ಗೌರಿ ಲಂಕೇಶ ಹತ್ಯೆಗೆ ಜನಾಕ್ರೋಶ
Team Udayavani, Sep 7, 2017, 3:48 PM IST
ರಾಯಚೂರು: ವಿಚಾರವಾದಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರ ಹತ್ಯೆಗೆ ಜಿಲ್ಲಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿವಿಧ ಪ್ರಗತಿಪರ, ದಲಿತಪರ, ರೈತಪರ ಹಾಗೂ ವಿದ್ಯಾರ್ಥಿ ಸಂಘಟನೆಗಳ ಸದಸ್ಯರು ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಯಾವುದೇ ಕಾರಣಕ್ಕೂ ಹಂತಕರು ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಮಂಗಳವಾರ ಸಂಜೆ ಕೊಲೆ ನಡೆದ ಕೆಲ ಹೊತ್ತಿನಲ್ಲಿಯೇ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರರು, ವಿಚಾರವಾದಿಗಳು ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಬೆಳಗ್ಗೆ ಕಾರ್ಯನಿರತ ಪತ್ರಕರ್ತರ ಸಂಘ, ಪ್ರಗತಿಪರ ಚಿಂತಕರು, ಹೋರಾಟಗಾರರ ವೇದಿಕೆ, ಬಹುಜನ ವಿದ್ಯಾರ್ಥಿ ಸಂಘ, ಕರ್ನಾಟಕ ಕೋಮುವಾದಿ ಫ್ಯಾಸಿಸ್ಟ್ ವಿರೋಧಿ ವೇದಿಕೆ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ, ಸ್ಪಿಲ್ ಪತ್ರಿಕೋದ್ಯಮ ಕಾಲೇಜು ವಿದ್ಯಾರ್ಥಿ ಬಳಗ ಸೇರಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸುವ ಮೂಲಕ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಆಗಲೇಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಪತ್ರಿಕಾ ಭವನದಲ್ಲಿ ಬುಧವಾರ ಗೌರಿ ಲಂಕೇಶ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸದಸ್ಯರೆಲ್ಲರೂ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಮಾತನಾಡಿದ ಸಂಘದ ಸದಸ್ಯರು, ಇದೊಂದು ಕರಾಳ ದಿನ. ವಿಚಾರವಾದಿಗಳನ್ನು ಹತ್ಯೆ ಮಾಡುವ ಮೂಲಕ ವೈಚಾರಿಕತೆಯ ಕಗ್ಗೊಲೆ ಮಾಡಲಾಗುತ್ತಿದೆ. ಇಂಥ ಕೃತ್ಯಗಳಿಗೆ ಕಡಿವಾಣ ಬೀಳಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಪತ್ರಕರ್ತರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪತ್ರಕರ್ತರಾದ ನಾಗರಾಜ ಎಂ.ಬಿ.ವೆಂಕಟಸಿಂಗ್, ಬಸವರಾಜ ನಾಗಡದಿನ್ನಿ, ಸತ್ಯನಾರಾಯಣ, ದತ್ತು ಸರ್ಕಿಲ್, ಶಿವಮೂರ್ತಿ ಹಿರೇಮಠ, ಗುರುನಾಥ ಸೇರಿ ಇತರರು ಪಾಲ್ಗೊಂಡಿದ್ದರು.
ಸ್ಪಿಲ್ ವಿದ್ಯಾರ್ಥಿ ಬಳಗ: ಇದೇ ವೇಳೆ ಸ್ಪಿಲ್ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕೂಡ ಘಟನೆ ಖಂಡಿಸಿ ಪ್ರತಿಭಟಿಸಿದರು. ಇದೊಂದು ಹೇಯ ಕೃತ್ಯ. ಇಂಥ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು
ಎಂದು ಒತ್ತಾಯಿಸಿದರು.
