ತಲಾಖ್ ತಲಾಖ್ ತಲಾಖ್:ಸುಪ್ರೀಂತೀರ್ಪಿನ ಬಗ್ಗೆ ಕರಾವಳಿಗರು ಏನಂತಾರೆ?
Team Udayavani, Aug 23, 2017, 7:20 AM IST
ತ್ರಿವಳಿ ತಲಾಖ್ ನಿಷೇಧಿಸಿ ಸುಪ್ರೀಂಕೋರ್ಟ್ ತೀರ್ಪನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ವಿಭಾಗದ ವಿವಿಧ ಜನರ ಪ್ರತಿಕ್ರಿಯೆ – ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ.
ಗಾಬರಿ ಹುಟ್ಟಿಸುವ ತೀರ್ಪು
ಭಾರತ ಒಂದು ಜಾತ್ಯತೀತ ರಾಷ್ಟ್ರ. ಎಲ್ಲ ಜಾತಿ, ಧರ್ಮಗಳ ವಿಶ್ವಾಸಿಗಳು ಸಂವಿಧಾನದಡಿಯಲ್ಲಿ ಅವರವರ ಧಾರ್ಮಿಕ ವಿಚಾರಗಳನ್ನು ಅನುಸರಿಸಿ ಬದುಕುವಂತಹ ಅವಕಾಶವನ್ನು ಹೊಂದಿದ್ದಾರೆ. ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳ 20 28 ಪರಿಚ್ಛೇದಗಳಲ್ಲಿ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ನೀಡಲಾಗಿದೆ. ಅದೂ ಅಲ್ಲದೆ ಅವರವರ ಧಾರ್ಮಿಕ ವಿಚಾರಗಳನ್ನು ಮತ್ತು ವಿಶ್ವಾಸಗಳನ್ನು ಅನುಷ್ಠಾನಗೊಳಿಸಲು ಅವರಿಗೆ ಪರ್ಸನಲ್ ಆ್ಯಕ್ಟ್ಗಳಿವೆ. ಮುಸಲ್ಮಾನರಿಗೆ ಕೂಡ ಶರಿಯತ್ ಕಾನೂನಿದೆ. ಅದರಲ್ಲಿ ಅವರಿಗೆ ಸಂಬಂಧಪಟ್ಟ ತಲಾಖ್, ನಿಕಾಹ್ ಮುಂತಾದ ವಿಚಾರಗಳಲ್ಲಿ ಶರಿಯತ್ ನಿಯಮಗಳಿಗನುಸಾರವಾಗಿ ನಡೆಯುವ ವ್ಯವಸ್ಥೆ ಸಂವಿಧಾನದಲ್ಲಿಯೇ ಇದೆ. ಹಾಗಿರುವಾಗ ಮುಸಲ್ಮಾನರ ತ್ರಿವಳಿ ತಲಾಖ್ ವಿಷಯದಲ್ಲಿ ಸುಪ್ರಿಂ ಕೋರ್ಟ್ ಅದು ಅಸಿಂಧು ಎನ್ನುವ ರೀತಿಯಲ್ಲಿ ನೀಡಿರುವ ತೀರ್ಪು ಬಹಳ ಗಾಬರಿ ಹುಟ್ಟಿಸುವ ತೀರ್ಪಾಗಿದೆ. ಇದರಿಂದಾಗಿ ಮುಸಲ್ಮಾನ ಸಮುದಾಯಕ್ಕೆ ಅವರ ಮೂಲಭೂತ ಹಕ್ಕಾದ ಧಾರ್ಮಿಕ ಸ್ವಾತಂತ್ರ್ಯವನ್ನು ನಿರಾಕರಿಸಲ್ಪಟ್ಟಂತಾಗಿದೆ. ಆದ್ದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಸಂವಿಧಾನ ನೀಡಿರುವ ಆಶಯಗಳಂತೆ ಮುಸ್ಲಿಂಗಳಾದಿ ಎಲ್ಲ ಧಾರ್ಮಿಕ ವಿಶ್ವಾಸಿಗಳೂ ಅವರವರ ವೈಯಕ್ತಿಕ ನಿಯಮಗಳಂತೆ ಜೀವಿಸಲು ಸಂವಿಧಾನದಲ್ಲಿ ಅವಕಾಶ ಮಾಡಿಕೊಡಬೇಕಾಗಿ ನಾವು ವಿನಂತಿಸಿಕೊಳ್ಳುತ್ತಿದ್ದೇವೆ. ಇಲ್ಲದಿದ್ದರೆ ಈ ದೇಶದ ಅಖಂಡತೆಗೆ ಬಲು ದೊಡ್ಡ ಅಪಾಯಕಾರಿಯಾಗಿ ಪರಿಣಮಿಸಿ ಅನೇಕ ಸಮಸ್ಯೆಗಳಿಗೆ ಅದು ದಾರಿ ಮಾಡಲಿದೆ.
