ಗುರು ಪರಂಪರೆಗೆ ಕುಠಾರಾಘಾತ ಮಾಡುತ್ತಿರುವ ಕಪಟಿಗಳು
Team Udayavani, Sep 8, 2017, 9:03 AM IST
ಬಸವಣ್ಣ, ಬುದ್ಧ, ಶಂಕರಾಚಾರ್ಯರಂತಹ ಮಹಾನ್ ಆಧ್ಯಾತ್ಮಿಕ ಚೇತನಗಳನ್ನು ಸಕಲ ಭೋಗ- ಭಾಗ್ಯಗಳಲ್ಲಿ ಮುಳುಗೇಳುತ್ತಿರುವ ನಮ್ಮ ಇಂದಿನ ಸ್ವಯಂಘೋಷಿತ ದೇವಮಾನವರಲ್ಲಿ ಅರಸುವುದು ನಿರರ್ಥಕ. ಇಂಥಹ ಕಪಟಿ ದೇವಮಾನವರ ಅಂಧಾನುಕರಣೆ ಘಾತಕ ಮತ್ತು ವ್ಯರ್ಥ.
ಗುರು ದ್ರೋಣಾಚಾರ್ಯರ ಇಚ್ಛೆಯಂತೆ ಏಕಲವ್ಯ ಗುರುದಕ್ಷಿಣೆಯ ರೂಪದಲ್ಲಿ ತನ್ನ ಹೆಬ್ಬೆಟ್ಟನ್ನೇ ಅರ್ಪಿಸಿದ. ಪರಶುರಾಮರ ನಿದ್ರಾಭಂಗವಾಗದಿರಲೆಂದು ದುಂಬಿಯ ಕಡಿತದಿಂದ ತನ್ನ ದೇಹದಿಂದ ಹರಿಯುತ್ತಿದ್ದ ನೆತ್ತರನ್ನು ಲೆಕ್ಕಿಸದೇ ಅಸಾಧ್ಯ ನೋವನ್ನು ಸಹಿಸಿಕೊಂಡ ಕರ್ಣನ ಗುರುಭಕ್ತಿಯ ಕುರಿತು ಕೇಳಿರಬಹುದು. ಭವ್ಯ ಗುರು ಪರಂಪರೆಯ ಚಿತ್ರಣ ನೀಡುವ ಅನೇಕ ದೃಷ್ಟಾಂತಗಳು ನಮ್ಮ ಪುರಾಣಗಳಲ್ಲಿ ಧಾರಾಳವಾಗಿ ದೊರೆಯುತ್ತದೆ. ಗುರು-ಹಿರಿಯರನ್ನು ಪ್ರೀತ್ಯಾದರಗಳಿಂದ ಕಾಣುವ ಸಂಸ್ಕಾರ ಭಾರತೀಯ ಜೀವನ ಪದ್ಧತಿಯ ಅಭಿನ್ನ ಅಂಗವಾಗಿದೆ. ಸಹಸ್ರಾರು ವರ್ಷಗಳಿಂದ ಅಳವಡಿಸಿಕೊಂಡು ಬಂದ ನಮ್ಮ ಜೀವನಮೌಲ್ಯಗಳು ಆಧುನಿಕ ಭೋಗ ಜೀವನ ಪ್ರಭಾವದಲ್ಲಿ ಕೊಚ್ಚಿ ಹೋಗುತ್ತಿದೆ ಎನ್ನುವ ಮಾತು ಆಗಾಗ್ಗೆ ಕೇಳಿ ಬರುತ್ತಿದೆ. ಗುರುವಿನ ಯೋಗ್ಯತೆಯನ್ನು ಅರಿಯದೇ, ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎನ್ನುವ ದಾಸೋಕ್ತಿಯನ್ನು ಕೊಂಚ ಅತಿಯಾಗಿಯೇ ನಾವು ಅನುಸರಿಸಲು ಹೊರಟಿದ್ದೇವೆ. ಯೋಗ್ಯ ಗುರುವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿ ಎಡವಟ್ಟು ಮಾಡಿಕೊಳ್ಳುತ್ತಿದ್ದೇವೆ.
