ಹಬ್ಬದ ಸಡಗರಕ್ಕೆ ಮಳೆ ಹೊಡೆತ
Team Udayavani, Aug 23, 2017, 12:10 PM IST
ಬೆಂಗಳೂರು: ಗೌರಿ-ಗಣೇಶ ಹಬ್ಬದ ಅಂಗವಾಗಿ ಈಗಾಗಲೇ ಚುರುಕಿನಿಂದ ಇರಬೇಕಿದ್ದ ಮಾರುಕಟ್ಟೆ ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ಮಂಕಾಗಿದೆ. ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದು ಮತ್ತು ತಿಂಗಳ ಕೊನೆಯಲ್ಲಿ ಹಬ್ಬಗಳು ಬಂದಿರುವುದು ಕೂಡ ಮಾರುಕಟ್ಟೆ ಮಂಕಾಗಲು ಕಾರಣವೆನ್ನಬಹುದು.
ಬಹುತೇಕ ಜನರ ಜೇಬು ಖಾಲಿಯಾಗಿರುವ ಈ ಹೊತ್ತಲ್ಲೇ ಬಂದಿರುವ ಹಬ್ಬಕ್ಕೆ ಜನರ ಅಸಕ್ತಿ ಸ್ವಲ್ಪ ಕಡಿಮೆಯೇ ಇದ್ದಂತಿದೆ. ಹೀಗಿದ್ದರೂ, ಮಾರುಕಟ್ಟೆಯಲ್ಲಿ ಖರೀದಿ ಭರಾಟೆಯೂ ನಡೆಯುತ್ತಿದೆ. ಆದರೆ, ನಿತ್ಯವೂ ಸಂಜೆ ಸುರಿಯುತ್ತಿರುವ ಮಳೆ ವ್ಯಾಪಾರಕ್ಕೂ ಹೊಡೆತ ಕೊಟ್ಟಿದೆ. ನಗರದಲ್ಲಿ ಈಗಾಗಲೇ ಹಲವಡೆ ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳು ತಲೆ ಎತ್ತಿವೆ.
ಪಿಒಪಿ ಮೂರ್ತಿಗಳಿಗೆ ಅಂಕುಶ ಬಿದ್ದಿರುವುದರಿಂದ ಬೃಹತ್ ಮೂರ್ತಿಗಳು ಗೋಚರವಾಗುತ್ತಿರುವುದು ಕಡಿಮೆ. ಆದರೆ, ಮಣ್ಣಿನಿಂದಲೇ ತಯಾರಿಸಿದ, ಬಣ್ಣವಿಲ್ಲದ ಮೂರ್ತಿಗಳ ಖರೀದಿ ವಿಚಾರದಲ್ಲಿ ಜನರ ಸಂಭ್ರಮಕ್ಕೇನೂ ಕುಂದುಂಟಾಗಿಲ್ಲ. ಈಗಾಗಲೇ ಹಲವು ಮಳಿಗೆಗಳಲ್ಲಿ ಗಣೇಶನ ಮೂರ್ತಿಗಳ ಬುಕ್ಕಿಂಗ್ ನಡೆದಿದೆ. ಇನ್ನು ಕೊನೆ ಹಂತದ ಮಾರಾಟದ ಮೇಲೆ ಮಾರಾಟಗಾರರು ಕಣ್ಣಿಟ್ಟಿದ್ದಾರೆ. ಆದರೆ, ಮಳೆರಾಯ ಗಣೇಶ ಮೂರ್ತಿ ಮಾರಾಟಗಾರರನ್ನೂ ಕಾಡುತ್ತಿದ್ದಾನೆ.
ಮಣ್ಣಿನ ಮೂರ್ತಿಗಳು ಮಳೆಯಿಂದಾಗಿ ಹಾನಿಯಾಗುತ್ತಿವೆ ಎನ್ನುತ್ತಾರೆ ಹಲವಾರು ವ್ಯಾಪಾರಿಗಳು. ಇನ್ನು ಮಾರುಕಟ್ಟೆಯಲ್ಲಿ ಹಣ್ಣು, ಹೂಗಳ ಬೆಲೆ ಸ್ವಲ್ಪ ಏರಿಳಿತವಾಗಿದ್ದರೂ, ಸದ್ಯಕ್ಕೆ ಬೆಲೆ ಏರಿಕೆ ಭೀತಿ ಎದುರಾಗಿಲ್ಲ. ಆದರೆ ಇನ್ನು ಮೂರು ದಿನಗಳಲ್ಲಿ ಬೆಲೆ ವಿಚಾರದಲ್ಲಿ ಏನಾಗುತ್ತದೆ ಎಂದು ಹೇಳಲು ಬರುವುದಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.
ತಮಿಳುನಾಡಿನಿಂದ ಈಗಾಗಲೇ ಹೂ, ಹಣ್ಣು ಮಾರುಕಟ್ಟೆಗೆ ಬರಲಾರಂಭಿಸಿದೆ. ದೂರದೂರುಗಳ ರೈತರೂ ಬಾಳೆ ಕಂದು, ಮಾವಿನ ಎಲೆಯನ್ನು ನಗರಕ್ಕೆ ಸಾಗಿಸುತ್ತಿದ್ದಾರೆ. ಮಳೆ ಬೀಳುತ್ತಿರುವುದರಿಂದ ಮಾರುಕಟ್ಟೆಗೆ ಪೂರೈಕೆ ಸರಿಯಾಗಿ ಆಗದಿದ್ದರೆ ಖಂಡಿತಾ ಬೆಲೆ ಏರುವ ಭೀತಿಯಂತೂ ಇದ್ದೇ ಇದೆ ಎನ್ನುತ್ತಾರೆ ಕೆಲವು ವ್ಯಾಪಾರಿಗಳು.
ಬುಧವಾರ ಮಾರುಕಟ್ಟೆಯಲ್ಲಿ ಹೂವು-ಹಣ್ಣಿನ ಬೆಲೆ ಏರಿಕೆ ಇದ್ದು, ಗಂಟೆಗೊಮ್ಮೆ ಹೂವಿನ ಬೆಲೆಯಲ್ಲಿ ಏರಿಳಿತವಾಗಲಿದೆ. ವರಲಕ್ಷ್ಮೀ ಹಬ್ಬದ ಹಿಂದಿನ ದಿನ ಕನಕಾಂಬರ ಕೆಜಿಗೆ 1200 ರೂ.ರಿಂದ 1500ರೂ.ಗಳಂತೆ ಮಾರಾಟವಾಗಿತ್ತು. ಮಲ್ಲಿಗೆ ಮತ್ತು ಮಲ್ಲೆ ಹೂವು ಕೆಜಿಗೆ 450ರಿಂದ 500ರೂ.ನಂತೆ ಮಾರಾಟವಾಗಿತ್ತು. ಈ ಬಾರಿ ಹೂವಿನ ದರದಲ್ಲೂ ಸಾಕಷ್ಟು ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಹೂವಿನ ಮರ್ಚೆಂಟ್ ದಿವಾಕರ್ ತಿಳಿಸಿದ್ದಾರೆ.
ಆ.24ರಂದು ಗೌರಿ ಹಬ್ಬ ಮತ್ತು 25ಕ್ಕೆ ಗಣೇಶ ಹಬ್ಬ ಇದ್ದು, ಗೌರಿ ಹಬ್ಬದ ಅಂಗವಾಗಿ ತವರು ಮನೆಯಿಂದ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳಲ್ಲಿ ಭಾರಿ ಎನಿಸದಿದ್ದರೂ, ಉತ್ತಮ ವಹಿವಾಟು ನಡೆದಿದೆ.
ಹಣ್ಣಿನ ವ್ಯಾಪಾರ ಹೀಗಿದೆ: ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಹಬ್ಬದ ಅಂಗವಾಗಿ ವಹಿವಾಟು ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಪ್ರಸ್ತುತ ಬಾಳೆ ಹಣ್ಣಿನ ವಹಿವಾಟಿನಲ್ಲಿ ಏಕಾಏಕಿ 10ರಿಂದ 15 ರೂ.ಕುಸಿತವಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 95ರಿಂದ 97 ರೂ.ಇದ್ದ ಏಲಕ್ಕಿ ಬಾಳೆ ಹಣ್ಣಿನ ಬೆಲೆ ಇದೀಗ 80ರೂ.ಗಳಿಂದ 85ಕ್ಕೆ ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಏಲಕ್ಕಿ ಬಾಳೆ ಹಣ್ಣಿಗೆ 95ರಿಂದ 110 ರೂ.ಗಳ ವರೆಗೂ ಇದೆ.
ಪಚ್ಚಬಾಳೆ ಕೆಜಿಗೆ 22ರಿಂದ 23 ರೂ.ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 35ರಿಂದ 40 ರೂ. ಹಾಗೂ ಪೂಜೆ ಬಾಳೆಗೆ ಹೋಲ್‌ಸೇಲ್‌ನಲ್ಲಿ ಕೆಜಿಗೆ 30 ರೂ.ಹಾಗೂ ಚಿಲ್ಲರೆ ಮಾರಾಟದಲ್ಲಿ 40ರಿಂದ 50 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಶನಿವಾರದ ವರೆಗೂ ಈ ಬೆಲೆಯಲ್ಲಿ ಸ್ವಲ್ಪ ಏರಿಳಿತವಾಗಲಿದ್ದು, ಹೆಚ್ಚಿನ ಬದಲಾವಣೆ ಆಗಲಾರದು ಎಂದು ಬಾಳೆಹಣ್ಣು ಮಂಡಿ ಮಾಲೀಕ ಚಕ್ರಪಾಣಿ ಮಾಹಿತಿ ನೀಡಿದ್ದಾರೆ.
