ಪ್ರತಿಯೊಂದು ಪಕ್ಷದಲ್ಲೂ ಇದ್ದಾರೆ ಕುಬೇರರು ರಾಜಕೀಯವೆಂಬ ಲಾಭದ ವ್ಯಾಪಾರ
Team Udayavani, Sep 8, 2017, 9:44 AM IST
ಆಸ್ತಿ ಸಂಪಾದಿಸುವುದರಲ್ಲಿ ರಾಜಕೀಯದವರಿಗೆ ಪಕ್ಷಬೇಧವಿಲ್ಲ. ಪ್ರತಿಯೊಂದು ಪಕ್ಷದಲ್ಲೂ ಕುಬೇರರಿದ್ದಾರೆ.
ಭಾರತದಲ್ಲಿ ರಾಜಕೀಯಕ್ಕಿಂತ ಲಾಭದಾಯಕ ಉದ್ಯೋಗ ಬೇರೊಂದಿಲ್ಲ ಎನ್ನುವುದಕ್ಕೆ ಚುನಾವಣೆಯಿಂದ ಚುನಾವಣೆಗೆ ಸಚಿವರ, ಶಾಸಕರ, ಸಂಸದರ ಆಸ್ತಿ ಪ್ರಮಾಣದಲ್ಲಿ ಆಗುತ್ತಿರುವ ಹೆಚ್ಚಳವೇ ಸಾಕ್ಷಿ. ಆದಾಯ ಶೇ.100 ಅಥವಾ ಶೇ. 200 ಹೆಚ್ಚಳವಾಗುವುದನ್ನು ಊಹಿಸಬಹುದೇನೋ, ಆದರೆ ಶೇ. 44,000 ಹೆಚ್ಚಳ ಯಾವ ಕ್ಷೇತ್ರದಲ್ಲಾದರೂ ಸಾಧ್ಯವೇ? ಇತ್ತೀಚೆಗೆ ಪ್ರಕಟವಾಗಿರುವ ವರದಿಯೊಂದು ಸಚಿವರು, ಸಂಸದರು ಮತ್ತು ಶಾಸಕರ ಆಸ್ತಿ ಯಾವ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ. 2008ರಲ್ಲಿ ಜುಜುಬಿ 5631 ರೂ. ಆಸ್ತಿ ಘೋಷಿಸಿದ್ದ ಕೇರಳದ ಚೆಂಗನ್ನೂರಿನ ಕಾಂಗ್ರೆಸ್ ಶಾಸಕ ವಿಷ್ಣುನಾಥ್ ಅವರ ಆಸ್ತಿ 2013ರಲ್ಲಿ 25 ಲ. ರೂ.ಗೇರಿತ್ತು. ಅಂದರೆ ಶೇ.44,325 ಹೆಚ್ಚಳ. ರಾಜಕಾರಣಿಗಳು ಕೋಟಿಗಳ ಲೆಕ್ಕದಲ್ಲಿ ತೂಗುವ ಇಂದಿನ ರಾಜಕೀಯದಲ್ಲಿ ವಿಷ್ಣುನಾಥ್ ಹೊಂದಿರುವ ಆಸ್ತಿಯ ಪ್ರಮಾಣ ಚಿಕ್ಕದೇ ಆಗಿದ್ದರೂ ಇಷ್ಟು ಆಸ್ತಿಯನ್ನು ಅವರು ಬರೀ ಐದು ವರ್ಷದಲ್ಲಿ ಸಂಪಾದಿಸಿದ್ದಾರೆ ಎನ್ನುವುದು ಗಮನಾರ್ಹ ಅಂಶ. ಆಸ್ತಿ ಸಂಪಾದಿಸುವುದರಲ್ಲಿ ರಾಜಕೀಯದವರಿಗೆ ಪಕ್ಷಬೇಧವಿಲ್ಲ. ಪ್ರತಿ ಪಕ್ಷದಲ್ಲೂ ಕುಬೇರರಿದ್ದಾರೆ. ತಮಿಳುನಾಡಿನಿಂದ ಹಿಡಿದು ಈಶಾನ್ಯದ ಅರುಣಾಚಲ ಪ್ರದೇಶದ ತನಕ ಯಾವ ರಾಜ್ಯಕ್ಕೆ ಹೋದರೂ ಆಸ್ತಿವಂತ ನಾಯಕರು ಸಿಗುತ್ತಾರೆ. ಅರುಣಾಚಲದ ಶಾಸಕ ಕರ್ಯ ಬಗಂಗ್ ಅವರ ಆಸ್ತಿ ಐದು ವರ್ಷದಲ್ಲಿ ಶೇ. 