ಸಹಸ್ರ ಗೌರಿಯರ ಬೆಸೆದ ಗೌರಿ
Team Udayavani, Sep 13, 2017, 11:26 AM IST
ಬೆಂಗಳೂರು: “ನಾನು ಗೌರಿ..ನಾವು ಗೌರಿ.. ನಾವೆಲ್ಲರೂ ಗೌರಿ’ “ವ್ಯಕ್ತಿಯನ್ನು ಹತ್ಯೆ ಮಾಡಬಹುದು, ವಿಚಾರವನ್ನಲ್ಲ’ “ಬಂಧಿಸಿ..ಬಂಧಿಸಿ, ಆರೋಪಿಗಳನ್ನು ಬಂಧಿಸಿ’ ಇದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿರೋಧ ಸಮಾವೇಶ ಹಾಗೂ ಮೆರವಣಿಗೆಯ ಉದ್ಧಕ್ಕೂ ಕೇಳಿಬಂದ ಆಕ್ರೋಶದ ಧ್ವನಿ.
ಜತೆಗೆ ಮೆರವಣಿಗೆ ಹಾಗೂ ಸಮಾವೇಶದ ಪ್ರಾರಂಭದಿಂದ ಕೊನೆವೆರೆಗೂ “ಗೌರಿ ಹತ್ಯೆ ಹಂತಕರ ಪತ್ತೆ’ ಮಾಡಿ ಎಂಬ ಹಕ್ಕೊತ್ತಾಯ ನಿರಂತರವಾಗಿ ಕೇಳಿಬರುತ್ತಿತ್ತು. “ನಾನು ಗೌರಿ, ವ್ಯಕ್ತಿಯನ್ನು ಕೊಲ್ಲಬಹುದು… ವಿಚಾರಧಾರೆಯನ್ನಲ್ಲ’ ಎಂಬ ಫಲಕಗಳನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಎತ್ತಿ ಹಿಡಿದು ಗೌರಿ ಲಂಕೇಶ್ ರೇಖಾಚಿತ್ರ ಇರುವ ಕಪ್ಪು ಪಟ್ಟಿ ಕಟ್ಟಿಕೊಂಡು ಹೋರಾಟದ ಕಿಚ್ಚು ಪ್ರದರ್ಶಿಸಿದರು.
ವಿದ್ಯಾರ್ಥಿಗಳು, ಕಾರ್ಮಿಕರು, ಲೈಂಗಿಕ ಅಲ್ಪಸಂಖ್ಯಾತರು, ಶ್ರಮಿಕ ವರ್ಗ, ಚಿಂತಕರು,ಸಾಹಿತಿಗಳು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಸೇರಿದಂತೆ ನಾನಾ ವರ್ಗದವರು ಸಹಸ್ರಾರು ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕೊಡೆಗಳ ಮೂಲಕ ಪ್ರತಿರೋಧ ಗೋಪುರ ಮಾಡಿ, ಕೊಡೆಗಳ ಮೇಲೆ ಸಂದೇಶ ಬಿಡಿಸಿ ಆ ಮೂಲಕ ಹಂತಕರ ಬಂಧನಕ್ಕೆ ಆಗ್ರಹಿಸಿದ್ದು ವಿಶೇಷವಾಗಿತ್ತು.
ಪ್ರತಿರೋಧ ಸಮಾವೇಶಕ್ಕೂ ಪೂರ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಸೆಂಟ್ರಲ್ ಕಾಲೇಜು ಮೈದಾನದ ತನಕ ಬೃಹತ್ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಎಲ್ಲರೂ ಕಪ್ಪುಬಟ್ಟೆ ಕಟ್ಟಿಕೊಂಡು, ಕಪ್ಪು ಛತ್ರಿ ಹಿಡಿದು, ಹತ್ಯೆಯನ್ನು ಖಂಡಿಸಿ, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಮೆರವಣಿಗೆಯ ಉದ್ಧಕ್ಕೂ “ನಾನು ಗೌರಿ, ನಾವು ಗೌರಿ’ ಎಂದು ಬರೆದಿರುವ ಪೋಸ್ಟರ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ಸಾಗಿದರು.
ಸುತ್ತಲೂ ಗೌರಿ ಲಂಕೇಶ್ ಅವರ ಭಾವಚಿತ್ರ ರಾರಾಜಿಸುತ್ತಿತ್ತು. ಗೌರಿ ಲಂಕೇಶ್ ಕುರಿತ ಹೋರಾಟ ಗೀತೆಗಳನ್ನು ಹಾಡಿದರು. ಕೋಮು ಸೌಹಾರ್ದ ವೇದಿಕೆ, ಜನಶಕ್ತಿ ಕೇಂದ್ರ, ಎಸ್‌ಡಿಪಿಐ, ದಲಿತ ಸಂಘರ್ಷ ಸಮಿತಿ, ಕಮ್ಯೂನಿಸ್ಟ್ ಪಕ್ಷ, ಪ್ರಾಂತ ರೈತ ಸಂಘ, ಆಮ್‌ಆದ್ಮಿ ಪಾರ್ಟಿ, ಸ್ವರಾಜ್ ಇಂಡಿಯಾ, ವೆಲ್ಫ್ವೇರ್ ಪಾರ್ಟಿ ಆಫ್ ಇಂಡಿಯಾ, ಎಡಪಕ್ಷಗಳು, ವಿವಿಧ ವಿದ್ಯಾರ್ಥಿ ಸಂಘಟನೆಗಳು, ಮುಸ್ಲಿಂ ಸಂಘಟನೆಗಳು ಪ್ರತಿರೋಧ ಸಮಾವೇಶಕ್ಕೆ ಬೆಂಬಲ ಸೂಚಿಸಿದ್ದರು.
