ಐಜಿಪಿ ಬಂಗ್ಲೆಯ ಶ್ರೀಗಂಧ ಕಳವು: ಎಚ್ಚೆತ್ತ ಪೊಲೀಸರು
Team Udayavani, Aug 23, 2017, 8:00 AM IST
ಮಂಗಳೂರು: ನಗರದ ಮೇರಿಹಿಲ್‌ನಲ್ಲಿರುವ ಪಶ್ಚಿಮ ವಲಯ ಐಜಿಪಿ ಬಂಗ್ಲೆಯಿಂದ ಶ್ರೀಗಂಧ ಮರಗಳನ್ನು ಕಳವು ಮಾಡಿರುವ ವಿಚಾರವಾಗಿ ಬಹಳ ತಡವಾಗಿ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಇದೀಗ ಈ ಪ್ರಕರಣ ಸಂಬಂಧ ಉಂಟಾಗಿರುವ ಭದ್ರತಾ ಲೋಪ ಹಾಗೂ ಗಂಧಚೋರರನ್ನು ಪತ್ತೆ ಹಚ್ಚುವತ್ತ ಬಿರುಸಿನ ತನಿಖೆ ಪ್ರಾರಂಭಿಸಿದೆ.
ಇನ್ನೊಂದೆಡೆ ಅತ್ಯಂತ ಬಿಗಿ ಪೊಲೀಸ್ ಸರ್ಪಗಾವಲು ಹೊಂದಿರುವ ಐಜಿಪಿ ನಿವಾಸದ ಆವರಣದಿಂದಲೇ ಒಟ್ಟು 5 ಶ್ರೀಗಂಧ ಮರ ಕಳ್ಳತನವಾಗಿರುವ ಬಗ್ಗೆ ‘ಉದಯವಾಣಿ’ ಪತ್ರಿಕೆ ಕಳೆದ 2 ದಿನಗಳಿಂದ ವಿಸ್ತೃತ ವರದಿ ಪ್ರಕಟಿಸುತ್ತಿದೆ. ಪತ್ರಿಕೆ ವರದಿ ಪರಿಣಾಮವಾಗಿ ಐಜಿಪಿ ನಿವಾಸದಲ್ಲಿ ಉಂಟಾಗಿರುವ ಭದ್ರತಾ ವೈಫಲ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ – ಆಕ್ರೋಶ, ಲೇವಡಿ ವ್ಯಕ್ತವಾಗುತ್ತಿದೆ.
ಐಜಿಪಿ ಬಂಗ್ಲೆಯಲ್ಲಿ ಶ್ರೀಗಂಧ ಕಳ್ಳತನ ಆಗುವ ಮೂಲಕ ಉಂಟಾಗಿರುವ ಭದ್ರತಾ ಲೋಪಕ್ಕೆ ಜಿಲ್ಲಾ ಸಚಿವರು ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡರು ಕೂಡ ಮುಜುಗರಕ್ಕೆ ಒಳಗಾಗಿದ್ದು, ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಜನತೆ ಮುಂದಿಡಬೇಕು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಉದಯವಾಣಿ ಕಚೇರಿಯಿಂದಲೇ ತನಿಖೆ
ಹಾಸ್ಯಾಸ್ಪದ ವಿಷಯ ಅಂದರೆ ಬರೋಬ್ಬರಿ ಐದು ಶ್ರೀಗಂಧ ಮರ ಕಳ್ಳತನ ಮಾಡಿರುವ ಗಂಧಚೋರರನ್ನು ಪತ್ತೆ ಮಾಡಬೇಕಾದ ಪೊಲೀಸರು ಆ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗುವ ಬದಲು, ಮಂಗಳವಾರ ‘ಉದಯವಾಣಿ’ ಪತ್ರಿಕೆ ಕಚೇರಿಗೆ ಆಗಮಿಸಿದ್ದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ ಪೊಲೀಸ್ ಅಧಿಕಾರಿಯೊಬ್ಬರು ಮೊದಲು ಪತ್ರಿಕಾ ಕಚೇರಿಗೆ ದೂರವಾಣಿ ಕರೆ ಮಾಡಿ, ‘ಐಜಿಪಿ ಬಂಗ್ಲೆಯಲ್ಲಿ ಶ್ರೀಗಂಧ ಕೊಳ್ಳೆ ಹೊಡೆದಿರುವ ವಿಚಾರದ ಬಗ್ಗೆ ನಿಮಗೆ ಮಾಹಿತಿ ಕೊಟ್ಟವರು ಯಾರು? ‘ಎಂದು ಪ್ರಶ್ನಿಸಿದ್ದರು. ಆ ಬಳಿಕ ನೇರವಾಗಿ ಕಚೇರಿಗೂ ಆಗಮಿಸಿದ ಅವರು, ‘ನಾವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಏಕೆಂದರೆ ಹೆಚ್ಚಿನ ಭದ್ರತೆಯಿರುವ ಐಜಿಪಿ ಬಂಗ್ಲೆಯಿಂದಲೇ ಶ್ರೀಗಂಧ ಕಳವು ಆಗಿರುವುದು ಸಾಮಾನ್ಯ ವಿಚಾರವಲ್ಲ. ಐಜಿಪಿ ಬಂಗ್ಲೆಗೆ ನಮ್ಮದೇ ವಿಭಾಗದ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಹೀಗಿರುವಾಗ ನಿಜವಾದ ಕಳ್ಳರನ್ನು ಹಿಡಿಯಬೇಕಾದರೆ ಶ್ರೀಗಂಧ ಕಳ್ಳತನದ ಬಗ್ಗೆ ನಿಮಗೆ ಮಾಹಿತಿ ನೀಡಿದವರು ಯಾರು ಎಂಬುದನ್ನು ನಮಗೆ ತಿಳಿಸಿದರೆ ತನಿಖೆಗೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು. ಆದರೆ ಮಾಹಿತಿ ಕೊಟ್ಟವರ ಬಗ್ಗೆ ಸುಳಿವು ನೀಡಲು ನಿರಾಕರಿಸಿದ ಕಾರಣ ಪೊಲೀಸರು ವಾಪಸು ಹೋದರು.
ಈ ನಡುವೆ ಐಜಿಪಿ ಬಂಗ್ಲೆಯಿಂದ ಶ್ರೀಗಂಧ ಕಳವು ಪ್ರಕರಣದ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿದ ನಗರ ಆಯುಕ್ತ ವಿಭಾಗದ ಡಿಸಿಪಿ ಹನುಮಂತರಾಯ, ‘ಐಜಿಪಿ ಬಂಗ್ಲೆಯ ಶ್ರೀಗಂಧ ಕಳ್ಳತನದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕಾರಣ ಅಲ್ಲಿನ ಪೊಲೀಸರೇ ತನಿಖೆ ಪ್ರಾರಂಭಿಸಿದ್ದಾರೆ. ಈಗ ತನಿಖೆಯನ್ನು ಚುರುಕುಗೊಳಿಸಿದ್ದು, ಶೀಘ್ರದಲ್ಲೇ ಪ್ರಕರಣವನ್ನು ಬೇಧಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.
ಅರಣ್ಯದ ಮರಗಳಿಗೆ ರಕ್ಷಣೆ ಸಾಧ್ಯವೇ?
ಪರಿಸರ ಪರ ಹೋರಾಟಗಾರ ದಿನೇಶ್ ಹೊಳ್ಳ ಪ್ರಕಾರ, ‘ಜನಜಂಗುಳಿ ಜಾಸ್ತಿಯಾಗಿರುವ ನಗರ ಪ್ರದೇಶದಲ್ಲೇ ಬೆಳೆಬಾಳುವ ಶ್ರೀಗಂಧ ಮರವನ್ನು ರಕ್ಷಣೆ ಮಾಡಲು ವಿಫಲವಾಗಿರುವ ಅರಣ್ಯ ಇಲಾಖೆ, ಇನ್ನು ಪಶ್ಚಿಮ ಘಟ್ಟದಂತಹ ದಟ್ಟಅರಣ್ಯದಲ್ಲಿರುವ ಮರಗಳಿಗೆ ಯಾವ ರೀತಿಯ ರಕ್ಷಣೆ ನೀಡಲು ಸಾಧ್ಯ? ಐಜಿಪಿ ಬಂಗ್ಲೆಯಲ್ಲಿ ಆಗಿರುವ ಶ್ರೀಗಂಧ ಕಳವು ಘಟನೆಗೆ ಪೊಲೀಸ್ ಇಲಾಖೆಯೇ ನೇರ ಹೊಣೆ. ಈ ಕಳ್ಳತನದ ಹಿಂದೆ ಐಜಿಪಿ ಬಂಗ್ಲೆಯಲ್ಲಿ ಇರುವವರ ಕೈವಾಡವೂ ಇದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಹೀಗಾಗಿ ಬಹಳ ಪಾರದರ್ಶಕವಾಗಿ ಈ ಪ್ರಕರಣದ ತನಿಖೆಯನ್ನು ಕೈಗೊಂಡು ನಿಜವಾದ ಕಳ್ಳರನ್ನು ಪತ್ತೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಯಾವ ರೀತಿಯ ಭದ್ರತೆ ನಿರೀಕ್ಷಿಸಲು ಸಾಧ್ಯ?