– ಎಂಎಸ್‌ಎಂ ಅಬ್ದುಲ್ ರಶೀದ್ ಸಖಾಫಿ ಜೈನಿ ಖಾಮಿಲ್, ಕಾರ್ಯದರ್ಶಿ, ಎಸ್.ವೈ.ಎಸ್. ಕರ್ನಾಟಕ ರಾಜ್ಯ
ಕಾನೂನು ಹೋರಾಟ ನಿಲ್ಲದು
ತ್ರಿವಳಿ ತಲಾಕ್ ಸಂವಿಧಾನ ವಿರೋಧಿ ಅಲ್ಲ. ಸಂವಿಧಾನದ ಪ್ರಕಾರ ಅವರವರ ಧರ್ಮಪ್ರಕಾರ ಬದುಕುವ ಸ್ವಾತಂತ್ರ್ಯ ಮತ್ತು ಹಕ್ಕಿದೆ. ಮುಸಲ್ಮಾನರು ವಿವಾಹ ಮತ್ತು ಇನ್ನಿತರ ಕಟ್ಟುಪಾಡುಗಳಲ್ಲಿ ಮುಹಮ್ಮದ್ ಆ್ಯಂಡ್ ಲಾ ಶರೀಅತ್‌ನಂತೆ ನಡೆಯುತ್ತಿದ್ದಾರೆ. ತ್ರಿವಳಿ ತಲಾಖ್ ಎಂದರೆ 3 ಬಾರಿ ‘ತಲಾಖ್’ ಎಂಬ ಶಬ್ದ ಹೇಳಿಬಿಡುವುದೆಂದಲ್ಲ. ಅದಕ್ಕೂ ನಿಯಮಾವಳಿಗಳಿವೆ. ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಸರಿಯಲ್ಲ. ಕಾನೂನು ಹೋರಾಟ ಮುಂದುವರಿಯಲಿದೆ.
– ಸೈಯದ್ ಝೈನುಲ್ ಅಬಿದೀನ್ ಜಮಲುಲ್ಲೈಲಿ ತಂಙಳ್, ಕಾಜೂರು ದರ್ಗಾ, ಧರ್ಮಗುರುಗಳು
ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ
ಏಕಕಾಲದಲ್ಲಿ ಮೂರು ಬಾರಿ ತಲಾಖ್ ಹೇಳುವುದನ್ನು ರದ್ದುಗೊಳಿಸಿರುವ ತೀರ್ಪು ಸ್ವಾಗತಾರ್ಹ. ಇದನ್ನು ಎಲ್ಲರೂ ಆರೋಗ್ಯಕರವಾಗಿ ಸ್ವೀಕರಿಸಬೇಕು. ಇದನ್ನು ಜಾರಿಗೊಳಿಸುವ ಸಂದರ್ಭ ಯಾವುದೇ ರೀತಿಯ ರಾಜಕೀಯ, ಸಾಮಾಜಿಕ ಮೇಲಾಟಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸರ್ವರ ಉಪಸ್ಥಿತಿಯಲ್ಲಿ ಇದನ್ನು ಸೌಹಾರ್ದಯುತವಾಗಿ ನಡೆಸಬೇಕು.
- ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯ ಅಧ್ಯಕ್ಷ
ತೀರ್ಪಿನ ವಿವರ ಪಡೆದ ಬಳಿಕ ಪ್ರತಿಕ್ರಿಯೆ
ತ್ರಿವಳಿ ತಲಾಖ್ ರದ್ದು ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪೂರ್ಣ ವಿವರಗಳನ್ನು ನಾನು ಇನ್ನೂ ಪಡೆದಿಲ್ಲ. ಹೀಗಾಗಿ ತೀರ್ಪಿನ ಎಲ್ಲ ವಿವರಗಳನ್ನು ಪಡೆದ ಬಳಿಕ ಈ ಕುರಿತಂತೆ ಪ್ರತಿಕ್ರಿಯೆ ನೀಡುತ್ತೇನೆ.
– ಯು.ಟಿ.ಖಾದರ್, ಆಹಾರ ಖಾತೆ ರಾಜ್ಯ ಸಚಿವರು
ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗಬಾರದು
ಕೆಲವೊಂದು ಕಡೆ ತ್ರಿವಳಿ ತಲಾಖ್‌ನ ದುರ್ಬಳಕೆ ನಡೆಯುತ್ತಿರುವ ಕಾರಣಕ್ಕಾಗಿ ಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ. ಆದರೆ ಮುಂದಿನ 6 ತಿಂಗಳ ಒಳಗೆ ಕೇಂದ್ರ ಸರಕಾರ ಕಾನೂನು ರೂಪಿಸುವ ಸಂದರ್ಭದಲ್ಲಿ ಮುಸ್ಲಿಂ ಶರಿಯತ್ ಕಾನೂನಿಗೆ ಧಕ್ಕೆ ಆಗದಂತೆ ಗಮನ ಹರಿಸಬೇಕು. ಈ ವೇಳೆ ಧಾರ್ಮಿಕ ನಂಬಿಕೆಗಳಿಗೆ ನೋವು ಆಗದಂತೆ ಎಚ್ಚರ ವಹಿಸಬೇಕು.