ಹಣ್ಣುಗಳ ಮಾರುಕಟ್ಟೆಯ ಹೋಲ್‌ಸೇಲ್ ಮಾರಾಟದಲ್ಲಿ ಪ್ರಸ್ತುತ ಸೇಬು ಹಣ್ಣು ಪ್ರತಿ ಕೆಜಿಗೆ 80ರಿಂದ 120ರವರೆಗೂ ಇದೆ. ಅದರಲ್ಲೂ ಇಂರ್ಪೋಟೆಡ್ ಸೇಬಿನ ಬೆಲೆ 140ರಿಂದ 150 ಇದೆ. ಹಾಗೆಯೇ ಮೂಸಂಬಿ ಹಣ್ಣಿನ ಗಾತ್ರಕ್ಕೆ ತಕ್ಕಂತೆ ಪ್ರತಿ ಕೆಜಿಗೆ 15ರಿಂದ 35 ರೂ.ಗಳವರೆಗೆ ಗಾತ್ರಕ್ಕೆ ತಕ್ಕಂತೆ ವಿವಿಧ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ.
ಅನಾನಸ್ ಪ್ರತಿ ಕೆಜಿಗೆ 25 ರೂ.ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 30ರಿಂದ 35ರೂ.ನಂತೆ ಮಾರಲಾಗುತ್ತಿದೆ. ಕಲ್ಲಂಗಡಿ(ಕಿರಣ್) ಕೆಜಿಗೆ 20ರಿಂದ 22 ರೂ. ಹಾಗೂ ಪಪ್ಪಾಯ 15ರಿಂದ 16ರೂ.ಗಳಿವೆ. ದಾಳಿಂಬೆ ಗಾತ್ರಕ್ಕೆ ತಕ್ಕಂತೆ ನಾಲ್ಕು ವಿಧದಲ್ಲಿ 30ರೂ.ಗಳಿಂದ 60 ರೂ.ಗಳವರೆಗೆ ಮಾರಲಾಗುತ್ತಿದೆ.
ಬೆಂಗಳೂರಿನಿಂದ ತಮಿಳುನಾಡು, ಸೇಲಂ, ಕೇರಳಕ್ಕೆ ಹೆಚ್ಚು ಹಣ್ಣುಗಳು ರಫ್ತಾಗುತ್ತವೆ. ಜತೆಗೆ ರಾಜ್ಯದ ವಿವಿಧ ಕಡೆಗಳಿಗೆ 100ರಿಂದ 130ಕ್ಕೂ ಹೆಚ್ಚು ಲಾರಿಗಳಲ್ಲಿ ಹಣ್ಣುಗಳು ಹೋಗುತ್ತವೆ. ಎರಡು ದಿನ ಹಬ್ಬ ಇರುವುದರಿಂದ ಹಣ್ಣುಗಳ ವ್ಯವಹಾರ ಹೆಚ್ಚುವ ನಿರೀಕ್ಷೆ ಇದೆ.
-ವಿ.ಸಿದ್ದಾರೆಡ್ಡಿ, ಕಾರ್ಯದರ್ಶಿ, ಎಪಿಎಂಸಿ, ಸಿಂಗೇನಅಗ್ರಹಾರ ಮಾರುಕಟ್ಟೆ.
ಒಂದು ವಾರದಿಂದ ನಿರಂತವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಹೂಗಳನ್ನು ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಮಳೆಯಿಂದಾಗಿ ಗ್ರಾಹಕರೂ ಅಷ್ಟಾಗಿ ಮಾರುಕಟ್ಟೆಗಳತ್ತ ಬರುತ್ತಿಲ್ಲ. ಆದರೂ, ವ್ಯಾಪಾರ ಇರುವುದು ಹಬ್ಬದ ಹಿಂದಿನ ಎರಡ ದಿನಗಳಲ್ಲಿ. ಹೀಗಾಗಿ ಆತಂಕವೇನೂ ಇಲ್ಲ.
-ಗೋಪಾಲಪ್ಪ, ಹೊಸಕೋಟೆಯ ಹೂ ಬೆಳೆಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.