ಅನುಕರಣೀಯ ಜನ್ಮದಿನಾಚರಣೆ
Team Udayavani, Aug 25, 2017, 6:10 AM IST
ಪರ್ಕಳದ “ಸರಿಗಮ ಭಾರತಿ’ ಸಭಾಂಗಣದಲ್ಲಿ ಆಗಸ್ಟ್ 1ರಂದು ಕಾರ್ಯಕ್ರಮ ನೀಡಿದ ಕು| ದಿವ್ಯಶ್ರೀ ಮತ್ತು ಕು| ಉಷಾ ರಸಿಕರ ಮನದಲ್ಲಿ ಕೆಲಕಾಲ ಉಳಿಯಬಲ್ಲಂತಹ ಕಛೇರಿಗಳನ್ನು ನೀಡಿ ಸಾರ್ಥಕ್ಯ ಮೆರೆದಿದ್ದಾರೆ. ಪ್ರಸನ್ನ ಮುಖಮುದ್ರೆ ಒಳ್ಳೆಯ ಪಾಠಾಂತರ, ವಿಪುಲವಾದ ಮನೋಧರ್ಮ, ತಮಗೆ ಸ್ಪುರಿಸುವ ಹೊಳಹುಗಳನ್ನು ಹಾಗೆಯೇ ನಿರೂಪಿಸಲು ಅನುಕೂಲಕರವಾದ ಶಾರೀರ, ಈ ಎಲ್ಲಕ್ಕೂ ಮಿಗಿಲಾಗಿ ಇಬ್ಬರಲ್ಲೂ ನೆಲೆಯೂರಿರುವ ಸಂಗೀತ ಪ್ರೀತಿ!
ಕು| ದಿವ್ಯಶ್ರೀ ಬಹುಶ್ರುತವಲ್ಲದ ನೀಲಾಂಬರಿ ವರ್ಣವನ್ನು ತ್ರಿಸ್ರ ಸೇರಿದಂತೆ ಮೂರು ಕಾಲಗಳಲ್ಲಿ ಹಾಡಿ ಘನವಾದ ಕಛೇರಿಗೆ ನಾಂದಿ ಹಾಡಿದರು. ನಾಟ, ಚಾರುಕೇಶಿ, ದರ್ಬಾರ್ ರಾಗಗಳ ಮಧ್ಯಮ ಕಾಲದ ಕೃತಿಗಳು ಒಳ್ಳೆ ತೂಕದೊಂದಿಗೆ ಪ್ರಸ್ತುತವಾದವು. ಆಂದೋಳಿಕಾ ರಾಗ ವನ್ನು ಎಚ್ಚರಿಕೆಯಿಂದ ಮತ್ತು ದೋಷರಹಿತವಾಗಿ ಮುನ್ನಡೆಸಿದ ಗಾಯಕಿ, ಹಂತಹಂತವಾಗಿ ವಿಸ್ತಾರಗೊಂಡ ಸಂಗತಿಗಳಿಂದ ಮತ್ತು ಪ್ರಬುದ್ಧವಾದ ಸ್ವರವಿನಿಕೆಗಳಿಂದ ಈ ಕೃತಿಯನ್ನು ಅಂದಗೊಳಿಸಿದರು.
