![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 1, 2017, 6:55 AM IST
ಆಗಸ್ಟ್ 25ರ “ಮಹಿಳಾಸಂಪದ’ದಲ್ಲಿ ಪ್ರಕಟವಾದ “ಮತ್ತೆ ಮತ್ತೆ ಅತ್ತೆ-ಸೊಸೆ’ ಲೇಖನವನ್ನು ಓದಿದ ಬಳಿಕ…
ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಪೋನ್ ಮಾಡಿದ್ದಳು, “”ದಾರಿಯಲ್ಲಿ ಹೋಗುವ ದಾಸಯ್ಯನನ್ನಾದರೂ ಮೆಚ್ಚಿಸಬಹುದು ಕಣೆ, ನನ್ನ ಅತ್ತೆನ ಮೆಚ್ಚಿಸೋಕೆ ಆಗುವುದಿಲ್ಲ. ಕುಂತರೂ ತಪ್ಪು, ನಿಂತರೂ ತಪ್ಪು. ನಾ ಮಾಡುವ ಕೆಲಸದಲ್ಲಿ ಒಂದಿಲ್ಲೊಂದು ಕೊಂಕು ಅವರಿಗೆ ಸಿಗುತ್ತದೆ. ಅದು ಅಲ್ಲದೇ, ನನ್ನ ಗಂಡನ ವ್ಯಾಪಾರದಲ್ಲಿ ಇತ್ತೀಚೆಗೆ ನಷ್ಟವಾಯಿತು ಅದಕ್ಕೂ ನನ್ನನ್ನೇ ಹೊಣೆ ಮಾಡುತ್ತಾರೆ, ನೀನು ಕಾಲಿಟ್ಟ ಗಳಿಗೆ ಸರಿಯಿಲ್ಲ. ನಿನ್ನನ್ನು ಮದುವೆಯಾದ ಮೇಲೆ ಅವನಿಗೆ ಸೋಲು ಹೀಗೆಲ್ಲಾ ಹೇಳುತ್ತಾರೆ. ರೋಸಿ ಹೋಗಿದೆ ಜೀವನ” ಎಂದು ಕಣ್ಣೀರಿಟ್ಟಳು.
ಇದು ಕೇವಲ ನನ್ನ ಗೆಳತಿಯೊಬ್ಬಳ ದೂರು ಮಾತ್ರವಲ್ಲ. ನಮ್ಮಲ್ಲಿನ ಸಾಕಷ್ಟು ಹೆಣ್ಣುಮಕ್ಕಳ ದೂರು ಕೂಡ ಹೌದು. ಇತ್ತೀಚೆಗೆ “ನಿನ್ನ ಕಾಲ್ಗುಣ ಸರಿಯಿಲ್ಲ’ ಎಂದು ಗಂಡಿನ ಮನೆಯವರು ಹೇಳಿದ್ದರಿಂದ ಬಾಳಿ ಬದುಕಬೇಕಿದ್ದ ಹೆಣ್ಣು ಜೀವವೊಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು ಬೆಂಗಳೂರಿನಲ್ಲಿ ಸುದ್ದಿಯಾಗಿತ್ತು. ಹೀಗೆ ಕೆಲವೊಂದು ಬೆಳಕಿಗೆ ಬರುತ್ತೇವೆ. ಇನ್ನು ಕೆಲವು ಅಲ್ಲಿಯೇ ಮುಚ್ಚಿಹೋಗುತ್ತವೆ. ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣುಮಕ್ಕಳು ಅನುಭವಿಸುವ ನೋವು ಹೀಗೆ ಸಾಕಷ್ಟಿವೆ.
