ಚಿತ್ರರಂಗದ ದೃಷ್ಟಿಕೋನ ಬದಲಿಸುವ ಆಸೆ ಇತ್ತು
Team Udayavani, Aug 19, 2017, 4:01 PM IST
“ಗೌಡ್ರು ಹೆಣ್ಮಕ್ಲೇ ಹೀಗೆ ಮಾಡಲ್ಲ …’ ಹಾಗಂತ ಹೇಳಿ ಜೋರಾಗಿ ನಕ್ಕರು ರಾಧಿಕಾ ಪಂಡಿತ್. ಯಶ್‌ರೊಂದಿಗೆ ಮದುವೆಯಾದ ನಂತರ ರಾಧಿಕಾ ಪಂಡಿತ್, ಮಾಧ್ಯಮದೆದುರು ಕಾಣಿಸಿಕೊಂಡಿದ್ದೇ ಕಡಿಮೆ. ಒಂದೆರೆಡು ಸಮಾರಂಭಗಳಲ್ಲಿ ಕಾಣಿಸಿಕೊಂಡರೂ, ಮಾತನಾಡಿದ್ದು ಕಡಿಮೆ. ಶನಿವಾರ ಬೆಳಿಗ್ಗೆ, “ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ರಾಧಿಕಾ ಮನಬಿಚ್ಚಿ ಮಾತನಾಡಿದರು.
ಕಳೆದ ಎಂಟು ತಿಂಗಳಲ್ಲಿ ರಾಧಿಕಾ ಚೆನ್ನಾಗಿ ಅಡುಗೆ ಮಾಡುವುದಕ್ಕೆ ಕಲಿತರಂತೆ. “ಮುಂಚೆ ನನಗೆ ಮುದ್ದೆ ಮಾಡೋಕೆ ಬರುತ್ತಿರಲಿಲ್ಲ. ಈಗ ಕಲಿತಿದ್ದೀನಿ. ರೌಂಡ್ ಆಗಿ, ಯಾವುದೇ ಗಂಟಿಲ್ಲದೆ ಮುದ್ದೆ ಮಾಡುವುದಕ್ಕೆ ಬರುತ್ತೆ. ತುಪ್ಪ ಹಾಕದಿದ್ದರೂ ಗಂಟಿಲ್ಲದೆ ಮಾಡುವುದಕ್ಕೆ ಬರುತ್ತದೆ. ಅತ್ತೆ ಖುಷಿಯಾಗಿದ್ದಾರೆ. ಅವರು ಗಂಟಿದ್ಯಾ ಅಂತ ನೋಡಿದರು. ಇರಲಿಲ್ಲ. ಗೌಡ್ರು ಹೆಣ್ಮಕ್ಲೇ ಹೀಗೆ ಮಾಡಲ್ಲ …’ ಅಂತ ಹೇಳಿ ಖುಷಿಪಟ್ಟರು ರಾಧಿಕಾ ಪಂಡಿತ್.
ಇಂತಹ ಸಣ್ಣ ಖುಷಿಗಳನ್ನು ಅನುಭವಿಸುವುದಕ್ಕೆಂದೇ ಅವರು ಒಂದು ಬ್ರೇಕ್ ಪಡೆದರಂತೆ. “ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಬ್ರೇಕ್ ಪಡೆದಿರಲಿಲ್ಲ. ಹಾಗಾಗಿ ಮದುವೆಯಾದ ಮೇಲೆ ಬ್ರೇಕ್ ಪಡೆಯಬೇಕು ಎಂದು ನಾನು ಮೊದಲೇ ತೀರ್ಮನಿಸಿದ್ದೆ. ನನಗೆ ಫ್ಯಾಮಿಲಿ ಲೈಫ್ ಮಿಸ್ ಮಾಡಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಹಾಗಾಗಿ ಅವಕಾಶಗಳು ಬರುತ್ತಿದ್ದರೂ, ನಾನು ಒಪ್ಪಿರಲಿಲ್ಲ. ಈಗೊಂದು ತಿಂಗಳ ಹಿಂದೆ ಒಂದು ಚಿತ್ರ ಒಪ್ಪಿಕೊಂಡೆ.
ನಾನು ಒಪ್ಪಿದ್ದಿಕ್ಕೂ ಕಾರಣವಿದೆ. ಪ್ರಮುಖವಾಗಿ ಚಿತ್ರರಂಗದ ದೃಷ್ಟಿಕೋನ ಬದಲಿಸಬೇಕಿತ್ತು. ನನ್ನ ಸಮಕಾಲೀನರ್ಯಾರೂ ಮದುವೆಯಾಗಿಲ್ಲ. ಆದರೂ ನಟನೆಗೆ ವಾಪಸ್ಸಾಗಿಲ್ಲ. ನಾನು ಒಂದು ಉದಾಹರಣೆಯಾಗಬೇಕಿತ್ತು. ಒಬ್ಬ ನಟಿಯ ಪ್ರೊಫೆಷನಲ್ ಜೀವನಕ್ಕೂ ಪರ್ಸನಲ್ ಜೀವನಕ್ಕೂ ಸಂಬಂಧವಿಲ್ಲ. ಮದುವೆಯಾದ ನಂತರ ಸಹ ನಟಿಸಬಹುದು ಎಂದು ಜನರಿಗೆ ಹೇಳಬೇಕಿತ್ತು. ಮದುವೆ ಅನ್ನೋದು ಒಬ್ಬ ಮನುಷ್ಯನ ಜೀವನದ ಒಂದು ಘಟನೆ.
