ನಿಂತು ಹೋಯಿತು ಅಮೃತಗಾನ
Team Udayavani, Sep 13, 2017, 7:10 AM IST
24 ಎಂಬುದು, ಎಲ್ಲ ಮಕ್ಕಳೂ ಭವಿಷ್ಯದ ಬಗ್ಗೆ ಕನಸು ಕಾಣುವ ವಯಸ್ಸು. ಅಂಥ ವಯಸ್ಸಿನಲ್ಲೇ ಐದು ಸಂಪುಟಗಳಷ್ಟಿದ್ದ ಆತ್ಮಚರಿತ್ರೆ, “ಅಮೃತಯಾನ’ವನ್ನು ಬರೆದು ಮುಗಿಸಿದಳು ಅಮೃತಾ. ಈಕೆ, ಹೆಸರಾಂತ ರಂಗಕರ್ಮಿ ಪ್ರಸಾದ್ ರಕ್ಷಿದಿಯವರ ಸುಪುತ್ರಿ. ಈಕೆಗೆ ಚಿತ್ರಕಲೆಯಲ್ಲಿ ಅಭಿರುಚಿಯಿತ್ತು. ನಾಟಕ ರಚನೆ-ನಿರ್ದೇಶನ-ಅಭಿನಯದಲ್ಲಿ ಆಸಕ್ತಿಯಿತ್ತು. ನೃತ್ಯದಲ್ಲಿ ಪರಿಣತಿಯಿತ್ತು. ಸಾಹಿತ್ಯ ರಚನೆಯೂ ಗೊತ್ತಿತ್ತು. ಅಷ್ಟೇ ಅಲ್ಲ, ರಂಗಭೂಮಿಯಲ್ಲಿ ಷೇಕ್ಸ್‌ಪಿಯರ್‌ನನ್ನು, ಚಿತ್ರಕಲೆಯಲ್ಲಿ ಡಾವಿಂಚಿಯನ್ನು, ಸಾಹಿತ್ಯದಲ್ಲಿ ವರ್ಡ್ಸ್‌ವರ್ತ್‌ನನ್ನು ಸರಿಗಟ್ಟುವಂಥ ಸಾಧನೆ ಮಾಡಬೇಕು ಎಂಬ ಹುಮ್ಮಸ್ಸಿತ್ತು.
ಮತ್ತು, ಈ ಕನಸು ಕಂಗಳ ಈ ಮಗುವಿಗೆ ಪ್ಯಾರಾನಾಯ್ಡ ಸ್ಕಿಜೋಫ್ರೀನಿಯಾ ಎಂಬ ಆರೋಗ್ಯ ಸಂಬಂಧಿ ಸಮಸ್ಯೆಯಿತ್ತು!
ಈ ಸಮಸ್ಯೆ ಇರುವ ಮಕ್ಕಳಿಗೆ, ಉಳಿದೆಲ್ಲರಿಗಿಂತ ಎರಡಲ್ಲ, ನಾಲ್ಕುಪಟ್ಟು ಹೆಚ್ಚು ನೆನಪಿನ ಶಕ್ತಿಯಿರುತ್ತದೆ. ಅತೀ ಅನ್ನುವಷ್ಟರ ಮಟ್ಟಿಗಿನ ಕ್ರಿಯಾಶೀಲತೆ, ಆಕಾಂಕ್ಷೆಗಳಿರುತ್ತವೆ ಮತ್ತು ತನ್ನ ಸುತ್ತಲಿನ ಸಮಾಜ ನನ್ನನ್ನು ಗುರುತಿಸಬೇಕು, ಗೌರವಿಸಬೇಕು, ನಾನು ಹೇಳಿದ್ದನ್ನು ಒಪ್ಪಬೇಕು ಎಂಬ ಸುಪ್ತ ಆಸೆಯಿರುತ್ತದೆ. ಹಾಗೆ ಆಗದಿದ್ದಾಗ, ಈ ಮಕ್ಕಳು ರೇಗುತ್ತವೆ, ಜಗಳಕ್ಕೆ ನಿಂತು