ಮರ್ದಾಳ: ಹಂದಿ ಉರುಳಿಗೆ ಬಿದ್ದ ಚಿರತೆ
Team Udayavani, Sep 7, 2017, 10:22 AM IST
ಕಡಬ: ಮರ್ದಾಳದ ಬಂಟ್ರ ಗ್ರಾಮಕ್ಕೆ ಸೇರಿದ ಮುಂಡ್ರಾಡಿಯ ಖಾಸಗಿ ಜಮೀನಿನಲ್ಲಿ ಹಂದಿಗಾಗಿ ಇಟ್ಟ ಉರುಳಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಸಿಬಂದಿ ಸುಮಾರು ಎರಡು ತಾಸು ಕಾರ್ಯಾಚರಣೆ ನಡೆಸಿ ಉರುಳಿನಿಂದ ಬಿಡಿಸಿ ಸುರಕ್ಷಿತ ತಾಣಕ್ಕೆ ಬಿಟ್ಟಿದ್ದಾರೆ.
ಬುಧವಾರ ಬೆಳಗ್ಗೆ ಚಿರತೆ ಉರುಳಿಗೆ ಸಿಲುಕಿರುವ ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಚಿರತೆಯನ್ನು ಪ್ರಜ್ಞೆ ತಪ್ಪಿಸಿ ಉರುಳಿನಿಂದ ಬಿಡಿಸುವುದಕ್ಕಾಗಿ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಪರಿಣತರಿಗಾಗಿ ಕರೆ ಕಳುಹಿಸಲಾಯಿತು.
ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಬಂದ ಪಿಲಿಕುಳ ನಿಸರ್ಗಧಾಮದ ಪಶು ವೈದ್ಯಾಧಿಕಾರಿ ಹಾಗೂ ತಂಡದವರು ಮೂರು ಬಾರಿ ಬಂದೂಕಿನ ಮೂಲಕ ಅರಿವಳಿಕೆ ಔಷಧಿಯನ್ನು ಚಿರತೆಯ ಮೇಲೆ ಪ್ರಯೋಗಿಸಿ ಕೊನೆಗೂ ಚಿರತೆಯ ಪ್ರಜ್ಞೆ ತಪ್ಪಿಸುವಲ್ಲಿ ಯಶಸ್ವಿಯಾದರು. ಬಳಿಕ ಚಿರತೆಯನ್ನು ಬೋನಿಗೆ ಹಾಕಿ ಸುರಕ್ಷಿತ ತಾಣಕ್ಕೆ ಕೊಂಡೊಯ್ದು ಬಿಡಲಾಯಿತು.
ಗಂಡು ಚಿರತೆ
ರಕ್ಷಣೆ ಮಾಡಲಾದ ಚಿರತೆಗೆ ಸುಮಾರು 8 ವರ್ಷ ಪ್ರಾಯವಾಗಿರಬಹುದು. ಅದು ಗಂಡು ಚಿರತೆಯಾಗಿದ್ದು, ಪಕ್ಕದ ಅರಣ್ಯದಿಂದ ಬಂದು ಉರುಳಿಗೆ ಬಿದ್ದಿದೆ ಎಂದು ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ ಸುಬ್ರಹ್ಮಣ್ಯ ಉಪ ವಿಭಾಗದ ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಎನ್.ಎಚ್. ಅವರು ತಿಳಿಸಿದ್ದಾರೆ.
ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಅರಣ್ಯ ರಕ್ಷಕರಾದ ರವಿಚಂದ್ರ ಪಡುಬೆಟ್ಟು, ಸುಬ್ರಹ್ಮಣ್ಯ ಗೌಡ, ದೇವಿಪ್ರಸಾದ್, ಅರಣ್ಯ ವೀಕ್ಷಕ ಜನಾರ್ದನ ಡಿ.ಪಿ., ವಾಹನ ಚಾಲಕರಾದ ಮೋಹನ ಹಾಗೂ ಮನೋಹರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
ಪಿಲಿಕುಳ ನಿಸರ್ಗಧಾಮದ ಪಶುವೈದ್ಯಾಧಿಕಾರಿ ಡಾ| ವಿಷ್ಣು, ಹಿರಿಯ ವೈಜ್ಞಾನಿಕ ಅಧಿಕಾರಿ ವಿಕ್ರಮ್ ಲೋಬೋ ಹಾಗೂ ಪ್ರಾಣಿ ಪರಿಪಾಲಕ ದಿನೇಶ್ ಕುಮಾರ್ ಅವರು ಚಿರತೆಗೆ ಅರಿವಳಿಕೆ ನೀಡುವ ಪ್ರಕ್ರಿಯೆ ನಿರ್ವಹಿಸಿದರು. ವನ್ಯಜೀವಿ ಸಂರಕ್ಷಕ ಭುವನೇಶ್ ಕೈಕಂಬ ಅವರು ಕಾರ್ಯಾಚರಣೆಗೆ ಸಹಕರಿಸಿದರು. ಕುತೂಹಲದಿಂದ ಕಾರ್ಯಾಚರಣೆ ವೀಕ್ಷಿಸಲು ಸೇರಿದ್ದ ಜನರನ್ನು ಕಡಬ ಪೊಲೀಸರು ನಿಯಂತ್ರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.