ಭಾರತ-ದ. ಆಫ್ರಿಕಾ ಬಾಕ್ಸಿಂಗ್ ಡೇ ಟೆಸ್ಟ್ ಅಸಾಧ್ಯ
Team Udayavani, Aug 21, 2017, 2:01 PM IST
ಹೊಸದಿಲ್ಲಿ: ಈ ವರ್ಷ ದಕ್ಷಿಣ ಆಫ್ರಿಕಾದಲ್ಲಿ “ಬಾಕ್ಸಿಂಗ್ ಡೇ ಟೆಸ್ಟ್’ ಪಂದ್ಯದ ಸಂಪ್ರದಾಯ ಮುರಿಯಲ್ಪಡುವ ಸಾಧ್ಯತೆಯೊಂದು ಗೋಚರಿಸಿದೆ. ಅಷ್ಟೇ ಅಲ್ಲ, ಜನವರಿ ಮೊದಲ ವಾರದಲ್ಲಿ ಆರಂಭವಾಗಲಿರುವ “ನ್ಯೂ ಇಯರ್ ಟೆಸ್ಟ್’ ಕೂಡ ಮುಂದೂಡಲ್ಪಡುವ ಸಂಭವವಿದೆ. ಇದಕ್ಕೆ ಕಾರಣ, ಭಾರತ ತಂಡಕ್ಕೆ ಸಕಾಲದಲ್ಲಿ ದಕ್ಷಿಣ ಆಫ್ರಿಕಾ ತಲುಪಲು ಸಾಧ್ಯವಾಗದಿರುವುದು!
4 ಟೆಸ್ಟ್, 5 ಏಕದಿನ
ಇದೇ ವರ್ಷಾಂತ್ಯ ತವರಿನ ಸರಣಿ ಗಳನ್ನೆಲ್ಲ ಮುಗಿಸಿದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. ಅಲ್ಲಿ 4 ಟೆಸ್ಟ್, 5 ಏಕದಿನ ಹಾಗೂ 2 ಟಿ-20 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ (ಡಿ. 26ರಿಂದ, ಜೊಹಾನ್ಸ್‌ಬರ್ಗ್) ಹಾಗೂ ನ್ಯೂ ಇಯರ್ ಟೆಸ್ಟ್ (ಜ. 2 ಅಥವಾ 3ರಿಂದ , ಕೇಪ್‌ಟೌನ್) ಕೂಡ ಸೇರಲಿದೆ ಎಂಬುದು “ಕ್ರಿಕೆಟ್ ಸೌತ್ ಆಫ್ರಿಕಾ’ದ ಲೆಕ್ಕಾಚಾರವಾಗಿತ್ತು. ಆದರೆ ಆಗ ಶ್ರೀಲಂಕಾ ವಿರುದ್ಧ ತವರಿನ ಸರಣಿ ಆಡಲಿರುವ ಭಾರತಕ್ಕೆ ಸಕಾಲದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬಂದಿಳಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ 2 ಸಾಂಪ್ರದಾಯಿಕ ಟೆಸ್ಟ್ ಪಂದ್ಯಗಳನ್ನು ಕೈಬಿಡಬೇಕಾದುದು ಅನಿ ವಾರ್ಯವಾಗುತ್ತದೆ ಎಂಬ ಸುದ್ದಿಯೊಂದು ಬಿಸಿಸಿಐ ಚಾವಡಿಯಿಂದ ಕೇಳಿಬರುತ್ತಿದೆ.
ಭಾರತ-ಶ್ರೀಲಂಕಾ ಸರಣಿ ಮುಗಿ ಯುವುದೇ ಡಿ. 24ಕ್ಕೆ. ಹೀಗಾಗಿ ಡಿ. 26ರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಯಾವ ರೀತಿಯಿಂದಲೂ ಸಾಧ್ಯವಿಲ್ಲ.