- ಮೊದಿನ್ ಬಾವ, ಶಾಸಕರು
ಧಾರ್ಮಿಕ ನಾಯಕರಿಂದಷ್ಟೇ ತೀರ್ಮಾನ
ತಲಾಖ್ ವಿಚಾರವಾಗಿ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಇನ್ನಷ್ಟು ಅಧ್ಯಯನ ಮಾಡದೇ ಯಾವುದೇ ವಿಚಾರ ಹೇಳಲಾಗದು. ತೀರ್ಪಿನಲ್ಲಿ ಹಲವು ಸಬ್‌ಕ್ಲಾಸ್‌ಗಳಿರುವುದರಿಂದ ಧಾರ್ಮಿಕ ನಾಯಕರಷ್ಟೆ ಈ ಬಗ್ಗೆ ತೀರ್ಮಾನ ನೀಡಲು ಸಾಧ್ಯ.
– ಅಬ್ಟಾಸ್ ಅಲಿ ಬಿ.ಎಂ., ಉಪಾಧ್ಯಕ್ಷರು, ಬಂಟ್ವಾಳ ತಾ.ಪಂ.
ಸರಿಯಾಗಿ ಅಧ್ಯಯನ ನಡೆದರೆ ಒಳ್ಳೆಯದು
ಸಂವಿಧಾನದ ಪ್ರಕಾರ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಭಾರತದ ಪ್ರಜೆಯಾದ ಕಾರಣ ಸ್ವಾಗತಿಸಬೇಕು. ತಲಾಖ್ ಹಿಂದಿನಿಂದಲೂ ಬಂದ ಸಂಪ್ರದಾಯ. ಇದನ್ನು ಸರಿಯಾಗಿ ಅಧ್ಯಯನ ನಡೆಸಿದರೆ ಇದರಲ್ಲಿ ಕೆಟ್ಟ ಅಂಶಗಳಿಗಿಂತ ಒಳ್ಳೆಯ ಅಂಶ ಇರುವುದು ತಿಳಿಯುತ್ತದೆ.
– ನಾಜಿರಾ ಅನ್ವರ್, ಉಪನ್ಯಾಸಕಿ, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರ.
ಕೋರ್ಟ್ ಹಸ್ತಕ್ಷೇಪ ಸರಿಯಲ್ಲ
ಧಾರ್ಮಿಕ ಚೌಕಟ್ಟಿನ ನಿಯಮಾವಳಿಗಳು ಕಾಲಘಟ್ಟಗಳ ಬೇಡಿಕೆಯಂತೆ ಬದಲಾಯಿಸುವ ಅವಕಾಶಗಳಿಲ್ಲ, ಧಾರ್ಮಿಕ ಸ್ವಾತಂತ್ರ್ಯ ಎಂಬುದು ಸಂವಿಧಾನವೇ ನೀಡಿರುವಂತಹದ್ದು, ಶರೀಅತ್ ಪ್ರಕಾರವೇ ಪ್ರತಿಯೋರ್ವ ಮುಸಲ್ಮಾನನೂ ಜೀವಿಸಬೇಕಾಗಿ ರುವುದು ಕಡ್ಡಾಯ, ಸಂವಿಧಾನದಲ್ಲೇ ಕಲ್ಪಿಸಲಾಗಿರುವ ಹಕ್ಕು ಮತ್ತು ಸ್ವಾತಂತ್ರ್ಯದ ಬಗ್ಗೆ ನ್ಯಾಯಾಲಯದ ಹಸ್ತಕ್ಷೇಪ ಸರಿಯಲ್ಲ.
- ಎಂ.ಬಿ.ಎಂ. ಸಾದಿಕ್ ಮಾಸ್ಟರ್ ಮಲೆಬೆಟ್ಟು, ರಾಜ್ಯ ಎಸ್ಸೆಸ್ಸೆಫ್ ಸುಪ್ರೀ ಕೌನ್ಸಿಲ್ ಕನ್ವೀನರ್
ಧಾರ್ಮಿಕ ಭಾವನೆಗಳಿಗೆ ನೋವು
ತ್ರಿವಳಿ ತಲಾಖ್ ಎನ್ನುವಂತಹುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಗತಿ. ಇದನ್ನು ನಮ್ಮ ಸಮಾಜ ಒಪ್ಪಿಕೊಂಡಿದೆ. ಆದರೆ ಈಗ ಕೋರ್ಟ್ ತ್ರಿವಳಿ ತಲಾಖ್ ರದ್ದುಪಡಿಸುವಂತೆ ಆದೇಶಿಸಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಹೀಗಾಗಿ ಇದನ್ನು ಖಂಡಿಸುತ್ತೇವೆ.
