ವಿಶ್ವ ಅಲ್ಜೀಮರ್ಸ್ ದಿನ
Team Udayavani, Sep 17, 2017, 6:35 AM IST
ವಿಶ್ವ ಅಲ್ಜೀಮರ್ಸ್ ದಿನವನ್ನು ಪ್ರತಿವರ್ಷ ಸೆಪ್ಟಂಬರ್ 21ರಂದು ಆಚರಿಸಲಾಗುತ್ತದೆ. ವಿಶ್ವದೆಲ್ಲೆಡೆಯ ಅಲ್ಜೀಮರ್ಸ್ ಸಂಘಸಂಸ್ಥೆಗಳು ಅಲ್ಜೀಮರ್ಸ್ ಮತ್ತು ಡಿಮೆನ್ಶಿಯಾ ಕಾಯಿಲೆಗಳ ಬಗ್ಗೆ ಜನಸಮುದಾಯದಲ್ಲಿ ಅರಿವನ್ನು ವಿಸ್ತರಿಸುವ ಪ್ರಯತ್ನಕ್ಕಾಗಿ ಆ ದಿನವನ್ನು ಮೀಸಲಿಡುತ್ತವೆ. ಮಿದುಳು ಮತ್ತು ಮನಸ್ಸಿನ ಕಾರ್ಯಾಚರಣೆಯನ್ನು ಬಾಧಿಸುವ ಸಮಸ್ಯೆಗಳ ಸಮೂಹವಾಗಿರುವ ಡಿಮೆನ್ಶಿಯಾದ ಒಂದು ಬಹುಸಾಮಾನ್ಯ ರೂಪ ಅಲ್ಜೀಮರ್ಸ್ ಕಾಯಿಲೆಯಾಗಿದೆ.
ಎಷ್ಟು ಮಂದಿ ಡಿಮೆನ್ಶಿಯಾಕ್ಕೆ ತುತ್ತಾಗುತ್ತಾರೆ?
ಜಾಗತಿಕ ಜನಸಂಖ್ಯೆ ವಯೋವೃದ್ಧಾಪ್ಯದೆಡೆಗೆ ಸಾಗುತ್ತಿದೆ. 2015ರ ಅಂಕಿಅಂಶಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ 46 ಮಿಲಿಯ ಮಂದಿ ಡಿಮೆನ್ಶಿಯಾ ಕಾಯಿಲೆಯೊಂದಿಗೆ ಬದುಕುತ್ತಿದ್ದಾರೆ, ಇವರಲ್ಲಿ ಶೇ.58 ಮಂದಿ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿದ್ದಾರೆ. ಈ ಅಂಕಿಸಂಖ್ಯೆ 2050ನೇ ಇಸವಿಯ ಹೊತ್ತಿಗೆ 131 ಮಿಲಿಯಕ್ಕೆ ಏರುವ ಲಕ್ಷಣಗಳಿವೆ. ಈ ಡಿಮೆನ್ಶಿಯಾ ಪೀಡಿತರ ಸಂಖ್ಯಾವೃದ್ಧಿಯು ಅಭಿವೃದ್ಧಿಶೀಲ ಮತ್ತು ಜನಸಂಖ್ಯಾಬಾಹುಳ್ಯ ಹೊಂದಿರುವ ಚೀನ, ಭಾರತ ಮತ್ತು ಲ್ಯಾಟಿನ್ ಅಮೆರಿಕಾದಂತಹ ಪ್ರದೇಶಗಳಲ್ಲಿ ಕಂಡುಬರಲಿದೆ.
ಡಿಮೆನ್ಶಿಯಾವು ಪ್ರಧಾನವಾಗಿ ವಯೋವೃದ್ಧರನ್ನು ಬಾಧಿಸುತ್ತದೆ. 65 ವರ್ಷ ವಯೋಮಾನದ ಜನಸಮುದಾಯದಲ್ಲಿ ಡಿಮೆನ್ಶಿಯಾ ಕಂಡುಬರುವುದು ಸಾವಿರಕ್ಕೊಬ್ಬರಿಗೆ ಮಾತ್ರ. ಆ ಬಳಿಕದ ವಯೋಮಾನದಲ್ಲಿ ಡಿಮೆನ್ಶಿಯಾ ಉಂಟಾಗುವ ಸಾಧ್ಯತೆಯು ಕ್ಷಿಪ್ರವಾಗಿ ಏರುತ್ತದೆ, 65ನೆಯ ವಯಸ್ಸಿನ ಬಳಿಕದವರಲ್ಲಿ ಈ ತೊಂದರೆಗೆ ತುತ್ತಾಗುವ ಸಾಧ್ಯತೆ 20ಕ್ಕೆ 1ರಷ್ಟು ಹೆಚ್ಚುತ್ತದೆ. 80ರ ಬಳಿಕದ ವಯೋಮಾನದವರಲ್ಲಿ ಐವರಲ್ಲಿ ಒಬ್ಬರಂತೆ ಈ ಸಮಸ್ಯೆಗೆ ತುತ್ತಾಗುವ ಸಾಧ್ಯತೆಯಿದೆ.ಜಾಗತಿಕ ಮಟ್ಟದಲ್ಲಿ ಪ್ರತೀ ಮೂರು ಸೆಕೆಂಡುಗಳಿಗೆ ಒಂದು ಹೊಸ ಡಿಮೆನ್ಶಿಯಾ ಪ್ರಕರಣ ದಾಖಲಾಗುತ್ತದೆ.
ಡಿಮೆನ್ಶಿಯಾ: ನಿಮಗೆ ಗೊತ್ತಿರಲಿ
– ಸ್ಮರಣಶಕ್ತಿ, ಆಲೋಚನಾ ಶಕ್ತಿ, ವರ್ತನೆ ಮತ್ತು ಭಾವನೆಗಳನ್ನು ಬಾಧಿಸುವ ಮಿದುಳಿನ ವಿವಿಧ ಸಮಸ್ಯೆಗಳನ್ನು ಡಿಮೆನ್ಶಿಯಾ ಎಂಬುದಾಗಿ ಕರೆಯುತ್ತಾರೆ.