ಐಜಿಪಿ ಮನೆಯಲ್ಲೇ ಶ್ರೀಗಂಧ ಮರದಂಥಹ ಬೆಲೆ ಬಾಳುವ ವಸ್ತು ಕಳ್ಳತನವಾಗುತ್ತಿದೆ ಎಂದರೆ, ಮಂಗಳೂರಿನ ಪೊಲೀಸರಿಂದ ನಗರ ಜನತೆ ಯಾವ ರೀತಿಯ ಭದ್ರತೆ ನಿರೀಕ್ಷಿಸಲು ಸಾಧ್ಯ? ಈ ರೀತಿಯ ಘಟನೆ ಆಗಿರುವುದಕ್ಕೆ ಪೊಲೀಸರ ಭದ್ರತಾ ವೈಫಲ್ಯವೇ ಮುಖ್ಯ ಕಾರಣ. ಈ ಜಾಲದ ಹಿಂದೆ ಯಾರೆಲ್ಲ ಕೈವಾಡವಿದೆ ಎಂಬುದು ಬೆಳಕಿಗೆ ಬರಬೇಕಾದರೆ ಉನ್ನತ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲೇ ತನಿಖೆ ನಡೆಯಬೇಕು ಎನ್ನುತ್ತಾರೆ ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ ಕಾಮತ್.
ದೊಡ್ಡ ದುರಂತವೇ ಸರಿ: ಖಾದರ್
ಪೊಲೀಸ್ ವ್ಯವಸ್ಥೆಯನ್ನೇ ತಲೆತಗ್ಗಿಸುವಂತೆ ಮಾಡಿರುವ ಈ ಪ್ರಕರಣದ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ. ಖಾದರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ‘ಐಜಿಪಿ ಮನೆಯಿಂದಲೇ ದೊಡ್ಡ ಪ್ರಮಾಣದಲ್ಲಿ ಶ್ರೀಗಂಧ ಕಳವು ಆಗಿರುವುದು ಕೇಳಿ ನಿಜಕ್ಕೂ ನನಗೆ ಆಶ್ಚರ್ಯವಾಗಿದೆ. ಪೊಲೀಸರ ಭದ್ರತಾ ವೈಫಲ್ಯ ವಿಚಾರದಲ್ಲಿ ನಿಜಕ್ಕೂ ಇದೊಂದು ದೊಡ್ಡ ದುರಂತವೇ ಸರಿ. ಈ ಘಟನೆಯಿಂದ ಜನಸಾಮಾನ್ಯರಿಗೆ ಪೊಲೀಸರ ಬಗ್ಗೆ ತಪ್ಪು ಸಂದೇಶ ಹೋಗುವ ಸಾಧ್ಯತೆಯಿದೆ. ಜನರಲ್ಲಿ ಮನೆ ಮಾಡಿರುವ ಈ ಸಂದೇಹ ದೂರವಾಗಬೇಕಾದರೆ ಆದಷ್ಟು ಬೇಗ ಪೊಲೀಸರು ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ಹಾಗೂ ನಿಷ್ಪಕ್ಷಪಾತವಾದ ತನಿಖೆಯನ್ನು ಕೈಗೊಳ್ಳಬೇಕು. ಇದೊಂದು ಗಂಭೀರ ಪ್ರಕರಣವಾಗಿರುವ ಕಾರಣ ನಗರ ಪೊಲೀಸ್ ಆಯುಕ್ತರು ಹಾಗೂ ಐಜಿಪಿ ಇಬ್ಬರು ಜಂಟಿಯಾಗಿ ನೇತೃತ್ವವನ್ನು ವಹಿಸಿಕೊಂಡು ಪ್ರಕರಣವನ್ನು ಭೇದಿಸಲು ಹೆಚ್ಚಿನ ಮುತುವರ್ಜಿ ತೋರಿಸಬೇಕು. ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಜತೆಗೆ ಈ ವಿಚಾರವಾಗಿ ನಾನು ಕೂಡ ಖುದ್ದು ಮಾತನಾಡುತ್ತೇನೆ. ಜತೆಗೆ ಐಜಿಪಿ ಮನೆಯಲ್ಲಿ ಉಂಟಾಗಿರುವ ಭದ್ರತಾ ವೈಫಲ್ಯವನ್ನು ಬಹಿರಂಗ ಮಾಡಿರುವ ‘ಉದಯವಾಣಿ’ ಪತ್ರಿಕೆ ಕಾಳಜಿ ನಿಜಕ್ಕೂ ಶ್ಲಾಘನೀಯ’ ಎಂದು ಪ್ರತಿಕ್ರಿಯಿಸಿದ್ದಾರೆ.