– ಕೆ.ಅಶ್ರಫ್, ಅಧ್ಯಕ್ಷರು ದ.ಕ. ಮುಸ್ಲಿಂ ಸಂಘಟನೆಗಳ ಒಕ್ಕೂಟ
ನ್ಯಾಯಾಲಯದ ತೀರ್ಪು ಸ್ವಾಗತಾರ್ಹ
ಕೋರ್ಟ್ ತೀರ್ಪು ಒಳ್ಳೆಯ ಬೆಳವಣಿಗೆ. ಇದರಿಂದ ವಿಶೇಷವಾಗಿ ಮುಸ್ಲಿಂ ಮಹಿಳೆಯರಿಗೆ ಸಂತೋಷವಾಗಿದೆ. ನವಭಾರತ ನಿರ್ಮಾಣದಲ್ಲಿ ಮುಸ್ಲಿಂ ಮಹಿಳೆಯರಿಗೂ ಅವಕಾಶ ಸಿಕ್ಕಿದಂತಾಗಿದೆ. ದೇಶದ 9 ಕೋಟಿ ಮುಸ್ಲಿಂ ಮಹಿಳೆಯರಿಗೆ ಹಕ್ಕು ಮತ್ತು ಗೌರವ ಸಿಕ್ಕಿದಂತಾಗಿದೆ.
– ಮೊಹಮ್ಮದ್ ಆರಿಫ್, ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ಮುಂದಾಳು, ಉಡುಪಿ
ನ್ಯಾಯಾಲಯದ ತೀರ್ಪು ಸ್ವಾಗತಾರ್ಹ
ಒಂದೇ ಬಾರಿಗೆ ತ್ರಿವಳಿ ತಲಾಖ್ ನೀಡುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿರುವುದು ಸರಿ. ಇದು ದುರುಪಯೋಗ ಆಗದಂತೆ ಎಚ್ಚರ ವಹಿಸಬೇಕು. ಆರು ತಿಂಗಳೊಳಗೆ ಕಾನೂನು ತರಲು ಸೂಚಿಸಿದೆ. ಕೇಂದ್ರ ಸರಕಾರ ಏನು ಮಾಡುತ್ತದೆಂದು ಕಾದು ನೋಡಬೇಕು.
– ಶಬ್ಬೀರ್ ಅಹಮ್ಮದ್, ಕಾಂಗ್ರೆಸ್ ಮುಂದಾಳು, ಉಡುಪಿ
ಎಲ್ಲರೂ ಇದನ್ನು ಸ್ವಾಗತಿಸಬೇಕು
ಇದು ಕೇಂದ್ರ ಸರಕಾರ ಮಾಡಿದ ಕಾನೂನು ಅಲ್ಲ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಕೆಲವು ಸಂಘಟನೆಯವರು ನ್ಯಾಯಾಲಯಕ್ಕೆ ಹೋಗಿದ್ದರು. ಮುಸ್ಲಿಂ ಮಹಿಳೆಯರೇ ಇದನ್ನು ದೊಡ್ಡ ಸಂಖ್ಯೆಯಲ್ಲಿ ಸ್ವಾಗತಿಸಿದ್ದನ್ನು ಕಂಡಿದ್ದೇನೆ. ಪ್ರಾಯಃ ಇವರ ಹೋರಾಟದ ಫಲವಾಗಿಯೇ ತೀರ್ಪು ಬಂದಿದೆ ಎಂದು ಭಾವಿಸುತ್ತೇನೆ. ನಾಗರಿಕರೆಲ್ಲ ಸ್ವಾಗತಿಸಬೇಕು.
– ಮುರಳೀಧರ ಉಪಾಧ್ಯ ಹಿರಿಯಡಕ
ಧರ್ಮದಲ್ಲಿ ತಿಳಿಸಿದಂತೆ ನಡೆಯುತ್ತೇವೆ
ಇಸ್ಲಾಂ ಧರ್ಮದ ಪ್ರಕಾರ ಧರ್ಮಬದ್ಧವಾದ ವಿಷಯಗಳಲ್ಲಿ ತ್ರಿವಳಿ ತಲಾಖ್ ಎನ್ನುವ ಶಬ್ದಕ್ಕೆ ಕೊನೆಯ ಸ್ಥಾನವಿದೆ. ಸಾಂಸಾರಿಕ ಜೀವನದಲ್ಲಿ ಕೂಡಿರುವುದೇ ಶ್ರೇಯಸ್ಕರ ಎಂಬುದು ಇಸ್ಲಾಂ ಧರ್ಮದ ಪ್ರತಿಪಾದನೆ. ಅದರಲ್ಲೂ ಒಂದೇ ಉಸಿರಿನಲ್ಲಿ 3 ಬಾರಿ ತಲಾಖ್ ನೀಡಿದರೆ ಅದು ತಲಾಖ್ ಆಗದು. ಈ ಬಗ್ಗೆ ಅಧ್ಯಯನ ಮಾಡಿದವರಿಗಷ್ಟೇ ನೈಜ ಅರ್ಥ ಗೊತ್ತು. ನಮ್ಮ ಧರ್ಮದಲ್ಲಿ ತಿಳಿಸಿರುವಂತೆ ನಾವು ನಡೆದುಕೊಳ್ಳುತ್ತೇವೆ.