ಇನ್ನು ಮದುವೆಯಾದ ಗೆಳತಿಯರಿಬ್ಬರ ಮಾತುಕತೆಯಲ್ಲಿ ಬೇರೆ ವಿಷಯಕ್ಕಿಂತ ಅತ್ತೆಯ ಬಗ್ಗೆ ದೂರೇ ಜಾಸ್ತಿ ಇರುತ್ತದೆ. ಹಾಗೇ ಅತ್ತೆಯಂದಿರೇನೂ ಸಾಚಾ ಎಂದು ಅಲ್ಲ. ಅವರೂ ಕೊಂಕು ಮಾತಿನಲ್ಲಿಯೇ ಸೊಸೆಯನ್ನು ಕುಟುಕುತ್ತಲೇ ಇರುತ್ತಾರೆ. ಬಹುಶಃ ಸೊಸೆಯಾಗಿ ಒಂದು ಮನೆಗೆ ಹೋಗುವ ಹೆಣ್ಣು ಅತ್ತೆಯೆಂಬ ಇನ್ನೊಂದು ಹೆಣ್ಣಿನಿಂದ ಸಾಕಷ್ಟು ಮಾತುಗಳನ್ನು ಕೇಳಬೇಕಾಗಿ ಬರಬಹುದು. ಇದು ಕೆಲವೊಮ್ಮೆ ಉಲ್ಟಾ ಆಗುವುದು ಇದೆ. ಬಂದ ಸೊಸೆಯಿಂದ ಅತ್ತೆನೇ ಮಾತು ಕೇಳಬೇಕಾಗಿ ಬರಬಹುದು. “ಆಗ ನಿಮ್ಮ ದರ್ಬಾರ್ ಈಗ ನನ್ನ ದರ್ಬಾರ್’ ಎನ್ನುವ ಸೊಸೆಯಂದಿಯರಿಗೇನೂ ಕಡಿಮೆ ಇಲ್ಲ! ಹತ್ತು ಮಂಡೆಯನ್ನಾದರೂ ಒಟ್ಟು ಸೇರಿಸಬಹುದು, ಎರಡು ಜಡೆಯನ್ನು ಒಟ್ಟು ಸೇರಿಸಲು ಸಾಧ್ಯವಾಗುವುದಿಲ್ಲ ಎಂಬ ನಮ್ಮ ಹಿರಿಯರ ಮಾತು ಕೆಲವೊಮ್ಮೆ ನಿಜ ಅನಿಸುತ್ತೆ. ಯಾಕೆ ಹೀಗೆ… ಮಗನ ಜೀವನದಲ್ಲಿ ಸೊಸೆ ಬಂದಾಕ್ಷಣ ಹೆತ್ತವ್ವಳ ಮನದಲ್ಲಿ ತಣ್ಣಗೊಂದು ಹೊಗೆ ಆಡುವುದಕ್ಕೆ ಶುರುವಾಗುತ್ತದೆ, ಅಥವಾ ಮದುವೆಯಾದ ತಕ್ಷಣ ಗಂಡ ನನಗೆ ಮಾತ್ರ ಸೇರಿದ ಆಸ್ತಿ ಉಳಿದವರೆಲ್ಲಾ ನಗಣ್ಯ ಎಂಬ ಭಾವವೊಂದು ಸೊಸೆಯಲ್ಲಿ ಮೂಡುತ್ತದೆ?
ಅತ್ತೆ-ಸೊಸೆ, ಇವೆರೆಡು ಶಬ್ದ ವಿರುದ್ಧಾರ್ಥಕ ಪದವಾಗಿಯೇ ನಮ್ಮ ಜೀವನದಲ್ಲಿ ಇರುತ್ತವೆ. ಸೊಸೆ ಎಷ್ಟೇ ಒಳ್ಳೆಯವಳಾಗಿದ್ದರೂ ಅತ್ತೆಗೆ ಅವಳಲ್ಲಿ ಯಾವುದಾದರೊಂದು ಲೋಪ ಸಿಕ್ಕೇ ಸಿಗುತ್ತದೆ, ಇನ್ನು ಅತ್ತೆ ಎಷ್ಟೇ ಚೆನ್ನಾಗಿ ನೋಡಿಕೊಂಡರೂ ಸೊಸೆಗೆ ಅಲ್ಲೊಂದು ದೋಷ ಸಿಕ್ಕಿಯೇ ಸಿಗುತ್ತದೆ.
