ನಾವು ಭ್ರಮೆಗಳ ನಡುವೆ ಬದುಕುತ್ತಿದ್ದೇವೆ
Team Udayavani, Sep 20, 2017, 7:09 AM IST
ಭಾರತವನ್ನು ಸುರಕ್ಷಿತವಾಗಿಸುವ “ಮೇಕ್ ಇಂಡಿಯಾ, ಸೇಫ್ ಇಂಡಿಯಾ’ ಎಂಬ ಧ್ಯೇಯದೊಂದಿಗೆ ಮಕ್ಕಳ ಹಕ್ಕುಗಳ ಹೋರಾಟಗಾರರೂ, ನೊಬೆಲ್ ಶಾಂತಿ ಪುರಸ್ಕೃತರೂ ಆಗಿರುವ ಕೈಲಾಶ್ ಸತ್ಯಾರ್ಥಿ ಅವರು “ಭಾರತ ಯಾತ್ರೆ’ ಆರಂಭಿಸಿದ್ದಾರೆ. ಕನ್ಯಾಕುಮಾರಿಯಲ್ಲಿ ಆರಂಭವಾಗಿರುವ ಈ ಯಾತ್ರೆ ಬೆಂಗಳೂರಿಗೂ ಬಂದಿದೆ. ಭಯದಿಂದ ಸ್ವಾತಂತ್ರ್ಯದತ್ತ, ಅನಾದರದಿಂದ ಅನುಭೂತಿಯತ್ತ ಹೆಜ್ಜೆಯಿಡುವುದೇ ಈ ಯಾತ್ರೆಯ ಉದ್ದೇಶ ಎನ್ನುತ್ತಾರೆ ಸತ್ಯಾರ್ಥಿ ಅವರು “ಉದಯವಾಣಿ’ಗೆ ಮಾತಿಗೆ ಸಿಕ್ಕಾಗ, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ತಾವು ತೊಟ್ಟಿರುವ ಪಣ, ಇಟ್ಟಿ ರುವ ಹೆಜ್ಜೆಯ ಕುರಿತು ವಿವರಿಸಿದ್ದು ಹೀಗೆ.
ಭಾರತದಲ್ಲಿ ಪ್ರತಿ ಗಂಟೆಗೆ 8 ಮಕ್ಕಳು ಕಾಣೆಯಾಗುತ್ತಾರೆ, ಇಬ್ಬರು ಅತ್ಯಾಚಾರಕ್ಕೊಳಗಾಗುತ್ತಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ದಾಸ್ಯಪದ್ಧತಿ, ರೇಪ್‌ನಿಂದ ಗರ್ಭ ಧರಿಸುವಿಕೆ ಮುಂತಾದ ಘಟನೆಗಳು ದಿನೇ ದಿನೆ ವರದಿಯಾಗುತ್ತಿವೆ. ನಮ್ಮ ದೇಶ ಎತ್ತ ಸಾಗುತ್ತಿದೆ?
