ಧೋನಿ ನದಿ ದಾಟಿದ ಮೇಲೆ ಬೇಡವಾಗಿರುವ ದೋಣಿ!
Team Udayavani, Sep 23, 2017, 3:55 AM IST
ಮೊನ್ನೆ ಮೊನ್ನೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಧೋನಿ ತಮ್ಮ ಮೌಲ್ಯವನ್ನು ರುಜುವಾತುಪಡಿಸಿದರು. ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ಅರ್ಧಶತಕದ ಆಟದ ಜೊತೆಗೆ ಕೊಂಡೊಯ್ದ ರೀತಿ ಅನನ್ಯವಾದುದು. ಕ್ರಿಕೆಟ್ ಎಂದರೆ ವೈಯಕ್ತಿಕ ಇನ್ನಿಂಗ್ಸ್‌ಗಳಲ್ಲ. ಗೆಲುವಿನ ಸವಿ ಸಿಗಬೇಕಾದರೆ ಒಬ್ಬ ಅಪ್ರತಿಮ ಆಟಗಾರ ಸೃಷ್ಟಿಸುವ ಜೊತೆಯಾಟಗಳು ಹೆಚ್ಚು ಕಾರಣವಾಗುತ್ತದೆ ಎಂಬ ಮಾತಿದೆ. ಇದನ್ನು ಹಿಂದೆ ರಾಹುಲ್ ದ್ರಾವಿಡ್ ಆಟ ಪ್ರತಿಪಾದಿಸುತ್ತಿತ್ತು,ಈಗ ಧೋನಿಯವರದು.
ಭಾರತದ ಕ್ರಿಕೆಟ್ ಆಯ್ಕೆ ಮಂಡಳಿ ಅಧ್ಯಕ್ಷ ಎಂ.ಎಸ್.ಕೆ.ಪ್ರಸಾದ್ ಭಾರತ ಮತ್ತು ಶ್ರೀಲಂಕಾ ಏಕದಿನ ಸರಣಿಗೆ ಮುನ್ನ ಮಾಧ್ಯಮದ ಮುಂದೆ ಒಂದು ಹೇಳಿಕೆ ನೀಡಿದ್ದರು. ಅದರ ಅರ್ಥ ಇಷ್ಟೇ, ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಸ್ಥಾನ ಉಳಿಸಿಕೊಳ್ಳಬೇಕು ಎಂದರೆ ಅವರ ಆಟ, ಅಂಕಿಅಂಶ ಉತ್ತಮವಾಗಿರಲೇಬೇಕು. ಹಿಂದಿನ ಸಾಧನೆ, ದಾಖಲೆಗಳು ಅವರನ್ನು ಆಡುವ ಹನ್ನೊಂದರಲ್ಲಿ ಉಳಿಸುವುದಿಲ್ಲ!
ಮೇಲ್ನೋಟಕ್ಕೆ ಈ ಹೇಳಿಕೆಯಲ್ಲಿ ಯಾವ ತಪ್ಪನ್ನೂ ಕಂಡುಹಿಡಿಯಲಿಕ್ಕೆ ಸಾಧ್ಯವಿಲ್ಲ. ಒಬ್ಬ ಆಟಗಾರ ತನ್ನ ಪ್ರದರ್ಶನದ ಆಧಾರದ ಮೇಲೆ ತಂಡದಲ್ಲಿನ ಸೇರ್ಪಡೆ ನಿರ್ಧಾರ ಆಗುತ್ತದೆ ಎಂಬ ಅಂಶವನ್ನು ಅರ್ಥ ಮಾಡಿಕೊಂಡಿರಬೇಕು ಮತ್ತು ಇಂತಹ ನ್ಯಾಯಸೂತ್ರ ತಂಡದ ಉನ್ನತಿಗೆ ಸಹಾಯವಾಗುತ್ತದೆ ಎಂಬುದನ್ನೂ ಅರಿತಿರಬೇಕು. ರೋಹಿತ್ ಶರ್ಮರಿಗೂ ಈ ಸೂತ್ರ ಅನ್ವಯವಾಗಬೇಕು, ರವೀಂದ್ರ ಜಡೇಜಾ, ಧೋನಿಯವರಿಗೂ…!
