![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Aug 22, 2017, 7:25 AM IST
ಮಲ್ಪೆ: ಹೊರಜಿಲ್ಲೆಯ ಬಂದರಿನ ಮೀನುಗಾರರು ಸರಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಬುಲ್‌ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದು ಅಂಥವರನ್ನು ಕೂಡಲೇ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಮಲ್ಪೆ ಬಂದರಿನ ಮೀನುಗಾರರು ಮಲ್ಪೆ ಮೀನುಗಾರಿಕಾ ಉಪನಿರ್ದೇಶಕ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಸರಕಾರದ ಆದೇಶದಂತೆ ಸಣ್ಣ ಗಾತ್ರದ ಬಲೆಯ ಮೂಲಕ ಮರಿಮೀನುಗಳನ್ನು ಹಿಡಿದು ಮೀನಿನ ಸಂತತಿಯನ್ನು ನಾಶಗೊಳಿಸುವಂತಹ ಬುಲ್‌ಟ್ರಾಲ್ ಮೀನುಗಾರಿಕೆಯ ನಿಷೇಧದ ಆದೇಶವನ್ನು ಮಲ್ಪೆ ಬಂದರಿನ ಮೀನುಗಾರರು ಪಾಲಿಸುತ್ತಿದ್ದರೂ ಮಂಗಳೂರು, ಕಾರವಾರ ಜಿಲ್ಲೆಗಳ ಮೀನುಗಾರರು ಈ ಆದೇಶವನ್ನು ಉಲ್ಲಂಘಿಸಿ ಮಲ್ಪೆ ಬಂದರು ವಾಪ್ತಿಯಲ್ಲಿಯೂ ಬಂದು ಈ ರೀತಿಯಲ್ಲಿ ಮೀನುಗಾರಿಕೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಧಾರಣೆ ಕುಸಿತ
ಅಕ್ರಮವಾಗಿ ಹಿಡಿದ ಮೀನನ್ನು ಸ್ಥಳೀಯ ಮೀನು ಸಂಸ್ಕರಣ ಘಟಕಗಳಿಗೆ ನೀಡುವುದರಿಂದ ಕೆ.ಜಿ.ಗೆ 40 ರೂ. ಇದ್ದ ರಾಣಿಮೀನು 10 ರೂ. ಕುಸಿದಿದೆ. ಹೊರ ಬಂದರಿನ ಮೀನುಗಾರರು ನಡೆಸುತ್ತಿರುವ ಬುಲ್‌ಟ್ರಾಲ್ ನಿಲ್ಲಿಸ ದಿದ್ದರೆ ಇಲ್ಲಿನವರೂ ಬುಲ್‌ಟ್ರಾಲ್ ನಡೆಸುವುದಾಗಿ ಎಚ್ಚರಿಸಿದ್ದಾರೆ. ಬಂದರು ಮತ್ತು ಮೀನುಗಾರಿಕಾ ಜಂಟಿ ನಿರ್ದೇಶಕ ಗಣಪತಿ ಭಟ್, ಮೀನುಗಾರಿಕಾ ಉಪನಿರ್ದೇಶಕ ಪಾರ್ಶ್ವನಾಥ್ ಅವರು ಅಕ್ರಮವಾಗಿ ಮೀನುಗಾರಿಕೆ ನಡೆಸುವ ಹೊರಬಂದರಿನ ಬೋಟನ್ನು ಕಾರ್ಯಾಚರಣೆ ನಡೆಸಿ ಪತ್ತೆಹಚ್ಚುವಂತೆ ಕರಾವಳಿ ಕಾವಲು ಪೊಲೀಸ್ ಪಡೆಗೆ ಸೂಚನೆ ನೀಡಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಕಾರ್ಯಾಚರಣೆಗೆ ಬೋಟಿಲ್ಲ
ಕರಾವಳಿಯ ಭದ್ರತೆ, ಸಮುದ್ರದಲ್ಲಿ ಗಸ್ತು ಮತ್ತು ರಕ್ಷಣೆಗಾಗಿ ಇರುವ ಕರಾವಳಿ ಕಾವಲು ಪಡೆಯಲ್ಲಿ ಕಾರ್ಯಾಚರಣೆ ನಡೆಸಲು ಬೋಟಿನ ವ್ಯವಸ್ಥೆಯೇ ಇಲ್ಲ. ಇದ್ದ ಬೋಟು ದುರಸ್ತಿಯಲ್ಲಿದೆ ಎಂದು ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದಾಗ ಮೀನುಗಾರರು ಮತ್ತಷ್ಟು ಆಕ್ರೋಶಗೊಂಡರು. ಕರಾವಳಿಯ ಕಾವಲು ಪಡೆಯ ಹೆಡ್‌ಕಾರ್ಟರ್ಸ್ ಆದ
ಮಲ್ಪೆಯಲ್ಲೇ ಈ ರೀತಿಯ ಪರಿಸ್ಥಿತಿ ಇದ್ದರೆ ಉಳಿದ ಕಡೆಗಳಲ್ಲಿ ಹೇಗೆ ? ಎಂದು ಮೀನುಗಾರರು ಪ್ರಶ್ನಿಸಿದರು.
ಮಲ್ಪೆ ಡೀಪ್ ಸೀ ಟ್ರಾಲ್‌ಬೋಟ್ ಸಂಘದ ಅಧ್ಯಕ್ಷ ಕಿಶೋರ್ ಡಿ. ಸುವರ್ಣ, ಮೀನುಗಾರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ರಮೇಶ್ ಕೋಟ್ಯಾನ್, ಸೋಮನಾಥ್ ಕಾಂಚನ್ ಆನಂದ ಅಮೀನ್, ಭುವನೇಶ್ ಕೋಟ್ಯಾನ್, ಪ್ರಕಾಶ್ ಬಂಗೇರ, ಮಿಥುನ್ ಕರ್ಕೇರ, ಹರೀಶ್ ಜಿ. ಕೋಟ್ಯಾನ್, ಕರುಣಾಕರ ಸಾಲ್ಯಾನ್, ಫಯಾಸ್, ದಯಾನಂದ ಕುಂದರ್, ವಿಠಲ ಕರ್ಕೇರ, ಪಾಂಡುರಂಗ ಕೋಟ್ಯಾನ್, ಜ್ಞಾನೇಶ್ವರ ಕೋಟ್ಯಾನ್, ತಿಮ್ಮ ಮರಕಾಲ, ಸಚಿನ್, ರಾಜೇಂದ್ರ ಸುವರ್ಣ ರಾಮ ಅಮೀನ್, ರವಿರಾಜ ಸುವರ್ಣ, ಪುರಂದರ, ಧನಂಜಯ, ದೇವದಾಸ್ ಸಹಿತ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
You seem to have an Ad Blocker on.
To continue reading, please turn it off or whitelist Udayavani.