ರಸ್ತೆ ಬದಿಯಲ್ಲಿ ರಾಶಿ ಬಿದ್ದ ಜಲ ಮಂಡಳಿ ಪೈಪುಗಳು
Team Udayavani, Sep 2, 2017, 8:10 AM IST
ಕಾಸರಗೋಡು: ಕೇರಳ ಜಲ ಮಂಡಳಿಯ ಬಾವಿಕೆರೆ ಪಂಪಿಂಗ್ ಸ್ಟೇಶನ್‌ಗಾಗಿ ನೂತನವಾಗಿ ಪೈಪುಗಳನ್ನು ಸ್ಥಾಪಿಸುವ ತೀರ್ಮಾನ ಅರ್ಧದಲ್ಲೇ ಮೊಟಕುಗೊಂಡಿದೆ. ಬಾವಿಕೆರೆಯಿಂದ ವಿದ್ಯಾನಗರದಲ್ಲಿರುವ ಜಲ ಮಂಡಳಿಯ ಕಚೇರಿಯ ವರೆಗಿನ 10 ಕಿ.ಮೀ. ನೀಳಕ್ಕೆ ಪೈಪುಗಳನ್ನು ಸ್ಥಾಪಿಸಲು ರಾಜ್ಯ ಜಲ ಮಂಡಳಿ ಅನುಮತಿ ನೀಡಿತ್ತು.
ಇದಕ್ಕಾಗಿ 10 ಕೋಟಿ ರೂ. ಮಂಜೂರು ಮಾಡಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಮಂಡಳಿ ರಸ್ತೆ ಬದಿಯಲ್ಲಿ ನೂತನವಾಗಿ ಪೈಪುಗಳನ್ನು ಅಳವಡಿಸಲು ಅನುಮತಿ ನೀಡದಿರುವುದರಿಂದ ರಸ್ತೆ ಬದಿಯಲ್ಲಿ ಪೈಪುಗಳು ಉಳಿಯುವಂತಾಗಿದೆ.
ಕೇರಳ ಜಲ ಮಂಡಳಿ 10 ಕೋಟಿ ರೂಪಾಯಿ ಮಂಜೂರು ಮಾಡಿದ್ದರಿಂದಾಗಿ ನೂತನ ಪೈಪುಗಳನ್ನು ಅಳವಡಿಸುವ ಪ್ರಕ್ರಿಯೆ ಆರಂಭಗೊಂಡಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಮಂಡಳಿ ನೂತನ ಪೈಪುಗಳನ್ನು ಅಳವಡಿಸಲು ಅನುಮತಿ ನೀಡದಿರುವುದರಿಂದಾಗಿ ಬಾವಿಕೆರೆಯಿಂದ ಚೆರ್ಕಳ ಪೇಟೆಯ ವರೆಗೆ ಮಾತ್ರವೇ ನೂತನ ಪೈಪು ಅಳವಡಿಸಲಾಗಿದೆ. ಈ ಪ್ರದೇಶ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ಕಾರಣದಿಂದ ಇಲ್ಲಿಯ ವರೆಗೆ ನೂತನ ಪೈಪು ಅಳವಡಿಸಲು ಸಾಧ್ಯವಾಗಿದೆ.
ಆದರೆ ಚೆರ್ಕಳದಿಂದ ವಿದ್ಯಾನಗರದಲ್ಲಿರುವ ಜಲಮಂಡ ಳಿಯ ಕಚೇರಿಯ ವರೆಗಿನ ಪ್ರದೇಶ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಬರುತ್ತದೆ. ಈ ಕಾರಣದಿಂದ ಪೈಪು ಅಳವಡಿಕೆಗೆ ಅಡ್ಡಿಯಾಗಿದೆ.
