ಸಿನಿಮಾದ ಗೆಲುವು ಗೊತ್ತಿಲ್ಲದ ಹುಟ್ಟು!
Team Udayavani, Aug 25, 2017, 6:10 AM IST
ದ್ವಾರಕೀಶ್ ಕನ್ನಡ ಚಿತ್ರರಂಗ ಕಂಡ ಕಲಾ ಚತುರ. ಬ್ಲ್ಯಾಕ್ ಅಂಡ್ ವೈಟ್ ಕಾಲದಿಂದಲೂ ಚಿತ್ರರಂಗವನ್ನು ಅತಿಯಾಗಿ ಬಲ್ಲವರು. ಆಳವಾಗಿ ತಿಳಿದವರು. ಕರುನಾಡನ್ನೇ ಗೆದ್ದ ಕುಳ್ಳನಿಗೆ ಈಗ 75 ರ ಹರೆಯ! ಈ ಎಪ್ಪತ್ತೈದು ವರ್ಷದಲ್ಲಿ ಅವರು ಬರೋಬ್ಬರಿ 55 ವಸಂತಗಳನ್ನು ಕನ್ನಡ ಚಿತ್ರರಂಗದಲ್ಲೇ ಕಳೆದಿದ್ದಾರೆ ಅನ್ನೋದೇ ವಿಶೇಷ. 1962 ರಲ್ಲಿ ಶುರುವಾದ “ವೀರ ಸಂಕಲ್ಪ’ ಮೂಲಕ ಬಣ್ಣದ ಲೋಕಕ್ಕೆ ಧುಮುಕಿದ ದ್ವಾರಕೀಶ್, ಅಲ್ಲಿಂದ ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂದೆದ್ದಿದ್ದಾರೆಂದರೆ, ಅದೊಂದು ಮೈಲಿಗಲ್ಲು. “ಕರುನಾಡ ಕುಳ್ಳ’ ಎಂದೇ ಕರೆಸಿಕೊಳ್ಳುವ ದ್ವಾರಕೀಶ್, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಐದು ದಶಕಗಳ ಚಿತ್ರಜೀವನದ ಕುರಿತು ಮೆಲುಕು ಹಾಕಿದ್ದಾರೆ.
ನನ್ನ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ “ವೀರ ಸಂಕಲ್ಪ’ ನನ್ನ ಮೊದಲ ಚಿತ್ರ. ಅದು 1962 ರಲ್ಲಿ ಶುರುವಾಗಿ 1964 ರಲ್ಲಿ ಬಿಡುಗಡೆಯಾಯ್ತು. ಅಲ್ಲಿಂದ ಇಲ್ಲಿಯವರೆಗೂ ಬಣ್ಣದ ಬದುಕು ಸಾಗಿ ಬಂದಿದೆ. ಈವರೆಗೆ ನಾನು ಹಿಂದಿರುಗಿ ನೋಡಿಲ್ಲ. ಸಿನಿಮಾ ನನ್ನ ಬದುಕು ಎಂದು ನಂಬಿದವನು ನಾನು. ನಾನಿಲ್ಲಿ ಬಹಳಷ್ಟು ಏಳು-ಬೀಳು ಕಂಡಿದ್ದೇನೆ, ನೋವು-ನಲಿವು ಉಂಡಿದ್ದೇನೆ, ಸಾಕಷ್ಟು ಸಕ್ಸಸ್ ಮತ್ತು ಫೇಲ್ಯೂರ್ ನೋಡಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡಿಗರ ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ಇಂತಹವನ ಲೈಫಲ್ಲೂ ಗಾಳಿ, ಬಿರುಗಾಳಿ, ಸಿಡಿಲು, ಗುಡುಗು, ಮಿಂಚು ಬಂದಿದೆ. ಅವೆಲ್ಲವನ್ನೂ ಅನುಭವಿಸಿ, ದಾಟಿ ಬಂದಿದ್ದೇನೆ ಮತ್ತು ಬದುಕಿದ್ದೇನೆ. ಸಿನಿಮಾ ಸುಲಭವಾದ ಬದುಕಲ್ಲ.