ಅವತ್ತು ಎಂಎಸ್‌ಕೆ ಮಾತಿಗೆ ಇಡೀ ಕ್ರಿಕೆಟ್ ಹಿರಿಯರ ಪ್ರಪಂಚ ವಿಧವಿಧವಾಗಿ ಪ್ರತಿಕ್ರಿಯಿಸಿದರೂ ಧೋನಿ ಮಾತನ್ನಾಡಲಿಲ್ಲ. ಬಿಸಿಸಿಐ ನಡುವಿನ ಒಪ್ಪಂದದ ಸಹಿ ಅಂತಹ ಪ್ರತಿಕ್ರಿಯೆಗೆ ಅವಕಾಶವನ್ನೂ ಕೊಡುವುದಿಲ್ಲ. ಆದರೂ ಧೋನಿ ಸುಮ್ಮನುಳಿ ಯಲಿಲ್ಲ. ಬ್ಯಾಟ್‌ನಿಂದ ಕೊಡಬೇಕಾದ ಉತ್ತರವನ್ನು ಕೊಟ್ಟರು. ಶ್ರೀಲಂಕಾ ಎದುರಿನ ಸರಣಿಯಲ್ಲಿ ಭಾರತ 5-0ದ ಅಂತರದಿಂದ ಗೆದ್ದಿದ್ದು ನಿಜವಾದರೂ ಅದು 3-2ರಿಂದ ಭಾರತದ ವಿರುದ್ಧ ಆಗದಿರಲು ಧೋನಿ ಬ್ಯಾಟಿಂಗ್ ಕಾರಣ.
ರನ್‌ಗಳ ಅಸಲಿ ಮೌಲ್ಯ ಬೇರೆ!
ಲಂಕಾ ವಿರುದ್ಧ ಎರಡನೇ ಪಂದ್ಯದಲ್ಲಿ ಧೋನಿಯವರ 68 ಎಸೆತಗಳ 45 ಅಜೇಯ ರನ್ ಹಾಗೂ ಭುವನೇಶ್ವರ್ ಕುಮಾರ್‌ರನ್ನು ಅರ್ಧಶತಕದ ಹಾದಿಯಲ್ಲಿ ಮುನ್ನಡೆಸಿದ ರೀತಿ ಸೋಲಿನ ಸಂಕಟದಲ್ಲಿದ್ದ ಭಾರತವನ್ನು ಪಾರು ಮಾಡಿತ್ತು. ಮೂರನೇ ಪಂದ್ಯದಲ್ಲೂ ಇದೇ ಕಥೆ. 61 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡು ಏನೂ ಆಗಬಹುದಾಗಿದ್ದ ಪಂದ್ಯವನ್ನು 86 ಎಸೆತಗಳ 67 ರನ್‌ನಿಂದ ರಕ್ಷಿಸಿದ್ದು ಸ್ಮರಣೀಯ. ಎರಡೆರಡು ಶತಕಗಳ ಭಾರತದ ನಾಲ್ಕನೇ ಪಂದ್ಯದ ಇನ್ನಿಂಗ್ಸ್‌ಗೆ ಅಂತಿಮ ಸ್ಪರ್ಶ ನೀಡಿದ್ದು ಧೋನಿ 42 ಎಸೆತಗಳಲ್ಲಿನ 49 ರನ್ ಹಾಗೂ ಯುವ ಮನೀಷ್ ಪಾಂಡೆಯವರನ್ನು ಅರ್ಧ ಶತಕದ ಖುಷಿ ಸಿಗುವಂತೆ ಮಾಡಿದ್ದು ಉಲ್ಲೇಖಾರ್ಹ. ಉಳಿದೆರೆಡು ಪಂದ್ಯವನ್ನು ಧೋನಿ ತಾಕತ್ತನ್ನು ಬಳಸದೆ ಭಾರತ ಅಧಿಕಾರಯುತವಾಗಿ ಗೆದ್ದಿದೆ ಎಂದರೂ ಈ ಪಂದ್ಯಗಳ ಹಿನ್ನಡೆ ಭಾರತಕ್ಕೆ ಮುಖಭಂಗವಾಗುತ್ತಿತ್ತಲ್ಲವೇ?