ಬಿಡುತ್ತವೆ. ನನಗೆ ಯಾರೂ ರೆಸ್ಪೆಕ್ಟ್ ಕೊಡ್ತಾ ಇಲ್ಲ, ನಾನು ಯಾರಿಗೂ ಬೇಕಾಗಿಲ್ಲ, ನಿಮಗೆಲ್ಲಾ ನಾನಂದ್ರೆ ತುಂಬಾ ಅಸಡ್ಡೆ…ಎಂದು ದೂರುತ್ತವೆ. ನಮಗೆ ಸ್ವಂತ ಅಸ್ತಿತ್ವವೇ ಇಲ್ಲವೇನೋ ಎಂಬ ದಿಗಿಲಿಗೆ ಬೀಳುತ್ತವೆ. ತರ್ಕಾತೀತ ಭಾವನೆಗಳನ್ನು ಜೊತೆಗಿಟ್ಟುಕೊಂಡು ಕಂಗಾಲಾಗುತ್ತವೆ. ಮತ್ತು, ಅದೇ ಕೊರಗಿನಲ್ಲಿ ಯೋಚಿಸಿ ಯೋಚಿಸಿ ಯೋಚಿಸಿ ಸುಸ್ತಾಗುತ್ತವೆ. ಡಿಪ್ರಷನ್‌ಗೆ ತುತ್ತಾಗುತ್ತವೆ.
ಪೂರ್ತಿ 20 ವರ್ಷ ಇಂಥ ಸಮಸ್ಯೆಯೊಂದಿಗೇ ಬದುಕಿದವಳು ಅಮೃತಾ. ಎಲ್ಲ ತೊಂದರೆಗಳ ನಡುವೆಯೂ ಆಕೆ ದಿ ಬೆಸ್ಟ್ ಅನ್ನುವಂಥ ಪೇಂಟಿಂಗ್ ಮಾಡಿದಳು. ಪ್ರಶಸ್ತಿ ಪಡೆಯುವಂಥ ನಾಟಕ ನಿರ್ದೇಶಿಸಿದಳು, ನಟಿಸಿದಳು. ಪ್ರಸಿದ್ಧ ಸಾಹಿತಿಗಳೆಲ್ಲ ಬೆರಗಾಗುವಂತೆ ಕವಿತೆ ಬರೆದಳು. ಅಷ್ಟೇ ಅಲ್ಲ, ತನ್ನ 24 ವರ್ಷದ ಜೀವನಕಥನವನ್ನು ತುಂಬ ಪ್ರಾಮಾಣಿಕತೆಯಿಂದ ಬರೆದೂಬಿಟ್ಟಳು. ಇಂಥ ಅಪರೂಪದ, ವಿಶಿಷ್ಟ ಹಿನ್ನೆಲೆಯ ಅಮೃತಾ, ಆ ಪುಸ್ತಕ ಪ್ರಕಟವಾಗುವ ಮೊದಲೇ ಈ ಜಗತ್ತಿಗೆ ಗುಡ್‌ಬೈ ಹೇಳಿ ಹೋಗಿಬಿಟ್ಟಿದ್ದಾಳೆ. ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದ್ದ ಆಕೆಯ ಅಗಲಿಕೆಯ ನೋವನ್ನು ತಾಳಿಕೊಳ್ಳುವ ಶಕ್ತಿ ರಕ್ಷಿದಿ ದಂಪತಿಗೆ ಬರಲಿ ಎಂದು ಪ್ರಾರ್ಥನೆ. ಕನಸು ಕಂಗಳ ಅಮೃತಾಳನ್ನು ಪದೇಪದೆ ನೆನಪು ಮಾಡಿಕೊಳ್ಳುತ್ತಲೇ “ಅಮೃತಯಾನ’ ಪುಸ್ತಕದ ಒಂದು ಅಧ್ಯಾಯವನ್ನು ನೀಡುತ್ತಿದ್ದೇವೆ.
