ಪ್ರದಕ್ಷಿಣೆಯಲ್ಲಿ ನೆರೆ ಅವಲೋಕನ
Team Udayavani, Sep 14, 2017, 3:27 PM IST
ಬೆಂಗಳೂರು: ಇತ್ತೀಚೆಗೆ ನಗರದಲ್ಲಿ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಿಗದಿತಗಿಂತ ಒಂದು ಗಂಟೆ ತಡವಾಗಿ ಆರಂಭವಾದ ಮುಖ್ಯಮಂತ್ರಿಗಳ ನಗರ ಪ್ರದಕ್ಷಿಣೆ ವೇಳೆ ಕೆಲವೆಡೆ ಸಾರ್ವಜನಿಕರು ಮಾತ್ರವಲ್ಲದೆ ಮುಖ್ಯಮಂತ್ರಿಗಳು ಸಹ ದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಯಿತು. ಪರಿಣಾಮ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೂ ಕೆಲವೆಡೆ ಅಡ್ಡಿಯಾಯಿತು. ಮುಖ್ಯಮಂತ್ರಿಗಳೇ ಪ್ರಯಾಣಿಸುತ್ತಿದ್ದ ಬಿಎಂಟಿಸಿ ವೋಲ್ವೊ ಬಸ್ ಎರಡು ಬಾರಿ ಕೆಟ್ಟು ನಿಂತ ಕಾರಣಕ್ಕೆ ನಗರ ಪ್ರದಕ್ಷಿಣೆ ಮೊಟಕುಗೊಂಡಿತು. ಮೊದಲಿಗೆ ಜೆಸಿ ರಸ್ತೆಯ ಕುಂಬಾರ ಗುಂಡಿಗೆ ಸಿಎಂ ಭೇಟಿ ಕೊಟ್ಟರು. ಅಲ್ಲಿ ರಾಜಕಾಲುವೆಯ ಮಾರ್ಗ ಬದಲಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪರಿಶೀಲಿಸಿದರು. ರಾಜಕಾಲುವೆ ಜಾಗದಲ್ಲಿ ಮೂರು ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಪ್ರತಿಬಾರಿ ಮಳೆ ಬಂದಾಗ ನೀರು ಸಮರ್ಪಕವಾಗಿ ಹರಿಯದೇ ಹಿಮ್ಮುಖವಾಗಿ ಹರಿದು ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಹೀಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ
ಎಂದು ಸ್ಥಳೀಯ ಶಾಸಕ ಆರ್.ವಿ.ದೇವರಾಜ್ ಸಿಎಂಗೆ ಮಾಹಿತಿ ನೀಡಿದರು. ಅದಕ್ಕೆ ಮುಖ್ಯಮಂತ್ರಿಗಳು, ಕಟ್ಟಡಗಳಿಗೆ ಸೂಕ್ತ ಮೌಲ್ಯವನ್ನು ನಿಗದಿಪಡಿಸಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ ಸತತವಾಗಿ ಪ್ರವಾಹಕ್ಕೆ ಸಿಲುಕುವ ಶಾಂತಿನಗರ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಡಿಪೋ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ ಸಮಸ್ಯೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. “ಶಾಂತಿನಗರ ಬಸ್ ನಿಲ್ದಾಣ ಪ್ರದೇಶ ರಾಜಕಾಲುವೆಗಿಂತ ಕೆಳಮಟ್ಟದಲ್ಲಿರುವದರಿಂದ ಸಮಸ್ಯೆಯಾಗುತ್ತಿದೆ. ಜತೆಗೆ ಈ ಭಾಗದ ಮನೆಯವರು ಒಳಚರಂಡಿ ನೀರನ್ನು ನೇರವಾಗಿ ರಾಜಕಾಲುವೆಗೆ
ಹರಿಸುತ್ತಿದ್ದು, ಮಳೆಯಿಂದ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದಾಗ ನೀರು ಮನೆಗಳಿಗೆ ಹಿಮ್ಮುಖವಾಗಿ ಹರಿಯುತ್ತಿದೆ,’ ಎಂದು ಮನವರಿಕೆ ಮಾಡಿಕೊಟ್ಟರು.
