ಪುಲಕೇಶಿಯ ಪ್ರೇಮ ಪ್ರಸಂಗ
Team Udayavani, Sep 1, 2017, 6:50 AM IST
ಒಂದು “ಮುಂಗಾರು ಮಳೆ’ ಚಿತ್ರ ಕೇವಲ ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ ಭಟ್ಟರಿಗಷ್ಟೇ ಅಲ್ಲ, ಆ ಸಮಯಕ್ಕೆ ಕನ್ನಡ ಚಿತ್ರರಂಗಕ್ಕೂ ಹೊಸ ಚೈತನ್ಯ, ಹುರುಪು ಕೊಟ್ಟಿದ್ದು ಸುಳ್ಳಲ್ಲ. ಅಂದು “ಮುಂಗಾರು ಮಳೆ’ಯಲ್ಲಿ ಒಂದಾಗಿ “ಗಾಳಿಪಟ’ ಹಾರಿಸಿದ ಜೋಡಿ ಆ ನಂತರ ಇಬ್ಬರು ದೂರ ತೀರವಾಗಿದ್ದರು. ಈಗ ಬರೋಬ್ಬರಿ 10 ವರ್ಷಗಳ ನಂತರ “ಮುಗುಳು ನಗೆ’ ಬೀರಿದ್ದಾರೆ. ಹೌದು, ಗಣೇಶ್ ಹಾಗೂ ಯೋಗರಾಜ್ ಭಟ್ಟರ ಕಾಂಬಿನೇಶನ್‌ನ “ಮುಗುಳುನಗೆ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಚಿತ್ರದ ಕುರಿತಾಗಿ ನಟ ಗಣೇಶ್ ಇಲ್ಲಿ ಮಾತನಾಡಿದ್ದಾರೆ …
– ನಿಮ್ಮ “ಮುಗುಳುನಗೆ’ಯಲ್ಲಿ ಏನೇನಿದೆ?
– ಶೀರ್ಷಿಕೆ ಹೇಳ್ಳೋ ತರಹ ಸಿನಿಮಾದುದ್ದಕ್ಕೂ ಮುಗುಳುನಗೆ ಇದ್ದೇ ಇರುತ್ತದೆ. ಇದೊಂದು ಪ್ರೇಮಕಥೆ. ಪ್ರೀತಿ ಇವತ್ತು ನಿನ್ನೆ ಹುಟ್ಟುದ್ದಲ್ಲ. ಆ ಪ್ರೀತಿಯನ್ನು ಬೇರೆ ಆಯಾಮದಲ್ಲಿ ನೋಡುವಂತಹ ಪ್ರಯತ್ನ ಇಲ್ಲಿ ಮಾಡಲಾಗಿದೆ. ಇಲ್ಲಿ ಪ್ರೀತಿಯ ವಿವಿಧ ಆಯಾಮಗಳನ್ನು ನೀವು ನೋಡಬಹುದು. ತುಂಬಾ ಫ್ರೆಶ್ ಎನಿಸುವ ದೃಶ್ಯಗಳಿವೆ. ಇಡೀ ಸಿನಿಮಾ ಮುಗುಳುನಗೆಯೊಂದಿಗೆ ಸಾಗುತ್ತದೆ.
– ನಿಮ್ಮ ಪಾತ್ರದ ಬಗ್ಗೆ ಹೇಳಿ?