– ಮೌಲನಾ ರಶೀದ್ ಅಹ್ಮದ್ ಉಮರಿ, ಜಾಮೀಯ ಮಸೀದಿ, ಉಡುಪಿ
ತಲಾಖ್ ಕಟ್ಟಕಡೆಯ ಆಯ್ಕೆ
ದಿವ್ಯ ಕುರ್‌ಆನ್‌ನಲ್ಲಿ ವಿವಾಹಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ತಲಾಖ್ ಕಟ್ಟಕಡೆಯ ಆಯ್ಕೆ. ಇಸ್ಲಾಂ ಧರ್ಮದಲ್ಲಿ ತ್ರಿವಳಿ ತಲಾಖ್ ಸ್ಥಿತಿಯನ್ನು ತಲುಪುವ ಮುನ್ನ ಅನೇಕ ನೀತಿಗಳಿವೆ. ಇಂದು ಕೋರ್ಟ್ ನೀಡಿದ ವಿಚಾರದ ಕುರಿತಾಗಿ ನಾವು ಅನಿಸಿಕೆಯನ್ನು ಹೇಳಲು ಬಯಸುವುದಿಲ್ಲ.
– ಯಾಸೀನ್, ಅಧ್ಯಕ್ಷರು, ಜಾಮಿಯಾ ಮಸೀದಿ, ಉಡುಪಿ
ಚಿಂತನ-ಮಂಥನ ನಡೆಯಲಿ
ಯಾವುದೇ ರಾಜಕೀಯ ಪಕ್ಷಗಳು ಕೂಡ ಒಂದು ಧರ್ಮದ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ನಿರ್ಧಾರ ಕೈಗೊಳ್ಳಬಾರದು. ಧರ್ಮದ ಪದ್ಧತಿಯ ಕುರಿತು ಮಾತನಾಡಲು ಧರ್ಮಗುರುಗಳಿದ್ದಾರೆ. ಧಾರ್ಮಿಕ ಗ್ರಂಥಗಳಿವೆ. ಹೀಗಾಗಿ ಈ ಕುರಿತು ಚಿಂತನ-ಮಂಥನ ನಡೆಯಬೇಕು.
- ಅಬ್ದುಲ್ ರಝಾಕ್, ಕುಕ್ಕಾಜೆ
ಏಕಾಏಕಿ ನಿರ್ಧಾರವಲ್ಲ
ಇಸ್ಲಾಂ ಧರ್ಮದ ತಲಾಖ್ ಪದ್ಧತಿ ಏಕಾಏಕಿ ತೆಗೆದುಕೊಳ್ಳುವ ನಿರ್ಧಾರವಲ್ಲ. ಅದಕ್ಕೆ ಸಮಯಾವಕಾಶ ಇದೆ. ಕಾನೂನೇ ಸರಿಯಿಲ್ಲ ಎಂಬುದು ತಪ್ಪು. ಈ ಕುರಿತು ಪೂರ್ಣ ತಿಳಿದುಕೊಳ್ಳುವುದು ಅಗತ್ಯ. ಆದರೆ ನ್ಯಾಯಾಲಯದ ತೀರ್ಪಿನ ಕುರಿತು ತಿಳಿದುಕೊಂಡು ಮಾತನಾಡಬೇಕಾಗುತ್ತದೆ.
- ಡಿ.ಎಂ. ಅಸ್ಲಾಂ, ಮಂಗಳೂರು
ಏಕಾಏಕಿ ತೀರ್ಮಾನವಲ್ಲ
ನಮ್ಮ ಶರೀಅತ್ ಪ್ರಕಾರ ಇದು ಸರಿಯಲ್ಲ. ಎಲ್ಲರಿಗೂ ಅವರದ್ದೇ ಆದ ತತ್ವ ಆದರ್ಶಗಳು ಇವೆ. ಅದನ್ನು ಪಾಲಿಸಿಕೊಂಡು ಬರುತ್ತಿದ್ದೇವೆ. ತಲಾಕ್ ಎಂದರೆ ಏಕಾಏಕಿ ಮಾಡುವಂಥ ತೀರ್ಮಾನ ಖಂಡಿತ ಅಲ್ಲ.
