ನಮ್ಮ ಹೋರಾಟ ಯಾವುದೇ ಧರ್ಮದ ವಿರುದ್ಧವಲ್ಲ
Team Udayavani, Sep 6, 2017, 7:59 AM IST
ರಾಜ್ಯ ಬಿಜೆಪಿ ಯುವ ಮೋರ್ಚಾ ಪಿಎಫ್‌ಐ, ಕೆಎಫ್‌ಡಿ ಸಂಘಟನೆ ನಿಷೇಧ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಗಳೂರು ಚಲೋ ಹಮ್ಮಿಕೊಂಡಿದೆ. ಮಂಗಳೂರು ಚಲೋಗೆ ಪೂರಕವಾಗಿ ಎಲ್ಲ ಜಿಲ್ಲೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ಪೊಲೀಸರು ಈಗಾಗಲೇ ಅನುಮತಿ ನಿರಾಕರಿಸಿದ್ದಾರೆ. ಸದ್ಯ ಈ ಸಂಗತಿ ರಾಜ್ಯವ್ಯಾಪಿ ಚರ್ಚೆಯಾಗುತ್ತಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಎಡೆಮಾಡಿದೆ. ಪೊಲೀಸರ ಅನುಮತಿ ನಿರಾಕರಣೆ ನಡುವೆಯೂ ಮಂಗಳೂರು ಚಲೋ ನಡೆಸಿಯೇ ಸಿದ್ಧ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಸರಕಾರಕ್ಕೆ ಸವಾಲು ಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಅವರೊಂದಿಗೆ “ಉದಯವಾಣಿ’ ಮಾತಿಗಿಳಿದಾಗ
ಬೆಂಗಳೂರು ಚಲೋ ಮಾಡುವುದು ಬಿಟ್ಟು ಮಂಗಳೂರು ಚಲೋ ಏಕೆ?
ಸಿದ್ದರಾಮಯ್ಯನವರ ಸರಕಾರ ಬಂದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯವಾದಿ ಅಹಿತಕರ ಘಟನೆಗಳು ಜಾಸ್ತಿಯಾಗಿವೆ. ಕೆಎಫ್‌ಡಿ ಹಾಗೂ ಪಿಎಫ್‌ಐ ಸಂಘಟನೆಗಳು ಈ ಜಿಲ್ಲೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿದ್ದು, ಈಗ ನಡೆದಿರುವ ಬಹುತೇಕ ಕೊಲೆಗಳಲ್ಲಿ ಈ ಸಂಘಟನೆ ಕಾರ್ಯಕರ್ತರ ಬಂಧನವಾಗಿರುವುದು ಬಹಳ ಸ್ಪಷ್ಟ. ಅಷ್ಟೇಅಲ್ಲ, ಎರಡು ಕೋಮುಗಳ ನಡುವೆ ವೈಮನಸ್ಸು ಸೃಷ್ಟಿಸುವ ಕೆಲಸವನ್ನೂ ಈ ಸಂಘಟನೆಗಳು ಮಾಡುತ್ತಿವೆ. ಭಯೋತ್ಪಾದಕ ಚಟುವಟಿಕೆಗಳು ಕೂಡ ಈಗ ಮಂಗಳೂರಿನಂಥ ನಗರಗಳಿಗೆ ಪ್ರವೇಶಿಸತೊಡಗಿದೆ. ಈ ಎಲ್ಲ ಅಂಶ ಗಮನದಲ್ಲಿಟ್ಟು ಮಂಗಳೂರು ನಗರವನ್ನೇ ಕೇಂದ್ರವನ್ನಾಗಿಟ್ಟುಕೊಂಡು ಇಲ್ಲಿಂದಲೇ ಘೋಷಣೆಗಳು ಪ್ರಾರಂಭವಾಗಬೇಕು ಎಂಬ ಕಾರಣಕ್ಕೆ ಮಂಗಳೂರು ಚಲೋ ಆಯೋಜಿಸಲಾಗಿದೆ.
ಈ ಹಿಂದೆಯೂ ದಕ್ಷಿಣ ಕನ್ನಡದಲ್ಲಿ ಶಾಂತಿ ಕದಡುವ ಘಟನೆಗಳು ಆಗಿಲ್ಲವೇ?
ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ, ಕೋಮು ಗಲಭೆ ಉಂಟಾಗಿ ಕರ್ಫ್ಯೂ ಕೂಡ ವಿಧಿಸಲಾಗಿತ್ತು. ಆದರೆ, ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಒಂದೇ ಒಂದು ಕೋಮು ಗಲಭೆ ಘಟನೆ ದಕ್ಷಿಣ ಕನ್ನಡದಲ್ಲಿ ಆಗಿರಲಿಲ್ಲ. ಆಗ ಪಬ್ ದಾಳಿ, ಹೋಮ್‌ಸ್ಟೇ ದಾಳಿ ಅಂಥ ಘಟನೆ ಆಗಿರಬಹುದು. ಆದರೆ, ಯಾವುದೇ ಮತೀಯ ಸಂಘರ್ಷ ಅಥವಾ ಹಿಂಸಾಚಾರ ಆಗಿರಲಿಲ್ಲ. ಅದೇ ಕಳೆದ ಐದು ವರ್ಷದಲ್ಲಿ ಸಾಕಷ್ಟು ಕೋಮು ಭಾವನೆ ಕೆರಳಿಸುವ ಕೃತ್ಯ ಸಂಭವಿಸಿವೆ. ಇಂಥ ಘಟನೆಗಳು ಆದಾಗೆಲ್ಲ ಸರಕಾರವು ಪೊಲೀಸರ ಕೈಕಟ್ಟಿ ಹಾಕುವ ಕೆಲಸಮಾಡಿದೆ. ಹೀಗಾಗಿ, ಜಿಲ್ಲೆಯಲ್ಲಿ ಈಗ ಘರ್ಷಣೆಗಳು ಜಾಸ್ತಿಯಾಗುತ್ತಿವೆ.
ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲೇ ಕೆಎಫ್‌ಡಿ, ಪಿಎಫ್‌ಐಯನ್ನು ನಿಷೇಧಿಸಬಹುದಿತ್ತಲ್ಲಾ?
ನಮ್ಮ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಈ ಸಂಘಟನೆಗಳು ಅಷ್ಟೊಂದು ಸಕ್ರೀಯವಾಗಿರಲಿಲ್ಲ. ಆಗ ಸಿಮಿ ಸಂಘಟನೆ ಸಕ್ರೀಯವಾಗಿದ್ದು, ಅದನ್ನು ನಿಷೇಧಿಸುವ ಕೆಲಸ ಮಾಡಿದ್ದೇವೆ. ಆದರೆ, ಇವು ಇತ್ತೀಚೆಗೆ ಹುಟ್ಟಿಕೊಂಡಿರುವ ಸಂಘಟನೆಗಳು.
ಈ ಹಿಂದೆ ಕಾಂಗ್ರೆಸ್ ಆ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳ ಬೇಕಾದರೆ ಈ ಸಂಘಟನೆಗಳ ಬಗ್ಗೆ ತಕರಾರು ಇರಲಿಲ್ಲ ?
ನೋಡಿ; ಕಾಂಗ್ರೆಸ್‌ನವರು ಯಾರ ಜತೆಗೆ ಬೇಕಿದ್ದರೂ ಚುನಾವಣಾ ಮೈತ್ರಿ ಮಾಡಿಕೊಂಡಿರಬಹುದು. ಅದು ಪಿಎಫ್‌ಐ ಇರಬಹುದು ಅಥವಾ ಬೇರೆ ಕಮ್ಯೂನಿಸ್ಟ್ ಪಕ್ಷವೇ ಇರಬಹುದು. ನಮಗೆ ಅದು ಮುಖ್ಯವಲ್ಲ.
ಮಂಗಳೂರು ಚಲೋಗೆ ಪೊಲೀಸರು ಅನುಮತಿ ನೀಡುವುದಿಲ್ಲ ಎಂಬ ಬಗ್ಗೆ ಮೊದಲೇ ಅನುಮಾನ ಇತ್ತೇ?