ಈಗಿನ ಧಾರಾವಾಹಿಗಳು, ಸಿನೆಮಾಗಳು ನಡೆಯುವುದೇ ಈ ಅತ್ತೆ-ಸೊಸೆಯ ಜಗಳದಿಂದ. ಈ ಅತ್ತೆ-ಸೊಸೆಯ ಕತೆ ಎಷ್ಟೇ ಹಳೆಯದಾದರೂ ನಾವು ಟೀವಿ ನೋಡುವುದನ್ನು ಬಿಡುವುದಿಲ್ಲ. ಕೆಟ್ಟ ಅತ್ತೆ, ಕಣ್ಣೀರು ಸುರಿಸುವ ಸೊಸೆ, ಅತ್ತೆಯಿಂದ ಸೊಸೆಗೆ ಸಿಗುವ ಕಷ್ಟಕಾರ್ಪಣ್ಯ ಹೀಗೆ ಸಾಲು ಸಾಲು ಕತೆಗಳೇ ನಮ್ಮ ಕಣ್ಮುಂದೆ ಹಾದು ಹೋಗುತ್ತವೆ. ಕೆಲವೊಮ್ಮೆ ಹೀಗೆಲ್ಲಾ ನಡೆಯುತ್ತದೆಯಾ? ಇವೆಲ್ಲ ನಿಜನಾ ಎಂದು ಧಾರಾವಾಹಿಯ ಗುಂಗಿನಿಂದ ಹೊರಗೆ ಬಂದು ಯೋಚಿಸುವುದಕ್ಕೂ ಆಗದಷ್ಟು ತಮ್ಮ ಕಬಂಧ ಬಾಹುಗಳಿಂದ ಆ ಕತೆಗಳು ನಮ್ಮನ್ನು ಕಟ್ಟಿಹಾಕಿರುತ್ತವೆ. ಬಾಲ್ಯ ದಾಟಿ ಯೌವ್ವನಕ್ಕೆ ಬಂದು, ಮದುವೆ ಮಂಟಪದಲ್ಲಿ ನಿಂತಾಗ ಈ ಧಾರಾವಾಹಿಗಳ ಕಂತುಗಳೆಲ್ಲಾ ನಮ್ಮ ಮುಂದೆ ತೆರೆದುಕೊಳ್ಳುವುದಕ್ಕೆ ಶುರುವಾಗುತ್ತದೆ. ನಾನಿನ್ನು ಅತ್ತೆ ಮನೆಗೆ ಹೋಗಬೇಕು, ಅಲ್ಲಿ ಹೇಗೋ, ಏನೋ, ಎಂಬಿತ್ಯಾದಿ ಯೋಚನೆ ಒಮ್ಮಿಂದೊಮ್ಮೆಲೆ ಮುತ್ತಿಗೆ ಹಾಕುತ್ತವೆ. ಇನ್ನೇನು ಕೈಯೊಪ್ಪಿಸಿಕೊಡುವ ಶಾಸ್ತ್ರ ಶುರುವಾಗುತ್ತದೆ ಎನ್ನುವಾಗ ಅಷ್ಟೊತ್ತು ಪೋಟೊಗೆ ಫೋಸ್ ಕೊಡುತ್ತ¤ ನಿಂತ ಮೊಗದಲ್ಲಿ ಬೇಸರ ಗೆರೆಯೊಂದನ್ನು ಯಾರೋ ಗೀಚಿ ಹೋದಂತೆ ಆಗುತ್ತದೆ. “ನಮ್ಮ ಮನಿ ಅಂಗಳದಿ ಬೆಳೆದೊಂದು ಹೂವನ್ನು…’ ಎಂದು ಮೆಲುದನಿಯಲ್ಲಿ ಹಾಡು ಹಾಡುವುದಕ್ಕೆ ಶುರುಮಾಡುತ್ತಾರೆ. ಇಲ್ಲಿ ನೆರೆದಿದ್ದವರ ಕಣ್ಣಲ್ಲಿ ಕಣ್ಣೀರಕೋಡಿಯೇ ಹರಿಯಲು ಶುರುವಾಗುತ್ತದೆ. ಅಲ್ಲೇ ಅಚ್ಚೊತ್ತಿ ಬಿಡುತ್ತದೆ ನನ್ನ ಬದುಕಿನ್ನು ಅತ್ತೆಯ ಮನೆಯಲ್ಲಿ ಎಂದು!
