ದುಡಿ ಬಾರಿಸಿ ಹೀಗೊಂದು ತಿಂಗಳ ನುಡಿ ಹಬ್ಬ…..
Team Udayavani, Aug 20, 2017, 7:50 AM IST
ಕಾಸರಗೋಡು: ತುಳು ನಾಡಿನ ಜಾನಪದ ಆಚರಣೆಗಳಲ್ಲಿ ದುಡಿ ವಾದನಕ್ಕೆ ಮಹತ್ವದ ಸ್ಥಾನವಿದೆ. ಶಿವ ತಾಂಡವದ ಸಂದರ್ಭದಲ್ಲಿ ಮೊಳಗುವ ಡಮರುವಿನ ನಿನಾದ ಮೂರು ಲೋಕಳನ್ನೇ ನಡುಗಿಸುತ್ತದೆ. ಕಾರಂತರ “ಚೋಮನ ದುಡಿ’ಯಲ್ಲಿ ದುಡಿಯೊಂದಿಗೆ ಬದುಕನ್ನು ಕಟ್ಟಿಕೊಂಡ ಚೋಮನ ಚಿತ್ರಣ ನಮ್ಮ ಕಣ್ಣ ಮುಂದಿದೆ.
ತುಳುನಾಡಿನ ಮೂಲ ನಿವಾಸಿಗಳಾದ ಮೊಗೇರ ಜನಾಂಗಕ್ಕೂ ದುಡಿಗೂ ಅವಿನಾಭಾವ ಸಂಬಂಧವಿದೆ. ಎಲ್ಲ ಆಚರಣೆ – ಆರಾಧನೆಗಳಲ್ಲಿ ಈ ಚರ್ಮ ವಾದ್ಯಕ್ಕೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತದೆ.
ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಆಟಿದ ದಿನವನ್ನು ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಯಿತು. ಒಟ್ಟು ಕಾರ್ಯಕ್ರಮ ಜಾನಪದ ಲೋಕವನ್ನೇ ತೆರೆದು ತೋರಿಸಿತು. ಪ್ರಾರಂಭದಲ್ಲಿ ಕು| ಮೇಧಾ ಭಟ್ ನಾಯರ್ಪಳ್ಳ ಅವರ ವಾಚನ, ವಿ.ಬಿ. ಕುಳಮರ್ವ ಅವರ ವ್ಯಾಖ್ಯಾನದೊಂದಿಗೆ ಆರಂಭವಾದ ಗಮಕ ಗಮನ ಸೆಳೆಯಿತು. ತೊರವೆ ರಾಮಾಯಣದ ಮಾಯಾಮೃಗದ ಸನ್ನಿವೇಶ ಮನಕಲಕಿತು. ಸಭಾಂಗಣ ವಿಡೀ ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿತ್ತು.
ಆಟಿದ ಕೂಟವನ್ನು ಕವಿ, ಪತ್ರಕರ್ತ, ತುಳು ಅಕಾಡೆಮಿಯ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ದುಡಿ ಬಾರಿಸುವ ಮೂಲಕ ಉದ್ಘಾಟಿಸಿದರು. ತುಳುವರ ಆರಾಧನೆ, ಆಚರಣೆಯಲ್ಲಿ ದುಡಿಯ ಮಹತ್ವವನ್ನು ಅವರು ತಿಳಿಸಿದರು. ಮೂಢನಂಬಿಕೆಗಳನ್ನು ಅಳಿಸಿ ಮೂಲ ನಂಬಿಕೆಗಳನ್ನು ಉಳಿಸುವಂತೆ ಅವರು ಕರೆ ನೀಡಿದರು. ವಿಶ್ವ ತುಳುವೆರೆ ಆಯನೊದ ರೂವಾರಿ, ಸಂಘಟಕ ಡಾ| ರಾಜೇಶ್ ಆಳ್ವ ಅಭ್ಯಾಗತರಾಗಿ ಭಾಗವಹಿಸಿ ಕನ್ನಡಾಂತರ್ಗತ ತುಳು ನಾಡಿನ ಸಂಸ್ಕೃತಿಯ ಕುರಿತು ಬೆಳಕು ಚೆಲ್ಲಿದರು. ಆಟಿಯ ಮಹತ್ವದ ಬಗ್ಗೆ ಬಹುಮುಖ ಪ್ರತಿಭಾನ್ವಿತೆ ಸನ್ನಿಧಿ ಟಿ.ರೈ ಮಾತನಾಡಿದರು. ಒಂದು ಗಂಟೆ ನಿರರ್ಗಳವಾಗಿ ಮಾತನಾಡಿದ ಅವರು ತುಳುನಾಡಿನ ಸಮಗ್ರ ಚಿತ್ರಣ ನೀಡಿ ಸಂದಭೋìಚಿತ ಹಬ್ಬ ಹರಿದಿನಗಳ ಮಹತ್ವವನ್ನು ತಿಳಿಸಿದರು. ಯುವ ಪ್ರತಿಭೆ ಸುಚಿತಾ ಎಸ್. ರೈ ತುಳು ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು.
ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಚತುರ್ಥ ತಿಂಗಳ ಹಬ್ಬದಂಗವಾಗಿ ಗಮಕ – ಆಟಿದ ಕೂಟವನ್ನು ಆಯೋಜಿಸಲಾಗಿತ್ತು. ಶತ ಸರಣಿ ಕಾರ್ಯಕ್ರಮಗಳ ಮೂಲಕ ಕನ್ನಡ ನಾಡಿನುದ್ದಗಲ ಸಾಂಸ್ಕೃತಿಕ ಜಾಗೃತಿ ಮೂಡಿಸಿದ ರಾಮ ನಾಥ ಸಾಂಸ್ಕೃತಿಕ ಭವನ ಸಮಿತಿಯು ನೂರಾರು ಪ್ರತಿಭೆಗಳನ್ನು ಅರಳಿಸುವ ಮೂಲಕ ಕಾಸರ ಗೋಡಿಗೆ ಅಭಿಮಾನ ಮತ್ತು ಗೌರವವನ್ನು ತಂದು ಕೊಟ್ಟಿದೆ. ಪ್ರಧಾನ ಸಂಚಾಲಕ, ವಿವಿಧ ಯೋಜನೆ ಗಳ ಕನಸುಗಾರ ಗುರುಪ್ರಸಾದ್ ಕೋಟೆಕಣಿ ಮತ್ತು ಸಮಾನ ಮನಸ್ಕರಾದ ಯುವಕರ ತಂಡ ಕನಸನ್ನು ನನಸಾಗಿಸಲು ಪರಿಶ್ರಮ ದಿಂದ ದುಡಿಯುತ್ತಾ ಬಂದಿದೆ.
ಚತುರ್ಥ ತಿಂಗಳ ಹಬ್ಬ ಯಶಸ್ವಿಯಾಗಲು ಪ್ರಧಾನ ಕಾರಣ ಬೊಳಿಕೆ ಜಾನಪದ ಕಲಾಸಂಘ ಕನ್ಯಪ್ಪಾಡಿ ಇವರ ಕಲಾ ಪ್ರದರ್ಶನಗಳು, ಅಶೋಕ ಅಡ್ಕತ್ತಬೈಲ್ ಬಳಗದ ಕಳಂಜ ನೃತ್ಯ ಇಡೀ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ಬೊಳಿಕೆ ತಂಡದ ಪಾಡªನ, ಗಾಯನ, ನೃತ್ಯ ವೈವಿಧ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು.
ಶಂಕರ ಸ್ವಾಮಿಕೃಪಾ, ಯಶೋದಾ ಬಳಗದ ಜಾನಪದ ಕುಣಿತಕ್ಕೆ ನೆರೆದವರೆಲ್ಲರೂ ಹೆಜ್ಜೆ ಹಾಕಿದರು. ಧನುಷ್ ಕಾಸರಗೋಡು ಗಾಯನದ ಮೂಲಕ ರಂಜಿಸಿದರು. ದಿವಾಕರ ಅಶೋಕನಗರ, ಯೋಗೀಶ್ ಕೋಟೆಕಣಿ, ಹರಿಶ್ಚಂದ್ರ ಸೂರ್ಲು, ಸಂದೇಶ್ ಕೋಟೆಕಣಿ, ಸತ್ಯ ನಾರಾಯಣ ಅಮೈ, ವಿನೋದ್ ಮಾಸ್ಟರ್, ಶ್ರೀಕಾಂತ್ ಕಾಸರಗೋಡು, ಜಗದೀಶ್ ಕೂಡ್ಲು, ರವೀಂದ್ರ ರೈ ಮಲ್ಲಾವರ, ಅಶ್ವಿನಿ ಗುರುಪ್ರಸಾದ್, ಕಾವ್ಯ ಕುಶಲ, ಜಯಶ್ರೀ ದಿವಾಕರ್, ಶಿಲ್ಪಾ, ಪುಷ್ಪಾ ಪಾರೆಕಟ್ಟೆ, ಮುರಳಿ, ಪುರುಷೋತ್ತಮ ನಾೖಕ್, ದಯಾನಂದ ಬೆಳ್ಳೂರಡ್ಕ ಮೊದಲಾದವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಆಟಿ ತಿಂಗಳ ವಿಶೇಷ ಖಾದ್ಯ ಗಮನ ಸೆಳೆಯಿತು.
– ಪ್ರದೀಪ್ ಬೇಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.