ಮೊನ್ನೆ ಮೊನ್ನೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲೂ ಧೋನಿ ತಮ್ಮ ಮೌಲ್ಯವನ್ನು ರುಜುವಾತುಪಡಿಸಿದರು. ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ಅರ್ಧಶತಕದ ಆಟದ ಜೊತೆಗೆ ಕೊಂಡೊಯ್ದ ರೀತಿ ಅನನ್ಯ ವಾದುದು. ಕ್ರಿಕೆಟ್ ಎಂದರೆ ವೈಯಕ್ತಿಕ ಇನ್ನಿಂಗ್ಸ್‌ಗಳಲ್ಲ. ಗೆಲುವಿನ ಸವಿ ಸಿಗಬೇಕಾದರೆ ಒಬ್ಬ ಅಪ್ರತಿಮ ಆಟಗಾರ ಸೃಷ್ಟಿಸುವ ಜೊತೆಯಾಟಗಳು ಹೆಚ್ಚು ಕಾರಣವಾಗುತ್ತದೆ ಎಂಬ ಮಾತಿದೆ. ಇದನ್ನು ಹಿಂದೆ ರಾಹುಲ್ ದ್ರಾವಿಡ್ ಆಟ ಪ್ರತಿಪಾದಿಸುತ್ತಿತ್ತು, ಈಗ ಧೋನಿಯವರದು.
ಚರ್ಚೆಯಾಗಬೇಕಾದ ಅತಿ ಮುಖ್ಯ ವಿಚಾರ 2019ರಲ್ಲಿ ಏಕದಿನ ವಿಶ್ವಕಪ್ ಆಡಲಿರುವ ಭಾರತೀಯ ತಂಡದ ಸ್ವರೂಪದ್ದು.ಆಯ್ಕೆ ಸಮಿತಿ ಹಿರಿಯ ಆಟಗಾರರಿಗಿಂತ ಯುವ ಪಡೆಯನ್ನು ಬಲಪಡಿಸುವ ಹುನ್ನಾರದಲ್ಲಿದೆ ಎಂಬುದಕ್ಕೆ ಸಾಕ್ಷಿಗಳಿವೆ. ಯುವರಾಜ್‌ಸಿಂಗ್‌ರನ್ನು ಅವರು ಅದೇ ಕಾರಣಕ್ಕೆ ಪರಿಗಣಿಸುತ್ತಿಲ್ಲ. ಬಹುಷಃ ಧೋನಿ ಕೂಡ ಅವರ ಕಾರ್ಯಯೋಜನೆಯ ಭಾಗವಾಗಿಲ್ಲ. ಅದೇ ಕಾರಣಕ್ಕೆ ಎಂಎಸ್‌ಕೆ ಎಚ್ಚರಿಕೆ ಬಂದಿದೆ.
ಬೇರೆ ಮಗ್ಗುಲಿಗೆ ಧೋನಿ ಆಟದ ಶೈಲಿ!