ಹೌದು, ನಾವು ಹಿಂದಿನಿಂದಲೂ ನಂಬಿಕೊಂಡು ಬಂದಿರುವು ದೇನೆಂದರೆ, ಶಾಲೆಗಳು ಮಕ್ಕಳ ಬೌದ್ಧಿಕ ಅಭಿವೃದ್ಧಿಗೆ ಪ್ರಶಸ್ತ ಸ್ಥಳ ಎಂದು. ಅಲ್ಲದೆ ದೇಶದ ಪ್ರತಿಯೊಂದು ಮಗುವಿಗೂ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುವವರೆಗೂ ಭಾರತವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂಬುವುದು ನಾನೂ ಸೇರಿದಂತೆ ಅನೇಕರ ಭಾವನೆಯಾಗಿದೆ. ಆದರೆ, ಅತ್ಯಂತ ಆತಂಕಕಾರಿ ಸಂಗತಿಯೆಂದರೆ, ಈಗ ಶಾಲೆಯೇ ಮಕ್ಕಳಿಗೆ ಸುರಕ್ಷಿತವಾಗಿಲ್ಲ. ಹೆತ್ತವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುವಂಥ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಹಲವು ಕಾರಣಗಳು. ಮೊದಲನೆಯದ್ದು ಎಲ್ಲ ನಿಯಮಗಳು, ಕಾನೂನುಗಳನ್ನು ಜಾರಿ ಮಾಡಬೇಕಾದ ಅಧಿಕಾರಿಗಳು, ಸರ್ಕಾರವು ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇನ್ನು ಕೆಲವು ಖಾಸಗಿ ಶಾಲೆಗಳು ರಾಜಕಾರಣಿಗಳು ಹಾಗೂ ಸ್ಥಳೀಯ ಆಡಳಿತದೊಂದಿಗೆ ನಂಟು ಹೊಂದಿದ್ದು, ತಮ್ಮ ಪ್ರಭಾವ ಬೀರಿ ನಿಯಮಗಳ ಅನುಷ್ಠಾನದಿಂದ ಹಿಂದೆ ಸರಿಯುತ್ತವೆ. ಹಣ ಮಾಡುವುದೊಂದನ್ನೇ ಉದ್ದೇಶವಾಗಿ ಇರಿಸಿರುವಂಥವರಿಗೆ ಮಕ್ಕಳ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯವೇ ಹೆಚ್ಚು. ಎರಡನೆಯದ್ದು, ಹೆತ್ತವರು ಕೂಡ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಕುರಿತು ಪ್ರಶ್ನಿಸು ವುದಿಲ್ಲ. ಮಗುವನ್ನು ಶಾಲೆಗೆ ದಾಖಲಿಸಿದೊಡನೆ ಪಠ್ಯಕ್ರಮ, ಅಂಕ, ಗ್ರೇಡ್, ಪಠ್ಯೇತರ ಚಟುವಟಿಕೆ, ಕ್ರೀಡೆ ಇವುಗಳ ಬಗ್ಗೆ ಯಷ್ಟೇ ಫೋಕಸ್ ಮಾಡುತ್ತಾರೆಯೇ ಹೊರತು ಮಕ್ಕಳ ಭದ್ರತೆ, ಸುರಕ್ಷತೆ ಬಗ್ಗೆ ಚಿಂತಿಸಲು ಹೋಗುವುದಿಲ್ಲ. ಹೆತ್ತವರು ಮೊದಲು ಮಾಡಬೇಕಾಗಿರುವುದು ಈ ಕೆಲಸ.
ಬಹುತೇಕ ಪ್ರಕರಣಗಳಲ್ಲಿ ಬಲಿಪಶು ಮತ್ತು ಅಪರಾಧಿ ಇಬ್ಬರೂ ಮಕ್ಕಳೇ ಆಗಿರುತ್ತಾರೆ. ಇಂಥ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಹೇಗೆ?
ನನ್ನ ಪ್ರಕಾರ, ನಾವು ಇಲ್ಲಿ ಬಲಿಪಶುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ. ಮನೆಯಲ್ಲಿ ಮಕ್ಕಳಿಗೆ ಮಾನಸಿಕ ಮತ್ತು ದೈಹಿಕ ಸುರಕ್ಷತೆ ಒದಗಿಸುವುದರ ಜೊತೆಗೆ ನ್ಯಾಯಾ ಲಯದಲ್ಲಿ ನಡೆಯುವ ವಿಚಾರಣೆ ವೇಳೆಯೂ ಅವರಿಗೆ ಸಹಕಾರ ನೀಡಬೇಕು. ಅಷ್ಟೇ ಅಲ್ಲ, ಪ್ರಕರಣದಲ್ಲಿ ಸಾಕ್ಷಿದಾ ರರಿಗೂ ಭದ್ರತೆ ಒದಗಿಸುವ ಕೆಲಸವಾಗಬೇಕು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂಥ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕಡಿಮೆಯಿದೆ. ಈ ಕುರಿತು ನಿಮ್ಮ ಅಭಿಪ್ರಾಯ?