– ಉಮ್ಮರ್‌ಕುಂಞಿ ನಾಡ್ಜೆ, ಜಮಿಯತುಲ್‌ಫಲಾಹ್, ಬೆಳ್ತಂಗಡಿ ತಾಲೂಕು ಘಟಕ ಉಪಾಧ್ಯಕ್ಷ
ಧರ್ಮದ ಚೌಕಟ್ಟಿನಲ್ಲಿ ಸಮಯಾವಕಾಶವಿದೆ
ತ್ರಿವಳಿ ತಲಾಖ್ ಪದ್ಧತಿಯನ್ನು ಏಕಾಏಕಿ ಹೇಳುವ ಪದ್ಧತಿ ಶರೀಅತ್‌ನಲ್ಲಿಲ್ಲ. ಇದಕ್ಕೆ ಧರ್ಮದ ಚೌಕಟ್ಟಿನಲ್ಲಿ ಸಮಯಾವಕಾಶವಿದೆ. ಆದರೆ ಕೆಲವರು ಅದರ ಕುರಿತು ತಪ್ಪಾಗಿ ತಿಳಿದು ನ್ಯಾಯಾಲಯಕ್ಕೆ ಹೋಗಿದ್ದಾರೆ. ತಲಾಖ್ ಒಂದು ಉತ್ತಮ ಪದ್ಧತಿ.
– ಹನೀಫ್ ಖಾನ್ ಕೊಡಾಜೆ, ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ, ದ.ಕ.
ಆತಂಕದ ಸಂಗತಿ ಇಲ್ಲ
ಸುಪ್ರೀಂಕೋರ್ಟ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ಧಾರ್ಮಿಕ ವಿಚಾರವನ್ನು ಕಾನೂನಿನ ಮೂಲಕ ತೀರ್ಮಾನಿಸುವುದಕ್ಕಿಂತಲೂ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಬೇಕಿತ್ತು. ತಲಾಖ್‌ನಲ್ಲಿ ಬೇರೆ – ಬೇರೆ ಆಯ್ಕೆಗಳಿರುವುದರಿಂದ ತೀರ್ಪು ಆತಂಕಕಾರಿ ಅಲ್ಲ. ಧಾರ್ಮಿಕ ಜ್ಞಾನದ ಕೊರತೆ ಇರುವೆಡೆ ತಲಾಖ್ ಅನ್ನು ದುರುಪಯೋಗಪಡಿಸಿಕೊಂಡಿರಬಹುದೇ ಹೊರತು ಧಾರ್ಮಿಕ ಪ್ರಜ್ಞೆ ಇರುವೆಡೆ ಅಲ್ಲ. ಕೆಲವರು ನ್ಯಾಯಾಲಯದ ಮೆಟ್ಟಿಲು ಹತ್ತಿದಾಕ್ಷಣ ತಲಾಖ್ ಸರಿಯೇ ಇಲ್ಲ ಎನ್ನಲಾಗದು. ಅಂಥ ಅಭಿಪ್ರಾಯಕ್ಕೆ ಸಹಮತ ಇಲ್ಲ.
– ಎಸ್.ಬಿ.ದಾರಿಮಿ, ಖತೀಬರು, ಪುತ್ತೂರು ಬದ್ರಿಯಾ ಮಸೀದಿ
ಧಾರ್ಮಿಕ ಸಂವಿಧಾನಕ್ಕೆ ಧಕ್ಕೆ
ಮುಸ್ಲಿಂ ಸಮುದಾಯದಲ್ಲೂ ಆಮೂಲಾಗ್ರ ಬದಲಾವಣೆಯಾಗಿದ್ದು, ಹಿಂದಿನಂತೆ ಈಗ ಅಷ್ಟೊಂದು ತ್ರಿವಳಿ ತಲಾಖ್ ಪ್ರಕರಣಗಳು ನಡೆಯುತ್ತಿಲ್ಲ. ಸಾವಿರ ಅಥವಾ ಲಕ್ಷಕ್ಕೊಂದು ಮಾತ್ರ ತ್ರಿವಳಿ ತಲಾಖ್ ಪ್ರಕರಣಗಳು ನಡೆಯುತ್ತವೆ. ಅದು ಕೂಡ ಆ ಕುಟುಂಬದ ಜ್ಞಾನದ ಕೊರತೆಯಿಂದ ನಡೆಯುತ್ತಿದೆ ಅಷ್ಟೇ. ಮುಸ್ಲಿಂ ಸಮುದಾಯಕ್ಕೆ ಇದೊಂದು ದೊಡ್ಡ ವಿಚಾರವಲ್ಲ. ತ್ರಿವಳಿ ತಲಾಖ್ ಕೆಲವರಿಗೆ ಒಳಿತನ್ನೇ ಮಾಡುತ್ತದೆ. ಸಮಾಜದ ಒಳಿತಿಗಾಗಿಯೇ ಇರುವ ಆಚರಣೆಯನ್ನು ಗೌರವಿಸುವ. ದೇಶದ ಸಂವಿಧಾನ ಶ್ರೇಷ್ಠವಾಗಿದ್ದು, ಎಲ್ಲ ಧರ್ಮವನ್ನು ಗೌರವಿಸುವ ಅಂಶಗಳಿವೆ. ಶರಿಯತ್‌ಗೆ (ಮುಸ್ಲಿಂ ಸಂವಿಧಾನ) ವಿಶೇಷ ಸ್ಥಾನಮಾನವಿದೆ. ಕೋರ್ಟ್ ತೀರ್ಪು ನಮ್ಮ ಧಾರ್ಮಿಕ ಸಂವಿಧಾನಕ್ಕೆ ಧಕ್ಕೆ ತಂದಿದೆ.
