ಬೇರೆ ಬ್ಯಾನರ್‌ನಲ್ಲೂ ನಾನು ನಟಿಸುತ್ತೇನೆ: ಪುನೀತ್ ಸ್ಪಷ್ಟ ಮಾತು
Team Udayavani, Sep 22, 2017, 6:55 PM IST
“ನಾನು ಇನ್ನು ಮುಂದೆ ಬೇರೆ ಬ್ಯಾನರ್‌ನಲ್ಲಿ ಸಿನಿಮಾ ಮಾಡಲ್ಲ ಎಂಬ ಸುದ್ದಿ ಓಡಾಡುತ್ತಿದೆ. ಖಂಡಿತಾ ಅದು ಸುಳ್ಳು, ನಮ್ಮ ಬ್ಯಾನರ್ ಜೊತೆಗೆ ಬೇರೆ ನಿರ್ಮಾಪಕರಿಗೂ ಸಿನಿಮಾ ಮಾಡುತ್ತೇನೆ …’ ಹೀಗೆ ಸ್ಪಷ್ಟಪಡಿಸಿದರು ಪುನೀತ್ ರಾಜಕುಮಾರ್. ಪುನೀತ್ “ಪಿಆರ್‌ಕೆ’ ಎಂಬ ಬ್ಯಾನರ್ ಹುಟ್ಟುಹಾಕಿರೋದು ನಿಮಗೆ ಗೊತ್ತೇ ಇದೆ. ಆ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣ ಮಾಡುವ ಉದ್ದೇಶ ಪುನೀತ್ ಅವರದು.
ಪುನೀತ್ ಅವರು ಯಾವಾಗ “ಪಿಆರ್‌ಕೆ’ ಎಂಬ ಬ್ಯಾನರ್ ಹುಟ್ಟುಹಾಕಿದರೋ ಅಂದಿನಿಂದಲೇ ಒಂದು ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿತ್ತು. ಅದೇನೆಂದರೆ, ಮುಂದೆ ಪುನೀತ್ ಹೊರಗಡೆ ಬ್ಯಾನರ್‌ನ ಸಿನಿಮಾಗಳಲ್ಲಿ ನಟಿಸಲ್ವಂತೆ, ಇನ್ನೇನಿದ್ದರೂ ಅವರದೇ ಬ್ಯಾನರ್‌ನ ಸಿನಿಮಾಗಳಲ್ಲಿ ನಟಿಸೋದಂತೆ ಎಂಬ ಸುದ್ದಿ ಕೇಳಿಬರತೊಡಗಿತು. ಇದರಿಂದ ಪುನೀತ್ ಜೊತೆ ಸಿನಿಮಾ ಮಾಡಬೇಕೆಂಬ ಕನಸು ಕಂಡಿದ್ದ ನಿರ್ಮಾಪಕರು ಸ್ವಲ್ಪ ಕಂಗಾಲಾಗಿದ್ದು ಸುಳ್ಳಲ್ಲ.
ಆದರೆ, ಪುನೀತ್ ಈ ಸುದ್ದಿಯನ್ನು ನಿರಾಕರಿಸುವುದಷ್ಟೇ ಅಲ್ಲ, ತಾನು ಮುಂದೆಯೂ ಬೇರೆ ನಿರ್ಮಾಪಕರ ಸಿನಿಮಾಗಳಲ್ಲೂ ನಟಿಸುತ್ತೇನೆ, ತನ್ನದೇ ಬ್ಯಾನರ್‌ಗೆ ಸೀಮಿತವಾಗೋದಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ. “ಪಿಆರ್‌ಕೆ’ ಎಂದರೆ ಪುನೀತ್ ರಾಜಕುಮಾರ್ ಎಂದೇ ಓಡಾಡುತ್ತಿತ್ತು. ಆದರೆ “ಪಿಆರ್‌ಕೆ’ ಎಂದರೆ “ಪಾರ್ವತಮ್ಮ ರಾಜಕುಮಾರ್’ ಎನ್ನುತ್ತಾರೆ ಪುನೀತ್. “ಇದು ನಾವು ಅಮ್ಮನ ಹೆಸರಿನಲ್ಲಿ ಆರಂಭಿಸಿರುವ ಬ್ಯಾನರ್.
ಪಿಆರ್‌ಕೆ ಎಂದರೆ ಪಾರ್ವತಮ್ಮ ರಾಜಕುಮಾರ್. ಇದು ವಜ್ರೆಶ್ವರಿಯಿಂದ ಹೊರತಾದ ಸಂಸ್ಥೆಯಲ್ಲ. ವಜ್ರೆಶ್ವರಿಯಡಿಯಲ್ಲೇ ಬರುವ ಮತ್ತೂಂದು ಸಂಸ್ಥೆ. ನನಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ತುಂಬಾ ವರ್ಷಗಳಿಂದ ಇತ್ತು. ಅದಕ್ಕಿಂತ ಹೆಚ್ಚಾಗಿ ನಮ್ಮ ಬ್ಯಾನರ್‌ನಲ್ಲಿ ತುಂಬಾ ಸಿನಿಮಾ ಮಾಡಬೇಕೆಂಬ ಆಸೆ ನನಗೆ ಚಿಕ್ಕಂದಿನಿಂದಲೇ ಇತ್ತು. ನಮ್ಮ ತಾಯಿ ನಮಗೆ ಒಂದು ಹೇಳಿಕೊಟ್ಟಿದ್ದಾರೆ. ಸದಾ ಬಿಝಿಯಾಗಿರಬೇಕು, ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂದು.