ಪ್ರತಿಪರ ಸಂಘಟನೆಗಳ ಒಕ್ಕೂಟ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಗೌರಿ ಪತ್ರಕರ್ತೆಯಾಗಿ ಪ್ರಗತಿಪರ ಚಳವಳಿಗಳಲ್ಲಿ ಕ್ರಿಯರಾಗಿದ್ದರು. ಸಾಮಾಜಿಕ ಕಾರ್ಯಕರ್ತೆಯಾಗಿ ತೊಡಗಿದ್ದ ಗೌರಿ ಲಂಕೇಶ ಹತ್ಯೆ ಆಘಾತಕಾರಿ ಸಂಗತಿ. ಅವರು ಜಾತಿವಾದದ ವಿರುದ್ಧ ದಲಿತಪರ ಧ್ವನಿಯಾಗಿದ್ದರು. ಅವರ ಹತ್ಯೆಯನ್ನು ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ. ಈ ಹತ್ಯೆಯು ಪ್ರಜಾತಂತ್ರಕ್ಕೆ ಮಾರಕವಾಗಿದೆ. ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕು. ಸರ್ಕಾರ ಈ ಪ್ರಕರಣವನ್ನು ಭಯೋತ್ಪಾದಕ ಕೃತ್ಯವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಇಂಥ ಹೇಯ ಕೈತ್ಯಗಳನ್ನು ಮಾಡುವ ಶಕ್ತಿಗಳ ದಮನ ಮಾಡಲು ಜಂಟಿ ಸಂಸದರ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಮುಖಂಡರಾದ ಆರ್.ಮಾನಸಯ್ಯ, ಅಂಬಣ್ಣ ಆರೋಲಿ, ಜೆ.ಬಿ.ರಾಜು, ಡಾ| ವಿ.ಎ.ಮಾಲಿಪಾಟೀಲ, ಖಾಜಾ ಅಸ್ಲಂ ಅಹ್ಮದ್, ಎಂ.ಆರ್.ಬೇರಿ, ಸಿರಾಜ್ ಜಾಫ್ರಿ, ರವೀಂದ್ರ ಜಲ್ದಾರ್,
ಡಿ.ಎಸ್ ಶರಣಬಸವ, ಅಡವಿರಾವ್, ಹುಚ್ಚರೆಡ್ಡಿ, ಚನ್ನಬಸವ ಜಾನೇಕಲ್, ಕುಮಾರ ಸಮತಳ, ಸಯ್ಯದ್ ಹಪಿಜುಲ್ಲಾ, ಅಭಯ, ಈರಣ್ಣ ಬೆಂಗಾಲಿ, ಜಿ.ಅಮರೇಶ, ಮಸೂದ್ ಅಲಿ ಸೇರಿ ಇತರರು ಪಾಲ್ಗೊಂಡಿದ್ದರು.
ಬಹುಜನ ವಿದ್ಯಾರ್ಥಿ ಸಂಘ: ಪತ್ರಕರ್ತೆ ಗೌರಿ ಲಂಕೇಶ ಹತ್ಯೆಗೆ ನ್ಯಾಯ ದೊರಕಿಸಬೇಕು ಹಾಗೂ ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿನಿ ಅನಿತಾಳ ಸಾವಿಗೆ ಕಾರಣವಾದ ನೀಟ್ ಪರೀಕ್ಷೆ ರದ್ದುಪಡಿಸಬೇಕು ಆಗ್ರಹಿಸಿ ಬಹುಜನ ವಿದ್ಯಾರ್ಥಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ವಿಚಾರವಾದಿ ಹತ್ಯೆಗೈದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂಥ ಘಟನೆ
ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರಾದ್ಯಂತ ಒಂದೇ ದೇಶ ಒಂದೇ ತೆರಿಗೆ ಮಾದರಿಯಡಿ ಒಂದೇ ದೇಶ ಒಂದೇ ಶಿಕ್ಷಣ ನೀತಿ ಜಾರಿಗೊಳಿಸಬೇಕು. ರಾಜ್ಯ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾರಕವಾದ ಹಾಗೂ ಕೇಂದ್ರ ಪಠ್ಯಕ್ರಮದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲವಾಗುವಂಥ ಪ್ರವೇಶ ಪರೀಕ್ಷೆಗಳಾದ ನೀಟ್, ಎಐಇಇಇ, ಜೆಇಇ ಗಳಂಥ ಅವೈಜ್ಞಾನಿಕ ಪರೀಕ್ಷೆ ರದ್ದುಪಡಿಸಬೇಕು. ಮೊದಲಿನಂತೆ ಆಯಾ ರಾಜ್ಯಗಳೇ ಸಿಇಟಿ ಪರೀಕ್ಷಾ ವಿಧಾನದ ಮೂಲಕ ಸೀಟು ಹಂಚಿಕೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಧರ್ಮರಾಜ ಗೋನಾಳ, ಕಾರ್ಯದರ್ಶಿ ಸುರೇಶ ಮಾನ್ವಿ, ನರಸಪ್ಪ ಮನ್ಸಲಾಪುರ, ಶರಣಬಸವ,
ಮುಖಂಡರಾದ ವೆಂಕಟೇಶ ಬೇವಿನಬೆಂಚಿ ಇತರರಿದ್ದರು.
ಹಸಿರು ಸೇನೆ ಹಾಗೂ ರೈತ ಸಂಘ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು. ಗೌರಿ ಲಂಕೇಶರ ಹಂತಕರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದಿನ್ನಿ, ಜಯಪ್ಪ ಉಡುಗಲ್ ಸೇರಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.