ದುರಾಡಳಿತದ ವಿರುದ್ಧ ಅಹಿಂಸಾತ್ಮಕ ಹೋರಾಟ ಮಾಡಿ ಎಂದು ಮಹಾತ್ಮಾ ಗಾಂಧೀಜಿಯೇ ಹೇಳಿದ್ದಾರೆ. ಹೀಗಿರು ವಾಗ, ನಾವು ಮಾಡುವ ಬೈಕ್ ರ್ಯಾಲಿಯಲ್ಲಿ ಎಲ್ಲಿಯೂ ಹಿಂಸಾಚಾರಕ್ಕೆ ಆಸ್ಪದವಿಲ್ಲ. ಬೈಕ್ ಓಡಿಸಿಕೊಂಡು ಬರುವ ಕಾರ್ಯಕರ್ತರು ಕಲ್ಲು ಹೊಡೆಯುವುದಕ್ಕೂ ಸಾಧ್ಯವಿಲ್ಲ. ಅವರೆಲ್ಲ ನೇರವಾಗಿ ಮಂಗಳೂರಿನ ಸಮಾವೇಶಕ್ಕೆ ಬಂದು ವಾಪಸು ಹೋಗುತ್ತಾರೆ. ಇಂಥ ಒಂದು ರಾಜಕೀಯ ಸಮಾವೇಶವನ್ನು ನಿಷೇಧ ಮಾಡಲಿಕ್ಕಿಲ್ಲ ಎನ್ನುವ ನಂಬಿಕೆ ನಮಗಿತ್ತು. ಏಕೆಂದರೆ, ಈ ಹಿಂದೆ ನಮ್ಮ ಸರಕಾರವಿದ್ದಾಗ, ಕಾಂಗ್ರೆಸ್‌ನವರು ಬಳ್ಳಾರಿ ಪಾದಯಾತ್ರೆ ಮಾಡಿದ್ದರು. ಆಯಾ ರಾಜಕೀಯ ಪಕ್ಷಗಳಿಗೆ ಅವರವರ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುವ ಹಕ್ಕು ಇದೆ.
ಆದರೆ, ನಿಮ್ಮ ನಂಬಿಕೆ ಈಗ ಸುಳ್ಳು ಆಯ್ತಲ್ಲವೇ?
ಇದು ಹೋರಾಟ ಹತ್ತಿಕ್ಕುವ ಕೆಲಸ. ಏಕೆಂದರೆ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಭಯವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತ ಎಂದು ಅನ್ನಿಸಿದೆ. ಇನ್ನೊಂದೆಡೆ, ಬಿಜೆಪಿ ಮತ್ತಷ್ಟು ಬೆಳೆಯಬಹುದು ಎಂಬ ಭಯದಿಂದ ಈ ರೀತಿ ನಮ್ಮ ಪ್ರತಿಭಟನಾ ರ್ಯಾಲಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ.
ರಾಜ್ಯದೆಲ್ಲೆಡೆಯಿಂದ ಸಾವಿರಾರು ಮಂದಿ ಯುವಕರು ಬೈಕ್ ರ್ಯಾಲಿ ಹೆಸರಿನಲ್ಲಿ ದಕ್ಷಿಣ ಕನ್ನಡದಂಥ ಜಿಲ್ಲೆಗೆ ಬಂದಾಗ ಗಲಾಟೆ ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?
ನೋಡಿ; ಮಂಗಳೂರು ಚಲೋದಂಥ ಕಾರ್ಯಕ್ರಮ ಹೊಸದೇನಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥ ಕಾರ್ಯಕ್ರಮಗಳು ವರ್ಷಕ್ಕೆ ನಾಲ್ಕೈದು ಬಾರಿ ಆಗುತ್ತವೆ. ಹಿಂದೂ ಸಮಾಜೋತ್ಸವ ನಡೆಯುತ್ತದೆ, ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಬಂದು ಶಾಂತಿಯುತವಾಗಿ ವಾಪಸ್ ಹೋಗಿದ್ದಾರೆ.ಆದರೆ, ರಾಜ್ಯ ಸರಕಾರದ ನಡೆ ನೋಡಿದರೆ, ಇವರೇ ಇಲ್ಲಿ ಗಲಭೆ ಸೃಷ್ಟಿಸುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಅನುಮಾನ ಬಂದಿದೆ. ಬಹುಶಃ ಜಿಲ್ಲೆಯಲ್ಲಿ ನಮ್ಮ ರ್ಯಾಲಿ ಹೆಸರಿನಲ್ಲಿ ಕಾಂಗ್ರೆಸ್‌ನವರಿಗೆ ಗಲಾಟೆ ಮಾಡಿಸಬೇಕಿದೆ. ಇಲ್ಲದಿದ್ದರೆ, ಮಂಗಳೂರು ಚಲೋ ಮಾಡಿದ ತಕ್ಷಣ ಗಲಭೆಯಾಗುತ್ತದೆ ಎನ್ನುವುದು ಇವರಿಗೆ ಹೇಗೆ ಗೊತ್ತಾಗುತ್ತದೆ?