ಹಾಗಾಗಿ ಮದುವೆಯ ನಂತರವೂ ನಟಿಸುವ ಆಸೆ ಇತ್ತು. ಹೀಗಿರುವಾಗಲೇ ನನಗೆ ರಾಕ್‌ಲೈನ್ ಪ್ರೊಡಕ್ಷನ್‌ನಿಂದ ಒಂದು ಚಿತ್ರದಲ್ಲಿ ನಟಿಸೋಕೆ ಅವಕಾಶ ಬಂತು. ಚಿತ್ರಕ್ಕೆ ಹೆಸರಿಟ್ಟಿಲ್ಲ. ಪ್ರಿಯಾ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಚೆನ್ನಾಗಿದೆ. ಪಾತ್ರ ಇಷ್ಟವಾಯಿತು. ಅದಕ್ಕೇ ಒಪ್ಪಿಕೊಂಡೆ. ಈ ಕಥೆ ಮದುವೆಗೂ ಮುನ್ನವೇ ಬಂದಿದ್ದರೂ, ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಿದ್ದೆ’ ಎನ್ನುತ್ತಾರೆ ರಾಧಿಕಾ ಪಂಡಿತ್.
ನಿರೂಪ್ ಭಂಡಾರಿ ನಾಯಕನಾಗಿರುವ ಈ ಸಿನಿಮಾ ಸೆಪ್ಟೆಂಬರ್ 15ಕ್ಕೆ ಶುರುವಾಗಲಿದೆಯಂತೆ. ಮದುವೆಗೂ ಮುನ್ನ ಮತ್ತು ಮದುವೆಯ ನಂತರ ಬರುತ್ತಿರುವ ಅವಕಾಶಗಳಲ್ಲಿ ರಾಧಿಕಾಗೆ ಹೆಚ್ಚೇನೂ ವ್ಯತ್ಯಾಸ ಕಾಣುತ್ತಿಲ್ಲವಂತೆ. “ಸಾಮಾನ್ಯವಾಗಿ ಮದುವೆಯಾದ ನಂತರ ಎಲ್ಲರೂ ಮಹಿಳಾ ಪ್ರಧಾನ ಪಾತ್ರ ಮಾಡುತ್ತಾರೆ. ಆದರೆ, ನನಗೆ ಅಂತಹ ಪಾತ್ರ ಮಾಡಬಾರದು, ಮೊದಲು ಒಂದು ಕಮರ್ಷಿಯಲ್ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಇತ್ತು.
ಅದೇ ತರಹ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಅವಕಾಶ ಸಿಕ್ಕಿದೆ. ಇನ್ನು ಮದುವೆಯ ನಂತರ ಬರುತ್ತಿರುವ ಪಾತ್ರಗಳಲ್ಲಿ ನನಗೆ ಹೆಚ್ಚು ವ್ಯತ್ಯಾಸ ಕಾಣುತ್ತಿಲ್ಲ. ಆಗ ನಾನು ಯಾವ ತರಹ ಪಾತ್ರಗಳನ್ನು ಮಾಡುತ್ತಿದ್ದೆನೋ, ಈಗಲೂ ಸಿಗುತ್ತಿದೆ. ಅದಕ್ಕೆ ಕಾರಣ, ನಾನು ಆಗಲೂ ಗ್ಲಾಮರಸ್ ಪಾತ್ರಗಳಿಗೆ ಸೀಮಿತವಾಗಿರಲಿಲ್ಲ. ಎಲ್ಲಾ ತರಹದ ಪಾತ್ರಗಳನ್ನು ಮಾಡುತ್ತಿದ್ದೆ. ಈಗಲೂ ಅದನ್ನು ಮುಂದುವರೆಸುವ ಆಸೆ ಇದೆ. ಒಂದು ಖುಷಿಯೆಂದರೆ, ಆಯ್ಕೆ ಮಾಡಿಕೊಳ್ಳುವುದಕ್ಕೆ ಒಂದಿಷ್ಟು ಅವಕಾಶಗಳು ಸಿಗುತ್ತಿವೆ’ ಎನ್ನುತ್ತಾರೆ ಅವರು.
ಯಶ್ ಮತ್ತು ರಾಧಿಕಾ ಇಬ್ಬರೂ ಪ್ರೊಡಕ್ಷನ್ ಕಂಪೆನಿ ಶುರು ಮಾಡುತ್ತಾರೆಂಬ ಸುದ್ದಿ ಇತ್ತು. ಆ ಕೆಲಸ ಸದ್ಯಕ್ಕಿಲ್ಲವಂತೆ. ಮುಂದೊಂದು ದಿನ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಹಾಗಾದರೆ, ಮುಂದಿನ ಯೋಜನೆ ಮತ್ತು ಕನಸು ಏನು ಎಂದರೆ, ಹೊಸ ಮನೆಗೆ ಶಿಫ್ಟ್ ಆಗುವುದು ಎಂಬ ಉತ್ತರ ಬರುತ್ತದೆ. “ಯಶ್ ಹೊಸದೊಂದು ಪೆಂಟ್ ಹೌಸ್ ಕೊಂಡಿದ್ದಾರೆ. ಅದರ ಇಂಟೀರಿಯರ್ ಇನ್ನೂ ಆಗಿಲ್ಲ. ಅದಾದ ಮೇಲೆ ಆ ಮನೆಗೆ ಶಿಫ್ಟ್ ಆಗುತ್ತೇವೆ’ ಎನ್ನುತ್ತಾರೆ ರಾಧಿಕಾ ಪಂಡಿತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.