ಒಂದಷ್ಟು ಪೂರ್ವಾಗ್ರಹಗಳಿಂದ ಹೊರ ಬನ್ನಿ
ನದಿ ಯಾವತ್ತೂ ಹರಿಯುತ್ತಲೇ ಇರುತ್ತದೆ. ಹೆಣ್ಣು ಕೂಡ ಹಾಗೆ. ಒಂದಷ್ಟು ವರ್ಷ ತಂದೆ-ತಾಯಿಯ ಪ್ರೀತಿಯಲ್ಲಿ ಬೆಳೆದು ನಂತರ ಗಂಡನ ಮನೆಗೆ ಕಾಲಿಡುತ್ತಾಳೆ. ಅಲ್ಲಿಂದ ಅವಳ ಜೀವನ ಮತ್ತೂಂದು ತಿರುವು ತೆಗೆದುಕೊಳ್ಳುತ್ತದೆ, ಆಮೇಲೆ ಮನೆ, ಮಕ್ಕಳು ಸಂಸಾರ ಹೀಗೆ ನಿರಂತರವಾಗಿ ಅವಳ ಜೀವನ ಹರಿಯುತ್ತಲೇ ಇರುತ್ತದೆ. ಯಾರಿಗೋ ಆದ ಕಹಿ ಅನುಭವಗಳು ನಮ್ಮ ಜೀವನದಲ್ಲಿಯೂ ಆಗಬೇಕೆಂದೇನಿಲ್ಲ. ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿ ಇರುತ್ತದೆ. ಕೆಲವೊಮ್ಮೆ ಹೊಂದಾಣಿಕೆ ಇಲ್ಲದೇ ಇದ್ದಾಗಲೂ ಸಂಬಂಧ ಹದಗೆಡುತ್ತದೆ. ಅತ್ತೆ ಯಾವಾಗಲೂ ಕಾಟ ಕೊಡುವವಳು, ಗಂಡ ನನ್ನೊಬ್ಬಳ ಸ್ವತ್ತು, ಸೊಸೆ ಬಂದು ನನ್ನ ಮಗ ದೂರ ಆದ, ಇನ್ನು ಮೇಲೆ ನನ್ನ ಅಧಿಕಾರ ಕೈ ತಪ್ಪುತ್ತೆ ಸೊಸೆಯೇ ಮಾತೇ ಮೆಲುಗೈ ಆಗುತ್ತೆ ಎಂಬಿತ್ಯಾದಿ ಯೋಚನೆಗಳಿಂದ ಅತ್ತೆ-ಸೊಸೆ ಇಬ್ಬರೂ ಹೊರ ಬರಬೇಕಾಗಿದೆ.
ಸೊಸೆಯನ್ನು ಮಗಳಂತೆ ಆದರಿಸಿ…
“ನನಗೊಬ್ಬಳು ಸೊಸೆ ಇದ್ದಾಳಪ್ಪ…’ ಅನೇಕ ಅತ್ತೆಯರ ಮಾತು ಶುರುವಾಗುವುದೇ ಹೀಗೆ, ಯಾಕೆ ಸೊಸೆಯೆಂದ ತಕ್ಷಣ ಮನಸ್ಸಿನ ಮೂಲೆಯಲ್ಲೊಂದು ಅಸಹನೆ? ಹೊರಗಿನಿಂದ ಬಂದವಳು, ಅವಳು ಯಾವತ್ತೂ ನಮ್ಮವಳಲ್ಲಾ ಎಂಬ ನಿಲುವ್ಯಾಕೆ? ನಿಮ್ಮ ಮಗನನ್ನೇ ನಂಬಿಕೊಂಡು ಅವಳು ನಿಮ್ಮ ಮನೆಗೆ ಬರುತ್ತಾಳೆ. ನಿಮ್ಮ ಮನೆ ರೀತಿ-ರಿವಾಜು, ನಿಮ್ಮ ಮನಸ್ಥಿತಿ ಎಲ್ಲವೂ ಅವಳಿಗೆ ಅಪರಿಚಿತ. ಒಂದು ಹೆಣ್ಣು ತಾನು ಹುಟ್ಟಿದ ಮನೆ, ತನ್ನವರನ್ನೆಲ್ಲ ಬಿಟ್ಟು ಇನ್ನೊಂದು ಮನೆಯಲ್ಲಿ ಹೋಗಿ ಬದುಕು ಕಟ್ಟಿಕೊಳ್ಳುವುದು ಎಂದರೆ ಅಷ್ಟು ಸುಲಭದ ಮಾತಲ್ಲ.
