ರಾಧಾ-ರಾಜ ವಿನೋದ ಹಾಸ!
Team Udayavani, Sep 8, 2017, 12:57 PM IST
“ಇವರು ನಿರ್ಮಾಪಕರ ನಟ …’
ಹೀಗೆಂದರು ನಿರ್ಮಾಪಕ ಎಚ್.ಎಲ್.ಎನ್ ರಾಜ್. ಪಕ್ಕದಲ್ಲಿದ್ದ ವಿಜಯ್ ರಾಘವೇಂದ್ರ ಮುಖದಲ್ಲಿ ಮಂದಹಾಸ. ನಿರ್ಮಾಪಕ ಎಚ್.ಎಲ್.ಎನ್ ರಾಜ್ ಈ ತರಹ ಹೇಳಲು ಕಾರಣ, “ರಾಜ ಲವ್ಸ್ ರಾಧೆ’. ಇದು ವಿಜಯ್ ರಾಘವೇಂದ್ರ ಅವರ ಹೊಸ ಚಿತ್ರ. ವಿಜಯ್ ರಾಘವೇಂದ್ರ ಸದ್ದಿಲ್ಲದೇ ಈ ಸಿನಿಮಾ ಮಾಡಿ ಮುಗಿಸಿದ್ದಾರೆ. ಮುಗಿಸಿರೋದಷ್ಟೇ ಅಲ್ಲ, ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿದೆ. ಇಡೀ ಚಿತ್ರೀಕರಣ ಪ್ರಕ್ರಿಯೆಯಲ್ಲಿ ವಿಜಯ್ ಅವರು ನಡೆದುಕೊಂಡಿರುವ ರೀತಿ ಕಂಡು ಖುಷಿಯಾದ ಅವರು, “ವಿಜಯ್ ರಾಘವೇಂದ್ರ ಅವರು ನಿರ್ಮಾಪಕರ ನಟ. ಅವರಿಗೆ ಮತ್ತಷ್ಟು ಯಶಸ್ಸು ಸಿಗಬೇಕು. ನಮ್ಮ ಚಿತ್ರದಲ್ಲಿ ಅವರು ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅವರ ಕಾಮಿಡಿ ಸೆನ್ಸ್ ನನಗೆ ತುಂಬಾ ಇಷ್ಟವಾಯಿತು. ಅಷ್ಟೇ ಚೆನ್ನಾಗಿ ಡ್ಯಾನ್ಸ್ ಕೂಡಾ ಮಾಡಿದ್ದಾರೆ’ ಎಂದರು ರಾಜ್.
ಎಚ್.ಎಲ್.ಎನ್ ಈ ಹಿಂದೆ “ಕೋಟಿಗೊಂದು ಲವ್‌ಸ್ಟೋರಿ’ ಎಂಬ ಸಿನಿಮಾ ಮಾಡಿದ್ದರು. “ಆ ಸಿನಿಮಾದಿಂದ ಆದ “ಅನುಭವ’ದಿಂದಾಗಿ ಮುಂದೆ ಸಿನಿಮಾ ಮಾಡಬಾರದು, ಮಾಡಿದರೂ ತುಂಬಾ ಎಚ್ಚರಿಕೆಯಿಂದ ಮಾಡಬೇಕೆಂದು ನಿರ್ಧರಿಸಿದ್ದೆ. ಇವತ್ತು ನಾನು ಈ ಸಿನಿಮಾ ಮಾಡಲು
ಕಾರಣ ಚಿತ್ರದ ಸಂಭಾಷಣೆಕಾರ ವಿಜಯ್ ಭರಮಸಾಗರ ಹಾಗೂ ಶುಭಾ ಪೂಂಜಾ. ಅವರು ಕೊಟ್ಟ ಧೈರ್ಯದಿಂದ ಈಗ ಸಿನಿಮಾ ಮಾಡಿದ್ದೇನೆ. ನಿರ್ದೇಶಕ ರಾಜಶೇಖರ್ ಹೇಳಿದ ಕಥೆ ಇಷ್ಟವಾಯಿತು. ನಾನು ಕೂಡಾ ಒಂದಷ್ಟು ಬದಲಾವಣೆಯನ್ನು ಸೂಚಿಸಿ, ಅಂತಿಮವಾಗಿ ಈಗ ಸಿನಿಮಾ ರೆಡಿಯಾಗಿದೆ’ ಎಂದರು ನಿರ್ಮಾಪಕ ಎಚ್.ಎಲ್.ಎನ್. ಅಂದಹಾಗೆ, ಇತ್ತೀಚೆಗೆ “ರಾಜ ಲವ್ಸ್ ರಾಧೆ’ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ನಟ ಅಜೇಯ್ ರಾವ್ ಆಡಿಯೋ ಬಿಡುಗಡೆ ಮಾಡಿ ಶುಭಕೋರಿದರು.