– ಯಾವಾಗಲೂ ಆರಾಮವಾಗಿರುವ ಪಾತ್ರ. ಪುಲಕೇಶಿ ಎಂಬ ಆ ಪಾತ್ರ ನಗುತ್ತಲೇ ಇರುತ್ತದೆ. ನಗುತ್ತಲೇ ಸಾಗುವ ಆ ಪಾತ್ರದ ಒಂದೊಂದು ಕಥೆಯನ್ನು ಬಿಚ್ಚಿಡುತ್ತಾ, ಪ್ರೀತಿಯನ್ನು ವ್ಯಾಖ್ಯಾನಿಸುತ್ತಾ ಸಾಗುವ ಪಾತ್ರ. ನೋಡ ನೋಡುತ್ತಲೇ ಎಲ್ಲರಿಗೂ ಇಷ್ಟವಾಗುವ ಪಾತ್ರ. ಮುಖ್ಯವಾಗಿ ಇಲ್ಲಿ ಈ ಪಾತ್ರದ ವಿಶೇಷವೆಂದರೆ ಈ ಪಾತ್ರ ಮಗುವಾಗಿದ್ದಾಗಿನಿಂದ ಅತ್ತಿರುವುದೇ ಇಲ್ಲ. ಕಣ್ಣೀರು ಬರುವುದಿಲ್ಲವೆಂಬುದೊಂದೇ ಆತನ ಬಾಳಿನ ಶಾಶ್ವತ ಕೊರಗು. ಅಂತಹವನ ಕಣ್ಣಲ್ಲಿ ಒಂದು ಹನಿ ಕಣ್ಣೀರು ಬರುತ್ತದೆ. ಅದು ಹೇಗೆ ಮತ್ತು ಯಾಕೆ ಎಂದು ಗೊತ್ತಾಗಬೇಕಿದ್ದರೆ ನೀವು ಸಿನಿಮಾ ನೋಡಿ.
– ಈ ಚಿತ್ರ ನಿಮಗೆಷ್ಟು ಸ್ಪೆಷಲ್?
– ನಿಜ ಹೇಳಬೇಕೆಂದರೆ ಈ ಚಿತ್ರ ನನಗೆ ತುಂಬಾನೇ ಸ್ಪೆಷಲ್. ಮುಖ್ಯವಾಗಿ ಕಾಂಬಿನೇಶನ್. ನಾನು, ಯೋಗರಾಜ್ ಭಟ್ರಾ 10 ವರ್ಷಗಳ ನಂತರ ಜೊತೆಯಾಗಿದ್ದೇವೆ. ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಎರಡು ಯಶಸ್ವಿ ಚಿತ್ರಗಳನ್ನು ಕೊಟ್ಟ ಜೋಡಿಯ ಮೂರನೇ ಸಿನಿಮಾ ಎಂದಾಗ ನಿರೀಕ್ಷೆ ಹೆಚ್ಚಿರುತ್ತದೆ. “ಮುಂಗಾರು ಮಳೆ’ ಮಾಡುವಾಗ ಯಾವ ನಿರೀಕ್ಷೆಯೂ ಇರಲಿಲ್ಲ. ಈಗ ಹತ್ತು ವರ್ಷಗಳ ನಂತರ ಸಿನಿಮಾ ಮಾಡುತ್ತಿರುವುದರಿಂದ ಕಾಂಬಿನೇಶನ್ ಬಗ್ಗೆ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತಹ ಸಿನಿಮಾ ಮಾಡಿದ್ದಾರೆ. ಚಿತ್ರದ ನಿರೂಪಣೆ ಕೂಡಾ ವಿಭಿನ್ನವಾಗಿದೆ. ಸಿನಿಮಾ ಪ್ರತಿಯೊಬ್ಬರ ಲೈಫ್ಗೂ ತುಂಬಾ ಹತ್ತಿರವಾಗಿದೆ. ನನ್ನ ಲೈಫಲ್ಲೂ ಈ ತರಹ ಆಗಿತ್ತಲ್ಲ ಎಂದು ನಿಮ್ಮನ್ನು ನೀವು ರಿವೈಂಡ್ ಮಾಡಿಕೊಳ್ಳುತ್ತೀರಿ.
– ನಗದೇ ಇರುವ ಪಾತ್ರ ಕ್ಲೈಮ್ಯಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಅಳಿಸುತ್ತಾ?