ಇಂಥ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂಬ ಒತ್ತಾಯವನ್ನು ನಾವು ಮಾಡುತ್ತಿದ್ದೇವೆ. ಇಲ್ಲದಿದ್ದರೆ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಸಂಖ್ಯೆ ಬೆಳೆ ಯುತ್ತಾ ಸಾಗುತ್ತದೆ. ಕಳೆದ ವರ್ಷ ಅಂದರೆ 2016ರಲ್ಲಿ 15 ಸಾವಿರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಶೇ.4ರಲ್ಲಿ ಮಾತ್ರ ಅಪರಾಧ ಸಾಬೀತಾದರೆ, ಶೇ.6ರಲ್ಲಿ ಖುಲಾಸೆಯಾಗಿವೆ ಮತ್ತು ಉಳಿದ ಶೇ.90ರಷ್ಟು ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. ಇನ್ನು 2015ರಲ್ಲೂ ಇತ್ಯರ್ಥವಾಗದೇ ಶೇ.96ರಷ್ಟು ಕೇಸುಗಳು ಉಳಿದಿವೆ. ನನ್ನ ಲೆಕ್ಕಾಚಾರದ ಪ್ರಕಾರ, ಇವತ್ತಿನಿಂದ ಒಂದೇ ಒಂದು ದೌರ್ಜನ್ಯ ಪ್ರಕರಣವೂ ನಡೆಯದೇ ಇದ್ದರೆ, ಈ ಹಿಂದಿನ ಪ್ರಕರಣಗಳು ಇತ್ಯರ್ಥವಾಗಲು (ಕೆಲವು ರಾಜ್ಯಗಳಲ್ಲಿ) ಸುಮಾರು 40 ವರ್ಷಗಳೇ ಬೇಕು. ಇದು
ನ್ಯಾಯದ ಅಣಕವಲ್ಲವೇ? ಬಾಲ್ಯದಲ್ಲಿ ಸಂಕಷ್ಟವನ್ನು ಎದುರಿಸಿದಂಥ ಮಕ್ಕಳನ್ನು ಅಣಕವಾಡಿದಂಥಲ್ಲವೇ? ನ್ಯಾಯಕ್ಕಾಗಿ ಅವರು ಎಷ್ಟು ವರ್ಷ ಕಾಯಬೇಕು? ಅಂದರೆ, ದೌರ್ಜನ್ಯಕ್ಕೀ ಡಾದ ಮಗು ಬೆಳೆದು ಅದಕ್ಕೆ 50-60 ವರ್ಷ ವಯಸ್ಸು ತುಂಬುವಾಗ ತನ್ನ ಮಕ್ಕಳು, ಮೊಮ್ಮಕ್ಕಳೊಂದಿಗೆ ಕೋರ್ಟ್‌ಗೆ ಬರಬೇಕೇ? ಕೇಸು ಇತ್ಯರ್ಥಗೊಳ್ಳುವ ದಿನ, “ನೋಡು, ನಾನು ಸಣ್ಣವನಿದ್ದಾಗ ನನ್ನ ಮೇಲೆ ಇಂಥ ದೌರ್ಜನ್ಯ ನಡೆದಿತ್ತು’ ಎಂದು ಮುಂದಿನ ತಲೆಮಾರಿಗೆ ಹೇಳಬೇಕೇ? ಯೋಚಿಸಿ. ಇಂಥದ್ದು ಆಗಬಾರದೆಂದರೆ, ಸಂತ್ರಸ್ತರಿಗೆ ತ್ವರಿತ ನ್ಯಾಯದಾನ ಪ್ರಕ್ರಿಯೆ ನಡೆಯಬೇಕಾದ್ದು ಇಂದಿನ ಅಗತ್ಯವಾಗಿದೆ.