ಅವಳಿಗೂ ಇರುಸುಮುರುಸಾಗುತ್ತಿರುತ್ತದೆ. ತಾನು ಹೇಗೆ ಇದ್ದರೆ ಇವರನ್ನು ಹೊಂದಿಕೊಳ್ಳಬಹುದು ಎಂಬ ಯೋಚನೆ ಅವಳಲ್ಲೂ ಕಾಡುತ್ತಿರುತ್ತದೆ. ಆಗ ಅವಳನ್ನು ಆದರಿಸುವುದು ಅತ್ತೆಯ ಕರ್ತವ್ಯ. ಅವಳ ರೂಪ, ಅವಳು ತಂದಿರುವ ಬಂಗಾರ, ಅವಳ ತವರು ಮನೆಯವರನ್ನು ಲೇವಡಿ ಮಾಡುವುದನ್ನು ಹೆಣ್ಣು ಯಾವತ್ತೂ ಸಹಿಸಳು. ಅತ್ತೆಯಂದಿರು ಮಾಡುವ ಈ ಸಣ್ಣ ತಪ್ಪಿನಿಂದಲೇ ಆ ಹೆಣ್ಣು ಗಂಡನ ಮನೆ ಮೇಲಿನ ನಂಟಿನ ಕೊಂಡಿಯನ್ನು ಮನಸ್ಸಿನಿಂದ ಕಳಚಿಬಿಡುತ್ತಾಳೆ. ಇವರೊಂದಿಗೆ ತನ್ನ ಬದುಕಿನ್ನು ದುಸ್ತರ ಎಂಬ ಭಾವವೊಂದು ತೇಲಿಹೋಗುತ್ತದೆ.
ಒಮ್ಮೆ ಅವಳ ಮನಸ್ಸಿನ ಮೇಲೆ ನೋವಿನ ಗೆರೆ ಎಳೆದು ಆಮೇಲೆ ಅದಕ್ಕೆ ನೀವು ಎಷ್ಟೇ ಉಪಚಾರ ಮಾಡಿದರೂ ಆ ಗಾಯದ ಗುರುತು ಅವಳಲ್ಲಿ ಸದಾ ಕಾಡುತ್ತಲೇ ಇರುತ್ತದೆ. ಸೊಸೆಯ ಮಾತನ್ನು ತಿರುಚುವುದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ಗೌರವವನ್ನು ನೀವೇ ಕಳೆದುಕೊಳ್ಳುತ್ತೀರಿ. ಸೊಸೆ ಏನಾದರೂ ತಪ್ಪಿನಿಂದ ಮಾತನಾಡಿದಾಗ ಅವಳ ಬಳಿ ಕೂತು ಸಮಾಧಾನವಾಗಿ ಯಾಕೆ ಹಾಗೆ ಹೇಳಿದ್ದಿಯಾ ಎಂದು ಕೇಳುವ ಸೌಜನ್ಯ ಬೆಳೆಸಿಕೊಳ್ಳಿ. ಯಾವುದೋ ಒಂದು ಪರಿಸ್ಥಿತಿಯಲ್ಲಿ ಅವಳು ಆಡಿದ ಮಾತನ್ನೇ ತೆಗದುಕೊಂಡು ರಂಪ ಮಾಡಬೇಡಿ. ಆಕೆಯ ಎದುರೊಂದು ಮಾತನಾಡುವುದು ಹಿಂದಿನಿಂದ ಇನ್ನೊಂದು ಮಾತನಾಡುವುದು ಮಾಡಬೇಡಿ. ಯಾರೋ ಹೇಳುವ ಮಾತಿಗೆ ಕಿವಿಗೊಟ್ಟು ದೂಷಿಸಬೇಡಿ. ನಿಮ್ಮ ಮಗನನ್ನೇ ನಂಬಿಕೊಂಡು ಬಂದಿರುವವಳ ಮನಸ್ಸು ನೋಯಿಸಿದರೆ ಸಂಸಾರ ಹಾಳಾಗುವುದಕ್ಕೆ ಅದೇ ಬುನಾದಿ ಆಗುತ್ತದೆ. ನೀವಾಡುವ ಕೊಂಕು ಮಾತಿಗೆ ಆಕೆಯ ಬಳಿಯೂ ಉತ್ತರವಿರುತ್ತದೆ. ಸಂಸ್ಕಾರವಂತ ಕುಟುಂಬದಲ್ಲಿ ಬೆಳೆದ ಹೆಣ್ಣುಮಕ್ಕಳು ತಿರುಗಿ ಮಾತನಾಡುವುದಕ್ಕೆ ಸ್ವಲ್ಪ ಅಂಜುತ್ತಾರೆ. ಆಕೆ ಮೌನವಾಗಿದ್ದಳೆ ಅಂದ ತಕ್ಷಣ ಅದು ಅವಳ ಅಸಹಾಯಕತೆ ಅಲ್ಲ. ನಾವೇ ಶ್ರೇಷ್ಠ , ನಾವಾಡುವ ಮಾತೇ ಉತ್ತಮವಾದದ್ದು ಎಂಬ ಜಂಭ ಬೇಡ. ಹೊರಗಡೆ ಪ್ರಪಂಚ ವಿಶಾಲವಾಗಿದೆ. ಅದನ್ನು ಕಣ್ತೆರೆದು ನೋಡುವ ಮನೋಭಾವ ಬೆಳೆಸಿಕೊಳ್ಳಿ. ಆಕೆಯೂ ಒಂದು ಹೆಣ್ಣು, ತನ್ನಂತೆ, ತನ್ನ ಮಗಳಂತೆ ಎಂದು ಪ್ರೀತಿಸಿ. ನೀವು ಕೂಡ ಸೊಸೆಯಾಗಿ ಒಂದು ಮನೆಗೆ ಹೋದವರು ಎಂಬುದು ನೆನಪಿರಲಿ.
ಅತ್ತೆಯನ್ನು ತಾಯಿಯಂತೆ ಪ್ರೀತಿಸಿ…
ಅತ್ತೆ ಯಾವತ್ತೂ ತಾಯಿಯಾಗುವುದಿಲ್ಲ ಎಂಬ ಮಾತನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಆ ಮನೆಗೆ ಕಾಲಿಡಬೇಡಿ. ಅತ್ತೆ ಆಡುವ ಮಾತಿಗೆ ತಾನು ತಕ್ಕ ಮಾತನಾಡಬೇಕು ಎಂಬ ಮನೋಭಾವವನ್ನು ಬಿಟ್ಟುಹಾಕಿ. ಕೆಲವನ್ನು ಮೌನದಲ್ಲಿಯೇ ಪರಿಹರಿಸಿಕೊಳ್ಳುವುದು ಉತ್ತಮ. ನಿಮ್ಮ ತಾಯಿ ಮಾತನಾಡಿದಾಗ ಹೇಗೆ ನಿಮಗೆ ಬೇಸರವಾಗುವುದಿಲ್ಲವೋ ಹಾಗೆ ಅತ್ತೆ ಮಾತನಾಡಿದಾಗ ತಾಯಿ ಮಾತನಾಡಿದಂತೆ ಎಂದು ಸುಮ್ಮನಾಗಿಬಿಡಿ. ಆಗ ಸಂಬಂಧ ಉಳಿಯುತ್ತದೆ. ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳು ತಮ್ಮನ್ನು ನೋಡಿಕೊಳ್ಳಬೇಕು ಮತ್ತು ತಮ್ಮ ಸಮೀಪವೇ ಇರಬೇಕೆಂದು ತಂದೆ-ತಾಯಂದಿರು ಬಯಸುವುದು ಸಹಜ. ಆದರೆ ಬರುವ ಸೊಸೆ ಎಲ್ಲಿ ತಮ್ಮ ಮಗನನ್ನು ತಮ್ಮಿಂದ ದೂರ ಮಾಡುತ್ತಾಳೆನೋ ಎಂಬ ಆತಂಕ ಅತ್ತೆಯಲ್ಲೂ ಇರುತ್ತದೆ. ಹಾಗಾಗಿ ಮನೆಗೆ ಸೊಸೆಯಾಗಿ ಬರುವವಳು ಕೂಡ “ತನಗೂ ಓರ್ವ ತಂದೆತಾಯಿ ಇದ್ದಾರೆ’ ಎಂಬುದನ್ನು ಮರೆಯಬಾರದು. ಅವಳು ಅತ್ತೆ-ಮಾವರನ್ನು ತನ್ನ ತಂದೆತಾಯಿಯರ ಸ್ಥಾನದಲ್ಲಿರಿಸಿ ನೋಡಿದರೆ ಆಗ ಕಲಹ, ಮನಸ್ತಾಪಗಳು ದೂರವಾಗುವುದು. ಗಂಡನ ಮನೆಯಲ್ಲಿ ನಡೆದ ಎಲ್ಲಾ ವಿಷಯಗಳನ್ನು ತವರುಮನೆಯಲ್ಲಿ ಹೇಳಬೇಡಿ. ಯಾವುದೋ ಪರಿಸ್ಥಿತಿಯಲ್ಲಿ ಅತ್ತೆ ಏನೋ ಒಂದು ಮಾತು ಹೇಳಿರಬಹುದು ಅದನ್ನೇ ತಾಯಿಯ ಬಳಿ ಹೇಳಬೇಡಿ. ಪ್ರತಿ ತಾಯಿಗೂ ತನ್ನ ಮಗಳಿಗೆ ನೋವಾದರೆ ಸಹಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಮಗಳ ಮಾತೇ ಸರಿಯೆಂದು ವಾದಿಸುತ್ತಾರೆ. ಆಗ ಅಲ್ಲೊಂದು ಸಂಬಂಧ ಹೇಳ ಹೆಸರಿಲ್ಲದಂತೆ ಹಾಳಾಗುತ್ತದೆ. ಕೆಲವು ತಾಯಂದಿರು ಮಗಳಿಗೆ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗುವುದಕ್ಕೆ ತಿಳಿಹೇಳುತ್ತಾರೆ. ಇನ್ನು ಕೆಲವು ತಾಯಂದಿರು ಮಗಳ ನೋವನ್ನೇ ಮುಂದಿಟ್ಟುಕೊಂಡು ಸಂಸಾರವನ್ನೇ ಒಡೆಯುತ್ತಾರೆ. “ನೀವಿನ್ನು ಬೇರೆ ಹೋಗಿ, ನಿಮ್ಮದೇ ಸಂಸಾರ ಮಾಡಿಕೊಳ್ಳಿ’ ಎಂಬ ಬಿಟ್ಟಿ ಸಲಹೆ ನೀಡುತ್ತಾರೆ. ಇದರಿಂದ ತಮ್ಮ ಮಗಳ ಜೀವನ ಹಾಳಾಗುವುದು ಎಂಬ ಯೋಚನೆ ಕೂಡ ಅವರಿಗಿರುವುದಿಲ್ಲ.
ಕುಟುಂಬವೆಂದ ಮೇಲೆ ಅಲ್ಲಿ ಸಿಹಿ-ಕಹಿ, ಮನಸ್ತಾಪಗಳು ಇದ್ದೇ ಇರುತ್ತವೆ. ಪ್ರತಿ ಮಾತಲ್ಲೂ ಹುಳುಕು ಹುಡುಕಲು ಶುರುಮಾಡಿದರೆ ಜೀವನ ದುಸ್ತರ ಅನಿಸುತ್ತದೆ. ಒಬ್ಬರ ತಪ್ಪನ್ನು ಇನ್ನೊಬ್ಬರು ತಿಳಿಹೇಳಿ ಸರಿದೂಗಿಸಿಕೊಂಡು ಹೋಗುವ ಮನೋಭಾವ ಇರಬೇಕು. ಅತ್ತೆ ಮಾತಿಗೆ ಸೊಸೆ, ಸೊಸೆಯ ಮಾತಿಗೆ ಅತ್ತೆ ಜಟಾಪಟಿಗೆ ಬಿದ್ದರೆ ಕುಟುಂಬವೊಂದು ಒಡೆದು ಹೋಗುತ್ತದೆ. ಕೆಲವೊಂದು ಸಂದರ್ಭವನ್ನು ಬಂದ ಹಾಗೇ ಸ್ವೀಕರಿಸಿ ನಕ್ಕು ಬಿಡುವುದೇ ಲೇಸು. ಒಂದು ಚಂದದ ಸಂಬಂಧ ಉಳಿಸಿಕೊಳ್ಳಿ. ಇದರಿಂದ ನಿಮ್ಮನ್ನು ನೋಡಿ ನಿಮ್ಮ ಮಕ್ಕಳು ಬೆಳೆಯುತ್ತಾರೆ ಎಂಬುದು ನೆನಪಿರಲಿ.
– ಪವಿತ್ರಾ ಶೆಟ್ಟಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.