ಹಾಪ್‌ಕಾಮ್ಸ್ ಮೇಲಿದೆ 4 ಕೋಟಿ ಸಾಲ!
Team Udayavani, Sep 22, 2017, 11:46 AM IST
ಬೆಂಗಳೂರು: ಹಾಪ್‌ಕಾಮ್ಸ್ ಸುಮಾರು 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಸಾಲದ ಸುಳಿಯಲ್ಲಿ ಸಿಲುಕಿದ್ದು, ಸಂಸ್ಥೆಗೆ ತರಕಾರಿ, ಹಣ್ಣು ಸರಬರಾಜು ಮಾಡಿದ್ದ ರೈತರಿಗೆ 1.20 ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಪಾವತಿಸಬೇಕಿದೆ!.
ರೈತರು ಹಾಪ್‌ಕಾಮ್ಸ್‌ಗೆ ತರಕಾರಿ, ಹಣ್ಣು ಸರಬರಾಜು ಮಾಡಿದ 24 ಗಂಟೆಗಳಲ್ಲಿ ಆರ್‌ಟಿಜಿಎಸ್ ಮೂಲಕ ಅವರ ಖಾತೆಗೆ ನೇರವಾಗಿ ಹಣ ಪಾವತಿಸಬೇಕು ಎಂಬ ನಿಯಮವಿದೆ. ಕೆಲವೊಮ್ಮೆ ಇದರಲ್ಲಿ ಮೂರ್‍ನಾಲ್ಕು ದಿನ ತಡವೂ ಆಗಿದೆ. ಆದರೆ, ಸುಮಾರು 1.20 ಕೋಟಿ ರೂ.ಗಳಿಗೂ ಅಧಿಕವಾಗಿ ಬಾಕಿ ಉಳಿಸಿಕೊಂಡಿದ್ದು, ಬರದ ಪರಿಸ್ಥಿತಿಯಲ್ಲಿ ರೈತರಿಗೆ ಬರೆ ಎಳೆದಂತಾಗಿದೆ.
ಅಷ್ಟೇ ಅಲ್ಲ, ಹಾಪ್‌ಕಾಮ್ಸ್ ಮಾರುಕಟ್ಟೆಯಿಂದ ಖರೀದಿಸಿದ ಹಣ್ಣು, ಈರುಳ್ಳಿ, ಆಲೂಗಡ್ಡೆ, ಒಣ ಹಣ್ಣುಗಳು (ಡ್ರೈಪ್ರೂಟ್ಸ್), ಮಿನರಲ್ ವಾಟರ್ ಸೇರಿದಂತೆ ವಿವಿಧ ಹಣ್ಣುಗಳನ್ನು ಪೂರೈಕೆ ಮಾಡಿದ ಕೆಲವು ಸಂಸ್ಥೆಗಳಿಗೆ 2 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದೆ. ವಿಪರ್ಯಾಸವೆಂದರೆ, ಸಂಸ್ಥೆಯಿಂದ ನಿವೃತ್ತಿ ಹೊಂದಿರುವ ಸುಮಾರು 18 ನೌಕರರರಿಗೆ ಗ್ರಾಚ್ಯುಟಿ ಬಾಕಿ ಸುಮಾರು 60 ಲಕ್ಷ ರೂ.ಗಳನ್ನು ಕೊಡಬೇಕಿದೆ. ವಿವಿಧ ಕಾಮಗಾರಿ ಕೆಲಸಗಳಿಗೆ 16 ಲಕ್ಷ ರೂ.ಗಳನ್ನು ಬಾಕಿ ಇಟ್ಟುಕೊಳ್ಳಲಾಗಿದೆ. ಗೊಬ್ಬರ, ಕ್ರಿಮಿನಾಶಕ ವಿಭಾಗದಿಂದ ವಿವಿಧ ಕಂಪನಿಗಳಿಗೆ 10.51 ಲಕ್ಷ ರೂ.ಬಾಕಿ ಕೊಡಬೇಕಿದೆ.
ಕಾರ್ಖಾನೆಗಳು, ಆಸ್ಪತ್ರೆಗಳು, ಹಾಸ್ಟೆಲ್, ಸಂಘ ಸಂಸ್ಥೆಗಳಿಗೆ ತರಕಾರಿ, ಸೊಪ್ಪು, ಹಣ್ಣು ಇತ್ಯಾದಿಗಳನ್ನು ಪೂರೈಸಿದ್ದಕ್ಕಾಗಿ ಹಾಪ್‌ಕಾಮ್ಸ್‌ಗೆ ಸುಮಾರು 2.10 ಕೋಟಿ ರೂ. ಬಾಕಿ ಬರಬೇಕು.ಇದನ್ನು ಹೊರತು ಪಡಿಸಿದರೆ ಉಳಿದ ಸುಮಾರು 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಬಾಕಿ ಹಣವನ್ನು ಹಾಪ್‌ಕಾಮ್ಸ್ ರೈತರು, ಮಾರುಕಟ್ಟೆ, ಕಾಮಗಾರಿ, ವಿದ್ಯುತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಗೆ ಕಟ್ಟಬೇಕಿದೆ ಎಂದು ಹಾಪ್‌ಕಾಮ್ಸ್ ಮೂಲಗಳು ತಿಳಿಸಿವೆ.