ವಿಲಾಸಿ ಜೀವನ
ಗುರ್ಮಿತ್ ಸಿಂಗ್ ರಾಮ್ ರಹೀಮ್ ನಿಶ್ಚಿತವಾಗಿಯೂ ನಮ್ಮ ಗುರುಪರಂಪರೆಗೆ ಮಸಿ ಬಳಿದಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ಅವನಂತೆಯೇ ಅನೇಕ ಪ್ರಸಿದ್ಧ ಸಾಧು-ಸಂತ-ಸನ್ಯಾಸಿ ಗಳು ಅಮಾಯಕ ಶಿಷ್ಯರನ್ನು ವಂಚಿಸಿದ, ವಿಶ್ವಾಸಾಘಾತ ಮಾಡಿದ ಘಟನೆಗಳು ಬೆಳಕಿಗೆ ಬಂದಿವೆ. ಕ್ಷಿಪ್ರಗತಿಯಲ್ಲಿ ಅವರು ಗಳಿಸಿದ ಮಾನ – ಸಮ್ಮಾನಗಳು ಮಣ್ಣುಗೂಡಿದ ಅನೇಕ ಘಟನೆಗಳು ನಮ್ಮ ಮುಂದಿವೆ. ಅಗಣಿತ ಅಭಿಮಾನ ಬಳಗ, ಅಪರಿಮಿತ ಸಂಪತ್ತು, ಹೈ-ಟೆಕ್ ಆಶ್ರಮಗಳಲ್ಲಿ ರಾಜಭೋಗಾದಿ ವಿಲಾಸಮಯ ಜೀವನ ಯಾಪನೆ ಮಾಡುತ್ತಿದ್ದವರ ಜನಪ್ರಿಯತೆ ಎಷ್ಟು ಬೇಗ ಉತ್ತುಂಗಕ್ಕೇರಿತ್ತೋ ಅಷ್ಟೇ ಶೀಘ್ರದಲ್ಲಿ ಧರಾಶಾಯಿಯಾದ ಉದಾಹರಣೆಗಳು ನಮ್ಮ ಸುತ್ತ- ಮುತ್ತ ನಡೆದಿವೆ. ಸರಳ ಜೀವನ ನಡೆಸಿ ಸಮಾಜಕ್ಕೆ ದಾರಿ ದೀವಿಗೆಯಾಗಿದ್ದ ನೂರಾರು ಮಹಾನ್ ದಾರ್ಶನಿಕ ಸಂತರ, ಸಾವಿರಾರು ವರ್ಷಗಳ ಗುರು ಪರಂಪರೆಯ ನಾಡಿನಲ್ಲಿ ವರ್ತ ಮಾನದಲ್ಲಿ ನಡೆದ ಘಟನೆಗಳಿಂದ ಸಂತ ಸಮುದಾಯವನ್ನು ಗೌರವಾದರದಿಂದ ನೋಡುವವರ ಮನಸ್ಸು ಘಾಸಿಗೊಂಡಿದೆ.
ಧಾರ್ಮಿಕ ನಂಬಿಕೆ, ಚಿತ್ತ-ಶಾಂತಿ, ಸ್ವಾಸ್ಥ್ಯ ಕಾಮನೆ ಇತ್ಯಾದಿ ಕಾರಣಗಳಿಂದಾಗಿ ಜನರು ಅಧ್ಯಾತ್ಮಿಕ ನಾಯಕರತ್ತ ಆಕರ್ಷಿತರಾಗುತ್ತಾರೆ. ದೈನಂದಿನ ಬದುಕಿನ ಕಷ್ಟ-ಕಾರ್ಪಣ್ಯಗಳು, ನೋವುಂಡವರು, ಪಾರಮಾರ್ಥಿಕ ಸುಖವನ್ನರಸುವವರು ಸಾಧು-ಸಂತ,ಸನ್ಯಾಸಿಗಳ ಮೊರೆ ಹೊಗುವುದು ನಮ್ಮಲ್ಲಿ ಅನೂಚಾನವಾಗಿ ಬೆಳೆದು ಬಂದ ಪರಂಪರೆಯಾಗಿದೆ. ಜನ ಸಾಮಾನ್ಯರಲ್ಲಿ ನಿಹಿತವಾದ ಈ ಬಲವಾದ ಭಾವನೆಗಳನ್ನು ಬಳಸಿಕೊಂಡು ವೃತ್ತಿಯಲ್ಲಿ ಅಸಫಲರಾದ ಶಿಕ್ಷಿತರು, ಎಲ್ಲಿಯೂ ಸಲ್ಲದವರು, ಸಾಧು- ಸಂತ ಢೋಂಗಿ ಸನ್ಯಾಸಿಗಳ ವೇಷದಲ್ಲಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ದೊಡ್ಡ ದೊಡ್ಡ ಅಶ್ರಮವೆಂಬ ಸಾಮ್ರಾಜ್ಯ ಕಟ್ಟಿಕೊಂಡು ದೇಶದ ಕಾನೂನು, ನ್ಯಾಯಾಲಯಗಳಿಗೆ ಸಡ್ಡು ಹೊಡೆಯುವಷ್ಟು ದಾಷ್ಟ ತೋರುತ್ತಿರುವುದು ವಾಸ್ತವವಾಗಿ ಚಿಂತೆಯ ವಿಷಯ. ಎಲ್ಲಿಯವರೆಗೆ ಜನರು ಇಂತಹ ಕಪಟವನ್ನು ಅರಿತುಕೊಳ್ಳುವುದಿಲ್ಲವೋ ಜನರಿಂದ ಚುನಾಯಿತ ಸರಕಾರಗಳು ಭಕ್ತಗಣದ ಧಾರ್ಮಿಕ ಭಾವನೆಗಳಿಗೆ ನೋವಾಗ ಬಾರದೆಂಬ ಕಾರಣದಿಂದ ಅಸಹಾಯವಾಗಿ ಬಿಡುತ್ತವೆ.
ಬೆಂಬಲಿಗರ ಪುಂಡಾಟ
ಜನ ಸಾಮಾನ್ಯರ ಧಾರ್ಮಿಕ ಭಾವನೆ, ನಂಬಿಕೆಗಳನ್ನು ತಮ್ಮ ಬಂಡವಾಳವಾಗಿಸಿಕೊಂಡು ಪ್ರವಚನ, “ಚಿಕಿತ್ಸೆ’ ನೀಡುವ ಮುಖವಾಡಧಾರಿಗಳಿಂದ ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿದೆ. ವಿರೋಧಿಸುವವರನ್ನು ಗುರಿಯಾಗಿಸಿಕೊಂಡು ಬಗ್ಗುಬಡಿಯುವಷ್ಟು ಇವರ ಪ್ರಭಾವವಿರುತ್ತದೆ. ಶ್ರದ್ಧಾ ಭಕ್ತಿಯ ಹೊಳೆಯಲ್ಲಿ ಮಿಂದು, ಕೈ ಮುಗಿದು, ಶಿರ ಬಾಗಿ ನಿಂತ ಭಕ್ತರನ್ನು ಕಂಡು ಹರುಷದಿಂದ ಬೀಗಿ ಉದ್ಧರಿಸುವ, ಆಶೀರ್ವದಿಸುವ ದೇವ ಮಾನವರ ಅಪಾರ ಅಭಿಮಾನ ಸಮೂಹ ಮತ್ತು ಅವರ ಪುಂಡಾಟದ ಬೆಂಬಲಿಗರ ಎದುರು ಕೆಲವೊಮ್ಮೆ ನಮ್ಮ ಸಂಪೂರ್ಣ ವ್ಯವಸ್ಥೆಯೇ ಅಸಹಾಯವಾಗಿ ಕಂಡು ಬರುತ್ತದೆ. ಇಂತಹ ದೇವ ಮಾನವರಿಗೆ ಕಡಿವಾಣ ಹಾಕುವುದು ನಮ್ಮ ಸರಕಾರಕ್ಕೂ ಕಷ್ಟಸಾಧ್ಯವಾಗುತ್ತದೆ. ಈ ನಂಬಿಕೆಯೇ ರಾಮ್‌ಪಾಲ್, ಬಿಂದ್ರನ್ ವಾಲೆ, ಹಫೀದ್ ಸೈಯೀದ್‌ನಂಥವರಿಗೆ ಶಸ್ತ್ರಾಸ್ತ್ರ ಸಂಗ್ರಹಿಸಿ ಸರಕಾರಗಳನ್ನೇ ಎದುರಿಸುವಷ್ಟು ಹುಂಬ ಧೈರ್ಯ ಕೊಡುತ್ತದೆ.