ಸಹನೆ ಇರಲಿ, ಅಸಹನೆ ಬೇಡ: ಶಾಂತಿನಗರ ಪ್ರದೇಶದ ಸಮಸ್ಯೆ ಬಗ್ಗೆ ಶಾಸಕ ಹ್ಯಾರೀಸ್ ಬೇಸರ ವ್ಯಕ್ತಪಡಿಸಿದರು. ಸಮರ್ಪಕ ಯೋಜನೆಗಳ ಕೊರತೆಯಿಂದಾಗಿ ಸಮಸ್ಯೆ ಉಂಟಾಗಿದೆ ಎಂದರು. ಶೀಘ್ರ ಕಾಮಗಾರಿ ಪೂರ್ಣಗೊಳಿಸುವುದಾಗಿ ಜಾರ್ಜ್ ಭರವಸೆ ನೀಡಿದರೂ ಸಮಾಧಾನಗೊಳ್ಳದ ಹ್ಯಾರೀಸ್, “ಎಷ್ಟು ದಿನ ಸಹನೆಯಿಂದ ಇರಬೇಕು,’ ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ, “ನೋಡಯ್ಯ ಹ್ಯಾರೀಸು… ಸಹನೆ ಇರಬೇಕು. ಆದರೆ, ಅಸಹನೆ ಬೇಡ, ಸಮಸ್ಯೆಯಾಗದ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸೋಣ,’ ಎಂದು ಹೇಳಿದರು.
ಮತ್ತೂ ಮುಂದುವರಿದ ಹ್ಯಾರೀಸ್, ಇದಕ್ಕೆ ಶಾಶ್ವತ ಪರಿಹಾರ ಕೊಡಿಸಿ ಎಂದರು. ಅದಕ್ಕೆ ಗರಂ ಆದ ಜಾರ್ಜ್, ಈಗಾಗಲೇ ಪರಿಹಾರ ಕಾರ್ಯಗಳಿಗೆ 15 ಕೋಟಿ ರೂ. ನೀಡಲಾಗಿದೆ. ಅದು ಬೇಕೋ? ಬೇಡವೋ? ಎಂದು ಪ್ರಶ್ನಿಸಿದರು. ಇದರಿಂದ ತಣ್ಣಗಾದ ಹ್ಯಾರೀಸ್, ಅನುದಾನ ಬೇಕು, ಆದರೆ, ಹೆಚ್ಚಿನ ಅನುದಾನ ಕೊಡಿ ಎಂದರು. ಪರಿಸ್ಥಿತಿಯನ್ನು ಗಮನಿಸಿದ ಮುಖ್ಯಮಂತ್ರಿಗಳನ್ನು ಮಳೆನೀರುಗಾಲುವೆ ಮುಖ್ಯ ಎಂಜಿನಿಯರ್ ಬೆಟ್ಟೆಗೌಡ ಅವರನ್ನು ಕರೆದು, “”ನೋಡ್ರಿ… ಏನು ಮಾಡ್ತೀರಾ ಗೊತ್ತಿಲ್ಲ, ಏನಾದ್ರೂ ಮಾಡಿ. ಆದರೆ, ಈ ಭಾಗದಲ್ಲಿ ಮತ್ತೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ” ಎಂದರು.