ಅದಕ್ಕೆ ಆದಂತಹ ಸಾಕಷ್ಟು ಕಷ್ಟಗಳಿವೆ. ಯಾರ ಮನೆಯಲ್ಲೂ ಕೂಡ ಸಿನಿಮಾಗೆ ಹೋಗು ಅನ್ನೋದಿಲ್ಲ. ಬದಲಾಗಿ ಆ ರಂಗಕ್ಕೆ ಯಾಕೆ ಹೋಗ್ತಿàಯಾ ಅನ್ನುವವರೇ ಹೆಚ್ಚು. ಅಂತಹ ರಂಗದಲ್ಲಿ ನಾನು 55 ವರ್ಷ ಪೂರೈಸಿದ್ದೇನೆ ಎಂಬುದೇ ಖುಷಿಯ ವಿಷಯ.”ವೀರ ಸಂಕಲ್ಪ’ ನಂತರ ನನಗೆ ಸಾಲು ಸಾಲು ಸಿನಿಮಾಗಳು ಹುಡುಕಿ ಬಂದವು.
1965 ರಲ್ಲಿ “ಮಮತೆಯ ಬಂಧನ’ ಸಿನಿಮಾ ನಿರ್ಮಾಣ ಮಾಡಿದೆ. ಆಗ ಆ ಚಿತ್ರವನ್ನು 55 ಸಾವಿರ ರೂಪಾಯಿನಲ್ಲಿ ಮಾಡಿದ್ದೆ. ಮಣಿರತ್ನಂ ತಂದೆ ರತ್ನಮಯ್ಯರ್ ಚಿತ್ರದ ಹಂಚಿಕೆ ಮಾಡಿದ್ದರು. ಆ ದಿನಗಳಲ್ಲೇ ನಾನು ಡಾ. ರಾಜಕುಮಾರ್ ಅವರೊಂದಿಗೆ ಸುಮಾರು 45 ಸಿನಿಮಾಗಳಲ್ಲಿ ನಟಿಸಿದ್ದೆ. ಅದಾಗಲೇ, ರಾಜ್ ಮತ್ತು ದ್ವಾರಕೀಶ್ ಜೋಡಿ ಜನಪ್ರಿಯವಾಗಿತ್ತು. ಅದೇ ಟೈಮಲ್ಲಿ ನನಗೊಂದು ಅದೃಷ್ಟ ಬಂತು. ಡಾ.ರಾಜ್‌ಕುಮಾರ್ ಅವರು ಬಹಳ ಬಿಝಿಯಾಗಿದ್ದ ಮತ್ತು ಅವರ ಡೇಟ್ಸ್ ಸಿಗದ ಸಂದರ್ಭದಲ್ಲಿ, ನಾನು “ಮೇಯರ್ ಮುತ್ತಣ್ಣ’ ಸಿನಿಮಾ ನಿರ್ಮಾಣ ಮಾಡಿದೆ. ನಿರ್ದೇಶಕ ಸಿದ್ಧಲಿಂಗಯ್ಯನಿಗೂ ಅದು ಮೊದಲ ಚಿತ್ರ. ಆಗ ಆ ಚಿತ್ರವನ್ನು ಸುಮಾರು ಒಂದುವರೆ ಎರಡು ಲಕ್ಷ ರೂ. ಬಜೆಟ್‌ನಲ್ಲಿ ಮಾಡಿದ್ದೆ. ಆ ಚಿತ್ರ ಸೂಪರ್ ಹಿಟ್ ಆಯ್ತು. ಆಮೇಲೆ ಆಗಿದ್ದೆಲ್ಲವೂ ಪವಾಡ.
ಒಂದೊಂದೇ ಕುಳ್ಳ ಸೀರಿಸ್ ಚಿತ್ರಗಳನ್ನು ಮಾಡುತ್ತಾ ಹೋದೆ. “ಕುಳ್ಳ ಏಜೆಂಟ್000′, “ಕೌಬಾಯ್ ಕುಳ್ಳ’, “ಕಳ್ಳ ಕುಳ್ಳ’, “ಕುಳ್ಳ ಕುಳ್ಳಿ’, “ಪ್ರಚಂಡ ಕುಳ್ಳ’ ಚಿತ್ರಗಳು ಮೂಡಿಬಂದವು. 1982ರಲ್ಲಿ ನಾನು ಮದ್ರಾಸ್‌ಗೆ ಹೋದೆ. ಆಗ ನನ್ನ ಬೆನ್ನು ತಟ್ಟಿ, ಬನ್ನಿ ದ್ವಾರಕೀಶ್ ನಾನಿದ್ದೇನೆ ಅಂತ ಕಾಲ್‌ಶೀಟ್ ಕೊಟ್ಟು ಆಹ್ವಾನಿಸಿದ್ದು ರಜನಿಕಾಂತ್. ಅವರ ಜತೆ ನಾನು ಎರಡು ತಮಿಳು ಚಿತ್ರ ಹಾಗು ಹಿಂದಿಯಲ್ಲಿ “ಗಂಗ್ವಾ’ ಚಿತ್ರ ಮಾಡಿದ್ದೆ. 1982ರಿಂದ 1990ರವರೆಗೆ ನನ್ನ ಸಿನಿಮಾ ಜೀವನ ಅತ್ಯಂತ ಬಿಜಿಯಾಗಿತ್ತು. ಈ ಎಂಟು ವರ್ಷದಲ್ಲಿ ನಾನು 25 ಸಿನಿಮಾ ಮಾಡಿದ್ದೇನೆ. ಹಾಗೆ ಹೇಳುವುದಾದರೆ, ಆ ಎಂಟು ವರ್ಷಗಳನ್ನು ನಿಜವಾಗಿಯೂ “ಗೋಲ್ಡನ್ ಎರಾ’ ಅನ್ನಬಹುದು.