– ಡಿಮೆನ್ಶಿಯಾ ಕಾಯಿಲೆಯ ಪ್ರಾಥಮಿಕ ಲಕ್ಷಣಗಳಲ್ಲಿ ಸ್ಮರಣಶಕ್ತಿ ನಷ್ಟ, ಚಿರಪರಿಚಿತ ಕೆಲಸಕಾರ್ಯಗಳನ್ನು ಮಾಡಲು ಕಷ್ಟವಾಗುವುದು, ಭಾಷೆಯ ಸಮಸ್ಯೆ ಮತ್ತು ವ್ಯಕ್ತಿತ್ವದಲ್ಲಿ ಬದಲಾವಣೆ ಒಳಗೊಂಡಿರುತ್ತವೆ.
– ಪ್ರಸ್ತುತ ಡಿಮೆನ್ಶಿಯಾ ಗುಣಪಡಿಸಬಹುದಾದ ರೋಗವಲ್ಲ; ಆದರೆ ಡಿಮೆನ್ಶಿಯಾಕ್ಕೆ ತುತ್ತಾಗಿರುವವರು ಮತ್ತು ಅವರನ್ನು ಆರೈಕೆ ಮಾಡುತ್ತಿರುವವರಿಗೆ ಅನೇಕ ರೀತಿಯ ನೆರವು ವ್ಯವಸ್ಥೆಗಳಿವೆ.
– ಡಿಮೆನ್ಶಿಯಾಕ್ಕೆ ಸಾಮಾಜಿಕ, ಆರ್ಥಿಕ ಅಥವಾ ಜನಾಂಗಿಕ ಭೇದವಿಲ್ಲ; ಯಾರನ್ನೂ ಅದು ಬಾಧಿಸಬಹುದು.
– ಅಲ್ಜೀಮರ್ಸ್ ಕಾಯಿಲೆ ಡಿಮೆನ್ಶಿಯಾದ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದು. ಇತರ ಕಾರಣಗಳಲ್ಲಿ ವಾಸ್ಕಾಲಾರ್ ಕಾಯಿಲೆಗಳು, ಲೆವಿ ಬಾಡಿ ಡಿಮೆನ್ಶಿಯಾ ಮತ್ತು ಫ್ರಂಟೊ – ಟೆಂಪೊರಲ್ ಡಿಮೆನ್ಶಿಯಾ ಸೇರಿವೆ.
ಡಿಮೆನ್ಶಿಯಾದ ಬಹು ಸಾಮಾನ್ಯ
ಪ್ರಾಥಮಿಕ ಲಕ್ಷಣಗಳು
ಸ್ಮರಣ ಶಕ್ತಿ ನಷ್ಟ
ಸ್ಮರಣ ಶಕ್ತಿ ನಷ್ಟವಾಗುವುದು, ಅದರಲ್ಲೂ ಅಲ್ಪಕಾಲಿಕ ಸ್ಮರಣ ಶಕ್ತಿ ನಷ್ಟ ಡಿಮೆನ್ಶಿಯಾದ ಬಹು ಸಾಮಾನ್ಯ ಮೊದಲ ಲಕ್ಷಣ. ಸಾಮಾನ್ಯ ಮರೆಗುಳಿತನ ಇರುವ ವ್ಯಕ್ತಿಗಳು ತಾನು ಮರೆತ ಸಂಗತಿ ಅಥವಾ ವ್ಯಕ್ತಿಗೆ ಸಂಬಂಧಿಸಿದ ಇತರ ಅಂಶಗಳನ್ನು ನೆನಪಿಸಿಕೊಳ್ಳಬಲ್ಲರು. ಉದಾಹರಣೆಗೆ, ಅವರಿಗೆ ಎದುರು ಮನೆಯಾತನ ಹೆಸರು ನೆನಪಿಗೆ ಬಾರದಿದ್ದರೂ ತಾನು ಮಾತನಾಡುತ್ತಿರುವುದು ಎದುರು ಮನೆಯಾತನ ಜತೆಗೇ ಎಂಬುದು ತಿಳಿದಿರುತ್ತದೆ. ಡಿಮೆನ್ಶಿಯಾ ಹೊಂದಿರುವ ವ್ಯಕ್ತಿ ಹೆಸರನ್ನು ಮಾತ್ರವಲ್ಲದೆ, ಸಂದರ್ಭ – ಸನ್ನಿವೇಶವನ್ನೂ ಮರೆಯುತ್ತಾನೆ.
ಪರಿಚಿತ ಕೆಲಸಗಳನ್ನು ಮಾಡಲು ಕಷ್ಟ
ಮಾತನಾಡುವಾಗ ಕೆಲವೊಮ್ಮೆ ಸರಿಯಾದ ಶಬ್ದ ಸಿಗದೆ ಇರುವುದು ಎಲ್ಲರಿಗೂ ಉಂಟಾಗುವ ಸಮಸ್ಯೆ. ಆದರೆ ಡಿಮೆನ್ಶಿಯಾ ಹೊಂದಿರುವಾತ ಸರಳ ಶಬ್ದಗಳನ್ನೂ ಮರೆಯುತ್ತಾನೆ ಅಥವಾ ಅದರ ಬದಲಿಗೆ ಅಸಂಬದ್ಧ ಶಬ್ದಗಳನ್ನು ಉಪಯೋಗಿಸುತ್ತಾನೆ. ಇದರಿಂದಾಗಿ ಅವನ ಮಾತು ಅಥವಾ ಬರಹವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ.