ನಾವೇನು ಗುಹಾಂತರ ವಾಸಿಗಳೇ?: ಎಚ್‌ಎಸ್‌ಆರ್
ಬಡಾವಣೆಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಸ್ಥಳೀಯ ನಿವಾಸಿಗಳ ಅಹವಾಲು ಸ್ವೀಕರಿಸಿದರು. ಈ ವೇಳೆ ಇಲ್ಲಿನ ನಿವಾಸಿಗಳು, “”ನಾವೇನು ಗುಹಾಂತರ ವಾಸಿಗಳೇ? ಮಳೆ ಬಂದಾಗ ಹಾವುಗಳು ಬರುತ್ತವೆ, ಸೊಳ್ಳೆ ಕಾಟದಿಂದ ಜನರು ಸಾಯುತ್ತಿದ್ದಾರೆ. ಇದಕ್ಕೆ ಪರಿ ಹಾರ ಕೊಡುವುದು ಯಾವಾಗ?” ಎಂಬ ಬರಹವಿದ್ದ ಫಲಕವನ್ನು ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿ, “30 ವರ್ಷಗಳ ಹಿಂದೆಯೇ ಬಿಡಿಎ ಅನುಮೋದನೆ ಪಡೆದು ಬಡಾವಣೆ ನಿರ್ಮಿಸಿದೆ. ಆದರೆ, ಇಂದಿಗೂ ಕಾಲುವೆಗಳ ನಿರ್ಮಾಣವಾಗಿಲ್ಲ. ಹೀಗಾಗಿ ಮಳೆಯಿಂದ ಅನಾಹುತ ಸಂಭವಿಸುತ್ತಿದೆ. ಹೀಗಾಗಿ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು,’ ಎಂದು ಮುಖ್ಯಮಂತ್ರಿಗಳನ್ನು ಮನವಿ ಮಾಡಿದರು.
ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಳೆಯಿಂದ ಜನರಿಗೆ ಸಮಸ್ಯೆಯಾಗಿರುವುದಕ್ಕೆ ವಿಷಾದಿ ವ್ಯಕ್ತಪಡಿಸುತ್ತೇನೆ. ಈ ಹಿಂದಿನವರು ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿದ್ದು, ಈಗಾಗಲೇ 400 ಕಿ.ಮೀ. ಉದ್ದದ ಕಾಲುವೆಗಳ ಅಭಿವೃದ್ಧಿಗೆ 1100 ಕೋಟಿ ನೀಡಲಾಗಿದೆ. ಉಳಿದ 456 ಕಿ.ಮೀ. ಕಾಲುವೆ ಅಭಿವೃದ್ಧಿಗೆ 1500 ಕೋಟಿಯ ಅಗತ್ಯವಿದ್ದು, ಮೊದಲ ಹಂತ ಮುಗಿದ ನಂತರ ಅದಕ್ಕೂ ಅನುದಾನ ನೀಡಲಾಗುವುದು ಎಂದರು.
ಮುಖ್ಯಮಂತ್ರಿಗಳ ಮಾತು ಮುಗಿಯುತ್ತಲೇ ತಮ್ಮ ಮಾತು ಆರಂಭಿಸಿದ ಸ್ಥಳೀಯ ನಿವಾಸಿಗಳು, “ಕಳೆದ 8 ವರ್ಷಗಳಿಂದ ಚರಂಡಿಗಳಲ್ಲಿ ಹೂಳು ತೆಗೆದಿಲ್ಲ ಹಾಗೂ ಜಲಮಂಡಳಿಯಿಂದ ಕಾಮಗಾರಿ ನಡೆಯುತ್ತಲೇ ಇದೆ. ನಮ್ಮ ಜೀವಮಾನದಲ್ಲಿ ಕಾಮಗಾರಿ ಪೂರ್ಣಗೊಳ್ಳುವುದೇ?’ ಎಂದು ದೂರಿದರು. ಅದಕ್ಕೆ ಮುಖ್ಯಂತ್ರಿಗಳು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್‌ರನ್ನು ಕರೆದು ಕೂಡಲೆ ಕಾಮಗಾರಿ ಮುಗಿಸುವಂತೆ ಸೂಚಿಸಿದರು. ನಂತರ ಕೆ.ಆರ್.ಪುರ ಬಳಿಯ ಪೈ ಲೇಔಟ್, ರಾಮಮೂರ್ತಿನಗರದ ಅಂಬೇಡ್ಕರ್ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದರು.