ಪ್ರಧಾನ ರಾಗ ವಾಚಸ್ಪತಿಯಲ್ಲಿ ಚೊಕ್ಕವಾದ ಆಲಾಪನೆ, ರೂಢಿಯಂತೆ ನೆರವಲ್ ಮಾಡಿದ ಗಾಯಕಿ ಅನಂತರದ ಸ್ವರ ಕಲ್ಪನೆಗಳಲ್ಲಿ ಅದೆಷ್ಟೋ ಚಿಕ್ಕ, ದೊಡ್ಡ ಮೊಹರಾಗಳು, “ಪೊರುತ್ತಂ’ ಗಳು ಅಲ್ಲದೆ “ಕುರೈಪ್ಪು’ನಲ್ಲಿಯೂ “ಅನಾಗತ’ ಗ್ರಹವನ್ನು ಚೊಕ್ಕ ವಾಗಿ ಕಾಯ್ದುಕೊಂಡು ಗುಣಗ್ರಾಹಿ ಶ್ರೋತೃಗಳ ಮೆಚ್ಚುಗೆ ಪಡೆದರು. ಗಾಯಕಿ ಮಂದ್ರ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು ಎನಿಸಿತು. ಮೃದಂಗದಲ್ಲಿ ಸಹಕರಿಸಿದ ನಾರಾಯಣ ಪ್ರಕಾಶ್ ಒಂದೊಳ್ಳೆ ತನಿ ಆವರ್ತನವನ್ನು ನೀಡಿದರೆ, ಮತ್ತೂರು ಮಧುಮುರಳಿ ವಯಲಿನ್ ಸಹವಾದನ ನೀಡಿದರು.
ಸಂಜೆ ಹಾಡಿದವರು ಕು| ಉಷಾ ಎಚ್. ಸಾಂಪ್ರದಾಯಿಕತೆಯನ್ನು ಗೌರವಿಸುತ್ತ ವರ್ತಮಾನಕ್ಕನುಗುಣವಾಗಿ ಲಯಗುಣಿತ ಮತ್ತು ರಾಗಮಾಧುರ್ಯಗಳ ಸಮನ್ವಯ ಸಾಧಿಸಬಲ್ಲ ಅಪೂರ್ವ ಕಲಾವಿದೆ ಈಕೆ. ಎಲ್ಲೂ ಅತಿಯೆನಿಸದ ಹಿತವಾದ ತಂತ್ರಗಾರಿಕೆಗಳು, ಹದವರಿತ ಬಿರ್ಕಾಗಳು, ಕೃತಿಗಳ ಸಮರ್ಪಕ ಆಯ್ಕೆ ಈಕೆಯದು!
ಸಾವೇರಿ ವರ್ಣದಲ್ಲೇ ಪ್ರತಿ ಆವರ್ತದಲ್ಲೂ “ಕಾಲ ವಿಭಜನೆ’ ಮಾಡಿದ ಗಾಯಕಿಯ ಲವಲವಿಕೆ ತುಂಬಿದ ಸಭೆಯ ಶ್ರೋತೃಗಳಲ್ಲೂ ಪ್ರತಿಫಲಿಸಿತು. ನಾಟ, ಚಂದ್ರಜ್ಯೋತಿ ಗಂಭೀರವಾಗಿ, ರಾಜ ನಡಿಗೆಯಲ್ಲಿ ಪ್ರಸ್ತುತಗೊಂಡವು. ನೆರವಲ್, ಸ್ವರವಿನಿಕೆಗಳ ಸಹಿತ ಹಂಸನಾದ ಮತ್ತು ತ್ರಿಸ್ರ ನಡೆಯ ಶ್ರೀರಂಜನಿ -ಈ ಕೃತಿಗಳಲ್ಲಿ ಮಣಿಗಳು ಚಿಮ್ಮಿದಂತೆ ಅತಿವೇಗದ ಬಿರ್ಕಾ ಗಳಲ್ಲೂ ಗಾಯಕಿ ಸ್ವರಸ್ಥಾನಗಳ ನಿಖರತೆಯನ್ನು, ರಾಗಸೌಂದರ್ಯವನ್ನು ಕಾಯ್ದುಕೊಂಡದ್ದು ಅನನ್ಯವಾಗಿತ್ತು. ಕಲಾವಿದೆಯ ಕಂಠಸಿರಿಯಲ್ಲಿ ಎಸಳೆಸಳಾಗಿ ಅರಳಿಕೊಂಡ ರೀತಿಗೌಳದ ಪ್ರಸ್ತುತಿಗೆ ಉತ್ತಮ ಬೆರಳುಗಾರಿಕೆಯಿಂದ ಪರಿಮಳ ತುಂಬಿದರು ವೈಭವ ರಮಣಿ. ಪ್ರಧಾನ ರಾಗ ತೋಡಿ ರಾಗವಿಸ್ತಾರ, ಗ್ರಹಭೇದ, ನೆರವಲ್ ಸ್ವರಗುಣಿತಗಳು ಮತ್ತು ಮುಕ್ತಾಯಗಳಿಂದ ಅಲಂಕೃತವಾಯಿತು. ನಿಕ್ಷಿತ್ ಪುತ್ತೂರು ಇವರ ಮೃದುವಾದ ಮೃದಂಗವಾದನ ಮತ್ತು ನಡೆವೈವಿಧ್ಯದ ತನಿ ಆವರ್ತನ ಕಛೇರಿಗೆ ಕಳೆ ತುಂಬಿದೆ.