ಕಾಮಾಕ್ಷಿ ಆಸ್ಪತ್ರೆಯ ಅÂಂಬುಲೆನ್ಸ್ ಬಂದು ಅಮೃತಾಳನ್ನು ಕರೆದುಕೊಂಡು ಹೋಯಿತು. ಅಲ್ಲಿ ಯಾರೋ ಮಾನಸಿಕ ತಜ್ಞರು ಬಂದು ಅಮೃತಾಳನ್ನು ನೋಡಿದರು. ಅಲ್ಲಿ ನರ್ಸ್ ಒಬ್ಬಳು ಇಂಜೆಕ್ಷನ್ ಕೊಡಲು ಬಂದಾಗ ಅಮೃತಾ ಅವಳ ಕೆನ್ನೆಗೆ ಹೊಡೆದುಬಿಟ್ಟಳು. ಇಂಜಕ್ಷನ್ ನೀಡಿದರೂ ಅಮೃತಾ ನಿದ್ದೆ ಮಾಡಲಿಲ್ಲ. ಏನೇನೋ ಕನವರಿಸುತ್ತಿದ್ದಳು. ಬೆಳಗ್ಗೆ ಅಣ್ಣಯ್ಯ ಮತ್ತು ಅಪ್ಪ ಇಬ್ಬರೂ ಬಂದಿದ್ದರು. ಅಣ್ಣಯ್ಯ ಅಮೃತಾಳ ತಲೆ ಸವರುತ್ತಾ ಅವಳ ಪಕ್ಕದಲ್ಲಿಯೇ ಕುಳಿತಿದ್ದ.
ಅಪ್ಪ, ಸುರೇಶ ಮಾವನ ಗೆಳೆಯ ಶ್ರೀಧರಮೂರ್ತಿಯವರಲ್ಲಿ ಮಾತನಾಡಿದ್ದರು. ಅವರು ಅಮೃತಾಳನ್ನು ಬೆಂಗಳೂರಿನ ಸ್ಪಂದನ ಆಸ್ಪತ್ರೆಗೆ ಸೇರಿಸಲು ಹೇಳಿದ್ದರು. ಮರುದಿನ ಬೆಳಗ್ಗೆ ಅಪ್ಪ, ಅಮ್ಮ, ಅತ್ತೆ, ಮಾವ, ಅಣ್ಣಯ್ಯ ಎಲ್ಲರೂ ಅಮೃತಾಳನ್ನು ಟ್ಯಾಕ್ಸಿಯಲ್ಲಿ, ಬೆಂಗಳೂರಿಗೆ ಕರೆದೊಯ್ದರು.
ಬೆಂಗಳೂರಿಗೆ ಅವರೆಲ್ಲರೂ ಬೆಂಗಳೂರಿನ ರಾಜಾಜಿನಗರದಲ್ಲಿರುವ ಸ್ಪಂದನ ಆಸ್ಪತ್ರೆಗೆ ಬಂದರು. ಸ್ವಲ್ಪ ಹೊತ್ತಿನಲ್ಲೇ ಶ್ರೀಧರಮೂರ್ತಿಯವರೂ ಅಲ್ಲಿಗೆ ಬಂದರು. ನಂತರ ಅಲ್ಲಿನ ಕ್ರಮಗಳನ್ನೆಲ್ಲಾ ವಿವರಿಸಿ, ಚೀಟಿ ಬರೆಸಿ “ನಾನು ಡಾಕ್ಟರ್ ಮಹೇಶ್ ಹತ್ರ ಮಾತಾಡಿದ್ದೀನಿ. ಅವರೇ ನೋಡ್ತಾರೆ’ ಎಂದರು. ಅವರೆಲ್ಲಾ ಕಾಯುತ್ತ ಕುಳಿತರು. ಸ್ವಲ್ಪ ಹೊತ್ತಿನಲ್ಲಿ ಅಮೃತಾಳ ಹೆಸರಿಗೊಂದು ಫೈಲ್ ತಯಾರಾಗಿ ಬಂತು. ಯಾರೋ ಸೈಕಾಲಜಿಸ್ಟ್, ಅವಳನ್ನು, ಅಪ್ಪ- ಅಮ್ಮನನ್ನೂ ಕೂರಿಸಿಕೊಂಡು ಒಂದು ಗಂಟೆಯ ಕಾಲ ವಿವರಗಳನ್ನೆಲ್ಲಾ ಕೇಳಿದರು. ಅಪ್ಪ ಹಳೆಯ ಚಿಕಿತ್ಸೆಯ ಪತ್ರಗಳನ್ನೆಲ್ಲಾ ತೋರಿಸುತ್ತಿದ್ದರು. ಅಮೃತಾ ಕೇಳಿದ ಕೆಲವಕ್ಕೆ ಉತ್ತರ ಕೊಟ್ಟಳು. ಒಮ್ಮೆ ಇದೆಲ್ಲಾ ಮುಗಿದರೆ ಸಾಕೆನಿಸುತ್ತಿತ್ತು.
