅದೃಷ್ಟ ಕೈಹಿಡಿದಿದೆ. ಯೋಧಾ ತಂಡಕ್ಕೆ 8 ಲಕ್ಷ ರೂ.ಗೆ ಬಿಡ್ ಆಗಿದ್ದಾರೆ. ಕಳೆದ 2 ಪಂದ್ಯದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ.
3ನೇ ಆವೃತ್ತಿಗೆ ತೆಲುಗು ಟೈಟಾನ್ಸ್‌ಗೆ ಆಯ್ಕೆಯಾದರೂ ಗಾಯದ ಕಾರಣ ಆಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಆಡಲು ಅವಕಾಶ ಸಿಕ್ಕಿದೆ. ಹೀಗಾಗಿ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತೇನೆ. ಅನುಭವಿ ಮತ್ತು ಕನ್ನಡದವರೆ ಆದ ರಿಶಾಂಕ್ ಮತ್ತು ಜೀವಾ ಅವರ ಜತೆ ಕೆಲವು ಸಲಹೆಗಳನ್ನು ಪಡೆಯುತ್ತೇನೆ, ಮುನ್ನುಗ್ಗುತ್ತೇನೆ.
ಬಿ.ಎಸ್.ಸಂತೋಷ್, ಡಿಫೆಂಡರ್
ಜೀವಾಗೆ ಕರ್ನಾಟಕವೇ ಜೀವ
ಹುಟ್ಟಿದ್ದು, ತಮಿಳುನಾಡಿನ ಕನ್ಯಾಕುಮಾರಿಯಲ್ಲಿ. ಆದರೆ ಕಬಡ್ಡಿ ಆಟವೇ ಈತನನ್ನು ಕರ್ನಾಟಕದತ್ತ ಸೆಳೆದಿದೆ. ಬೆಂಗಳೂರಿನಲ್ಲಿ ವಾಸ್ತವ್ಯ ಇರುವ ಜೀವಾ ಕುಮಾರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್. ಕರ್ನಾಟಕ ರಾಜ್ಯ ತಂಡದಲ್ಲಿಯೂ ಆಡಿರುವ ಜೀವನಿಗೆ ಪ್ರೊ ಕಬಡ್ಡಿಯ ಮೊದಲ ಆವೃತ್ತಿಯಲ್ಲಿ ಅವಕಾಶ ಸಿಕ್ಕಿತು. ಮುಂಬೈ ತಂಡದಲ್ಲಿ ಡಿಫೆಂಡರ್ ಆಗಿ ತಮ್ಮ ಕೈಚಳಕ ತೋರಿಸಿದ್ದಾರೆ. ಈ ಬಾರಿ ಯು.ಪಿ.ಯೋಧಾ ತಂಡಕ್ಕೆ 52 ಲಕ್ಷ ರೂ.ಗೆ ಬಿಡ್ ಆಗಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡಿ ಬಿಡಿಗಾಸಿಗೂ ಕಷ್ಟಪಡುತ್ತಿದ್ದ ಜೀವಾ ಜೀವನದಲ್ಲಿ ನೆರವಾಗಿದ್ದು ಕಬಡ್ಡಿ. ಇಂದು ಸ್ವಂತ ಮನೆ ಹೊಂದುವಂತೆ ಮಾಡಿದೆ. ಜನರು ಕಂಡಾಗ ಪ್ರೀತಿಯಿಂದ ಮಾತನಾಡಿಸುತ್ತಾರೆ. ಸೆಲ್ಫಿà ತಗೋತಾರೆ. ಜೀವನಕ್ಕೆ ಒಂದು ರೂಪ ಕೊಟ್ಟಿದ್ದೇ ಕಬಡ್ಡಿ ಅನ್ನುತ್ತಾರೆ ಜೀವಾ ಕುಮಾರ್.
ಕಬಡ್ಡಿ ಆಟವೇ ನನ್ನನ್ನು ಕರ್ನಾಟಕದತ್ತ ಸೆಳೆತಂದಿದೆ. ಬೆಂಗಳೂರಿನಲ್ಲಿಯೇ ಉದ್ಯೋಗ ಮಾಡುತ್ತಿದ್ದೇನೆ. ಕಷ್ಟದಲ್ಲಿದ್ದ ಜೀವನಕ್ಕೆ ನೆರವಾಗಿದ್ದೇ ಕಬಡ್ಡಿ ಆಟ. ಇನ್ನು ಕನ್ನಡದ ವಿಷಯಕ್ಕೆ ಬಂದಾಗ ನಾನು, ರಿಶಾಂಕ್, ಸಂತೋಷ್ ಅಂಕಣದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಲ್ಲ. ಎದುರಾಳಿ ಕೋರ್ಟ್‌ನಲ್ಲಿ ಸುಕೇಶ್ ಹೆಗ್ಡೆ ಇದ್ದಾಗಲೂ ಅವರ ಜತೆ ಮಾತನಾಡುವುದು ಕನ್ನಡದಲ್ಲಿಯೇ.
ಜೀವಾ ಕುಮಾರ್, ಡಿಫೆಂಡರ್1
ಮಂಜು ಮಳಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.