ಮಕ್ಕಳ ಸುರಕ್ಷತೆಗೆ ತಾಂತ್ರಿಕ ಯುದ್ಧ ನಡೆಸುವ ಅಗತ್ಯವಿದೆ ಎಂದಿದ್ದೀರಿ. ಇದಕ್ಕಾಗಿ ದೇಶದ ಐಟಿ ವೃತ್ತಿಪರರ ನೆರವು ಕೋರಿದ್ದೀರಿ? ಏನಿದು ತಾಂತ್ರಿಕ ಯುದ್ಧ?
ದೌರ್ಜನ್ಯದಂಥ ಘಟನೆಗಳು ನಡೆದಾಗ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಸುವ ಕುರಿತಷ್ಟೇ ಮಾತಾಡುತ್ತೇವೆ. ಆದರೆ, ನಾವು ಇದರಾಚೆಗೂ ಹೋಗಬೇಕಿದೆ. ಐಟಿ ವೃತ್ತಿಪರರು ನಮ್ಮ ಜೊತೆ ಕೈಜೋಡಿಸಿ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕೆಲ ವೊಂದು ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಬೇಕು. ಮಕ್ಕಳ ಕಳ್ಳಸಾಗಣೆದಾರರನ್ನು ಟ್ರ್ಯಾಕ್ ಮಾಡುವ ಹಾಗೂ ಮಕ್ಕಳಿಗೆ ಯಾವ ಪ್ರದೇಶ ಸುರಕ್ಷಿತವಲ್ಲ ಎಂಬುದನ್ನು ತಿಳಿಸಿಕೊಡು ವಂಥ ಆ್ಯಪ್‌ಗ್ಳು ಇವಾಗಿರಬೇಕು. ಇದಕ್ಕಾಗಿ ನಾನು ಟೆಕ್ಕಿಗಳ ನೆರವು ಪಡೆಯಲಿಚ್ಛಿಸುತ್ತೇನೆ.
“ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿ’ ಸ್ಥಾಪನೆಗೆ ನೀವು ಒತ್ತು ನೀಡುತ್ತಿದ್ದೀರಿ? ಈ ಕುರಿತು ನೀವು ಕೈಗೊಂಡ ಕ್ರಮಗಳು?
ಇದೊಂದು ಹೊಸ ಚಿಂತನೆ. ಇದಕ್ಕೆ ಸರ್ಕಾರ ಒಪ್ಪಬೇಕಿದೆ. ದೇಶದ “ಲೈಂಗಿಕ ಅಪರಾಧಿಗಳ ರಿಜಿಸ್ಟ್ರಿ’ಯೊಂದನ್ನು ಸ್ಥಾಪಿಸಿ, ಅದರಲ್ಲಿ ಪ್ರತಿಯೊಬ್ಬ ಅಪರಾಧಿಯ ಮಾಹಿತಿಯನ್ನು ಬಹಿರಂಗಪಡಿಸಬೇಕು. ಈ ಮಾಹಿತಿಯು ವೆಬ್‌ಸೈಟ್‌ಗಳಲ್ಲಿ ಸಿಗುವಂತಾಗಬೇಕು. ಆ ಮೂಲಕ ಅಪರಾಧಿಯ “ನೇಮಿಂಗ್ ಆ್ಯಂಡ್ ಶೇಮಿಂಗ್’ ನಡೆಯಬೇಕು. ಅಷ್ಟೇ ಅಲ್ಲ, ಯಾವ ಸಂಸ್ಥೆಯೂ ಆತನಿಗೆ ಉದ್ಯೋಗ ನೀಡಬಾರದು. ಸರ್ಕಾರವು ಈ ರಿಜಿಸ್ಟ್ರಿಯನ್ನು ಕಡ್ಡಾಯಗೊಳಿಸಬೇಕು. ಈ ಕುರಿತು ಆದಷ್ಟು ಬೇಗ ನಾನು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇನೆ.
