ಪಾಲಿಕೆ ಅಧಿಕಾರದ ಮೇಲೆ ಬಿಜೆಪಿ ನಿರಾಸಕ್ತಿ
Team Udayavani, Sep 11, 2017, 11:54 AM IST
ಬೆಂಗಳೂರು: ಬಿಬಿಎಂಪಿ ಮೇಯರ್, ಉಪ ಮೇಯರ್ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಗೊಂದಲಗಳು ಮೂಡಿ ಮೈತ್ರಿ ಮುಂದುವರಿಯುವ ಬಗ್ಗೆ ಅನುಮಾನಗಳು ಮೂಡಿದ್ದರೂ, ಪಾಲಿಕೆಯ ಅತಿದೊಡ್ಡ ಪಕ್ಷ ಬಿಜೆಪಿ ಅಧಿಕಾರ ಪಡೆಯುವ ವಿಚಾರದಲ್ಲಿ ನಿರಾಸಕ್ತಿ ಹೊಂದಿದೆ.
ಪ್ರಸ್ತುತ ಮೇಯರ್ ಸ್ಥಾನಕ್ಕೆ ಪಟ್ಟು ಹಿಡಿದಿರುವ ಜೆಡಿಎಸ್ ಮೇಯರ್ ಸ್ಥಾನ ಸಿಗದೇ ಇದ್ದರೆ ಕಾಂಗ್ರೆಸ್ ಜತೆಗಿನ ಸಖ್ಯ ತೊರೆಯುವ ಬೆದರಿಕೆ ಹಾಕಿದೆ. ಹೀಗಾಗಿ ಜೆಡಿಎಸ್ ಪಾಲಿಕೆಯಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವುದೇ ಎಂಬ ಪ್ರಶ್ನೆ ಮೂಡ ತೊಡಗಿದೆ. ಒಂದು ವೇಳೆ ಮೈತ್ರಿ ಮುರಿದರೆ ಜೆಡಿಎಸ್ ಜತೆ ಸೇರಿ ಅಧಿಕಾರ ಗಿಟ್ಟಿಸಿಕೊಳ್ಳುವ ಕೈ ಹಾಕಬಾರದೆಂಬ ತೀರ್ಮಾನವನ್ನು ಬಿಜೆಪಿ ಕೈಗೊಂಡಿದೆ ಎನ್ನಲಾಗಿದೆ.
ಪಾಲಿಕೆಯ ಒಟ್ಟು 198 ಸ್ಥಾನಗಳಲ್ಲಿ ಬಿಜೆಪಿಗೆ 101 ಸ್ಥಾನಗಳು ಲಭ್ಯವಾಗಿದ್ದರೂ ಕಳೆದ ಎರಡು ಮೇಯರ್ ಚುನಾವಣೆ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿವೆ. ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಅಂಶವನ್ನೇ ಮುಂದಿಟ್ಟುಕೊಂಡು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟದ ವಿರುದ್ಧ ಹೋರಾಟಕ್ಕೆ ಬಿಜೆಪಿ ನಿರ್ಧರಿಸಿದೆ. ಹೀಗಾಗಿ ಬಿಬಿಎಂಪಿ ಮೇಯರ್, ಉಪಮೇಯರ್ ಹುದ್ದೆಗಳ ಕಡೆಗೆ ತಲೆ ಹಾಕದಿರಲು ನಿರ್ಧರಿಸಿದೆ.
ಹೋರಾಟಕ್ಕೆ ಅಡ್ಡಿಯಾಗಬಹುದು ಮೈತ್ರಿ ಅಧಿಕಾರ
ಇನ್ನೊಂಡೆದೆ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯರು ತಮ್ಮ ವಿಳಾಸ ಬದಲಿಸಿಕೊಂಡು ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ನಿಯಮಬಾಹಿರವಾಗಿ ನೋಂದಣಿ ಮಾಡಿಸಿಕೊಂಡಿರುವ ವಿಚಾರ ಇದೀಗ ಚುನಾವಣಾ ಆಯೋಗ ಮತ್ತು ವಿಧಾನ ಪರಿಷತ್ ಸಭಾಪತಿಗಳ ಮುಂದಿದೆ. ಆಯೋಗ ಮತ್ತು ಸಭಾಪತಿಗಳು ನೀಡುವ ಆದೇಶ ಆಧರಿಸಿ ಎಂಟು ಮಂದಿ ವಿಧಾನ ಪರಿಷತ್ ಸದಸ್ಯರನ್ನು ಅನರ್ಹಗೊಳಿಸುವಂತೆ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಬಿಜೆಪಿ ಮುಂದಾಗಿದೆ. ಹೀಗಿರುವಾಗ ಮೈತ್ರಿ ಮಾಡಿಕೊಂಡರೆ ಕಾನೂನು ಹೋರಾಟಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣವೂ ಬಿಜೆಪಿ ತೀರ್ಮಾನದ ಮುಂದಿದೆ ಎಂದು ಹೇಳಲಾಗಿದೆ.
