ಮುಕ್ತ ವಿವಿ ಹಗರಣ ಸಿಬಿಐ ತನಿಖೆಯಾಗಲಿ: ಗೋ.ಮಧುಸೂದನ್
Team Udayavani, Sep 15, 2017, 12:10 PM IST
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 3.25 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲು ಕಾರಣವಾಗಿರುವ ಹಿಂದಿನ ಕುಲಪತಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಂ.ಜಿ.ಕೃಷ್ಣನ್ ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಆಗ್ರಹಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾಬ್ಡೇಕರ್ ಅವರಿಗೆ ಪತ್ರ ಬರೆದಿದ್ದೇನೆ. ಮಾನ್ಯತೆ ಇಲ್ಲದ ಅನಧಿಕೃತ ಡಿಪ್ಲೋಮಾ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ವಂಚಿಸಿದ್ದಾರೆ. ಇದರಲ್ಲಿ ಎಐಸಿಟಿಐ, ಪ್ಯಾರಾ ಮೆಡಿಕಲ್ ಬೋರ್ಡ್, ಯುಜಿಸಿ ಅಧಿಕಾರಿಗಳ ಕೈವಾಡವಿರುವ ಶಂಕೆಯೂ ಇದೆ. ಹೀಗಾಗಿ ವಿಷಯದ ಗಂಭೀರತೆ ಅರಿತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸಚಿವ ಪ್ರಕಾಶ್ ಜಾಬ್ಡೇಕರ್‌ರಿಗೆ 4 ಪುಟಗಳ ಸುದೀರ್ಘ ಪತ್ರ ಬರೆದಿದ್ದೇನೆ. ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಪ್ರೊ.ಎಂ.ಜಿ.ಕೃಷ್ಣನ್‌ರ ಅಧಿಕಾರಾವಧಿಯಲ್ಲಿ ಮುಕ್ತ ವಿವಿಯಲ್ಲಿ ನಡೆದಿರುವ ಅವ್ಯವಹಾರ ಪಟ್ಟಿ ಮಾಡಿದ್ದೇನೆ. ಮುಕ್ತ ವಿವಿಗೆ ಯುಜಿಸಿ ಮಾನ್ಯತೆ ಸಿಗದ ಪರಿಣಾಮ 3.25 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಆದರೂ ಈ ವಿಚಾರದಲ್ಲಿ ವಿದ್ಯಾವಂತರು ಮೌನವಹಿಸಿರುವುದು ದುರಾದೃಷ್ಟಕರ ಸಂಗತಿ ಎಂದರು.
ಎಷ್ಟು ಹಣ ಪಡೆದಿದ್ದೀರಿ: ರಂಗಪ್ಪ ಅವರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳಲು ಎಷ್ಟು ಹಣ ಪಡೆದಿದ್ದೀರಿ? ಎಂಬುದನ್ನು ಸ್ಪಷ್ಟಪಡಿಸುವಂತೆಯೂ ದೇವೇಗೌಡರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗಲೂ ದೇವೇಗೌಡರ ಕೃಪಾಕಟಾಕ್ಷದಿಂದಲೇ ರಾಜಕಾರಣ ಮಾಡುತ್ತಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ದೇವೇಗೌಡ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಮೈಸೂರಿನಲ್ಲಿ ತಮ್ಮ ಮೂಗಿನ ಕೆಳಗೇ ಬಹುದೊಡ್ಡ ಹಗರಣ ನಡೆದಿದ್ದರೂ ಸಿದ್ದರಾಮಯ್ಯ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಮುಕ್ತ ವಿವಿಯಲ್ಲಿ ನಡೆದಿರುವ ನೂರಾರು ಕೋಟಿ ರೂಪಾಯಿ ಹಗರಣವನ್ನು ಸಿಬಿಐಗೆ ವಹಿಸಲು ಹಿಂದೇಟು ಹಾಕುತ್ತಿದ್ದಾರೆಂದು ದೂರಿದರು.
ಫಲಾನುಭವಿ: ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ) ಅಧ್ಯಕ್ಷ ವೇದಪ್ರಕಾಶ್ ಕೂಡ ಮುಕ್ತ ವಿವಿಯಲ್ಲಿ ನಡೆದಿರುವ ಹಗರಣದ ಫಲಾನುಭವಿಯಾಗಿರುವಂತಿದೆ. ಅಕ್ರಮ, ಅವ್ಯವಹಾರದ ಹಣದಲ್ಲಿ ಪಾಲು ಪಡೆದಿರುವ ಯುಜಿಸಿ ಅಧ್ಯಕ್ಷ ವೇದಪ್ರಕಾಶ್ ಬಹುದೊಡ್ಡ ಕ್ರಿಮಿನಲ್ ಎಂದು ಆರೋಪಿಸಿದರು. ಮುಕ್ತ ವಿವಿ ಹಗರಣಕ್ಕೆ ಸಂಬಂಧಿಸಿದಂತೆ ರಾಜಭವನ ಕೂಡ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಇನ್ನಾದರೂ ರಾಜ್ಯಪಾಲರು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಜತೆಗೆ ಬ್ರಿಡ್ಜ್ಕೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ನೇರ ಜವಾಬ್ದಾರರಾಗಿರುವ ಹಿಂದಿನ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮುಕ್ತ ವಿವಿ ಹಾಲಿ ಕುಲಪತಿ ಪ್ರೊ.ಶಿವಲಿಂಗಯ್ಯ ಅವರಿಗೂ ಪತ್ರ ಬರೆದಿದ್ದೇನೆ. ಜತೆಗೆ ಈ ಎಲ್ಲಾ ಸಂಗತಿಗಳ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೂ ಪತ್ರ ಬರೆದು ರಂಗಪ್ಪ ವಿರುದ್ಧ ಸಿಬಿಐ ತನಿಖೆಗೆ ಒತ್ತಾಯಿಸಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ರಂಗಪ್ಪ ನಂತಹ ಕ್ರಿಮಿನಲ್ ವ್ಯಕ್ತಿಯನ್ನು ರಾಜಕಾರಣಕ್ಕೆ ಕರೆತರದಂತೆ ಒತ್ತಾಯಿಸುತ್ತೇನೆ.
-ಗೋ.ಮಧುಸೂದನ್, ವಿಧಾನಪರಿಷತ್ ಮಾಜಿ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.