ಸಮಯ – ಸ್ಥಳದಿಂದ ಬೇರ್ಪಡುವಿಕೆ ಯಾವ ವಾರ ಎಂಬುದನ್ನು ಅಥವಾ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದು ಕೆಲವೊಮ್ಮೆ ನಮಗೆಲ್ಲರಿಗೂ ಮರೆತು ಹೋಗುತ್ತದೆ. ಆದರೆ ಡಿಮೆನ್ಶಿಯಾಕ್ಕೆ ತುತ್ತಾಗಿರುವ ವ್ಯಕ್ತಿ ತನ್ನ ಮನೆಯಿರುವ ರಸ್ತೆಯಂತಹ ಚಿರಪರಿಚಿತ ಸ್ಥಳದಲ್ಲಿಯೂ ದಿಕ್ಕುಗೆಡುತ್ತಾನೆ, ತಾನೆಲ್ಲಿದ್ದೇನೆ ಅಥವಾ ಅಲ್ಲಿಗೆ ಹೇಗೆ ಬಂದೆ ಎಂಬುದು ಅವನಿಗೆ ಗೊತ್ತಾಗುವುದಿಲ್ಲ; ಮನೆಗೆ ಹಿಂದಿರುಗುವುದು ಹೇಗೆ ಎಂದು ತಿಳಿಯಲಾರ. ಡಿಮೆನ್ಶಿಯಾ ರಾತ್ರಿ ಅಥವಾ ಹಗಲುಗಳ ವ್ಯತ್ಯಾಸವನ್ನೂ ವಿಸ್ಮತಿಗೊಳಿಸುತ್ತದೆ.
ನಿರ್ಧಾರ ಶಕ್ತಿ ನಷ್ಟ ಅಥವಾ ಕೊರತೆ
ಡಿಮೆನ್ಶಿಯಾ ಹೊಂದಿರುವವರು ಅಸಂಬದ್ಧವಾಗಿ ಉಡುಪು ತೊಡಬಹುದು – ಬೇಸಗೆಯ ದಿನ ಹಲವು ಬಟ್ಟೆ ಧರಿಸಬಹುದು, ಚಳಿಯಲ್ಲಿ ಒಂದೇ ಅಂಗಿ ತೊಡಬಹುದು.
ವಸ್ತು – ಸಂಗತಿಗಳ ಸಂಬಂಧರಾಹಿತ್ಯ
ಡಿಮೆನ್ಶಿಯಾಕ್ಕೆ ತುತ್ತಾದ ವ್ಯಕ್ತಿಗಳು ಸಂಭಾಷಣೆಯನ್ನು ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸಲು ಅಥವಾ ಬಿಲ್ಲುಗಳ ಪಾವತಿ ಮಾಡಿದ್ದೇನೆಯೇ ಇಲ್ಲವೇ, ಯಾವಾಗ ಮಾಡಿದ್ದೇನೆ ಇತ್ಯಾದಿ ಜಾಡು ಹಿಡಿಯಲು ಅಸಮರ್ಥರಾಗುತ್ತಾರೆ.
ವಸ್ತುಗಳನ್ನು ಎಲ್ಲೆಲ್ಲೋ ಇರಿಸುವುದು ಪರ್ಸು ಅಥವಾ ಕೀಲಿಕೈ ಇತ್ಯಾದಿ ವೈಯಕ್ತಿಕ ವಸ್ತುಗಳನ್ನು ಎಲ್ಲೋ ಇಟ್ಟು ಮರೆಯುವುದು ಎಲ್ಲರಿಗೂ ಆಗುವಂಥದೇ. ಆದರೆ ಡಿಮೆನ್ಶಿಯಾಕ್ಕೆ ತುತ್ತಾಗಿರುವ ವ್ಯಕ್ತಿ ವಸ್ತುಗಳನ್ನು ಅಸಂಬದ್ಧ ಜಾಗದಲ್ಲಿ – ಉದಾಹರಣೆಗೆ, ಇಸಿŒಪೆಟ್ಟಿಗೆಯನ್ನು ಫ್ರಿಜ್ ಮೇಲೆ, ಕೈಗಡಿಯಾರವನ್ನು ಸಕ್ಕರೆ ಬೋಗುಣಿಯಲ್ಲಿ – ಹೀಗೆ ಇರಿಸಬಹುದು.
ಮನಃಸ್ಥಿತಿ ಅಥವಾ ವರ್ತನೆಯಲ್ಲಿ ವ್ಯತ್ಯಾಸ ಯಾವಾಗಾದರೊಮ್ಮೆ ಎಲ್ಲರಿಗೂ ಚಿಂತೆ ಅಥವಾ ದುಃಖ ಬಾಧಿಸುತ್ತದೆ. ಆದರೆ ಡಿಮೆನ್ಶಿಯಾ ಹೊಂದಿರುವ ವ್ಯಕ್ತಿಯ ಮನಃಸ್ಥಿತಿ ಯಾವುದೇ ಕಾರಣವಿಲ್ಲದೆ ಅಸಾಧಾರಣವಾಗಿ ಬದಲಾಗಬಲ್ಲುದು; ಭಾವನೆಗಳು ಕ್ಷಿಪ್ರವಾಗಿ ಬದಲಾಗುತ್ತಿರುತ್ತವೆ. ಪರ್ಯಾಯವಾಗಿ ಹಿಂದೆ ಸಾಮಾನ್ಯವಾಗಿ ಇದ್ದುದಕ್ಕಿಂತ ಕಡಿಮೆ ಭಾವನಾತ್ಮಕ ಪ್ರತಿಕ್ರಿಯೆಯನ್ನೂ ಪ್ರದರ್ಶಿಸಬಹುದು.
