ಡೇರಾ ಸಚ್ಚಾ ಸೌದವೆಂಬ ಗುರ್ಮೀತ್ ರಾಂ ರಹೀಂ ಸಿಂಗ್‌ನ ಸ್ವರ್ಗ!
Team Udayavani, Sep 10, 2017, 8:30 AM IST
ಸಿರ್ಸಾ (ಹರಿಯಾಣ): ಅದು ಡೇರಾ ಸಚ್ಚಾ ಸೌದದ ಎಂಟು ನೂರು ಎಕರೆಯಲ್ಲಿರುವ ಸ್ವರ್ಗ ವನ್ನೇ ನಾಚಿಸುವ ಮಾಯಾನಗರಿ. ಶೋಕಿಗಾಗಿ ಏನೇನು ಬೇಕೋ ಎಲ್ಲವೂ ಇಲ್ಲಿವೆ. ಅಷ್ಟೇ ಅಲ್ಲ, ಇವರದ್ದೇ ಆದ ಕರೆನ್ಸಿ , ಸ್ಕೂಲು, ಕ್ರೀಡಾಂಗಣ, ಆಸ್ಪತ್ರೆ, ಸಿನೆಮಾ ಹಾಲ್, ರಕ್ಷಣೆಗಾಗಿ ಎಕೆ 47ಗಳು, ಭಾರೀ ಮದ್ದುಗುಂಡುಗಳು, ಸಾಧ್ವಿಯರ
ಹಾಸ್ಟೆಲ್‌ಗೆ ಸಿಂಗ್ ಮನೆಯಿಂದ ನೇರ ಸುರಂಗ… ಹೀಗೆ ಎಲ್ಲವೂ ಅಲ್ಲಿವೆ !
ಡೇರಾ ಸಚ್ಚಾ ಸೌದದ ಗುರ್ಮೀತ್ ರಾಂ ರಹೀಂ ಸಿಂಗ್‌ಗೆ 20 ವರ್ಷ ಜೈಲು ಶಿಕ್ಷೆಯಾದ ಬಳಿಕ ಹಲವಾರು ಭದ್ರತಾ ಸಂಸ್ಥೆಗಳು ಸಹಿತ ಸಿರ್ಸಾದಲ್ಲೇ ಇರುವ ಈತನ ಮಾಯಾನಗರಿ ಮೇಲೆ ದಾಳಿ ಮಾಡಿವೆ. ಇದುವರೆಗೆ ಡೇರಾ ಬೆಂಬಲಿಗರು ಬಿಟ್ಟರೆ ಬೇರಾರೂ ಪ್ರವೇಶಿಸದ ಈ ಸಾಮ್ರಾಜ್ಯ ನೋಡಿ ಅವರೇ ಬೆಕ್ಕಸ ಬೆರಗಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಆರಂಭವಾಗಿರುವ ಈ ಶೋಧನ ಕಾರ್ಯ ಇನ್ನೂ ಮುಗಿದಿಲ್ಲ. ರವಿವಾರವೂ ಮುಂದುವರಿಯಲಿದೆ ಎಂಬುದು ಅಧಿಕಾರಿಗಳ ಹೇಳಿಕೆ.
ಇದಷ್ಟೇ ಅಲ್ಲ, ಈ ಡೇರಾ ಸ್ವರ್ಗದಲ್ಲಿ ಐಫೆಲ್ ಟವರ್, ತಾಜ್‌ಮಹಲ್, ಕ್ರೆಮ್ಲಿನ್, ಡಿಸ್ನಿವರ್ಲ್ಡ್ ಕೂಡ ಇವೆ. ಜತೆಗೆ ಒಂದು 7 ಸ್ಟಾರ್ “ಎಂಎಸ್‌ಜಿ’ ರೆಸಾರ್ಟ್ ಕೂಡ ಇದೆ. ಇಷ್ಟೇ ಏಕೆ, ವಿದೇಶಿ ಭಕ್ತರಿಗಾಗಿ ನೆಲದಾಳದಲ್ಲೊಂದು ರೆಸಾರ್ಟ್ ಕೂಡ ನಿರ್ಮಾಣವಾಗುತ್ತಿದೆ!