ಇದಲ್ಲದೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಪಟ್ಟಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿರುವ ಬಿಜೆಪಿ, ಈ ಸಂದರ್ಭದಲ್ಲಿ ಪಾಲಿಕೆ ಅಕ್ರಮಗಳ ಬಗ್ಗೆಯೂ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲು ನಿರ್ಧರಿಸಿದೆ. ಈ ಆರೋಪಪಟ್ಟಿ ಪಾಲಿಕೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ವಿರುದ್ಧವಾಗಿರುವುದರಿಂದ ಅಕ್ರಮಗಳಲ್ಲಿ ಕೈಜೋಡಿಸಿರುವ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೆ ಆರೋಪಪಟ್ಟಿಯ ಗಂಭೀರ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ಬಿಬಿಎಂಪಿಗಿಂತ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದೇ ಮುಖ್ಯ ಎಂದುಕೊಂಡಿರುವ ಬಿಜೆಪಿ ಮೇಯರ್-ಉಪಮೇಯರ್ ಸ್ಥಾನದಿಂದ ದೂರವಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಬಿಜೆಪಿ ನಿರ್ಧಾರಕ್ಕೆ ಕಾರಣಗಳೇನು?
2006ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಬಿಜೆಪಿ ಕೈಸುಟ್ಟುಕೊಂಡಿತ್ತು. ಈ ಕಾರಣಕ್ಕಾಗಿಯೇ 2015ರಲ್ಲಿ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯುವ ವಿಚಾರವಾಗಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಯಡಿಯೂರಪ್ಪ ನಿರಾಕರಿಸಿದ್ದರು. ಇದರ ಪರಿಣಾಮ ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂದಿತ್ತು. ಇದೀಗ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೂ ಅದು ಈ ಬಾರಿ ಮೇಯರ್ ಸ್ಥಾನ ಕೇಳಿ ಮುಂದಿನ ಬಾರಿ ಬಿಜೆಪಿಗೆ ಬಿಟ್ಟುಕೊಡುವ ಪ್ರಸ್ತಾಪ ಮಾಡಬಹುದು. ನಂತರ ಕೈಕೊಡಬಹುದು ಇಲ್ಲವೇ ಮೇಯರ್ ಸ್ಥಾನ ಬಿಜೆಪಿಗೆ ಬಿಟ್ಟುಕೊಟ್ಟರು ಪ್ರತಿ ಸಂದರ್ಭದಲ್ಲೂ ಬೆದರಿಕೆ ಒಡ್ಡಬಹುದು ಎಂಬ ಕಾರಣಕ್ಕೆ ಜೆಡಿಎಸ್ ಜತೆ ಮೈತ್ರಿಗೆ ಬಿಜೆಪಿ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಬಿಬಿಎಂಪಿಯಲ್ಲಿ ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಕ್ಕಾಗಿ ಜೆಡಿಎಸ್ ಜತೆ ಕೈಜೋಡಿಸಿ ಬಿಜೆಪಿ ಆ ಭ್ರಷ್ಟಾಚಾರದಲ್ಲಿ ಪಾಲುದಾರನಾಗಲು ಇಷ್ಟಪಡುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಬಿಬಿಎಂಪಿ ಆಡಳಿತ ವ್ಯವಸ್ಥೆ ಹದಗೆಟ್ಟಿದ್ದು, ವೆಚ್ಚ ಮಾಡಿದ ಸಾವಿರಾರು ಕೋಟಿ ರೂ. ಇತ್ತೀಚೆಗೆ ಬಿದ್ದ ಮಳೆಗೆ ಕೊಚ್ಚಿಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಬಿಎಂಪಿಯಲ್ಲಿ ಅಧಿಕಾರಕ್ಕೆ ಮೈತ್ರಿ ಮಾಡಿಕೊಂಡು ಕೆಟ್ಟ ಹೆಸರು ತೆಗೆದುಕೊಳ್ಳುವುದಿಲ್ಲ.
-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
* ಎಂ.ಪ್ರದೀಪಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.