ಶ್ರೀಲಂಕಾ ವಿರುದ್ಧ 4 ಇನಿಂಗ್ಸ್‌ನಿಂದ ಒಮ್ಮೆಯೂ ಔಟಾಗದೆ 161 ರನ್ ತಂದಿತ್ತ ಧೋನಿ 82.14ರ ಸ್ಟ್ರೈಕ್ ರೇಟ್‌ನಲ್ಲಿ, ಕೇವಲ 10 ಬೌಂಡರಿ ಹಾಗೂ 2 ಸಿಕ್ಸ್ ಸಹಿತ ಆಡಿದರು ಎಂಬುದು ಹಲವು ಸಂಕೇತಗಳನ್ನು ನೀಡುತ್ತವೆ. 36 ವರ್ಷದ ಧೋನಿ ಫಿಟ್‌ನೆಸ್ ಇವತ್ತಿಗೂ ಪ್ರಶ್ನಾತೀತ. ಆದರೆ ರಿಫ್ಲೆಕ್ಸ್ ಎಂಬುದು ವರ್ಷಗುರುಳಿದಂತೆ ಮಂದವಾಗಲೇಬೇಕು. ಕಣ್ಣಿನ ಸೂಕ್ಷ್ಮ ಗ್ರಹಿಕೆ ಕೂಡ ಇಳಿಮುಖವಾಗಿರುತ್ತದೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಕ್ಯಾರಿಯರ್‌ನ ಕೊನೆಯ ದಿನಗಳಲ್ಲಿ ವಿಕೆಟ್ ಹಿಂದೆ ಗಳಿಸಬಹುದಾದ ರನ್‌ಗಳನ್ನು ಹೆಚ್ಚು ನೆಚ್ಚಿಕೊಂಡಿದ್ದರು. ಇಂತಹ ವಯೋ ಕಾರಣದಿಂದಲೇ ಧೋನಿ ಟ್ರೇಡ್‌ಮಾರ್ಕ್‌ನ ಹೆಲಿಕ್ಯಾಫ್ಟರ್ ಶಾಟ್ ಸಿಕ್ಸರ್‌ಗಳು ಕಡಿಮೆಯಾಗಿರಬಹುದು.
ಧೋನಿ ಆಟಕ್ಕೆ ಬೇರೆಯದೇ ಆಯಾಮ ಬಂದಿದೆ. ತಂಡದ ಥಿಂಕ್ ಟ್ಯಾಂಕ್ ಅದನ್ನು ಗುರ್ತಿಸಿರುವಂತಿದೆ. ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಿ 4 ಅಥವಾ 5ನೇ ಕ್ರಮಾಂಕದಲ್ಲಿ ಆಡಲಿಳಿಸಿರುವುದು ಧೋನಿ ಇನಿಂಗ್ಸ್‌ನಲ್ಲಿ ಬೇರು ಬಿಡಲು ಸಹಕಾರಿಯಾಗಿದೆ. ಧೋನಿ ಈ ಹಿಂದೂ ಈ ಸ್ಥಾನಗಳಲ್ಲಿ ಆಡಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಆಡಿದ 26 ಇನಿಂಗ್ಸ್‌ನಲ್ಲಿ 58.23ರ ಸರಾಸರಿ ಹಾಗೂ 87.77ರ ಸ್ಟ್ರೈಕ್ ರೇಟ್ ಹಾಗೂ ಐದರ ಕ್ರಮಾಂಕದಲ್ಲಿ 67 ಇನಿಂಗ್ಸ್‌ನಲ್ಲಿನ 53.86 ಸರಾಸರಿ ಅಥವಾ 87.77 ಸ್ಟ್ರೈಕ್ ರೇಟ್ ತೀರಾ ಭಿನ್ನವಾಗಿಲ್ಲ. ತಮ್ಮ ರನ್‌ಗಳ ಜೊತೆಗೆ ಇಂದಿನ ಯುವ ತಂಡದಲ್ಲಿ ಹಿತವಚನ, ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ಮಾಡಬೇಕಾಗುತ್ತದೆ. ಶ್ರೀಲಂಕಾ ಸರಣಿಯಲ್ಲಿ ಭುವನೇಶ್ವರ್ ಕುಮಾರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕಾಂಗರೂ ವಿರುದ್ಧ ಮೊದಲ ಏಕ ದಿನದಲ್ಲಿ ಮತ್ತೆ ಪಾಂಡ್ಯ ಮಿಂಚಿದ್ದರ ಹಿಂದೆ ಧೋನಿ ನೆರವಿದೆ.