ವ್ಯಕ್ತಿತ್ವದಲ್ಲಿ ಬದಲಾವಣೆ
ಡಿಮೆನ್ಶಿಯಾಕ್ಕೆ ತುತ್ತಾಗಿರುವ ವ್ಯಕ್ತಿ ತಾನು ಹಿಂದೆ ಸಾಮಾನ್ಯವಾಗಿ ಇದ್ದುದಕ್ಕಿಂತ ಭಿನ್ನವಾಗಿ ಪರಿವರ್ತನೆ ಹೊಂದಬಹುದು – ಇಂತಹ ಪರಿವರ್ತನೆಗಳನ್ನು ಹೀಗೆಯೇ ಎಂದು ಗುರುತಿಸಿ ಹೇಳುವುದು ಕಷ್ಟ. ವ್ಯಕ್ತಿ ಅತಿಯಾದ ಸಂದೇಹವನ್ನು ತಾಳಬಹುದು, ಸುಲಭವಾಗಿ ಸಿಡಿಮಿಡಿಗೊಳ್ಳಬಹುದು. ಖನ್ನತೆಗೊಳಗಾಗಬಹುದು, ಜಡ ಅಥವಾ ಉದ್ವಿಗ್ನನಾಗಿ ಬದಲಾಗಬಹುದು, ಸ್ಮರಣೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೀಡಾಗುವ ಸಂದರ್ಭದಲ್ಲಿ ತೀವ್ರ ಸಿಟ್ಟಿಗೇಳಬಹುದು.
ಕತೃತ್ವ ಶಕ್ತಿ ನಷ್ಟ
ಎಲ್ಲರೂ ಆಗೀಗ ಮನೆಗೆಲಸಗಳಿಂದ, ವ್ಯಾಪಾರ ವ್ಯವಹಾರಗಳಂತಹ ಚಟುವಟಿಕೆಗಳಿಂದ ಅಥವಾ ಸಾಮಾಜಿಕ ಬಾಧ್ಯತೆಗಳಿಂದ ದಣಿಯಬಹುದು. ಆದರೆ ಡಿಮೆನ್ಶಿಯಾಕ್ಕೆ ತುತ್ತಾದ ವ್ಯಕ್ತಿ ಒಟ್ಟಾರೆಯಾಗಿ ಆಲಸಿ, ಋಣಾತ್ಮಕನಾಗುತ್ತಾನೆ, ಜಡವಾಗುತ್ತಾನೆ, ಗಂಟೆಗಟ್ಟಲೆ ಟಿವಿ ಮುಂದೆ ಕುಳಿತಿರುವುದು, ಸಾಮಾನ್ಯಕ್ಕಿಂತ ದೀರ್ಘಕಾಲ ನಿದ್ದೆ ಮಾಡುವುದು ಅಥವಾ ತನ್ನ ಹವ್ಯಾಸಗಳಲ್ಲಿ ಆಸಕ್ತಿ ಕಳೆದುಕೊಳ್ಳುವುದೇ ಮುಂತಾದ ಬದಲಾವಣೆಗಳಿಗೆ ಒಳಗಾಗುತ್ತಾನೆ.
ಇಂತಹ ಯಾವುದಾದರೂ ಲಕ್ಷಣಗಳು ನಿಮ್ಮಲ್ಲಿ ಇವೆ ಎಂದು ಅಥವಾ ನಿಮ್ಮ ಗೆಳೆಯ/ಗೆಳತಿ ಅಥವಾ ಬಂಧು ಇಂತಹ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ನಿಮಗೆ ಅನಿಸಿದರೆ ನಿಮ್ಮ ವೈದ್ಯರನ್ನು ಭೇಟಿಯಾಗಿ ನಿಮ್ಮ ಕಳವಳವನ್ನು ಅವರ ಜತೆಗೆ ಸಮಾಲೋಚಿಸಿ.
ಗುಣ ಕಾಣಬಹುದೇ?
ಪ್ರಸ್ತುತ ಅಲ್ಜೀಮರ್ಸ್ ಅಥವಾ ಡಿಮೆನ್ಶಿಯಾದ ಇತರ ಬಹುತೇಕ ಕಾರಣಗಳನ್ನು ಗುಣಪಡಿಸುವುದು ಸಾಧ್ಯವಿಲ್ಲ. ಸದ್ಯೋಭವಿಷ್ಯದಲ್ಲಿಯೂ ಗುಣಪಡಿಸುವಂತಹ ಚಿಕಿತ್ಸೆ ಲಭ್ಯವಾಗುವ ಸಾಧ್ಯತೆಯಿಲ್ಲ. ಅಧ್ಯಯನಗಾರರು ಕನಿಷ್ಠr ಕೆಲವು ಪ್ರಕರಣಗಳಲ್ಲಿಯಾದರೂ ಈ ಕಾಯಿಲೆಯ ಪ್ರಗತಿಯನ್ನು ತಡೆಹಿಡಿಯುವಂತಹ ಔಷಧಿಗಳನ್ನು ಅಭಿವೃದ್ಧಿಪಡಿಸುವ ಹಂತದಲ್ಲಷ್ಟೇ ಇದ್ದಾರೆ. ಈ ಕಾಯಿಲೆ ಉಂಟಾಗದಂತೆ ತಡೆಯುವುದು ಹೇಗೆ, ಅದರ ಪ್ರಗತಿಯನ್ನು ತಡೆಹಿಡಿಯುವುದು ಹೇಗೆ ಅಥವಾ ಅದರ ಪರಿಣಾಮಗಳನ್ನು ತೆಗೆದುಹಾಕುವುದು ಹೇಗೆ ಎಂಬುದು ಇನ್ನೂ ಗೊತ್ತಾಗಿಲ್ಲ. ಡಿಮೆನ್ಶಿಯಾದ ಕಾರಣಗಳ ಕುರಿತಾದ ವಿಸ್ತೃತ ಅಧ್ಯಯನದಿಂದ ಪರಿಣಾಮಕಾರಿ ಚಿಕಿತ್ಸೆಯನ್ನು ಶೋಧಿಸಬಹುದಾಗಿದೆ ಎಂಬ ಆಶಾವಾದವಿದೆ.
ಅಲ್ಜೀಮರ್ಸ್ ಕಾಯಿಲೆಗೆ
ಔಷಧಿ ಚಿಕಿತ್ಸೆ ಲಭ್ಯವಿದೆಯೇ?