ಮಧ್ಯಾಹ್ನ ಊಟ ಮಾಡಿ ಬರೋಣವೆಂದು ಶ್ರೀಧರಮೂರ್ತಿಯವರೇ ಹತ್ತಿರ ಒಂದು ಹೋಟೆಲಿಗೆ ಕರೆದುಕೊಂಡು ಹೋದರು. ಅಲ್ಲಿ ಊಟದಲ್ಲಿ ಪಲ್ಯ ಹಳಸಿ ಹೋಗಿತ್ತು. ಅಮೃತಾ ಅದನ್ನೂ ತಿಂದಳು. ಶ್ರೀಧರಮೂರ್ತಿಯವರು “ಏನಯ್ನಾ, ಇದು ಹಳಸಿದೆ ಸರಿಯಾಗಿ ನೋಡೋಕಾಗಲ್ವ?’ ಎಂದು ಗದರಿದರು. ನಂತರ ಅಮೃತಾಳಿಗೆ “ಚೆನ್ನಾಗಿಲ್ಲದಿದ್ರೆ ಚೆನ್ನಾಗಿಲ್ಲ ಅನ್ಬೇಕು, ಚೆನ್ನಾಗಿದ್ರೆ ಊಟ ಚೆನ್ನಾಗಿದೆ ಅಂತ ಕಾಂಪ್ಲಿಮೆಂಟ್ ಮಾಡ್ಬೇಕು’ ಎಂದರು. ಅಮೃತಾಳ ಮನಸ್ಸು ಇನ್ನೆಲ್ಲೋ ಇತ್ತು. ಅವಳು “ಆ ಆಸ್ಪತ್ರೆಯಲ್ಲಿ ಡಾಕ್ಟರು ಯಾಕೆ ಲಾಯರ್ ಥರ ಪ್ರಶ್ನೆ ಮಾಡ್ತಾರೆ?’ ಎಂದಳು. “ಅವ್ರನ್ನೇ ಕೇಳು’ ಎಂದರು ಶ್ರೀಧರಮೂರ್ತಿ. ನಂತರ ಎಲ್ಲರೂ ಆಸ್ಪತ್ರೆಗೆ ಬಂದರು.
ಅಮೃತಾಳ ಸರದಿ ಬಂದಾಗ ಅವರೆಲ್ಲರೂ ಡಾಕ್ಟರ್ ಕೊಠಡಿಯೊಳಕ್ಕೆ ಹೋದರು. ಅಲ್ಲಿ ಒಬ್ಬ ವಯಸ್ಸಾದ ವ್ಯಕ್ತಿಯೂ ಒಬ್ಬ ಯುವಕನೂ ಕುಳಿತಿದ್ದರು. ವಯಸ್ಸಾದ ವ್ಯಕ್ತಿಯೇ ಡಾಕ್ಟರ್ ಎಂದುಕೊಂಡಳು ಅಮೃತಾ. ಅವರು ಸುಮ್ಮನೇ ಕುಳಿತಿದ್ದರು. ಆ ಯುವಕನೇ ಫೈಲನ್ನು ಹಿಡಿದುಕೊಂಡು ಪ್ರಶ್ನೆಗಳನ್ನು ಕೇಳುತ್ತಾ ಹೋದರು. ಕೊನೆಗೆ ಇವಳನ್ನು ಅಡ್ಮಿಟ್ ಮಾಡಿಕೊಳ್ಳುತ್ತೇನೆ ಎಂದರು. ಆ ಯುವಕನೇ ಡಾ. ಮಹೇಶ್ ಆಗಿದ್ದರು.