33 ಅಡಿ ಕಾಲುವೆ ಮೂರು ಅಡಿ
ರಾಮಮೂರ್ತಿನಗರದ ಮುಖ್ಯ ರಸ್ತೆಯಲ್ಲಿ 33 ಅಡಿಗಳಿರಬೇಕಿದ್ದ ರಾಜಕಾಲುವೆ 3 ಅಡಿಯಾಗಿರುವ ಬಗ್ಗೆ ಸಾರ್ವಜನಿಕರು ದೂರಿದರು. ಇದರೊಂದಿಗೆ ಕೆ.ಆರ್.ಪುರ ಪೈ ಬಡಾವಣೆಯಲ್ಲಿಯೂ ರಾಜಕಾಲುವೆಗಳ ಮೇಲೆ ಮನೆಗಳನ್ನು ನಿರ್ಮಿಸಿರುವುದರಿಂದ ಸಮಸ್ಯೆಯಾಗುತ್ತಿದೆ ಎಂಬ ಅಂಶವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದನ್ನೆಲ್ಲ ಗಮನಿಸಿದ ಸಿಎಂ ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ರಾಜಕಾಲುವೆ ಒತ್ತುವರಿ ಬಗ್ಗೆ ಮಾತಿಲ್ಲ
ಮುಖ್ಯಮಂತ್ರಿಗಳು ಪರಿಶೀಲನೆ ನಡೆಸಿದ ಮೂರು ಸ್ಥಳಗಳಲ್ಲಿ ಸಾರ್ವಜನಿಕರು ಭಾರಿ ಮಟ್ಟದಲ್ಲಿ ರಾಜಕಾಲುವೆ ಒತ್ತುವರಿ
ಮಾಡಿದ್ದರು. ರಾಜಕಾಲುವೆ ಉಕ್ಕಿ ಹರಿದು ಪ್ರವಾಹ ಸೃಷ್ಟಿಯಾಗಲು ರಾಜಕಾಲುವೆಯ ಒತ್ತುವರಿಯೇ ಪ್ರಮುಖ ಕಾರಣ. ಆದರೂ ಸಿದ್ದರಾಮಯ್ಯ ಅವರು ಒತ್ತುವರಿ ತೆರವಿನ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ. ಕುಂಬಾರ ಗುಂಡಿ, ಪೈ ಲೇಔಟ್, ರಾಮಮೂರ್ತಿ ನಗರ ಅಂಬೇಡ್ಕರ್‌ನಗರದಲ್ಲಿ ಭಾರಿ ಪ್ರಮಾಣದಲ್ಲಿ ರಾಜಕಾಲುವೆ ಒತ್ತುವರಿ ಮಾಡಲಾಗಿತ್ತು. ರಾಜಕಾಲುವೆಯನ್ನು ಒತ್ತುವರಿ ಮಾಡಿ, ಚಿಕ್ಕ ಕಾಲುವೆಗಳ ಮೇಲೂ ಕಟ್ಟಡ ಕಟ್ಟಿರುವುದು ಸಮಸ್ಯೆ ಕಾರಣವೆಂದು ಅಧಿಕಾರಿಗಳು ತಿಳಿಸಿದರೂ, ತೆರವುಗೊಳಿಸುವಂತೆ ಯಾವುದೇ ಆದೇಶ ನೀಡಲಿಲ್ಲ.