ಇಷ್ಟೆಲ್ಲ ರಾದ್ಧಾಂತ ಆಗುತ್ತಿರಬೇಕಾದರೆ ನಿಮಗೆ ಬೈಕ್ ರ್ಯಾಲಿ ಬಿಟ್ಟು ಸಭೆ ಮಾತ್ರ ಮಾಡಬಹುದಲ್ಲವೇ?
ನಾವು ಕೇಳಿದ್ದು ಬೈಕ್ ರ್ಯಾಲಿ. ಬೈಕ್ ರ್ಯಾಲಿ ಮಾಡಿದರೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಹೆಚ್ಚು ಅನುಕೂಲ. ನಮ್ಮ ಸಂಕಲ್ಪದಲ್ಲಿ ಯಾವುದೇ ಧೃತಿಗೆಡುವುದಿಲ್ಲ. ಅದರಲ್ಲಿ ಯಾವುದೇ ಬದಲಾವಣೆಯೂ ಇಲ್ಲ. ಹೋರಾಟ ಮಾಡುವುದು ನಮ್ಮ ಜಾವಾಬ್ದಾರಿ; ಅದಕ್ಕೆ ರಕ್ಷಣೆ ಕೊಡುವುದು ಸರಕಾರದ ಕೆಲಸ. ಒಂದುವೇಳೆ ನಮ್ಮ ಹೋರಾಟವನ್ನು ಸರಕಾರ ಹತ್ತಿಕ್ಕುವುದಾದರೆ ಅದರಿಂದಾ ಗುವ ಪರಿಣಾಮಗಳಿಗೂ ಸರಕಾರವೇ ನೇರ ಹೊಣೆ.
ಪೊಲೀಸರ ಅನುಮತಿ ನಿರಾಕರಣೆ ನಡುವೆಯೂ ರ್ಯಾಲಿ ಮಾಡಿಯೇ ಸಿದ್ಧ ಎನ್ನುತ್ತಿದ್ದೀರಾ? ಮುಂದೇನು ಮಾಡುತ್ತೀರಿ?
ಯುದ್ಧದ ರಣತಂತ್ರಗಳನ್ನು ಯಾರು ಕೂಡ ಬಿಟ್ಟುಕೊಡು ವುದಿಲ್ಲ. ನಾವು ರ್ಯಾಲಿ ಹಾಗೂ ಮಂಗಳೂರು ಚಲೋ ಮಾಡಿಯೇ ಮಾಡುತ್ತೇವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರ್‍ನಾಲ್ಕು ತಿಂಗಳ ಪರಿಸ್ಥಿತಿ ನಿಮಗೆ ಚೆನ್ನಾಗಿ ಗೊತ್ತು; ಇಂಥ ಸನ್ನಿವೇಶದಲ್ಲಿ ಮಂಗಳೂರು ಚಲೋ ಮಾಡಲು ಹೊರಟಿದ್ದು, ಒಬ್ಬ ಜನಪ್ರತಿನಿಧಿಯಾಗಿ ಇದು ಸರಿಯೇ?
ನೋಡಿ; ಇದು ಸಂಘಟನೆಯವರ ಜವಾಬ್ದಾರಿ. ನಮ್ಮ ಪ್ರತಿಭಟನೆ ಬಗ್ಗೆ ಅನುಮಾನ ಅಥವಾ ಆತಂಕಗಳಿದ್ದರೆ, ಕಾನೂನಿನ ಚೌಕಟ್ಟಿನಲ್ಲಿ ಮಾರ್ಗಸೂಚಿಗಳನ್ನು ವಿಧಿಸಿ ರ್ಯಾಲಿ ಮಾಡುವುದಕ್ಕೆ ಅವಕಾಶ ಕಲ್ಪಿಸಬಹುದಿತ್ತು.
ಗಲಭೆಯಾದರೆ ಅದಕ್ಕೆ ನೀವೇ ಜವಾಬ್ದಾರರು ಎನ್ನುತ್ತಿದ್ದರೆ ಅದನ್ನು ಪಾಲಿಸುವುದಕ್ಕೆ ನಾವು ಸಿದ್ಧರಿದ್ದೆವು. ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಮಂಗಳೂರಿಗೆ ಬಂದಿದ್ದರು. ಆಗ, ನಿಷೇಧಾಜ್ಞೆೆಯಿದ್ದರೂ ಅವರಿಗೆ ರಕ್ಷಣೆ ಕೊಟ್ಟು ಸಭೆಗೆ ಅವಕಾಶ ಕಲ್ಪಿಸಿದ್ದರು. ಆದರೆ, ಈಗ ಮಂಗಳೂರು ಚಲೋಗೆ ಅವಕಾಶ ನಿರಾಕರಣೆ ಅದೊಂದು ತುಘಲಕ್ ದರ್ಬಾರು. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದು ಯುವ ಮೋರ್ಚಾದವರನ್ನು ಎಬ್ಬಿಸುವ ತನಕ ಮಂಗಳೂರು ಚಲೋದ ಯೋಚನೆ ಬಂದಿರಲಿಲ್ಲವೇ?