ಏಕದಿನ, ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಎನಿಸಿಕೊಂಡ ಭಾರತ ತಂಡದ ನಾಯಕರಾಗಿದ್ದವರು ಧೋನಿ. ಅವರು ಮೊತ್ತಮೊದಲ ಬಾರಿಗೆ ಭಾರತದ ನಾಯಕರಾದಾಗಲೂ ಒಂದು ಅಚ್ಚರಿಯಿತ್ತು. ಅವರ ಈ ಬಡ್ತಿಯನ್ನು ಅಷ್ಟು ಕ್ಷಿಪ್ರವಾಗಿ ಆದೀತು ಎಂದು ಕ್ರಿಕೆಟ್ ತಜ್ಞರೂ ಊಹಿಸಿರಲಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್ ಗೆದ್ದದ್ದು ಕೂಡ ಒಂದು ಮಟ್ಟಿನ ಶಾಕ್. ಮುಂದಿನ ದಿನಗಳಲ್ಲಿ ಧೋನಿ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ, ಆಡುವುದಕ್ಕೆ ವಿದಾಯ ಹೇಳಿದ್ದು ದಿಢೀರ್ ನಿರ್ಧಾರಗಳೇ. ಏಕದಿನ, ಟಿ20 ನಾಯಕತ್ವಕ್ಕೆ ಗುಡ್‌ಬೈ ಹೇಳಿದನ್ನು ಕೂಡ ಯಾರೂ ಒತ್ತಾಯಿಸುವ ಮುನ್ನವೇ ಬಂದಿತ್ತು. 2019ರ ವಿಶ್ವಕಪ್‌ವರೆಗೆ ಧೋನಿ ಬೇಕು ಎಂಬ ಧ್ವನಿ ಈಗ ಹೆಚ್ಚಾಗಿ ಕೇಳಿಬರುತ್ತಿದೆ. ಅಂತದೊಂದು ವಾತಾವರಣವನ್ನು ತಮ್ಮ ರನ್, ಆಟದ ಮೂಲಕ ಧೋನಿ ಸೃಷ್ಟಿಸಿದ್ದಾರೆ. ಶ್ರೀಲಂಕಾಗೆ ಹೋಗುವ ಮುನ್ನ ಧೋನಿ ತಲೆದಂಡದ ಆಗ್ರಹ ಈಗಿಲ್ಲ. ಆದರೆ ಧೋನಿ ಮಾತನಾಡಿಲ್ಲ. ವಿಶ್ವಕಪ್‌ಗೆ ಮುನ್ನ ಅವರು ಏಕದಿನ ಕ್ರಿಕೆಟ್‌ಗೆà ನಿವೃತ್ತಿ ಘೋಷಿಸಿದರೆ ಆಘಾತಕ್ಕೊಳಗಾಗಬೇಡಿ!
ಕೊನೆ ಮಾತು: ಎಂ.ಎಸ್.ಕೆ.ಪ್ರಸಾದ್ ಅವತ್ತು ಹೇಳಿದ ಮಾತುಗಳ ಬಗ್ಗೆ ತಕರಾರಿಲ್ಲ. ಕಪಿಲ್‌ದೇವ್, ಮೋಹಿಂದರ್ ಅಮರನಾಥ್, ಸೈಯದ್ ಕಿರ್ಮಾನಿ ಸೇರಿದಂತೆ ಪ್ರತಿಷ್ಠಿತ ಆಟಗಾರರ ನಿವೃತ್ತಿಯನ್ನು ನಗೆಪಾಟಲಿಗೊಳಿಸಿದ್ದು ಬಿಸಿಸಿಐ. ಇತ್ತೀಚಿನ ದಿನಗಳಲ್ಲಿ ಹಿರಿಯ ಆಟಗಾರರಿಗೆ ಗೌರವಾನ್ವಿತ ನಿವೃತ್ತಿಗೆ ಅವಕಾಶ ಕಲ್ಪಿಸುವಷ್ಟು ಪ್ರಬುದ್ಧತೆಯನ್ನು ಇದು ತೋರಿತ್ತು. ಎಂಎಸ್‌ಕೆ ತಮ್ಮ ಮಾತುಗಳನ್ನು ಮಾಧ್ಯಮಗಳ ಮುಂದೆ ಹರಿಯಬಿಡುವುದಕ್ಕಿಂತ ಖುದ್ದು ಧೋನಿ ಎದುರು ಮುಚ್ಚಿದ ಬಾಗಿಲುಗಳಲ್ಲಿ ಹೇಳಿದ್ದರೆ ಅವರ ಗೌರವವೇ ಉಳಿಯುತ್ತಿತ್ತು!
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.