ಶೇ.75 ವಿಕಲಚೇತನರಿಗೆ ದ್ವಿಚಕ್ರ ವಾಹನ: ಸಿಎಂ
Team Udayavani, Sep 12, 2017, 7:20 AM IST
ಬೆಂಗಳೂರು: ರಾಜ್ಯದಲ್ಲಿ ಶೇ.75ಕ್ಕಿಂತಲೂ ಹೆಚ್ಚು ಅಂಗವೈಕಲ್ಯವಿರುವವರನ್ನು ಗುರುತಿಸಲು ಸರ್ವೆ ನಡೆಸುವಂತೆ ಸೂಚಿಸಲಾಗಿದ್ದು, ವರದಿ ಪಡೆದು ಅವರಿಗೆಲ್ಲಾ ಇನ್ನು ಮೂರು ವರ್ಷದೊಳಗೆ ಯಂತ್ರಚಾಲಿತ ದ್ವಿಚಕ್ರ ವಾಹನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಧಾನಸೌಧ ಮುಖ್ಯದ್ವಾರದ ಬಳಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಿಸಿ ಅವರು ಮಾತನಾಡಿದರು.
“2011ರ ಗಣತಿ ಪ್ರಕಾರ ರಾಜ್ಯದಲ್ಲಿ 13.24 ಲಕ್ಷ ವಿಕಲಚೇತನರಿದ್ದಾರೆ. ಇದರಲ್ಲಿ ಶೇ.75ಕ್ಕಿಂತಲೂ ಹೆಚ್ಚು ಅಂಗವೈಕಲ್ಯ ಹೊಂದಿರುವವರ ಸಂಖ್ಯೆ 90,000ಕ್ಕೂ ಹೆಚ್ಚು ಎನ್ನಲಾಗಿದ್ದು, ನಿಖರ ಸಂಖ್ಯೆ ತಿಳಿಯಲು ಸಮೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ. ನಿಖರ ಮಾಹಿತಿ ದೊರೆತ ಬಳಿಕ ಎಲ್ಲರಿಗೂ ಮೂರು ವರ್ಷಗಳಲ್ಲಿ ಯಂತ್ರಚಾಲಿತ ದ್ವಿಚಕ್ರ ವಾಹನ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಉದ್ಯೋಗಗಳಿಗೆ ತೆರಳಲು, ಸ್ವಾವಲಂಬಿ ಜೀವನ ನಡೆಸಲು ನೆರವು ನೀಡಲಾಗುವುದು’ ಎಂದು ಹೇಳಿದರು.
ಡಿಸೆಂಬರ್‌ನೊಳಗೆ ವಿತರಣೆಗೆ ಕ್ರಮ
ಕಳೆದ ಆರ್ಥಿಕ ವರ್ಷದಲ್ಲಿ 2000 ದ್ವಿಚಕ್ರ ವಾಹನ ವಿತರಿಸಬೇಕಿತ್ತು. ಎರಡು ಬಾರಿ ಟೆಂಡರ್ ಪ್ರಕ್ರಿಯೆಯಲ್ಲಿ ತೊಂದರೆ ಹಾಗೂ ಕೇಂದ್ರ ಸರ್ಕಾರವು ವಾಹನದ ಮಾದರಿ ಬದಲಾವಣೆ ಮಾಡಿದ್ದರಿಂದ ಸಕಾಲದಲ್ಲಿ ವಿತರಿಸಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ವರ್ಷದಲ್ಲಿ 4000 ವಿಕಲಚೇತನರಿಗೆ ದ್ವಿಚಕ್ರ ವಾಹನ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಡಿಸೆಂಬರ್‌ನೊಳಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
ಇಲಾಖೆಗೆ 2013-14ನೇ ಸಾಲಿನಲ್ಲಿ 647 ಕೋಟಿ ರೂ. ಅನುದಾನವಿತ್ತು. ಈ ವರ್ಷ ಇಲಾಖೆಗೆ 1074 ಕೋಟಿ ರೂ. ಅನುದಾನ ನೀಡಲಾಗಿದೆ. ಆ ಮೂಲಕ ವಿಕಲಚೇತನರು ಇತರರಂತೆ ಜೀವನ ನಡೆಸಲು ಅಗತ್ಯವಿರುವ ಸೌಲಭ್ಯ ಕಲ್ಪಿಸಲಾಗುತ್ತಿದೆ. ಉದ್ಯೋಗದಲ್ಲಿ ಮೀಸಲಾತಿ, ವಿಕಲಚೇತನರನ್ನು ವಿವಾಹವಾದರೆ 50 ಸಾವಿರ ರೂ. ಪ್ರೋತ್ಸಾಹ ಧನ, ದ್ವಿಚಕ್ರ ವಾಹನ ವಿತರಣೆ ಮೂಲಕ ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡಲಾಗುತ್ತಿದೆ. ವಿಕಲಚೇತನರು, ಹಿರಿಯ ನಾಗರಿಕರ ಸಬಲೀಕರಣಕ್ಕೆ ಕೈಗೊಂಡ ಕ್ರಮಗಳನ್ನು ಗುರುತಿಸಿ ಕೇಂದ್ರ ಸರ್ಕಾರ ಕಳೆದ ಸಾಲಿನಲ್ಲಿ ಪ್ರಶಸ್ತಿ ಸಹ ನೀಡಿದೆ ಎಂದು ಹೇಳಿದರು.