ಮರುಪಾವತಿ ಮಾಡಿಲ್ಲ: ಹಾಪ್‌ಕಾಮ್ಸ್ ಸ್ಥಾಪನೆಗೊಂಡು ನಂತರ ಇದೇ ಮೊದಲ ಬಾರಿಗೆ ಸಂಸ್ಥೆ ಅಭಿವೃದ್ಧಿಗೆಂದು ಠೇವಣಿ ಇಡಲಾಗಿದ್ದ ಎಫ್ಡಿ ಹಣದಲ್ಲಿ ಒಂದು ಕೋಟಿ ರೂ.ಗಳನ್ನು ಅಧಿಕಾರಿಗಳ ಆಡಳಿತ ನಿರ್ವಹಣೆಗಾಗಿ ಡ್ರಾ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ಇದುವರೆಗೂ ವಾಪಸ್ ಕಟ್ಟಿಲ್ಲ. ಜತೆಗೆ ಗೊಬ್ಬರದ ಖಾತೆಯಿಂದಲೂ ಶರತ್ತುಬದ್ಧವಾಗಿ 70 ಲಕ್ಷ ರೂ.ಗಳನ್ನು ಬಿಡಿಸಿಕೊಂಡಿದ್ದು, ಅದನ್ನು ಕೂಡ ಮರುಪಾವತಿ ಮಾಡಿಲ್ಲ. ಹಾಗೆಯೇ ಅಭಿವೃದ್ಧಿ ಅನುದಾನದಲ್ಲಿ 30 ಲಕ್ಷ ರೂ.ಗಳನ್ನು ತೆಗೆಕೊಳ್ಳಲಾಗಿದ್ದು, ಅದು ಕೂಡ ಬಾಕಿ ಉಳಿದುಕೊಂಡಿದೆ. ಹೀಗೆ ಆಡಳಿತ ನಿರ್ವಹಣೆಗೆ ಸಾಕಷ್ಟು ಹಣಕಾಸಿನ ತೊಂದರೆ ಎದುರಾಗಿದೆ.
ಸೆ.23ಕ್ಕೆ ಸಭೆ: ಹಾಪ್‌ಕಾಮ್ಸ್ ಸಂಸ್ಥೆ ತನ್ನ ವಹಿವಾಟಿನಿಂದ ಬಂದ ಹಣದಲ್ಲಿ ಶೇ.75ರಷ್ಟನ್ನು ರೈತರಿಗೆ ಹಾಗೂ 25ರಷ್ಟು ಆಡಳಿತ ನಿರ್ವಹಣೆಗೆ ಬಳಸಿಕೊಳ್ಳಬೇಕು ಎಂಬ ನಿಯಮವಿದೆ. ಹೀಗಿದ್ದರೂ ಸಂಸ್ಥೆಗೆ 4 ಕೋಟಿ ರೂ.ಗಳಿಗೂ ಅಧಿಕ ನಷ್ಟದಲ್ಲಿದೆ. ಸೆ.23ಕ್ಕೆ ಹಾಪ್‌ಕಾಮ್ಸ್ ಸರ್ವಸದಸ್ಯರ ಸಭೆ ನಡೆಯಲಿದ್ದು, ಸಂಸ್ಥೆಯ ಬಾಕಿ, ಲಾಭ, ನಷ್ಟ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಮುಖ್ಯವಾಗಿ ರೈತರಿಗೆ ಕೊಡಬೇಕಾದ ಬಾಕಿ ಮೊತ್ತದ ಕುರಿತು ಪ್ರಮುಖ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಸಂಸ್ಥೆ ವಹಿವಾಟಿನ ಲೆಕ್ಕಾಚಾರಗಳು ಬಿಸಿಬಿಸಿ ಚರ್ಚೆಗೆ ಕಾರಣವಾಗಲಿದೆ ಎನ್ನಲಾಗಿದೆ.