– ಕುಲ್ಸಮ್ ಅಬೂಬಕ್ಕರ್ ಮರಕ್ಕಡ ಉಡುಪಿ, ಜಮಾತೆ ಇಸ್ಲಾಂ ಹಿಂದ್‌ನ ರಾಜ್ಯ ಸಹ ಸಂಚಾಲಕಿ
ಧರ್ಮದ ಹೆಸರಲ್ಲಿ ಮಧ್ಯಪ್ರವೇಶ ಬೇಡ
ಯಾವುದೇ ಧರ್ಮಕ್ಕೆ ತನ್ನದೆ ಆದ ಕಾನೂನು ಚೌಕಟ್ಟು ಇರುತ್ತದೆ ಮತ್ತು ಅದರದ್ದೆ ಆದ ವ್ಯಾಪ್ತಿ ಕೂಡ ಇದೆ. ಹಾಗಾಗಿ ಸುಪ್ರೀಂ ಕೋರ್ಟ್ ಧರ್ಮದ ಹೆಸರಿನಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ. ದೇಶದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳು ಇವೆ. ಅದರ ಬಗ್ಗೆ ಸರಕಾರಗಳು ಗಮನ ಕೊಡುವ ಕೆಲಸ ಮಾಡಲಿ.
– ರೀನಾ ತಾಜುದ್ದೀನ್, ಉಪನ್ಯಾಸಕಿ, ಬ್ರಹ್ಮಾವರ
ಕೋರ್ಟ್ ತೀರ್ಪು ಸರಿಯಲ್ಲ
ಮುಸ್ಲಿಂ ಸಂಪ್ರದಾಯದ ಪ್ರಕಾರ ಮಹಿಳೆ ತಪ್ಪು ಮಾಡಿದರೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡುವ ಕಾನೂನಿದೆ. ನಮ್ಮ ಕಾನೂನು ಪ್ರಕಾರ ಇದು ಸರಿಯಿದೆ. ಈಗ ಕೋರ್ಟ್ ಇದನ್ನು ರದ್ದುಪಡಿಸಿರುವುದು ಸರಿಯಲ್ಲ. ಮಹಿಳೆಯರು ತಪ್ಪು ಮಾಡಿದರೆ ಏನು ಮಾಡುವುದು? ಕೋರ್ಟ್ ಕೂಲಂಕಷವಾಗಿ ಪರಿಶೀಲಿಸಿ ತೀರ್ಪು ನೀಡಬೇಕಿತ್ತು. ಈ ತೀರ್ಪು ಮುಸ್ಲಿಂ ಕಾನೂನಿಗೆ ವಿರುದ್ಧವಾಗಿದೆ.
– ಶಾಬಾನ್ ಉಡುಪಿ, ಹೂವಿನ ವ್ಯಾಪಾರಿ
ಕಾನೂನಿನ ಲೆಕ್ಕದಲ್ಲಿ ಎಲ್ಲರೂ ಸಮಾನರು
ಕೋರ್ಟ್ ಇಂತಹ ಮಹತ್ವದ ತೀರ್ಪು ಕೊಡುವ ಮೊದಲು ಅದರ ಪೂರ್ವಾಪರವನ್ನು ಪರಿಶೀಲಿಸಬೇಕಿತ್ತು. ಒಮ್ಮೆಲೆ ಇಂತಹ ತೀರ್ಪು ನೀಡುವುದು ಸರಿಯಲ್ಲ. ಆದರೆ ಕಾನೂನಿನ ಲೆಕ್ಕದಲ್ಲಿ ಎಲ್ಲರೂ ಸಮಾನರು. ತೀರ್ಪಿನ ಬಗ್ಗೆ ಗೌರವವಿದೆ.
– ಅಬ್ದುಲ್ ಮುನಾಫ್ ಉದ್ಯಾವರ, ರಿಕ್ಷಾ ಚಾಲಕ
ಧಾರ್ಮಿಕ ವಿಚಾರದಲ್ಲಿ ಮೂಗು ತೂರಿಸುವುದು ಸಲ್ಲ
ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ನಿಷೇಧಿಸಿರುವುದು ತಪ್ಪು ನಿರ್ಧಾರ. ಕೋರ್ಟ್ ಇಂತಹ ಧಾರ್ಮಿಕ ವಿಚಾರಗಳಲ್ಲಿ ಮೂಗು ತೋರಿಸುವುದು ಸರಿಯಲ್ಲ.