ನಾನು ನೋಡಿದಂತೆ ನಮ್ಮ ತಾಯಿ ಸದಾ ಬಿಝಿಯಾಗಿದ್ದರು. ಅವರು ಫ್ರೀಯಾಗಿರೋದನ್ನು ನಾನು ನೋಡೇ ಇಲ್ಲ. ಅವರು 80ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಅದನ್ನು 100 ದಾಟಿಸಬೇಕೆಂಬುದು ನಮ್ಮ ಆಸೆ’ ಎಂದು ತಮ್ಮ ನಿರ್ಮಾಣದ ಕನಸಿನ ಬಗ್ಗೆ ಹೇಳುತ್ತಾರೆ. ಕಥೆಯ ಆಯ್ಕೆ ವಿಚಾರದಲ್ಲಿ ಎಲ್ಲರೂ ಸೇರಿ ಚರ್ಚಿಸುವುದು ಮುಂದುವರಿದಿದೆಯಂತೆ. ಪುನೀತ್ ರಾಜಕುಮಾರ್ ಅವರು ಕಮರ್ಷಿಯಲ್ ಹೀರೋ.
ಅವರು ನಾಯಕರಾಗಿರುವ ಸಿನಿಮಾದಲ್ಲಿ ಆ್ಯಕ್ಷನ್, ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಇರುತ್ತದೆ. ಈಗ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದಾರೆ. ಹಾಗಾದರೆ ಪುನೀತ್ ನಿರ್ಮಾಣದ ಸಿನಿಮಾಗಳು ಯಾವ ಜಾನರ್‌ನಲ್ಲಿರುತ್ತವೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಪುನೀತ್ ಹೇಳುವಂತೆ ಕೆಲವು ಸಿನಿಮಾಗಳಿಗೆ ಜಾನರ್ ಇರೋದಿಲ್ಲ. ಪ್ರೇಕ್ಷಕರ ಇಷ್ಟ ಹಾಗೂ ಒಪ್ಪುವಿಕೆ ಅಷ್ಟೇ ಮುಖ್ಯವಾಗುತ್ತದೆ. “ಕೆಲವು ಸಿನಿಮಾಗಳು ಅಭಿಮಾನಿಗಳಿಗೆ, ಫ್ಯಾಮಿಲಿಗೆ, ಮಾಸ್‌ಗೆ-ಕ್ಲಾಸ್‌ಗೆ ಎಂದು ಇರೋದಿಲ್ಲ.
ಅವುಗಳು ಎಲ್ಲರಿಗೂ ಇಷ್ಟವಾಗುತ್ತವೆ. ಜಾನರ್ ವಿಷಯಕ್ಕೆ ಬರೋದಾದರೆ “ರಾಜ್‌ಕುಮಾರ’ ಚಿತ್ರವನ್ನು ನೀವು ಯಾವ ಜಾನರ್‌ಗೆ ಸೇರಿಸುತ್ತೀರಿ. ಒಮ್ಮೊಮ್ಮೆ ನನಗೇ ಕನ್‌ಫ್ಯೂಸ್ ಆಗುತ್ತೆ, ಇದು ಯಾವ ಜಾನರ್ ಸಿನಿಮಾ ಎಂದು. ಕೆಲವು ಸಿನಿಮಾಗಳೇ ಹಾಗೆ, ಇಷ್ಟವಾಗಿ ಬಿಡುತ್ತವೆ. “ಒಂದು ಮೊಟ್ಟೆಯ ಕಥೆ’ ಯಶಸ್ಸು ಕಂಡಿತು. ಹಾಗಾದರೆ ಆ ಸಿನಿಮಾವನ್ನು ಯಾವ ಜಾನರ್‌ನ ಆಡಿಯನ್ಸ್ ಬಂದು ನೋಡಿದರು? ಹೇಳ್ಳೋಕ್ಕಾಗಲ್ಲ. ಸಿನಿಮಾ ವಿಷಯದಲ್ಲಿ ಆರ್ಟ್-ಕಮರ್ಷಿಯಲ್ ಅನ್ನೋದನ್ನು ನಾನು ನಂಬೋದಿಲ್ಲ.
ಯಾವುದೇ ಸಿನಿಮಾವಾದರೂ ಜನರಿಗೆ ಟಚ್ ಆಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. “ಕವಲು ದಾರಿ’ ಕೂಡಾ ಅದೇ ತರಹದ ಒಂದು ಹೊಸ ಪ್ರಯತ್ನ. ನಮ್ಮ ಚಿತ್ರರಂಗದಲ್ಲಿ ಮೂರ್‍ನಾಲ್ಕು ವರ್ಷದಿಂದ ವಿಭಿನ್ನ ಸಿನಿಮಾಗಳು ಯಶಸ್ಸು ಕಾಣುತ್ತಿವೆ. ಜನ ಇಷ್ಟಪಡುತ್ತಿದ್ದಾರೆ. ನನಗೆ ಹೇಮಂತ್‌ರಾವ್ ಮಾಡಿಕೊಂಡಿರುವ ಕಥೆ ಇಷ್ಟವಾಯಿತು. ಹಾಗಾಗಿ, ಈ ಸಿನಿಮಾ ಮಾಡುತ್ತಿದ್ದೇವೆ. ಮುಂದಿನ ವರ್ಷ ನನ್ನ ನಟನೆಯಲ್ಲಿ ನಮ್ಮದೇ ಪ್ರೊಡಕ್ಷನ್‌ನಡಿ ಒಂದು ಸಿನಿಮಾ ಬರಲಿದೆ’ ಎನ್ನುತ್ತಾರೆ ಪುನೀತ್ ರಾಜಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.