ಬಸವಕಲ್ಯಾಣದಲ್ಲಿ ತಲೆ ಎತ್ತಲಿದೆ ಅನುಭವ ಮಂಟಪ
Team Udayavani, Sep 12, 2017, 6:00 AM IST
ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ವೀರಶೈವ ಮತ್ತು ಲಿಂಗಾಯತರ ನಡುವೆ ಪರ -ವಿರೋಧ ಚರ್ಚೆಗಳು ತಾರಕಕ್ಕೇರಿರುವ ವಿದ್ಯಮಾನದ ನಡುವೆಯೇ, ಅನುಭವ ಮಂಟಪ ಸ್ಥಾಪನೆಗೆ ರಚಿಸಲಾಗಿದ್ದ ತಜ್ಞರ ಸಮಿತಿಯು 12ನೇ ಶತಮಾನದ ಶರಣರು ಮತ್ತು ಪಂಚಾಚಾರ್ಯರ ತತ್ವಗಳ ಆಧಾರದಲ್ಲಿ “ಅನುಭವ ಮಂಟಪ’ ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ವೀರಶೈವರನ್ನು ಹೊರತುಪಡಿಸಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಯಾಗಬೇಕೆಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಹಾಗೂ ಮತ್ತಿತರರು ಹೋರಾಟ ನಡೆಸುತ್ತಿರುವಾಗಲೇ, ಬಸವ ತತ್ವ ಪ್ರತಿಪಾದಿಸುವ 12ನೇ ಶತಮಾನದ ಶರಣರು ಹಾಗೂ ವೀರಶೈವ ಪರಂಪರೆ ಪ್ರತಿಪಾದಿಸುತ್ತಿರುವ ಪಂಚಾಚಾರ್ಯರ ತತ್ವಗಳೆರಡನ್ನೂ ಒಳಗೊಂಡಂತೆ ಹೊಸದಾಗಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಬೇಕೆಂದು ಸಮಿತಿ ವರದಿ ನೀಡಿರುವುದು ಭಿನ್ನರಾಗ ಹಿಡಿದಿರುವ ಲಿಂಗಾಯತ ಧರ್ಮ ಹೋರಾಟಗಾರರಿಗೆ ಒಗ್ಗಟ್ಟಿನ ಸಂದೇಶ ನೀಡಿದಂತಿದೆ.
ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋ.ರು. ಚನ್ನಬಸಪ್ಪ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿ, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ವರದಿ ನೀಡಿದೆ. ವರದಿಯಲ್ಲಿ ಪ್ರಮುಖವಾಗಿ ಬಸವ ಕಲ್ಯಾಣದ ತ್ರಿಪುರಾಂತರ ಕೆರೆ ದಂಡೆಯ 25 ಎಕರೆ ಜಾಗದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು ಶಿಫಾರಸ್ಸು ಮಾಡಲಾಗಿದೆ. ಆ ಪ್ರದೇಶವನ್ನು ಮಹಾಮನೆ ಕ್ಷೇತ್ರ ಎಂದು ಕರೆಯಬೇಕೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅನುಭವ ಮಂಟಪ ಅಸ್ತಿತ್ವದ ಬಗ್ಗೆ ಯಾವುದೇ ಐತಿಹಾಸಿಕ ದಾಖಲೆಗಳು ದೊರೆಯದ ಹಿನ್ನೆಲೆಯಲ್ಲಿ ಹೊಸ ಅನುಭವ ಮಂಟಪವನ್ನು ಕಲ್ಯಾಣರ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲು, ಬೆಂಗಳೂರಿನ ನೇಚರ್ ಆಂಡ್ ನರ್ಚರ್ ಎಂಟರ್ ಪ್ರೈಸಸ್ ಸಂಸ್ಥೆಯವರು ವಿನ್ಯಾಸ ರೂಪಿಸಿದ್ದಾರೆ. ಸಂಪೂರ್ಣ ಶಿಲೆಯಲ್ಲಿ ನಿರ್ಮಾಣವಾಗುವ ಬೃಹತ್ ಕಟ್ಟಡಕ್ಕೆ ಅಂದಾಜು 604 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಸುಮಾರು 4 ರಿಂದ 5 ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.