ಸಚಿವೆ ಉಮಾಶ್ರೀ ಮಾತನಾಡಿ, ಒಟ್ಟು 14 ಕೋಟಿ ರೂ. ವೆಚ್ಚದಲ್ಲಿ ವಿಕಲಚೇತನರಿಗೆ 2000 ದ್ವಿಚಕ್ರ ವಾಹನ ವಿತರಿಸಲಾಗುತ್ತಿದೆ. ಬೆಂಗಳೂರು ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಸೋಮವಾರ ವಿತರಿಸಲಾಗಿದ್ದು, ಇತರೆ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿತರಿಸಲಿದ್ದಾರೆ ಎಂದು ತಿಳಿಸಿದರು. ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಇತರರು ಉಪಸ್ಥಿತರಿದ್ದರು.
ಸಚಿವರಿಗಾಗಿ ಕಾದು ಕುಳಿತ ಸಿಎಂ!
ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವಿಧಾನಸೌಧದ ಮುಂಭಾಗ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗಾಗಿ ಕಾದು ಕುಳಿತ ಪ್ರಸಂಗ ನಡೆಯಿತು. ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಫಲಾನುಭವಿಗಳು ಸಕಾಲದಲ್ಲಿ ಆಸೀನರಾಗಿದ್ದರು. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸಿದಾಗ ಸಮಯ 11.20 ಕಳೆದಿತ್ತು. ಆ ಹೊತ್ತಿಗೆ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖೀಸಲಾಗಿದ್ದ ಸಚಿವರಾದ ಆರ್.ರೋಷನ್ ಬೇಗ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಚ್.ಎಂ.ರೇವಣ್ಣ ಯಾರೊಬ್ಬರೂ ಇರಲಿಲ್ಲ. ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಿಸಿ ವೇದಿಕೆಗೆ ಬಂದು 10 ನಿಮಿಷ ಕಳೆದ ಬಳಿಕ ಸಚಿವೆ ಉಮಾಶ್ರೀ ಬಂದರು. ನಂತರ ಮುಖ್ಯಮಂತ್ರಿಗಳು ಮಾತನಾಡಿದರು.
ವಿಕಲಚೇತನರ ಪರದಾಟ
ವಿಕಲಚೇತನರಿಗೆ ವಿತರಿಸಲಾದ ಕೆಲ ಯಂತ್ರಚಾಲಿತ ದ್ವಿಚಕ್ರ ವಾಹನಗಳಿಗೆ ಹೆಚ್ಚುವರಿ ಎರಡು ಚಕ್ರಗಳನ್ನು ಸಮತೋಲಿತವಾಗಿ ಅಳವಡಿಸಿರಲಿಲ್ಲ. ಇದರಿಂದ ಚಾಲನೆ ಮಾಡುವಾಗ ಎರಡರಲ್ಲಿ ಒಂದು ನೆಲಮಟ್ಟದಿಂದ ಮೇಲ್ಭಾಗದಲ್ಲಿದ್ದರಿಂದ ಸಮತೋಲನ ಸಾಧಿಸುವುದು ಕಷ್ಟಕರವಾಗಿತ್ತು. ಕೆಲವರು ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿದ್ದು ಕಂಡುಬಂತು. ತಕ್ಷಣವೇ ಸ್ಥಳದಲ್ಲಿದ್ದ ತಾಂತ್ರಿಕ ಸಿಬ್ಬಂದಿ ಚಕ್ರಗಳನ್ನು ಸಮತೋಲನಗೊಳಿಸಿ ಕೊಟ್ಟು ಸುಗಮ ಚಾಲನೆಗೆ ನೆರವಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.