ಗಂಭೀರವಾಗಿ ಪರಿಗಣನೆ: ಐವನ್
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಪ್ರತಿಕ್ರಿಯಿಸಿ, ‘ಶ್ರೀಗಂಧ ಕಳವು ಪ್ರಕರಣವನ್ನು ನಮ್ಮ ಸರಕಾರ ಈಗಾಗಲೇ ಗಂಭೀರವಾಗಿ ಪರಿಗಣಿಸಿದ್ದು, ನಾನು ಕೂಡ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಜತೆಗೆ ಮಾತನಾಡಿದ್ದೇನೆ. ಆದರೆ, ಅವರು ‘ನಾನು ಈಗಷ್ಟೇ ಬಂಗ್ಲೆಗೆ ಬಂದಿದ್ದು, ಈ ಹಿಂದಿನ ಐಜಿಪಿ ಅವರ ಕಾಲಾವಧಿಯಲ್ಲಿ ಘಟನೆ ಆಗಿರುವುದಾಗಿ’ ಹೇಳಿದ್ದಾರೆ. ಆದರೆ, ಜು.28ರಂದು ಈ ಘಟನೆ ಸಂಭವಿಸಿದ್ದರೂ ಪೊಲೀಸರ ತನಿಖೆಯಲ್ಲಿ ಹಾಗೂ ಅರಣ್ಯ ಇಲಾಖೆಯಿಂದ ಮಹಜರು ಮಾಡಿಸುವಲ್ಲಿ ಸಾಕಷ್ಟು ವಿಳಂಬ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಿದ್ದೇನೆ. ಐಜಿಪಿ ಮನೆಯಲ್ಲಿ ಆಗಿರುವ ಭದ್ರತಾ ವೈಫಲ್ಯ ಇದಾಗಿರುವ ಕಾರಣ ಪ್ರಕರಣದ ಕುರಿತು ಸಮಗ್ರ ತನಿಖೆಗೆ ನಾನೂ ಒತ್ತಾಯಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಸಮಗ್ರ ತನಿಖೆ ನಡೆಸಲಿ: ಮಠಂದೂರು
‘ನಾಲ್ಕು ಜಿಲ್ಲೆಗಳ ನೇತೃತ್ವ ವಹಿಸಿರುವ ಐಜಿಪಿ ನಿವಾಸದಿಂದಲೇ ಶ್ರೀಗಂಧ ಕಳ್ಳ ಸಾಗಣೆ ಆಗುವುದಾದರೆ, ಇನ್ನು ಈ ಜಿಲ್ಲೆಗಳಲ್ಲಿರುವ ಜನರ ಪಾಡು ಏನು? ದಕ್ಷಿಣ ಕನ್ನಡ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಕಾನೂನು – ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅದಕ್ಕೆ ಮುಖ್ಯ ಕಾರಣ ವರ್ಗಾವಣೆ ಹೆಸರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರಕಾರ ಮಾಡುತ್ತಿರುವ ಹಸ್ತಕ್ಷೇಪ. ಸರಕಾರದ ಬೇಜವಾಬ್ದಾರಿತನದಿಂದ ಅಧಿಕಾರಿಗಳನ್ನು ನಿಷ್ಕ್ರಿಯಗೊಳಿಸಿದಾಗ ತಲೆತಗ್ಗಿಸುವ ಇಂಥ ಪ್ರಕರಣಗಳು ಆಗುತ್ತವೆ. ಬಿಗಿ ಭದ್ರತೆ ಇರುವ ಸರಕಾರಿ ಬಂಗ್ಲೆಯಿಂದ ಶ್ರೀಗಂಧ ಕೊಳ್ಳೆ ಹೊಡೆಯುತ್ತಾರೆ ಅಂದರೆ, ಅದರಲ್ಲಿ ಒಳಗಿನವರ ಕೈವಾಡ ಇರಲೇಬೇಕು. ಇಂಥ ಘಟನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರೂ ಆಗಿರುವ ರಮಾನಾಥ ರೈ ಅವರೇ ನೇರ ಹೊಣೆಯಾಗಬೇಕು. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಒತ್ತಾಯಿಸಿದ್ದಾರೆ.
– ಸುರೇಶ್ ಪುದುವೆಟ್ಟು
Also Read This…
►Part 1► ಐಜಿಪಿ ಬಂಗ್ಲೆ ಆವರಣದಿಂದಲೇ ಶ್ರೀಗಂಧದ ಮರ ಕಳವು: http://bit.ly/2uXfz3I
►Part 2►ಐಜಿಪಿ ಬಂಗ್ಲೆ ಆವರಣದಿಂದ ಇನ್ನೂ 4 ಶ್ರೀಗಂಧದ ಮರ ಕಳವು ಬಯಲು!: http://bit.ly/2g0iqT8
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.