ಅಲ್ಜೀಮರ್ಸ್ ಕಾಯಿಲೆಯನ್ನು ಗುಣಪಡಿಸಬಹುದಾದಂತಹ ಔಷಧಿ ಚಿಕಿತ್ಸೆ ಇಲ್ಲವಾದರೂ, ಅಲ್ಜೀಮರ್ಸ್ ಕಾಯಿಲೆ ಪೀಡಿತ ಕೆಲವರಿಗಾದರೂ ನೆರವಾಗಬಹುದಾದಂತಹ ಔಷಧಿ ಚಿಕಿತ್ಸೆಗಳು ಲಭ್ಯವಿವೆ.
ಹಾಲಿ ಲಭ್ಯವಿರುವ ಚಿಕಿತ್ಸೆಗಳು ಕೆಲವು ಅಲ್ಜೀಮರ್ಸ್ ಪ್ರಕರಣಗಳಲ್ಲಿ ಕಾಯಿಲೆಯ ಪ್ರಗತಿಯನ್ನು ಆರರಿಂದ 18 ತಿಂಗಳುಗಳ ಅವಧಿಯಲ್ಲಿ ನಿಧಾನಗೊಳಿಸಬಹುದಾಗಿವೆ. ಅಂತಹ ಔಷಧಿ ಸಂಯುಕ್ತ ಕೊಲಿನಸ್ಟೆರೇಸ್ ಇನ್‌ಹಿಬಿಟರ್ ವರ್ಗಕ್ಕೆ ಸೇರಿವೆ.
ಇತರ ಔಷಧಿಗಳು ಅಲ್ಜೀಮರ್ಸ್ ಕಾಯಿಲೆಯ ನಿದ್ರಾಲಸ್ಯ ಮತ್ತು ಉದ್ರೇಕದಂತಹ ಕೆಲವು ಲಕ್ಷಣಗಳನ್ನು ನಿಯಂತ್ರಣದಲ್ಲಿ ಇರಿಸುವುದಕ್ಕೆ ಸಂದರ್ಭಾನುಸಾರವಾಗಿ ಉಪಯುಕ್ತವಾಗಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಅಲ್ಜೀಮರ್ಸ್ ಕಾಯಿಲೆ ಪೀಡಿತರಿಗೆ ನಿದ್ದೆಮಾತ್ರೆಗಳು ಅಥವಾ ಮತ್ತುಕಾರಕಗಳಂತಹ ಔಷಧಿಗಳನ್ನು ನೀಡುವುದನ್ನು ಆದಷ್ಟು ಕನಿಷ್ಠಗೊಳಿಸಬೇಕು, ಏಕೆಂದರೆ ಅವು ಅವರಲ್ಲಿ ಈಗಾಗಲೇ ಇರುವ ಗೊಂದಲವನ್ನು ಹೆಚ್ಚಿಸುತ್ತವೆ.
ಅಲ್ಜೀಮರ್ಸ್ ಕಾಯಿಲೆಯನ್ನು
ಪ್ರತಿಬಂಧಿಸಬಹುದೇ?
ಅಲ್ಜೀಮರ್ಸ್ ಕಾಯಿಲೆ ಉಂಟಾಗುವುದಕ್ಕೆ ಏನು ಕಾರಣ ಎಂಬುದಕ್ಕೆ ಸಮಾಧಾನಕರವಾದ ಉತ್ತರ ಇನ್ನೂ ಲಭಿಸಿಲ್ಲ; ಹಾಗಾಗಿ ನಿರ್ದಿಷ್ಟ ಪ್ರತಿಬಂಧಕ ಕ್ರಮಗಳನ್ನು ಶಿಫಾರಸು ಮಾಡುವುದೂ ಸಾಧ್ಯವಾಗುತ್ತಿಲ್ಲ.
ನಿರ್ದಿಷ್ಟ ಪ್ರತಿಬಂಧಕ ಕ್ರಮಗಳನ್ನು ಶಿಫಾರಸು ಮಾಡುವುದು ಸಾಧ್ಯವಿಲ್ಲವಾದರೂ, ಆರೋಗ್ಯಕರ ಜೀವನ ವಿಧಾನ ಪಾಲಿಸುವುದನ್ನು ಶಿಫಾರಸು ಮಾಡಬಹುದಾಗಿದೆ – ಆರೋಗ್ಯಕರವಾದ ಆಹಾರ ಸೇವನೆ, ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಕ್ರಿಯವಾದ ಜೀವನ. ಆರೋಗ್ಯಕರವಾದ ಜೀವನಶೈಲಿಯು ಯಾವುದೇ ವ್ಯಕ್ತಿಯ ಅಲ್ಜೀಮರ್ಸ್ ಅಪಾಯಗಳನ್ನು ದೂರವಿರಿಸುತ್ತದೆ ಎಂಬುದಕ್ಕೆ ಸಾಕ್ಷ್ಯಾಧಾರಗಳು ಹೆಚ್ಚುತ್ತಿವೆ.