1990ರಲ್ಲಿ ದುರಾದೃಷ್ಟ ಒದಗಿಬಂತು. “ಆಫ್ರಿಕಾದಲ್ಲಿ ಶೀಲ’ ಎಂಬ ಚಿತ್ರ ಮಾಡಿದೆ. ಅಲ್ಲಿ ಹೊಡೆತ ತಿಂದವನು, “ಆಪ್ತಮಿತ್ರ’ ಬರೋವರೆಗೆ ಕಷ್ಟ ಅನುಭವಿಸಬೇಕಾಯಿತು. ಸಿನಿಮಾದಲ್ಲಿ ಸೋಲು-ಗೆಲುವು ಕಾಮನ್. ನಾನು ಗೆಲುವು ನೋಡಿ, ನೋಡಿ, ಆ ಗೆಲುವಲ್ಲಿದ್ದ ನನಗೆ ಆ ಅಷ್ಟು ವರ್ಷಗಳು ಗೆಲುವು ಸಿಗೋದೇ ಕಷ್ಟವಾಯ್ತು. ಯಾವ ಸಿನಿಮಾ ಗೆಲುವು ಕೊಡದೇ ಇದ್ದಾಗ, “ಆಪ್ರಮಿತ್ರ’ ನನಗೆ ಮತ್ತೂಂದು ಲೈಫ್ ಕೊಡು¤. ನನ್ನ ಲೈಫಲ್ಲಿ ನಾಲ್ಕೈದು ಜನರನ್ನು ಎಂದಿಗೂ ಮರೆಯೋದಿಲ್ಲ. ಅದು ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ರಜನಿಕಾಂತ್, ಶಂಕರ್‌ನಾಗ್ ಮತ್ತು ಅಂಬರೀಷ್.
ಇವರೆಲ್ಲರೂ ನನ್ನ ಸಿನಿ ಜರ್ನಿಯಲ್ಲಿ ಜೊತೆಯಾದವರು. ಎಲ್ರೂ ನನ್ನ ಸಿನಿಮಾ ಅಂತ ಕಾಲ್‌ಶೀಟ್ ಕೊಟ್ಟು ಬೆನ್ನುತಟ್ಟಿದವರು. ಅವರಿಲ್ಲ ಅಂದಿದ್ದರೆ, ಈ ಕುಳ್ಳ ಇರುತ್ತಿರಲಿಲ್ಲ. ಎಲ್ಲರೂ ಶೇರ್ ಹೋಲ್ಡರ್ ಆಫ್ ದ್ವಾರಕೀಶ್ ಚಿತ್ರ. ಅಂತ ಕೆಲಸ ಮಾಡಿದವರು. ಅವೆಲ್ಲರಿಗೂ ನಾನು ಚಿರಋಣಿ. ಮದ್ರಾಸ್‌ನಲ್ಲಿ ಎಂಜಿಆರ್ ಅವರ ತಮಿಳು ಚಿತ್ರ ನೋಡಿದ್ದೆ. ಅದು ಸಿಂಗಾಪುರದಲ್ಲಿ ಚಿತ್ರೀಕರಣವಾಗಿತ್ತು. ಕನ್ನಡದವರು ನಾವೇಕೆ ವಿದೇಶದಲ್ಲೂ ಶೂಟಿಂಗ್ ಮಾಡಬಾರದು ಅಂತ ಯೋಚಿಸಿದೆ. ಅಂಥದ್ದೊಂದು ಐಡಿಯಾವನ್ನು ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಬಳಿ ಹೇಳಿದೆ. ಆಗ ಅವರು, “ದ್ವಾರಕೀಶ್ ನಿಮ್ಮ ಜೊತೆ ನಾನಿದ್ದೇನೆ’ ಅಂತ ಸಾಥ್ ಕೊಟ್ಟರು.