ಇವೆಲ್ಲ ಕೇವಲ ಎರಡು ದಿನಗಳ ಶೋಧದಲ್ಲಿ ಸಿಕ್ಕಿದವು. ಇನ್ನೂ ಶೋಧ ನಡೆಯುತ್ತಲೇ ಇದೆ. 4,000 ಅರೆ ಸೇನಾ ಪಡೆಯ ಯೋಧರು, ಸಾವಿರಾರು ಪೊಲೀಸರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸ ಲಾಗುತ್ತಿದೆ. ಸುಮಾರು 16 ಚೆಕ್‌ಪಾಯಿಂಟ್ ಮಾಡಿ, ಈ ಪ್ರದೇಶದಲ್ಲಿ ಮೊಬೈಲ್ ಇಂಟರ್ನೆಟ್ ಅನ್ನೇ ನಿಷೇಧಿಸಲಾಗಿದೆ.
ಸ್ವರ್ಗದಲ್ಲೆರಡು ಸುರಂಗಗಳು: ಇವು ಡೇರಾ ಸಚ್ಚಾ ಸೌದದಲ್ಲಿನ ರಹಸ್ಯ ಸುರಂಗಗಳು. ವಿಶೇಷವೆಂದರೆ, ಒಂದು ಡೇರಾ ಸಚ್ಚಾ ಸೌದದ ಗುರು ರಾಂ ರಹೀಂ ಸಿಂಗ್ ಇದ್ದ “ಗುಫಾ’ ಭವನದಿಂದ ಸೀದಾ, ಸಾಧ್ವಿಯರು ವಾಸಿಸುವ ಹಾಸ್ಟೆಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇನ್ನೊಂದು ಡೇರಾ ಸಚ್ಚಾ ಸೌದದಿಂದ 5 ಕಿ.ಮೀ. ಆಚೆಗೆ ಸಂಪರ್ಕಿಸುತ್ತದೆ. ಕಷ್ಟ ಬಂದಾಗ ಅಲ್ಲಿಂದ ಹೊರಹೋಗುವ ಮಾರ್ಗವದು!
ಶಸ್ತ್ರಾಸ್ತ್ರ ಮತ್ತು ಪಟಾಕಿ ಫ್ಯಾಕ್ಟರಿ: ಭಾರೀ ಪ್ರಮಾಣದ ಮದ್ದುಗುಂಡುಗಳ ರಚನೆಗಾಗಿ ಒಂದು ಅಕ್ರಮ ಕಾರ್ಖಾನೆ ಮತ್ತು ಪಟಾಕಿ ತಯಾರಿಸಲು ಫೈರ್ ಕ್ರಾಕ್ಟರ್ಸ್ ಕಾರ್ಖಾನೆಯನ್ನೂ ಇದರೊಳಗೇ ನಿರ್ಮಿಸಲಾಗಿದೆ. ಶೋಧ ಕಾರ್ಯ ಶುರು ಮಾಡಿದ ತತ್‌ಕ್ಷಣವೇ ಪೊಲೀಸರು ಈ ಎರಡಕ್ಕೂ ಬೀಗ ಹಾಕಿ ಮದ್ದುಗುಂಡು, ಪಟಾಕಿ ವಶಪಡಿಸಿಕೊಂಡರು. ಎಕೆ 47ಗೆ ಬಳಕೆ ಮಾಡುವ ಗುಂಡಿನ ಖಾಲಿ ಬಾಕ್ಸ್‌ಗಳು ಸಿಕ್ಕಿವೆ.
ಪ್ಲಾಸ್ಟಿಕ್ ಕಾಯಿನ್ಸ್
ಡೇರಾ ಸಚ್ಚಾ ಸೌದದ ಆವರಣದಲ್ಲಿ ಹೊರಗಿನ ಕರೆನ್ಸಿಗೆ ಕಿಮ್ಮತ್ತು ಇಲ್ಲ ಎಂದು ಈ ಹಿಂದೆಯೇ ಬಯಲಾಗಿತ್ತು. ಇಲ್ಲಿ ಭಾರೀ ಪ್ರಮಾಣದ ಪ್ಲಾಸ್ಟಿಕ್ ನಾಣ್ಯಗಳು ಸಿಕ್ಕಿವೆ. ಇದರ ಮೇಲೆ ಧನ್ ಧನ್ ಸದ್ಗುರು ತೇರಾ ಹಿ ಅಸಾರಾ, ಡೇರಾ ಸಚ್ಚಾ ಸೌದಾ ಸಿರ್ಸಾ ಎಂದು ಬರೆಯಲಾಗಿದೆ.