25 ಎಕರೆ ಮಹಾಮನೆ ಮಧ್ಯ ಭಾಗದಲ್ಲಿ ಎತ್ತರದ ದಿಣ್ಣೆಯ ಮೇಲೆ ಅನುಭವ ಮಂಟಪ ನಿರ್ಮಾಣಕ್ಕೆ 12ನೇ ಶತಮಾನದ ಶರಣರ ಷಟ್‌ಸ್ಥಲ, ಅಷ್ಟಾವರಣ ಮತ್ತು ಪಂಚಾಚಾರ್ಯ ಸಿದ್ದಾಂತಗಳು ಮತ್ತು ಕಾಯಕ, ದಾಸೋಹ, ಅನುಭಾವ ಜೀವನ ಸೂತ್ರಗಳನ್ನು ಅಳವಡಿಸಲಾಗಿದೆ. ವೃತ್ತಾಕಾರದ ಸುಮಾರು 182 ಅಡಿ ಎತ್ತರವಿರುವ 6 ಅಂತಸ್ತುಗಳ ಈ ಕಟ್ಟಡದಲ್ಲಿ ಶರಣರ ಚಿಂತನೆಗೆ ಸಂಬಂಧಿಸಿದ ಮಂಟಪಗಳು, ಅನುಷ್ಠಾನ ಗವಿಗಳು, ವಚನಗಳು, ಕೊರೆದ ಕಂಬಗಳು, ಭಿತ್ತಿ ಚಿತ್ರಗಳು, ಶರಣರ ಉಬ್ಬು ಚಿತ್ರಗಳನ್ನು ಬಿಡಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.
ಮೊದಲ ಅಂತಸ್ತಿನ ವಚನಗಳಲ್ಲಿ ಬರುವ 770 ಅಮರ ಗಣಂಗಳ ಸಂಖ್ಯೆಯ ಸಂಖೇತವಾಗಿ 770 ಆಸನಗಳ ಸಭಾಭವನವಿರುತ್ತದೆ. ಕೆಳ ಅಂತಸ್ತಿನಲ್ಲಿ ಒಟ್ಟಿಗೆ 1500 ಜನ ಊಟ ಮಾಡಲು ಅವಕಾಶವಿರುವ ದಾಸೋಹ ಭವನ ಇರುತ್ತದೆ. ಇದರ ಹೊರತಾಗಿ ಗ್ರಂಥಾಲಯ, ಅತಿಥಿ ಗೃಹ, ಯೋಗ ಕೇಂದ್ರ, ಧ್ಯಾನ ಮಂದಿರ ನಿರ್ಮಾಣ ಮಾಡಲಾಗುವುದು. ಉಳಿದ ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಿ ಶರಣರ ಕಾಯಕ ಮೂರ್ತಿಗಳು, ನೀರಿನ ಕಾರಂಜಿ, ಹೂದೋಟ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಈ ಯೋಜನೆಯಲ್ಲಿ 100 ಅಡಿ ಸುತ್ತಳತೆಯ ಜಗತ್ತಿನಲ್ಲಿಯೇ ಬೃಹತ್ ಎನಿಸುವ ಲಿಂಗಾಕಾರದ ಗೋಪುರ, ಕಟ್ಟಡದ ಒಳಭಾಗದಲ್ಲಿ ನೈಸರ್ಗಿಕ ಗಾಳಿ, ಬೆಳಕಿನ ವ್ಯವಸ್ಥೆ, ಬೇಸಿಗೆಯಲ್ಲಿಯೂ ನೆರವಾಗುವ ಅಂತರ್ ಜಲ ಸಂಗ್ರಹ, ಆಧುನಿಕ ರೋಬೋಟ್‌ಗಳ ವಾಯು ಚಾಲನೆ ವ್ಯವಸ್ಥೆ, ದ್ವಾರಗಳಲ್ಲಿ ಶರಣು ಶರಣಾರ್ಥಿ ಧ್ವನಿ ಮೂಲಕ ಸ್ವಾಗತ ಮಾಡುವ ತಂತ್ರಜ್ಞಾನವನ್ನು ಅಳವಡಿಸಲು ಸಮಿತಿ ಶಿಫಾರಸ್ಸು ಮಾಡಿದೆ.