ರೋಗಪತ್ತೆ
ಪ್ರಸ್ತುತ ಡಿಮೆನ್ಶಿಯಾ ಪೀಡಿತರಾಗಿರುವವರಲ್ಲಿ ಅಧಿಕಾಂಶ ಮಂದಿ ಔಪಚಾರಿಕ ರೋಗ – ತಪಾಸಣೆ – ರೋಗ ಪತ್ತೆಗೆ ಒಳಗಾಗಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಆರಂಭಿಕ ಹಂತದ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಶೇ.20ರಿಂದ ಶೇ.50ರಷ್ಟೇ ಡಿಮೆನ್ಶಿಯಾ ಪ್ರಕರಣಗಳು ಗುರುತಿಸಲ್ಪಡುತ್ತವೆ ಮತ್ತು ದಾಖಲೀಕರಣಗೊಳ್ಳುತ್ತವೆ. “ಈ ಚಿಕಿತ್ಸಾ ಅಂತರ’ ಅಲ್ಪ ಮತ್ತು ಮಧ್ಯಮ ಆದಾಯವುಳ್ಳ ದೇಶಗಳಲ್ಲಿ ಖಂಡಿತವಾಗಿ ತುಂಬ ಹೆಚ್ಚಿರುತ್ತದೆ. ಭಾರತದಲ್ಲಿ ಶೇ.90ರಷ್ಟು ಡಿಮೆನ್ಶಿಯಾ ಪ್ರಕರಣಗಳು ರೋಗಪತ್ತೆಗೆ ಒಳಗಾಗದೆ ಉಳಿಯುತ್ತವೆ ಎಂದು ಒಂದು ಅಧ್ಯಯನ ವರದಿ ಮಾಡಿದೆ. ಈ ಅಂಕಿಅಂಶ ಗಳನ್ನು ಜಾಗತಿಕವಾಗಿ, ಇತರ ದೇಶಗಳಿಗೂ ಅನ್ವಯಿಸಿ ಹೇಳುವುದಾದರೆ, ಡಿಮೆನ್ಶಿಯಾ ಪೀಡಿತರ ಪೈಕಿ 4ರಲ್ಲಿ 3 ಭಾಗದಷ್ಟು ಮಂದಿ ರೋಗ ಪತ್ತೆಗೆ ಒಳಗಾ ಗುವುದಿಲ್ಲ; ಹೀಗಾಗಿ ವ್ಯವಸ್ಥಿತ ರೋಗಪತ್ತೆಯಿಂದ ಅವರಿಗೆ ಲಭ್ಯವಾಗಬಹುದಾದ ಚಿಕಿತ್ಸೆ, ಆರೈಕೆ ಮತ್ತು ಸಂಘಟಿತ ನೆರವು ಅವರಿಗೆ ಒದಗುವುದಿಲ್ಲ.
ಅಪಾಯಾಂಶಗಳು
– ವಯಸ್ಸು ಮತ್ತು ಡಿಮೆನ್ಶಿಯಾಕ್ಕೆ ಈಡಾಗುವ ಬಲವಾದ ಕೌಟುಂಬಿಕ ಇತಿಹಾಸಗಳು ಡಿಮೆನ್ಶಿಯಾ ಜತೆಗೆ ತೀವ್ರವಾದ ನಂಟು ಹೊಂದಿರುವ ಅಪಾಯಾಂಶಗಳು. ಅತಿಯಾದ ಮದ್ಯಪಾನ, ತಲೆಗಾದ ಗಾಯ; ಅಧಿಕ ರಕ್ತದೊತ್ತಡ, ಮಧುಮೇಹ, ಧೂಮಪಾನ ಮತ್ತು ದಡೂತಿ ದೇಹ ಹೊಂದಿರುವುದೇ ಮೊದಲಾದ ಹೃದ್ರೋಗದ ಅಪಾಯಾಂಶಗಳು ಕೂಡ ಡಿಮೆನ್ಶಿಯಾ ಹೊಂದುವ ಅಪಾಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
– ತಮ್ಮ ಮಿದುಳನ್ನು ಸಕ್ರಿಯವಾಗಿ ಇರಿಸಿಕೊಳ್ಳುವವರಿಗೆ ಡಿಮೆನ್ಶಿಯಾ ಕಾಯಿಲೆ ಬಾಧಿಸುವ ಅಪಾಯ ಕಡಿಮೆ ಎಂಬಂತೆ ಕಾಣಿಸುತ್ತದೆ. ಓದುವಿಕೆ, ಚೆಸ್ ಅಥವಾ ಮಿದುಳಿಗೆ ಕೆಲಸ ಕೊಡುವ ಇತರ ಯಾವುದೇ ಆಟಗಳನ್ನು ಆಡುವುದು, ಯಾ ಪದಬಂಧಗಳನ್ನು, ಜಾಣ್ಮೆಯ ಆಟಗಳನ್ನು ಆಡುವವರು ಕಡಿಮೆ ಅಪಾಯ ಹೊಂದಿರುತ್ತಾರೆ.
ವ್ಯಕ್ತಿಕೇಂದ್ರಿತ ಆರೈಕೆ
ಒಬ್ಬ ವ್ಯಕ್ತಿಯ ಆರೈಕೆಯನ್ನು ಆತನ ಆಸಕ್ತಿಗಳು, ಸಾಮರ್ಥ್ಯಗಳು, ಇತಿಹಾಸ ಮತ್ತು ವ್ಯಕ್ತಿತ್ವಕ್ಕೆ ಅನುಗುಣವಾಗಿ ನಿರ್ದಿಷ್ಟಗೊಳಿಸಿ ರೂಪಿಸುವುದನ್ನು ವ್ಯಕ್ತಿಗತ ಆರೈಕೆ ಒಳಗೊಳ್ಳುತ್ತದೆ. ತಾನು ಇಷ್ಟಪಡುವ ಮತ್ತು ಸಂತೋಷದಿಂದಿರುವ ಚಟುವಟಿಕೆಗಳಲ್ಲಿ ಭಾಗವಹಿಸಲು ಆ ವ್ಯಕ್ತಿಗೆ ಇದು ಅನುವು ಮಾಡಿಕೊಡುತ್ತದೆ ಹಾಗೂ ಇದು ಡಿಮೆನ್ಶಿಯಾದ ವರ್ತನಾತ್ಮಕ ಮತ್ತು ಮಾನಸಿಕ ಚಿಹ್ನೆಗಳನ್ನು ನಿಭಾಯಿಸಲು ಹಾಗೂ ಪ್ರತಿಬಂಧಿಸಲು ಪರಿಣಾಮಕಾರಿ ಮಾರ್ಗವಾಗಬಹುದಾಗಿದೆ.