ಮಂಗಳೂರು ಚಲೋ ಥಟ್ ಅಂಥ ಹೊಳೆದ ಕಾರ್ಯಕ್ರಮ ಅಲ್ಲ. ಇಷ್ಟೊಂದು ದೊಡ್ಡ ರ್ಯಾಲಿ ಆಯೋಜಿಸಬೇಕಾದರೆ ಅದಕ್ಕೆ ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ರೀತಿಯ ರ್ಯಾಲಿಯ ಬಗ್ಗೆ ಅಮಿತ್ ಶಾ ಆಗಮಿಸುವ ಮೊದಲೇ ಯೋಚನೆ ಇತ್ತು. ಆದರೆ, ಜಿಲ್ಲೆಯಲ್ಲಿ ಕೆಲವೊಂದು ಅಹಿತಕರ ನಡೆದ ಕಾರಣ ಸೆಕ್ಷನ್ ವಿಧಿಸಲಾಗಿತ್ತು. ಇಂಥ ಅಶಾಂತಿ ವಾತಾವರಣದಲ್ಲಿ ರ್ಯಾಲಿ ಮಾಡುವುದು ಬೇಡ. ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿ ಎನ್ನುವ ಕಾರಣಕ್ಕೆ ರ್ಯಾಲಿಯನ್ನು ಮುಂದೂಡುವ ಯೋಚನೆ ಮಾಡಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಒಬ್ಬ ಜನಪ್ರತಿನಿಧಿಯಾಗಿ ಯೋಚಿಸಿದರೆ, ಮಂಗಳೂರು ಚಲೋಗೆ ಈಗ ಸಕಾಲವೇ?
ನೋಡಿ; ನಾನು ಒಂದು ಕೋಮಿನ ವಿರೋಧಿಯಲ್ಲ. ಸರಕಾರದ ವೈಫಲ್ಯದ ವಿರುದ್ಧ ಹಾಗೂ ಎರಡು ಸಂಘಟ ನೆಗಳು ಮಾಡಿರುವ ಹತ್ಯೆಗಳ ವಿರುದ್ಧ ನಮ್ಮ ಹೋರಾಟವೇ ಹೊರತು ಯಾವುದೇ ಧರ್ಮಗಳ ವಿರುದ್ಧವಲ್ಲ. ಜಿಲ್ಲೆಯಲ್ಲಿ ಈ ಹಿಂದೆ ಕೂಡ ಅನೇಕ ಅಹಿತಕರ ಘಟನೆಗಳು ಆಗಿದ್ದು, ಅದಕ್ಕೆಲ್ಲ ಪೊಲೀಸರು ಹಾಗೂ ಆಗಿನ ಸರಕಾರದ ವೈಫಲ್ಯ ಕಾರಣವೇ ಹೊರತು ಬಿಜೆಪಿಯವರಲ್ಲ. ಈಗ ಬಿಸಿಬಿಸಿ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿದೆ. ಶರತ್ ಕೊಲೆ ಪ್ರಕರಣದಲ್ಲಿಯೂ ಪಿಎಫ್‌ಐ ಕೈವಾಡದ ಬಗ್ಗೆ ಆರೋಪಗ ಳಿವೆ. ಈ ಕಾರಣಕ್ಕೆ ಅಂಥ ಸಂಘಟನೆಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಹೀಗಿರುವಾಗ, ಮಂಗಳೂರು ಚಲೋ ಈಗ ನಮಗೆ ಪ್ರಸ್ತುತ. ಆದರೆ, ಜಿಲ್ಲೆಯಲ್ಲಿ ಅಶಾಂತಿ ನೆಲೆಸುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಕುಮ್ಮಕ್ಕು ಕಾರಣ.
ಅಂದರೆ, ಎಲ್ಲದಕ್ಕೂ ಜಿಲ್ಲಾ ಉಸ್ತುವಾರಿ ಸಚಿವರೇ ಹೊಣೆ ಹೇಗೆ ?
ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು, ಎಸ್‌ಪಿಯನ್ನು ಕಾಂಗ್ರೆಸ್ ಕಾರ್ಯಕರ್ತರ ಮುಂದೆ ಕೂರಿಸಿಕೊಂಡು ಅಪ ರಾಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಬಿಡುಗಡೆ ಗೊಳಿಸಿ ಹಾಗೂ ದೇಶಭಕ್ತರನ್ನು ಬಂಧಿಸಿ ಎಂದು ತಾಕೀತು ಮಾಡುತ್ತಾರೆ ಅಂದರೆ ಅದನ್ನು ಏನೆನ್ನಬೇಕು? ಸಚಿವರ ಈ ರೀತಿಯ ಹೇಳಿಕೆಯಿಂದಾಗಿ ಈಗ ಸಮಾಜಘಾತುಕ ಶಕ್ತಿಗಳಿಗೆ ಧೈರ್ಯ ಬಂದಿದೆ. ಕಳೆದ ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟಾಗಿ ಮಂಗಳೂರು ಚಲೋ ತನಕ ಬಂದಿರಬೇಕಾದರೆ ಅದಕ್ಕೆಲ್ಲ ಸಚಿವ ರಮಾನಾಥ ರೈ ಅವರೇ ನೇರ ಹೊಣೆ.
ಈ ಕಾರಣಕ್ಕೆ ಮಂಗಳೂರು ಚಲೋ ಬಗ್ಗೆ ಉಸ್ತುವಾರಿ ಸಚಿವರು ಮೌನ ವಹಿಸಿದ್ದಾರೆಯೇ?
ಇದೇ ಅವರ ವೈಫಲ್ಯ. ಹಿಂದಿನಿಂದ ರಮಾನಾಥ ರೈ ಅವರು ಎಲ್ಲದಕ್ಕೂ ಕುಮ್ಮಕ್ಕು ಕೊಡುತ್ತಾರೆ. ಆದರೆ, ಮುಂದೆ ಬಂದು ಮಾತನಾಡುವ ಧೈರ್ಯ ಅವರಿಗಿಲ್ಲ. ಅವರು ಈ ಜಿಲ್ಲೆಯವರು ತಾನೆ? ಕಲ್ಲಡ್ಕದಿಂದ ಗಲಾಟೆ ಶುರುವಾಗಿದ್ದಾಗಲೇ ಜಿಲ್ಲೆಯ ಎಲ್ಲ ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸಬಹುದಿತ್ತಲ್ಲವೇ? ಅವರು ಆ ಕೆಲಸವನ್ನು ಮಾಡದ ಕಾರಣಕ್ಕೆ ಪರಿಸ್ಥಿತಿ ಈಗ ಈ ಹಂತಕ್ಕೆ ಹೋಗುತ್ತಿರಲಿಲ್ಲ.
ಈ ಹಿಂದೆ ನೇತ್ರಾವತಿ, ಎತ್ತಿನಹೊಳೆಯಂಥ ಜಿಲ್ಲೆಯ ಜೀವ ಜಲದ ರಕ್ಷಣೆ ಬಂದಾಗ ನಿಮ್ಮ ಮಂಗಳೂರು ಚಲೋ ಎಲ್ಲಿ ಹೋಗಿತ್ತು?
ನೋಡಿ ಅದು ಬೇರೆ ಹೋರಾಟ; ಇದು ಬೇರೆ ವಿಚಾರ. ಎಲ್ಲ ರೀತಿ ಹೋರಾಟಗಳನ್ನು ಮಾಡಿದಾಗಲೂ ಟೀಕೆಗಳು ಸಹಜ. ಪರಿಸರದ ವಿಚಾರದ ಹೋರಾಟಗಳು ಆದಾಗಲೂ ಸಾಕಷ್ಟು ಟೀಕೆಗಳು ಬಂದಿತ್ತು. ಈ ಎರಡೂ ಹೋರಾಟಗಳ ಹಿಂದೆ ರಾಜಕೀಯ ಶಕ್ತಿಗಳು ಇರುವಾಗ, ಟೀಕೆಗಳು ಬಂದೇ ಬರುತ್ತದೆ. ಹಾಗಂತ, ಎತ್ತಿನಹೊಳೆ, ನೇತ್ರಾವತಿ ನದಿ ವಿಚಾರವಾಗಿಯೂ ನಾವು ಹೋರಾಟಗಳನ್ನು ಮಾಡಿದ್ದೇವೆ.
ಸಂದರ್ಶನ ಸುರೇಶ್ ಪುದುವೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.