“ಸಿಂಗಾಪುರ್‌ನಲ್ಲಿ ರಾಜಾಕುಳ್ಳ’ ಎಂಬ ಸಿನಿಮಾ ಆಯ್ತು. ಮೊದಲು ಟೈಟಲ್ ಇಟ್ಟು ಆಮೇಲೆ ಕಥೆ ಮಾಡಿ ತೆಗೆದ ಚಿತ್ರ “ಸಿಂಗಾಪುರ್‌ನಲ್ಲಿ ರಾಜಾಕುಳ್ಳ’. ಲೊಕೇಷನ್ ನೋಡಿ ಅದಕ್ಕೆ ತಕ್ಕಂತಹ ಕಥೆ ಮಾಡಿದ್ವಿ. ಅಲ್ಲೊಂದು ಪಬ್ ನೋಡಿ, ಪಬ್ ಸೀನ್ ಮಾಡಿದ್ವಿ. ದೊಡ್ಡ ಬಿಲ್ಡಿಂಗ್ ನೋಡಿ, ಅಲ್ಲೊಂದು ಫೈಟ್ ಸೀನ್ ಇಟ್ವಿ. ಹೀಗೆ ಎಲ್ಲವೂ ನೋಡಿಕೊಂಡು ಮಾಡಿದ ಕಥೆ ಅದು. ಕನ್ನಡದಲ್ಲಿ ಸೂಪರ್ ಹಿಟ್ ಆಯ್ತು. ಇನ್ನು, ಕುಳ್ಳ ಸೀರಿಸ್ ಚಿತ್ರಗಳೂ ಬಂದವು. “ಕುಳ್ಳ ಏಜೆಂಟ್ 000′ ಸಿನಿಮಾ ಮಾಡೋಕೆ ಸ್ಫೂರ್ತಿ ಆಗಿದ್ದು, ಒಬ್ಬ ಮೆಡಿಕಲ್ ರೆಪ್! ಅವನು ಹೋಗುವಾಗ ಕೈಯಲ್ಲೊಂದು ಸೂಟ್‌ಕೇಸ್ ಹಿಡಿದು ಹೋಗುತ್ತಿದ್ದ. ಅದನ್ನು ನೋಡಿ, “ಜೇಮ್ಸ್ ಬಾಂಡ್’ ನೆನಪಾದ. ನಾನೇಕೆ ಬಾಂಡ್ ಸಿನಿಮಾ ಮಾಡಬಾರದು ಅಂತ ಆ ಚಿತ್ರ ಮಾಡಿದೆ. ನಾನು ಪರ್ಸನಾಲಿಟಿ ಇಲ್ಲ ಸೊನ್ನೆ, ಬುದ್ಧಿ ಇಲ್ಲ ಸೊನ್ನೆ, ಹೈಟ್ ಇಲ್ಲ ಸೊನ್ನೆ. ಹಾಗಾಗಿ “ಕುಳ್ಳ ಏಜೆಂಟ್ 000′ ಅಂತ ಟೈಟಲ್ ಇಟ್ಟಿದ್ದೆ. ನನಗೆ “ಆಪ್ತಮಿತ್ರ’ ದೊಡ್ಡ ಸಕ್ಸಸ್ ಕೊಡುತ್ತೆ ಅಂತ ಯಾವತ್ತೂ ಅನಿಸಿರಲಿಲ್ಲ. ಒಳ್ಳೆಯ ಚಿತ್ರ ಮಾಡಿದ ಖುಷಿ ಇತ್ತು. ದೊಡ್ಡಮಟ್ಟದಲ್ಲಿ ಸಕ್ಸಸ್ ಆಗುತ್ತೆ ಅಂತ ಗೊತ್ತಿರಲಿಲ್ಲ. ಆದರೆ, ಸಿನಿಮಾ ಸಕ್ಸಸ್ ಆಗುತ್ತೆ ಅಂತ ಸೌಂದರ್ಯಗೆ ಮಾತ್ರ ಗೊತ್ತಿತ್ತು. ಆಕೆ ಧೈರ್ಯ ಕೊಟ್ಟಿದು. “ಮಾಮ ಯೋಚನೆ ಮಾಡಬೇಡಿ, ಈ ಚಿತ್ರ ಗೆಲ್ಲುತ್ತೆ. ಕ್ಲೈಮ್ಯಾಕ್ಸ್ ಒಂದೇ ಸಾಕು’ ಅಂದಿದ್ದಳು. ಅದು ನಿಜವಾಯ್ತು. ಮೊದಲ ಸಲ “ನೀ ಬರೆದ ಕಾದಂಬರಿ’ ಚಿತ್ರ ನಿರ್ದೇಶಿಸಿದೆ. ಮೊದಲ ನಿರ್ದೇಶನ ಹೇಗಿರುತ್ತೆ ಹೇಳಿ? ಅದು ಸೂಪರ್ ಹಿಟ್ ಆಯ್ತು. ಆಗ ಜಯಪ್ರದ ಕಾಲ್ ಮಾಡಿ, “”ಶರಾಬಿ’ ಚಿತ್ರದ ರೈಟ್ಸ್ ತಗೊಳ್ಳಿ. ನಾನು ಮಾಡ್ತೀನಿ’ ಅಂದ್ರು. ಜಯಪ್ರದ ನಾಯಕಿ, ವಿಷ್ಣುವರ್ಧನ್ ನಾಯಕ ಒಳ್ಳೇ ಜೋಡಿಯಾಗುತ್ತೆ ಅಂತ “ಶರಾಬಿ’ ರೈಟ್ಸ್ ತಂದೆ. ಆಗ ಜಯಪ್ರದ ಮಲಯಾಳಂ ಸಿನಿಮಾದಲ್ಲಿ ಬಿಜಿಯಾದರು. ಮೂರು ತಿಂಗಳು ಪೋಸ್ಟ್‌ಪೋನ್ ಮಾಡಿ, ಮಲಯಾಳಿ ಸಿನಿಮಾ ಮುಗಿಸಿ ಬರಿ¤àನಿ ಅಂದ್ರು. ಆದರೆ, ವಿಷ್ಣು ಡೇಟ್ ಸಿಕ್ಕಿತ್ತು. ನಾನು ನಾಯಕಿಗೇಕೆ ಕಾಯಬೇಕು ಅಂತ ಜಯಪ್ರದ ಬಿಟ್ಟು, ಜಯಸುಧ ಅವರನ್ನು ಹಾಕಿ ಸಿನಿಮಾ ತೆಗೆದೆ. ಅದೇ “ನೀ ತಂದ ಕಾಣಿಕೆ’. ಮೊದಲ ಪ್ರೊಜೆಕ್ಷನ್ ಹಾಕಿದೆ. ಪ್ರದರ್ಶಕರು, ವಿತರಕರು ಒಳ್ಳೇ ಆಫರ್ ಕೊಟ್ಟರು. ನಾನು ಕೊಡಲಿಲ್ಲ. ಆದರೆ, ಗೋವಿಂದ ಗೋವಿಂದ..!? ಎಷ್ಟೋ ಸಲ, ಸೋತಾಗ ಚಿತ್ರರಂಗದ ಸಹವಾಸವೇ ಬೇಡ ಅನಿಸಿದ್ದುಂಟು. ಹಾಗಂತ, ಶನಿವಾರ ಅನಿಸಿದರೆ, ಸೋಮವಾರ ಸಿನಿಮಾ ಮಾಡಿದ್ದೂ ಉಂಟು. ನಾನು ನನ್ನನ್ನು ಚೆನ್ನಾಗಿ ಕಂಡುಕೊಂಡಿದ್ದು ನಿರ್ದೇಶಕನಾಗಿ. ಯಾಕೆಂದರೆ, ಕಥೆ, ಪಾತ್ರ ಎಲ್ಲವೂ ನಿರ್ದೇಶಕನ ಕೈಯಲ್ಲಿದೆ. ನಿರ್ದೇಶಕ ಎಂಥದ್ದೇ ಚಿತ್ರ ಮಾಡಲಿ, ಮೊದಲ ಟಿಕೆಟ್ ಪಡೆದು ಒಳಗೆ ಹೋಗಿ ಚಿತ್ರ ನೋಡ್ತಾನಲ್ಲ, ಅವನಿಗೆ ಗೊತ್ತಿರುತ್ತೆ, ಈ ಚಿತ್ರ ಗೆಲ್ಲುತ್ತೋ, ಇಲ್ಲವೋ ಅಂತ. ಅಂತಹ ರಂಗದಲ್ಲಿ ನಾನು 55 ವರ್ಷ ಕಾಲ ಕಳೆದಿದ್ದೇನೆ. ಒಂದು ಮಾತಂತೂ ನಿಜ, “ಸಿನಿಮಾದ ಗೆಲುವು ಗೊತ್ತಿಲ್ಲದ ಹುಟ್ಟು’!
– ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್; ಜೈಲು ಪಾಲಾಗ್ತಾರಾ ಕ್ರಿಕೆಟಿಗ
Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ
M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.