ವ್ಯಕ್ತಿಕೇಂದ್ರಿತ ಆರೈಕೆಗೆ ಮುಖ್ಯಾಂಶಗಳೆಂದರೆ:
– ವ್ಯಕ್ತಿಯನ್ನು ಘನತೆ ಮತ್ತು ಗೌರವಗಳಿಂದ ನೋಡಿಕೊಳ್ಳುವುದು.
– ಅವರ ಇತಿಹಾಸ, ಜೀವನವಿಧಾನ, ಸಂಸ್ಕೃತಿ ಹಾಗೂ ಆದ್ಯತೆಗಳನ್ನು; ಅವರ ಇಷ್ಟಾನಿಷ್ಟಗಳನ್ನು, ಹವ್ಯಾಸಗಳನ್ನು ಮತ್ತು ಆಸಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದು.
– ಡಿಮೆನ್ಶಿಯಾ ಪೀಡಿತ ವ್ಯಕ್ತಿಯ ದೃಷ್ಟಿಕೋನದಿಂದ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳುವುದು.
– ಪರಸ್ಪರ ಸಂಭಾಷಣೆ ಮತ್ತು ಸಂಬಂಧಗಳನ್ನು ಹೊಂದುವುದಕ್ಕೆ ಅವಕಾಶಗಳನ್ನು ಒದಗಿಸಿಕೊಡುವುದು.
– ತಾವು ಇಷ್ಟಪಡುವ ಹೊಸ ಸಂಗತಿಗಳಲ್ಲಿ ಪ್ರಯತ್ನಪಡಲು ಅಥವಾ ಚಟುವಟಿಕೆಗಳಲ್ಲಿ ತೊಡಗುವ ಅವಕಾಶ ವ್ಯಕ್ತಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು.
ವ್ಯಕ್ತಿಗತ ಆರೈಕೆ ಆಧರಿತ ಆರೈಕೆಯ ಯೋಜನೆ ಯನ್ನು ರೂಪಿಸುವಾಗ ಕುಟುಂಬ, ಆರೈಕೆ ಒದಗಿಸು ವವರು ಹಾಗೂ ಡಿಮೆನ್ಶಿಯಾ ಹೊಂದಿರುವ ವ್ಯಕ್ತಿ (ಸಾಧ್ಯತೆಯಿದ್ದಾಗ) ಯಾವಾಗಲೂ ಒಳಗೊಳ್ಳಬೇಕು. ಆರೈಕೆ ಯೋಜನೆ ಪೀಡಿತ ವ್ಯಕ್ತಿಗೆ ಸೂಕ್ತವಾಗಿರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಆ ವ್ಯಕ್ತಿಯ ಬಗೆಗಿನ ಅವರ ಜ್ಞಾನ ಮತ್ತು ಅರಿವು ಅತ್ಯಂತ ಅಮೂಲ್ಯವಾಗಿದೆ.
ದೈಹಿಕ ಚಟುವಟಿಕೆಗಳು
ನಿಮ್ಮನ್ನು ಮಾನಸಿಕ ಮತ್ತು ಸಾಮಾಜಿಕವಾಗಿಯೂ ಸಕ್ರಿಯವಾಗಿರಿಸಬಲ್ಲ, ತೊಡಗಿಸಿಕೊಳ್ಳಬಲ್ಲಂತಹ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಸ್ನೇಹಿತರ ಜತೆಗೆ ನಡಿಗೆ, ನೃತ್ಯ ತರಗತಿಗೆ ಸೇರಿಕೊಳ್ಳುವುದು, ಗುಂಪಿನಲ್ಲಿ ವ್ಯಾಯಾಮ ಮಾಡುವುದು ಅಥವಾ ಗಾಲ್ಫ್ ಆಟಗಳಂತಹವು ಉತ್ತಮ. ನೀವು ಇಷ್ಟಪಡುವ, ಸಂತೋಷಿಸುವ ಚಟುವಟಿಕೆಗಳನ್ನು ಆಯ್ದುಕೊಳ್ಳಿ, ಇದರಿಂದಾಗಿ ಅವುಗಳಲ್ಲಿ ತೊಡಗಿಕೊಳ್ಳಲು ಸುಲಭವಾಗುತ್ತದೆ.
ಬೀಳುವುದು ಬೇಡ
– ಬಿದ್ದು ಗಾಯಗೊಳ್ಳುವುದು ವಯೋವೃದ್ಧರಲ್ಲಿ ಮಾರಣಾಂತಿಕ ಮತ್ತು ಸಾಮಾನ್ಯ ಗಾಯಗಳಿಗೆ ಪ್ರಮುಖ ಕಾರಣವಾಗಿದೆ. 65 ವರ್ಷಗಳಿಗಿಂತ ಮೇಲ್ಪಟ್ಟ ವಯಸ್ಸಿನ ಹಿರಿಯರಲ್ಲಿ ಮೂರನೇ ಒಂದರಷ್ಟು ಮಂದಿ ವರ್ಷದಲ್ಲಿ ಒಂದು ಬಾರಿಯಾದರೂ ಬಿದ್ದು ಗಾಯಗೊಳ್ಳುತ್ತಾರೆ.
– ಬಿದ್ದಾಗ ನಿಮ್ಮ ತಲೆಗೆ ಗಾಯವಾಗಿದ್ದರೆ ಅದು ಸಹಜವಾಗಿ ಕಾರ್ಯಾಚರಿಸುವ ನಿಮ್ಮ ಮಿದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಉಂಟು ಮಾಡಬಹುದು; ಮೂಛೆì ತಪ್ಪುವುದು, ಗೊಂದಲ ಮತ್ತು ಇತರ ಚಿಹ್ನೆಗಳಿಗೆ ಕಾರಣವಾಗಬಹುದು.