ಕೊನೆಯ ಕಾರ್ಯಕ್ರಮ “ಜ್ವಾಲಾಮುಖೀ ಅಂಬೆ’ ಎಂಬ ಏಕವ್ಯಕ್ತಿ ನೃತ್ಯರೂಪಕ. ಹೆಚ್ಚಿನ ರಂಗಪರಿಕರಗಳೇನೂ ಇಲ್ಲದಿದ್ದರೂ ವಿದ್ಯಾಶ್ರೀ ರಾಧಾಕೃಷ್ಣ ಹುಡುಗು ಬುದ್ಧಿಯ ತರುಣಿ ಅಂಬೆಯಾಗಿ, ಪ್ರೇಮಿಯಾಗಿ, ವಿರಹಿಯಾಗಿ, ಸಂತ್ರಸ್ತ ಅಬಲೆಯಾಗಿ, ಪರಿತ್ಯಕ್ತ ವಧುವಾಗಿ ಮತ್ತು ರೋಷದ ಅಗ್ನಿಯಲ್ಲಿ ಮರುಹುಟ್ಟು ಪಡೆಯುವ ಪ್ರತೀಕಾರದ ಶಿಖಂಡಿಯಾಗಿ ಹೃದಯಂಗಮವಾಗಿ ಮತ್ತು ಪ್ರೇಕ್ಷಕರ ಮನ ಮುಟ್ಟುವ ರೀತಿಯಲ್ಲಿ ಅಭಿನಯಿಸಿದರು. ಸುಮಾರು 45 ನಿಮಿಷಗಳ ಈ ಕಾರ್ಯಕ್ರಮ ಮುಗಿದ ಅನಂತರವೂ ರಸಿಕರು ಮೋಡಿಗೊಳಗಾದವರಂತೆ ಕುಳಿತೇ ಇದ್ದರು ಎನ್ನುವುದು ಉಲ್ಲೇಖಾರ್ಹ. ಭರತನಾಟ್ಯದ ರೂಢಿಗತ ಅನುಕ್ರಮಣಿಕೆಗಿಂತ ಭಿನ್ನವಾಗಿ ಮೂಡಿಬಂದ ಇಂತಹ ನೃತ್ಯರೂಪಕಗಳು ಇನ್ನೂ ಹೆಚ್ಚು ಹೆಚ್ಚಾಗಿ ನಡೆಯುತ್ತಿರಲಿ.
ಈ ಎಲ್ಲ ಕಾರ್ಯಕ್ರಮಗಳ ಆಯೋಜನೆ, ಸಂಪೂರ್ಣ ಆತಿಥ್ಯವನ್ನು ಒದಗಿಸಿದ ಉಮಾಶಂಕರಿ ಮತ್ತು ಡಾ| ಉದಯಶಂಕರ್ ದಂಪತಿ ಅಭಿನಂದನಾರ್ಹರು.
ಸರೋಜಾ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.