ಅಸ್ಥಿಪಂಜರಗಳು
ಆವರಣದೊಳಗೆ ಭಾರೀ ಪ್ರಮಾಣದ ಮಾನವರ ಅಸ್ಥಿಪಂಜರಗಳು ಸಿಕ್ಕಿವೆ. ಇವೆಲ್ಲ ದಾನವಾಗಿ ಬಂದದ್ದು ಎಂಬುದು ಗೊತ್ತಾಗಿದೆ. ಅಂದರೆ ಸತ್ತವರನ್ನು ನದಿಗೆ ಎಸೆಯದೇ ಡೇರಾ ಸಚ್ಚಾ ಸೌದಕ್ಕೆ ತಂದುಕೊಡಿ ಎಂದು
ರಾಂ ರಹೀಂ ಸಿಂಗ್ ಹೇಳಿದ್ದನಂತೆ. ಇವುಗಳನ್ನು ಇಲ್ಲಿಗೆ ತಂದು ಕೊಟ್ಟ ಮೇಲೆ ಅವುಗಳನ್ನು ಸಮಾಧಿ ಮಾಡಿ, ಅವುಗಳ ಮೇಲೆ ಮರ ಬೆಳೆಸುತ್ತಿದ್ದರಂತೆ!
ಡಿಸೈನರ್ ಕ್ಲಾತ್
ನೂರಾರು ಜತೆ ಶೂಗಳು, ಭಾರೀ ಸಂಖ್ಯೆಯ ಡಿಸೈನರ್ ಬಟ್ಟೆಗಳು, ವಿಧ ವಿಧವಾದ ಟೋಪಿಗಳು ಸಿಕ್ಕಿವೆ. ಇವುಗಳನ್ನು ರಾಂ ರಹೀಂ ಸಿಂಗ್ ಧರಿಸುತ್ತಿದ್ದನಂತೆ.
ಲಕ್ಸುರಿ ಕಾರು, ಒಬಿ ವ್ಯಾನ್: ರಾಂ ರಹೀಂ ಸಿಂಗ್ ಅವರ ಸಿನೆಮಾಗಳಲ್ಲಿ ಚಿತ್ರ ವಿಚಿತ್ರವಾದ ಬೈಕ್‌ಗಳು, ಕಾರುಗಳು ಇರುವುದನ್ನು ನೋಡಬಹುದು. ಇಂಥ ಅಸಂಖ್ಯಾಕ ಕಾರುಗಳು ಇಲ್ಲಿ ಸಿಕ್ಕಿವೆ. ಆದರೆ ಇವುಗಳಿಗೆ ನಂಬರ್ ಪ್ಲೇಟ್ ಇರಲೇ ಇಲ್ಲ. ಹೀಗಾಗಿ ಪೊಲೀಸರು ಇವುಗಳನ್ನೂ ವಶಪಡಿಸಿಕೊಂಡಿದ್ದಾರೆ.
12 ಗಂಟೆ ಶೋಧ: ಶನಿವಾರ ಒಟ್ಟು ಹನ್ನೆರಡು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಲಾಗಿದೆ. ಈ ಸಂದರ್ಭದಲ್ಲಿ ಹಲವು ಕೋಣೆಗಳ ತಪಾಸಣೆ ನಡೆಸಿ, ಅವುಗಳಿಗೆ ಬೀಗ ಜಡಿಯಲಾಗಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ನಡೆಸಲಾಗಿದೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ಮತ್ತು
ಸೆಷನ್ಸ್ ನ್ಯಾಯಾಧೀಶ ಎ.ಕೆ.ಎಸ್. ಪವಾರ್ ಅವರನ್ನು ಕೋರ್ಟ್ ಕಮಿಷನರ್ ಆಗಿ ನೇಮಿಸಿತ್ತು. ಅವರ ಉಸ್ತುವಾರಿಯಲ್ಲಿ ಈ ಪ್ರಕ್ರಿಯೆಗಳು ನಡೆದಿವೆ.