ಮೂಗು ಮುಚ್ಚಿಕೊಂಡ ಸಿಎಂ
ಜೆಸಿ ರಸ್ತೆಯ ಕುಂಬಾರ ಗುಂಡಿಯ ಬಳಿ ತೆರೆದ ರಾಜಕಾಲುವೆಯ ಪರಿಶೀಲನೆಗೆ ಮುಖ್ಯಮಂತ್ರಿಗಳು ಮುಂದಾದರು. ಆದರೆ ಕಾಲುವೆಯ ಬಳಿಯ ದುರ್ವಾಸನೆ ತಡೆಯಲಾರದೆ ಸ್ವತಃ ಮುಖ್ಯಮಂತ್ರಿಗಳು ತಮ್ಮ ಶಾಲಿನಿಂದ ಮೂಗು ಮುಚ್ಚಿಕೊಂಡು ಪರಿಶೀಲನೆ ನಡೆಸಿದರು.
ಪದೇ ಪದೇ ಕೈಕೊಟ್ಟ ಬಸ್
ನಗರದ ಪ್ರದಕ್ಷಿಣೆಗೆ ಹೊರಟ ಮುಖ್ಯಮಂತ್ರಿಗಳಿದ್ದ ಬಸ್ ಎರಡು ಬಾರಿ ಕೈಕೊಟ್ಟಿತು. ಮುಖ್ಯಮಂತ್ರಿಗಳ ಗೃಹ ಕಚೇರಿಯಿಂದ ಹೊರಟು ಶಾಂತಿನಗರ ತಲುಪುವ ವೇಳೆಗೆ ಸಿಟಿ ರೌಂಡ್ಸ್ ಬಸ್‌ನಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಕೈಕೊಟ್ಟಿತು. ಹೀಗಾಗಿ ಶಾಸಕ ಬೈರತಿ ಬಸವರಾಜು ಪಾಲಿಕೆಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆನಂತರ ಶಾಂತಿನಗರ ಪರಿಶೀಲನೆಯ ನಂತರ ಬಸ್ ಬದಲಿಸಲಾಯಿತು. ಆದರೆ, ರಾಮಮೂರ್ತಿ ನಗರದ ಮುಖ್ಯರಸ್ತೆಯಲ್ಲಿ ಬಸ್ ಸ್ಟಾರ್ಟ್ ಆಗದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕಾರಿನ ಮೂಲಕ ಬೇರೊಂದು ಕಾರ್ಯಕ್ರಮಕ್ಕೆ ಹೊರಟರು.
ಸಂಚಾರ ದಟ್ಟಣೆ ಸವಾರರು ಹೈರಾಣ
ಮುಖ್ಯಮಂತ್ರಿಗಳು ಪೀಕ್ ಹವರ್‌ನಲ್ಲಿ ಪ್ರದಕ್ಷಿಣೆ ನಡೆಸಿದರಿಂದ ನಗರದ ಹಲವಾರು ರಸ್ತೆಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಲಾಲ್‌ಬಾಗ್ ಮುಂಭಾಗದಿಂದ ಡೈರಿ ವೃತ್ತದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರೊಂದಿಗೆ ಕೃಷ್ಣರಾಜಪುರದ ಟಿನ್‌ಫ್ಯಾಕ್ಟರಿಯಿಂದ ಹಳೆ ಮದ್ರಾಸ್ ರಸ್ತೆಯ ಐಟಿಐ ಗೇಟಿನವರೆಗೆ ಮತ್ತು ರಾಮಮೂರ್ತಿ ನಗರದ ಅಂಬೇಡ್ಕರ್
ನಗರದಿಂದ ಬಾಣಸವಾಡಿ ಪೊಲೀಸ್ ಠಾಣೆಯವರೆಗೆ ದಟ್ಟಣೆ ಉಂಟಾಗಿತ್ತು. ಇದರೊಂದಿಗೆ ಹಲವಾರು ಕಡೆಗಳಲ್ಲಿ ಆ್ಯಂಬುಲೆನ್ಸ್‌ಗಳು ದಟ್ಟಣೆಯ ನಡುವೆ ಸಿಲುಕಿರುವ ದೃಶ್ಯ ಕಂಡು ಬಂತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.