ಮರುದಿನ ವಾರ್ಡಿಗೆ ಬಂದಾಗಲೂ ಡಾಕ್ಟರ್ ಅನೇಕ ಪ್ರಶ್ನೆಗಳನ್ನು ಕೇಳಿದರು. ಅಮೃತಾ ಬರೆದಿದ್ದ ಚಿತ್ರಗಳನ್ನು ಅಪ್ಪ ಅಲ್ಲಿಗೆ ತಂದಿದ್ದರು. ಅವುಗಳನ್ನೆಲ್ಲಾ ಡಾಕ್ಟರಿಗೆ ತೋರಿಸಿದರು. “ಮಳೆ ಬೀಳುವ, ರಾಂಚಿ’ ಎಂದು ಬರೆದಿದ್ದ ಚಿತ್ರವನ್ನು ಇದೇನೆಂದು ಕೇಳಿದರು. ಆಗ ಅಪ್ಪ “ಅವಳು ಧೋನಿಯ ಫ್ಯಾನ್. ಅದಕ್ಕೇ ಹೀಗೆ ಬರೆದಿದ್ದಾಳೆ’ ಎಂದರು. ಡಾಕ್ಟರ್ ನಕ್ಕರು. ಇನ್ನೊಂದು ಮೋಹಿನಿ ಚಿತ್ರ ಬರೆದು 988678888 ಎಂದು ಫೋನ್ ನಂಬರ್ ಬರೆದಿದ್ದ ಚಿತ್ರವನ್ನು ನಿಂತು ಗಮನಿಸಿದರು.
ನಂತರ ಡಾಕ್ಟರ್ “ಇವಳ ಸೈಕೋಮೆಟ್ರಿ ಮಾಡಿಸಬೇಕು’ ಎಂದು ಬರೆದುಕೊಟ್ಟರು. ಅಂದು ಸಂಜೆ ಸೀಮಂತಿನಿ ಎಂಬ ಸೈಕಾಲಜಿಸ್ಟರ ಬಳಿ ಅಮೃತಾಳನ್ನು ಕರೆದುಕೊಂಡು ಹೋದರು. ಅದು ಆಸ್ಪತ್ರೆಯ ಕೆಳ ಅಂತಸ್ತಿನಲ್ಲಿತ್ತು. ಮತ್ತೆ ಅಲ್ಲಿಯೂ ಪ್ರಶ್ನಾವಳಿ ಪ್ರಾರಂಭವಾಯಿತು. ಅಮೃತಾ ತನಗೆ ಆಗುತ್ತಿರುವ ಭಯ, ಹಿಂಜರಿಕೆ, ಎಲ್ಲವನ್ನೂ ಹೇಳಿದಳು. ಆದರೆ ಅವಳಿಗೆ ಆಗಾಗ ಉಂಟಾಗುವ ವಿಚಿತ್ರ ಭಾವನೆಗಳನ್ನು ಮತ್ತು ಧೋನಿಯ ಬಗೆಗೆ ಅಥವಾ ಇನ್ನಾರದೋ ಬಗೆಗೆ ಉಂಟಾಗುವ ಭಾವನೆಗಳನ್ನು ಹೇಳಲು ತಿಳಿಯಲೇ ಇಲ್ಲ. ಮಾರನೆಯ ದಿನ ಸೀಮಂತಿನಿ ಒಂದು ಬುಕ್‌ಲೆಟ್ಟನ್ನು ಕೊಟ್ಟರು. ಅದರಲ್ಲಿ ಸಿ.ಇ.ಟಿ ಮಾದರಿಯಂತೆ ಪ್ರಶ್ನೆಗಳಿಗೆ ಉತ್ತರಗಳನ್ನು ತುಂಬಬೇಕಿತ್ತು. ಅದರಲ್ಲಿ, “ಮಂಗಳವಾರದ ಹಿಂದಿನ ದಿನ ಯಾವುದು’ ತರಹದ ತೀರಾ ಸಾಮಾನ್ಯ ಪ್ರಶ್ನೆಗಳಿದ್ದವು. ಹಾಗೆಯೇ ಕೆಲವು ಚಿತ್ರಗಳನ್ನು ಕೊಟ್ಟು ಅದಕ್ಕೆ ಸರಿಹೊಂದುವಂತೆ ಕಥೆ ಬರೆಯುವುದೂ ಇತ್ತು.