– ನಿಮ್ಮ ಸಾಮರ್ಥ್ಯ ಮತ್ತು ಸಮತೋಲನವನ್ನು ವೃದ್ಧಿಸುವಂತಹ ನಿಯಮಿತ ದೈಹಿಕ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳಿ; ಇದರಿಂದ ನೀವು ಬಿದ್ದು ಬಿಡುವ ಅಪಾಯವನ್ನು ತಗ್ಗಿಸಬಹುದು.
– ಮನೆಯಲ್ಲಿ, ನೀವು ಎಡವಿ ಅಥವಾ ಜಾರಿ ಬೀಳುವುದಕ್ಕೆ ಕಾರಣವಾಗುವ ಬೂಟುಗಳು, ವಿದ್ಯುತ್ ತಂತಿಗಳಂತಹ ವಸ್ತುಗಳನ್ನು ಕಾಲಿಗೆ ಎಡವುವಂತೆ ಇಡಬೇಡಿ, ಸರಿಸಿಡಿ.
– ಕೊಠಡಿಗಳನ್ನು ಪ್ರವೇಶಿಸುವಾಗ ದೀಪಗಳನ್ನು ಉರಿಸಿ, ಇದರಿಂದ ಸ್ಪಷ್ಟವಾಗಿ ಕಂಡುಬಂದು ಎಡವಿ ಬೀಳುವ ಅಪಾಯ ತಪ್ಪುತ್ತದೆ. ಕತ್ತಲಿರುವ ಸ್ಥಳಗಳಲ್ಲಿ ಹೆಚ್ಚುವರಿ ದೀಪ ಅಳವಡಿಸುವ ಬಗ್ಗೆ ಆಲೋಚಿಸಿ.
ಆರೋಗ್ಯಕರ ಆಹಾರ
ಶೈಲಿ ರೂಢಿಸಿಕೊಳ್ಳಿ
ಹೃದಯಕ್ಕೆ ಆರೋಗ್ಯಕರವಾದ ಆರೋಗ್ಯಶೈಲಿ ಯನ್ನು ರೂಢಿಸಿಕೊಳ್ಳುವುದು ನಿಮ್ಮ ದೇಹ ಮತ್ತು ಮನಸ್ಸುಗಳೆರಡಕ್ಕೂ ಹಿತಕಾರಿ. ಸಾಮಾನ್ಯವಾಗಿ ಹೇಳುವುದಾದರೆ, ಇದು ಸ್ಯಾಚುರೇಟೆಡ್ ಕೊಬ್ಬುಗಳು ಕಡಿಮೆ ಇರುವ ಆಹಾರ ಕ್ರಮ. ಆಹಾರ ಕ್ರಮ ಮತ್ತು ಗ್ರಹಣ ಶಕ್ತಿ ಕಾರ್ಯಚಟುವಟಿಕೆಗಳ ನಡುವಣ ಸಂಬಂಧಗಳ ಬಗ್ಗೆ ನಡೆದಿರುವ ಅಧ್ಯಯನ ಸೀಮಿತವಾಗಿದೆಯಾದರೂ ನಿರ್ದಿಷ್ಟವಾಗಿ ಎರಡು ಬಗೆಯ ಆರೋಗ್ಯಕರ ಆಹಾರ ಶೈಲಿಗಳು ಪ್ರಯೋಜನಕಾರಿ: ಒಂದನೆಯದು, ಡ್ಯಾಶ್ (ಡಿಎಎಸ್‌ಎಚ್ – ಡಯಟರಿ ಅಪ್ರೋಚಸ್ ಟು ಸ್ಟಾಪ್ ಹೈಪರ್ ಟೆನ್ಶನ್ – ಅಧಿಕ ರಕ್ತದೊತ್ತಡ ನಿರ್ಬಂಧಕ ಆಹಾರ ಕ್ರಮ) ಆಹಾರ ಕ್ರಮ ಮತ್ತು ಇನ್ನೊಂದು, ಮೆಡಿಟರೇನಿಯನ್ ಆಹಾರ ಕ್ರಮ. ಈ ಎರಡು ಆಹಾರ ಕ್ರಮಗಳು ಹೃದ್ರೋಗಗಳನ್ನು ತಡೆಯಬಲ್ಲವು ಮಾತ್ರವಲ್ಲದೆ ಡಿಮೆನ್ಶಿಯಾ ಉಂಟಾಗುವ ಅಪಾಯವನ್ನೂ ದೂರವಿರಿಸಬಲ್ಲವು.
ಆಹಾರ ಕ್ರಮ
– ಸ್ಯಾಚುರೇಟೆಡ್ ಕೊಬ್ಬುಗಳು, ಸಂಪೂರ್ಣ ಕೊಬ್ಬುಗಳು ಮತ್ತು ಕೊಲೆಸ್ಟರಾಲ್ ಕಡಿಮೆ ಇರುವ; ಇದೇವೇಳೆ ಹಣ್ಣುಗಳು, ತರಕಾರಿ, ಕಡಿಮೆ ಕೊಬ್ಬು ಇರುವ ಆಹಾರ ಕ್ರಮ ಅನುಸರಿಸಿ.
– ಇಡೀ ಬೇಳೆಕಾಳುಗಳು, ಧಾನ್ಯಗಳು, ಕೋಳಿ, ಮೀನು ಮತ್ತು ಬೀಜ – ಕಾಯಿಗಳನ್ನು ತಿನ್ನಿ.
– ನೀವು ಸೇವಿಸುವ ಕೊಬ್ಬಿನಂಶ, ಕೆಂಪು ಮಾಂಸ, ಸಿಹಿತಿನಿಸುಗಳು, ಸಕ್ಕರೆ ಬೆರೆತ ಪಾನೀಯಗಳು ಮತ್ತು ಸೋಡಿಯಂ ಅಥವಾ ಉಪ್ಪಿನಂಶ ಕಡಿಮೆ ಮಾಡಿ.
– ಡಾ| ಕೇಶವ ಪೈ ,
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ,
ಕೆಎಂಸಿ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.