ನಮ್ಮ ವ್ಯವಸ್ಥೆಯಲ್ಲಿ ಧಾರ್ಮಿಕ ನಾಯಕರುಗಳಿಗೆ ತಮ್ಮ (ಅ)ವ್ಯವಹಾರಗಳನ್ನು ಅವ್ಯಾಹತವಾಗಿ ನಡೆಸಿಕೊಂಡು ಹೋಗುವ ಪೊಗದಸ್ತಾದ ವಾತಾವರಣವನ್ನು ನಾವೇ ಒದಗಿಸುತ್ತಿದ್ದೇವೆ ಎನ್ನದೇ ವಿಧಿಯಿಲ್ಲ. ಇಂತಹ ವ್ಯಕ್ತಿಗಳ ಕೃಪಾ ಕಟಾಕ್ಷದಲ್ಲಿ ಕೃತಾರ್ಥರಾಗುತ್ತಿರುವ ರಾಜಕಾರಣಿಗಳು, ಅಧಿಕಾರಿಗಳು ಕೂಡ ಕಡಿಮೆಯಿಲ್ಲ. ಕಪಟಿ (ದೇವ) ಮಾನವರ ನಂಬಿಕೆ ದ್ರೋಹದ ಉದಾಹರಣೆಗಳಿಂದ ಮತ್ತು ಅವರುಗಳ ಎಡವಟ್ಟುಗಳಿಂದ ನಮ್ಮ ಸಮಾಜ ಬುದ್ಧಿ ಕಲಿಯಬೇಕಾಗಿದೆ. ಸಾಮಾನ್ಯ ಮಾನವರಂತೆ ಪ್ರಾಪಂಚಿಕ ಸುಖ ಭೋಗದ ಎಲ್ಲ ವಸ್ತು ಮತ್ತು ವ್ಯವಸ್ಥೆಯ ಮಧ್ಯೆ ಇರುವ ಮತ್ತು ಇವುಗಳ ಮೋಹಕ್ಕೊಳಪಟ್ಟಿರುವವರನ್ನು, ಸಕಲ ಭೋಗ-ಭಾಗ್ಯಗಳನ್ನು ತೊರೆದು ಲೋಕಕಲ್ಯಾಣದ ಕಾಮನೆ ಹೊಂದಿದ ಯತಿಗಳಂತೆ ಕಾಣುವುದು ಎಷ್ಟಕ್ಕೂ ಸರಿಯಲ್ಲ. ಇಂತಹ ಮಾನವರನ್ನು ದೈವತ್ವಕ್ಕೇರಿಸುವ ಅಥವಾ ದೇವರಂತೆ ಪೂಜಿಸುವುದು ಮೌಡ್ಯವಲ್ಲದೇ ಮತ್ತೇನಲ್ಲ. ಇವರನ್ನು ಪಾಪ ವಿಮೋಚಕರಾಗಿಯೂ, ಉದ್ಧಾರಕರಾಗಿಯೂ ಕಾಣುವ ಬದಲು ಕಪಟಿ ಮಾನವರಂತೆ ತಿಳಿಯುವ ಯಥಾರ್ಥತೆ ಹಾಗೂ ವಿವೇಚನೆ ಬೆಳೆಸಿಕೊಳ್ಳಬೇಕಾಗಿದೆ.
ದಿಟ್ಟರಾಗೋಣ, ಎಡವದಿರೋಣ
ವಿವೇಕಾನಂದ, ರಾಮಕೃಷ್ಣ, ಕಬೀರ್, ತುಕಾರಾಮ…, ಮೀರಾಬಾಯಿ, ಕನಕ, ಪುರಂದರ ದಾಸವರೇಣ್ಯರಂತಹವರು ಆದರ್ಶಪೂರ್ವಕವಾಗಿ ಬದುಕಿದ ನಾಡಿನಲ್ಲಿ ಯತಿಗಳ ಅಚ್ಚಳಿಯದ ಪ್ರಭಾವ ಸ್ವಾಭಾವಿಕ. ಶಂಕರ, ರಾಮಾನುಜ, ಮಧ್ವಾಚಾರ್ಯರಂತಹ ಮಹಾನ್ ಚೇತನಗಳ ಸ್ಫೂರ್ತಿ
ಮತ್ತು ಪ್ರಭಾವ ನಮ್ಮ ಸಮಾಜದಲ್ಲಿ ಇನ್ನೂ ಹಚ್ಚಹಸಿರಾಗಿದೆ. ಅದ್ದರಿಂದ ಜನಸಾಮಾನ್ಯರು ಪ್ರಾಯಃ ಇಂದಿಗೂ ಅಂತಹ ವ್ಯಕ್ತಿತ್ವವನ್ನು ಸಮಕಾಲೀನ ಜಗತ್ತಿನ ಅಧ್ಯಾತ್ಮಿಕ ಗುರುಗಳಲ್ಲಿ ಅನ್ವೇಷಿಸುತ್ತಿ¨ªಾರೆ. ವಿಪರ್ಯಾಸವೇನೆಂದರೆ ಮಹಾನ್ ಸಂತರ ಪರಂಪರೆಯನ್ನು ಅನುಸರಿಸುತ್ತಿರುವ ಸೋಗು ಹಾಕಿ ಕೊಂಡು ವಂಚಿಸುತ್ತಿರುವ ವಂಚಕರನ್ನು