ಚೆರ್ಕಳದಿಂದ ವಿದ್ಯಾನಗರದ ವರೆಗೆ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಜಲ ಮಂಡಳಿ ಪೈಪುಗಳನ್ನು ಅಳವಡಿಸಲು ಅನುಮತಿ ಕೇಳಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯಿದ್ದು, ರಸ್ತೆಯನ್ನು ಅಗಲಗೊಳಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿರುವುದರಿಂದ ಪೈಪು ಅಳವಡಿಸಲು ಅನುಮತಿ ನೀಡಲು ಸಾಧ್ಯವಿಲ್ಲವೆಂದು ಜಲ ಮಂಡಳಿ ಸ್ಪಷ್ಟವಾಗಿಯೇ ಉತ್ತರಿಸಿದೆ. ಅಲ್ಲದೆ ಮಳೆಗಾಲದಲ್ಲಿ ಪೈಪು ಅಳವಡಿಸಲು ರಸ್ತೆ ಬದಿಯಲ್ಲಿ ಹೊಂಡ ಮಾಡುವುದರಿಂದ ವಾಹನ ಅಪಘಾತಕ್ಕೆ ಸಾಧ್ಯತೆಯಿದೆ ಎಂದು ಜಲಮಂಡಲಿ ಹೇಳಿದೆ. 1976 ರಲ್ಲಿ ಆರಂಭಿಸಿದ ಬಾವಿಕೆರೆ ನೀರು ಸರಬರಾಜು ಯೋಜನೆಯ ಬಹುತೇಕ ಪೈಪುಗಳು ಸಾಮರ್ಥ್ಯವನ್ನು ಕಳೆದುಕೊಂಡು ಪದೇ ಪದೇ ಒಡೆಯುವುದರಿಂದ ನೀರು ಪೋಲಾಗುತ್ತಿದೆ. ಇಂತಹ ಪರಿಸ್ಥಿತಿಯನ್ನು ತಡೆಯಲು ನೂತನ ಪೈಪುಗಳನ್ನು ಅಳವಡಿಸಲು ತೀರ್ಮಾನಿಸಲಾಗಿತ್ತು.
1976 ರಲ್ಲಿ ಸ್ಥಾಪಿಸಿದ್ದ ಪೈಪುಗಳಲ್ಲಿ ಬಹುತೇಕ ಪೈಪುಗಳು ಶೋಚನೀಯ ಸ್ಥಿತಿಗೆ ತಲುಪಿವೆೆ. ಇದರಿಂದಾಗಿ ಪದೇ ಪದೇ ಪೈಪು ಒಡೆದು ನೀರು ಪೋಲಾಗುತ್ತಿದೆ. ಪೈಪುಗಳು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿರುವುದರಿಂದ ಬಾವಿಕೆರೆ, ನುಸ್ರತ್ ನಗರ, ಮೊದಲಪ್ಪಾರೆ, ಎಂಟನೇ ಮೈಲು, ಮಲ್ಲ, ಬೆಂಚ್ ಕೋರ್ಟ್, ಪೊವ್ವಲ್, ಮಾಸ್ತಿಕುಂಡು, ಚೆರ್ಕಳ ಕೆಕೆ ಪುರಂ, ಇಂದಿರಾನಗರ, ಅಣಂಗೂರು, ಕಾಸರಗೋಡು ನಗರದ ವಿವಿಧೆಡೆ ಪದೇ ಪದೇ ಹಳೆಯ ಪೈಪು ಒಡೆದು ನೀರು ನಿರಂತರವಾಗಿ ಪೋಲಾಗುತ್ತಿದೆ.
ಚೆರ್ಕಳದಿಂದ ಆರಂಭಿಸಿ ವಿದ್ಯಾನಗರದ ವರೆಗೆ ಸ್ಥಾಪಿಸಲಿರುವ ಪೈಪುಗಳನ್ನು ರಾಷ್ಟಿÅàಯ ಹೆದ್ದಾರಿಯ ವಿವಿಧೆಡೆಗಳಲ್ಲಿ ರಾಶಿ ಹಾಕಲಾಗಿದೆ. ಬೇಸಗೆಯಲ್ಲಿ ನೂತನ ಪೈಪುಗಳನ್ನು ಸ್ಥಾಪಿಸಲು ರಾಷ್ಟ್ರೀಯ ಹೆದ್ದಾರಿ ಮಂಡಳಿ ಅನುಮತಿ ನೀಡಬಹುದೆಂದು ಜಲ ಮಂಡಳಿ ಅಧಿಕಾರಿಗಳು ನಿರೀಕ್ಷೆ ವ್ಯಕ್ತಪಡಿಸುತ್ತಾರೆ.