ಮೊದಲನೆಯದಾಗಿ “ಒಂದು ನೀರಿನಲ್ಲಿ ತೇಲುವ ಒಂಟಿ ದೋಣಿಯಿತ್ತು. ಅದಕ್ಕೆ ಮೊದಲು ಈ ಪರಿಸರದಲ್ಲಿ ಎಲ್ಲವೂ ಇತ್ತು ಈಗ ಎಲ್ಲಾ ಬರಿದಾಗಿದೆ. ಕಾಡು, ನದಿ ಎಲ್ಲಾ ಹಾಳಾಗಿದೆ. ನೆಮ್ಮದಿ ಇಲ್ಲ. ಶುಖ, ಶಾಂತಿ ಇಲ್ಲ. ಯಾವುದೂ ಇಲ್ಲ ಬದುಕು ಒಂಟಿ ದೋಣಿಯಾಗಿದೆ’ ಎಂದು ಬರೆದಳು. ಎರಡನೆಯದು ಗಂಡ ಹೆಂಡತಿ ಕೋಣೆಯಲ್ಲಿ ಸರಸವಾಡುವ ಚಿತ್ರ. ಪಕ್ಕದಲ್ಲಿ ಕಿಟಿಕಿಯಿಂದ ಇನ್ನೊಬ್ಬ ಹೆಂಗಸು ಅದನ್ನು ನೋಡಿ ಅಳುವ ಚಿತ್ರ. “ಆ ಹೆಂಗಸಿನ ಗಂಡ ತೀರಿಕೊಂಡಿದ್ದಾನೆ. ಬೇರೆ ದಂಪತಿಯ ಸರಸವನ್ನು ನೋಡಿ ಆಕೆ ತಾನು ಕಳೆದುಕೊಂಡಿರುವುದನ್ನು ನೆನೆದು ಹಳೆಯದೆಲ್ಲ ನೆನಪಾಗಿ ಅಳುತ್ತಿದ್ದಾಳೆ.’ ಎಂದು ಬರೆದಳು. ಹೀಗೆ ಎಲ್ಲವನ್ನೂ ಬೇಗ ಬರೆದು ಮುಗಿಸಿದಳು.
ನಂತರ ಮಾರನೆಯ ದಿನಕ್ಕೆ ಡಾಕ್ಟರ್ ಕೆಲವು ಕೆಲಸಗಳನ್ನು ಹೇಳಿದರು. “ನೀನೇ ಹೊರಗೆ ಹೋಗಿ ಅಂಗಡಿಯಿಂದ ಒಂದು ನೋಟ್ ಬುಕ್ ತರಬೇಕು. ಅದರಲ್ಲಿ ನೀನು ಪ್ರತಿಯೊಂದು ಕೆಲಸ ಮಾಡುವಾಗಲೂ ಆದ ಅನುಭವಗಳನ್ನು ಬರೆಯಬೇಕು. ಭಯವಾದರೆ ಶೇಕಡ ಎಷ್ಟೆಂಬುದನ್ನೂ ಬರೆಯಬೇಕು. ಮತ್ತು ನಿನ್ನ ಕೆಲಸಕ್ಕೆ ನೀನೇ ಅಂಕಗಳನ್ನು ಕೊಡಬೇಕು’ ಎಂದರು. ಅಮೃತಾಳಿಗೆ ಅವರ ಮಾತುಗಳಿಂದ ಸಮಾಧಾನವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.