ಹೊಣೆ ಹೊರಲು ಯಾರೂ ತಯಾರಿಲ್ಲ?: ಸಂಸ್ಥೆಯ ವಹಿವಾಟು ಹಿಂದೆಂದೂ ಕಾಣದಷ್ಟು ಕುಸಿತಕಂಡಿದ್ದು, ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಲು ಅಧಿಕಾರಿಗಳು ತಯಾರಿಲ್ಲ. ಒಂದೆರಡು ತಿಂಗಳ ಹಿಂದಷ್ಟೇ ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಬೆಳ್ಳೂರು ಕೃಷ್ಣ ತೋಟಗಾರಿಕೆ ಇಲಾಖೆಯ ಹನಿನೀರಾವರಿ ವಿಭಾಗಕ್ಕೆ ವರ್ಗಾವಣೆಗೊಂಡು ಹೋಗಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಶಿವಮೊಗ್ಗ ತೋಟಗಾರಿಕೆ ಇಲಾಖೆಯಿಂದ ಬಿ.ವಿಶ್ವನಾಥ್ ಎಂಬುವರು ವರ್ಗಾವಣೆಗೊಂಡು ಅಧಿಕಾರ ವಹಿಸಿಕೊಂಡಿದ್ದರು.
ಹಾಪ್‌ಕಾಮ್ಸ್‌ನ ವಹಿವಾಟಿನ ಲೆಕ್ಕಾಚಾರ ತಿಳಿದುಕೊಂಡ ಅವರು, ಸುಮಾರು ನಾಲ್ಕು ಕೋಟಿಗಳಿಗೂ ಅಧಿಕ ನಷ್ಟ ಕಂಡೊಡನೆ, ವೈಯಕ್ತಿಕ ಕಾರಣ ನೀಡಿ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ. ಇದೀಗ ಸೆ.23ರಂದು ಹಾಪ್‌ಕಾಮ್ಸ್ ಸರ್ವ ಸದಸ್ಯರ ಸಭೆ ನಡೆದ ಬಳಿಕ ವಿಶ್ವನಾಥ್ ಅವರಿಂದ ತೆರವಾದ ಸ್ಥಾನಕ್ಕೆ ಯಾವ ಅಧಿಕಾರಿ ಬರುತ್ತಾರೋ ಕಾದು ನೋಡಬೇಕಿದೆ.
ಬೇಕಾಬಿಟ್ಟಿ ವ್ಯವಹಾರ: ಸಂಸ್ಥೆಯಲ್ಲಿ ಶಿಸ್ತುಬದ್ಧ ಲೆಕ್ಕಾಚಾರ, ವಹಿವಾಟು ನಡೆದಿಲ್ಲ. ಬೇಕಾಬಿಟ್ಟಿ ವ್ಯವಹಾರವೇ ಇಂದಿನ ಪರಿಸ್ಥಿತಿಗೆ ಕಾರಣ. 2015-16ನೇ ಸಾಲಿನ ಆಡಿಟ್ ವರದಿ ಬಂದಿದ್ದು, ಅದಕ್ಕಾಗಿ ಸುಮಾರು 415 ದಿನಗಳನ್ನು ತೆಗೆದುಕೊಳ್ಳಲಾಗಿವೆ. ಇದೇ ಮೊದಲ ಬಾರಿಗೆ ಹಾಪ್‌ಕಾಮ್ಸ್ ವ್ಯವಹಾರಕ್ಕೆ “ಸಿ’ ವರ್ಗೀಕರಣ ಸಿಕ್ಕಿದೆ. ಇನ್ನೂ 2016-17ನೇ ಸಾಲಿನ ಲೆಕ್ಕಪರಿಶೋಧನೆ ನಡೆದಿಲ್ಲ. ಇದು ಆಡಳಿತ ವೈಫಲ್ಯವಲ್ಲದೆ ಮತ್ತೇನು ಎನ್ನುತ್ತಾರೆ ಹೆಸರೇಳಿಕೊಳ್ಳದ ಸಂಸ್ಥೆ ಅಧಿಕಾರಿಯೊಬ್ಬರು.
ಸಂಸ್ಥೆಯನ್ನು ನಡೆಸಲಾಗದ ಸ್ಥಿತಿ ನಿರ್ಮಾಣವಾಗಿಲ್ಲ. ಕೈಗಾರಿಕಾ ಸಹಕಾರ ಬ್ಯಾಂಕ್‌ನಲ್ಲಿ ಇರಿಸಿದ್ದ 3 ಕೋಟಿ ರೂ. ಎಫ್ಡಿ ದಿವಾಳಿಯಾಗಿದ್ದು, ವಹಿವಾಟು ನಡೆಸಲು ದುಡ್ಡಿಲ್ಲದಂತಾಗಿದೆ. ಜತೆಗೆ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್, ಸರ್ಕಾರಿ ಆಸ್ಪತ್ರೆಗಳಿಗೆ ಸರಬರಾಜಾದ ತರಕಾರಿ ಹಣ ಬಿಲ್ ಆಗಲು ಮೂರ್‍ನಾಲ್ಕು ತಿಂಗಳು ಬೇಕಾಗುತ್ತದೆ. ರೈತರ ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ.
-ಚಂದ್ರೇಗೌಡ, ಅಧ್ಯಕ್ಷರು, ಹಾಪ್‌ಕಾಮ್ಸ್
* ಸಂಪತ್ ತರೀಕೆರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.