– ಬಾವಾ ಸಾಹೇಬ್ ಉಡುಪಿ, ರಿಕ್ಷಾ ಚಾಲಕ
ಮುಸ್ಲಿಂ ಸಮುದಾಯದ ಭಾವನೆಗಳಿಗೆ ಆಘಾತ
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಗೌರವವಿದೆ. ಆದರೆ ಮುಸ್ಲಿಂ ಸಮುದಾಯದ ನಂಬಿಕೆಗಳಿಗೆ ಇದರಿಂದ ಆಘಾತವಾಗಿದೆ. ತಲಾಖ್ ಬಗ್ಗೆ ಶರೀಅತ್‌ನಲ್ಲಿ ಇರುವ ನಿಯಮಗಳನ್ನು ಯಥಾವತ್ತಾಗಿ ಜಾರಿಗೆ ತರುತ್ತಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಶರೀಅತ್ ನಿಯಮಗಳು ಸರಿಯಾಗಿ ಪಾಲನೆಯಾಗಬೇಕು.
- ಸಹನಾಝ್, ಸಹನಾಝ್ ವುಮೆನ್ಸ್ ಕೌನ್ಸೆಲಿಂಗ್ ಅಧ್ಯಕ್ಷೆ
ನ್ಯಾಯಾಲಯಾದ ಆದೇಶದಿಂದ ನೋವು
ಮುಸ್ಲಿಂ ಧರ್ಮ ಪಾಲಿಸುವ ನಿಯಮಗಳನ್ನು ನ್ಯಾಯಾಲಯ ರದ್ದು ಮಾಡಿರುವುದು ನೋವಿನ ಸಂಗತಿ. ನ್ಯಾಯಾಲಯದ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ಧರ್ಮ ಕಟ್ಟುಪಾಡುಗಳನ್ನು ಗಾಳಿಗೆ ತೂರುವುದಿಲ್ಲ. ಮುಂದೆಯೂ ಧರ್ಮ ತೋರಿಸಿದ ಹಾದಿಯಲ್ಲೇ ನಡೆಯುತ್ತೇವೆ.
– ಶಾಹಿನ, ಗೃಹಿಣಿ, ಮಣ್ಣಗುಡ್ಡೆ
ಕುರ್ ಆನ್‌ನಲ್ಲಿ ಯಾವುದೇ ಗೊಂದಲವಿಲ್ಲ
ಪವಿತ್ರ ಕುರ್ ಆನ್‌ನಲ್ಲಿ ಹೇಳಿರುವ ತಲಾಖ್ ಪದ್ಧತಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಅದು ಧರ್ಮದ ಚೌಕಟ್ಟಿನಲ್ಲೇ ನಡೆಯುತ್ತಿದೆ. ಪ್ರಸ್ತುತ ದಿನಗಳಲ್ಲಿ ತಲಾಖ್ ಪದ್ಧತಿಯ ಕುರಿತು ಜನರು ಹೆಚ್ಚು ಜಾಗೃತರಾಗಿದ್ದಾರೆ. ಹೀಗಾಗಿ ನಾವು ನಮ್ಮ ಧರ್ಮದಲ್ಲಿ ಹೇಳಿರುವ ಪದ್ಧತಿಯನ್ನೇ ಅನುಸರಿಸುತ್ತೇವೆ. ತೀರ್ಪಿನ ಕುರಿತು ನಾವು ತಿಳಿಯದೆ ಏನೂ ಹೇಳುವಂತಿಲ್ಲ.
– ಶಬೀರ್ ಅಹ್ಮದ್, ಮಂಗಳೂರು
ಉತ್ತಮ ವಿಚ್ಛೇದನ ಪದ್ಧತಿ
ಪವಿತ್ರ ಕುರ್‌ಆನ್‌ನಲ್ಲಿ ಉಲ್ಲೇಖಗೊಂಡಿರುವ ರೀತಿಯಲ್ಲಿ ತಲಾಖ್ ಜಾರಿಯಾದರೆ ಇದರಷ್ಟು ಉತ್ತಮವಾಗಿರುವ ವಿಚ್ಛೇದನ ಪದ್ಧತಿ ಯಾವುದೂ ಇಲ್ಲ. ಕೆಲವೊಂದೆಡೆ ಇದರ ಉಲ್ಲಂಘನೆಯಾಗಬಹುದು. ಅದರ ಕುರಿತು ಚರ್ಚೆ ಮಾಡಿ ಧರ್ಮದ ಚೌಕಟ್ಟಿನಲ್ಲೇ ಅದನ್ನು ಸರಿ ಪಡಿಸುವ ಕೆಲಸ ಆಗಬೇಕು.
- ಶಬಿಹಾ ಫಾತಿಮಾ, ಪಕಲಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.