– ಅದನ್ನು ನಾನು ಇಲ್ಲಿ ಹೇಳಿದರೆ ಮಜಾ ಇರೋದಿಲ್ಲ. ನೀವು ಥಿಯೇಟರ್‌ನಲ್ಲೇ ಹೋಗಿ ನೋಡಿ. ಆದರೆ, ಒಂದಂತೂ ಹೇಳಬಲ್ಲೆ, ಸಿನಿಮಾ ನೋಡುತ್ತಾ ನೀವು ಆ ಪಾತ್ರದ ಜೊತೆಗೆ ಟ್ರಾವೆಲ್ ಮಾಡುತ್ತೀರಿ. ನಿಮಗೆ ಗೊತ್ತಿಲ್ಲದೇ ಆ ಪಾತ್ರ ನಿಮ್ಮನ್ನು ಆವರಿಸಿಕೊಳ್ಳುತ್ತದೆ.
– ನೀವಿಬ್ಬರು ಮತ್ತೆ ಜೊತೆಯಾಗಲು ಹತ್ತು ವರ್ಷ ಬೇಕಿತ್ತಾ?
– ಸಾಕಷ್ಟು ಬಾರಿ ನಾವಿಬ್ಬರು ಸಿನಿಮಾ ಮಾಡಬೇಕೆಂದು ಅಂದುಕೊಂಡಿದ್ದು ಉಂಟು. ಆದರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಒಂದಾ ನಾನು ಬಿಝಿ ಇರುತ್ತಿದ್ದೆ ಅಥವಾ ಭಟ್ರಾ ಬಿಝಿ ಇರುತ್ತಿದ್ದರು. ಅದಕ್ಕಿಂತ ಜಾಸ್ತಿ ಕಥೆಯ ಬಗ್ಗೆ ಹೆಚ್ಚು
ತಲೆಕೆಡಿಸಿಕೊಂಡಿದ್ದೆವು. ಈಗ “ಮುಗುಳುನಗೆ’ ಸಿಕ್ಕಿದೆ. ಇಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ನಿಮಗೆ ಎದ್ದು ಕಾಣುವ ಜೊತೆಗೆ ಇಡೀ ಸಿನಿಮಾದಲ್ಲಿ ನಿಮಗೆ ಹೊಸ ಎನರ್ಜಿ ಸಿಗಲಿದೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ದೊಡ್ಡ ಮಟ್ಟದಯಶಸ್ಸು ಕಂಡಿದೆ. ಅದೇ ಯಶಸ್ಸು ಸಿನಿಮಾಕ್ಕೂ ಸಿಗುವ ವಿಶ್ವಾಸವಿದೆ.
– ಜನ ಈ ಚಿತ್ರದಿಂದ ಏನು ನಿರೀಕ್ಷಿಸಬಹುದು?
– ದೊಡ್ಡ “ಮುಗುಳು ನಗೆ’. ಥಿಯೇಟರ್‌ನಿಂದ ಮುಗುಳು ನಗೆಯೊಂದಿಗೆ ಹೊರಬರುತ್ತಾರೆಂಬ ವಿಶ್ವಾಸವಿದೆ. ಸಿನಿಮಾವನ್ನು ತುಂಬಾ ನೀಟಾಗಿ ಕಟ್ಟಿಕೊಟ್ಟಿದ್ದೇವೆ. ಪ್ರೇಕ್ಷಕ ಬಯಸುವ ಮನರಂಜನಾತ್ಮಕ ಅಂಶಗಳು ಈ ಸಿನಿಮಾದಲ್ಲಿವೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟವಾಗಲಿದೆ.
– ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದಾರೆ. ಯಾರು ಜೊತೆಗಿರುತ್ತಾರೆ? ಯಾರು ದೂರ ಹೋಗುತ್ತಾರೆ?
– ಹೌದು. ಅದೇ ಕಥೆಯ ಹೈಲೈಟ್. ಇಲ್ಲಿ ನಾಲ್ವರಿದ್ದರೂ ಪ್ರತಿಯೊಬ್ಬರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಮೊದಲೇ ಹೇಳಿದಂತೆ ಪ್ರೀತಿಯನ್ನು ವಿವಿಧ ಆಯಾಮಗಳಲ್ಲಿ ಇಲ್ಲಿ ನೋಡಲಾಗಿದೆ. ಅವೆಲ್ಲದರಲ್ಲೂ ನಾಯಕಿಯರ ಪಾತ್ರ ಪ್ರಮುಖವಾಗಿದೆ.
– ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.