ಅನುಭವ ಮಂಟಪದಲ್ಲಿ ಮುಂದೆ ವಚನ ವಿಶ್ವ ವಿದ್ಯಾಲಯ ಸ್ಥಾಪನೆಗೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು. ಅನುಭವ ಮಂಟಪಕ್ಕೆ ಎಲ್ಲ ಜಾತಿ ಧರ್ಮದವರೂ ಮುಕ್ತವಾಗಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಸಮಿತಿ ವರದಿಯಲ್ಲಿ ತಿಳಿಸಿದೆ.
ಕಾರ್ಯಕ್ರಮದಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಬೀದರ ಸಂಸದ ಭಗವಂತ ರಾವ್ ಖೂಬಾ, ಬಸವ ಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ, ತಜ್ಞರ ಸಮಿತಿ ಸದಸ್ಯರಾದ ಡಾ. ಸಿ. ವೀರಣ್ಣ, ಡಾ. ಸಿದ್ದರಾಮ ಶರಣರು, ಡಾ. ಸಿದ್ದಲಿಂಗಯ್ಯ, ಪ್ರೊ. ಎಸ್. ಜಿ. ಸಿದ್ದರಾಮಯ್ಯ, ಡಾ. ರಂಜಾನ್ ದರ್ಗಾ ಹಾಗೂ ಅರವಿಂದ್ ಜತ್ತಿ ಹಾಜರಿದ್ದರು.
ಈಗ ಅನುಭವ ಮಂಟಪದ ವರದಿ ಬಂದಿದೆ. ಶರಣರ ಕಾಲದ ಅನುಭವ ಮಂಟಪ ಮಾಡಬೇಕೆನ್ನುವುದು ನನ್ನ ಮನದಾಸೆಯಾಗಿತ್ತು. ಈ ಯೋಜನೆಯನ್ನು ನಾವು ಮಾಡಿಯೇ ಮಾಡುತ್ತೇವೆ. ವರದಿಯನ್ನು ಶೀಘ್ರವೇ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಸಭೆಯ ಮುಂದಿಟ್ಟು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಅನುಭವ ಮಂಟಪ ಯಾವುದೇ ಶೈಲಿಯನ್ನು ಅನುಕರಣೆ ಮಾಡದೇ ನಮ್ಮ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯಲ್ಲಿ ನಿರ್ಮಾಣಕ್ಕೆ ಶಿಫಾರಸ್ಸು ಮಾಡಿದ್ದೇವೆ. ಅದು ಕೇವಲ ಧಾರ್ಮಿಕ ಕೇಂದ್ರ ಆಗದೆ, ವಿಶ್ವ ಮಟ್ಟದ ಪ್ರವಾಸಿ ತಾಣವಾಗಬೇಕು.
– ಗೋ.ರು. ಚನ್ನಬಸಪ್ಪ, ತಜ್ಞರ ಸಮಿತಿ ಅಧ್ಯಕ್ಷ
ಅನುಭವ ಮಂಟಪ ನಿರ್ಮಾಣ ವಿವರ
– ಮಹಾಮನೆ 25-30 ಎಕರೆ ವಿಸ್ತೀರ್ಣ
– ಅನುಭವ ಮಂಟಪ ವಿಸ್ತೀರ್ಣ 7.5 ಎಕರೆ
– ಒಟ್ಟು ಕಟ್ಟಡದ ಎತ್ತರ 182 ಅಡಿ
– ನಿರ್ಮಾಣದ ವೆಚ್ಚ 604 ಕೋಟಿ.
– ನಿರ್ಮಾಣದ ಅವಧಿ-ಸಿಮೆಂಟ್ ಕಟ್ಟಡ 2ರಿಂದ 2.5 ವರ್ಷ-100 ವರ್ಷ ಬಾಳಿಕೆ ಕಲ್ಲಿನ ಕಟ್ಟಡ 4 ರಿಂದ 5 ವರ್ಷ-1000 ವರ್ಷ ಬಾಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
BBMP ಸೇರಿ 11 ಮಸೂದೆ ಮಂಡನೆ? ಡಿ. 9ರ ಬೆಳಗಾವಿ ಅಧಿವೇಶನದಲ್ಲಿ ಮಂಡನೆಗೆ ನಿರ್ಣಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.