ಚಿತ್ರವನ್ನು ರಾಜಶೇಖರ್ ನಿರ್ದೇಶಿಸಿದ್ದಾರೆ. ಈ ಹಿಂದೆ “ಈ ಸಂಭಾಷಣೆ’ ಎಂಬ ಸಿನಿಮಾ ಮಾಡಿದ್ದರು ರಾಜಶೇಖರ್. ಇದು ತೆಲುಗಿಗಾಗಿ ಮಾಡಿಕೊಂಡಿದ್ದ ಕಥೆಯಂತೆ. ಜೊತೆಗೆ ಕನ್ನಡದಲ್ಲಿ ನಿರ್ಮಾಪಕರು ಸಿಕ್ಕರೂ ಸಿನಿಮಾ ಮಾಡಲು ರೆಡಿ ಇದ್ದ ರಾಜಶೇಖರ್‌ಗೆ ನಿರ್ಮಾಪಕರನ್ನು
ಪರಿಚಯ ಮಾಡಿಕೊಟ್ಟಿದ್ದು ಸಂಭಾಷಣೆಕಾರ ವಿಜಯ್. ಅದರಂತೆ ಕಥೆ ಇಷ್ಟಪಟ್ಟ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. “ಇದು ಔಟ್ ಅಂಡ್ ಕಾಮಿಡಿ ಸಿನಿಮಾ. ವಿಜಯ ರಾಘವೇಂದ್ರ ಅವರು ಇಡೀ ಸಿನಿಮಾದಲ್ಲಿ ನಿಮ್ಮನ್ನು ನಗಿಸುತ್ತಾ ಹೋಗುತ್ತಾರೆ. ಚಿತ್ರದಲ್ಲಿ ಒಳ್ಳೊಳ್ಳೆ ಕಲಾವಿದರಿದ್ದಾರೆ.
ನಿರ್ಮಾಪಕರು ಕೇಳಿದ್ದನ್ನೆಲ್ಲಾ ಕೊಟ್ಟಿದ್ದಾರೆ. ಚಿತ್ರದಲ್ಲಿ ಪ್ರೀತಿಗಾಗಿ ಏನು ಬೇಕಾದರೂ ತ್ಯಾಗ ಮಾಡಿ, ಪ್ರೀತೀನಾ ತ್ಯಾಗ ಮಾಡಬೇಡಿ ಎಂಬ ಸಂದೇಶವಿದೆ. ಚಿತ್ರಕ್ಕೆ ವೀರ್‌ಸಮರ್ಥ್ ಸಂಗೀತ ನೀಡಿದ್ದಾರೆ.
ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದಾರೆ’ ಎಂದು ಚಿತ್ರದ ವಿವರ ನೀಡಿದರು ರಾಜಶೇಖರ್. ನಾಯಕ ವಿಜಯ್ ರಾಘವೇಂದ್ರ ಅವರಿಗೆ ತುಂಬಾ ಖುಷಿಕೊಟ್ಟ ಸಿನಿಮಾವಂತೆ. “ಪ್ರತಿ ಸಿನಿಮಾದಲ್ಲೂ ಬದಲಾವಣೆಯನ್ನು ಬಯಸುತ್ತೇನೆ. ಆ ತರಹದ ಒಂದು ಬದಲಾವಣೆ ಈ ಸಿನಿಮಾದಲ್ಲಿದೆ. ಇಡೀ ತಂಡದ ಶ್ರಮದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು ವಿಜಯ್ ಮಾತು. “ಪಂಟ’ ಮೂಲಕ ಚಿತ್ರರಂಗಕ್ಕೆ ಬಂದ ರಿತೀಕ್ಷಾ ಈಗ ರಾಧಿಕಾ ಪ್ರೀತಿಯಾಗಿದ್ದಾರೆ. ಚಿತ್ರದಲ್ಲಿ ನಟಿಸಿದ ಖುಷಿಯ ಜೊತೆಗೆ ನಿರ್ಮಾಪಕರನ್ನು ದೇವರಂತಹ ಮನುಷ್ಯ ಎಂದು ತಂಡದ ಗುಣಗಾನ ಮಾಡಿದರು ರಾಧಿಕಾ ಪ್ರೀತಿ.
ಚಿತ್ರಕ್ಕೆ ಸಂಗೀತ ನೀಡಿದ ವೀರ್ ಸಮರ್ಥ್ ಹಾಡಿನ ಬಗ್ಗೆ ಮಾತನಾಡಿದರು. “ಎಲ್ಲಾ ಬಗೆಯ ಹಾಡುಗಳಿರುವ ಪ್ಯಾಕೇಜ್ ಇದು. ಜನ ಹಾಡುಗಳನ್ನು ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎಂದರು. ಚಿತ್ರಕ್ಕೆ ಸಂಭಾಷಣೆ ಹಾಗೂ ಒಂದು ಹಾಡು ಬರೆದಿರುವ ವಿಜಯ್ ಭರಮಸಾಗರ ಕೂಡಾ ಸಂಭಾಷಣೆಯ ಬಗ್ಗೆ ಮಾತನಾಡಿದರು. ಎಲ್ಲಾ ವರ್ಗದವರಿಗೂ ಹಾಗೂ ವಯೋಮಾನದವರಿಗೆ ಇಷ್ಟವಾಗುವಂತಹ ಕಥೆ ಇದಾಗಿದ್ದು, ಅದಕ್ಕೆ ಪೂರಕವಾಗಿರುವ
ಸಂಭಾಷಣೆ ಚಿತ್ರಕ್ಕಿದೆ’ ಎಂಬುದು ಅವರ ಮಾತು. ಉಳಿದಂತೆ ಕವಿರಾಜ್, ಸುನಿ ಚಿತ್ರದಲ್ಲಿ ನಟಿಸಿದ ಮಿತ್ರ, ಡ್ಯಾನಿ ಸೇರಿದಂತೆ ಪ್ರತಿಯೊಬ್ಬರು ತಮ್ಮ ಅನಿಸಿಕೆ ಹಂಚಿಕೊಂಡರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.