ಸರ್ಕಾರದಿಂದ ಎಂಥ ಬೆಂಬಲ ನಿರೀಕ್ಷಿಸುತ್ತೀರಿ?
ಎಲ್ಲ ಧಾರ್ಮಿಕ ಮುಖಂಡರು, ಸ್ಥಳೀಯ ರಾಜಕಾರಣಿಗಳು, ಕೇಂದ್ರ ಸಚಿವರು, ಕಾರ್ಮಿಕರು, ಶಿಕ್ಷಕರು ಹೀಗೆ ಎಲ್ಲ ವರ್ಗದವರೂ ನನ್ನ ಭಾರತ ಯಾತ್ರೆಗೆ ಬೆಂಬಲ ನೀಡಿದ್ದಾರೆ. ಈ ಬೆಂಬಲ ದಿನೇ ದಿನೆ ಹೆಚ್ಚುತ್ತಿರುವುದು ಸಂತಸದ ವಿಚಾರ. ರಾಷ್ಟ್ರಪತಿಯಿಂದ ಹಿಡಿದು ಪ್ರಧಾನಮಂತ್ರಿ, ಸಚಿವರು ಕೂಡ ನನ್ನೊಂದಿಗೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ. ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರೊಂದಿಗೂ ಮಾತುಕತೆ ನಡೆಸಿದ್ದೇನೆ. ಇನ್ನು, ನಾನು ರಾಜಕಾರಣಿಗಳಿಗೆ ಒಂದು ಸಲಹೆ ನೀಡಲಿಚ್ಛಿಸುತ್ತೇನೆ. ಶಾಸಕ, ಸಂಸದ, ಸಚಿವರೆಲ್ಲರೂ ನೀವು ಕಲಿತ ಶಾಲೆಗಳಿಗೊಮ್ಮೆ ಹೋಗಿ. ಆದರೆ, ವಿಐಪಿಗಳಾಗಿ ಅಲ್ಲ. ಒಬ್ಬ ಸಾಮಾನ್ಯ ಪ್ರಜೆಯಾಗಿ, ಮಗುವಿನ ಹೆತ್ತವರಾಗಿ, ಪೋಷಕರಾಗಿ, ವಿದ್ಯಾರ್ಥಿಯ ಸೋದರ, ಸೋದರಿಯರಾಗಿ ಹೋಗಲಿ. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅರಿಯಲಿ. ಇದರಿಂದ ಉಳಿದ ಮಕ್ಕಳ ಹೆತ್ತವರಿಗೂ ಸ್ವಲ್ಪಮಟ್ಟಿಗೆ ವಿಶ್ವಾಸ, ನೆಮ್ಮದಿ ಮರುಸ್ಥಾಪನೆ ಆಗುತ್ತದೆ.
ಜತೆಗೆ, ಶಾಲೆಗಳೂ ಮಕ್ಕಳ ಸುರಕ್ಷತಾ ಕ್ರಮಗಳನ್ನು ಸುಧಾರಿ ಸುವತ್ತ ಒಲವು ತೋರುತ್ತವೆ.
ಹೆಣ್ಣನ್ನು ದೇವತೆಗಳೆಂದು ಕರೆಯುವ ಈ ನಾಡಿನಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಏನನ್ನು ಸೂಚಿಸುತ್ತವೆ ಮತ್ತು ಇಂಥ ಘಟನೆಗಳ ಮೇಲೆ ಸಂಸ್ಕೃತಿ ಹೇಗೆ ಪರಿಣಾಮ ಬೀರುತ್ತದೆ?
