ಪ್ರಯೋಗ ಕುತೂಹಲಿಗಳ ಮಾಯಾಮೃಗ
Team Udayavani, Sep 8, 2017, 1:31 PM IST
ಶಾಬ್ದಿಕ ಭಾಷೆಯ ಪ್ರಯೋಗ ಪರಿಣತಿ ಸಾಧಿಸಿದವರು ನವನವೀನ ಕವಿತೆಗಳನ್ನು, ಚಿತ್ರ ಕಾವ್ಯಗಳನ್ನು ಹೊಸೆದು ಸಂತೋಷ ಪಡುತ್ತಾರೆ. ಸಂತೋಷವನ್ನು ಓದುಗ-ಕೇಳುಗರಿಗೆ ಉಣಬಡಿಸುತ್ತಾರೆ. ಅಂತೆಯೇ, ಯಕ್ಷಗಾನದ ರಂಗಭಾಷೆ, ರಂಗಚಲನೆ, ಕುಣಿತ, ಹೆಜ್ಜೆಗಾರಿಕೆ (ದಸ್ತು) ಇತ್ಯಾದಿಗಳಲ್ಲಿ ವ್ಯಾಕರಣಬದ್ಧ ಅಭ್ಯಾಸ ಮಾಡಿದರೆ “ಯಕ್ಷರೂಪಕ’ಗಳನ್ನು ರಚಿಸಲು ಸಾಧ್ಯ ಎನ್ನುವುದು ಈಗಾಗಲೇ ಸಾಬೀತಾದ ಕಲಾ ಸಂಗತಿ. ಆಗಸ್ಟ್ 21ರಂದು ಉಡುಪಿಯ “ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರ’ ಎಂಬ ಯುವಕರ ಕೂಟ ಕೃಷ್ಣ ಮಠದ ರಾಜಾಂಗಣದಲ್ಲಿ “ಮಾಯಾಮೃಗ’ ಎಂಬ ಯಕ್ಷರೂಪಕವನ್ನು ಪ್ರದರ್ಶಿಸಿತು. ಪಾರ್ತಿಸುಬ್ಬ ಕವಿಯ “ಪಂಚವಟಿ’ ಪ್ರಸಂಗದಲ್ಲಿ ರಾವಣ ಪ್ರೇರಿತ ಮಾರೀಚನು ಚಿನ್ನದ ಜಿಂಕೆಯಾಗಿ (ಮಾಯಾಮೃಗ) ಸೀತೆಯನ್ನು ಆಕರ್ಷಿಸುವ ಸನ್ನಿವೇಶ ಶ್ರವ್ಯಕಾವ್ಯವಾಗಿ ಹಾಗೂ ದೃಶ್ಯಕಾವ್ಯವಾಗಿ ಬಹುಪ್ರಸಿದ್ಧ ಪ್ರಯೋಗ. ಕುತೂಹಲ ಮತಿಗಳಾದ ಈ ಉತ್ಸಾಹಿ ಕಲಾವಿದರು ತೆಂಕುತಿಟ್ಟು ಶೈಲಿಯಲ್ಲಿ ರಾಮ (ಅಶ#ಕ್), ಲಕ್ಷ್ಮಣ (ಕಾರ್ತಿಕ್ ಪ್ರಭು), ಸೀತೆ (ಸುಶ್ಮಿತಾ ಸಾಲಿಗ್ರಾಮ) ಮತ್ತು ಮಾಯಾಮೃಗ (ಪೃಥ್ವೀಶ್ ಪರ್ಕಳ) ಪಾತ್ರಗಳನ್ನು ಬಳಸಿ ನೃತ್ಯ ಸೌಂದರ್ಯದಿಂದ ಪ್ರೇಕ್ಷಕರನ್ನು ರಂಜಿಸಿದರು. ಹಿಮ್ಮೇಳದಲ್ಲಿ ವೃತ್ತಿ ಕಲಾವಿದ ಭಾಗವತ ಶ್ರೀನಿವಾಸ ಬಳ್ಳಮಂಜರ ಬಳಗವು ಪಂಚವಟಿಯ ಆಯ್ದ ಪದ್ಯಗಳನ್ನು ಅಗತ್ಯಕ್ಕೆ ತಕ್ಕ ವಿಸ್ತಾರದೊಂದಿಗೆ ಪ್ರಸ್ತುತಪಡಿಸಿತು.