ಗುರುತಿಸುವು ದರಲ್ಲಿ ನಾವು ವಿಫಲರಾಗುತ್ತಿದ್ದೇವೆ. ಈ ಕಪಟಿಗಳು ಒಂದೆಡೆ ಜನರ ನಂಬಿಕೆಗೆ ದ್ರೋಹ ಎಸಗುತ್ತಿದ್ದರೆ ಇನ್ನೊಂದೆಡೆ ಸನಾತನ ಧರ್ಮಕ್ಕೆ ಕುಠಾರಾಘಾತ ಮಾಡುತ್ತಿ¨ªಾರೆ ಎನ್ನುವುದು ವಿಷಾದಕರ. ಇಂತಹ ಕಪಟಿ (ದೇವ) ಮಾನವರ ಅಂಧಾನು ಕರಣೆ ಸರಿಯಲ್ಲ.
ಬಸವಣ್ಣ, ಬುದ್ಧ, ಶಂಕರಾಚಾರ್ಯರಂತಹ ಮಹಾನ್ ಆಧ್ಯಾತ್ಮಿಕ ಚೇತನಗಳನ್ನು, ಸಕಲ ಭೋಗ-ಭಾಗ್ಯಗಳಲ್ಲಿ ಮುಳುಗೇಳುತ್ತಿರುವ ನಮ್ಮ ಇಂದಿನ ಸ್ವಯಂಘೋಷಿತ ದೇವಮಾನವರಲ್ಲಿ ಅರಸುವುದು ನಿರರ್ಥಕ. ಇಂಥ ಕಪಟಿ ದೇವಮಾನವರ ಅಂಧಾನುಕರಣೆ ಘಾತಕ ಮತ್ತು ವ್ಯರ್ಥ. ಇದರಿಂದ ನಮ್ಮ ಸಮಾಜ ಅಧಃಪತನದತ್ತ ಸಾಗುವುದರಲ್ಲಿ ಸಂಶಯವಿಲ್ಲ. ದಯೆ, ಕರುಣೆ, ಮಾನವೀಯತೆ, ಭಾÅತೃತ್ವಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂಬ ಬಸವಣ್ಣನವರ ನುಡಿ ನಾವೆಲ್ಲ ಅರಿತುಕೊಳ್ಳ ಬೇಕಾಗಿದೆ. ಖ್ಯಾತ ಸಾಹಿತಿ ಶಿವರಾಮ ಕಾರಂತರೆಂದಂತೆ “ಸೋಹಂ ಬ್ರಹ್ಮ’ ಅರ್ಥಾತ್ ನಾನೇ ಬ್ರಹ್ಮ, ನನ್ನಲ್ಲೂ ಬ್ರಹ್ಮ ಇ¨ªಾನೆ ಎನ್ನುವ ದಿಟ್ಟತನ ನಮ್ಮಲ್ಲಿ ಬೆಳೆದಾಗ ಕಪಟಿ (ದೇವ) ಮಾನವರು ತಾವಾಗಿಯೇ ಅಪ್ರಾಸಂಗಿಕರಾಗಿ ಬಿಡುವರು.
ದೀನ-ದುಃಖೀಗಳ, ವೃದ್ದರ, ತಂದೆ-ತಾಯಿಯರ ಸೇವೆಯೇ ದೇವರ ಪೂಜೆ, ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎನ್ನುವ ತತ್ವವನ್ನು ಒಪ್ಪಿಕೊಂಡು ನಡೆವುದೇ ನಮ್ಮ ಧ್ಯೇಯ ವಾಗಲಿ. “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ; ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲುಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮ ದೇವನೊಲಿಸುವ ಪರಿ’ ಎನ್ನುವ ವಚನದಂತೆ ನಡೆದರೆ ಇಹ- ಪರ ಗಳೆರಡರಲ್ಲೂ ಒಳಿತಾಗುವುದರಲ್ಲಿ ಸಂಶಯವಿಲ್ಲ.
ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.