ಲಂಕಾ ಸರಣಿಯ ಬಳಿಕ ಕ್ರಿಕೆಟಿಗರಿಗೆ ಕೆಲವು ದಿನಗಳ ವಿಶ್ರಾಂತಿ ಅಗತ್ಯವಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ಪ್ರವಾಸ ಸುದೀರ್ಘಾ ವಧಿಯದ್ದಾಗಿರುತ್ತದೆ. ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸ ಪಂದ್ಯಗಳನ್ನಾಡುವುದು ಅನಿವಾರ್ಯ. ಇದಕ್ಕೆಲ್ಲ ಸಾಕಷ್ಟು ಕಾಲಾವಕಾಶ ಬೇಕು ಎಂದು ಬಿಸಿಸಿಐ
ಮೂಲವೊಂದು ತಿಳಿಸಿದೆ.
ಪಾಕಿಸ್ಥಾನ ಅಫ್ಘಾನ್‌ಗೆ ಆಹ್ವಾನ?
ಆದರೆ ದಕ್ಷಿಣ ಆಫ್ರಿಕಾಕ್ಕೆ ಈ ಎರಡೂ ಟೆಸ್ಟ್ ಪಂದ್ಯಗಳನ್ನು ಕೈಬಿಡಲು ಮನಸ್ಸಿಲ್ಲ. ಹೀಗಾಗಿ ಬಾಕ್ಸಿಂಗ್ ಡೇ ಟೆಸ್ಟ್ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಅದು ಪಾಕಿಸ್ಥಾನ ಅಥವಾ ಅಫ್ಘಾನಿಸ್ಥಾನ ವನ್ನು ಏಕೈಕ ಟೆಸ್ಟ್ ಆಡಲು ಆಹ್ವಾನಿಸುವ ಸಾಧ್ಯತೆ ಇದೆ.
ಆದರೆ ಜನವರಿ ಮೊದಲ ವಾರ ಆರಂಭವಾಗಲಿರುವ ಹೊಸ ವರ್ಷದ ಟೆಸ್ಟ್ ಪಂದ್ಯವನ್ನು ಮುಂದೂಡುವುದು ಮಾತ್ರ ಆಘಾತಕಾರಿ ಸಂಗತಿಯೇ ಆಗಿದೆ. ಆಗ ಕೇಪ್‌ಟೌನ್‌ನಲ್ಲಿ ರಜಾ ಸಮಯವಾದ್ದರಿಂದ ಭಾರೀ ಸಂಖ್ಯೆಯ ವೀಕ್ಷಕರು ಆಗಮಿಸುತ್ತಾರೆ. ಇದು ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಲಿದೆ ಎಂದು ದಕ್ಷಿಣ ಆಫ್ರಿಕಾ ಆಟಗಾರರ ಸಂಘದ ಅಧ್ಯಕ್ಷ ಟೋನಿ ಐರಿಷ್ ಹೇಳಿದ್ದಾರೆ.
ಭಾರತ ಸರಣಿಯನ್ನು ವಿಳಂಬಗೊಳಿಸಿದರೆ ದಕ್ಷಿಣ ಆಫ್ರಿಕಾದ ಆಸ್ಟ್ರೇಲಿಯ ಪ್ರವಾಸದಲ್ಲಿ ವ್ಯತ್ಯಯವಾಗಲಿದೆ. ಭಾರತದಲ್ಲಿ ಐಪಿಎಲ್ ಆರಂಭವಾಗುವುದರೊಳಗೆ ಕಾಂಗರೂ ಸರಣಿ ಮುಗಿಯಬೇಕಿದೆ. ಈ ಗೊಂದಲಗಳನ್ನೆಲ್ಲ ಸಾವ ಧಾನವಾಗಿ ಪರಿಹರಿಸಬೇಕಿದೆ ಎಂದಿದ್ದಾರೆ ಟೋನಿ ಐರಿಷ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.