ನಾವು ಘನತೆ, ಗೌರವಗಳ ವಿಚಾರದಲ್ಲಿ ಕೆಲವೊಂದು ಭ್ರಮೆಗಳ ನಡುವೆ ಬದುಕುತ್ತಿದ್ದೇವೆ. ಹೇಳುವುದೊಂದು ಮಾಡುವುದೊಂದು ಎಂಬಂತಾಗಿದೆ. ಇನ್ನಾದರೂ ನಾವು ಕೆಲವೊಂದು ಬೂಟಾಟಿಕೆಗಳಿಂದ ಹೊರಬರಬೇಕಾಗಿದೆ. ಜ್ಞಾನ, ಸಂಪತ್ತಿನ ಮೂಲ ಶಕ್ತಿಗಳನ್ನು ನಾವು ಪೂಜಿಸುತ್ತೇವೆ. ಈ ಮೂರೂ ಶಕ್ತಿಗಳನ್ನು ದೇವತೆಗಳೆಂದು ಕಾಣುತ್ತೇವೆ. ಆದರೆ, ವಾಸ್ತವ ದಲ್ಲಿ ಜೀವಂತ ದೇವತೆಗಳನ್ನು ಅತ್ಯಾಚಾರಗೈದು ಹತ್ಯೆ ಮಾಡಲಾಗುತ್ತದೆ. ಆದರೆ, ಈ ಜೀವಂತ ದೇವತೆಗಳು ತಮ್ಮ ನೋವನ್ನು, ತಮಗಾದ ದೌರ್ಜನ್ಯಗಳನ್ನು ಹೊರಜಗತ್ತಿಗೆ ಹೇಳಿಕೊಳ್ಳುವುದಿಲ್ಲ. “ಹೇಳಬಾರದು’ ಎಂದು
ಆಜ್ಞಾಪಿಸಿ ಬಾಯಿಮುಚ್ಚಿಸಲಾಗುತ್ತದೆ. ಅವರು ಈ ಉಸಿರುಗಟ್ಟುವ ವಾತಾವರಣದಲ್ಲೇ ಬದುಕಿ, ಕೊನೆಗೊಂದು ದಿನ ಸಾಯ ಬೇಕಾದ ಸ್ಥಿತಿ. ಕುಟುಂಬದೊಳಗೋ, ಶಾಲೆ ಯಲ್ಲೋ, ಹೊರಗೋ ಬಾಲ್ಯದಲ್ಲಿ ತನ್ನ ಮೇಲೆ ಇಂಥದ್ದೊಂದು ಅಮಾನುಷ ಕೃತ್ಯ ನಡೆದಿದೆ ಎಂಬುದನ್ನು
ಯಾವತ್ತೂ ಹೇಳಿಕೊಳ್ಳಲಾಗದೇ ಮೌನವಾಗಿಯೇ ಕೊರಗು ತ್ತಾಳೆ. ಈ ಮೌನವೇ ನಮ್ಮ ದೊಡ್ಡ ಶತ್ರು. ನನ್ನ ಇಂದಿನ ಭಾರತ ಯಾತ್ರೆಯ ಧ್ಯೇಯವೂ ಇದೇ- “ಮೌನದಿಂದ ಧ್ವನಿಯತ್ತ, ಭಯದಿಂದ ಸ್ವಾತಂತ್ರ್ಯದತ್ತ’ ಎಂದು.
ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಖಂಡಿತಾ, ನಾನು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವುದರ ಪರವಾಗಿದ್ದೇನೆ. ಶಿಕ್ಷಣವು ಮಕ್ಕಳಿಗೆ ತಮ್ಮನ್ನು ತಾವು ರಕ್ಷಿಸಿ ಕೊಳ್ಳಲು ಅವಕಾಶ ಕಲ್ಪಿಸಬೇಕು. ಅವರು ತಮ್ಮ ತಮ್ಮ ದೇಹಗಳ ಕುರಿತು ಅರಿಯುವಂತಾಗಬೇಕು. ಅವರವರ ದೇಹದ ಮೇಲೆ ಅವರಿಗೆ ಹಕ್ಕಿರುತ್ತದೆ. ತಮ್ಮ ತಮ್ಮ ದೇಹವನ್ನು ರಕ್ಷಿಸಿಕೊಳ್ಳುವ ಅಧಿಕಾರವೂ ಅವರಿಗಿರುತ್ತದೆ. ಇಂಥ ಶಿಕ್ಷಣ ದೊರೆತರಷ್ಟೇ ಅದು ಸಾಧ್ಯ.