35,736ರಷ್ಟು ಹೆಚ್ಚಾಗಿತ್ತು. ಜಮ್ಮು-ಕಾಶ್ಮೀರದ ಶಾಸಕ ಮೊಹಮ್ಮದ್ ಖಲೀಲ್ ಬಂಧ್ ಐದೇ ವರ್ಷದಲ್ಲಿ ಶೇ. 9564 ಹೆಚ್ಚುವರಿ ಸಂಪತ್ತಿನ ಒಡೆಯರಾಗಿದ್ದಾರೆ. ಈ ಪಟ್ಟಿಗೆ ಸೋನಿಯಾ ಗಾಂಧಿ, ಮುಲಾಯಂ ಸಿಂಗ್, ಮಾಯಾವತಿ, ವರುಣ್ ಗಾಂಧಿ, ಅನಂತ್ ಗೀತೆ, ಅಸಾದುದ್ದೀನ್ ಓವೈಸಿ, ಅಮಿತ್ ಶಾ, ಕಮಲೇಶ್ ಪಾಸ್ವಾನ್, ಮೊಹಮ್ಮದ್ ಬಶೀರ್ ಮುಂತಾದವರು ಸೇರುತ್ತಾರೆ. ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ಸ್ì ಸಂಸ್ಥೆ ಸಂಗ್ರಹಿಸಿದ ದತ್ತಾಂಶಗಳ ಪ್ರಕಾರ 100 ಶ್ರೀಮಂತ ಜನಪ್ರತಿನಿಧಿಗಳ ಆಸ್ತಿ 5 ವರ್ಷದಲ್ಲಿ ಸರಾಸರಿ ಶೇ. 745 ಹೆಚ್ಚಾಗಿತ್ತು.
ಪ್ರತಿ ಚುನಾವಣೆ ಸಂದರ್ಭದಲ್ಲಿ ಅವರು ಆಸ್ತಿ ವಿವರ ಘೋಷಿಸುತ್ತಾರೆ. ಐದು ವರ್ಷಗಳ ಅಂಕಿಅಂಶಗಳನ್ನು ಹೋಲಿಸಿ ಯಾರ ಆಸ್ತಿ ಎಷ್ಟು ಹೆಚ್ಚಾಗಿದೆ ಎಂಬ ಕುರಿತು ಭಾರೀ ಚರ್ಚೆ ನಡೆಸುವ ಕರ್ತವ್ಯವನ್ನು ಮಾಧ್ಯಮಗಳು ತಪ್ಪದೆ ಮಾಡುತ್ತವೆ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಆದಾಯ ಹೇಗೆ ಬಂತು ಎಂಬ ಆಶ್ಚರ್ಯ ವ್ಯಕ್ತವಾಗುತ್ತದೆ. ಆದರೆ ಯಾರೂ ಆಸ್ತಿಯ ಮೂಲವನ್ನು ಕೆದಕುವ ಗೋಜಿಗೆ ಹೋಗುವುದಿಲ್ಲ. ನಮ್ಮ ಜನಪ್ರತಿನಿಧಿಗಳಿಗೆ ಭಾರೀ ಎನ್ನುವಂತಹ ಸಂಬಳವೇನೂ ಇಲ್ಲ. ಅಮೆರಿಕ, ಆಸ್ಟ್ರೇಲಿಯಾದಂಥ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ರಾಷ್ಟ್ರಪತಿ, ಪ್ರಧಾನಿ, ಸಚಿವರು, ಸಂಸದರಿಗೆ ಸಿಗುವ ಆದಾಯ ಕಡಿಮೆಯೆಂದೇ ಹೇಳಬಹುದು. ಅವರ ಸಂಬಳ ಮತ್ತು ಅವರು ಘೋಷಿಸುವ ಆಸ್ತಿಗೆ ತಾಳಮೇಳವಾಗುವುದಿಲ್ಲ. ರಾಜಕಾರಣಿಗಳ ಆಸ್ತಿ ಮೂಲಗಳನ್ನು ಪತ್ತೆಹಚ್ಚಲು ಆದಾಯ ಕರ ಇಲಾಖೆ, ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳಿಗೂ ವಿವೇಷ ಆಸಕ್ತಿ ಇಲ್ಲವೆಂದೆನಿಸುತ್ತಿದೆ. ಬಹುತೇಕ ಬಾರಿ ಎದುರಾಳಿಗಳ ಹಣಿಯಲು ಈ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆಯೇ ಹೊರತು ಅಕ್ರಮ ಆಸ್ತಿಯನ್ನು ಬಯಲಿಗೆಳೆಯುವುದಕ್ಕಲ್ಲ. ದಾಳಿಯಾದ ಬಳಿಕ ಎಷ್ಟು ಆಸ್ತಿ ಪತ್ತೆಯಾಗಿದೆ, ಅದರಲ್ಲಿ ಅಕ್ರಮ, ಸಕ್ರಮ ಎಷ್ಟು ಎಂಬಿತ್ಯಾದಿ ಮಾಹಿತಿ ಸಿಗುವುದೇ ಇಲ್ಲ. ಅಧಿಕಾರದಲ್ಲಿರುವವರು ಅಕ್ರಮ ಆಸ್ತಿ ಸಂಪಾದಿಸುವುದನ್ನು ತಡೆಯಲು ಅವರು ಅಧಿಕಾರ ಸ್ವೀಕರಿಸುವಾಗ ಮತ್ತು ನಿರ್ಗಮಿಸುವಾಗ ಹೊಂದಿರುವ ಆಸ್ತಿ ಮೌಲ್ಯವನ್ನು ಘೋಷಿಸಬೇಕೆಂಬ ಕಾನೂನು ಮಾಡಲು ಬೇಡಿಕೆಯಿದೆ. ಆದರೆ ಇದರಿಂದ ಹೆಚ್ಚಿನ ಪರಿಣಾಮವಾಗುಬಹುದು ಎಂದು ನಿರೀಕ್ಷಿಸುವಂತಿಲ್ಲ. ಚುನಾವಣೆಗೆ ಸ್ಪರ್ಧಿಸುವ ಸಂದರ್ಭ ಆಸ್ತಿ ಘೋಷಿಸುವ ಕ್ರಮ ಒಂದು ಔಪಚಾರಿಕ ವಿಧಿಯಾಗಿ ಮಾತ್ರ ಉಳಿದಿದೆ. ಇನ್ನು ಅಧಿಕಾರಕ್ಕೇರುವಾಗ ಮತ್ತು ನಿರ್ಗಮಿಸುವಾಗ ಪ್ರಾಮಾಣಿಕವಾಗಿ ಆಸ್ತಿ ವಿವರ ಘೋಷಿಸುತ್ತಾರೆ ಎಂದು ನಿರೀಕ್ಷಿಸುವುದು ಸೇಗೆ? ಸುಪ್ರೀಂ ಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರಾಜಕೀಯ ನೇತಾರರ ಸಂಪತ್ತನ್ನು ನಿಯಂತ್ರಿಸಲು ಮುಂದಾಗಿರುವುದು ಜನರಲ್ಲಿ ತುಸು ನಂಬಿಕೆ ಹುಟ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.