ಚಿತ್ತ ಸೆಳೆದ ಚಿತ್ತಾರ
Team Udayavani, Sep 1, 2017, 1:39 PM IST
ಚಿತ್ತದಲ್ಲಿ ಮೂಡಿದ ಭಾವನೆಗಳನ್ನು ಹಸ್ತ ಕೌಶಲದ ಮೂಲಕ ವರ್ಣನಾತ್ಮಕವಾಗಿ ಪ್ರಕಟಿಸುವುದೇ ಚಿತ್ರಕಲೆಯೆನಿಸುತ್ತದೆ. ಎಲ್ಲದಕ್ಕೂ ಚಿತ್ತವೇ ಕಾರಣ. ಮನಸ್ಸಿಗೆ ತೃಪ್ತಿಯಾಗದಿದ್ದರೆ ಯಾವ ಕೆಲಸವೂ ಯಾವ ಕಲೆಯೂ ಪರಿಪೂರ್ಣ ಎನಿಸಲಾರದು. ಸಿನೆಮಾ, ನಾಟಕ, ಯಕ್ಷಗಾನಾದಿಗಳ ಕಥೆಯ ಸತ್ವ ಪೂರ್ಣಗೊಳ್ಳುವುದು ವೀಕ್ಷಕರ ಮನಸ್ಸಿನಲ್ಲಿ. ಹಾಗೆಯೇ ನಾಟ್ಯದ ಭಾವಾಭಿ ನಯ, ಚಿತ್ರಕಲಾಕೃತಿಯ ಸೊಬಗು ಪೂರ್ಣ ಗೊಳ್ಳುವುದು ಸಹೃದಯರ ಚಿತ್ತದಲ್ಲಿ. ಕಲಾವಿದ ಚಿತ್ರದ ಸೃಷ್ಟಿಕರ್ತನಾದರೆ ವೀಕ್ಷಕ ಅದರ ಗ್ರಾಹಕ ಅಂದರೆ ಅದನ್ನು ಗ್ರಹಿಸುವವ ಮತ್ತು ಕೊಂಡುಕೊಳ್ಳುವವ. ಕಲಾಕೃತಿ ಕಲಾವಿದನಿಂದ ಬೇರ್ಪಟ್ಟ ಕೂಡಲೇ ಅದು ಸಹೃದಯ ಸಮಾಜದ ಸ್ವತ್ತಾಗುತ್ತದೆ. ಹಾಗಾಗಿ ಕಲಾವಿದನನ್ನು ಬೆಳೆಸುವುದು ಈ ಸಮಾಜ. ಕಲಾಕೃತಿ ಕಲಾವಿದನ ಸೃಜನಶೀಲತೆಯ ಹೂರಣವಾಗಿರುವುದಾದರೂ ಅದು ಸಮಾಜಮುಖೀಯಾಗಿರಬೇಕು. ಸಮಾಜಕ್ಕೆ ಉತ್ತಮ ಸಂದೇಶ ಮತ್ತು ಖುಷಿ ಕೊಡುವುದು ಕಲಾಕೃತಿಯ ಧರ್ಮ. ಇಂತಹ ಕಲಾಕೃತಿಗಳ ಪ್ರದರ್ಶನವೊಂದು ಕುಂದಾಪುರದ ಹಳೆ ಬಸ್ ನಿಲ್ದಾಣದ ಬಳಿಯಿರುವ ಮೋಹನ ಮುರಳಿ ಕಲಾಗ್ಯಾಲರಿಯಲ್ಲಿ ನಡೆಯುತ್ತಿದೆ. ಚಿತ್ತಾರ ಶೀರ್ಷಿಕೆಯೊಂದಿಗೆ ನಡೆಯುತ್ತಿರುವ ಈ ಕಲಾಪ್ರದರ್ಶನದಲ್ಲಿ ಇರಿಸಿರುವ ಕಲಾಕೃತಿಗಳು ಮನಮೋಹಕವಾಗಿದ್ದು ನಿಜಾರ್ಥದಲ್ಲಿ ಚಿತ್ತವನ್ನು ಸೆಳೆಯುತ್ತಿವೆ.