ನೃತ್ಯರೂಪಕದ ಪರಿಕಲ್ಪನೆಯೇ ಒಮ್ಮೊಮ್ಮೆ ಸಾಕಷ್ಟು ಗೊಂದಲ ಉಂಟು ಮಾಡುವುದಿದೆ. ಭರತನಾಟ್ಯದಲ್ಲಿ ಕಥೆಯನ್ನು ಆಧರಿಸಿ ರೂಪಕ ಪ್ರಯೋಗಗಳು ಸಾಕಷ್ಟು ಆಗಿವೆ (ಈ ನೃತ್ಯ ಪ್ರಕಾರದ ಚೌಕಟ್ಟಿನಲ್ಲಿ ಯಕ್ಷಗಾನದಲ್ಲಿ ಕಾಣುವ ವಾಚಿಕಾಭಿನಯ, ಮಾತುಗಾರಿಕೆ ಇಲ್ಲ). ಯಕ್ಷಗಾನದಲ್ಲಿ ಅದರ ಮೂಲಭೂತ ಘಟಕಗಳಲ್ಲೊಂದಾದ ಮಾತುಗಾರಿಕೆಯನ್ನು ಲುಪ್ತಗೊಳಿಸಿ, ನೃತ್ಯಕ್ಕೆ ನವೀನರೂಪ ಕೊಟ್ಟು “ಯಕ್ಷಗಾನ ಬ್ಯಾಲೆ’ ಎಂಬ ಪ್ರಯೋಗದ ಮೂಲಕ ಡಾ| ಶಿವರಾಮ ಕಾರಂತರು ಒಂದು ಹೊಸ ರೂಪದ ಪ್ರದರ್ಶನವನ್ನು ಪ್ರಚುರ ಪಡಿಸಿದ್ದಾರೆ. ಉಡುಪಿ ಯಕ್ಷಗಾನ ಕೇಂದ್ರದ ಕಲಾವಿದರು ಗುರು ಬನ್ನಂಜೆ ಸಂಜೀವ ಸುವರ್ಣ ಅವರ ನಿರ್ದೇಶನದಲ್ಲಿ ಬಡಗುತಿಟ್ಟಿನಲ್ಲಿ ಇಂತಹ ವಿನೂತನ ಪ್ರಯೋಗವನ್ನು ಈಗಾಗಲೇ ಮಾಡಿದ್ದಾರೆ. ಉದ್ಯಾವರ ಮಾಧವಾಚಾರ್ಯರೂ ಇಂತಹ ಪ್ರಯತ್ನ ನಡೆಸಿದ್ದಾರೆ. ಮಂಟಪ ಪ್ರಭಾಕರ ಉಪಾಧ್ಯರು ಏಕವ್ಯಕ್ತಿ ನೆಲೆಯಲ್ಲಿ ಮತ್ತೂಂದು ಆಯಾಮವನ್ನು ಕೊಡಿಸಿದ್ದಾರೆ. ಇವೆಲ್ಲವೂ ಬಡಗುತಿಟ್ಟು ಯಕ್ಷಗಾನದಲ್ಲಿ ಈಗಾಗಲೇ ಪ್ರದರ್ಶನ ಕಂಡ ರೂಪಕ ಪ್ರಯೋಗಗಳು. ತೆಂಕುತಿಟ್ಟಿನಲ್ಲಿ “ಮಾನಿಷಾದ’ ಪ್ರಸಂಗದಲ್ಲಿ ಕ್ರೌಂಚ ಪಕ್ಷಿಗಳ ಪ್ರೇಮಸಲ್ಲಾಪ ದೃಶ್ಯವನ್ನು ಯಕ್ಷರೂಪಕವಾಗಿ ಪ್ರದರ್ಶಿಸಿದ್ದನ್ನು ಕಂಡಿದ್ದೇನೆ (ಇತರ ಪ್ರಯೋಗಗಳೂ ಆಗಿರಬಹುದು). ಮೂಡಬಿದ್ರೆಯ ಆಳ್ವಾಸ್ ಕಾಲೇಜಿನವರು ಯಕ್ಷ ರೂಪಕವನ್ನು ಕುಣಿತ ಪ್ರಧಾನವಾಗಿ, ವರ್ಣ ವೈಭವ ಹಾಗೂ ಬಹುಸಂಖ್ಯೆಯ ಅಬ್ಬರದ ವೇಷ ವೈವಿಧ್ಯಗಳೊಂದಿಗೆ, ಅತ್ಯಂತ ರಂಜನಿಯ ವಾಗಿ ಪ್ರದರ್ಶಿಸಿ ಯಕ್ಷರೂಪಕದ ಮತ್ತೂಂದು ಮಾದರಿಯನ್ನು ಪ್ರಚುರ ಪಡಿಸುತ್ತಿದ್ದಾರೆ. ಇದು ಮುಖ್ಯವಾಗಿ ನಯನ ರಂಜಕ ಪ್ರಯೋಗ.