ನೀವೀಗ ಬೆಂಗಳೂರಿನಲ್ಲಿದ್ದೀರಿ. ಇಲ್ಲಿನ ಶಾಲೆಗಳಲ್ಲೂ ಇತ್ತೀಚೆಗೆ ಅಪಾಯಕಾರಿ ಮಟ್ಟದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯದಂಥ ಘಟನೆಗಳು ವರದಿಯಾಗುತ್ತಿವೆ. ಹೀಗಿರುವಾಗ, ಬೆಂಗಳೂರಿಗರಿಗೆ ನಿಮ್ಮ ಸಂದೇಶವೇನು?
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಕಳ್ಳಸಾಗಣೆಯ ವಿರುದ್ಧ ನಾನು ಸಾರಿರುವ ಯುದ್ಧವೇ ಭಾರತ ಯಾತ್ರೆ. ಇದಕ್ಕೆ ಕರ್ನಾಟಕದ ಜನತೆ, ವಿವಿಧ ಸಂಘ ಸಂಸ್ಥೆಗಳು, ಮಕ್ಕಳು ಬೆಂಬಲಿಸಿದ್ದಾರೆ. ಯಾತ್ರೆಯ ಅವಧಿಯಲ್ಲಿ ಬೀದಿ ಬೀದಿಗಳಲ್ಲಿ ಮಕ್ಕಳು ಘೋಷಣೆ ಕೂಗುತ್ತಿದ್ದುದು ನನ್ನನ್ನು ಪುಳಕಿತಗೊಳಿಸಿದೆ. ಅವರ ಅಂಥ ಘೋಷಣೆಯೇ ನನಗೆ ಶಕ್ತಿ. ಇನ್ನು ಕರ್ನಾಟಕವನ್ನು ಮಕ್ಕಳ ಸ್ನೇಹಿ ರಾಜ್ಯವಾಗಿಸುವ ಉದ್ದೇಶ ಈ ಸರ್ಕಾರಕ್ಕಿದೆ. ಅದಕ್ಕಾಗಿ ಸರ್ಕಾರಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ. ಬೆಂಗಳೂರು ಎಂಬುವುದು ಅಭಿವೃದ್ಧಿಯ ತವರು. ಅಷ್ಟೇ ಅಲ್ಲ, ಇದು ಅತ್ಯಂತ ಸುಂದರ ಹಾಗೂ ಸುರಕ್ಷಿತ ನಗರ ಎಂಬ ಭಾವನೆ ನಮಗಿತ್ತು. ಆದರೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಕೆಲವೊಂದು ಕಹಿ ಘಟನೆಗಳು ನಡೆದಿರುವುದು, ಎಲ್ಲರಿಗೂ ಒಂದು ಸವಾಲಾಗಿ ಪರಿಣಮಿಸಿದೆ. ನಾವೆಲ್ಲರೂ ಒಗ್ಗಟ್ಟಾಗಿ ಬೆಂಗಳೂರನ್ನು ಮತ್ತೂಮ್ಮೆ ಸುರಕ್ಷಿತ ನಗರವಾಗಿಸಲು ಪಣ ತೊಡಬೇಕಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಕೊನೆಯಾಗಿ, ಅದು ಇತಿಹಾಸದ ಪುಟ ಸೇರುವಂತೆ ನಾವು ಮಾಡಬೇಕಿದೆ.
ಹಲೀಮತ್ ಸಅದಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.