ಭೂಮಿ ತೂಕದ ವ್ಯಕ್ತಿತ್ವ
Team Udayavani, Sep 8, 2017, 6:20 AM IST
ಯಶಸ್ಸು ಎನ್ನುವುದು ಅಮಲಿನಂತೆ. ಒಮ್ಮೆ ತಲೆಗೇರಿದರೆ ಈ ಅಮಲು ತನಗೆ ಬೇಕಾದಂತೆ ಕುಣಿಸುತ್ತದೆ. ಅದರಲ್ಲೂ ಚಿತ್ರರಂಗದಲ್ಲಿ ಯಶಸ್ಸಿನ ಅಮಲು ಏರುವುದೂ ಬೇಗ ಇಳಿಯುವುದೂ ಬೇಗ. ಒಂದೇ ಚಿತ್ರದ ಯಶಸ್ಸಿನಿಂದ ಬೀಗಿ ಬಳಿಕ ಮೂಲೆಗುಂಪಾದ ಅದೆಷ್ಟೋ ಮಂದಿಯನ್ನು ಈ ಮಾಯಾಲೋಕ ಕಂಡಿದೆ. ಅಂತೆಯೇ ಚಿತ್ರ ಸೂಪರ್‌ಹಿಟ್ ಆಗಿದ್ದರೂ ಒಂದು ಚೂರೂ ಬದಲಾಗದೆ ತಲೆಯನ್ನು ಭುಜದ ಮೇಲೆ ಇಟ್ಟುಕೊಂಡವರು ಇಲ್ಲಿ ಬಹುಕಾಲ ಬಾಳಿದ್ದಾರೆ. ಈ ವಿಚಾರ ಇಲ್ಲಿ ಪ್ರಸ್ತಾವವಾಗಲು ಕಾರಣ ಭೂಮಿ ಪೆಡ್ನೆಕರ್. ಬೆನ್ನುಬೆನ್ನಿಗೆ ಎರಡು ಹಿಟ್ ಚಿತ್ರಗಳನ್ನು ನೀಡಿರುವ ಭೂಮಿಗೆ ಈಗ ನಿಂತ ನೆಲ ಕಾಣುತ್ತಿಲ್ಲ. ಎಲ್ಲರನ್ನು ಅವಳು ಕೀಳಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎನ್ನುವುದು ಭೂಮಿ ಬಗ್ಗೆ ಕೇಳಿ ಬಂದಿರುವ ಆರೋಪ. ಯಶ್‌ರಾಜ ಫಿಲ್ಮ್ಸ್ನಲ್ಲಿ ಅಸಿಸ್ಟೆಂಟ್ ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದಾಗ ಭೂಮಿ ಗುಂಡುಗುಂಡಾಗಿ ಭೂಮಿಯಷ್ಟೇ ತೂಕವಾಗಿದ್ದಳು.
ಈ ಭಾರೀ ದೇಹವೇ ಅವಳಿಗೆ ದಮ್ ಲಗಾಕೇ ಐಸಾ ಚಿತ್ರದ ನಾಯಕಿಯಾಗುವ ಅವಕಾಶ ತಂದುಕೊಟ್ಟಿತು. ದಪ್ಪ ಹೆಂಡತಿ ಮತ್ತು ಪೀಚಲು ಗಂಡನ ಕತೆ ಹೊಂದಿದ್ದ ದಮ್ ಲಗಾಕೇ ಐಸಾ ಚಿತ್ರ ದೊಡ್ಡ ಮಟ್ಟದ ಹಿಟ್ ಎಂದೆನಿಸದಿದ್ದರೂ ಭೂಮಿ ಮಾತ್ರ ಗಮನ ಸೆಳೆಯುವಲ್ಲಿ ಯಶಸ್ವಿಯಾದಳು. ಮೊದಲೇ ಸಾಕಷ್ಟು ದಪ್ಪಗಿದ್ದ ಭೂಮಿ ಈ ಚಿತ್ರಕ್ಕಾಗಿ ಮತ್ತೆ 12 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಳಂತೆ. ಅನಂತರ ಬರೀ ಒಂದು ವರ್ಷದಲ್ಲಿ ಎಲ್ಲ ತೂಕ ಇಳಿಸಿಕೊಂಡು ಅಚ್ಚರಿಯುಂಟು ಮಾಡಿದ್ದ ಭೂಮಿ, “ತೂಕ ಕಳೆದುಕೊಳ್ಳುವುದು ಹೇಗೆ?’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡುವಷ್ಟು ಅನುಭವ ಸಂಪಾದಿಸಿಕೊಂಡಿದ್ದಾಳೆ.
ಟ್ರಿಮ್ ಆ್ಯಂಡ್ ಸ್ಲಿಮ್ ಆಗಿ ಬಂದ ಭೂಮಿಗೆ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಈ ಚಿತ್ರ ಹಿಟ್ ಆಗುತ್ತಿದ್ದಂತೆ ಶುಭ ಮಂಗಲ್ ಸಾವಧಾನ್ ಎನ್ನುವ ಚಿತ್ರ ಬಂತು. ಇದು ಕೂಡ ಹಿಟ್ ಆದ ಬಳಿಕ ಭೂಮಿಗೆ ಯಶಸ್ಸಿನ ಅಮಲು ತಲೆಗೇರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಭೂಮಿ ಇದನ್ನೆಲ್ಲ ನಿರಾಕರಿಸುತ್ತಿದ್ದಾಳೆ. ನನ್ನ ಯಶಸ್ಸು ನೋಡಿ ಹೊಟ್ಟೆಯುರಿಯುತ್ತಿರುವವರು ಹರಡುತ್ತಿರುವ ಸುಳ್ಳು ಸುದ್ದಿಗಳಿವು. ನಾನೂ ಹಿಂದಿನ ಭೂಮಿಯೇ ಆಗಿ ಉಳಿದಿದ್ದೇನೆ. ಈಗಲೂ ಸೆಟ್‌ನ ಹುಡುಗರ ಜತೆಗೆ ಊಟ ಹಂಚಿಕೊಂಡು ತಿನ್ನುವಷ್ಟು ಸರಳತೆ ನನ್ನಲ್ಲಿದೆ. ಆದರೆ ಯಾರಾದರೂ ಜೀವನದಲ್ಲಿ ಮೇಲೇರುತ್ತಿದ್ದರೆ ಸಹಿಸದ ಕೆಲ ಮಂದಿ ಉದ್ದೇಶಪೂರ್ವಕವಾಗಿ ನನ್ನ ಬಗ್ಗೆ ಕೆಟ್ಟ ವದಂತಿ ಹರಡುತ್ತಿದ್ದಾರೆ ಎನ್ನುವುದು ಭೂಮಿಯ ಸಮಜಾಯಿಷಿ.