ಉಡುಪಿಯಲ್ಲಿ “ಮಾಯಾಮೃಗ’ ಯಕ್ಷರೂಪಕ ಪ್ರದರ್ಶಿಸಿದವರು ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾಗಿದ್ದವರು. ಅಲ್ಲಿಯ ಯಕ್ಷಗಾನ ಶೈಲಿಯ ಪ್ರಭಾವದಿಂದ ಹೊಸ ಪ್ರೇರಣೆ ಪಡೆಯುವುದು ಸಹಜ. “ಮಾಯಾಮೃಗ’ದ ಪ್ರದರ್ಶನದಲ್ಲಿ ಎದ್ದು ಕಂಡುದು ತೆಂಕುತಿಟ್ಟಿನ ಪರಂಪರೆಯ ಹೆಜ್ಜೆಗಾರಿಕೆಯ ವೈವಿಧ್ಯಪೂರ್ಣ, ಶಿಸ್ತುಬದ್ಧವಾದ, ಪಾತ್ರಗಳೊಳಗಿನ ಪರಸ್ಪರ ಪ್ರತಿಕ್ರಿಯಾ ರೂಪದಲ್ಲಿ ಸಮತೋಲನದ ವಿನಿಯೋಗ. ಸುಮಾರು ಅರ್ಧಗಂಟೆಯ ಈ ಪ್ರಯೋಗದಲ್ಲಿ ರಾಮಲಕ್ಷ್ಮಣರ ಸಾಂಪ್ರದಾಯಿಕ ಒಡ್ಡೋಲಗ (ಆಡುತ್ತಾಡುತ್ತ ಬಂದ ರಾಮ)ದ ನೃತ್ಯದ ಚಲನೆಯ ವ್ಯಾಕರಣವನ್ನು ಸುಂದರ ವಿನ್ಯಾಸದಲ್ಲಿ ಪ್ರದರ್ಶಿಸಿದ್ದು ಪ್ರೇಕ್ಷಕರ ಆನಂದಕ್ಕೆ ಕಾರಣವಾಗಿತ್ತು. ಮಾಯಾಜಿಂಕೆಯಾದ ಮಾರೀಚನು ಕೈಯಲ್ಲಿ ಸನ್ಯಾಸಿಯ ಚಿತ್ರ ಬರೆದಿರುವ ಚಿಕ್ಕ ಪರದೆ ಹಿಡಿದುಕೊಂಡು ಮೊದಲು ಕಾಣಿಸುವಲ್ಲಿ ನಾಟಕದಲ್ಲಿ ಬಳಸುವ ಸಾಂಕೇತಿಕತೆಯ ತಂತ್ರವನ್ನು ಉಪಯೋಗಿಸಲಾಗಿತ್ತು. ಸೀತೆ “ಮೃಗಮನೋಚಿತೆ’ಯಾಗುವುದಷ್ಟೆ ರೂಪಕದ ಕಥಾವಸ್ತುವಾದ್ದರಿಂದ ಸೀತೆ ಜಿಂಕೆಗೆ ಮರುಳಾಗುವುದನ್ನು ಚಾಲು ಕುಣಿತದ ವಿವಿಧ ವಿನ್ಯಾಸಗಳಲ್ಲಿ ಸೂಚಿಸಲಾಗಿತ್ತು. ಪದ್ಯದ ಬಳಿಕ ಮಾತುಗಾರಿಕೆ ಇಲ್ಲವಾದ್ದರಿಂದ ರಾಮ – ಸೀತೆ, ರಾಮ ಲಕ್ಷ್ಮಣ ಇವರ ಪದ್ಯಾತ್ಮಕ ಸಂವಾದದಲ್ಲಿ ಅಭಿನಯ ಹೆಚ್ಚು ಬೇಕಾಗಿತ್ತು.
ಒಂದು ನೃತ್ಯ ರೂಪಕದಲ್ಲಿ ಕಥಾವಸ್ತು, ನೃತ್ಯ ವೈವಿಧ್ಯ, ವಿವಿಧ ಚಲನಾ ವಿನ್ಯಾಸ, ಹೆಜ್ಜೆಗಾರಿಕೆ ಹೇಗೆ ಮುಖ್ಯವೋ ಭಾವಾಭಿನಯವೂ ಅಷ್ಟೇ ಮುಖ್ಯವಾಗುತ್ತದೆ. ಈ ಎಲ್ಲ ಅಂಶಗಳು ಪರಸ್ಪರ ಪೂರಕವಾಗಿ ಜತೆಯಾಗಿ ಬೆಸೆದುಕೊಂಡಾಗ ವಾಚಿಕಾಭಿನಯನದ ಮೂಲಕವಾಗಿ ಸಂಭವಿಸುವ ಅರ್ಥ ಸಂವಹನವು ಕೇವಲ ನೃತ್ಯದಲ್ಲಿ ಸಾಧ್ಯವಾದೀತು. ಅರ್ಥಾನುಭವವಾಗದೆ ಭಾವಾನಂದವಾಗದು ತಾನೇ. ಸಾಂಪ್ರದಾಯಿಕ ಯಕ್ಷಗಾನವನ್ನು ಯಕ್ಷರೂಪಕವಾಗಿ ಪರಿವರ್ತಿಸುವಾಗ ನೃತ್ಯ ಶೈಲಿಯಲ್ಲಿಯೂ ಹಿಮ್ಮೇಳದಲ್ಲಿಯೂ ಕೆಲವು ಪರಿವರ್ತನೆಗಳಾಗುವುದು ಅನಿವಾರ್ಯ. ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ಯುವ ಕಲಾವಿದರು ಈಗಾಗಲೇ ನೃತ್ಯ ಪರಿಣತಿ ಗಳಿಸಿದವರಾದ್ದರಿಂದ, ಮತ್ತು ಯಕ್ಷರೂಪಕವನ್ನು ಬೆಳೆಸುವ ಮಹತ್ವಾಕಾಂಕ್ಷೆ ಹೊಂದಿರುವುದರಿಂದ, ಕಥಾ ವಸ್ತುವಿನ ಭಾವಪೂರ್ಣ ಪ್ರಸ್ತುತಿಗೆ ಬೇಕಾದ ಅಭಿನಯ ಪಕ್ವತೆ ಸಾಧಿಸಬೇಕಾಗಿದೆ ಎಂಬ ಅನಿಸಿಕೆ “ಮಾಯಾಮೃಗ’ ಪ್ರದರ್ಶನದ ಅಂತ್ಯದಲ್ಲಿ ಮೂಡಿತು. ಆದರೆ ಈ ತಂಡ ಕಲಾರಸಿಕರ ಸರ್ವರೀತಿಯ ಪ್ರೋತ್ಸಾಹಕ್ಕೆ ಅರ್ಹತೆ ಗಳಿಸಿದೆ.
ಪ್ರೊ| ಎಂ.ಎಲ್. ಸಾಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.