ಭಾರಿ ಬಂದೋಬಸ್ತ್: ಶೋಧದ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಡೇರಾ ಸಂಘಟನೆಯ ಬೃಹತ್ ಕ್ಯಾಂಪಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ದಳ, ಕ್ಷಿಪ್ರ ಕಾರ್ಯ ಪಡೆಗಳು ಇದ್ದವು. ಜಿಲ್ಲಾಡಳಿತದ ವತಿಯಿಂದಲೇ ವಿವಿಧ ತನಿಖಾ ಸಂಸ್ಥೆಗಳಿಗೆ
ಸೇರಿದ ಅಧಿಕಾರಿಗಳು, ಸಿಬಂದಿಯನ್ನು ಕರೆದೊಯ್ಯಲಾಗುತ್ತಿತ್ತು.
ಅತ್ಯಂತ ಆಪ್ತರಿಗೆ ಮಾತ್ರ: ಗುರ್ಮಿತ್‌ನ ಖಾಸಗಿ ನಿವಾಸ ಅಥವಾ “ಗುಫಾ’ಗೆ ಅತ್ಯಂತ ಆಪ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು ಎಂದು ಸಂಘಟನೆ ತೊರೆದ ಕೆಲ ವ್ಯಕ್ತಿಗಳು ಮಾಧ್ಯಮದವರಿಗೆ ಹೇಳಿದ್ದಾರೆ.
ಹಿಂಸಾಚಾರ: ಇಬ್ಬರ ಬಂಧನ
ಗುರ್ಮೀತ್ ಅನ್ನು ಕೋರ್ಟ್ ಆವರಣದಿಂದ ಬಂಧಮುಕ್ತಗೊಳಿಸುವ ಘಾತಕ ಯೋಜನೆ ರೂಪಿಸಿದ್ದ ಚಮ್‌ಕೌರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ. ಈತ ಶಿಕ್ಷೆ ಘೋಷಣೆಯಾದ ಬಳಿಕ ಉಂಟಾದ ಹಿಂಸಾಚಾರಕ್ಕೂ ಕುಮ್ಮಕ್ಕು ನೀಡಿದ್ದನೆಂಬ ಆರೋಪ ಎದುರಿಸುತ್ತಿದ್ದಾನೆ. ಈತ ಡೇರಾ ಸಂಘಟನೆಯ ಪಂಚಕುಲ ವಿಭಾಗದ ಮುಖ್ಯಸ್ಥ. ಇವನ ಜತೆಗೆ ಮತ್ತೂಬ್ಬನನ್ನೂ ಬಂಧಿಸಲಾಗಿದೆ. ಆ.25ರಂದು ನಡೆದಿದ್ದ ಹಿಂಸಾಚಾರದಲ್ಲಿ 35 ಮಂದಿ ಸಾವಿಗೀಡಾಗಿದ್ದರು.
ಡೇರಾ ಬೆಂಬಲಿಗನ ಆತ್ಮಹತ್ಯೆ
ಸಂಘಟನೆ ಹೊಂದಿರುವ ವಿವಿಧ ಹೂಡಿಕೆ ಮತ್ತು ಉದ್ದಿಮೆಗಳ ಮೇಲೆ ಬಹು ತನಿಖಾ ಸಂಸ್ಥೆಗಳು ದಾಳಿ ಮಾಡಿದ್ದರಿಂದ ಗುರ್ಮೀತ್ ಹಿಂಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಂಬಿರ್ ಎಂಬಾತ ಸಂಘಟನೆಯ ಕ್ಯಾಂಪಸ್‌ನಲ್ಲಿ ಶುರುವಾಗಿರುವ ರೆಸ್ಟೋರೆಂಟ್ ಹಾಗೂ ರೆಸಾರ್ಟ್‌ನಲ್ಲಿ 3.10 ಕೋಟಿ ರೂ. ಹೂಡಿಕೆ ಮಾಡಿದ್ದ. ತನ್ನಲ್ಲಿದ್ದ 25 ಎಕರೆ ಜಮೀನು ಮಾರಿ ಬಂದ ಹಣವನ್ನು ಇಲ್ಲಿ ಹೂಡಿದ್ದ. ಅಷ್ಟೇ ಅಲ್ಲದೆ, ತನ್ನ 12 ಎಕರೆ ಜಮೀನನ್ನು ಡೇರಾಗೆ ಬರೆದು ಕೊಟ್ಟಿದ್ದ. ಈಗ ನಡೆದ ಒಟ್ಟಾರೆ ಬೆಳವಣಿಗೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.