ಪ್ರತೀ ವರ್ಷ ಉಪ್ಪು ನೀರು
ಬಾವಿಕೆರೆಯಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಯಿದ್ದರೂ ಇನ್ನೂ ಸಾಧ್ಯವಾಗಿಲ್ಲ. ಇದರಿಂದಾಗಿ ಪ್ರತೀ ವರ್ಷವೂ ಮಳೆಯ ಬಳಿಕ ಜನವರಿ ತಿಂಗಳಿಂದಲೇ ಕಾಸರಗೋಡು ನಗರ ಪ್ರದೇಶ ಮತ್ತು ಕೆಲವೊಂದು ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ ಬಾವಿಕೆರೆಯಿಂದ ಉಪ್ಪು ನೀರನ್ನೇ ಸರಬರಾಜು ಮಾಡುತ್ತಿದೆ. ಬೇಸಗೆಯಲ್ಲಿ ಬಾವಿಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಸಮುದ್ರದ ನೀರು ನದಿಯನ್ನು ಸೇರುವುದರಿಂದ ಉಪ್ಪು ನೀರು ವಿತರಿಸುವಂತಾಗುತ್ತದೆ. ಉಪ್ಪು ನೀರು ಪೈಪುಗಳಲ್ಲಿ ಹರಿಯುತ್ತಿರುವುದರಿಂದಲೂ ಪೈಪುಗಳು ಒಡೆಯಲು ಪ್ರಮುಖ ಕಾರಣವಾಗಿದೆ.
ಶಾಶ್ವತ ತಡೆಗೋಡೆ ಅಗತ್ಯ
ಉಪ್ಪು ನೀರು ವಿತರಣೆಯಿಂದ ಪಾರು ಮಾಡಲು ಶಾಶ್ವತ ತಡೆಗೋಡೆ ಅಗತ್ಯವಿದೆ. ಆದರೆ ಈ ವರೆಗೂ ಶಾಶ್ವತ ತಡೆಗೋಡೆ ನಿರ್ಮಿಸಲು ಸಾಧ್ಯವಾಗಿಲ್ಲ. ಪ್ರತೀ ವರ್ಷವೂ ಗೋಣಿ ಚೀಲಗಳಲ್ಲಿ ಮರಳು ತುಂಬಿ ಪಯಸ್ವಿನಿ ಹೊಳೆಯ ಅಡ್ಡಕ್ಕೆ ಇರಿಸಿ ಸಮುದ್ರದ ಉಪ್ಪು ನೀರು ಪ್ರವೇಶಿಸುವುದನ್ನು ತಡೆಯಲು ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿದೆ.
ಆದರೆ ಈ ತಾತ್ಕಾಲಿಕ ತಡೆಗೋಡೆ ನೀರಿನ ಹರಿವಿನಿಂದಾಗಿ ಕೆಲವೇ ದಿನಗಳಲ್ಲಿ ನೀರು ಪಾಲಾಗಿ ಮತ್ತೆ ಉಪ್ಪು ನೀರು ಹೊಳೆಯನ್ನು ಸೇರುವುದು ಪ್ರತೀ ವರ್ಷದ ದುರಂತವಾಗಿದೆ. ಇಂತಹ ಸ್ಥಿತಿ ಇದ್ದರೂ ಸಂಬಂಧಪಟ್ಟವರು ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸುವ ಬಗೆಗೆ ಇಚ್ಛಾಶಕ್ತಿಯನ್ನು ಈ ವರೆಗೂ ತೋರಿಲ್ಲ. ಇಲ್ಲಿನ ಸರಕಾರಗಳು ಹಲವು ಬಾರಿ ಶೀಘ್ರವೇ ಶಾಶ್ವತ ತಡೆಗೋಡೆ ನಿರ್ಮಿಸಲಾಗುವುದೆಂದು ಭರವಸೆಗಳನ್ನು ನೀಡುತ್ತಲೇ ಬಂದಿವೆೆ. ಆದರೆ ಈ ಭರವಸೆಗಳು ಕಡತದಲ್ಲೇ ಉಳಿದುಕೊಂಡಿರುವುದು ಕಾಸರಗೋಡಿನ ಜನತೆಯ ಬಗೆಗೆ ಇರುವ ತಾತ್ಸಾರ ಮನೋಭಾವವೇ ಕಾರಣ ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.
– ಪ್ರದೀಪ್ ಬೇಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.