ಸಮಾವೇಶದಲ್ಲಿ ಚಿದಾನಂದ ರಾಜಘಟ್ಟ: ಗೌರಿ ಲಂಕೇಶ್ ವಿಚ್ಛೇದಿತ ಪತಿ ಚಿದಾನಂದ ರಾಜಘಟ್ಟ ಪತ್ನಿ ಸಮೇತ ಸಮಾವೇಶದಲ್ಲಿ ಭಾಗವಹಿಸಿದ್ದರು. ರಾಜಘಟ್ಟ ಹಾಗೂ ಅವರ ಪತ್ನಿ ಸಮಾವೇಶಕ್ಕಾಗಿಯೇ ಅಮೆರಿಕಾದಿಂದ ಬಂದಿದ್ದರು. ಸಾಮಾನ್ಯರಂತೆ ಕಾರ್ಯಕರ್ತರ ಮಧ್ಯೆ ಕುಳಿತು ಸಮಾವೇಶದಲ್ಲಿ ಭಾಗಿಯಾಗಿದ್ದರು.
ಪೆರಿಯಾರ್ ಪ್ರಶಸ್ತಿ: ಹತ್ಯೆಯಾಗಿರುವ ಗೌರಿ ಲಂಕೇಶ್‌ಗೆ ಪೆರಿಯಾರ್ ಅವರ 130ನೇ ಜನ್ಮದಿನಾಚರಣೆಯ ಅಂಗವಾಗಿ ಪೆರಿಯಾರ್ ಪ್ರಶಸ್ತಿ ಘೋಷಣೆ ಮಾಡಿದೆ. ಸೆ.17ರಂದು ನಗರದ ಕಾನಿಷ್ಕ ಹೋಟೆಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೌರಿ ಅವರ ಕುಟುಂಬ ಸದಸ್ಯರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕೋಮುವಾದಿಗಳನ್ನು ಅಧಿಕಾರಕ್ಕೆ ತಂದು ಕೈಕೊಟ್ಟು ಹಗ್ಗ ಕಟ್ಟಿಸಿಕೊಂಡಂತಾಗಿದೆ. ಕಾಂಗ್ರೆಸ್ ಕುದಿಯುವ ನೀರು ಇದ್ದಂತೆ. ಪ್ರಾದೇಶಿಕ ಪಕ್ಷಗಳು ನಿಂತ ನೀರು, ಎಡಪಕ್ಷಗಳು ಶುದ್ಧ ನೀರು, ಆದರೆ ಅದು ಪಾತಾಳಗಂಗೆ ಇದ್ದಂತೆ ಆ ನೀರು ಕುಡಿಯಲು ಸಿಗುವುದಿಲ್ಲ. ಬಿಜೆಪಿ ಬೆಂಕಿ ಇದ್ದಂತೆ. ಈ ಕುದಿಯವ ನೀರು, ನಿಂತ ನೀರು ಹಾಗೂ ಶುದ್ಧ ನೀರು ಸೇರಿ ಬೆಂಕಿ ಆರಿಸುವ ಕೆಲಸ ಮಾಡಬೇಕಾಗಿದೆ.
-ವೀರಭದ್ರಚನ್ನಮಲ್ಲ ಸ್ವಾಮೀಜಿ, ನಿಡುಮಾಮಿಡಿ ಮಠ
ಗೌರಿ ಹತ್ಯೆ ನಮ್ಮನ್ನೆಲ್ಲ ಕಲಕಿದೆ. ದ್ವೇಷ ಬೆಳೆಸುವ ರಾಜಕೀಯ ಪಕ್ಷ ಹಾಗೂ ಧರ್ಮಗಳು ನಮಗೆ ಬೇಕಿಲ್ಲ. ಇದರ ವಿರುದ್ಧ ಗದಾಪ್ರಹಾರ ಮಾಡಬೇಕಾಗಿದೆ. ತೇಪೆ ಹಚ್ಚುವ ಕೆಲಸ ಆಗಬಾರದು. ಸುಧಾರಣೆಯ ಮನ್ವಂತರ ಆರಂಭಿಸಬೇಕಾಗಿದೆ. ಕ್ರಾಂತಿ ಎಂದರೆ ರಕ್ತ ಕ್ರಾಂತಿ ಎಂಬ ಭ್ರಾಂತಿ ಬೇಡ. ಮನಸ್ಸುಗಳ ಪರಿವರ್ತನೆಯ ಕ್ರಾಂತಿ ಆಗಬೇಕು.
-ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ
ಕಲಬುರ್ಗಿ ಮತ್ತು ಗೌರಿಯ ಹತ್ಯೆ ಮಾಡಿದವರು ಸಂತೋಷಪಡುತ್ತಿದ್ದಾರೆ. ಈ ಸಾವು ಇತಿಹಾಸ ಪುಟಗಳಲ್ಲಿ ದಾಖಲಾಗುತ್ತದೆ. ಇದರಿಂದ ನೊಂದು-ಬೆಂದುಕೊಳ್ಳುವುದು ಬೇಡ. ಪುರೋಹಿತಶಾಹಿ ಮುಕ್ತ ಭಾರತ ನಿರ್ಮಾಣದ ಸಂಕಲ್ಪ ಮಾಡೋಣ.
-ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ
ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚುವ ಪ್ರಾಮಾಣಿಕ ಕೆಲಸ ಸರ್ಕಾರ ಮಾಡುತ್ತಿರಬಹುದು. ಆದರೆ, ಆರೋಪಿಗಳು ಪತ್ತೆಯಾಗುತ್ತಾರೆ ಎಂಬ ಖಾತರಿ ಇಲ್ಲ.
-ಎ.ಕೆ. ಸುಬ್ಬಯ್ಯ, ಹಿರಿಯ ವಕೀಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.