ಸಾಧನಾಶೀಲ ಕಲಾವಿದ ಉಪ್ಪುಂದದ ಮಂಜುನಾಥ ಮಯ್ಯ ಈ ಚಿತ್ತಾರ ಕಲಾಪ್ರದರ್ಶನದ ಸಂಯೋಜಕ. ಈ ಹಿಂದೆ ದಿನಕ್ಕೊಂದು ಗಣೇಶ ಕಲಾಕೃತಿಯನ್ನು ಒಂದು ವರ್ಷವಿಡೀ ರಚಿಸಿ ಕುಂದಾಪುರದಲ್ಲಿ ಪ್ರದರ್ಶಿಸಿದವರು ಇವರು. ಉಡುಪಿಯ ಆರ್ಟಿಸ್ಟ್ಸ್ ಫೋರಂ ಕಲಾಸಂಸ್ಥೆಯ ಸದಸ್ಯರೂ ಹೌದು. “ಚಿತ್ತಾರ’ ಕಲಾಪ್ರದರ್ಶನದಲ್ಲಿ ಇವರ ಕಲಾಕೃತಿಗಳ ಜತೆಗೆ ಯುವ ಕಲಾವಿದರಾದ ಸುಪ್ರೀತ್ ಎಚ್., ಮೇಘಾ ಹೆಗ್ಡೆಯವರೂ ತಮ್ಮ ಕಲಾಕೃತಿಗಳನ್ನು ಪ್ರದರ್ಶನದಲ್ಲಿರಿಸಿದ್ದರು. ವಿದ್ಯಾರ್ಥಿ ಕಲಾವಿದರಾದ ಸ್ನೇಹಾ, ಭಾರ್ಗವ್, ದರ್ಶನ್, ಕೃಷ್ಣ, ನೇಹಾ, ಸೌಪರ್ಣಿಕಾ, ಸಿದ್ಧಾರ್ಥ್ ರಚಿಸಿದ ಚಿತ್ರಗಳೂ ಇವೆ. ಮಂಜುನಾಥ ಮಯ್ಯರು ಚಿತ್ರಿಸಿದ ಗೋಕರ್ಣದ ನಿಸರ್ಗ ದೃಶ್ಯಗಳು, ಹಳ್ಳಿ ಮನೆಗಳ ಚಿತ್ರಗಳು ಪಾರದರ್ಶಕ ವರ್ಣಸಂಯೋಜನೆಯೊಂದಿಗೆ ಆಕರ್ಷಕ ವಾಗಿವೆ. ಕೃಷ್ಣ-ರಾಧೆಯರ ಪ್ರೇಮ ಭಕ್ತಿಯ ರಮ್ಯಚಿತ್ರಗಳನ್ನು ಮಂಜುನಾಥ ಮಯ್ಯ ಮತ್ತು ಸುಪ್ರೀತ್ ಎಚ್. ಸಾದೃಶ್ಯ ವರ್ಣ ಗಳೊಂದಿಗೆ ಮಧುರವಾಗಿ ಚಿತ್ರಿಸಿದ್ದಾರೆ. ಮೇಘಾ ಹೆಗ್ಡೆಯವರ ಚುಕ್ಕಿಚಿತ್ರಗಳು, ಸ್ನೇಹಾಳ ಹೂದಾನಿಯ ಸ್ಥಿರಚಿತ್ರಣ ಚೆನ್ನಾಗಿವೆ. ಇವರೆಲ್ಲರ ಸಾಧನೆಗೆ ಕುಂದಾಪುರದ ಕಲಾ ಸಂಸ್ಥೆ ಸಾಧನ ಸಂಗಮ ಟ್ರಸ್ಟ್‌ನ ನಾರಾಯಣ ಐತಾಳರು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಈ ಭಾಗದಲ್ಲಿ ಕಲಾಸಂಸ್ಕೃತಿ ಯನ್ನು ಪುನಶ್ಚೇತನಗೊಳಿಸುತ್ತಿದ್ದಾರೆ.
ಉಪಾಧ್ಯಾಯ ಮೂಡುಬೆಳ್ಳೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.